ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಯಿಡಾ ಎಂಬ ಊರಿನ ಕಥೆ-ವ್ಯಥೆ

Last Updated 15 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಜೋಯಿಡಾ ಕರ್ನಾಟಕದಲ್ಲಿಯೇ ಭೌಗೋಳಿಕ ಪ್ರದೇಶದ ವ್ಯಾಪ್ತಿಯ ದೃಷ್ಟಿಯಿಂದ ಎರಡನೇ ಅತಿ ದೊಡ್ಡ ತಾಲ್ಲೂಕು. ಬಾನೆತ್ತರಕ್ಕೂ ಚಾಚಿ ನಿಂತ ಬೃಹತ್ ವೃಕ್ಷಗಳು, ಕಣ್ಮನ ತಣಿಸುವ ಪಶ್ಚಿಮ ಘಟ್ಟಗಳ ಬೆಟ್ಟ ಸಾಲು, ರಸ್ತೆಯ ಇಕ್ಕೆಲಗಳಲ್ಲೂ ಜುಳುಜುಳು ಹರಿಯುವ ಝರಿ-ತೊರೆಗಳು, ಬೆಟ್ಟ-ಗುಡ್ಡಗಳಿಂದ ಧುಮುಕುವ ಸಣ್ಣ ಸಣ್ಣ ಜಲಪಾತಗಳು- ಇವು ಈ ಪ್ರದೇಶದಲ್ಲಿ ನಮಗೆ ಕಾಣ ಸಿಗುವಂಥ ಸಾಮಾನ್ಯ ದೃಶ್ಯಗಳು.

ತಾಲ್ಲೂಕಿನ ಶೇಕಡ ಎಂಬತ್ತು (80) ರಷ್ಟು ಭೂಭಾಗ ಅರಣ್ಯಾವೃತವಾಗಿದ್ದು ಎತ್ತನೋಡಿದರತ್ತ ಹಾಸಿರುವ ಹಸಿರು ರಾಶಿಯನ್ನು ನೋಡುವ ಪ್ರವಾಸಿಗರಿಗೆ ಅಥವಾ ಎಲ್ಲೋ ಒಮ್ಮಮ್ಮೆ ಈ ದಾರಿಯಲ್ಲಿ ಹಾದು ಹೋಗುವ ಪ್ರಯಾಣಿಕರಿಗೆ ಈ ಪ್ರದೇಶದಲ್ಲಿ ಇನ್ನೆಷ್ಟು ಸಂಪತ್ತು ಅಡಗಿ ಕುಳಿತಿದೆಯೋ ಎಂಬ ಭಾವನೆ ಸಹಜವಾಗಿಯೇ ಬರುವಂತಹುದು.

ಆದರೆ, ಉತ್ತರ ಕನ್ನಡ ಜಿಲ್ಲೆಯ ಈ ತಾಲ್ಲೂಕು ಅನುಭವಿಸುತ್ತಿರುವ ಆಡಳಿತಾತ್ಮಕ ಅಲಕ್ಷ್ಯದ ಸ್ವರೂಪ ಹಾಗೂ ಈ ಭಾಗದ ಜನರ ಬದುಕಿನ ಬವಣೆಗಳ ಈ ಅರಿವು ನಮ್ಮಳಗೆ ಇಳಿಯುತ್ತಾ ಹೋದ ಹಾಗೆಲ್ಲ ಈ ಪ್ರಕೃತಿ ರಮ್ಯ ತಾಣದ `ದುರಂತ ಕಥೆ~ ನಮ್ಮೆದುರಿಗೆ ತೆರೆದುಕೊಳ್ಳುತ್ತಾ ಹೋಗುತ್ತದೆ.

ಕಾಳಿ ಜೋಯಿಡಾದ ಜೀವನದಿ. ಆದರೆ ಈ ನದಿಗೆ ಕಟ್ಟಿರುವ ಐದು ಅಣೆಕಟ್ಟುಗಳು ಇಲ್ಲಿನ ಅನೇಕ ಕುಟುಂಬಗಳ ಬದುಕಿನ ನೆಲೆಗಳನ್ನು ಬುಡಮೇಲು ಮಾಡಿವೆ.

ಸಮೃದ್ಧವಾದ `ಜೀವ ವೈವಿಧ್ಯ~ ತಾಣಗಳಲ್ಲಿ ಒಂದಾಗಿರುವ ಜೋಯಿಡಾದ ಅನೇಕ ಗ್ರಾಮಗಳು ಸೂಪಾ ಅಣೆಕಟ್ಟು ನಿರ್ಮಾಣವಾದಾಗ ಜಲಾವೃತವಾಗಿ ಮುಳುಗಡೆಯಾದ ಪ್ರಯುಕ್ತ ಅಪೂರ್ವವೆನಿಸಿದ ಸಸ್ಯ ಹಾಗೂ ಪ್ರಾಣಿ ಸಂಕುಲಗಳು ನಾಶವಾದವು.

ಇದರ ಜೊತೆಜೊತೆಗೆ ಕಾಳಿಯ ಸೆರಗಿನಲ್ಲಿ ಅರಳಿದ್ದ ವಿಶೇಷ ಸಂಸ್ಕೃತಿಯೊಂದು ಕೂಡ ನಿರ್ನಾಮವಾಯಿತು.ಈ ಸ್ಥಾನಪಲ್ಲಟದ ಆಘಾತವನ್ನು ಅತ್ಯಂತ ಪ್ರಬಲವಾಗಿ ಎದುರಿಸಿದ್ದು ಜೋಯಿಡಾದ ಜನಸಂಖ್ಯೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಕುಣಬಿ ಜನಸಮುದಾಯ.
 
ನೆರೆ ರಾಜ್ಯ ಗೋವಾದ ಗಡಿಯಲ್ಲಿರುವ ಅರಣ್ಯ ಪ್ರದೇಶದಿಂದ ಜೋಯಿಡಾಗೆ ವಲಸೆ ಬಂದ ಕುಣಬಿಗಳು ತಮ್ಮ ಜೀವನ ನಿರ್ವಹಣೆಗಾಗಿ ಹೆಚ್ಚು ಅವಲಂಬಿಸಿದ್ದು ಅರಣ್ಯವನ್ನು. ಆಧುನಿಕ ಜೀವನ ಕ್ರಮಗಳು ಹಾಗೂ ಶಿಕ್ಷಣದಿಂದ ದೂರವೇ ಇದ್ದ ಕುಣಬಿಗಳಿಗೆ ತಮ್ಮ ಜೀವನ ನೆಲೆಗಳು ಕಣ್ಮರೆಯಾದಾಗ ಪರ್ಯಾಯವಾದ ಜೀವನೋಪಾಯಗಳನ್ನು ಹುಡುಕಿಕೊಳ್ಳುವುದು ಕಷ್ಟವಾಯಿತು.

ಅಣೆಕಟ್ಟು ನಿರ್ಮಾಣವಾಗಿ ವಾಸಸ್ಥಾನಗಳು ಕಾಳಿಯ ಒಡಲನ್ನು ಸೇರಿದಾಗ ಇವರಿಗೆ ಪರಿಹಾರ ರೂಪದಲ್ಲಿ ನೀಡಲಾದ ಧನ ಸಹಾಯ ಗುಣಾತ್ಮಕವಾದ ಬದುಕನ್ನು ಮರು ಕಟ್ಟಿಕೊಳ್ಳಲು ಏನೇನೂ ಸಾಲಲಿಲ್ಲ.

ಫಲವತ್ತಾದ ಭೂಮಿಯಲ್ಲಿ ಸಮೃದ್ಧಬೆಳೆಗಳನ್ನು ತೆಗೆಯುತ್ತಿದ್ದ ಅನೇಕ ಕುಟುಂಬಗಳನ್ನು ಒಣಭೂಮಿಯಿದ್ದ ಪ್ರದೇಶಗಳಿಗೆ ಸ್ಥಳಾಂತರಿಸಿದ ಕಾರಣ ಅವುಗಳಲ್ಲಿ ಬಹುತೇಕ ಕುಟುಂಬಗಳು ಕೃಷಿಯನ್ನೇ ಬಿಟ್ಟು ಕೂಲಿ ಕೆಲಸವನ್ನು ಆಶ್ರಯಿಸಬೇಕಾದಂಥ ಪರಿಸ್ಥಿತಿ ಸೃಷ್ಟಿಯಾಯಿತು.

ಸುಮಾರು ಮೂವತ್ತು ವರ್ಷಗಳ ಹಿಂದೆ ಪ್ರಾರಂಭವಾದ ಪರಿಹಾರ ಕಾರ್ಯ ಇಂದಿಗೂ ಪೂರ್ಣವಾಗಿಲ್ಲದಿರುವುದರಿಂದ ಇಡೀ ತಲೆಮಾರುಗಳೇ ತಮ್ಮ ಬದುಕನ್ನು ಒತ್ತೆಯಿಡಬೇಕಾದಂಥ ಸ್ಥಿತಿಗೆ ತಲುಪಿರುವುದು ದುರಂತ. 

ಸೂಪಾ ಜಲಾಶಯದ ನಿರ್ಮಾಣದಿಂದ ಸಂಭವಿಸಿದ ಸ್ಥಳಾಂತರ ಒಂದೆಡೆ ಜೋಯಿಡಾ ತಾಲ್ಲೂಕಿನ ಜೀವ ಸೆಲೆಗಳನ್ನು ಬತ್ತಿಸಲು ಕಾರಣವಾದರೆ, ಮತ್ತೊಂದೆಡೆ ಕಳೆದ ಎರಡು ದಶಕಗಳ ವರೆಗೂ ಈ ಪ್ರದೇಶದಲ್ಲಿ ನಡೆಯುತ್ತಿದ್ದ ವ್ಯಾಪಕ ಗಣಿಗಾರಿಕೆ ಕೂಡ ಜೋಯಿಡಾದ `ಪರಿಸರ~ ಹಾಗೂ `ಪ್ರಜೆ~ಗಳ ಬದುಕಿನಲ್ಲಿ ಅನೇಕ ಪಲ್ಲಟಗಳನ್ನುಂಟು ಮಾಡಿತು.
 
ಗಣಿಗಾರಿಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿತೇನೋ ನಿಜ. ಆದರೆ ಅದರೊಡನೆ ಅನೇಕ ಸಂಕಷ್ಟಗಳನ್ನು ಸ್ಥಳೀಯ ಜನರಿಗೆ ತಂದಿತು. 1995 ರಲ್ಲಿ ಗಣಿಗಾರಿಕೆ ಹೆಚ್ಚು ಕಡಿಮೆ ಸಂಪೂರ್ಣವಾಗಿ ನಿಂತಾಗ ಪರಿಸರದ ಬಗ್ಗೆ ಕಾಳಜಿಯಿರುವವರೆಲ್ಲಾ ನಿಟ್ಟುಸಿರು ಬಿಟ್ಟರು.

ಆದರೆ ಗಣಿಗಳು ಮುಚ್ಚಿದಾಗ ನೂರಾರು ಕುಟುಂಬಗಳು ಮತ್ತೆ ಉದ್ಯೋಗರಹಿತ ಸ್ಥಿತಿಯತ್ತ ತಳ್ಳಲ್ಪಟ್ಟವು. ಈ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಅನೇಕರು ಕೂಲಿಕೆಲಸವನ್ನು ಅರಸಿ ಗೋವಾದತ್ತ ತೆರಳಲಾರಂಭಿಸಿದಾಗ, ಆ ವಲಸೆ ತಂದಂಥ ಲೌಕಿಕ ಸಂಸ್ಕೃತಿಯ ವ್ಯಾಮೋಹ ಮತ್ತಷ್ಟು ಸಮಸ್ಯೆಗಳನ್ನು ತಂದಿತೇ ಹೊರತು ಜೀವನ ಮಟ್ಟದಲ್ಲಿ ಗಮನಾರ್ಹವಾದ ಬದಲಾವಣೆಗಳನ್ನೇನೂ ತರಲಿಲ್ಲ.

ಕಳೆದ ಶತಮಾನ ಅಂತ್ಯಗೊಳ್ಳುವ ವೇಳೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದ ಜಂಟಿ ಅರಣ್ಯ ಯೋಜನೆ, ಸ್ಥಳೀಯ ಜನರ ಸಹಭಾಗಿತ್ವಕ್ಕೆ ಅತ್ಯಂತ ಹೆಚ್ಚಿನ ಒತ್ತನ್ನು ನೀಡುವಂತೆ ಬಿಂಬಿತವಾಗಿದ್ದರಿಂದ ಜೋಯಿಡಾದ ಜನರು ಇದರ ಬಗ್ಗೆ ಅನೇಕ ಆಸೆಗಳನ್ನು ಇಟ್ಟುಕೊಂಡಿದ್ದರು.

ಆದರೆ, ವಾಸ್ತವದಲ್ಲಿ ಜನರ ಭಾವನೆಗಳಿಗೆ ಹಾಗೂ ಅರಣ್ಯವನ್ನು ಕುರಿತ ಅವರ ಸ್ಥಳೀಯ ಜ್ಞಾನಕ್ಕೆ ಮನ್ನಣೆಯೇನೂ ದೊರೆಯಲಿಲ್ಲ. ಈ ಯೋಜನೆಯಿಂದ ಉತ್ಪತ್ತಿಯಾಗುವ ಸಂಪನ್ಮೂಲಗಳಲ್ಲಿ ಸ್ಥಳೀಯ ಸಮುದಾಯಗಳಿಗೆ ಸಮಪಾಲು ಇರುತ್ತದೆ ಎಂಬ ಆಶ್ವಾಸನೆಯನ್ನು ಅರಣ್ಯ ಇಲಾಖೆ ನೀಡ್ದ್ದಿದರೂ ಇಂದಿಗೂ ಬಹುತೇಕ ಗ್ರಾಮ ಅರಣ್ಯ ಸಮಿತಿಗಳಿಗೆ ಯಾವುದೇ ಬಗೆಯ ಪಾಲು ದೊರೆತಿರುವುದಿಲ್ಲ.

ಕಾಲ ಕಾಲಕ್ಕೆ ಈ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ಇತರ ಅರಣ್ಯ ಯೋಜನೆಗಳು ಕೂಡ ಇಲ್ಲಿನ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಬದಲಾಯಿಸುವಲ್ಲಿ ವಿಫಲವಾಗಿವೆ ಎಂದು ಹೇಳುವುದು ಉತ್ಪ್ರೇಕ್ಷೆಯಾಗಲಾರದು.

ಜೋಯಿಡಾ ವಿಸ್ತಾರವಾದ ಭೂಪ್ರದೇಶವನ್ನು ಹೊಂದಿದ್ದರೂ ಇಲ್ಲಿನ ಜನಸಂಖ್ಯೆ ಕೇವಲ 50,000ದಷ್ಟು. ಈ ತಾಲೂಕಿನ ಅನೇಕ ಗ್ರಾಮಗಳು ದಟ್ಟ ಅರಣ್ಯದ ನಡುವೆ ಹುದುಗಿ ಹೋಗಿದ್ದು ಇಂದಿಗೂ ರಸ್ತೆ ಮತ್ತು ಸಾರಿಗೆ ಸಂಪರ್ಕದಿಂದ ದೂರವಾಗಿಯೇ ಉಳಿದಿವೆ.

ಜನ ಸಾಂದ್ರತೆಯೂ ಕಡಿಮೆಯಿದ್ದು ಮನೆಗಳು ತಾಲೂಕಿನ ಮೂಲೆ ಮೂಲೆಗಳಲ್ಲಿ ಹಂಚಿ ಹೋಗಿರುವುದರಿಂದ ಸಂಘಟನಾತ್ಮಕ ಶಕ್ತಿಯ ತೀವ್ರ ಕೊರತೆ ಕಾಣುತ್ತಿದೆ. ಸ್ಥಳೀಯ ಸಮುದಾಯಗಳಲ್ಲಿ ನಾಯಕತ್ವದ ಅಭಾವ ಎದ್ದು ಕಾಣುವಂಥದ್ದು.
 
ಈ ಕಾರಣದಿಂದಾಗಿ ಜೋಯಿಡಾದ ಸಮಸ್ಯೆಗಳನ್ನು ಸಮರ್ಥವಾಗಿ ಬಿಂಬಿಸಿ ಅವುಗಳ ಪರಿಹಾರಕ್ಕಾಗಿ ಹೋರಾಟ ನಡೆಸುವ ಧ್ವನಿಗಳು ಹೆಚ್ಚು-ಕಡಿಮೆ ಇಲ್ಲವೇ ಇಲ್ಲ.
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಕೂಡ ಜೋಯಿಡಾಕ್ಕೆ ಗೋಚರತೆ ಇಲ್ಲದಿರುವುದು ಕೂಡ ಈ ಪ್ರದೇಶದ ಅಭಿವೃದ್ಧಿ ಕುಂಠಿತವಾಗಲು ಒಂದು ಪ್ರಮುಖ ಕಾರಣವೇನೋ ಎನಿಸದಿರುವುದಿಲ್ಲ.
 
ಸ್ವಾತಂತ್ರ್ಯ ಬಂದು ಅರವತ್ತು (60) ವರ್ಷಗಳೇ ಕಳೆದು ಹೋದರೂ ಇದುವರೆಗೂ ನಡೆದಿರುವ ಸಂಸತ್ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಈ ತಾಲೂಕಿನವರಿಗೆ ಸ್ಪರ್ಧಿಸಲು ಯಾವ ರಾಜಕೀಯ ಪಕ್ಷವೂ ಅವಕಾಶ ನೀಡಿಲ್ಲ.

ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಹುತೇಕ ಹೊರಗಿನ ರಾಜಕಾರಣಿಗಳು ಕೂಡ ಜೋಯಿಡಾ ಭಾಗದ ನೈಜ ಅಗತ್ಯಗಳನ್ನು ಗುರುತಿಸಿ ಅವುಗಳನ್ನು ಒದಗಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನುವುದೇ ಈ ಪ್ರದೇಶ ಇಂದಿಗೂ ಅಭಿವೃದ್ಧಿಯ ಪಥದ ಅಂಚಿನಲ್ಲೇ ನಿಂತಿರುವುದಕ್ಕೆ ಒಂದು ಕಾರಣ.

ಅಭಿವೃದ್ಧಿಯ ಬಗ್ಗೆ ಪ್ರಸ್ತಾಪ ಮಾಡುವಾಗ ಜೋಯಿಡಾ ತಾಲ್ಲೂಕಿನ `ವಿದ್ಯುತ್‌ಶಕ್ತಿ~ಯ ಪರಿಸ್ಥಿತಿಯ ಬಗ್ಗೆ ಉಲ್ಲೇಖಿಸಲೇಬೇಕು. ಕಾಳಿ ನದಿಗೆ ನಿರ್ಮಿಸಿರುವ ಮೂರು ಅಣೆಕಟ್ಟುಗಳು ಜೋಯಿಡಾದ ಭೌತಿಕ ವ್ಯಾಪ್ತಿಯಲ್ಲಿ ಇದ್ದು, ಜಲವಿದ್ಯುತ್ ಯೋಜನೆಗಳ ಸಾಲಿಗೆ ಸೇರಿದರೂ ತಾಲೂಕಿನ ಅನೇಕ ಭಾಗಗಳು ವಿದ್ಯುಚ್ಛಕ್ತಿಯ ತೀವ್ರ ಕೊರತೆಯನ್ನು ಎದುರಿಸುತ್ತಿವೆ.

ಈ ಪ್ರದೇಶದಲ್ಲಿ ವರ್ಷದಲ್ಲಿ ಸರಾಸರಿ ನೂರು ದಿನಗಳ ಕಾಲ ಜಡಿ ಮಳೆ ಬೀಳುವುದರಿಂದ, ಮಳೆಗಾಲದಲ್ಲಿ ತಾಲ್ಲೂಕು ಕೇಂದ್ರ ಸ್ಥಾನ ಜೋಯಿಡಾ ಸೇರಿದಂತೆ ಅನೇಕ ಗ್ರಾಮಗಳು ಕತ್ತಲೆಯ ಕೂಪಕ್ಕೆ ಜಾರುತ್ತವೆ.

ವಿಶೇಷವಾಗಿ ಮಳೆಗಾಲದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ, ಶಾಲಾ ಮಕ್ಕಳಿಗೆ, ಕಚೇರಿಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಹಾಗೂ ಸಾರ್ವಜನಿಕರಿಗೆ ಅಪಾರ ಸಂಕಷ್ಟಗಳು ಉಂಟಾಗಿ ತಾಲೂಕಿನ ಅಭಿವೃದ್ಧಿಯಲ್ಲಿ ಮತ್ತಷ್ಟು ಹಿನ್ನಡೆಯಾಗುತ್ತದೆ.
 
ವರ್ಷದಿಂದ  ವರ್ಷಕ್ಕೆ ಇದೇ ಪರಿಸ್ಥಿತಿ ಪುನರಾವರ್ತಿಸುತ್ತಿದೆ. ಇತ್ತೀಚೆಗೆ ತಾಲ್ಲೂಕಿಗೆ ವಿದ್ಯುತ್ ಸರಬರಾಜು ಮಾಡುವ `ಗ್ರಿಡ್~ ಜೋಯಿಡಾದಲ್ಲೇ ಸ್ಥಾಪಿಸಲ್ಪಟ್ಟಿದ್ದರೂ ಪರಿಸ್ಥಿತಿಯಲ್ಲಿ ನಿರೀಕ್ಷಿತ ಬದಲಾವಣೆಗಳೇನೂ ಕಂಡಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿರುವಂತೆ ಜೋಯಿಡಾದ ಸಾಕ್ಷರತೆಯ ಪ್ರಮಾಣ ಕೂಡ ಸಮಾಧಾನಕರವಾದ ಮಟ್ಟದಲ್ಲಿದೆ. ಆದರೆ ಪ್ರಾಥಮಿಕ ಶಾಲೆಗಳನ್ನು ಸೇರಿದ ಮಕ್ಕಳಿಗೆ ಶಿಕ್ಷಣವನ್ನು ಮುಂದುವರೆಸಿಕೊಂಡು ಹೋಗಲು ಪೂರಕವಾದ ಮೂಲಸೌಕರ್ಯಗಳಾಗಲಿ, ಶೈಕ್ಷಣಿಕ ವಾತಾವರಣವಾಗಲಿ ಇಲ್ಲದಿರುವುದರಿಂದ ಶಿಕ್ಷಣದ ಮಟ್ಟ ಏರಿದ ಹಾಗೆಲ್ಲಾ, ಶಾಲೆಯನ್ನು ಮಧ್ಯದಲ್ಲಿ ಬಿಡುವವರ ಸಂಖ್ಯೆಯೂ ಏರುತ್ತಾ ಹೋಗುತ್ತದೆ. ಈ ಗುಂಪಿನಲ್ಲಿ ಹೆಣ್ಣುಮಕ್ಕಳ ಪ್ರಮಾಣವೇ ಹೆಚ್ಚು.

ಜೋಯಿಡಾದ ಶೈಕ್ಷಣಿಕ ಪ್ರಗತಿ ಕುಂಠಿತವಾಗಲು ಭಾಷಾ ಸಮಸ್ಯೆಯೂ ಒಂದು ಪ್ರಮುಖ ಕಾರಣ. ಈ ತಾಲ್ಲೂಕಿನ ಬಹುಸಂಖ್ಯಾತ ಕುಟುಂಬಗಳಲ್ಲಿ ಮಾತೃಭಾಷೆ ಮತ್ತು ಆಡುಭಾಷೆಗಳೆರಡೂ ಕೊಂಕಣಿ ಅಥವಾ ಮರಾಠಿಯಾಗಿವೆ.

ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವುದರಿಂದ ಅನೇಕ ಮಕ್ಕಳು ಗ್ರಹಿಕೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಕೆಲವು ಶಾಲೆಗಳಲ್ಲಿ ಅಧ್ಯಾಪಕರು ಆಸಕ್ತಿ ವಹಿಸಿ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಮಾತನಾಡಲು ಮತ್ತು ವಿಷಯಗಳನ್ನು ಗ್ರಹಿಸಲು ವಿಶೇಷ ತರಬೇತಿಯನ್ನು ನೀಡುತ್ತಿದ್ದಾರೆ.

ಆದರೆ ಈ ಪ್ರಯತ್ನಗಳನ್ನು ಗುರುತಿಸಿ ಅವುಗಳನ್ನು ಇತರ ಶಾಲೆಗಳಲ್ಲಿ ಪುನರಾವರ್ತಿಸುವಂಥ ಕೆಲಸ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಡೆಯಿಂದ ಆಗುತ್ತಿಲ್ಲ. 

ಬರೀ ಶಿಕ್ಷಣ ಕ್ಷೇತ್ರದಲ್ಲೇ ಏಕೆ, ಒಟ್ಟಾರೆ ಹೊರ ಪ್ರಪಂಚದೊಡನೆ ಸಂಪರ್ಕ ಸಾಧಿಸುವ ವಿಚಾರದಲ್ಲೂ ಜೋಯಿಡಾ ಹಿಂದೆ ಬಿದ್ದಿರುವುದಕ್ಕೆ ಸಂಪರ್ಕ ಭಾಷೆಯಲ್ಲಿ ಬಹುಸಂಖ್ಯಾತ ಜನರು ವ್ಯವಹರಿಸಲಾಗದಿರುವುದೂ ಒಂದು ಕಾರಣ.

ಅಸಮರ್ಪಕ ರಸ್ತೆ ಸಂಪರ್ಕ, ನಿಧಾನ ಗತಿಯಲ್ಲಿ ಸಾಗುತ್ತಿರುವ ಶೈಕ್ಷಣಿಕ ಬೆಳವಣಿಗೆ, ಈ ಪ್ರದೇಶಕ್ಕೆ ವಿಶಿಷ್ಟವಾದ ಬೆಳೆಗಳಿಗೆ ಸಿಗದ ಸೂಕ್ತ ಮಾರುಕಟ್ಟೆ ಬೆಲೆಗಳು,

ಅಸ್ತವ್ಯಸ್ತ ಸಾರಿಗೆ ವ್ಯವಸ್ಥೆ, ತೀರಾ ವಿರಳವಾದ ವೈದ್ಯಕೀಯ ಸೇವೆಗಳು, ಜನರ ಆದ್ಯತೆಯನ್ನು ಅಲಕ್ಷಿಸಿದ ಅರಣ್ಯ ಯೋಜನೆಗಳು, ಸ್ಥಳೀಯ ಸಮುದಾಯಗಳ ಬದುಕಿನ ವಾಸ್ತವಗಳನ್ನು ಮನಗಂಡು ಅವುಗಳಿಗೆ ಪೂರಕವಾದ ಪರಿಹಾರಗಳನ್ನು ರೂಪಿಸಲು ವಿಫಲವಾಗಿರುವ ರಾಜಕೀಯ ಮತ್ತು ಅಧಿಕಾರಶಾಹಿ ವರ್ಗ-ಹೀಗೆ ಜೋಯಿಡಾದ ಬವಣೆಗಳ ಸಾಲು ಬೆಳೆಯುತ್ತಲೇ ಹೋಗುತ್ತದೆ.


 ಒಂದೆಡೆ ತನ್ನೊಡಲಿನಲ್ಲಿ ಅಪೂರ್ವ ಜೀವ ವೈವಿಧ್ಯವನ್ನು ಅಡಗಿಸಿಕೊಂಡಿರುವ ಪ್ರಾಕೃತಿಕ ಸಂಪತ್ತು, ಮತ್ತೊಂದೆಡೆ ಈ ಸಂಪತ್ತಿನ ಸುಸ್ಥಿರ ಬಳಕೆ ಮಾಡಿಕೊಂಡು ಅದನ್ನು ಬೆಳೆಸಿ ಉಳಿಸಿಕೊಳ್ಳಲಾಗದಂಥ ಅಸಹಾಯಕ ಪರಿಸ್ಥಿತಿಯಲ್ಲಿರುವ ಸ್ಥಳೀಯ ಜನತೆ  ಇದು ಜೋಯಿಡಾದಲ್ಲಿ ನಾವು ಕಾಣುವ ವೈರುಧ್ಯ.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಿಧಾನವಾಗಿ ಹೊರಗಿನವರ ಕೈಸೇರುತ್ತಿರುವ ಜೋಯಿಡಾದ ಸಾಂಸ್ಕೃತಿಕ, ಪ್ರಾಕೃತಿಕ ಮತ್ತು ಆರ್ಥಿಕ ಸಂಪನ್ಮೂಲಗಳು ಹಾಗೂ ನೆಲ-ಜಲಗಳು ಒಂದು ದಿನ ಸ್ಥಳೀಯರ ಕೈ ಬಿಟ್ಟು ಹೋಗುವದರಲ್ಲಿ ಸಂದೇಹವಿಲ್ಲ.
ಹೀಗಾಗುವ ಮುನ್ನ ಜೋಯಿಡಾದ ಜನತೆ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗುವುದು ಒಳಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT