ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಜಲದ ಜಾಡು ಹಿಡಿದು....!

Last Updated 16 ಜೂನ್ 2018, 9:23 IST
ಅಕ್ಷರ ಗಾತ್ರ

ಆಫ್ರಿಕಾ ಖಂಡದಲ್ಲಿರುವ ನಮೀಬಿಯಾ ಮರುಭೂಮಿಯಿಂದ ಆವೃತ್ತವಾಗಿರುವ ದೇಶ. ಅಲ್ಲಿ ನೀರಿಗೆ ಸದಾ ಹಾಹಾಕಾರ. ಮಳೆ ಬಿದ್ದಾಗ ಅಲ್ಲಿಯ ಒಕಾವೊಂಗೊ ನದಿ ರಭಸದಿಂದ ಹರಿದರೂ ಸ್ವಲ್ಪ ದೂರ ಸಾಗುವ ಹೊತ್ತಿಗೆ ವಿಸ್ತಾರವಾದ ಮರಳಿನ ಜಾಡಿನಲ್ಲಿ ಅಂತರ್ಗತವಾಗುತ್ತದೆ. ನಮ್ಮ ನದಿಗಳಂತೆ ವರ್ಷದುದ್ದಕ್ಕೂ ಜಿನುಗಿ ಹರಿಯವ ಸಾಮರ್ಥ್ಯ ಒಕಾವೊಂಗೊಗೆ ಇಲ್ಲ.

ಈ ಮರುಭೂಮಿಯಲ್ಲಿ ಮಾನವರಂತೆ ಅನೇಕ ಜೀವಕೋಟಿಗಳು ಬದುಕು ನೂಕುತ್ತವೆ. ಬಾಯಾರಿದಾಗ ಮರಳಲ್ಲಿ ಕಣ್ಮರೆಯಾದ ಒಕಾವೊಂಗೊದ ನೀರಿನ ಕಣಗಳಿಗೆ ಜಾಲಾಡುತ್ತವೆ. ಆನೆಗಳಂತಹ ಪ್ರಾಣಿಗಳು ಅಡಗಿರುವ ಜಲಮೂಲಕ್ಕೆ ಬಲೆ ಬೀಸುತ್ತವೆ. ಮರಳನ್ನು ಬಗೆಯುತ್ತಾ ಹಳ್ಳಗಳನ್ನು ನಿರ್ಮಿಸಿ, ಒರತೆಯಿಂದ ಸಂಗ್ರಹವಾಗುವ ನೀರನ್ನು ಕುಡಿದು ಬದುಕು ಸಾಗಿಸುತ್ತವೆ. ಇದೊಂದು ವಿಶಿಷ್ಟ ಜೀವ ಪರಿಸರದ ನಿದರ್ಶನ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ನಂದಿಹಳ್ಳಿಯಲ್ಲಿ ಸುತ್ತಾಡುವಾಗ ನಮೀಬಿಯಾ ನೆನಪಾಗುತ್ತದೆ. ವರ್ಷದಲ್ಲಿ ಬೇಸಿಗೆಯೇ ಪ್ರಧಾನವಾಗಿರುವ ಇಲ್ಲಿ, ನೀರಿಗಾಗಿ ಜನ ನಮೀಬಿಯಾದ ಆನೆಗಳು ಬಳಸುವ ತಂತ್ರವನ್ನೇ ಬಳಸಿಕೊಂಡಿದ್ದಾರೆ!

ನಂದಿಹಳ್ಳಿಯಲ್ಲಿ ಸರ್ಕಾರ ಎರಡು ಬೋರ್‌ವೆಲ್‌ಗಳನ್ನು ಕೊರೆಸಿದ್ದರೂ ಅಲ್ಲಿಂದ ಜಿನುಗುವುದು ಉಪ್ಪು ನೀರು. ಬಳಸಲು ಅಸಾಧ್ಯ ಎನಿಸುವಷ್ಟು ಉಪ್ಪಿನಾಂಶ ಆ ನೀರಿಗೆ. ಈ ಕಾರಣದಿಂದ ಊರಿನ ಹೊರಗಿರುವ ದೂರದ ಹಳ್ಳವೇ ನೀರಿಗೆ ಆಧಾರ. ಪ್ರಖರ ಮಳೆಯಲ್ಲಿ ಹರಿದು, ಬೇಸಿಗೆ ಮುನ್ನವೇ ನಿದ್ರಿಸಿಬಿಡುವ ಈ ಹಳ್ಳದುದ್ದಕ್ಕೂ ಅಲ್ಲಲ್ಲಿ ಮರಳು. ಮರಳನ್ನು ತೋಡಿ ಒಸರುವ ನೀರನ್ನು ಸಂಗ್ರಹಿ ಸುವುದು ಇಲ್ಲಿ ಹೊಸತೇನು ಅಲ್ಲ; ಕಾಲಾಂತರ ದಿಂದ ಅನುಸರಿಸಿಕೊಂಡು ಬಂದ ಪದ್ಧತಿಯೇ.

ಸೂರ್ಯ ಮೃದುವಾಗುವ ಹೊತ್ತಿಗೆ ಮಹಿಳೆಯರು ಕೊಡಗಳನ್ನು ಹಿಡಿದು ಈ ಹಳ್ಳದತ್ತ ಮುಖ ಮಾಡುತ್ತಾರೆ. ಹಳ್ಳದತ್ತ ಬಂದು ಕಳೆದುಕೊಂಡ ಅಮೂಲ್ಯ ವಸ್ತುವನ್ನು ಹುಡುಕುವಂತೆ ತದೇಕಚಿತ್ತದಿಂದ ಅಲ್ಲಲ್ಲಿ ಕಣ್ಣಾಡಿಸುತ್ತಾ ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ ನಮೀಬಿಯಾ ಆನೆಗಳಂತೆ ಮರಳನ್ನು ಬಗೆಯುವ ಕೆಲಸ ಇವರಿಗೆ. ಮೂರ್ನಾಲ್ಕು ಅಡಿ ಹಳ್ಳಗಳನ್ನು ತೋಡಿ, ಬರಬಹುದಾದ ನೀರಿಗೆ ಕಾಯ್ದು ಕುಳಿತುಕೊಳ್ಳುತ್ತಾರೆ. ಅಲ್ಲಿ ಭರವಸೆ ಇಲ್ಲವಾದಾಗ ಮತ್ತೊಂದು ಹಳ್ಳವನ್ನು ಬಗೆಯುವುದು ಮುಂದಿನ ಕೆಲಸ. ಒಂದೆರಡು ಗಂಟೆಗಳಲ್ಲಿ ಮೆಲ್ಲನೆ ಜಿನುಗಿ ತೆಳ್ಳಗೆ ಶೇಖರವಾಗುವ ಬಗ್ಗಡವಾದ ನೀರನ್ನು ಹೊರಚೆಲ್ಲಿ ಶುದ್ಧ ನೀರಿಗೆ ಗಾಳ ಎಸೆದು ಕುಳಿತುಕೊಳ್ಳುತ್ತಾರೆ.

ನೀರಿಗೆ ಅಲ್ಲಲ್ಲಿ ಕುಳಿತಿದ್ದ ಹತ್ತಾರು ಮಂದಿಯಲ್ಲಿ ಆರು ವರ್ಷದ ಬೀರಪ್ಪ ಸಹ ಕೊಡವಿಡಿದು ಕುಳಿತಿದ್ದ. ಪಕ್ಕದಲ್ಲಿದ್ದ ಈತನ ಅವ್ವನಿಗೆ ‘ಮಗ ಶಾಲೆಯಲ್ಲಿ ಕಲಿಯುತ್ತಿದ್ದಾನೆಯೇ?’ ಎಂದೆ. ‘ಈಗ ಬೇಸಿಗೆ ರಜೆ. ರಜೆ ಮುಗಿದ ಮೇಲೆ ಶಾಲೆಗೆ ಹೋದರೆ ಕುಡಿಯುವ ನೀರು ತರುವುದು ಹೇಗೆ ಎಂದು ಚಿಂತಿಸುತ್ತಿದ್ದೇನೆ’ ಎಂದು ಹೇಳಿದರು. ಅಯ್ಯಮ್ಮ ವಾರದಲ್ಲಿ ಎರಡು ದಿನ ಕೂಲಿ ಕೆಲಸಕ್ಕೆ ರಜೆ ಹಾಕುತ್ತಾರೆ. ಇಲ್ಲಿ ಬದುಕು ಸವಾಲೆನಿಸಿದೆ. ಗುಟುಕು ನೀರಿಗಾಗಿ ಏನೆಲ್ಲ ತ್ಯಾಗ ಮಾಡಬೇಕು? ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುವಂತಿಲ್ಲ. ಶಾಲೆಯಲ್ಲಿ ಕಲಿತು, ಆಟವಾಡುವ ವಯಸ್ಸಿನಲ್ಲಿ ಮಕ್ಕಳು ನಡುರಾತ್ರಿ ವರೆಗೆ ಅವ್ವಂದಿರ ನೆರವಿಗಾಗಿ ದುಡಿಯಬೇಕು.

‘ಹದಿನೈದು ವರ್ಷಗಳ ಹಿಂದೆ ಈ ಹಳ್ಳದಲ್ಲಿ ಸ್ವಲ್ಪ ಮರಳನ್ನು ಪಕ್ಕಕ್ಕೆ ಸರಿಸಿದರೂ ಸಾಕು, ಕುಡಿಯುವ ನೀರು ಸುಲಭಕ್ಕೆ ಸಿಕ್ಕುತ್ತಿತ್ತು. ಈ ಹಳ್ಳದ ಮರಳನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಹೋಗಿ ಮಾರುತ್ತಿದ್ದಾರೆ. ಈಗ ಪರಿಸ್ಥಿತಿ ಅಧ್ವಾನವಾಗಿದೆ’ ಎಂದು ಮಹಿಳೆಯೊಬ್ಬರು ತಾವು ಸಂಗ್ರಹವಾಗಿದ್ದ ಗಲೀಜು ನೀರನ್ನು ತೋರಿದರು. ಅದು ಖಂಡಿತವಾಗಿಯೂ ಮನುಷ್ಯರು ಬಳಸಲು ಯೋಗ್ಯವಲ್ಲದ ನೀರು. ಅದನ್ನೇ ಯೋಚಿಸುತ್ತಾ ಶಹಾಪುರ ವೈದ್ಯರನ್ನು ನೀರಿನ ಗುಣಮಟ್ಟದ ಬಗ್ಗೆ ಕೇಳಿದೆ. ‘ವಾರದ ಹಿಂದೆ ನಂದಿಹಳ್ಳಿ ಜನರು ವಾಂತಿ– ಭೇದಿಗೆ ಶರಣಾಗಿದ್ದರು; ನಿಮಗೆ ಗೊತ್ತಿಲ್ಲವೇ’ ಎಂದು ಕೇಳಿದರು.

ಚಿಕ್ಕಬೂದೂರು ಮತ್ತು ಸಲಿಕ್ಯಾಪುರ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅವಳಿ ಹಳ್ಳಿಗಳು. ಅಲ್ಲಿಯ ಜನರು ಕುಡಿಯುವ ನೀರಿಗಾಗಿ ಹಳ್ಳಕ್ಕೆ ಹೋಗಿ ‘ಒರತೆ’ ತೆಗೆಯಬೇಕು. ಈ ಜನರು ರಾತ್ರಿ ವೇಳೆ ಬುತ್ತಿ, ಟಾರ್ಚ್‌ ಮತ್ತು ಕಂದೀಲಿನೊಂದಿಗೆ ಹಳ್ಳಕ್ಕೆ ಹೋಗುತ್ತಾರೆ. ಅಲ್ಲಿಯೇ ಉಂಡು ‘ಒರತೆ’ ತೆಗೆದು ನೀರಿಗಾಗಿ ಕಾಯುತ್ತಾರೆ. ಇಡೀ ರಾತ್ರಿ ಕಾಯ್ದು ನಾಲ್ಕೈದು ಕೊಡ ನೀರನ್ನು ತರುವುದು ಇಂದಿಗೂ ನಿಂತಿಲ್ಲ.

ಇದೇ ತಾಲ್ಲೂಕಿನ ಮಷ್ಟೂರು ಗ್ರಾಮ ಪಂಚಾಯಿತಿಯ ಖಾನಾಪುರ ಗ್ರಾಮಕ್ಕೆ ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ ಕಿರು ನೀರು ಸರಬರಾಜು ಯೋಜನೆಯಲ್ಲಿ ಬೋರ್‌ವೆಲ್‌, ಪೈಪ್‌ಲೈನ್‌ ಸೇರಿದಂತೆ ಎಲ್ಲ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಇದುವರೆಗೂ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ!
ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಮುಗಿದು ಎಂಟು ತಿಂಗಳಾಯಿತು. ಆದರೆ ಬಾಯಾರಿದ ಜನರಿಗೆ ಗುಟುಕು ನೀರೂ ಸಿಕ್ಕಿಲ್ಲ. ವಿದ್ಯುತ್ ಪೂರೈಕೆ ಕೆಲಸ ಮುಗಿದರೂ ಜೆಸ್ಕಾಂ ಮತ್ತು ಕೆಪಿಟಿಸಿಎಲ್‌ನಿಂದ ದೃಢೀಕರಣ ಪತ್ರ ಬಂದಿಲ್ಲ.

ಈ ಸರ್ಕಾರ ಎನ್ನುವುದು ಅಂಗಾಂಗಗಳಿರುವ ಅಂಗವಿಕಲ ದೇಹ. ಅದು ರೂಪಿಸುವ ಯೋಜನೆ ಗಳೆಲ್ಲ ಒಂದಿಲ್ಲೊಂದು ಕಾರಣದಿಂದ ಅಂತಿಮ ರೂಪ ಪಡೆಯುವುದೇ ಇಲ್ಲ. ಅಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಇರುವುದಿಲ್ಲ. ಕಾಗದ ಮೇಲಿನ ಈ ಪರಿಣಾಮಕಾರಿ ಯೋಜನೆಗಳೆಲ್ಲ ಶಂಕುಸ್ಥಾಪನೆಗೊಂಡು ಸರ್ಕಾರದ ಕಡತಗಳಲ್ಲಿ ಯಶಸ್ವಿ ಯೋಜನೆ ಎನಿಸಿಕೊಂಡು ಅಂಕಿಅಂಶಗಳ ರೂಪದಲ್ಲಿ ಜೀವಪಡೆದು ನಿಲ್ಲುತ್ತವೆ.

ಸರ್ಕಾರಗಳಿಗೆ ಏನು ಸಾಧ್ಯವಾಗದಿದ್ದರೂ ಪ್ರಕೃತಿ ದತ್ತವಾಗಿ ದಕ್ಕಿರುವಂತ ನದಿ, ಹಳ್ಳ, ಕೊಳ್ಳಗಳನ್ನಾದರೂ ಉಳಿಸಿಕೊಳ್ಳಬೇಕಾದುದು ಕರ್ತವ್ಯ. ಒಬ್ಬಿಬ್ಬರು ಗುತ್ತಿಗೆದಾರರ ಅಭ್ಯುದಯಕ್ಕಾಗಿ ಊರಿಗೆ ನೀರಿಲ್ಲದಂತೆ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರದೇಶದ ಹಲವಾರು ಕಡೆ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಮತ್ತು ಆರ್ಸೆನಿಕ್‌ ಎನ್ನುವ ವಿಷಕಾರಿ ಅಂಶವಿದೆ. ಅಂಥ ನೀರಿನ ಮೂಲಗಳನ್ನು ಸರ್ಕಾರವೇ ಗುರುತಿಸಿ ‘ಬಂದ್‌’ ಮಾಡಿಸಿದೆ. ಇಂಥ ಸ್ಥಿತಿಯಲ್ಲಿ ಜನರು ಹಳ್ಳದ ಒರತೆಯನ್ನೇ ನಂಬಿಕೊಂಡಿದ್ದಾರೆ. ನಾವು ಆ ಮೂಲವನ್ನೂ  ಮರಳು ದಂಧೆಯಲ್ಲಿ ಕೊಂದುಬಿಟ್ಟಿದ್ದೇವೆ. ನಮಗೆ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳಲು ಆಗಿಲ್ಲ. ಅತ್ತ ಮರಳು ದಂಧೆಯನ್ನು ನಿಯಂತ್ರಿಸಲೂ ಆಗಿಲ್ಲ.

ಕೆಲವು ವರ್ಷಗಳ ವರ್ಷಗಳ ಹಿಂದೆ ಮೈಸೂರಿನಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಂವಾದ ಕಾರ್ಯಕ್ರಮದಲ್ಲಿ ಕುಳಿತಿದ್ದೆ. ನಾಡಿನ ನದಿಗಳೊಡನೆ ವಿಶೇಷ ನಂಟಿದ್ದ ಅವರು, ‘ಹರಿಯುವ ನದಿಗೂ, ಅವುಗಳ ಮಗ್ಗುಲಲ್ಲಿ ಮಲಗಿರುವ ಮರಳಿನ ರಾಶಿಗೂ ಅನನ್ಯ ಸಂಬಂಧವಿದೆ. ಅದು ಮೇಲೆ ಕಾಣುವಷ್ಟು ಸರಳವಾದುದಲ್ಲ. ಹೀಗೆ ಮರಳನ್ನು ಲೆಕ್ಕಾಚಾರವಿಲ್ಲದೇ ಖಾಲಿ ಮಾಡುವುದರಿಂದ ಬಹುಶಃ ನದಿಗಳ ಅವನತಿಗೆ ಕಾರಣವಾಗಬಹುದು. ಮರಳಿಗಾಗಿ ನದಿಗಳನ್ನೇ ಕೊಂದುಬಿಟ್ಟರೆ ಕುಡಿಯುವ ನೀರಿಗೆ ಏನ್ರಯ್ಯ ಗತಿ’ ಎಂದು ಭಾವೋದ್ವೇಗದಿಂದ ಮಾತನಾಡಿದ್ದು ನೆನಪಿಗೆ ಬಂತು.

ಹೌದಲ್ಲ. ನಮೀಬಿಯಾದಲ್ಲೂ ನಮ್ಮ ರಾಜ್ಯದಂತೆ ಮರಳು ದಂಧೆ ನಡೆದಿದ್ದರೆ, ಅಲ್ಲಿನ ಜೀವಕೋಟಿಗಳೆಲ್ಲ ಇವೊತ್ತಿಗೆ ಕಣ್ಮರೆಯಾಗಿಬಿಡುತ್ತಿದ್ದವೋ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT