ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಕ್ಷೇತ್ರದ ನಾಯಕತ್ವ ಕೊರತೆ

Last Updated 1 ಮಾರ್ಚ್ 2016, 19:49 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ಜ್ಞಾನಾಧಾರಿತ ಆರ್ಥಿಕತೆ ಎಂಬ ಪರಿಕಲ್ಪನೆಯ ಕುರಿತಂತೆ ನಾವೆಷ್ಟು ಚರ್ಚಿಸಿದ್ದೇವೆ ಎಂದರೆ ಇಲ್ಲಿ ‘ಜ್ಞಾನ’ ಕಳೆದು ಹೋಗಿ ಆರ್ಥಿಕತೆಯೇ ಮುಖ್ಯವಾಗಿಬಿಟ್ಟಿದೆ. ಇದು ಸಿನಿಕತನದ ಮಾತು ಅನ್ನಿಸಬಹುದು. ಆದರೆ ಇದು ವಾಸ್ತವ. ಜ್ಞಾನಾಧಾರಿತ ಉದ್ದಿಮೆಗಳಿಗೆ ಬಹಳ ಒಳ್ಳೆಯ ನಾಯಕತ್ವ ದೊರೆತಿದೆ. ಅದಕ್ಕೆ ಎಷ್ಟು ಉದಾಹರಣೆಗಳನ್ನು ಬೇಕಾದರೂ ಕೊಡಬಹುದು. ಆದರೆ ಈ ಉದ್ದಿಮೆಗಳಿಗೆ ಬಹಳ ಅಗತ್ಯವಿರುವ ಜ್ಞಾನ ಎಂಬ ಮೂಲ ಸೌಕರ್ಯವನ್ನು ನಿರ್ಮಿಸುವುದಕ್ಕೆ ಅಗತ್ಯವಿರುವ ನಾಯಕತ್ವ ನಮ್ಮಲ್ಲಿದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ ದೊರೆಯುವ ಉತ್ತರ ಬರೇ ನಿಟ್ಟುಸಿರು ಮಾತ್ರ.

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದ ಕಡೆಯಿಂದ ದೊರೆತ ಬೆಂಬಲ ದೊಡ್ಡದು. ಅದರ ಪರಿಣಾಮವಾಗಿಯೇ ನಮ್ಮ ಎಲ್ಲಾ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಹುಟ್ಟಿಕೊಂಡವು. ಉಪಗ್ರಹ ತಂತ್ರಜ್ಞಾನದಿಂದ ತೊಡಗಿ ಅಣ್ವಸ್ತ್ರ ತಯಾರಿಕೆಯ ತನಕವೂ ಭಾರತ ಸ್ವಾವಲಂಬಿಯಾಗಲು ಸಾಧ್ಯವಾಯಿತು. ಈ ಎಲ್ಲದಕ್ಕೂ ಕಾರಣವಾದದ್ದು ಕೇವಲ ರಾಜಕೀಯ ನಾಯಕತ್ವವಷ್ಟೇ ಅಲ್ಲ. ಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಮುನ್ನೋಟವುಳ್ಳ ರಾಜಕಾರಣಿಗಳಿದ್ದರು ಎಂಬುದು ನಿಜ. ಅವರಿಗೆ ಹೆಗಲೆಣೆಯಾಗಿ ಜ್ಞಾನ ಕ್ಷೇತ್ರಕ್ಕೆ ನಾಯಕತ್ವ ನೀಡಬಲ್ಲ ವಿದ್ವಾಂಸರು ಮತ್ತು ವಿಜ್ಞಾನಿಗಳೂ ಇದ್ದರು. ಸ್ವತಃ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ್ದೇನನ್ನೂ ಸಾಧಿಸದೇ ಇದ್ದರು ಯಾರು ಇಂಥದ್ದನ್ನು ಮಾಡಬಲ್ಲರು ಎಂಬುದನ್ನು ಗುರುತಿಸಬಲ್ಲ, ಯಾವ ಯೋಜನೆಗಳನ್ನು ರೂಪಿಸಿದರೆ ನಿರ್ದಿಷ್ಟ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತವರ ಸಂಖ್ಯೆಯೂ ದೊಡ್ಡದೇ ಇತ್ತು. ವಿಜ್ಞಾನವನ್ನು ಭಾರತೀಯ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಯಾರಾದರೂ ಹೇಳಿದರೆ ಅದು ಆತನ ಜ್ಞಾನದ ಕೊರತೆಯನ್ನು  ತೋರಿಸುತ್ತಿದೆಯೇ ಹೊರತು ವಿಜ್ಞಾನದ ಕ್ಲಿಷ್ಟತೆಯನ್ನಾಗಲೀ ಭಾಷೆಯ ಮಿತಿಯನ್ನಾಗಲೀ ಅಲ್ಲ ಎಂಬ ಮಾತು ವಿಕ್ರಂ ಸಾರಾಭಾಯ್ ಹೇಳಿದ್ದರು.

ಇಂಥ ನಾಯಕತ್ವದ ಬೆಳಕಿನಲ್ಲಿ ಶಿಕ್ಷಣ ಪಡೆದಿದ್ದ ಅನೇಕರು ತೊಂಬತ್ತರ ದಶಕದ ಆರಂಭದ ಹೊತ್ತಿಗೆ ಭಾರತದಲ್ಲಿ ಮಾಹಿತಿ ತಂತ್ರಜ್ಞನಾಧಾರಿತ ಉದ್ದಿಮೆಗಳನ್ನು ಕಟ್ಟಿ ಯಶಸ್ವಿಯಾದರು. ಇವರ ಯಶಸ್ಸನ್ನು ಕಂಡು ನಾವು ಹೆಮ್ಮೆ ಪಟ್ಟೆವು. ಆದರೆ ನಮ್ಮ ಜ್ಞಾನ ಕ್ಷೇತ್ರದ ಆಗುಹೋಗುಗಳನ್ನು ಮರೆತೇ ಬಿಟ್ಟೆವು. ಇದರ ಪರಿಣಾಮ ಬೇರೆ ಬೇರೆ ಬಗೆಯಲ್ಲಿ ಕಾಣಿಸಿಕೊಂಡಿದೆ. ಇದರಲ್ಲೊಂದು ಭಾರತೀಯ ಭಾಷಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ 22 ಭಾಷೆಗಳಿಗೂ ಈಗ ಕಂಪ್ಯೂಟರಿನಲ್ಲಿ ಒಂದು ಸ್ಥಾನವಿದೆ. ಯೂನಿಕೋಡ್ ಅದನ್ನು ಸಾಧ್ಯಮಾಡಿದೆ. ಆದರೆ ಅಲ್ಲಿಂದ ಮುಂದಕ್ಕೇನಾಯಿತು ಎಂದು ಕೇಳುವಂತಿಲ್ಲ!

ನೂರಕ್ಕೆ ನೂರರಷ್ಟು ಭಾರತೀಯವೇ ಆಗಿರುವ ಜ್ಞಾನವಿರುವುದು ಭಾರತೀಯ ಭಾಷೆಗಳಲ್ಲಿ. 1950ರಿಂದ 1980ರ ನಡುವಣ ಅವಧಿಯಲ್ಲಿ ಈ ಭಾಷೆಗಳಲ್ಲಿ ಜ್ಞಾನ ಸೃಷ್ಟಿ ಮತ್ತು ಜ್ಞಾನದ ಅಭಿವ್ಯಕ್ತಿಗಾಗಿ ನಡೆದ ಕೆಲಸದ ಶೇಕಡಾ 10ರಷ್ಟೂ ಆಮೇಲಿನ ಅವಧಿಯಲ್ಲಿ ನಡೆದಿಲ್ಲ. ಈ ಅವಧಿಯಲ್ಲಿ ಎಲ್ಲಾ ಭಾಷೆಗಳಲ್ಲೂ ಅತ್ಯುತ್ತಮವಾದ ನಿಘಂಟುಗಳು, ವಿವಿಧ ಜ್ಞಾನಕೋಶಗಳು, ಪಠ್ಯಪುಸ್ತಕಗಳು ಇತ್ಯಾದಿಗಳೆಲ್ಲವೂ ರಚನೆಯಾದವು. ಒಮ್ಮೆ ಇಂಥವನ್ನು ರಚಿಸಿಬಿಟ್ಟರೆ ಎಲ್ಲವೂ ಆಯಿತು ಎಂಬ ಸೋಮಾರಿತನ ನಮ್ಮ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅದು ಹೇಗೆ ಬಾಧಿಸಿತೋ ಗೊತ್ತಿಲ್ಲ. ಆಮೇಲೆ ಏನೂ ನಡೆಯಲಿಲ್ಲ. ನಡೆದರೂ ಅದು ಅಪವಾದ ಎನ್ನುವ ಮಟ್ಟದಲ್ಲಿ.

ಪುಸ್ತಕಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಎರಡು ಮುಖ್ಯ ಯೋಜನೆಗಳಿವೆ. ಒಂದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (ಡಿಎಲ್‌ಐ) ಮತ್ತೊಂದು ನ್ಯಾಷನಲ್ ಡಿಜಿಟಲ್ ಲೈಬ್ರರಿ. ಡಿಎಲ್ಐ ಯೋಜನೆ ರೂಪುಗೊಂಡು ಒಂದೂವರೆ ದಶಕ ಕಳೆಯಿತು. ಹತ್ತು ಲಕ್ಷ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಈ ಯೋಜನೆಗೆ ಭಾರತ ಸರ್ಕಾರದ ಸಹಾಯವಷ್ಟೇ ಅಲ್ಲದೆ ಅನೇಕ ವಿದೇಶಿ ವಿಶ್ವವಿದ್ಯಾಲಯಗಳ ಸಹಕಾರವೂ ಇತ್ತು. ಲಕ್ಷಾಂತರ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಅಂತರ್ಜಾಲಕ್ಕೆ ಸೇರಿಸುವ ಕೆಲಸವೇನೋ ಯಶಸ್ವಿಯಾಗಿ ನಡೆಯಿತು. ಆದರೆ ಈ ಪುಸ್ತಕಗಳಲ್ಲಿ ನಮಗೆ ಬೇಕಿರುವುದನ್ನು ಹುಡುಕುವುದಕ್ಕೆ ಸಾಮಾನ್ಯರಿಗೆ ಸಾಧ್ಯವಿಲ್ಲ. ಇಷ್ಟರ ಮೇಲೆ ಹುಡುಕುವಲ್ಲಿ ಯಶಸ್ವಿಯಾದಿರಿ ಎಂದುಕೊಳ್ಳಿ, ಅದನ್ನು ಓದುವುದಕ್ಕೆ ನಡೆಸಬೇಕಾಗಿರುವ ಸರ್ಕಸ್ ಇನ್ನೂ ದೊಡ್ಡದು. ಭಾರೀ ವೇಗ ಅಂತರ್ಜಾಲ ಸಂಪರ್ಕವಿರುವವರೇ ತಬ್ಬಿಬ್ಬಾಗಬೇಕಾದ ಸ್ವರೂಪದಲ್ಲಿ ಈ ಪುಸ್ತಕಗಳಿವೆ.

ಸರ್ಕಾರವೇ ನೀಡಿರುವ ಮಾಹಿತಿಯಂತೆ ಇವುಗಳನ್ನು ಪುಣೆ ಮತ್ತು ಬೆಂಗಳೂರಿನಲ್ಲಿರುವ ಎರಡು ಸರ್ವರ್‌ಗಳಲ್ಲಿ ಇವುಗಳನ್ನು ಸಂಗ್ರಹಿಸಲಾಗಿದೆ. ಇದಕ್ಕೆ ಸಂಪರ್ಕ ಕಲ್ಪಿಸಿರುವ ಅಂತರ್ಜಾಲ ವೇಗ ಪ್ರತಿ ಸೆಕೆಂಡ್‌ಗೆ 516 ಕಿಲೋಬೈಟ್‌ಗಳಿಂದ ಎರಡು ಮೆಗಾಬೈಟ್‌ಗಳಷ್ಟಿದೆ. ಹದಿನೈದು ವರ್ಷಗಳ ಹಿಂದೆ ಈ ವೇಗಕ್ಕೆ ಏನಾದರೂ ಅರ್ಥವಿರುತ್ತಿತ್ತೇನೋ. ಆದರೆ ಈಗ ಸಾಮಾನ್ಯ ಮೊಬೈಲ್‌ನ 3ಜಿ ಇಂಟರ್‌ನೆಟ್ ಸಂಪರ್ಕದ ವೇಗವೇ ಇದಕ್ಕಿಂತ ಹಲವು ಪಾಲು ಹೆಚ್ಚಿರುತ್ತದೆ. ಕಳೆದ ಒಂದೂವರೆ ವರ್ಷಗಳಿಂದ ಇದನ್ನು ನವೀಕರಿಸಲಾಗುವುದು ಎಂಬ ಪ್ರಕಟಣೆ ಜಾಲತಾಣದಲ್ಲಿದೆ. ಆದರೆ ಈ ತನಕವೂ ಅದು ಸಾಧ್ಯವಾದಂತೆ ಕಾಣಿಸುವುದಿಲ್ಲ.

ನ್ಯಾಷನಲ್ ಡಿಜಿಟಲ್ ಲೈಬ್ರರಿ ಯೋಜನೆಗೆ ಈಗ ಆರು ವರ್ಷ ತುಂಬುತ್ತಾ ಬಂತು. ಈ ಜಾಲ ತಾಣದ ವಿನ್ಯಾಸವನ್ನು ನೋಡಿದರೆ ಪ್ರೌಢಶಾಲೆಯ ಮಕ್ಕಳು ತಮ್ಮ ಅರಿವಿನ ಮಿತಿಯಲ್ಲಿ ರೂಪಿಸುವ ಜಾಲ ತಾಣಕ್ಕಿಂತಲೂ ಕೆಟ್ಟದಾಗಿದೆ. ಅಮೂಲ್ಯ ದಾಖಲೆಗಳು ಮತ್ತು ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸುವ ಭರವಸೆಯೊಂದಿಗೆ ಆರಂಭಗೊಂಡ ಈ ತಾಣದಲ್ಲಿ ಈ ತನಕ ಯಾವುದೇ ದಾಖಲೆ ಲಭ್ಯವಿಲ್ಲ.

ಡಿಎಲ್ಐ ಯೋಜನೆಯ ಭಾಗವಾಗಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಅಂತರ್ಜಾಲದಲ್ಲಿ ಒದಗಿಸಲಾಗುತ್ತಿತ್ತು. ಈಗ ಆ ತಾಣವೇ ಕೆಲಸ ಮಾಡುವುದಿಲ್ಲ. ತಾಣದ ನಿರ್ವಾಹಕರಿಗೆ ಕಳುಹಿಸಿದ ಇ–ಮೇಲ್‌ಗಳಿಗೆ ಪ್ರತಿಕ್ರಿಯೆಗಳೂ ಬರುವುದಿಲ್ಲ. ಸುಮಾರು ಆರು ತಿಂಗಳಿನಿಂದಲೂ ಈ ಪರಿಸ್ಥಿತಿ ಮುಂದುವರಿದಿದೆ.

ಈ ನಡುವೆ ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಶನ್, ರೀಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಕೂಡ ಎಲ್ಲಾ ಪಠ್ಯಪುಸ್ತಕಗಳನ್ನು ಉಚಿತವಾಗಿ ಆನ್‌ಲೈನ್‌ನಲ್ಲಿ ನೀಡುವ ಪ್ರಯತ್ನ ಆರಂಭಿಸಿದೆ. ಸದ್ಯದ ಮಟ್ಟಿಗೆ ಇದೊಂದು ಯಶಸ್ವಿ ಯೋಜನೆ. ‘ಸಾಕ್ಷಾತ್’ ಯೋಜನೆ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಕೆಲವು ಕೆಲಸಗಳನ್ನು ಆರಂಭಿಸಿದೆ. ಇವುಗಳೂ ಡಿಎಲ್‌ಐ ಮತ್ತು ನ್ಯಾಷನಲ್ ಡಿಜಿಟಲ್ ಲೈಬ್ರರಿಯ ಹಾದಿಯಲ್ಲಿ ಸಾಗುವುದಿಲ್ಲ ಎಂದು ನಂಬುವುದಕ್ಕೆ ಯಾವ ಕಾರಣಗಳೂ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಈ ಯೋಜನೆಗಳ ಮಧ್ಯೆ ಒಂದು ಸಮನ್ವಯವೇ ಇಲ್ಲ. ಇಂಥದ್ದೇ ಯೋಜನೆಗಳ ಸಾಲಿನಲ್ಲಿ ಅನೇಕ ರಾಜ್ಯ ಸರ್ಕಾರಗಳ ಯೋಜನೆಗಳೂ ಇವೆ. ಕರ್ನಾಟಕ ಸರ್ಕಾರದ ‘ಕಣಜ’ವೂ ಇಂಥದ್ದೇ ಯೋಜನೆ. ಇದು ಈಗ ಪುನರಾರಂಭಗೊಂಡಿದೆ. ಭವಿಷ್ಯವೇನು ಎಂಬುದು ಇನ್ನೂ ಅಸ್ಪಷ್ಟ.

ಕೇಂದ್ರ ಸರ್ಕಾರ ಈಗ ಮತ್ತೊಂದು ಯೋಜನೆಯನ್ನು ಆರಂಭಿಸುತ್ತಿದೆ. ‘ಭಾರತ್‌ವಾಣಿ’ ಹೆಸರಿನ ಈ ಯೋಜನೆಯ ಉದ್ಘಾಟನೆ ಗುರುವಾರದಂದು(ಮಾರ್ಚ್-3) ನಡೆಯಲಿದೆ. ಯುಜಿಸಿ ಕಾರ್ಯಾರೂಪಕ್ಕೆ ತರುತ್ತಿರುವ ಈ ಯೋಜನೆಯ ಉದ್ದೇಶವೂ ಬಹಳ ದೊಡ್ಡದೇ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ 22 ಭಾಷೆಗಳಲ್ಲಿರುವ ಜ್ಞಾನವನ್ನು ಡಿಜಿಟಲ್ ರೂಪಕ್ಕೆ ಇಳಿಸುವ ಯೋಜನೆ ಇದು. ನಿಧಾನವಾಗಿ ಭಾರತದ ಎಲ್ಲಾ 122 ಭಾಷೆಗಳು, 234 ಮಾತೃಭಾಷೆಗಳನ್ನು ಇದು ಒಳಗೊಳ್ಳಲಿದೆಯಂತೆ. ಭಾರತೀಯವಾದ ಜ್ಞಾನವನ್ನು ಒಂದೆಡೆ ತರುವ ಮಟ್ಟಿಗೆ ಇದು ಬಹುದೊಡ್ಡ ಮತ್ತು ಬಹಳ ಮಹತ್ವಾಕಾಂಕ್ಷಿಯಾದ ಯೋಜನೆ. ಈ ತನಕ ವಿಶ್ವವಿದ್ಯಾಲಯಗಳು ಪ್ರಕಟಿಸಿರುವ, ಸೃಷ್ಟಿಸಿರುವ ಎಲ್ಲಾ ಬರಹಗಳನ್ನೂ ‘ಭಾರತ್‌ವಾಣಿ’ಗೆ ನೀಡಬೇಕು ಎಂಬ ಪತ್ರವೊಂದನ್ನು ಯುಜಿಸಿ ಎಲ್ಲಾ ವಿವಿಗಳಿಗೂ ರವಾನಿಸಿದೆ.

ಯೋಜನೆಯ ರೂಪು ರೇಖೆಗಳೇನೋ ಭರವಸೆ ಹುಟ್ಟಿಸುತ್ತಿವೆ. ಆದರೆ ಸರ್ಕಾರಿ ಇಲಾಖೆಗಳು ಮತ್ತು ವಿಶ್ವವಿದ್ಯಾನಿಲಯಗಳ ಪ್ರೊಫೆಸರುಗಳು ಈ ತನಕ ಮಾಡಿರುವ ‘ಸಾಧನೆ’ಯ ಬೆಳಕಿನಲ್ಲಿ ಇದನ್ನು ನೋಡಿದರೆ ಮತ್ತಷ್ಟು ಕೋಟಿಗಳು ನೀರ ಪಾಲಾಗುತ್ತದೆಯೇ ಎಂಬ ಸಂಶಯ ಕಾಡುತ್ತದೆ. ಭಾರತೀಯ ಭಾಷೆಗಳಲ್ಲಿ ಜ್ಞಾನ ಸಂವಹನ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಸರ್ಕಾರಗಳು ನೀಡಿರುವ ಅನುದಾನಕ್ಕೆ ಈ ತನಕ ಒದಗಿರುವ ದುರ್ಗತಿ ಇದಕ್ಕೂ ಬರಬಾರದು ಎಂದಿದ್ದರೆ ಯೋಜನೆ ಸುಸ್ಥಿರವಾಗುವುದಕ್ಕೆ ಸಾಧ್ಯವಿರುವ ಹಲವು ಕ್ರಮಗಳ ಅಗತ್ಯವಿದೆ.

ಈಗಾಗಲೇ ವಿವಿಧ ಭಾಷೆಗಳಲ್ಲಿ ಲಭ್ಯವಿರುವ ನಿಘಂಟುಗಳನ್ನು ಒಂದು ದತ್ತ ಸಂಚಯದಲ್ಲಿ ಹಾಕಿ ಇವುಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸಿದರೆ ಅದು ತೆರೆಯುವ ಸಾಧ್ಯತೆಗಳು ಬಹಳ ದೊಡ್ಡದು. ನಿರ್ದಿಷ್ಟ ಸಸ್ಯ ಅಥವಾ ಪ್ರಾಣಿಗೆ ಬೇರೆ ಬೇರೆ ಭಾಷೆಗಳಲ್ಲಿ ಏನೆಂದು ಕರೆಯುತ್ತಾರೆ ಎಂಬುದೇ ಒಂದು ದೊಡ್ಡ ಅರಿವಿನ ಕಣಜವಾಗಿಬಿಡುತ್ತದೆ. ಈ  ಎಲ್ಲವಕ್ಕೂ ಒಂದು ವೈಜ್ಞಾನಿಕ ಹೆಸರಿದ್ದರೂ ಅವುಗಳ ಕುರಿತಂತೆ ಅರಿಯಬೇಕಾದ ವಿಜ್ಞಾನಿಗೆ ಅತ್ಯಂತ ಅಗತ್ಯವಾಗಿ ಸ್ಥಳೀಯವಾಗಿ ಅದನ್ನು ಯಾವ ಹೆಸರಿನಿಂದ ಗುರುತಿಸುತ್ತಾರೆ ಎಂಬುದನ್ನು ತಿಳಿಯಬೇಕಾಗುತ್ತದೆ. ಇದೇ ನಿಘಂಟು ಸಂಚಯ ಭಾರತೀಯ ಭಾಷೆಗಳಲ್ಲಿ ಭಾಷಾ ಸಂಸ್ಕರಣಾ ತಂತ್ರಜ್ಞಾನದ ಬೆಳವಣಿಗೆಗೆ ಅರ್ಥಾತ್ ಯಾಂತ್ರಿಕ ಅನುವಾದ, ಪದಪರೀಕ್ಷಕ, ಬಹುಭಾಷಾ ನಿಘಂಟು ಇತ್ಯಾದಿಗಳ ಬೆಳವಣಿಗೆಗೂ ಕಾರಣವಾಗುತ್ತದೆ. ಇದು ಕೇವಲ ನಿಘಂಟಿಗೆ ಸಂಬಂಧಿಸಿದ ವಿಚಾರ. ಇಂಥ ಅನೇಕ ಕೋಶಗಳನ್ನು, ಪುಸ್ತಕಗಳ ದತ್ತ ಸಂಚಯವೊಂದು ಏನೇನನ್ನು ಸಾಧಿಸಬಹುದು?

ಇದು ತಾಂತ್ರಿಕವಾಗಿ ಸವಾಲಿನ ಕೆಲಸವಲ್ಲ. ಆದರೆ ಕಳೆದ ಎರಡೂವರೆ ದಶಕಗಳಲ್ಲಿ ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳೆಲ್ಲವೂ ಯಾವುದೋ ಜರ್ನಲ್‌ಗಳ ಪ್ರಬಂಧವಾಗಿವೆಯೇ ಹೊರತು ಜನಸಾಮಾನ್ಯರ ಬಳಕೆಗೆ ದೊರೆತಿಲ್ಲ. ‘ಭಾರತ್‌ವಾಣಿ’ಯೂ ಈ ಹಾದಿಯಲ್ಲಿ ಸಾಗದಂತೆ ನೋಡಿಕೊಳ್ಳುವುದಕ್ಕೆ ಇದು ನಿವೃತ್ತರಿಗೆ ಕುರ್ಚಿ ಒದಗಿಸುವ, ‘ಪ್ರಬಂಧ ವೀರ’ರಿಗೆ ಅವಕಾಶ ಕಲ್ಪಿಸುವ ತಾಣವಾಗದೇ ನಿಜವಾದ ಜ್ಞಾನ ಪ್ರಸರಣದಲ್ಲಿ ಆಸಕ್ತಿ ಇರುವ ಜ್ಞಾನ ಕ್ಷೇತ್ರದ ನಾಯಕತ್ವ ವಹಿಸಬಲ್ಲವರಿಗೆ ದೊರೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT