ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವೆಂಬ ಬೆಣ್ಣೆಯ ಹಿಡಿದು ಕಲಿಕೆಯೆಂಬ ತುಪ್ಪ ಅರಸುತ್ತಾ...

Last Updated 31 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೇವಲ ರಚನಾತ್ಮಕ ಪರಿಸರದಲ್ಲಷ್ಟೇ ಏನನ್ನಾದರೂ ಕಲಿಯಲು ಸಾಧ್ಯ ಎಂದೇ ಬಹಳಷ್ಟು ವರ್ಷಗಳಿಂದ ಬಹುತೇಕರು ನಂಬಿಕೊಂಡು ಬಂದಿದ್ದಾರೆ. ಶಾಲೆ ಅಥವಾ ಅಂಥದ್ದೇ ಇತರ ವಾತಾವರಣದಲ್ಲಿ ಮಾತ್ರ ಕಲಿಕೆ ಸಾಧ್ಯ, ಹಾಗಾಗಿ ಅವುಗಳನ್ನಷ್ಟೇ ನಾವು ಅವಲಂಬಿಸಬೇಕು ಎಂಬ ತರಬೇತಿಯನ್ನೇ ಹಿಂದಿನಿಂದಲೂ ನಾವು ಪಡೆದುಕೊಳ್ಳುತ್ತಾ ಬಂದಿದ್ದೇವೆ.

ಆದರೆ ಕಲಿಕೆ ಎಂಬುದು ಯಾರು ಕಲಿಸುತ್ತಿದ್ದಾರೆ ಎಂಬುದನ್ನಷ್ಟೇ ಆಧರಿಸಿ ಇರುವುದಿಲ್ಲ, ಕಲಿಯುವವರು ಮತ್ತು ಕಲಿಯಲು ಇರುವ ವಾತಾವರಣವನ್ನು ಅದು ಅವಲಂಬಿಸಿರುತ್ತದೆ ಎಂಬುದನ್ನು ಗ್ರಹಿಸಲು ನಮಗೆ ಸಾಧ್ಯವಾಗುತ್ತಿಲ್ಲ.

ನಮ್ಮ ಕಲಿಕೆಯ ಶೈಲಿ, ಗ್ರಹಿಕೆಯ ಸಾಮರ್ಥ್ಯ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದಿಂದ ನಿರಂತರವಾಗಿ ನಾವು ಪಡೆದುಕೊಳ್ಳುವ ಜ್ಞಾನ ಇವೆಲ್ಲವೂ ಕಲಿಕೆಗೆ ಪೂರಕವಾಗಿರುತ್ತವೆ. ಅದಿಲ್ಲದೆ ಬರೀ ಪುಸ್ತಕಗಳು ಮತ್ತು ಇಂಟರ್‌ನೆಟ್‌ನಿಂದಷ್ಟೇ ಎಲ್ಲವನ್ನೂ ಕಲಿತುಬಿಡಲು ಸಾಧ್ಯವಿಲ್ಲ ಎಂಬ ವಾಸ್ತವದ ಅರಿವು ಸಹ ಬಹಳಷ್ಟು ಸಂದರ್ಭಗಳಲ್ಲಿ ನಮಗಾಗಿರುವುದಿಲ್ಲ.

ಕಲಿಯುವ ಶಿಕ್ಷಣದ ಜೊತೆ ಜೊತೆಗೇ ಕಾಲಕ್ರಮೇಣ ಅಹಂಕಾರವನ್ನೂ ನಾವು ಮೈಗೂಡಿಸಿಕೊಳ್ಳುತ್ತಾ ಹೋಗುತ್ತೇವೆ. ಇದರ ಪರಿಣಾಮವಾಗಿ ನಮ್ಮಲ್ಲಿ ಕಲಿಕೆಗೆ ಅತ್ಯಗತ್ಯವಾಗಿ ಇರಬೇಕಾದ ನಮ್ರತೆ ದೂರವಾಗುತ್ತಾ ಬಂದು `ನಾವು ಎಲ್ಲದರಲ್ಲೂ ಪರಿಣತರು~ ಎಂಬಂತಹ ಭ್ರಮೆ ನಮ್ಮನ್ನು ಆವರಿಸಿಕೊಳ್ಳುತ್ತದೆ.
 
ಸಾಮಾನ್ಯವಾಗಿ ನಾವೆಲ್ಲರೂ ನಮಗಿಂತ ಉತ್ತಮರು ಎಂದು ನಾವು ತಿಳಿದುಕೊಂಡವರಿಂದ, ನಾವು ಗೌರವಿಸುವವರಿಂದ, ಆರಾಧಿಸುವವರಿಂದ ಮತ್ತು ಬೌದ್ಧಿಕವಾಗಿ ಯಾರು ಉನ್ನತ ಮಟ್ಟದಲ್ಲಿ ಇದ್ದಾರೆ ಎಂದುಕೊಂಡಿರುತ್ತೇವೆಯೋ ಅವರಿಂದ ಕಲಿಯಲು, ಅವರನ್ನು ಅನುಕರಿಸಲು ಬಯಸುತ್ತೇವೆ.
 
ಆದರೆ ನಮಗೆ ಇಷ್ಟವಿರಲಿ ಇಲ್ಲದೇ ಇರಲಿ, ಬೇಕಿರಲಿ ಅಥವಾ ಬೇಡದೇ ಇರಲಿ ಕಲಿಕೆ ಎಲ್ಲ ಕಾಲದಲ್ಲೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂಬ ವಿಷಯವನ್ನು ಅರಿಯಲು ಮಾತ್ರ ನಾವು ವಿಫಲರಾಗುತ್ತೇವೆ.

ಕಲ್ಪನೆಗಳು, ಸಂಗತಿಗಳು ಮತ್ತು ಅಭಿಪ್ರಾಯಗಳು ಹಲವು ಮಾರ್ಗಗಳ ಮೂಲಕ ಸತತವಾಗಿ ನಮ್ಮ ಮನಸ್ಸಿನ ಮೇಲೆ ಪರಿಣಾಮ ಉಂಟು ಮಾಡುತ್ತಲೇ ಇರುತ್ತವೆ. ಹೀಗೆ ನಮ್ಮ ಗ್ರಹಿಕೆಗೆ ನಿಲುಕುವ ಸಂಗತಿಗಳನ್ನು, ವಿವಿಧ ಪ್ರಕ್ರಿಯೆಗಳನ್ನು ನಾವು ಯಾವ ರೀತಿಯಲ್ಲಿ ಅಂತರ್ಗತ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಕಲಿಕೆಯ ಗತಿ ಅವಲಂಬಿತವಾಗಿರುತ್ತದೆ.

ನಾವು ಸತತವಾಗಿ ಗ್ರಹಿಸುವ ಹಲವು ಸಂಗತಿಗಳಲ್ಲಿ ಕೆಲವನ್ನು ಮಾತ್ರ ಮೆದುಳು ಕಲಿಕೆಗಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಈ ರೀತಿ ಆಯ್ಕೆ ಮಾಡಿಕೊಂಡು ಮನನ ಮಾಡಿಕೊಂಡ ಸಂಗತಿಗಳೇ ಮುಂದೆ ಧಾರಣಾ ಶಕ್ತಿಯಾಗಿ ರೂಪಾಂತರಗೊಂಡು ನಮ್ಮಲ್ಲಿ ಉಳಿದುಕೊಳ್ಳುತ್ತವೆ.

ಅಭಿವೃದ್ಧಿ ಕಾರ್ಯಕರ್ತರು ಸರ್ಕಾರದವರೇ ಆಗಿರಲಿ ಅಥವಾ ಸರ್ಕಾರೇತರ ಸಂಘಟನೆಗಳಿಗೆ ಸೇರಿದವರೇ ಆಗಿರಲಿ ಅವರೆಲ್ಲರೂ ಈ ಬಗೆಯ ನಿರಂತರವಾದ ಕಲಿಕೆಯಲ್ಲಿ ತೊಡಗಿಕೊಳ್ಳಲೇಬೇಕು. ಪ್ರತಿ ದಿನ ಕಲಿಯಲು ತಮಗೆ ಸಿಗುವ ನೂರಾರು ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.

ಆದರೆ ದುರದೃಷ್ಟದ ಸಂಗತಿಯೆಂದರೆ, ನಮ್ಮನ್ನು ನಾವು ಎಲ್ಲಾ ಗೊತ್ತಿರುವ ಬೃಹಸ್ಪತಿಗಳು ಎಂದು ಭಾವಿಸಿಕೊಂಡು ನಾವು ಇರುವುದೇ ಹಳ್ಳಿಗರು, ಆದಿವಾಸಿಗಳಂತಹ ಜನರಿಗೆ ನೆರವಾಗಲು ಎಂಬ ಭ್ರಮೆಯಲ್ಲೇ ಇರುತ್ತೇವೆ.

ಇದು ಇನ್ನಷ್ಟು ಕಲಿಯುವ ನಮ್ಮ ಪ್ರಯತ್ನದ ಸುತ್ತ ಬೇಲಿ ಕಟ್ಟುತ್ತದೆ, ಆಗ ಸಾಂಪ್ರದಾಯಿಕವಾದ ಜ್ಞಾನ ಸಂಪತ್ತನ್ನು ಗ್ರಹಿಸಲು ನಮಗೆ ಸಾಧ್ಯವೇ ಆಗುತ್ತಿಲ್ಲ ಎಂಬ ಸತ್ಯವನ್ನು ನಾವು ಮರೆಯುತ್ತೇವೆ.

ಇಂತಹ ಲೆಕ್ಕವಿಲ್ಲದಷ್ಟು ಅನುಭವಗಳು ನನಗಾಗಿವೆ. ಅವುಗಳಲ್ಲಿ ಹಲವನ್ನು ನಾನು ನಿರ್ಲಕ್ಷಿಸಿದ್ದೇನೆ. ಆದರೆ ನನ್ನ ಸುತ್ತ ನಾನೇ ನಿರ್ಮಿಸಿಕೊಂಡ ಇಂತಹ ಬೇಲಿಯ ಬಗ್ಗೆ ನನಗೆ ಅರಿವಾದಾಗಲೆಲ್ಲ ನನ್ನಲ್ಲಿನ ವಿನಯ ಪ್ರಜ್ಞೆ ಎಚ್ಚೆತ್ತುಕೊಂಡಿದೆ.

ಪರಂಪರಾನುಗತವಾದ ಜ್ಞಾನ ಮತ್ತು ಅರಿವಿನ ಆಳ, ಮಹತ್ವವನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇನೆ. ಅದರಿಂದ ನಾನು ಸಾಕಷ್ಟು ಪಡೆದುಕೊಂಡಿದ್ದೇನೆ. ಇಂತಹ ಒಂದು ಉದಾಹರಣೆಯನ್ನು ಇಲ್ಲಿ ಕೊಡಬಯಸುತ್ತೇನೆ.

ಅದು 1988ರ ಬೇಸಿಗೆ ಕಾಲ. ನನ್ನ ಸೇವಾ ಮನೋಭಾವಕ್ಕೆ ಸ್ಪಂದಿಸಿದ ನನ್ನ ವೈದ್ಯ ಸಹೋದ್ಯೋಗಿಗಳಾದ ಡಾ. ರಮೇಶ್ ಮತ್ತು ಡಾ. ದೇವರಾಜ್ ಆಚಾರ್ಯ ಅವರು ಆದಿವಾಸಿಗಳಿಗಾಗಿ ವೈದ್ಯಕೀಯ ಸೇವೆ ಒದಗಿಸುವ ಯೋಜನೆ ಜಾರಿಗಾಗಿ ನೆರವಾಗಲು ಬ್ರಹ್ಮಗಿರಿಗೆ ಬಂದಿದ್ದರು.

ರಮೇಶ್ ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ದೇವರಾಜ್ ಆಗಷ್ಟೇ ಇಂಟರ್ನ್‌ಶಿಪ್ ಮುಗಿಸಿದ್ದರು. ದಾನಿಯೊಬ್ಬರು ನಮಗೆ ಕೊಟ್ಟಿದ್ದ ವಾಹನ ಕೆಟ್ಟುಹೋಗಿ ಮೂಲೆ ಸೇರಿತ್ತು. ಮೈಸೂರಿನ ರಾಮಕೃಷ್ಣ ಆಶ್ರಮ ನೀಡಿದ್ದ ಹಳೆಯ ಜೀಪನ್ನೇ ನಾವು ಬಳಸುತ್ತಿದ್ದೆವು.
 
ಒಂದು ಸಂಜೆ ಆ ವಾಹನದಲ್ಲಿ ನಾನು ಅಲ್ಲಿಂದ 25 ಕಿ.ಮೀ ದೂರದಲ್ಲಿದ್ದ ಮಟಕೆರೆ ಆದಿವಾಸಿ ಕಾಲೊನಿಗೆ ಬಂದೆ. ಆದಿವಾಸಿಗಳ `ಆಶ್ರಮ ಶಾಲೆ~ಯಲ್ಲಿ (ಹಾಗೆಂದೇ ಅದು ಬಳಕೆಯಲ್ಲಿತ್ತು) ಕೆಲ ಹೊತ್ತು ಕಳೆದ ಬಳಿಕ ಸಮೀಪದಲ್ಲಿ ನಡೆಯುತ್ತಿದ್ದ ಮಹಿಳಾ ಸ್ವಸಹಾಯ ಗುಂಪಿನ ಸಭೆಯಲ್ಲಿ ಪಾಲ್ಗೊಂಡೆ.

ಸುಮಾರು 20 ಮಹಿಳೆಯರು ಸೇರಿದ್ದ ಆ ಸಭೆಯಲ್ಲಿ, ಸಾಲದ ಬಾಕಿ ಪಾವತಿಸದೆ ಪದೇ ಪದೇ ಕೈಕೊಡುತ್ತಿದ್ದ ಮಹಿಳೆಯೊಬ್ಬಳ ಬಗ್ಗೆ ಬಿರುಸಿನ ಚರ್ಚೆ ನಡೆದಿತ್ತು. ಇದರ ವಿರುದ್ಧ ಏನಾದರೂ ಬಿಗಿ ಕ್ರಮ ಕೈಗೊಳ್ಳಲೇಬೇಕು ಎಂಬುದು ಅಲ್ಲಿದ್ದವರೆಲ್ಲರ ಅಭಿಪ್ರಾಯ ಆಗಿತ್ತು.
 
ಆ ಮಹಿಳೆಯ ಬಗ್ಗೆ ಇವರೆಲ್ಲರೂ ತೋರುತ್ತಿದ್ದ ಕಳಕಳಿ ಮತ್ತು ಕರುಣೆ ನನಗೆ ಇಷ್ಟವಾಯಿತು. ಸಾಲದ ಹಣ ಕಟ್ಟದೇ ಇರಲು ಆಕೆಯ ಕುಡುಕ ಗಂಡನೇ ಪ್ರಮುಖ ಕಾರಣ ಇರಬಹುದು ಎಂಬ ಶಂಕೆಯೂ ಅವರನ್ನು ಚಿಂತೆಗೀಡುಮಾಡಿತ್ತು.
 
ಅವನನ್ನು ತಾವು ನೇರವಾಗಿ ಎದುರಿಸಿ ಆತನಲ್ಲಿ ಜವಾಬ್ದಾರಿ ಹೆಚ್ಚುವಂತೆ ಮಾಡಲು ಏನು ಮಾಡಬೇಕು ಎಂಬ ಬಗ್ಗೆಯೂ ಅವರು ಚರ್ಚಿಸಿದರು. ಇದು ಬರೀ ಸಾಲ ಕೊಡುವುದು ಮತ್ತು ಮರು ಪಾವತಿ ಮಾಡಿಸಿಕೊಳ್ಳುವ ವ್ಯಾವಹಾರಿಕ ಕ್ರಿಯೆಗಿಂತ ನಿಜವಾದ ಅರ್ಥದ ಸ್ವಸಹಾಯ ಮತ್ತು ಕಳಕಳಿ ತೋರುವ ನಿಲುವಾಗಿತ್ತು.

ಮುಖ್ಯವಾಗಿ ನಾನು ಇಲ್ಲಿಗೆ ಬಂದದ್ದು ನಾನೊಬ್ಬ ವೈದ್ಯ ಎಂಬುದನ್ನು ಇವರಿಗೆ ತಿಳಿಸಲು ಮತ್ತು ಇವರೆಲ್ಲರ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿಯೇ ನಾನಿದ್ದೇನೆ ಎಂಬ ಬಗ್ಗೆ ಅರಿವು ಮೂಡಿಸಲು. ಇವರ ಬಹುತೇಕ ಸಂಬಂಧಿಗಳು ಬ್ರಹ್ಮಗಿರಿಯಲ್ಲಿ ಇದ್ದುದರಿಂದ ನಮ್ಮ ಚಿಕಿತ್ಸಾಲಯದ ವಿಷಯ ಈಗಾಗಲೇ ಇವರ ಕಿವಿಗೆ ಬಿದ್ದಿರುತ್ತದೆ ಎಂಬುದೂ ನನಗೆ ತಿಳಿದಿತ್ತು.

 
ಸ್ವಾಗತ ಮತ್ತು ಒಂದು ಸಣ್ಣ ಭಾಷಣವಾದ ನಂತರ `ಹುಷಾರಿಲ್ಲದೇ ಇದ್ದಾಗ ನೀವೇನು ಮಾಡುತ್ತೀರಿ~ ಎಂಬ ಪ್ರಶ್ನೆ ಎತ್ತಿ, ನಿಧಾನವಾಗಿ ಆರೋಗ್ಯ ಸಮಸ್ಯೆಗಳತ್ತ ನಮ್ಮ ಮಾತನ್ನು ತಿರುಗಿಸಿದೆವು. ತಮ್ಮ ಎರಡು ವರ್ಷದ ಮಗುವೊಂದು ತೀವ್ರ ಅತಿಸಾರದಿಂದ ಹೇಗೆ ನರಳಿತು ಎಂಬುದನ್ನು ಒಬ್ಬರು ವಿವರಿಸಿದರು.

ಡಾಕ್ಟರ್ ಆಗಿ ನನ್ನ ಕರ್ತವ್ಯವನ್ನು ಬಿಂಬಿಸಲು ಇದು ಸದವಕಾಶ ಎಂದು ತಿಳಿದ ನಾನು, ಓರಲ್ ರಿಹೈಡ್ರೇಷನ್ ಸಾಲ್ಟ್ಸ್ (ಒಆರ್‌ಎಸ್) ಬಗ್ಗೆ ಹೇಳಲು ಆರಂಭಿಸಿದೆ. ಅತಿಸಾರ ಎಂದರೇನು, ಅದನ್ನು ಹೇಗೆ ತಡೆಗಟ್ಟಬಹುದು, ಸರಿಯಾಗಿ ನೀರು ಕುದಿಸುವ ರೀತಿ, ಅದರಿಂದ ಒಆರ್‌ಎಸ್ ತಯಾರಿಸುವ ಬಗೆ ಎಲ್ಲವನ್ನೂ ವಿವರಿಸಿ, ಈ ಔಷಧ ನಮ್ಮ ಕಣ್ಣೀರಿನ ರುಚಿಯಂತೆ ಇರಬೇಕು ಎಂದು ತಿಳಿಸಿದೆ.

ಇದಕ್ಕೆ ಮಹಿಳೆಯರು ನಾನು ಅಂದುಕೊಂಡಷ್ಟು ಉತ್ಸಾಹದಲ್ಲಿ ಪ್ರತಿಕ್ರಿಯೆ ತೋರದೆ ಮೌನವಾಗೇ ಇದ್ದರು. ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಟಿಒ) `ಶತಮಾನದ ಸಂಶೋಧನೆ~ ಎಂದು ಕರೆದಿರುವ ಈ ಚಿಕಿತ್ಸೆಯನ್ನು ನಾನು ವಿವರಿಸಿ ಹೇಳಿದಾಗಲೂ ಅವರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.
 
50 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಈ ಸಮುದಾಯ ಅತಿಸಾರದ ಸಮಸ್ಯೆಯನ್ನು ಅನುಭವಿಸಿಯೇ ಇರುತ್ತದೆ, ಆದ್ದರಿಂದ ಅದರಿಂದ ಹೊರಬರಲು ಇಷ್ಟು ವರ್ಷ ಇವರೆಲ್ಲ ಏನನ್ನಾದರೂ ಮಾಡುತ್ತಲೇ ಬಂದಿರಬೇಕಲ್ಲವೇ ಎಂಬ ಪ್ರಶ್ನೆ ನನ್ನಲ್ಲಿ ಎದ್ದಿತು.
 
ನಿಮ್ಮ ಕಾಲೊನಿಯ ಆ ಎರಡು ವರ್ಷದ ಮಗುವನ್ನು ಅತಿಸಾರದಿಂದ ಪಾರು ಮಾಡಲು ನೀವಾಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ನಾನು ಕೆಲವರನ್ನು ಕೇಳಿದೆ. ಇದು ಅತ್ಯಂತ ಉತ್ಸಾಹಭರಿತವಾದ ಚರ್ಚೆಗೆ ವೇದಿಕೆ ಒದಗಿಸಿತು.

ನಾವು ಮೊದಲು ಬಾಳೆಹಣ್ಣು ಮತ್ತು ಒಂದಷ್ಟು ಅವಲಕ್ಕಿಯನ್ನು ಕೊಂಡು ತರುತ್ತೇವೆ, ನಂತರ ಅವಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ಬಾಳೆಹಣ್ಣನ್ನು ಕಿವುಚಿ ಸೇರಿಸಿ ಮಗುವಿಗೆ ತಿನ್ನಿಸುತ್ತೇವೆ. ಆಗಲೂ ಅತಿಸಾರ ನಿಯಂತ್ರಣಕ್ಕೆ ಬಾರದಿದ್ದರೆ ದಾಳಿಂಬೆ ಸಿಪ್ಪೆಯಿಂದ ಕಷಾಯ ತಯಾರಿಸಿ ದಿನಕ್ಕೆ ನಾಲ್ಕೈದು ಬಾರಿ ಕುಡಿಸುತ್ತೇವೆ ಎಂದರು.

ಹೀಗೆ ಅತಿಸಾರ ಪೀಡಿತ ಮಗುವಿಗೆ ಅತ್ಯಗತ್ಯವಾದ ಸೋಡಿಯಂ, ಪೊಟಾಷಿಯಂ ಸಹಿತ ದ್ರವರೂಪದ, ಕಾರ್ಬೊಹೈಡ್ರೇಟ್‌ಯುಕ್ತ ಪದಾರ್ಥ ನೀಡುವ ಇಂತಹ ಜನರಿಗೆ, ರುಚಿಯೇ ಇಲ್ಲದ ಒಆರ್‌ಎಸ್ ಕುಡಿಯುವ ಮೂರ್ಖ ಸಲಹೆಯನ್ನು ನಾನು ನೀಡಿದ್ದೆ.
 
ಈ ಸಮುದಾಯಕ್ಕೆ ಅಪ್ರಸ್ತುತವಾದ ಮತ್ತು ಅನಗತ್ಯವಾದ ಉಪದೇಶ ಬೋಧಿಸಲು ನಾನಿಲ್ಲಿ ಬಂದಿದ್ದೇನೆ ಎಂಬ ನಾಚಿಕೆಯೂ ನನಗಾಯಿತು. ಬರೀ ವಿಜ್ಞಾನಿಗಳು ಕಂಡುಹಿಡಿದು ಪ್ರಯೋಗಾಲಯಗಳಲ್ಲಿ ಸಾಬೀತಾದವುಗಳನ್ನು ಮಾತ್ರ ನಾವು `ವೈಜ್ಞಾನಿಕ~ ಎಂದು ಪರಿಗಣಿಸುತ್ತೇವೆ.

ಹಲವು ಶತಮಾನಗಳಿಂದಲೂ ಇಂತಹ ಸಮುದಾಯಗಳು ಪರಂಪರಾನುಗತವಾಗಿ ಅಳವಡಿಸಿಕೊಂಡು ಬಂದಿರುವ ಜ್ಞಾನ ಸಂಪತ್ತಿನ ಬಗ್ಗೆ ನಮಗೆ ಅರಿವೇ ಇರುವುದಿಲ್ಲ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವ ಗೋಜಿಗೂ ನಾವು ಹೋಗುವುದಿಲ್ಲ.

ಈ ಅಪರಿಮಿತ ಜ್ಞಾನವನ್ನು ನಾವು ತಳ್ಳಿಹಾಕುವುದಷ್ಟೇ ಅಲ್ಲ ಅದನ್ನು ವೈಜ್ಞಾನಿಕವಾಗಿ ಸ್ಥಿರೀಕರಿಸಿ ನೋಡುವ ಪ್ರಯತ್ನವನ್ನೂ ಮಾಡುವುದಿಲ್ಲ. ನಾವು ಹೆಮ್ಮೆ ಪಟ್ಟುಕೊಳ್ಳುವಷ್ಟು ಮಟ್ಟಿನ ಅಗಾಧವಾದ ಜ್ಞಾನ ಮತ್ತು ಅರಿವಿನ ಸಂಪತ್ತು ನಮ್ಮ ಸ್ಥಳೀಯ ಸಮುದಾಯಗಳಲ್ಲೇ ಇದೆ.
 
ಅದರ ಬೆಲೆಯನ್ನು ಮೊದಲು ನಾವು ಅರಿತುಕೊಳ್ಳಬೇಕಾಗಿದೆ. ಆಧುನಿಕ ಶಿಕ್ಷಣ ನಮಗೆ ಬಳುವಳಿಯಾಗಿ ಕೊಟ್ಟಿರುವ ದಾರ್ಷ್ಟ್ಯದಿಂದ ಹೊರಬಂದು ಕಲಿಯುವ ಸೌಜನ್ಯದಿಂದ ಈ ಜನರ ಬಳಿ ಬರಬೇಕಾಗಿದೆ.

ನಮಗ್ಯಾರಿಗೂ ನಿರಾಶೆಯಾಗದಂತಹ, ಬಗೆದಷ್ಟೂ ಮುಗಿಯದ ಅನಂತವಾದ ಜ್ಞಾನದ ಗಣಿಯನ್ನೇ ಅವರು ಮೊಗೆದು ಕೊಡಬಲ್ಲರು. ದಿನನಿತ್ಯ ಸಂಶೋಧಿಸುತ್ತಾ ಈಗಾಗಲೇ ನಾವು ಕಂಡುಕೊಂಡಿರುವ ಸಂಗತಿಗಳನ್ನು, ಸಾಂಪ್ರದಾಯಿಕವಾದ ಇಂತಹ ಜ್ಞಾನದೊಂದಿಗೆ ಸಂಯೋಜಿಸಿ ನೋಡಲು ನಾವು ಮುಂದಾದರೆ ಆಗ ಇವೆರಡರ ಲಾಭವೂ ಸಮಾಜಕ್ಕೆ ದಕ್ಕುತ್ತದೆ.

(ನಿಮ್ಮ ಅನಿಸಿಕೆಗಳನ್ನು ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT