ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಗಳಲ್ಲಿ ಮೂಸಂಬಿ ಮಾರಿದ್ದು...

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಭಾಗ-5

1956-57ನೇ ಇಸವಿ. ಚಳ್ಳಕೆರೆಯ ಹತ್ತಿರ ಮಟ್ಳಗೆರೆ ಎಂಬ ಊರಲ್ಲಿ ನಮ್ಮಕ್ಕ ಕಮಲಕ್ಕ ವಾಸವಿದ್ದರು. ಬೆಳಗೆರೆಗೆ ತುಂಬಾ ಹತ್ತಿರದ ಊರದು. ಅಪರೂಪದ ಶಾಲೆಯ ಮೂಲಕ ದೊಡ್ಡ ಮನುಷ್ಯರಾಗಿರುವ ಬೆಳಗೆರೆ ಕೃಷ್ಣಶಾಸ್ತ್ರಿಗಳು ಕೂಡ ಆ ಊರಲ್ಲಿ ನನ್ನನ್ನು ಕಂಡಿದ್ದರು. ಅಲ್ಲೊಂದು ಈಜುಕೊಳವಿತ್ತು.

ಅದರಲ್ಲಿ ಈಜು ಕಲಿಯಬಹುದಲ್ಲ ಎಂಬುದು ನಮ್ಮ ಪ್ರವಾಸಕ್ಕೆ ಇದ್ದ ಆಕರ್ಷಣೆ. ನಮ್ಮ ಭಾವ ಗೋಪಿನಾಥ ರಾಯರು. ಅಲ್ಲಿ ಅವರ ದೊಡ್ಡ ಮೂಸಂಬಿ ತೋಟವಿತ್ತು. ಐದು ಕಿ.ಮೀ.ನಷ್ಟು ವ್ಯಾಪ್ತಿಯಲ್ಲಿ ಇದ್ದದ್ದು ಅವರೊಬ್ಬರದ್ದೇ ಮನೆ. ನಮಗೆಲ್ಲಾ ಅಲ್ಲಿಗೆ ಹೋಗುವುದೆಂದರೆ ತುಂಬಾ ಖುಷಿ.

ಒಮ್ಮೆ ಅಲ್ಲಿಗೆ ನಾನು, ನನ್ನ ತಂಗಿ ಪರಿಮಳಾ ಹೋಗಿದ್ದೆವು. ಆಗ ನನಗೆ ಹದಿನಾರು ವರ್ಷ. ಅಲ್ಲಿಗೆ ಹೋದಾಗಲೆಲ್ಲಾ ಸಂಭ್ರಮದ ದಿನಗಳನ್ನೇ ಕಂಡಿದ್ದ ನಮಗೆ ಆ ಸಲ ಬೇರೆಯದೇ ಅನುಭವ.

ಭಾವನವರ ತೋಟದ ಮೂಸಂಬಿಗಳು ಯಾಕೋ ಬಣ್ಣ ಕಳೆದುಕೊಂಡುಬಿಟ್ಟಿದ್ದವು. ಭಾವನವರಿಗೆ ಹಣ್ಣು ಮಾರುವುದು ಹೇಗೆ ಎಂಬ ಚಿಂತೆ ಶುರುವಾಗಿತ್ತು. ಅವರಿಗೆ ಆಗ ಹಣಕಾಸಿನ ಅವಶ್ಯಕತೆಯೂ ಇತ್ತು. ಎಲ್ಲರೂ ಚರ್ಚಿಸುತ್ತಾ ಇರುವಾಗ ಹತ್ತಿರದ ಹರ್ತಿಕೋಟೆ ಎಂಬಲ್ಲಿ ಜಾತ್ರೆ ನಡೆಯುತ್ತದೆಂಬ ವಿಚಾರ ಪ್ರಸ್ತಾಪವಾಯಿತು. ಅಲ್ಲಿಗೆ ಮೂಸಂಬಿ ಹಣ್ಣುಗಳನ್ನು ಕೊಂಡೊಯ್ದು ಮಾರಬಹುದು ಎಂದು ಅನೇಕರು ಹೇಳಿದರು. ಆ ಕೆಲಸವನ್ನು ನಾನೇ ವಹಿಸಿಕೊಂಡೆ.

ನಮ್ಮ ಭಾವನವರದ್ದೇ ಒಂದು ಎತ್ತಿನಗಾಡಿ ಇತ್ತು. ಅದರ ತುಂಬಾ ಮೂಸಂಬಿ ತುಂಬಿಕೊಂಡು ಹರ್ತಿಕೋಟೆಗೆ ಹೋದೆ. ನನ್ನ ಜೊತೆ ನಮ್ಮ ಭಾವನವರೂ ಬಂದಿದ್ದರು. ನಾನು ಅಲ್ಲಿ ಮೂಸಂಬಿ ಮಾರಲೆಂದೇ ಹಾಡು ಹಾಡಿದೆ. `ಬಣ್ಣ ನೋಡಬೇಡಿ, ರುಚಿ ನೋಡಿ. ಇದು ಸೊಗಸಾದ ಹಣ್ಣು~ ಎಂದೆಲ್ಲಾ ಹೇಳಿದೆ.

`ಕನ್ಯಾದಾನ~ ಚಿತ್ರದ `ಬಣ್ಣದಲೇನಿದೆಯೋ ಬೆಡಗು, ಹೆಣ್ಣಿಗೆ ಗುಣವೇ ಮೆರುಗು~ ಎಂಬ ಹಾಡು ಹೇಳಿ ಕುಣಿದೆ. ನನ್ನ ಆ ಹಾಡನ್ನು ಕೇಳಿಯೇ ಅನೇಕರು ಮೂಸಂಬಿ ಕೊಂಡರು. ಮೂಸಂಬಿ ಮಾರಿ, ಹತ್ತು ಸಾವಿರ ರೂಪಾಯಿಯನ್ನು ಭಾವನವರ ಕೈಗಿತ್ತೆ.

ಅವರಿಗೆ ನನ್ನ ಮೇಲೆ ನಂಬಿಕೆ ಬಂತು. ನನ್ನ ಬಗ್ಗೆ ಹೆಮ್ಮೆ ಎನಿಸಿತು. ಅವರಿಗೆ ಮೂಸಂಬಿ ಮಾರುವ ಆ ದಾರಿ ಇಷ್ಟವಾಯಿತು. ಮಟ್ಲಗೆರೆ, ಸಾಣಿಕೆರೆ ಮೊದಲಾದ ಜಾತ್ರೆಗಳಿಗೂ ಮೂಸಂಬಿ ತುಂಬಿಸಿದ ಗಾಡಿ ಹತ್ತಿಸಿ ನನ್ನನ್ನು ಕಳುಹಿಸಿದರು. ಹಾಡುವುದು, ಕುಣಿಯುವುದು, ಮಾತನಾಡುವುದು ನನಗೂ ಇಷ್ಟವಿದ್ದರಿಂದ ಸಂತೋಷದಿಂದಲೇ ಹೋದೆ. ಇನ್ನಷ್ಟು ಮೂಸಂಬಿ ಮಾರಿಕೊಂಡು ಬಂದೆ.
 
ಹಾಗೆ ಜಾತ್ರೆಗಳಿಗೆ ಹೋದಾಗ ಮಳೆ ಬಂದದ್ದಿದೆ. ಆಗ ಗಾಡಿಯ ಕೆಳಗೇ ಮಲಗಿ, ಸಿನಿಮಾ ಕನಸನ್ನು ಕಂಡಿದ್ದೆ. ನನ್ನ ಹಾಡು, ಕುಣಿತವನ್ನು ಜನ ಇಷ್ಟಪಟ್ಟಿದ್ದರಿಂದ ನಾನೊಬ್ಬ `ಪರ್ಫಾರ್ಮಿಂಗ್ ಆರ್ಟಿಸ್ಟ್~ ಎಂಬ ಹೆಮ್ಮೆ ನನಗೆ ಬಂದಿತ್ತು. ನನ್ನನ್ನು ಗಮನಿಸಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಕೂಡ ಆಗ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು.

ನಮ್ಮ ಭಾವನವರು ಆಗಲೇ ನನಗೆ `ಟಾಕಿಂಗ್ ಸ್ಟಾರ್~ ಎಂಬ ಬಿರುದು ಕೊಟ್ಟರು. ಅವರು ಪ್ರೀತಿಯಿಂದ ನನ್ನನ್ನು ಹಾಗೆ ಕರೆದರು. ಮೂಸಂಬಿ ಮಾರಾಟವಾದ ಮೇಲೆ ಮತ್ತೆ ಅವರಲ್ಲಿ ಉತ್ಸಾಹ ಬಂದಿತ್ತು. ಅವರಿಗೂ ನನ್ನ ಹಾಡೆಂದರೆ ತುಂಬಾ ಇಷ್ಟ. `ಬಾರೋ ಇಲ್ಲಿ ಒಂದು ಹಾಡು ಹೇಳೋ?~ ಎಂದೋ, `ರಾಮಾಯಣ ಆಡಿ ತೋರಿಸು~ ಎಂದೋ ಪದೇಪದೇ ಕರೆಯುತ್ತಿದ್ದರು. ರಾಮ, ಲಕ್ಷ್ಮಣ, ಹನುಮಂತ, ಸೀತೆ, ರಾವಣ ಎಲ್ಲಾ ಪಾತ್ರಗಳನ್ನೂ ನಾನೇ ಅಭಿನಯಿಸಿ ತೋರಿಸುತ್ತಿದ್ದೆ.

ನಮ್ಮ ಬಂಧು ಬಳಗದ ಎಲ್ಲರಿಗೂ ನಾನಾಡುವ ರಾಮಾಯಣವೆಂದರೆ ತುಂಬಾ ಮೆಚ್ಚು. ಅದು ನನ್ನ `ಸೂಪರ್‌ಹಿಟ್ ಪರ್ಫಾರ್ಮೆನ್ಸ್~.

ಹದಿನಾರು ಹದಿನೇಳನೇ ವಯಸ್ಸಿನಲ್ಲಿ ಹಬ್ಬ, ಮದುವೆ ನಡೆದಾಗಲೆಲ್ಲಾ ಸುಂದರಿಯರು ಬಂದಿರುತ್ತಿದ್ದರು. ಅವರನ್ನು ನೋಡುತ್ತಾ ಇನ್ನಷ್ಟು ಉತ್ಸಾಹದಿಂದ ಹಾಡುತ್ತಿದ್ದೆ.

ರಾಮಾಯಣವನ್ನು ಮತ್ತೂ ಉತ್ಕಟತೆಯಿಂದ ಅಭಿನಯಿಸುತ್ತಿದ್ದೆ. ಹೆಚ್ಚು ಸುಂದರವಾಗಿರುವವಳನ್ನು ಕಂಡಾಗ, ಅವಳನ್ನು ಮದುವೆಯಾಗಬೇಕು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ವಯೋ ಸಹಜವಾದ ಬಯಕೆಗಳು ನನ್ನಲ್ಲಿ ಗರಿಗೆದರುತ್ತಿದ್ದವು. ಆ ಬಯಕೆಗಳ ಜೊತೆಗೆ ನನ್ನ ಅಭಿನಯ ಕಲೆಯನ್ನೂ ತೀಡುತ್ತಲೇ ಇದ್ದೆ.

ನನ್ನ ಬದುಕಿನ ಬಾಲ್ಯ, ಯೌವನದ ಅನೇಕ ಸೀನ್‌ಗಳು ನೆನಪಿನಲ್ಲಿವೆ. ಪ್ರತಿ ಸೀನ್‌ನಲ್ಲೂ ನಾವು ಅದರ ಔಚಿತ್ಯಕ್ಕೆ ತಕ್ಕಂತೆ ಅಭಿನಯಿಸುತ್ತಲೇ ಇರುತ್ತೇವೆ. ಬದುಕನ್ನೇ ಕಲೆಗೆ ಸಮೀಕರಿಸಿ ಮಾತನಾಡುವುದು ನನ್ನ ಜಾಯಮಾನ. ಈಗ ನನಗೆ 70 ವರ್ಷ ತುಂಬುತ್ತಾ ಬಂದಿದೆ. ಮಕ್ಕಳು ಹುಟ್ಟಿದಾಗ ಅವರ ಜೊತೆ ಹೆಚ್ಚು ಕಾಲ ಕಳೆಯುವ ಸ್ಥಿತಿಯಲ್ಲಿ ನಾನಿರಲಿಲ್ಲ. ಸಿನಿಮಾದಲ್ಲಿ ತುಂಬಾ ತೊಡಗಿದ್ದ ಕಾಲವದು. ಈಗ ಮೊಮ್ಮಕ್ಕಳಿಗೆ ಒಂದಿಷ್ಟು ಟೈಮ್ ಕೊಡುತ್ತಾ, ತಾತನ ಸುಖ ಅನುಭವಿಸುತ್ತಿದ್ದೇನೆ.

`ಲೈಫ್ ಈಸ್ ವೆರಿ ಬ್ಯೂಟಿಫುಲ್. ಯೂ ಶುಡ್ ಎಂಜಾಯ್ ಇಟ್~ ಎಂಬುದೇ ನನ್ನ ತತ್ವ. ನನ್ನ ಬದುಕಿನಲ್ಲಿ ಏನೆಲ್ಲಾ ಏರುಪೇರುಗಳು ಬಂದಿದ್ದರೂ ಎಲ್ಲವನ್ನೂ ಎದುರಿಸಲು ಸಾಧ್ಯವಾದದ್ದು ನಾನು ನಂಬಿಕೊಂಡು ಬಂದಿರುವ ಆ ತತ್ವದಿಂದ. ನನ್ನ ಬದುಕಿನ ಸೀನ್‌ಗಳಲ್ಲಿ ನಾನು ಆದಷ್ಟೂ `ಎಂಜಾಯ್~ ಮಾಡಿಯೇ ನಟಿಸಿದ್ದೇನೆ. ಅದಕ್ಕೇ ಇಷ್ಟು ಚಿತ್ರಗಳನ್ನು ತೆಗೆಯಲು ಆಗಿದ್ದು.

ಈಗ ಕಾಲೇಜು ಬದುಕಿನ ಸೀನ್ ಕಡೆಗೆ ಹೊರಳೋಣ. ನಾನು ಸೇರಿದ್ದು ಶಾರದಾ ವಿಲಾಸ್ ಕಾಲೇಜಿಗೆ. ಯಥಾಪ್ರಕಾರ ಅಲ್ಲೂ ಪಠ್ಯೇತರ ಚಟುವಟಿಕೆಗಳಲ್ಲೇ ನಾನು ಮುಂದು. ನಾಟಕದ ಗೀಳು ಅಲ್ಲಿ ಇನ್ನೂ ಹೆಚ್ಚಾಯಿತು. ದೆಹಲಿಯಲ್ಲಿ ಒಂದು ಸ್ಪರ್ಧೆ ಇತ್ತು. ಅಲ್ಲಿಗೆ ಬೋರಣ್ಣ ಎಂಬ ಸೋಲೋ ಪಾತ್ರದ ನಾಟಕ ಆಡಲು ನಾನು ಹೊರಟಿದ್ದೆ. ಅದಕ್ಕೆ ರಿಹರ್ಸಲ್ ಮಾಡುವಾಗಲೇ ಅನೇಕರು ನನ್ನನ್ನು ಮೆಚ್ಚಿಕೊಂಡಿದ್ದರು.
 
ನಾಟಕ ಕುರಿತ ನನ್ನ ಹುಚ್ಚನ್ನು ಕಂಡಿದ್ದ ಕಾಲೇಜು ಪ್ರಿನ್ಸಿಪಾಲ್ ರಾಮಸ್ವಾಮಿ ಒಂದು ಮಾತು ಹೇಳಿದ್ದರು. ಅದು ನನಗಿನ್ನೂ ನೆನಪಿದೆ. `ಲೋ ದ್ವಾರಕಾನಾಥ. ನಿನಗೆ ಓದು ಲಾಯಕ್ಕಲ್ಲ. ಯಾವುದಾದರೂ ನಾಟಕಕ್ಕೋ ಸಿನಿಮಾಕ್ಕೋ ಹೋಗು~ ಅಂತ ಅವರು ಏರುದನಿಯಲ್ಲಿ ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಮುಂದೆ ಆ ಮಾತೇ ನಿಜವಾಯಿತು, ಬಿಡಿ. ಮದಣ್ಣನಿಗೆ ನನ್ನ ಅಭಿನಯವೆಂದರೆ ಇಷ್ಟವಿತ್ತು.

ನಾನು ಪಿಯೂಸಿ ಓದುವಾಗ ಮಾಡಿದ ನಾಟಕಕ್ಕೆ ಅವರು ಬಂದಿದ್ದರು. ತಮ್ಮ ಆಪ್ತ ಸ್ನೇಹಿತರನ್ನೂ ಕರೆದುಕೊಂಡು ಬಂದಿದ್ದರು. ಎಲ್ಲರೂ ನಾಟಕವನ್ನು ನೋಡಿ ಆನಂದತುಂದಿಲರಾಗಿದ್ದರು. ನಾನಾಗ ಉಬ್ಬಿಹೋಗಿದ್ದೆ. ಪಿಯೂಸಿ ಫೇಲಾದೆ ನೋಡಿ, ಉಬ್ಬಿದ್ದ ನನ್ನ ಬಲೂನು ಠುಸ್ ಆಯಿತು. ಮನೆಯಲ್ಲಿ ಅಣ್ಣನಿಗೆ ಚಿಂತೆ ಶುರುವಾಯಿತು. ಅವನ ಪಿತ್ಥ ನೆತ್ತಿಗೇರಿತು. `ಬಡ್ಡೆತದು ಫೇಲಾಬುಡ್ತಲ್ಲ~ ಅಂತ ಪೇಚಾಡಿಕೊಂಡ.

ಸುಮ್ಮನೆ ಕೂರುವುದು ಬೇಡ ಎಂದು ಸಿಪಿಸಿ ಪಾಲಿಟೆಕ್ನಿಕ್‌ಗೆ ಅರ್ಜಿ ಹಾಕುವಂತೆ ಮದಣ್ಣ ನನಗೆ ಹೇಳಿದ. ಸಿ.ಪೆರುಮಾಳ್ ಚೆಟ್ಟಿಯವರ ಮಗ ಜಾನಕೀರಾಮ್ ನಮ್ಮಣ್ಣನ ಆಪ್ತ ಸ್ನೇಹಿತರಾಗಿದ್ದರು. ಲೋಕಪಾಲ್, ಬ್ರಹ್ಮಪ್ಪ, ಮಾಣಿಕ್ಯ, ಒಲಿಂಪಿಯಾ ಟಾಕೀಸ್ ಮಾಲೀಕ ವೀರೇಂದ್ರ ಕುಮಾರ್, ಅಪೆರಾ ಟಾಕೀಸ್ ಮಾಲೀಕರಾದ ವಿ.ಆರ್. ಅಂಡ್ ಬ್ರದರ್ಸ್‌ ಅವರೆಲ್ಲಾ ನಮ್ಮ ಮದಣ್ಣನ ಒಳ್ಳೆಯ ಸ್ನೇಹಿತರು.
 
ಅವರೆಲ್ಲಾ ಸೇರಿ 1947ರಲ್ಲೇ ನಮ್ಮಣ್ಣನಿಗೆ ಅಂಗಡಿ ಹಾಕಿಕೊಟ್ಟಿದ್ದರು. ಅದೇ ಮುಂದೆ `ಮಧೂಸ್ ಮಿಲ್‌ಸ್ಟೋರ್ಸ್‌ ಅಂಡ್ ಆಟೊಮೊಬೈಲ್ಸ್~ ಎಂದು ಬೆಳೆದದ್ದು. ಸ್ನೇಹಿತ ಜಾನಕೀರಾಮ್‌ಗೆ ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ದಾನಿಗಳ ಸೀಟು ಕೊಡಿಸುವ ಅಧಿಕಾರವಿತ್ತು. ಅವರಿಂದ ಒಂದು ಲೆಟರ್ ಕೊಡಿಸಿದ ನಮ್ಮಣ್ಣ, `ಬೆಂಗಳೂರಿಗೆ ಹೋಗಿ ಸೀಟು ತೆಗೆದುಕೊಂಡು ಬಾ~ ಎಂದು ತಾಕೀತು ಮಾಡಿದ. ಸೀಟು ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ನಾನು ಬೆಂಗಳೂರಿನ ಕಡೆಗೆ ಹೊರಟೆ.

ಮುಂದಿನ ವಾರ: ಪಾಲಿಟೆಕ್ನಿಕ್ ಸೀಟು ಗಿಟ್ಟಿಸಿಕೊಂಡದ್ದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT