ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಬೇಲಿಯ ತೋಟದೊಳಗೆ...

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ನಾನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಇನ್ಸ್‌ಪೆಕ್ಟರ್ ಆಗಿ ಹೋದೆ. ಆಗ ಅಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಹೊಸದಾಗಿ ಕೆಲಸಕ್ಕೆ ಸೇರಿದ್ದರು. ಅವರು ಸಭ್ಯ ನಡತೆಯ ಪೊಲೀಸ್. ಒಮ್ಮೆ ನನಗೆ ಠಾಣೆಯಲ್ಲೇ ಮುಖ್ಯವಾದ ಕೆಲಸ ಇದ್ದಿದ್ದರಿಂದ ರೌಂಡ್ಸ್ ಹೋಗಲು ಅವರಿಗೆ ಹೇಳಿದೆ. ಅವರು ಇಲಾಖೆಯ ಜೀಪ್ ತೆಗೆದುಕೊಂಡು ರೌಂಡ್ಸ್‌ಗೆ ಹೊರಟರು.

ಹೋಗಿ ಸ್ವಲ್ಪ ಹೊತ್ತಾಗಿತ್ತಷ್ಟೆ. ನನಗೆ ತುರ್ತು ಕರೆ ಬಂತು. ತಕ್ಷಣ ವೈರ್‌ಲೆಸ್‌ಗೆ ಸಂದೇಶ ರವಾನಿಸಿ ಬೇಗ ಜೀಪ್ ತರುವಂತೆ ಆದೇಶಿಸಿದೆ. ಎರಡು ಮೂರು ಬಾರಿ ಸಂದೇಶ ಕೊಟ್ಟರೂ ಜೀಪ್ ಬರಲಿಲ್ಲ. ನಾನು ಠಾಣೆಯ ಹೊರಗಡೆಯೇ ಹೋಗಿ ಕಾಯುತ್ತಾ ನಿಂತೆ. ಜೀಪ್ ಬಂತು.
 
ಅದರಲ್ಲಿ ಸಬ್ ಇನ್ಸ್‌ಪೆಕ್ಟರ್ ಕಾಣಲಿಲ್ಲ. ತಕ್ಷಣಕ್ಕೆ ನನಗೆ ಸಿಟ್ಟು ಬಂತು. ರೌಂಡ್ಸ್‌ಗೆ ಹೋಗಿಬನ್ನಿ ಎಂದು ಕಳಿಸಿದರೆ ಸಬ್ ಇನ್ಸ್‌ಪೆಕ್ಟರ್ ಹೀಗೆ ಮಾಡುವುದೇ ಎಂದು ನನ್ನೊಳಗೇ ಅಂದುಕೊಂಡೆ. ಅಷ್ಟರಲ್ಲಿ ಸಬ್ ಇನ್ಸ್‌ಪೆಕ್ಟರ್ ಹಿಂದಿನಿಂದ ಇಳಿದರು.

ರೌಂಡ್ಸ್ ಹೋಗುವ ಅಧಿಕಾರಿಗಳು ಜೀಪ್‌ನ ಮುಂದೆ ಕೂರುವುದೇ ರೂಢಿ. ಅವರ‌್ಯಾಕೆ ಹಿಂದಿನಿಂದ ಇಳಿಯುತ್ತಿದ್ದಾರೋ ಎಂದುಕೊಂಡು, `ಅದ್ಯಾಕೆ ತಾವು ಹಿಂದೆ ಕೂತಿದ್ದಿರಿ~ ಎಂದು ಪ್ರಶ್ನಿಸಿದೆ. `ನಾನು ಅಲ್ಲೇ ಸರ್ ಕೂತುಕೊಂಡು ಹೋಗೋದು~ ಎಂದು ಅವರು ಅದು ಸಹಜ ಎಂಬಂತೆ ಪ್ರತಿಕ್ರಿಯಿಸಿದರು.

ನಾನು ಜೀಪ್ ಹತ್ತಿ ಕೂತೆ. ಅದರ ಚಾಲಕ ಮೇಲ್ಜಾತಿಯವನು. ಹಿಂದೆ ಇದ್ದ ಇನ್ಸ್‌ಪೆಕ್ಟರ್ ಕಾಲದಿಂದ ಆ ಹೊಸ ಸಬ್ ಇನ್ಸ್‌ಪೆಕ್ಟರ್ ಜೀಪ್‌ನಲ್ಲಿ ಹಿಂದೆ ಕೂತೇ ಓಡಾಡುತ್ತಿದ್ದರು ಎಂಬುದನ್ನು ಆ ಚಾಲಕ ತಿಳಿಸಿದ. ಆ ಸಬ್ ಇನ್ಸ್‌ಪೆಕ್ಟರ್ ದಲಿತರೆಂಬುದೇ ಅದಕ್ಕೆ ಕಾರಣ. `ನನ್ನ ಆದೇಶದ ಮೇಲೆ ರೌಂಡ್ಸ್ ಹೋಗುವ ಅಧಿಕಾರಿ ಜೀಪ್‌ನಲ್ಲಿ ಮುಂದೆಯೇ ಕೂರಬೇಕು; ಅದೇ ಸರಿ~ ಎಂದು ನಾನು ವಾದಿಸಿದೆ.
ಅವರು ಮುಂದೆ ಕೂತರೆ ದೊಡ್ಡ ದರೋಡೆಯೋ ಕೊಲೆಯೋ ನಡೆಯುತ್ತದೆಂಬ ಮೂಢನಂಬಿಕೆಯೂ ಇದೆ ಎಂದು ಅವನು ಮಾತಿಗೆ ಕೊಸರು ಹಾಕಿದ. ನನ್ನ ಸಿಟ್ಟು ನೆತ್ತಿಗೇರಿತು. ತಕ್ಷಣ ಜೀಪನ್ನು ಠಾಣೆಯತ್ತ ತಿರುಗಿಸುವಂತೆ ಹೇಳಿದೆ. ಠಾಣೆಗೆ ಹೋದದ್ದೇ ಆ ಸಬ್ ಇನ್ಸ್‌ಪೆಕ್ಟರನ್ನು ಕರೆದೆ.
 
ಜೀಪ್ ಹತ್ತಿ ಎಂದಾಗ ಯಥಾಪ್ರಕಾರ ಅವರು ಹಿಂದೆ ಹತ್ತಲು ಮುಂದಾದರು. `ಅಲ್ಲಿ ಕೂರಬೇಡಿ. ಬನ್ನಿ, ಮುಂದೆ ಕೂತ್ಕೊಳ್ಳಿ~ ಎಂದು ನನ್ನ ಹಾಗೂ ಚಾಲಕನ ಮಧ್ಯೆ ಕೂರಿಸಿಕೊಂಡೆ. ನಾನು ಎಲ್ಲಿಗೆ ಹೋಗಬೇಕಿತ್ತೋ ಅಲ್ಲಿಗೆ ಜೀಪ್ ಓಡಿಸುವಂತೆ ಚಾಲಕನಿಗೆ ಸೂಚಿಸಿದೆ. ಅವನ ಮುಖ ಹರಳೆಣ್ಣೆ ಕುಡಿದವನಂತಾಯಿತು.

ಕೆಲಸ ಮುಗಿಸಿ ಬಂದಮೇಲೆ ಸಬ್ ಇನ್ಸ್‌ಪೆಕ್ಟರ್ ಏನೊಂದನ್ನೂ ಮಾತನಾಡದೆ ಒಳಹೋದರು. `ಜಾತಿಯ ಕಾರಣಕ್ಕೆ ಹಾಗೆಲ್ಲಾ ವರ್ತಿಸಿದರೆ ನಾನು ಸಹಿಸುವುದಿಲ್ಲ~ ಎಂದಾಗ ಆ ಚಾಲಕ ಮುಖ ಸಿಂಡರಿಸಿದ.
 
ಮರುದಿನ ದರೋಡೆಕೋರರ ಒಂದು ದೊಡ್ಡ ತಂಡವನ್ನು ನಾವು ಹಿಡಿದೆವು. ಹಲವಾರು ಪ್ರಕರಣಗಳು ಪತ್ತೆಯಾದವು. ಆಗ ಆ ಚಾಲಕನನ್ನು ಕರೆದು, `ನೋಡಿ, ಅವರನ್ನು ಜೀಪ್‌ನಲ್ಲಿ ಮುಂದೆ ಕೂರಿಸಿಕೊಂಡದ್ದಕ್ಕೆ ಎಂಥ ದರೋಡೆಕೋರರು ಸಿಕ್ಕರು. ಈಗಲೂ ಜಾತಿ ಗೀತಿ ಅಂತ ಇರಬೇಡಿ. ನಾನು ಅದನ್ನ ಸಹಿಸೊಲ್ಲ.

ನೀವು ಮೇಲ್ಜಾತಿಯವರಾದರೂ ಚಾಲಕ. ಅವರು ಸಬ್ ಇನ್ಸ್‌ಪೆಕ್ಟರ್. ವೃತ್ತಿಯಲ್ಲಿ ಸಂತೃಪ್ತಿ ಇರಬೇಕು. ಜಾತೀಯತೆಯನ್ನು ಇಲ್ಲಿ ತರಬೇಡಿ~ ಎಂದೆ. ಅವರ ಮುಖ ಇಷ್ಟಾಯಿತು. ಬಹಳ ಸಭ್ಯರಾಗಿದ್ದ ಆ ಸಬ್ ಇನ್ಸ್‌ಪೆಕ್ಟರ್ ಎಂದೂ ಅವರ ವಿಷಯದಲ್ಲಿ ನಡೆಯುತ್ತಿದ್ದ ಆ ದೌರ್ಜನ್ಯದ ವಿರುದ್ಧ ಸೊಲ್ಲೇ ಎತ್ತಿರಲಿಲ್ಲ.

ಹೊಸದಾಗಿ ಕೆಲಸಕ್ಕೆ ಸೇರಿದ ದಲಿತರನ್ನು ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಕೆಟ್ಟದಾಗಿ ನಡೆಸಿಕೊಳ್ಳುವುದರಿಂದ ಚಾಲಕರಿಗೂ ಎಷ್ಟು ಸದರವಾಗುತ್ತದೆ ಎಂಬುದನ್ನು ನಾನು ಕಂಡೆ.

*
ಕಮಲಾಪತಿ ತ್ರಿಪಾಠಿಯವರು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಕಾಲ ಎಂದು ಕಾಣುತ್ತದೆ. ಒಂದು ಜಿಲ್ಲೆಯ ಉಸ್ತುವಾರಿ ಡೆಪ್ಯುಟಿ ಕಮಿಷನರ್ (ಡಿ.ಸಿ) ಅವರ ಕೈಲಿತ್ತು. ಪೊಲೀಸ್ ಸೂಪರಿಂಟೆಂಡೆಂಟ್ ನಂಬರ್ 2. ಅಲ್ಲೊಮ್ಮೆ ಕಾರ್ಯಕ್ರಮವೊಂದು ನಡೆಯಿತು. ಉತ್ತರ ಪ್ರದೇಶದಲ್ಲಿ ಪ್ರಮುಖ ಕಾರ್ಯಕ್ರಮಗಳು ನಡೆದಾಗ ವೇದಿಕೆಯಲ್ಲಿ ಕೂತವರಿಗೆಲ್ಲಾ ಹಾಲು ಕೊಡುವುದು ಪದ್ಧತಿ.
 
ಆ ದಿನವೂ ಎಲ್ಲರಿಗೂ ಹಾಲು ಕೊಟ್ಟರು. ಪೊಲೀಸ್ ಸೂಪರಿಂಟೆಂಡೆಂಟ್ ಬ್ರಾಹ್ಮಣರು. ಅವರಿಗೆ ಬೆಳ್ಳಿ ಲೋಟದಲ್ಲಿ ಹಾಲು ಕೊಟ್ಟರು. ಉಳಿದ ಅಧಿಕಾರಿಗಳು, ಅತಿಥಿಗಳಿಗೆಲ್ಲಾ ಆ ಹಳ್ಳಿಯ ರಿವಾಜಿನಂತೆ ಬಗೆಬಗೆಯ ಲೋಟಗಳಲ್ಲಿ ಹಾಲು ಕೊಡಲಾಯಿತು.
 
ಆದರೆ, ಆ ಡಿ.ಸಿಗೆ ಮಾತ್ರ ಮಣ್ಣಿನ ಕುಡಿಕೆಯಲ್ಲಿ ಹಾಲು ಕೊಟ್ಟರು. ಅವರು ಅದನ್ನು ಕುಡಿಯಲಿಲ್ಲ. ಆದರೆ, ಅದರ ವಿರುದ್ಧ ಏನೊಂದೂ ಮಾತನಾಡಲಿಲ್ಲ. ದಲಿತರೆಂಬ ಕಾರಣಕ್ಕೆ ಅವರಿಗೆ ಕುಡಿಕೆಯಲ್ಲಿ ಹಾಲು ಕೊಟ್ಟಿದ್ದರು.

ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಈ ಸುದ್ದಿ ಓದಿದ್ದ ನನಗೆ ಅಂಥ ಹಿರಿಯ ಅಧಿಕಾರಿಗಳಿಗೇ ಅಸ್ಪೃಶ್ಯತೆಯ ಬಿಸಿ ತಟ್ಟುತ್ತಿರುವಾಗ ನಮ್ಮ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಅದಕ್ಕೆ ಹೊರತಾಗಲು ಹೇಗೆ ಸಾಧ್ಯ ಎನ್ನಿಸಿ ಬೇಸರವಾಯಿತು. ಈಗ ವಿದ್ಯಾವಂತರ ನಡುವೆಯೇ ಅಸ್ಪೃಶ್ಯತೆ ಇರುವುದು ದುರಂತ.

*
ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪ್ರತಿಮೆ ಅನಾವರಣಗೊಂಡಾಗ ನಿಜಲಿಂಗಪ್ಪನವರು ಅತಿಥಿಯಾಗಿದ್ದರು. ಅವರು ಭಾಷಣ ಪ್ರಾರಂಭಿಸಿದ್ದೇ ಬಸವೇಶ್ವರರ ಪ್ರತಿಮೆ ಇದ್ದ ಬಗೆಯನ್ನು ವಿರೋಧಿಸಿ. ಶರಣ, ಸೌಮ್ಯ ಮೂರ್ತಿಯಾಗಿದ್ದ ಬಸವಣ್ಣನಿಗೆ ಕತ್ತಿ ಕೊಟ್ಟು ಕಿರೀಟ ತೊಡಿಸಿದ್ದೀರಿ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಪಟ್ಟಭದ್ರ ಹಿತಾಸಕ್ತಿಗಳು ಹೇಗೆ ಶರಣರನ್ನು ಜಾತಿ ಹಿಡಿದೇ ಕರೆಯುತ್ತಿದ್ದರು ಎಂಬುದಕ್ಕೆ ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ ಮೊದಲಾದವರ ಉದಾಹರಣೆಗಳನ್ನು ಕೊಟ್ಟರು.
 
ಅದರಿಂದ ಕಸಿವಿಸಿಗೊಂಡ ಕೆಲವರು ಬಲವಂತವಾಗಿ ನಿಜಲಿಂಗಪ್ಪನವರು ಇನ್ನೂ ಹೆಚ್ಚು ಭಾಷಣ ಮಾಡದಂತೆ ತಡೆದುಬಿಟ್ಟರು. ಅಂಥ ಮುತ್ಸದ್ದಿ ರಾಜಕಾರಣಿಗೇ ಮಾತನಾಡಲು ಅವಕಾಶ ಕೊಡದ ಜಾತಿವಾದಿ ಜನ ಈಗಲೂ ನಮ್ಮ ನಡುವೆ ಇದ್ದಾರೆ.
*
ಸಾಕ್ಷರ ರಾಜ್ಯ ಎಂದೇ ಹೆಸರಾಗಿದೆ ಕೇರಳ. ಅಲ್ಲಿನ ಗುರುವಾಯೂರಪ್ಪ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇರಲಿಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭ. ಆಗ ಕೇಳಪ್ಪನ್ ಎಂಬ ದಲಿತ ಹೋರಾಟಗಾರರು ಆ ದೇವಸ್ಥಾನದ ಮುಂದೆ ಉಪವಾಸ ಪ್ರಾರಂಭಿಸಿದರು. ದಲಿತರಿಗೂ ಪ್ರವೇಶ ಸಿಗಬೇಕೆಂಬುದು ಅವರ ಆಗ್ರಹವಾಗಿತ್ತು.

ಅವರು ಉಪವಾಸ ಕೂತದ್ದು ಕಾಂಗ್ರೆಸ್ ಅಧಿವೇಶನದಲ್ಲಿ ಚರ್ಚೆಗೆ ಒಳಪಟ್ಟಿತು. ಅವರ ಸಮಸ್ಯೆಯನ್ನು ಬಗೆಹರಿಸುವುದಾಗಿ ಮಹಾತ್ಮ ಗಾಂಧೀಜಿ ಭರವಸೆ ಕೊಟ್ಟ ನಂತರ ಕೇಳಪ್ಪನ್ ಉಪವಾಸ ನಿಲ್ಲಿಸಿದರು.

ಆದರೆ, ಮುಂದೆ ಅಲ್ಲಿನವರು ಆ ಸಮಸ್ಯೆಯನ್ನೇ ಮುಚ್ಚಿಹಾಕಿ, `ಸದ್ಯಕ್ಕೆ ಅದನ್ನು ಬಗೆಹರಿಸಲಾಗದು, ಮುಂದೆ ನೋಡೋಣ~ ಎಂದು ಜಾರಿಕೊಂಡರು. ಇಂಥ ಚರಿತ್ರೆ ಇರುವ ಕೇರಳದಲ್ಲಿ ಸ್ಟ್ಯಾಂಪ್ಸ್ ಅಂಡ್ ರಿಜಿಸ್ಟ್ರೇಷನ್ ಇಲಾಖೆಯಲ್ಲಿ ಕೆಲಸ ಮಾಡುತ್ತ್ದ್ದಿದ ಹಿರಿಯ ಅಧಿಕಾರಿಯೊಬ್ಬರು ಕಳೆದ ವರ್ಷ ನಿವೃತ್ತರಾದರು.

ಅವರಿಗೆ ಬೀಳ್ಕೊಡುಗೆ ಸಮಾರಂಭವೂ ನಡೆಯಿತು. ಆ ಸಮಾರಂಭ ಮುಗಿದ ನಂತರ ಅವರು ಉಪಯೋಗಿಸಿದ್ದ ಕಾರು, ಕೂತಿದ್ದ ಕುರ್ಚಿ ಎಲ್ಲವನ್ನೂ ಪಂಚಗವ್ಯ ಸಿಂಪಡಿಸಿ ಶುದ್ಧೀಕರಣ ಮಾಡಿದರು. ಅವರ ಜಾಗಕ್ಕೆ ಬಂದ ಅಧಿಕಾರಿ ನಡೆದುಕೊಂಡ ರೀತಿ ಇದು.

*
ಹಳ್ಳಿಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಎಲ್ಲಾ ಧರ್ಮೀಯರೂ ಆಚರಿಸುತ್ತಿದ್ದುದ್ದನ್ನು ನಾನು ಕಂಡಿದ್ದೇನೆ. ನಾನು ಬೆಂಗಳೂರು ಪೂರ್ವ ವಲಯದಲ್ಲೇ ಹೆಚ್ಚು ಕೆಲಸ ಮಾಡಿದ್ದು. ಅಲ್ಲಿ ನಡೆಯುತ್ತಿದ್ದ ಸೇಂಟ್ ಮೇರೀಸ್ ಫೀಸ್ಟ್‌ಗೆ ಹಿಂದೂ, ಮುಸ್ಲಿಂ, ಕ್ರಿಸ್ತರೆಲ್ಲರೂ ಒಟ್ಟಾಗಿ ಬರುತ್ತಿದ್ದರು.
 
ಸೆಪಿಂಗ್ಸ್ ರಸ್ತೆಯಲ್ಲಿ ಮುತ್ಯಾಲಮ್ಮನ ತೇರಿಗೆ ಬರುತ್ತಿದ್ದವರಲ್ಲಿ ಕೂಡ ಈ ಮೂರೂ ಧರ್ಮೀಯರು ಇದ್ದರು. ಮುತ್ಯಾಲಮ್ಮನ ತೇರಿಗೆ ಮೆಣಸು ಉಪ್ಪನ್ನು ಎರಚಿ ಹರಕೆ ತೀರಿಸುತ್ತಾರೆ.

ಅದೇ ಸಂಪ್ರದಾಯ ಸೇಂಟ್ ಮೇರೀಸ್ ಫೀಸ್ಟ್‌ನಲ್ಲೂ ಮುಂದುವರಿಯಿತು. ಬಾಲಯೇಸುವಿನ ಉತ್ಸವ ಮಾಡುವುದು ಸಂಕ್ರಾಂತಿ ಸಂದರ್ಭದಲ್ಲಿ. ಅಲ್ಲೂ ತೇರು, ರಥ, ಮೆಣಸು, ಉಪ್ಪು ಸಾಮಾನ್ಯವಾಗಿಯೇ ಇರುತ್ತದೆ.

ದೇವರು ಕೂಡ ಎಲ್ಲಾ ಧರ್ಮೀಯರನ್ನು ಹೇಗೆ ಒಂದೇ ತೆಕ್ಕೆಗೆ ತೆಗೆದುಕೊಳ್ಳುತ್ತಾನೆ ಎಂಬುದಕ್ಕೆ ಇವೆಲ್ಲಾ ಉದಾಹರಣೆಗಳು. ದೇವರೇನೋ ದೊಡ್ಡವನು. ಆದರೆ, ಜಾತೀಯತೆಯನ್ನೇ ಮುದ್ದಿಸುತ್ತಾ ಕೂತ ಮನುಷ್ಯರನ್ನು ನೋಡಿದರೆ ನನಗೆ ಈಗಲೂ ಬೇಸರವಾಗುತ್ತದೆ, ಸಿಟ್ಟು ಬರುತ್ತದೆ.

ಮುಂದಿನ ವಾರ: ವೃತ್ತಿ ಮಾತ್ಸರ್ಯದ ಅನುಭವಗಳು. ಶಿವರಾಂ ಅವರ ಮೊಬೈಲ್ ಸಂಖ್ಯೆ 9448313066.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT