ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಪರಿಷತ್‌ ನಲಿವೂ ಕಸಾಪ ನೋವೂ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಭಾರತದ ಬದುಕು ಹಳ್ಳಿಗಳಲ್ಲಿದೆ ಎಂದು ಗಾಂಧೀಜಿ ಬಲವಾಗಿ ನಂಬಿದ್ದರು. ಬೆರಳೆಣಿಕೆಯಷ್ಟು ಜನ ಪ್ರಜಾಪ್ರಭುತ್ವದ ಸಿದ್ಧಾಂತ­ದಂತೆ ಇಡೀ ಜನಸಮುದಾಯವನ್ನು ಸಮರ್ಥವಾಗಿ ಪ್ರತಿನಿಧಿಸಲಾರರು ಎಂದಿದ್ದರು. ಆದ್ದರಿಂದಲೇ ಸಂವಿಧಾನದ ಅನುಚ್ಛೇದ 40ರಲ್ಲಿ ಪ್ರಜಾಪ್ರಭುತ್ವದ ವಿಕೇಂದ್ರೀಕರಣ ವಿಷಯವನ್ನು ಅಳವಡಿಕೆ ಮಾಡಲಾಗಿತ್ತು.

ಐದು ದಶಕಗಳ ನಂತರ ಭಾರತ ಸರ್ಕಾರ 1993ರಲ್ಲಿ ಕ್ರಾಂತಿ­ಕಾರಕ ನಿರ್ಣಯ ಮಾಡಿ, ಹೊಸ ಪಂಚಾಯತ್ ರಾಜ್‌ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಅಳ­ವಡಿಸಿದ್ದು ಈಗ ಇತಿಹಾಸ. ಕರ್ನಾಟಕದ ಪಂಚಾ­ಯತ್‌ ರಾಜ್‌ ಅಧಿನಿಯಮವಂತೂ ತಳಹಂತದ ಜನಪ್ರತಿನಿಧಿಗಳ ಆಯ್ಕೆಗಾಗಿ ವಿವಿಧ ವರ್ಗಗಳಿಗೆ ವಿವಿಧ ಹಂತಗಳಲ್ಲಿ ಮೀಸಲಾತಿ ಒದಗಿಸಿ ನಿಜವಾದ ಅರ್ಥದಲ್ಲಿ ಆಡಳಿತ ವಿಕೇಂದ್ರೀ­ಕರಣಕ್ಕೆ ನೆರವಾಗಿದೆ. ರಾಜ್ಯದ ಎಲ್ಲ ಕಡೆ ಒಂದು ಸಾಮಾ­ಜಿಕ, ರಾಜಕೀಯ ಬದಲಾವಣೆಗೆ ಕಾರಣ­ವಾಗಿದೆ. ಎಂದಿಗೂ ಪಂಚಾಯತಿಗಳ ಬಳಿ ಸುಳಿಯದ ಜನ ಅದೇ ಪಂಚಾಯತಿಗಳಲ್ಲಿ ಅಧಿ­ಕಾರದ ಚುಕ್ಕಾಣಿ ಹಿಡಿದು ದೇಶದ ರಾಜಕೀಯ ಅಧಿಕಾರದಲ್ಲಿ ಪಾಲುದಾರರಾಗಿದ್ದಾರೆ ಎಂಬುದು ಒಂದು ವಿಸ್ಮಯ ಮತ್ತು ಹೆಮ್ಮೆಯ ವಿಷಯ.

ನಿಜವಾದ ಅರ್ಥದಲ್ಲಿ ಈ ಹೊಸ ತಲೆ­ಮಾರಿನ ಜನಪ್ರತಿನಿಧಿಗಳ ವಾಸ್ತವದ ಜೀವನಾ­ನು­ಭವ ದೇಶದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಒದಗಿಸಿದೆ. ಪ್ರಾರಂಭದ ದಿನಗಳಲ್ಲಿ ಅನನುಭವಿ­ಗಳಂತೆ ಕಂಡರೂ ಕ್ರಮೇಣವಾಗಿ ಬೆಳೆಯು­ತ್ತಿರುವ ಪ್ರಬುದ್ಧತೆ ಗಮನಾರ್ಹ. ಇದು, ಕರ್ನಾಟಕದಲ್ಲಿ ಯಶಸ್ಸು ಕಂಡ ಒಂದು ಆಡಳಿತ ಪ್ರಯೋಗ.

ಹೊಸ ನಾಯಕರ ಉದಯಕ್ಕೂ ಅವಕಾಶ ಒದಗಿಸಿದೆ. ಈ ವ್ಯವಸ್ಥೆಯಿಂದ ದೂರ ನಿಂತು ಮಾತನಾಡುವವರು, ಗ್ರಾಮೀಣ ಬದುಕಿನ ಒಳನೋಟದ ಅರಿವಿಲ್ಲದವರು, ವ್ಯವಸ್ಥೆ ಬಗೆಗೆ ಕುಹಕ ನುಡಿಯುವುದು, ಬಹಳ ಹಗುರವಾಗಿ ಮಾತನಾಡುವುದು ಸಾಮಾನ್ಯ. ರಾಜ್ಯಮಟ್ಟದ ಕೆಲವು ನಾಯಕರದು ಸಹ ಇದೇ ರಾಗ. ಆದರೆ, ಸಂಸತ್‌ಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜನರೇ ಪಂಚಾಯಿತಿ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಮರೆಯುತ್ತಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್‌ ಉಪ ಕಾರ್ಯದರ್ಶಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾ ಪರಿಷತ್‌ ಮುಖ್ಯ ಕಾರ್ಯದರ್ಶಿ, ವಿಜಾಪುರ ಜಿಲ್ಲಾ ಪರಿಷತ್‌ ಆಡಳಿತಾಧಿಕಾರಿ ಹೀಗೇ ರಾಜ್ಯದ ವಿವಿಧ ಭಾಗ­ಗಳಲ್ಲಿ ಸಿಕ್ಕ ಮೂರು ಹಂತಗಳ ಅನುಭವ ಸ್ಮರ­ಣೀಯ. 1987ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯ­ಮಂತ್ರಿಗಳು, ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀ­ಣಾ­ಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು. ಭಾರೀ ಸಂಭ್ರಮದಿಂದ ಪ್ರಾರಂಭ­ಗೊಂಡ ಪಂಚಾಯತ್‌ ರಾಜ್‌ ವ್ಯವಸ್ಥೆ ಅವರಿಬ್ಬರ ಬದ್ಧತೆಗೆ ಸಾಕ್ಷಿಯಾಯಿತು.

ಅಧಿಕಾರಿಗಳಾದ ಟಿ.ಆರ್. ಸತೀಶ್ಚಂದ್ರನ್ ಮತ್ತು ಮೀನಾಕ್ಷಿ ಸುಂದರಂ ಅವರು ಪಂಚಾ­ಯತ್‌ ರಾಜ್‌ ವ್ಯವಸ್ಥೆಗೆ ವಿವರವಾದ ನೀಲನಕ್ಷೆ ಒದಗಿಸಿದರು. ದೇಶದಲ್ಲಿಯೇ ಇದೊಂದು ಅತ್ಯುತ್ತಮ ಪ್ರಯೋಗ ಎಂಬ ಹೆಗ್ಗಳಿಕೆಗೆ ಪಾತ್ರ­ವಾಯಿತು. ಈ ಹೊಸ ವ್ಯವಸ್ಥೆಯ ಭಾಗವಾಗ­ಬೇಕೆಂಬ ಬಯಕೆ ನನ್ನಲ್ಲಿ ಉತ್ಕಟವಾಗಿತ್ತು. ವಿಭಜನಪೂರ್ವದ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್‌ಗೆ ಉಪ ಕಾರ್ಯದರ್ಶಿಯಾಗಿ ನೇಮಕಗೊಂಡಾಗ ಬಲು ಸಂತೋಷವಾಗಿತ್ತು.

ಅದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಜಿಲ್ಲಾ ಪರಿಷತ್. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜನತಾ ಪಕ್ಷದ ಸರ್ಕಾರ ಈ ಜಿಲ್ಲಾ ಪರಿಷತ್‌ಗೆ ಸಂಪೂರ್ಣ ಅಧಿಕಾರ ನೀಡುವ ಮೂಲಕ ರಾಜಕೀಯ ಮುತ್ಸದ್ದಿತನ ಮೆರೆದಿತ್ತು. ಮೊದಲ ಬಾರಿಗೆ ತಳಹಂತದ ಆಡಳಿತ ವ್ಯವಸ್ಥೆಯಲ್ಲಿ ಹೊಸ ತಲೆಮಾರಿನ ನಾಯಕರೊಡನೆ ನಿಕಟ­ವಾಗಿ ಕಾರ್ಯ ನಿರ್ವಹಿಸುವ ರೋಚಕ ಅನು­ಭವ. ಅಲ್ಲಿ ದೊರಕಿದ ಜನಸಂಪರ್ಕ, ಅಭಿವೃದ್ಧಿ ಬಗೆಗೆ ಜನರ ಕಳಕಳಿ ಎಂದಿಗೂ ಮರೆಯ­ಲಾಗದ್ದು. ಆ ಕಳಕಳಿ ಹೊಸ ವ್ಯವಸ್ಥೆ ಮೇಲೆ ನನ್ನಲ್ಲಿ ಭರವಸೆಯನ್ನು ಮೂಡಿಸಿತ್ತು.

ಆಗ ಜಿಲ್ಲಾ ಪರಿಷತ್ತಿನ ಕಾರ್ಯಾಂಗದ ಮುಖ್ಯಸ್ಥರ ಹುದ್ದೆಯನ್ನು ಮುಖ್ಯ ಕಾರ್ಯ­ದರ್ಶಿ ಎಂದೇ ಕರೆಯಲಾಗುತ್ತಿತ್ತು. ಪರಿಷತ್ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ಇತ್ತು. ಸದಸ್ಯರು ಸಭೆಗೆ ಬಂದಾಗ ಆಸ್ಪತ್ರೆಗಳ ಸ್ಥಿತಿ–ಗತಿ, ಶಾಲೆಗಳ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಪಶು ವೈದ್ಯಕೀಯ ಆಸ್ಪತ್ರೆಗಳ ತಾಪತ್ರಯ... ಹೀಗೆ ಪ್ರತಿಯೊಂದು ವಿಷಯದ ಬಗೆಗೂ ತಳಮಟ್ಟದ ಮಾಹಿತಿ ಅವರಲ್ಲಿ ಇರುತ್ತಿತ್ತು.

ಜಿಲ್ಲಾ ಪರಿಷತ್ ಸಭೆಗಳಲ್ಲಿ ಮತ್ತು ಸ್ಥಾಯಿ ಸಮಿತಿ ಸಭೆಗಳಲ್ಲಿ ಸದಸ್ಯರು ಚರ್ಚೆಯಲ್ಲಿ ಭಾಗವಹಿಸುತ್ತಿದ್ದ ರೀತಿ, ಆಗುತ್ತಿದ್ದ ತೀರ್ಮಾನ­ಗಳನ್ನು ಕಂಡವರಿಗೆ ವಿಧಾನ ಮಂಡಲದ ಅಧಿವೇಶನ ನೆನಪಾಗುತ್ತಿತ್ತು. ಅದೊಂದು ರೀತಿ­ಯಲ್ಲಿ ಸಂಪೂರ್ಣವಾಗಿ ಜಿಲ್ಲಾಮಟ್ಟದ ಸರ್ಕಾರ­­ವಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಪರಿಷತ್‌ ಅಧ್ಯಕ್ಷರಾಗಿದ್ದ ಕೆ.ಸಿ. ಕುಂದರ್, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಎ.ಜಿ. ಕೊಡ್ಗಿ, ಸಂಕಪ್ಪ ರೈ, ಭರತ್ ಮುಂಡೋಡಿ ಮೊದಲಾ­ದವರು ಅತ್ಯಂತ ದಕ್ಷ ಆಡಳಿತ ನೀಡಿದ್ದರು. ಈಗ ಸಚಿವರಾಗಿರುವ  ರಮಾನಾಥ್ ರೈ, ವಿನಯ­ಕುಮಾರ ಸೊರಕೆ ಆಗ ಶಾಸಕರಾಗಿ ಪರಿಷತ್ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಪಂಚಾಯತ್ ರಾಜ್ ವ್ಯವಸ್ಥೆ ಹೊಸ ಪೀಳಿಗೆ ರಾಜಕೀಯ ನಾಯಕರನ್ನು ಸೃಷ್ಟಿಮಾಡಿತು.

ಜಿಲ್ಲಾ ಪರಿಷತ್ತಿನ ಹೊಸ ಕೆಲಸ ನನಗೆ ತೃಪ್ತಿ ನೀಡಿತ್ತು. ಬೆಂಗಳೂರನ್ನು ಸಂಪೂರ್ಣವಾಗಿ ಮರೆ­ತಿದ್ದೆ. ಹೀಗಿರುವಾಗ ೧೯೮೮ರ ಫೆಬ್ರುವರಿ ತಿಂಗಳ ಮೊದಲ ಭಾನುವಾರ ಸಂಜೆ ಮುಖ್ಯಮಂತ್ರಿ ಹೆಗಡೆ ಅವರಿಂದ ಅನಿರೀಕ್ಷಿತವಾಗಿ ದೂರವಾಣಿ ಕರೆಬಂತು. ‘ವಿಠಲಮೂರ್ತಿ ಯಾವಾಗ ಬೆಂಗ­ಳೂರಿಗೆ ಬರುತ್ತೀರಿ’ ಎಂದರು. ‘ಸದ್ಯದಲ್ಲಿ ಬೆಂಗಳೂರಿಗೆ ಬರುವ ಯೋಚನೆ ಇಲ್ಲ’ ಎಂದೆ. ‘ನಿಮ್ಮನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಿದ್ದೇನೆ, ಯಾವಾಗ ಬರ್ತೀರಿ’ ಎಂದು ಪುನಃ ಕೇಳಿದರು.

ನನಗೆ ತುಂಬಾ ಆಶ್ಚರ್ಯವಾಗಿತ್ತು. ಈಗಾಗಲೇ ಆ ಇಲಾಖೆಯಲ್ಲಿ ಸುಮಾರು ಎರಡು ವರ್ಷ ಕಾರ್ಯ ನಿರ್ವಹಿಸಿ, ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಬಂದಿದ್ದ ನಾನು, ದಕ್ಷಿಣ ಕನ್ನಡದ ಜಿಲ್ಲಾ ಪರಿಷತ್‌ನಲ್ಲಿ ಸಂಪೂರ್ಣವಾಗಿ ಮುಳುಗಿ­ಹೋಗಿದ್ದೆ. ಆದಷ್ಟು ಶೀಘ್ರ ಬಂದು ಕಾಣುವಂತೆ ಸೂಚಿಸಿದರು. ನನ್ನ ಮಕ್ಕಳು ಮಂಗಳೂರಿನ ಶಾಲೆಯಲ್ಲಿದ್ದರು. ಆ ವೇಳೆಗಾಗಲೇ ಒಂದೊಂದು ವರ್ಷಕ್ಕೆ ಒಂದು ಶಾಲೆಯಂತೆ ನಾಲ್ಕಾರು ಶಾಲೆಗಳು ಆಗಿದ್ದವು! ಏನೂ ಮಾಡುವಂತಿರಲಿಲ್ಲ.

ಸ್ವತಃ ಮುಖ್ಯಮಂತ್ರಿಗಳೇ ನೇರವಾಗಿ ದೂರ­ವಾಣಿ ಕರೆಮಾಡಿ ಒಂದು ಹುದ್ದೆಗೆ ನೇಮಿಸಿದ ಪ್ರಸಂಗ ನನ್ನಲ್ಲಿ ಹೊಸ ಉತ್ಸಾಹ ಮತ್ತು ಹುಮ್ಮಸ್ಸು ಮೂಡಿಸಿತ್ತು. ಬೆಂಗಳೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಿ ಮುಖ್ಯಮಂತ್ರಿಯವರನ್ನು  ಭೇಟಿಯಾದೆ. ‘ಈ ವರ್ಗಾವಣೆಯಿಂದ ನಿಮಗೆ ತೊಂದರೆಯಾಯ್ತಾ’ ಎಂದರು. ‘ಇಲ್ಲ ಸರ್, ಮಕ್ಕಳು, ಮನೆಯವರು ಇನ್ನೂ ೨-–೩ ತಿಂಗಳು ಅಲ್ಲೇ ಇರುತ್ತಾರೆ. ಪರೀಕ್ಷೆ ಮುಗಿಸಿ ಬರುತ್ತಾರೆ’ ಎಂದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ಜೊತೆಗೆ ನೀವು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಆಡಳಿತಾಧಿಕಾರಿ ಹೊಣೆ-­ಯನ್ನೂ ಹೊತ್ತುಕೊಂಡು ಹಳಿ ತಪ್ಪಿರುವ ಅದನ್ನು ಸರಿದಾರಿಗೆ ತರಬೇಕು ಎಂದು ಸೂಚಿಸಿ­ದರು. ಎದ್ದುನಿಂತು ಹಸ್ತಲಾಘವ ನೀಡಿ ನನಗೆ ಶುಭ ಹಾರೈಸಿದರು. ಈ ರೀತಿಯ ಅಪರೂಪದ ಸೌಜನ್ಯ ನನ್ನನ್ನು ಮೂಕನನ್ನಾಗಿಸಿತ್ತು.

ಕಸಾಪ ಆ ವೇಳೆಗಾಗಲೇ ಒಳ್ಳೆಯದಲ್ಲದ ಕಾರಣಗಳಿಗೆ ಸುದ್ದಿಯಲ್ಲಿತ್ತು. ನ್ಯಾಯಮೂರ್ತಿ ಪಿ.ಕೆ. ಶಾಮಸುಂದರ್ ಆಯೋಗ, ಕಸಾಪದ ಅಂದಿನ ಅಧ್ಯಕ್ಷರಾಗಿದ್ದ ಹಂಪನಾ ವಿರುದ್ಧ ತನಿಖೆ ನಡೆಸಿತ್ತು. ಕಸಾಪದಲ್ಲಿ ನಡೆದಿದೆ ಎನ್ನಲಾಗಿದ್ದ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಇನ್ನಿತರ ಅವ್ಯವಹಾರಗಳ ಕುರಿತು ಸುದೀರ್ಘ ವರದಿ ನೀಡಿ, ಸುಧಾರಣೆಗೆ ಸಲಹೆ ನೀಡಿ, ಆಡಳಿತಾಧಿಕಾರಿ ನೇಮಕಕ್ಕೆ ಶಿಫಾರಸು ಮಾಡಿತ್ತು.

ಕಸಾಪ, ಕನ್ನಡ ಭಾಷೆ ಬೆಳವಣಿಗೆಗೆ, ಕನ್ನಡಿಗರ ಆಶೋತ್ತರ ಮತ್ತು ಅಭ್ಯುದಯಕ್ಕಾಗಿ 1915ರ ಮೇ 5ರಂದು ವಿಧ್ಯುಕ್ತವಾಗಿ ಸ್ಥಾಪಿತವಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಸರ್‌ ಎಂ. ವಿಶ್ವೇಶ್ವರಯ್ಯನವರ ದೂರದರ್ಶಿತ್ವದ ಫಲವಾಗಿ ಉದಯಿಸಿದ ಈ ಸಂಸ್ಥೆಗೆ ಎಚ್‌.ವಿ. ನಂಜುಂಡಯ್ಯ ಮೊದಲ ಅಧ್ಯಕ್ಷರು. ತಿ.ತಾ. ಶರ್ಮಾ, ಬಿಎಂಶ್ರೀ, ಶಿವಮೂರ್ತಿ ಶಾಸ್ತ್ರಿಗಳು, ಮಾಸ್ತಿ, ಎ.ಎನ್‌. ಮೂರ್ತಿರಾವ್‌, ಜಿ.ವೆಂಕಟಸುಬ್ಬಯ್ಯ, ಜಿ. ನಾರಾಯಣ ಮುಂತಾದ ಮಹನೀಯರು ಕಟ್ಟಿ ಬೆಳೆಸಿದರು.

ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕಸಾಪ ಆಡಳಿತಾಧಿಕಾರಿ ಹುದ್ದೆಗಳ ಕಾರ್ಯ ನಿರ್ವಹಣೆ ಒಂದು ವಿಶೇಷ ಅನುಭವ. ಕಾಲೇಜು ಕಲಿಯಲು ನಾನು ಬೆಂಗಳೂರಿಗೆ ಬಂದ ಮೊದಲ ವರ್ಷಗಳಲ್ಲಿ ಕಸಾಪ, ನನ್ನ ಹಾಸ್ಟೆಲ್ ಬಿಟ್ಟರೆ ಎರಡನೇ ಮನೆಯಾಗಿತ್ತು. ವಾರದಲ್ಲಿ ನಾಲ್ಕೈದು ದಿನ ಸಂಜೆ ಅಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು.

ಸಜ್ಜನರಾದ ಜಿ. ನಾರಾಯಣ ಅವರು ಅಧ್ಯಕ್ಷರಾಗಿದ್ದ ಕಾಲ. ನಾಡಿನ ಶ್ರೇಷ್ಠ ಕವಿ, ಸಾಹಿತಿ, ಚಿಂತಕರನ್ನು ಹಿಂದಿನ ಸಾಲಿನಲ್ಲಿ ಕುಳಿತು ನೋಡಿ, ಕಾವ್ಯ ವಾಚನ, ಭಾಷಣ ಕೇಳಿ ಪುಳಕಿತಗೊಂಡಿದ್ದೆ. ನಿಜವಾದ ಅರ್ಥದಲ್ಲಿ ನನಗೆ ಕನ್ನಡಪರ ಒಲವು ಬೆಳೆದಿದ್ದು, ಓದು ಆರಂಭವಾಗಿದ್ದು ಇದೇ ಸಮಯದಲ್ಲಿ. ಅಂದಿನ ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಮತ್ತು ಪರಿಷತ್ತು ಒಂದೇ ಕಡೆ ಇದ್ದ ಸಂಸ್ಥೆಯಾಗಿತ್ತು (ಕಾಲಕ್ರಮೇಣ ಸಾಹಿತಿಗಳು, ಸಾಹಿತ್ಯ ಬೇರೆ, ಪರಿಷತ್ತೇ ಬೇರೆ ಎಂಬ ಸ್ಥಿತಿ ನಿರ್ಮಾಣವಾಯಿತು). ಅದಾದ ೧೫–-೨೦ ವರ್ಷಗಳ ನಂತರ ಅದೇ ಸಂಸ್ಥೆಯ ವ್ಯವಸ್ಥೆಯನ್ನು ಸುಗಮಗೊಳಿಸಲು ಆಡಳಿತಾ­ಧಿಕಾರಿ­ಯಾಗಿ ನೇಮಕಗೊಳ್ಳುತ್ತೇನೆ ಎಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ.

ಸಲಹಾ ಸಮಿತಿ ಮತ್ತು ಸಾಹಿತಿಗಳ ಸಹಕಾರದಿಂದ ಕಸಾಪ ಬೈಲಾಗಳ ತಿದ್ದುಪಡಿಗೆ ಸರ್ವಸದಸ್ಯರ ಸಭೆಯಲ್ಲಿ ಒಪ್ಪಿಗೆ ಪಡೆದು, ಚುನಾವಣೆ ನಡೆಸಿ ಹೊಸ ಅಧ್ಯಕ್ಷರ ಆಯ್ಕೆಗೆ ಅನುವು ಮಾಡಿಕೊಡುವುದು ನನ್ನ ಕೆಲಸ­ವಾಗಿತ್ತು. ಸರ್ವಸದಸ್ಯರ ಸಭೆ ಕರೆದಾಗ ನಮ್ಮ ಸಾಹಿತಿಗಳ ಗುಂಪುಗಾರಿಕೆ ಶಕ್ತಿಯ ಪರಿಚಯ­ವಾಯ್ತು. ಹಿಂದಿನ ಸಾಲಿನಲ್ಲಿ ಕುಳಿತು ಅವರ ಪ್ರವಚನ ಕೇಳುತ್ತಿದ್ದ ನಾನು ಅಂದಿನ ಸಭೆಯ ಅಧ್ಯಕ್ಷತೆ ವಹಿಸಿದ್ದೆ.

ಏನು ಉದ್ವೇಗ? ಆವೇಶ­ಪೂರಿತ ಭಾಷಣ. ಕೆಲವೊಂದು ತಿದ್ದುಪಡಿಗಳಿಗೆ ಕೆಲವರು ಪರವಾದರೆ ಕೆಲವರದು ತೀವ್ರ ವಿರೋಧ. ಕೂಗಾಟ, ಕಿರುಚಾಟಗಳನ್ನು ಕೇಳಿ ತಲೆ ಚಿಟ್ಟುಹಿಡಿದು ಹೋಗಿತ್ತು. ಸಾಹಿತ್ಯ ಪರಿ­ಷತ್‌ಗಿಂತ ಜಿಲ್ಲಾ ಪರಿಷತ್‌ ಸಭೆಯೇ ವಾಸಿ ಎಂದುಕೊಂಡಿದ್ದೆ.೩-–೪ ಗಂಟೆಗಳ ಕಾಲ ಎಲ್ಲರೂ ಹೇಳಿದ್ದನ್ನು ಸಹನೆಯಿಂದ ಕೇಳಿಸಿ­ಕೊಂಡಿದ್ದೆ. ನಂತರ ಹಿರಿಯ ಚಿಂತಕರಾದ ಹಾ.ಮಾ. ನಾಯಕರಿಗೆ ಅಭಿಪ್ರಾಯ ಮಂಡಿ­ಸಲು ಕೋರಿದೆ. ಅಂದು ಹಾಮಾನಾ ಆಡಿದ ಮಾತು, ನೀಡಿದ ಅಭಿಪ್ರಾಯ ಎಲ್ಲ ಕನ್ನಡಿಗ­ರಿಗೂ ಎಚ್ಚರಿಕೆ ಮಾತಿನಂತಿತ್ತು. ಸಾಹಿತ್ಯ ಪರಿ­ಷತ್ತಿನ ಚರಿತ್ರೆ, ಪರಂಪರೆ, ಘನತೆ, ಗೌರವಗಳ ಕುರಿತು ಅಂದು ಅವರು ಆಡಿದ ಮಾತು ಬಹಳ ಮಹತ್ವಪೂರ್ಣವಾಗಿತ್ತು.  ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಸರ್ಕಾರ, ಸಾಹಿತಿಗಳು ಮತ್ತು ಕನ್ನಡಿಗರ ಜವಾಬ್ದಾರಿಯನ್ನು ನೆನಪಿಸಿದ ಸಂದ­ರ್ಭ­ದಲ್ಲಿ ಸಭೆ ಒಂದು ಶಿಸ್ತಿಗೆ ಬಂದಿತ್ತು.

ಸಭೆಯ ಕೊನೆಯಲ್ಲಿ ನಾನು ಹೇಳಿದ ವಿಷಯವಿಷ್ಟೇ. ‘ಈ ಸಾಹಿತ್ಯ ಪರಿಷತ್ತನ್ನು ನಿಮ್ಮಿಂದ ನಿರ್ವಹಿಸಲು ಸಾಧ್ಯವಿಲ್ಲ ಎಂದಾದರೆ ಸರ್ಕಾರವೇ ಅಧಿಕಾರಿಗಳ ಮುಖಾಂತರ ಇದರ ಚಟುವಟಿಕೆಗಳನ್ನು ಸಂಪೂ­ರ್ಣ­ವಾಗಿ ನಿಯಂತ್ರಿಸುತ್ತದೆ. ಅದು ಸರ್ಕಾರಿ ಸಾಹಿತ್ಯ ಪರಿಷತ್ತು ಆಗುತ್ತದೆ. ಸಾಹಿತಿಗಳ ಪರಿಷತ್ತು ಆಗಬೇಕಾದರೆ ಸಭೆಯ ಮುಂದಿರುವ ತಿದ್ದುಪಡಿ ಪರಿಗಣಿಸಿ, ‘ನಿಮ್ಮ ಪರಿಷತ್ತನ್ನಾಗಿ ಉಳಿಸಿಕೊಳ್ಳಿ’ ಎಂದೆ.

ಸಭಾಂಗಣದ ಗೋಡೆಗಳ  ಮೇಲೆ ಭಾವಚಿತ್ರಗಳಾಗಿದ್ದ ಕನ್ನಡದ ಹಿರಿಯ ಚೇತನಗಳು ಆ ಕ್ಷಣದಲ್ಲಿ ಸಭೆಯಲ್ಲಿದ್ದವರಿಗೆ ಸದ್ಬುದ್ಧಿ ಕೊಟ್ಟಂತೆ ಕಂಡಿತು. ಸಭೆ ಸುಸೂತ್ರವಾಗಿ ಮುಗಿಯಿತು. ಹಾಮಾನಾ ಅವರು ನನ್ನನ್ನು ತಬ್ಬಿಕೊಂಡು ‘ಸ್ವಾಮಿ, ನೀವು ಗೆದ್ದುಬಿಟ್ರಿ’ ಎಂದರು. ಸಾಹಿತ್ಯ ಪರಿಷತ್ತಿನ ಏಳು–-ಬೀಳು­ಗಳನ್ನು ಕಂಡಿದ್ದ ಅವರ ಕಣ್ಣಾಲಿಗಳು ತುಂಬಿ­ದ್ದವು. ಯಾವುದೋ ಕಾಣದ ನೋವು ಅವರನ್ನು ಕಾಡಿದಂತಿತ್ತು. ಯಶಸ್ವಿಯಾಗಿ ಚುನಾವಣೆ ನಡೆದು ಡಾ. ಜಿ.ಎಸ್. ಸಿದ್ಧಲಿಂಗಯ್ಯನವರು ಅಧ್ಯಕ್ಷರಾಗಿ ಆಯ್ಕೆಯಾದರು. ಅವರಿಗೆ 1989ರ ಫೆಬ್ರುವರಿ 2ರಂದು ಅಧಿಕಾರ ವಹಿಸಿಕೊಟ್ಟೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT