ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾದೂಗುಡದಿಂದ ಬಂದೀತು ಗೋಗಿಯ ಪಾಶ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಕೋಲ್ಕತ್ತಾದ ಖ್ಯಾತ ಹೌರಾ ಸೇತುವೆಯ ಮೇಲೆ ಬ್ರಿಟಿಷ್ ಪತ್ರಕರ್ತನೊಬ್ಬ ಕಾಲ್ನಡಿಗೆಯಲ್ಲಿ ಸಾಗುತಿದ್ದ. ಇಕ್ಕೆಲಗಳಲ್ಲಿ ಕೈಚಾಚಿ ಕೂತಿದ್ದ ನೂರಾರು ಭಿಕ್ಷುಕ ಮಕ್ಕಳಲ್ಲಿ ಅನೇಕರಿಗೆ ವಿಲಕ್ಷಣ ಅಂಗವಿಕಲತೆ ಇತ್ತು. ಬೆನ್ನಮೇಲೆ ಕಾಲು ಮೊಳೆತವರು, ಎರಡನೆಯ ಕಣ್ಣಿನ ಕುರುಹೂ ಇಲ್ಲದ ಒಂಟಿನೇತ್ರರು. ಬುಟ್ಟಿಗಾತ್ರದ ತಲೆಯುಳ್ಳವರು; ಗಿಡದ ಕೊಂಬೆಗಳಂಥ ಕೈಬೆರಳುಳ್ಳವರು.. ಎಲ್ಲರೂ ಎಳೆವಯಸ್ಸಿನ ಮಕ್ಕಳು.

ವಿಕಿರಣ ವಸ್ತುಗಳೇ ಈ ಬಗೆಯ ಅಂಗವಿಕಲತೆಗೆ ಕಾರಣ ಎಂಬುದು ಆತನಿಗೆ ಗೊತ್ತಿತ್ತು. ಹಿರೊಶಿಮಾ, ನಾಗಾಸಾಕಿಯ ಬಾಂಬಿಂಗ್ ನಂತರ ಹುಟ್ಟಿದ ಮಕ್ಕಳ ಚಿತ್ರಣ ಆತನ ನೆನಪಿಗೆ ಬಂದಿರಬೇಕು. ವಿಕಿರಣ ವಸ್ತುಗಳು ಗರ್ಭಿಣಿಯ ಶರೀರಕ್ಕೆ ಹೊಕ್ಕಾಗ ಭ್ರೂಣವೂ ವಿರೂಪವಾಗುತ್ತದೆ ಎಂಬುದನ್ನು ಎಲ್ಲೋ  ಓದಿಕೊಂಡಿರಬೇಕು.

`ಇಲ್ಲಿ ಸಮೀಪದಲ್ಲಿ ಪರಮಾಣು ಸ್ಥಾವರ ಇದೆಯೆ?~ ಎಂದು ಆತ ಕೋಲ್ಕತ್ತಾದಲ್ಲಿ ಒಂದಿಬ್ಬರು ಪತ್ರಕರ್ತರನ್ನು ಕೇಳಿದ. `ಇಲ್ಲ~ವೆಂಬ ಉತ್ತರ ಬಂತು. `ಹಾಗಿದ್ದರೆ ಯುರೇನಿಯಂ ಗಣಿ ಇದೆಯೆ?~ ಕೇಳಿದ. `ಅದೂ ಇಲ್ಲ~ವೆಂಬ ಉತ್ತರ ಬಂದಾಗ ಆತ ತನ್ನದೇ ವಿಧಾನದ ತನಿಖೆ ನಡೆಸಿದ. ಕೋಲ್ಕತ್ತಾದಿಂದ 450 ಕಿಲೊಮೀಟರ್ ದೂರದಲ್ಲಿ ಬಿಹಾರದ ರಾಂಚಿಯ ಬಳಿ ಜಾದೂಗುಡ ಎಂಬಲ್ಲಿ ಯುರೇನಿಯಂ ಗಣಿ ಇರುವುದನ್ನು ಪತ್ತೆ ಮಾಡಿ ಅಲ್ಲಿಗೆ ಹೋದ. ಅವನ ಊಹೆ ಸರಿಯಾಗಿಯೇ ಇತ್ತು.

ಜಾದೂಗುಡದ ಸುತ್ತಲಿನ ಹಳ್ಳಿಗರು ತಮ್ಮ ಅಂಗವಿಕಲ ಮಕ್ಕಳ ಜತೆ ಭಿಕ್ಷಾಟನೆಗಾಗಿ ಕೋಲ್ಕತ್ತಾವರೆಗೂ ಹೋಗಿದ್ದರು. ಪತ್ರಕರ್ತನಿಗೆ ಗಣಿಗಾರಿಕೆಯ ಕರಾಳ ಚರಿತೆಯ ಗಣಿಯೇ ಸಿಕ್ಕಂತಾಯಿತು. ಗಣಿಗಾರಿಕೆಯ ವಿಕೃತ ಪರಿಣಾಮಗಳು ಆಗ 1985ರಲ್ಲಿ ಹೊರಜಗತ್ತಿಗೆ ಗೊತ್ತಾಯಿತು.
 
ಭಾರತದಲ್ಲೂ ಪರಮಾಣು ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬೇಕು ಎಂಬ ಕನಸಿನ ನೆಹರೂ ಮತ್ತು ಹೋಮಿ ಭಾಭಾ ಅವರಿಂದಾಗಿ ಮುಂಬೈ ಸಮೀಪ ಟ್ರಾಂಬೆಯಲ್ಲಿ ಏಷ್ಯದ ಮೊತ್ತ ಮೊದಲ `ಅಪ್ಸರಾ~ ಹೆಸರಿನ ಅಣುಸ್ಥಾವರ ಆರಂಭವಾಯಿತು. ಅದಕ್ಕೆ ಬೇಕಿದ್ದ ಯುರೇನಿಯಂ ಅದುರನ್ನು ಜಾದೂಗುಡದಿಂದ ಅಗೆದು ಸಂಸ್ಕರಿಸಿ ತರಲಾಗುತ್ತಿತ್ತು. ಹೊರಜಗತ್ತಿನಲ್ಲಿ ಭಾರತದ ಥಳುಕಿನ `ತಾರಾಪುರ~ ಮತ್ತು `ಅಪ್ಸರಾ~ ಹೆಸರು ಮಿಂಚುತ್ತಿದ್ದಾಗ ಜಾದೂಗುಡದ ಮಹಿಳೆಯರ ಗರ್ಭದಲ್ಲಿ ವಿಕೃತ ಶಿಶುಗಳು ರೂಪುಗೊಳ್ಳತೊಡಗಿದವು.

ಅಣುವಿಜ್ಞಾನಿಗಳು ಫ್ರಾನ್ಸ್, ಅಮೆರಿಕಾ, ಕೆನಡಾಗಳಿಗೆ ತಾಂತ್ರಿಕ ಪರಿಣತಿ ಪಡೆಯಲು ಹೋಗುತ್ತಿದ್ದ ಹಾಗೆ ಜಾದೂಗುಡದ ಕ್ಯಾನ್ಸರ್ ಪೀಡಿತ ಗ್ರಾಮಸ್ಥರು ಆಸ್ಪತ್ರೆ ಸೇರುತ್ತಿದ್ದರು. ಮೌನ ಆಕ್ರಂದನದ ಮಧ್ಯೆ ಗರ್ಭಸ್ರಾವಗೊಂಡ ವಿಕಾರ ಭ್ರೂಣಗಳು ಮಣ್ಣು ಸೇರುತ್ತಿದ್ದವು.

ಗಣಿ ಹಗರಣಗಳ ಸರಮಾಲೆಯ ನಡುವೆ ಈಗ ಇದನ್ನು ನೆನಪಿಸಿಕೊಳ್ಳಲು ಕಾರಣವಿಷ್ಟೆ: ನಿನ್ನೆಯ (ಸೆಪ್ಟೆಂಬರ್ 7, 2011) ಇದೇ ಪುಟದ `ವಾಚಕರ ವಾಣಿ~ಯಲ್ಲಿ ಗುಲಬರ್ಗಾದ ಕ್ಯಾನ್ಸರ್ ಆಸ್ಪತ್ರೆ ಮುಚ್ಚುವ ಸ್ಥಿತಿಗೆ ಬಂದಿರುವ ದುಃಸ್ಥಿತಿಯ ಬಗ್ಗೆ ಪತ್ರವೊಂದು ಪ್ರಕಟವಾಗಿತ್ತು. ಕ್ಯಾನ್ಸರ್ ಕಾಯಿಲೆಯನ್ನು ಹೆಚ್ಚಿಸಬಲ್ಲ ಯುರೇನಿಯಂ ಗಣಿಗಾರಿಕೆಗೆ ಇದೀಗಷ್ಟೇ ಅಲ್ಲಿ ಚಾಲನೆ ಸಿಗುತ್ತಿರುವಾಗ, ಇದ್ದ ಒಂದು ಆಸ್ಪತ್ರೆಯೂ ಅವಸಾನ ಸ್ಥಿತಿಗೆ ಬರಬೇಕೆ?

ಹೌದು, ಗುಲಬರ್ಗಾ ಜಿಲ್ಲೆಯಲ್ಲಿ ಯುರೇನಿಯಂ ಗಣಿಗಾರಿಕೆ ನಡೆಸಲು ಕರ್ನಾಟಕ ಸರ್ಕಾರ ಈಚೆಗಷ್ಟೆ ಅನುಮತಿ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ನೀಡಿದ ನಂತರ ತೀರ ಅವಸರದಲ್ಲೋ ಎಂಬಂತೆ ಜುಲೈ 14-15ರಂದು ಯಡಿಯೂರಪ್ಪ ಸಂಪುಟ ಒಟ್ಟೊಟ್ಟಿಗೇ 28 ಕೈಗಾರಿಕೆಗಳಿಗೆ ಲೈಸನ್ಸ್ ನೀಡಲು ನಿರ್ಧರಿಸಿತು. ತುಸುವೇ ನಿಷ್ಕಾಳಜಿ ತೋರಿದರೂ ರಾಜ್ಯದ ಮಣ್ಣು, ನೀರು, ಗಾಳಿ ಮತ್ತು ಜೀವಮಂಡಲಕ್ಕೆ ಮಾರಕವಾಗಬಲ್ಲ ಕೆಮಿಕಲ್ಸ್, ಪಿಂಗಾಣಿ, ಪೆಟ್ರೊ ಕೆಮಿಕಲ್ಸ್, ಜವಳಿ, ಸಕ್ಕರೆ, ಉಕ್ಕು, ಯಂತ್ರೋಪಕರಣ, ಆಹಾರ ಸಂಸ್ಕರಣೆ, ಯೂರಿಯಾ ಮುಂತಾದ ಉದ್ಯಮ ಘಟಕಗಳ ಸರಮಾಲೆಗೆ ಹಸಿರು ಬಾವುಟ ಸಿಕ್ಕಿತು. ಗೋಗಿ ಎಂಬಲ್ಲಿನ ಯುರೇನಿಯಂ ಗಣಿಗಾರಿಕೆ ಪ್ರಸ್ತಾವನೆಗೂ ಮುಖ್ಯಮಂತ್ರಿಯವರ ಅಂಕಿತ ಬಿತ್ತು.

ಗುಲಬರ್ಗಾ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ 15,000 ಜನವಸತಿ ಇರುವ ದೊಡ್ಡ ಗ್ರಾಮ. ಜಾದೂಗುಡದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಯುರೇನಿಯಂ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಯೂಸಿಲ್) ಹೆಸರಿನ ಸರ್ಕಾರಿ ಕಂಪೆನಿಯೇ ಇಲ್ಲಿಗೂ ಬರಲಿದೆ. ಕಳೆದ ಹತ್ತಾರು ವರ್ಷಗಳಿಂದ ಆಗಾಗ ಅದುರಿನ ಪರೀಕ್ಷೆಗಾಗಿ ಹಳ್ಳಿಯ ಪಕ್ಕದ ಅಲ್ಲಲ್ಲಿ ರಂಧ್ರ ಕೊರೆತ, ಬಾವಿಗಾಗಿ ಅಗೆತ ನಡೆದೇ ಇತ್ತು. ಆಗ ಉಕ್ಕಿದ ನೀರನ್ನೆಲ್ಲ ಪಂಪ್ ಮೂಲಕ ಹೊರಕ್ಕೆ ಚೆಲ್ಲಿದ್ದರಿಂದ ಊರಿನ ಬೋರ್‌ವೆಲ್‌ಗಳು ಬತ್ತುತ್ತಿವೆ ಎಂದು  ಹಳ್ಳಿಯವರು ದೂರಿದ್ದರು. ಮುಂಬರುವ ದಿನಗಳಲ್ಲಿ ಜೀವಸೆಲೆಯೇ ಬತ್ತೀತು ಎಂಬುದು ಅವರ ಕಲ್ಪನೆಗೆ ಬಂದಿರಲಿಕ್ಕಿಲ್ಲ. ಹೇಗೆ ಗೊತ್ತಿರಲು ಸಾಧ್ಯ? ಯುರೇನಿಯಂ ಎಂದರೆ ಏನು, ಅದರ ಕರಾಳ ಕತೆಗಳು ಏನೇನು ಎಂಬ ಮಾಹಿತಿಗಳು ಶಾಲೆ, ಹೈಸ್ಕೂಲು, ಕಾಲೇಜುಗಳ ಯಾವ ಪಠ್ಯಪುಸ್ತಕದಲ್ಲೂ ಸಿಗುವುದಿಲ್ಲ. ಯಾವ ಗ್ರಂಥಾಲಯದಲ್ಲೂ ಸಿಗುವುದಿಲ್ಲ. ಸರ್ಕಾರಿ ವರದಿಗಳಲ್ಲಂತೂ ಏನೂ ಸಿಗುವುದಿಲ್ಲ.

ಆದರೆ ಹುಡುಕಲು ಹೋದರೆ ನಾಗರಿಕ ವರದಿಗಳು ಹೇರಳ ಸಿಗುತ್ತವೆ. ಜಾದೂಗುಡದ ಗಣಿ ನರಕದ ಕುರಿತು ಹನ್ನೆರಡು ವರ್ಷಗಳ ಹಿಂದೆ `ಸಂಡೇ~ ವಾರಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ಕರುಳು ಹಿಂಡುವ ಚಿತ್ರ ಸಿಗುತ್ತದೆ. ಛಾಯಾಗ್ರಾಹಕ ಅಝಿಜೂರ್ ರೆಹ್ಮಾನ್ ಸೆರೆ ಹಿಡಿದ 21 ಚಿತ್ರಗಳುಳ್ಳ ಸುದೀರ್ಘ ವರದಿ ಸಿಗುತ್ತದೆ. ಐದು ವರ್ಷಗಳ ಹಿಂದೆ ಬಿಬಿಸಿಯ `ಒನ್ ಪ್ಲಾನೆಟ್~ ಸರಣಿಯಲ್ಲಿ ಮಾರ್ಕ್ ವ್ಹಿಟೇಕರ್ ಪ್ರಸಾರ ಮಾಡಿದ ಸಾಕ್ಷ್ಯಚಿತ್ರದ ವರದಿ `ಹಿಂದೂ~ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿ ಸಿಗುತ್ತದೆ. ಜಮಶೇಟ್‌ಪುರದ ಟಾಟಾ ಮೆಹರಬಾಯಿ ಕ್ಯಾನ್ಸರ್ ಆಸ್ಪತ್ರೆಯ ಕಡತಗಳಲ್ಲಿ ಈ ಊರಿನ ನಾನಾ ಕಾಯಿಲೆಗಳ ಚಿತ್ರಣ ಸಿಗುತ್ತದೆ. ಅಂದಿನ `ಬಿಹಾರ ಬಿಧಾನ ಪರಿ ಷದ್~ (ಈಗ ಜಾದೂಗುಡ ಝಾರ್ಖಂಡ್ ರಾಜ್ಯಕ್ಕೆ ಸೇರಿದೆ) ನೇಮಕ ಮಾಡಿದ್ದ ತನಿಖಾ ಸಮಿತಿಯು ದಾಖಲಿಸಿದ ವಿಕಿರಣ ವಿಕೃತಿಯ ವರದಿಯೂ ಸಿಗುತ್ತದೆ.

ಇನ್ನೂ ಹಳೆಯ ದಾಖಲೆ ಬೇಕಿದ್ದರೆ 60 ವರ್ಷಗಳ ಹಿಂದೆ ಭಾಭಾ ಅವರೇ ಖುದ್ದಾಗಿ `ಗಣಿಗಾರಿಕೆ ಆರಂಭಿಸುವ ಮುನ್ನ ಜಾದೂಗುಡದ ಮೂರೂ ಹಳ್ಳಿಗಳನ್ನು ಸ್ಥಳಾಂತರಿಸಬೇಕು~ ಎಂದು ಸಲಹೆ ಮಾಡಿದ್ದ ದಾಖಲೆಯೂ ಇದೆ. ಆ ಹಳ್ಳಿಗಳು ದಿನದಿನಕ್ಕೆ ರೋಗಗಳ ಕೂಪವಾಗುತ್ತ ಈಗಲೂ ಇದ್ದಲ್ಲೇ ಇವೆ.

ಮುಂಬೈಯ ಆನಂದ ಪಟವರ್ಧನ ಸಿದ್ಧಪಡಿಸಿದ `ವಾರ್ ಅಂಡ್ ಪೀಸ್~ ಹೆಸರಿನ ಸಾಕ್ಷ್ಯಚಿತ್ರದಲ್ಲಿ ನಮ್ಮ ದೇಶದ ಪರಮಾಣು ಚಕ್ರದ ಎಲ್ಲ ಹಂತದ ಕರಾಳ ಮುಖಗಳನ್ನೂ ತೋರಿಸಲಾಗಿದೆ. ಎಂಟು ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ಜಾದೂಗುಡದಲ್ಲಿ ಸತ್ತಂತೆ ಬದುಕುತ್ತಿರುವವರ ಕರುಳು ಹಿಂಡುವ ಚಿತ್ರಗಳಿವೆ. ಆದಿವಾಸಿ ಮಕ್ಕಳಿಗೆಂದು ಕಟ್ಟಿದ ಶಾಲೆಯ ಗೋಡೆಯ ಇಟ್ಟಿಗೆಗಳೂ ವಿಕಿರಣ ಸೂಸುವುದನ್ನು ಪುಟ್ಟ ಗೀಗರ್ ಕೌಂಟರ್ ಯಂತ್ರದ ಮೂಲಕ ತೋರಿಸಲಾಗಿದೆ.

ಗೋಗಿಯ ಜನರಿಗೆ ಈ ಯಾವುದೂ ಗೊತ್ತಿರಲು ಸಾಧ್ಯವಿಲ್ಲ. ಗಣಿಗಾರಿಕೆಗೆ ಅನುಮತಿ ಕೋರುವ ಮೊದಲು ಸ್ಥಳೀಯರ ಆಕ್ಷೇಪಣೆಗಳನ್ನು ದಾಖಲಿಸುವ `ಪಬ್ಲಿಕ್ ಹಿಯರಿಂಗ್~ ಎಂಬ ಜನತಾಸಭೆ ನಡೆಸಬೇಕು ಎಂಬ ಕಾನೂನು ಇದೆ. ಗೋಗಿಯಲ್ಲಿ ಕಳೆದ ನವೆಂಬರ್‌ನಲ್ಲಿ ಅಂಥ ಸಭೆ ನಡೆಸಲಾಗಿತ್ತಾದರೂ ಜನರ ಹಿತಾಸಕ್ತಿಯನ್ನು ಪ್ರತಿನಿಧಿಸಬಲ್ಲ ಯಾವ ತಜ್ಞರನ್ನೂ ಸರ್ಕಾರ ಅಲ್ಲಿ ಒದಗಿಸಿರಲಿಲ್ಲ. ಜಾದೂಗುಡದ ಯಾವ ದಾಖಲೆಗಳೂ ಅಲ್ಲಿ ಪ್ರಸ್ತಾಪವಾಗಲಿಲ್ಲ. ಯೂಸಿಲ್ ಕಂಪೆನಿ ಆಂಧ್ರಪ್ರದೇಶದ ನಲ್ಗೊಂಡದ ಯುರೇನಿಯಂ ಗಣಿ ಕೆಲಸ ಆರಂಭಿಸುವ ಮುನ್ನ ಇಂಥದ್ದೇ ನಾಟಕವಾಡಿತ್ತು. ದೂರದ ಗುಡ್ಡದ ಮೇಲಿರುವ ಕುಗ್ರಾಮವೊಂದರಲ್ಲಿ ಜನತಾಸಭೆ ನಡೆಸಿತ್ತು. ಹೈದರಾಬಾದ್‌ನ ಉಚ್ಚ ನ್ಯಾಯಾಲಯ ಅದನ್ನು ಅನೂರ್ಜಿತಗೊಳಿಸಿ ಮತ್ತೊಮ್ಮೆ ಸಾಕಷ್ಟು ಪ್ರಚಾರದ ನಂತರ ಸಭೆ ನಡೆಸಬೇಕೆಂದು ಆದೇಶ ನೀಡಿತ್ತು.

ಜನರ ಒಪ್ಪಿಗೆ ಪಡೆಯುವುದು ಯೂಸಿಲ್‌ಗೆ ಸಾಧ್ಯವಾಗಿಲ್ಲ. ಅದೇ ರೀತಿ, ಮಿಝೊರಾಂನಲ್ಲಿ ಅದಿರು ತೆಗೆಯಲು ಯತ್ನಿಸಿ ಅಲ್ಲಿನ ಆದಿವಾಸಿಗಳ ಬಿಲ್ಲುಬಾಣಗಳ ವಿರೋಧ ಎದುರಿಸಿದ್ದಲ್ಲದೆ ನಂತರ ಅಲ್ಲಿನ ಸರ್ಕಾರವೂ ಗಣಿ ಅಗೆತಕ್ಕೆ ಅನುಮತಿ ನಿರಾಕರಿಸಿತು.

`ಗ್ರಾಮದ ಎಲ್ಲರಿಗೂ ನೀರು ಕೊಡುತ್ತೇವೆ, ಎಲ್ಲ ಕುಟುಂಬಗಳಿಗೂ ಕೆಲಸ ಕೊಡುತ್ತೇವೆ~ ಎಂದು ಗೋಗಿಯ ನಿವಾಸಿಗಳಿಗೆ ಯೂಸಿಲ್ ಆಶ್ವಾಸನೆ ನೀಡಿದೆ. ಜಾದೂಗುಡದ ನೀರಿನ ಪರಿಣಾಮ ಹೇಗಿದೆಯೆಂದರೆ ನಪುಂಸಕತ್ವ, ವಿಕಲಾಂಗ ಜನನ ಮನುಷ್ಯರಲ್ಲಷ್ಟೇ ಅಲ್ಲ, ಪಶುಗಳಲ್ಲೂ ಇದೆ. ಅಲ್ಲಿನ ಹಣ್ಣುಗಳಿಗೂ ಬೀಜ ಇರುವುದಿಲ್ಲ.
 
ಅಲ್ಲಿ ಹರಿಯುವ ಸುವರ್ಣ ರೇಖಾ ನದಿಯಲ್ಲಿ ಕೂಡ ಜಲಚರಗಳಿಲ್ಲ. ಇನ್ನು ಗಣಿ ಕೆಲಸಕ್ಕೆ ಸೇರಿದರೆ ವಿಷ ದೂಳು ಸೇವಿಸುತ್ತ ನಾನಾ ಕಾಯಿಲೆಗಳಿಗೆ ಸಿಕ್ಕು ಸತ್ತವರ ಪಟ್ಟಿ ಬೇಕೆ? ಅಲ್ಲಿನ `ವಿಕಿರಣ ವಿರೋಧಿ ಜನಸಂಘಟನೆ~ಯ ದಾಖಲೆಗಳನ್ನು ನೋಡಿದರೆ ಇನ್ನು 15-20 ವರ್ಷಗಳ ನಂತರ ಗೋಗಿಯ ಪ್ರತಿ ಕಾರ್ಮಿಕ ಕುಟುಂಬದಲ್ಲೂ ಒಬ್ಬೊಬ್ಬ ವಿಧವೆ ಇರುತ್ತಾಳೆಂದು ಊಹಿಸಬಹುದು.

ಜಾದೂವಿದ್ಯೆಯಲ್ಲಿ ದೇಶವಿದೇಶಗಳಲ್ಲಿ ಖ್ಯಾತಿ ಪಡೆದಿದ್ದ ಗೋಗಿಯಾ ಪಾಶಾ ಇದ್ದಕ್ಕಿದ್ದಂತೆ ಜನರನ್ನು ಮಾಯ ಮಾಡುತ್ತಿದ್ದನಂತೆ. ಯೂಸಿಲ್ ಕಂಪೆನಿ ಜಾದೂಗುಡದಲ್ಲಿ ಅಂಥದ್ದೇ ಜಾದೂ ಮಾಡಿ ಈಗ ಗೋಗಿಯತ್ತ ಬರುತ್ತಿದೆ.

ಅದು ಗೋಗಿಯಲ್ಲಿ ತಳವೂರುವ ಮೊದಲು ಗೋಗಿ ಮತ್ತು ಸುತ್ತಲಿನ ಊರುಗಳ ಆರೋಗ್ಯ ಸಮೀಕ್ಷೆ ಮಾಡಬೇಕಿದೆ. ಏಕೆಂದರೆ ಯುರೇನಿಯಂ ಅದುರು ಇದ್ದಲ್ಲೆಲ್ಲ ಸಣ್ಣ ಪ್ರಮಾಣದಲ್ಲಿ ಕ್ಯಾನ್ಸರ್ ಮತ್ತು ಅಂಗವಿಕಲತೆ ಇದ್ದೇ ಇರುತ್ತದೆ. ಗುಲಬರ್ಗಾದ ಕ್ಯಾನ್ಸರ್ ಆಸ್ಪತ್ರೆಗೆ ಹಿಂದೆ ಎಲ್ಲೆಲ್ಲಿಂದ ಎಷ್ಟು ಜನರು ಯಾವ ಯಾವ  ಕ್ಯಾನ್ಸರ್‌ಗಳ ಚಿಕಿತ್ಸೆಗೆ ಬಂದಿದ್ದರು ಎಂಬುದರ ವಿಶ್ಲೇಷಣೆ ನಡೆಯಬೇಕಿದೆ. ಶಹಾಪುರದ ಕಲ್ಲುಗಣಿಗಳ ದೂಳು ಸೇವಿಸಿದವರು ಶ್ವಾಸಕೋಶದ ಕ್ಯಾನ್ಸರಿನಿಂದ, ತಂಬಾಕು ಸೇವಿಸುವವರು ಗಂಟಲು ಕ್ಯಾನ್ಸರಿನಿಂದ ಸತ್ತಿರಬಹುದು. ಗೋಗಿಯ ವಿಕಿರಣದ ಚರಿತ್ರೆಯನ್ನು ಸಂಗ್ರಹಿಸುವುದು ಕಷ್ಟವೇನಲ್ಲ. ಅವೆಲ್ಲ ಸಿಕ್ಕಮೇಲೆ ಮತ್ತೊಮ್ಮೆ ಜನಾಭಿಪ್ರಾಯ ಕೇಳಬೇಕಿದೆ. ಗಣಿಗಾರಿಕೆ ಆರಂಭಿಸಲೇ ಬೇಕೆಂದಿದ್ದರೆ ಇಡೀ ಗೋಗಿಯನ್ನು ಸ್ಥಾನಾಂತರ ಮಾಡಬೇಕಿದೆ. ಏಕೆಂದರೆ ಗಣಿ ಅಗೆಯುವಾಗ, ಅದಿರನ್ನು ಪುಡಿ ಮಾಡುವಾಗ, ಪುಡಿಯನ್ನು ಸಾಗಿಸುವಾಗ, ಅದನ್ನು ಆರು ಕಿಲೊಮೀಟರ್ ಆಚೆ ಆಮ್ಲ ಮತ್ತು ಕ್ಷಾರದ್ರಾವಣದಲ್ಲಿ ತೊಳೆಯುವಾಗ ವಿಕಿರಣ ಸುತ್ತೆಲ್ಲ ಹಬ್ಬುತ್ತದೆ. ನದಿ, ತೊರೆ, ಅಂತರ್ಜಲಕ್ಕೂ ಬೆಳೆಗಳಿಗೂ ವಿಕಿರಣ ಕಣಗಳು ಸೇರುತ್ತವೆ. ಅವನ್ನು ನಿವಾರಿಸಬಲ್ಲ ಯಾವ ತಂತ್ರವೂ ಜಗತ್ತಿನಲ್ಲಿಲ್ಲ. ಒಂದು ಟನ್ ಅದುರು ಅಗೆದರೆ 997 ಕಿಲೊ ನಿರುಪಯುಕ್ತ, ಆದರೆ ವಿಷಯುಕ್ತ ಕಚಡಾ ಅಲ್ಲೇ ರಾಶಿಯಾಗಿ ಬಿದ್ದಿರುತ್ತದೆ.

ಆಸ್ಟ್ರೇಲಿಯಾ, ಕೆನಡಾ, ರಷ್ಯ, ಕಝಾಕ್‌ಸ್ತಾನ್ ಮುಂತಾದ ದೇಶಗಳಲ್ಲಿ ಯುರೇನಿಯಂ ಗಣಿಗಾರಿಕೆ ಇದೆ. ಆದರೆ ಅಲ್ಲೆಲ್ಲ ಜನವಸತಿ ತೀರಾ ವಿರಳ. ಇಡೀ ಗುಲಬರ್ಗಾ ಜಿಲ್ಲೆಯಷ್ಟು ವಿಸ್ತೀರ್ಣದಲ್ಲಿ ಜನವಸತಿಯೇ ಇರುವುದಿಲ್ಲ. ಕಾರ್ಮಿಕರೂ ಅಡಿಯಿಂದ ಮುಡಿಯವರೆಗೆ ಕವಚ ಧರಿಸಿ ಯಂತ್ರಗಳ ಮೂಲಕ ಕೆಲಸ ಮಾಡುತ್ತಾರೆ. ನಮ್ಮಲ್ಲಿ  ಕಾರ್ಮಿಕನ ದೂಳು ಮೆತ್ತಿದ ಸಮವಸ್ತ್ರವನ್ನು ಮನೆಯವರೇ ಒಗೆಯುತ್ತಾರೆ. ಭೂಗತ ಹೆಮ್ಮಾರಿಯನ್ನು ಮನೆಯೊಳಗೇ ತರುತ್ತಾರೆ.

`ಪೋಖ್ರಾನ್‌ನಲ್ಲಿ 1998ರಲ್ಲಿ ಪರಮಾಣು ಸಾಧನ ಸ್ಫೋಟಿಸಿದಾಗ ಜಾದೂಗುಡದ ಬೀದಿಗಳಲ್ಲೂ ಸಂತಸ ವಿಜೃಂಭಿಸಿತ್ತು~ ಎಂದು ಬಿಬಿಸಿಗಾಗಿ ಮಾರ್ಕ್ ವ್ಹಿಟೇಕರ್ ವರದಿ ಮಾಡಿದ್ದ. ವಿಕಲಾಂಗರ ಊರಿನ ಆ ವಿಪರ್ಯಾಸ ಗೋಗಿಗೆ ಬರಬಾರದು.
(ನಿಮ್ಮ ಅನಿಸಿಕೆಗಳನ್ನು ಕಳುಹಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT