ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವೈವಿಧ್ಯಕ್ಕೆ ಮುಳುವಾದ ಅರಿವಿನ ಕ್ರಾಂತಿ

Last Updated 20 ಏಪ್ರಿಲ್ 2017, 19:52 IST
ಅಕ್ಷರ ಗಾತ್ರ

ಕಳೆದ ವಾರದ ಅಂಕಣದಲ್ಲಿ ಇತಿಹಾಸಕಾರ ಯುವಾಲ್ ಹರಾರಿಯವರ ‘ಸೇಪಿಯನ್’ ಕೃತಿಯನ್ನು ಪರಿಚಯಿಸಿದ್ದೆ. ‘ಸೇಪಿಯನ್’ ಅಲ್ಲದೆ ಹಲವಾರು ಮನುಕುಲದ ವರ್ಗಗಳು ಭೂಮಿಯ ಮೇಲೆ ಲಕ್ಷಾಂತರ ವರ್ಷಗಳ ಕಾಲ ಇದ್ದವು. ಆದರೂ ಮಾನವನ ಪ್ರಾಬಲ್ಯ ಭೂಮಿಯ ಮೇಲೆ ಸ್ಥಾಪಿತವಾದುದು ಕೇವಲ ಕಳೆದ  70,000 ವರ್ಷಗಳಲ್ಲಿ ಮಾತ್ರ. ಇದನ್ನು ಸಾಧ್ಯವಾಗುವಂತೆ ಮಾಡಿದ್ದು ಸೇಪಿಯನ್ನರಲ್ಲಿ ನಡೆದ ಅರಿವಿನ (ಕಾಗ್ನಿಷನ್) ಕ್ರಾಂತಿ ಎಂದು ಹರಾರಿ ಗುರುತಿಸುತ್ತಾರೆ. ಇದರ ಅಂಗವಾಗಿ ಹೊಸ ರೀತಿಯಲ್ಲಿ ಚಿಂತನೆ ಮತ್ತು ಸಂವಹನಗಳನ್ನು ಮಾಡುವ ಶಕ್ತಿಯನ್ನು ಸೇಪಿಯನ್ ಮನುಷ್ಯ ಪಡೆದುಕೊಂಡ. ಹೀಗೆ ಸೇಪಿಯನ್ನರಲ್ಲಿ ಮಾತ್ರ ಯಾಕೆ ಆಯಿತು ಎನ್ನುವುದಕ್ಕೆ ಖಚಿತ ಉತ್ತರಗಳಿಲ್ಲ. ಆಕಸ್ಮಿಕವಾಗಿ ಜರುಗಿದ ಆನುವಂಶಿಕ (ಜೆನೆಟಿಕ್) ರೂಪಾಂತರಗಳಿಂದ ಸೇಪಿಯನ್ನರ ಮೆದುಳಿನೊಳಗಿನ ವೈರಿಂಗ್ ಬದಲಾಗಿರಬಹುದು ಎನ್ನುವುದಷ್ಟೆ ಈಗ ಲಭ್ಯವಿರುವ ವಿವರಣೆ.

ಸಾಕಷ್ಟು ಸಂಕೀರ್ಣವಾದ ಸಂವಹನ ವ್ಯವಸ್ಥೆಯನ್ನು ಪ್ರಾಣಿಪ್ರಪಂಚದಲ್ಲಿ ನಾವು ಕಾಣುತ್ತೇವೆ, ನಿಜ. ಆದರೆ ಅರಿವಿನ ಕ್ರಾಂತಿಯ ಮೂಲಕ ಮನುಷ್ಯ ಪಡೆದುಕೊಂಡದ್ದು ಹಲವು ಆಯಾಮಗಳಿದ್ದ ಭಾಷೆಯನ್ನು. ಇದರ ಫಲವಾಗಿ ಸೇಪಿಯನ್ ಮಾನವ ತನ್ನ ಪ್ರಪಂಚವನ್ನು ಬಣ್ಣಿಸುವ ಶಕ್ತಿಯನ್ನು ಮಾತ್ರ ಪಡೆದುಕೊಳ್ಳಲಿಲ್ಲ. ಜೊತೆಗೆ ಆ ಪ್ರಪಂಚದಲ್ಲಿ ಅಸ್ತಿತ್ವದಲ್ಲಿ ಇರದ ವಸ್ತುಗಳು ಮತ್ತು ನಡೆಯದ ವಿದ್ಯಮಾನಗಳನ್ನು ಸಹ ಕಲ್ಪಿಸಿಕೊಳ್ಳುವ ಶಕ್ತಿಯನ್ನು ಆತ ಪಡೆದುಕೊಂಡ. ಅಂದರೆ ಸೇಪಿಯನ್ ಮನುಷ್ಯನ ಸಂವಹನ ಇತರ ಪ್ರಾಣಿಗಳಂತೆ ತನ್ನ ಪರಿಸರದಲ್ಲಿದ್ದ ಅಪಾಯಗಳು ಮತ್ತು ಅವಕಾಶಗಳಿಗೆ ಸೀಮಿತವಾಗಿರಲಿಲ್ಲ. ಅರಿವಿನ ಕ್ರಾಂತಿಯ ನಂತರ ಆತನಿಗೆ ತನ್ನ ಸಮುದಾಯದ ಸದಸ್ಯರ ಬಗ್ಗೆ ಹಾಗೂ ವಾಸ್ತವದಾಚೆಗಿನ ಕಾಲ್ಪನಿಕ ವಿದ್ಯಮಾನಗಳ ಬಗ್ಗೆ ಸಹ ಮಾತನಾಡುವ ಶಕ್ತಿ ದೊರಕಿತ್ತು. ಹರಾರಿ ಇದನ್ನು ಹರಟೆ ಹೊಡೆಯುವ ಶಕ್ತಿಯೆಂದು ತಮಾಷೆಯಾಗಿ ಬಣ್ಣಿಸುತ್ತಾರೆ. ಒಂದು ಕ್ಷಣ ಗಂಭೀರವಾಗಿ ಈ ಹೊಸ ಅರಿವಿನ ಶಕ್ತಿಯನ್ನು ಅವಲೋಕಿಸುವುದಾದರೆ ನಮ್ಮ ಇಂದಿನ ಮಾನವ ಸಮಾಜವನ್ನು ಹಾಗೂ ಅದರ ಎಲ್ಲ ಲಕ್ಷಣಗಳು ಮತ್ತು ವಿದ್ಯಮಾನಗಳನ್ನು ಸಾಧ್ಯವಾಗಿಸಿದ್ದು ಅರಿವಿನ ಕ್ರಾಂತಿಯೆನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯ, ನಗರಗಳು, ಹಣ, ಧರ್ಮ, ಮೌಲ್ಯಗಳು ಇತ್ಯಾದಿಗಳೆಲ್ಲವನ್ನು ಕಟ್ಟಬೇಕೆಂದರೆ ಇದುವರೆಗೂ ಕಂಡಿರದ ಹೊಸಬಗೆಯ ಸಹಕರಿಸುವ ಸಾಮರ್ಥ್ಯ ಬೇಕಾಗಿತ್ತು. ಈಗ ಸೇಪಿಯನ್ನರು ಗಳಿಸಿದ್ದು ಹೆಚ್ಚಿನ ಸಹಕಾರ ಸಾಮರ್ಥ್ಯವನ್ನು. ಅರಿವಿನ ಕ್ರಾಂತಿಯ ಎರಡು ಮುಖ್ಯ ಪರಿಣಾಮಗಳನ್ನು ಇಲ್ಲಿ ದಾಖಲಿಸಬೇಕು.

ಮೊದಲಿಗೆ, ಸುಮಾರು 70,000 ವರ್ಷಗಳ ಹಿಂದೆ ಸೇಪಿಯನ್ನರು ತಾವಿದ್ದ ಆಫ್ರಿಕಾದ ನೆಲೆಗಳಿಂದ ಹೊರಬಂದು ಮೊದಲಿಗೆ ಯುರೋಪ್ ಮತ್ತು ಏಷ್ಯಾದ ವಿವಿಧ ಭಾಗಗಳಲ್ಲಿ ನೆಲಸಿದರು. ಈ ವಲಸೆ ನಡಿಗೆಯ ಮೂಲಕವೆ ಆಯಿತು. ಆದರೆ ನಂತರದಲ್ಲಿ ಇಂಡೊನೇಷ್ಯದ ದ್ವೀಪಗಳಿಂದ ಸಮುದ್ರಯಾನ ಮಾಡುತ್ತ ಆಸ್ಟ್ರೇಲಿಯಾಕ್ಕೆ ಸುಮಾರು 45,000 ವರ್ಷಗಳ ಹಿಂದೆ ಹೋದರು. ಇದೊಂದು ಬಹುದೊಡ್ಡ ಸಾಧನೆ, ಏಕೆಂದರೆ ತಮ್ಮ ದೇಹದಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ ಸಾಗರಯಾನವನ್ನು ಮಾಡುವ ಶಕ್ತಿಯನ್ನು ಸೇಪಿಯನ್ನರು ಪಡೆದರು. ಇದಾದ ಕೆಲವು ಸಹಸ್ರಮಾನಗಳ ನಂತರ ಸೈಬೀರಿಯಾದ ಮೂಲಕವಾಗಿ ಉತ್ತರ ಅಮೆರಿಕಾಕ್ಕೆ 16,000 ವರ್ಷಗಳ ಹಿಂದೆ ವಲಸೆ ಹೋದರು. ಇಡೀ ಉತ್ತರ ಹಾಗೂ ದಕ್ಷಿಣ ಅಮೆರಿಕಾಗಳನ್ನು ಕ್ಷಿಪ್ರವಾಗಿ ಆವರಿಸಿಕೊಂಡರು. ಇಂತಹ ವಲಸೆಗಳು ನಡೆದ ಸಹಸ್ರಮಾನಗಳಲ್ಲಿ ದೋಣಿಗಳು, ಎಣ್ಣೆ ದೀಪಗಳು, ಬಿಲ್ಲು-ಬಾಣಗಳು ಮತ್ತು ಸೂಜಿಗಳು ಇತ್ಯಾದಿ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾಯಿತು. ಜೊತೆಗೆ ಕಲೆ, ಧರ್ಮ, ವ್ಯಾಪಾರ-ವಾಣಿಜ್ಯ ಮತ್ತು ಸಾಮಾಜಿಕ ಶ್ರೇಣೀಕರಣಗಳ ಮೊದಲ ಪುರಾವೆಗಳು ಸಹ ಈ ಸಮಯದಿಂದಲೆ ನಮಗೆ ದೊರಕುತ್ತವೆ. ಎರಡನೆಯದಾಗಿ, ಸೇಪಿಯನ್ನರ ನೆಲಸುವಿಕೆಯ ಪ್ರಕ್ರಿಯೆ ತುಂಬ ಹಿಂಸಾತ್ಮಕವಾದುದಾಗಿತ್ತು. ಇದುವರೆಗೆ ಸೇಪಿಯನ್ನರಾಗಲಿ ಅಥವಾ ಇತರೆ ಮಾನವವರ್ಗದವರಾಗಲಿ ತಾವಿದ್ದ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದರೆ ಹೊರತು ಬದಲಿಸುತ್ತಿರಲಿಲ್ಲ. ಆದರೆ ಈಗ ಗುರುತಿಸಲೂ ಸಾಧ್ಯವಾಗದ ರೀತಿಯಲ್ಲಿ ಕೆಲವೆ ಸಹಸ್ರ ವರ್ಷಗಳಲ್ಲಿ ತಮ್ಮ ಹೊಸ ಪರಿಸರಗಳ ಆಹಾರ ಸರಪಳಿಯನ್ನೆ ಸಂಪೂರ್ಣವಾಗಿ ಬದಲಿಸಿದರು. ಉದಾಹರಣೆಗೆ, ಆಸ್ಟ್ರೇಲಿಯಾದಲ್ಲಿ 50 ಕೆ.ಜಿ.ಗಿಂತ ಹೆಚ್ಚಿನ ತೂಕವಿದ್ದ 24 ಪ್ರಾಣಿಗಳ ಪೈಕಿ 23 ನಶಿಸಿಹೋದವು. ಇವುಗಳ ಪೈಕಿ 200 ಕೆ.ಜಿ. ತೂಕದ ಎರಡು ಮೀಟರ್ ಎತ್ತರದ ದೈತ್ಯ ಕಾಂಗರೂಗಳು ಮತ್ತು ಇಂದಿನ ಹುಲಿಗಳ ಗಾತ್ರವಿದ್ದ ಮರ್ಸುಪಿಯಲ್ (ಹೊಟ್ಟೆಚೀಲವಿರುವ) ಸಿಂಹಗಳು ಸೇರಿವೆ. ಇದೇ ರೀತಿಯ ಕಥನ ಅಮೆರಿಕದ ಎರಡೂ ಖಂಡಗಳಿಂದ ಹೊರಹೊಮ್ಮುತ್ತಿದೆ. ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಎಂದೂ ಕಾಣದ ನೂರಾರು ವಿಲಕ್ಷಣ ಪ್ರಾಣಿಗಳು ಅಮೆರಿಕಗಳಲ್ಲಿ ವಿಕಸನಗೊಂಡಿದ್ದವು. ಇವುಗಳಲ್ಲಿ ಆನೆಯನ್ನು ಹೋಲುವ ಮ್ಯಾಮತ್‍ ಮತ್ತು ಮಾಸ್ಟಡಾನ್‌ಗಳು, ಕರಡಿ ಗಾತ್ರದ ಇಲಿಜಾತಿಯ ಪ್ರಾಣಿಗಳು, ಕುದುರೆಗಳು, ಒಂಟೆಗಳು, ದೊಡ್ಡ ಸಿಂಹಗಳು ಮತ್ತು ಎಂಟು ಟನ್ ತೂಕದ ಆರು ಮೀಟರ್ ಎತ್ತರದ ದೈತ್ಯ ಸ್ಲಾತ್‌ಗಳು ಅಲ್ಲಿದ್ದವು. ಸೇಪಿಯನ್ನರು ಅಮೆರಿಕಕ್ಕೆ ಬಂದ ಎರಡು ಸಾವಿರ ವರ್ಷಗಳೊಳಗೆ ಅಮೆರಿಕಗಳಲ್ಲಿದ್ದ ಶೇ 57ರಷ್ಟು ದೊಡ್ಡ ಸಸ್ತನಿಗಳು ಅಳಿದವು. ಸೇಪಿಯನ್ನರು ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಈ ಪ್ರಮಾಣದಲ್ಲಿ ಪ್ರಾಣಿ ವೈವಿಧ್ಯದ ನಷ್ಟಕ್ಕೆ ಕಾರಣಕರ್ತರಾಗಲಿಲ್ಲ. ಆದರೆ ಈ ಖಂಡಗಳಲ್ಲಿಯೂ ದೊಡ್ಡ ಸಸ್ತನಿಗಳು ನಶಿಸಿದವು. ಒಟ್ಟಾರೆ ಅರಿವಿನ ಕ್ರಾಂತಿಯ ಸಮಯದಲ್ಲಿದ್ದ 200 ದೊಡ್ಡ ಸಸ್ತನಿಗಳ ಪೈಕಿ ಕೃಷಿಕ್ರಾಂತಿಯ ವೇಳೆಗೆ ಕೇವಲ ಅರ್ಧದಷ್ಟು ಮಾತ್ರ ಉಳಿದಿದ್ದವು.

ಸೇಪಿಯನ್ನರು ಪ್ರವರ್ಧಮಾನರಾದಾಗ ಭೂಮಿಯಿಂದ ಕಣ್ಮರೆಯಾದದ್ದು ಕೇವಲ ಪ್ರಾಣಿವೈವಿಧ್ಯ ಮಾತ್ರವಲ್ಲ. ಏಷ್ಯಾ ಮತ್ತು ಯುರೋಪಿನ ವಿವಿಧ ಭಾಗಗಳಲ್ಲಿ ನೆಲೆಸಿದ್ದ ಇತರ ಮನುಷ್ಯವರ್ಗಗಳು ಸಹ ನಶಿಸಿಹೋದವು. ನಿಯಾಂಡರ್ಥಾಲ್, ಎರೆಕ್ಟಸ್ ಇತ್ಯಾದಿ ಮನುಷ್ಯವರ್ಗಗಳಿಗೆ ಏನಾಗಿರಬಹುದು ಎನ್ನುವುದಕ್ಕೆ ವಿಜ್ಞಾನಿಗಳಿಂದ ಸ್ಪಷ್ಟ ಉತ್ತರ ದೊರಕುತ್ತಿಲ್ಲ. ಸೇಪಿಯನ್ನರ ಜೊತೆಗೂಡಿ ಈ ವರ್ಗಗಳು ತಮ್ಮ ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡಿರಬಹುದು ಇಲ್ಲವೆ ಈ ವರ್ಗಗಳ ಜಾಗಕ್ಕೆ ಸೇಪಿಯನ್ನರು ಬಂದಿದ್ದಿರಬಹುದು. ಇತ್ತೀಚಿನ ಸಂಶೋಧನೆಯನ್ನು ಅವಲೋಕಿಸಿದರೆ, ಈ ಎರಡು ಸಾಧ್ಯತೆಗಳೂ ಇರುವುದು ಕಂಡುಬರುತ್ತಿದೆ. ಆದರೂ ನಿರ್ವಿವಾದದ ವಿಚಾರವೆಂದರೆ: ಸೇಪಿಯನ್ನರು ಕಾಲಿಟ್ಟ ಸ್ವಲ್ಪ ಸಮಯದಲ್ಲಿಯೆ ಬಹುಕಾಲದಿಂದ ಅಲ್ಲಿದ್ದ ಮನುಷ್ಯವರ್ಗಗಳು ಕಣ್ಮರೆಯಾಗುತ್ತವೆ. ಅಂದರೆ ಜೀವವೈವಿಧ್ಯವನ್ನು ನಾಶ ಮಾಡುವ ಕೆಲಸವನ್ನು ಸೇಪಿಯನ್ನರು ಅರಿವಿನ ಕ್ರಾಂತಿಯ ಸಮಯದಿಂದಲೂ ಮಾಡುತ್ತಲೆ ಬಂದಿದ್ದಾರೆ.

ಅರಿವಿನ ಕ್ರಾಂತಿಯ ನಂತರದ ಈ ಕಥನವನ್ನು ಜೀವಶಾಸ್ತ್ರದ ಮೂಲಕ ತಿಳಿಯಲು ಸಾಧ್ಯವಿಲ್ಲ, ಇತಿಹಾಸದ ಮೂಲಕ ತಿಳಿಯಬೇಕು ಎಂದು ಹರಾರಿ ಹೇಳುತ್ತಾರೆ. ಏಕೆಂದರೆ ಇಲ್ಲಿನ ಬೆಳವಣಿಗೆಗಳು ಜೀನುಗಳ ಮತ್ತು ಹಾರ್ಮೋನ್‌ಗಳಲ್ಲಾಗುವ ಬದಲಾವಣೆಗಳ ಪರಿಣಾಮವಲ್ಲ. ಬದಲಿಗೆ ಸೇಪಿಯನ್ನರ ವಿಚಾರಗಳು, ನಡವಳಿಕೆಗಳು ಮತ್ತು ಆಚರಣೆಗಳಿಂದ ಸಂಭವಿಸಿದುದು.

ಹರಾರಿಯವರ ಕಥನದಲ್ಲಿ ಕೃಷಿ ಕ್ರಾಂತಿಯೂ ದುರಂತಕಥನವಾಗಿಯೇ ಬಿಂಬಿತವಾಗಿದೆ. ಕೃಷಿ ಮತ್ತು ಪಶುಪಾಲನೆಗಳ ಸುತ್ತ ಇರುವ ರೋಮಾಂಚನೀಯ ಕಥನಗ
ಳನ್ನು ಪ್ರಶ್ನಿಸುತ್ತ, ಅವರು ಕೃಷಿಕ್ರಾಂತಿಯನ್ನು ಇತಿಹಾಸದ ಅತಿದೊಡ್ಡ ವಂಚನೆ ಎಂದು ಕರೆಯುತ್ತಾರೆ. ಇದಕ್ಕೆ ಅವರ ವಿವರಣೆ ಸರಳವಾದುದು. ಕೃಷಿಯನ್ನು ಅವಲಂಬಿಸುವ ಮೊದಲು, ಮನುಷ್ಯರು ಹಣ್ಣುಹಂಪಲುಗಳನ್ನು ಸಂಗ್ರಹಿಸುತ್ತ, ಬೇಟೆಯಾಡುತ್ತ ತಮ್ಮ ಆಹಾರವನ್ನು ಪಡೆಯುತ್ತಿದ್ದರು. ಅವರು ಸೇವಿಸುತ್ತಿದ್ದ ಆಹಾರ ತುಂಬ ವೈವಿಧ್ಯಮಯವಾಗಿತ್ತು ಹಾಗೂ ಅದರ ಸಂಗ್ರಹಣೆಗೆ ಹೆಚ್ಚಿನ ಸಮಯವೂ ಹಿಡಿಯುತ್ತಿರಲಿಲ್ಲ. ಆದರೆ ಕೃಷಿಕ್ರಾಂತಿಯ ಮೂಲಕ ಕೆಲವು ಸಸ್ಯಗಳನ್ನು ಬೆಳೆಸಲು ಮತ್ತು ಪ್ರಾಣಿಗಳನ್ನು ಸಾಕಲು ಸೇಪಿಯನ್ನರು ಆರಂಭಿಸಿದ ಮೇಲೆ, ಅವರು ಆಹಾರವನ್ನು ಸಂಗ್ರಹಿಸಲು ಸಾಧ್ಯವಾಯಿತು, ನಿಜ. ಆದರೆ ಅದಕ್ಕಾಗಿ ವರ್ಷಪೂರ್ತ ಹೆಚ್ಚಿನ ಕೆಲಸವನ್ನು ಮಾಡಬೇಕಾಯಿತು ಮತ್ತು ಅವರ ಆಹಾರದಲ್ಲಿದ್ದ ವೈವಿಧ್ಯ ಕಡಿಮೆಯಾಯಿತು. ಹೀಗೆ ಉತ್ತಮ ಗುಣಮಟ್ಟದ ಆಹಾರವಾಗಲಿ, ಹೆಚ್ಚಿನ ವಿರಾಮಸಮಯವಾಗಲಿ ಕೃಷಿಕ್ರಾಂತಿಯಿಂದ ಸೇಪಿಯನ್ನರಿಗೆ ದೊರಕಲಿಲ್ಲ. ಬದಲಿಗೆ, ಜನಸಂಖ್ಯೆ ಹೆಚ್ಚಿತು ಮತ್ತು ವರ್ಗಸಮಾಜವೊಂದರ ಸೃಷ್ಟಿಯಾಯಿತು. ಕೃಷಿಕ್ರಾಂತಿಯಿಂದ ಸೇಪಿಯನ್ನರು ಗಳಿಸಿರುವ ಸಾಮರ್ಥ್ಯವೆಂದರೆ ಹೆಚ್ಚು ಜನರನ್ನು ಕಡಿಮೆ ಗುಣಮಟ್ಟದ ಜೀವನಶೈಲಿಯಲ್ಲಿ ಬದುಕಿರಲು ಅವಕಾಶ ಮಾಡಿರುವುದು.

ಕೃಷಿ ಮತ್ತು ಒಂದೆಡೆ ನೆಲೆಸುವ ಗ್ರಾಮಜೀವನವನ್ನು ಸೇಪಿಯನ್ನರು ಅಳವಡಿಸಿಕೊಂಡದ್ದು ಏಕೆ? ಬರವಣಿಗೆಪೂರ್ವ ಯುಗದ ಐತಿಹಾಸಿಕ ಬೆಳವಣಿಗೆಗಳ ಕುರಿತಾಗಿ ಊಹೆ ಮಾಡುವುದು ಕಷ್ಟ. ಆದರೆ ಆಹಾರಭದ್ರತೆಗಿಂತಲೂ ಧಾರ್ಮಿಕ ಮತ್ತು ರಾಜಕೀಯ ಕಾರಣಗಳು ಕೃಷಿಕ್ರಾಂತಿಗೆ ದಾರಿಮಾಡಿಕೊಟ್ಟಿರಬಹುದು ಎನ್ನುತ್ತಾರೆ ಹರಾರಿ. ಪುರಾವೆಯಾಗಿ ಮಧ್ಯಪ್ರಾಚ್ಯದ ಹಲವೆಡೆ ಕಾಣುವ ದೊಡ್ಡಪ್ರಮಾಣದ ಶಿಲ್ಪಗಳು ಮತ್ತು ದೇವಾಲಯಗಳನ್ನು ಅವರು ನೀಡುತ್ತಾರೆ. ಈ ಕಾರಣಗಳೇನೆ ಇದ್ದರೂ, ಕೃಷಿಕ್ರಾಂತಿ ಮತ್ತು ಪಶುಪಾಲನೆಯ ಪರಿಣಾಮಗಳು ವಿಕಾಸ ಪ್ರಕ್ರಿಯೆಗೆ ವಿರುದ್ಧವಾದ ದಿಕ್ಕಿನಲ್ಲಿ ಸೇಪಿಯನ್ನರನ್ನು ಕರೆದೊಯ್ದವು ಎನ್ನುವುದಂತೂ ನಿಜ. ಸೇಪಿಯನ್ನರು ಸಸ್ಯಗಳನ್ನು ಬೆಳೆಸಲು ಮತ್ತು ಪ್ರಾಣಿಗಳನ್ನು ಸಾಕಲಾರಂಭಿಸಿದ ಮೇಲೆ ತಮ್ಮ ಅಗತ್ಯಕ್ಕನುಸಾರವಾಗಿ ಆಯ್ಕೆಗಳನ್ನು ಮಾಡಿದರು. ಇದರ ಫಲವಾಗಿ ಮಧ್ಯಪ್ರಾಚ್ಯದ ಕಾಡುಹುಲ್ಲಾದ ಗೋಧಿ ಇಡೀ ಜಗತ್ತನ್ನು ಆಕ್ರಮಿಸಿಕೊಂಡಿತು. ಕೋಳಿ , ಕುರಿ ಮತ್ತು ಹಸುಗಳ ಸಂಖ್ಯೆಯಲ್ಲಿ ಸಹ ಹೆಚ್ಚಳವಾಗಿದೆ. ಆದರೆ ಸಂಖ್ಯಾ ಹೆಚ್ಚಳ ಅವುಗಳು ವಿಕಸನ ಪ್ರಕ್ರಿಯೆಯಲ್ಲಿ ಪಡೆದಿರುವ ಯಶಸ್ಸಲ್ಲ. ಆದರೆ ಹೊರಗೆ ಏಳರಿಂದ ಹನ್ನೆರಡು ವರ್ಷ ಬದುಕಬಲ್ಲ ಕೋಳಿ ಇಂದು ಕೆಲವು ವಾರ-ತಿಂಗಳುಗಳ ಕಾಲ ಮಾತ್ರ ಬದುಕುವ ಅವಕಾಶ ಹೊಂದಿದೆ. ಹರಾರಿಯವರ ಕಥನದ ಹಿನ್ನೆಲೆಯಲ್ಲಿ ನಮ್ಮಲ್ಲಿ ಮೂಡುವ ಪ್ರಶ್ನೆಯಿದು: ಸೇಪಿಯನ್ನರ ಇತಿಹಾಸವೆಂದರೆ ಖಿನ್ನತೆಯನ್ನು ನಮ್ಮಲ್ಲಿ ಮೂಡಿಸುವ ಆಯ್ಕೆಗಳ ಮತ್ತು ಕ್ರಿಯೆಗಳ ಸರಮಾಲೆಯೆ? ಸೇಪಿಯನ್ನರ ಇತಿಹಾಸವು ವಿಕಸನಪ್ರಕ್ರಿಯೆಗೆ ಹೊರತಾಗುವ ಪ್ರಯತ್ನದ ಕಥನವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT