ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟನ್ನರ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು?

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ಟಿಬೆಟನ್ನರ ಧಾರ್ಮಿಕ ನಂಬಿಕೆಗಳು ಅವರ ಬದುಕು, ಭಾವಗಳಲ್ಲಿ ಸಂಪೂರ್ಣ ಬೆರೆತುಕೊಂಡಿವೆ. ಆ ಮಟ್ಟಿಗೆ ಟಿಬೆಟನ್ನರು ಬೌದ್ಧವಿಚಾರಧಾರೆಯ ಜತೆಗೆ ಆವಿನಾಭಾವತೆ ಹೊಂದಿದ್ದಾರೆ. ಆದರೆ ಚೀನಾದ ಆಡಳಿತಗಾರರು ಟಿಬೆಟನ್ನರ ಧಾರ್ಮಿಕ ಆಚರಣೆ, ನಂಬಿಕೆಗಳನ್ನೆಲ್ಲಾ ನಾಮಾವಶೇಷ ಮಾಡಲು ಪಣತೊಟ್ಟಿದ್ದಾರೆ.
 
ಈಚೆಗೆ ಲಾಸಾದಲ್ಲಿ ಮತ್ತೊಬ್ಬ ಬೌದ್ಧಭಿಕ್ಷು ಆತ್ಮಾಹುತಿ ಮಾಡಿಕೊಂಡಿರುವ ಸುದ್ದಿ ಬಂದಿದೆ.  ಈಚೆಗೆ ಇಂತಹ ಆತ್ಮಾಹುತಿಗಳು ಸಾಮಾನ್ಯವಾಗಿಬಿಟ್ಟಿವೆ.

ಲೆಕ್ಕವಿಡುವವರಾರು? ಆಡಳಿತಗಾರರ ವಿರುದ್ಧ ನಡೆಯುತ್ತಿರುವ ಇಂತಹ ಆವೇಶದ ಪ್ರತಿಭಟನೆಗಳು ಚೀನಾದಾದ್ಯಂತ ನಿತ್ಯವೂ ನಡೆಯುತ್ತಲೇ ಇರುತ್ತವೆ. ಚೀನಾದಲ್ಲಿರುವ `ಕಮ್ಯುನಿಸ್ಟ್ ಸಂಸ್ಕೃತಿ~ಯು ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ಬೌದ್ಧ ಭಿಕ್ಷುಗಳು ಈ ತೆರನಾಗಿ ತಮ್ಮ ಪ್ರತಿಭಟನೆಯನ್ನು ದಾಖಲು ಮಾಡುತ್ತಾ ಸಾಗಿದ್ದಾರೆ.


ಚೀನಾ ಆಡಳಿತಗಾರರು ತಮ್ಮ ಸಂಸ್ಕೃತಿಯನ್ನು ಬಲವಂತವಾಗಿಯೇ ಟಿಬೆಟನ್ನರ ಮೇಲೆ ಹೇರುತ್ತಿದ್ದಾರೆ. ಬೌದ್ಧ ಧರ್ಮದಲ್ಲಿ ಆತ್ಮಾಹುತಿಯು ಅತ್ಯುನ್ನತ ತ್ಯಾಗದ ಸಂಕೇತವೆಂಬ ನಂಬಿಕೆ ಇದೆಯಂತೆ. ಆದರೆ ಟಿಬೆಟನ್ನರ ಧರ್ಮಗುರು ದಲೈಲಾಮ ಅವರು ಯಾವುದೇ ಕಾರಣಕ್ಕೂ ಆತ್ಮಾಹುತಿ ಮಾಡಬಾರದು ಎಂದು ಕರೆ ಕೊಟ್ಟಿದ್ದರೂ ಇಂತಹ ಪ್ರತಿಭಟನೆಗಳು ನಡೆಯುತ್ತಲೇ ಇವೆ.
 
ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದಲೈಲಾಮ `ನನಗೆ ಅವರ ನೋವು ಅರ್ಥವಾಗುತ್ತದೆ. ಅವರ ನಂಬಿಕೆಗಳನ್ನು ಹೀನಾಯವಾಗಿ ಕಂಡಾಗ ಅದನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಅವರು ಆವೇಶದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಾನು ಇದನ್ನು ಖಂಡಿಸದೇ ಇದ್ದಿದ್ದರೆ ಇನ್ನೂ ನೂರಾರು ಮಂದಿ ಆತ್ಮಾಹುತಿ ಮಾಡಿಕೊಂಡಿರುತ್ತಿದ್ದರು~ ಎಂದಿದ್ದಾರೆ.

ಈ ವಸ್ತುಸ್ಥಿತಿಯು ಜಗತ್ತಿಗೆ ಗೊತ್ತಿದೆ. ಆದರೂ ಟಿಬೆಟನ್ನರ ನೋವಿಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಜನರ ಸಾಕ್ಷಿಪ್ರಜ್ಞೆ ಸತ್ತಂತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹಲವು ಕಡೆ ಟಿಬೆಟನ್ನರ ಪರವಾಗಿ ಪ್ರತಿಭಟನೆಗಳು ಕಂಡು ಬಂದವು. ಆದರೆ ಆಯಾ ಪ್ರದೇಶಗಳ ಆಡಳಿತಗಾರರ ಒತ್ತಡದ ಮೇರೆಗೆ ಎಲ್ಲವೂ ಮೌನವಾಗಿಬಿಟ್ಟಿತು.

ಎಲ್ಲೆಡೆ ಲಾಭನಷ್ಟಗಳ ಲೆಕ್ಕಾಚಾರವೇ ಎದ್ದು ಕಾಣುತ್ತಿವೆ. ಅಮೂರ್ತ ಧಾರ್ಮಿಕ ವಿಚಾರಗಳು ಮತ್ತು ಮಾನವ ಹಕ್ಕು ವಿಷಯಗಳನ್ನು ಮುಂದಿಟ್ಟುಕೊಂಡು ಚೀನಾದಂತಹ ಪ್ರಬಲ ರಾಷ್ಟ್ರದ ವಿರುದ್ಧ ನಿಲ್ಲುವುದು ಅದೆಷ್ಟು ಸರಿ ಎಂಬ ಲೆಕ್ಕಾಚಾರವೇ ಬಹಳಷ್ಟು ದೇಶಗಳ ಅಧಿಕಾರಸ್ಥರಲ್ಲಿ ಕಂಡು ಬರುತ್ತಿದೆ.

ಜಗತ್ತಿಗೇ ಉಪದೇಶ ನೀಡುವ ಪಶ್ಚಿಮದ ದೇಶಗಳು ದಲೈಲಾಮ ಅವರಿಗೆ `ದಯವಿಟ್ಟು ನಮ್ಮಲ್ಲಿಗೆ ಬರಬೇಡಿ~ ಎಂದು ಹೇಳಿ ಬಿಟ್ಟಿವೆ. ಪಶ್ಚಿಮದ ದೇಶಗಳು ತಮಗೆ ಯಾವುದರಿಂದ ಎಷ್ಟು ಲಾಭ ಮತ್ತು ನಷ್ಟ ಎಂದು ತಿಳಿದುಕೊಳ್ಳಲಾರದಷ್ಟು ದಡ್ಡರೇನಲ್ಲ.

ಭಾರತ ಸರ್ಕಾರ ಕೂಡಾ ಟಿಬೆಟನ್ನರ ಸಮಸ್ಯೆಯನ್ನು ಬಗೆಹರಿಸುವ ದಿಸೆಯಲ್ಲಿ ಮುಂದಡಿ ಇಡಲು ಭಯ ಪಡುತ್ತಿದೆ. ಟಿಬೆಟನ್ನರ ಸಮಸ್ಯೆ ಪರಿಹರಿಸುವಲ್ಲಿ ಭಾರತ ಇನ್ನಷ್ಟೂ ಕೆಲಸ ಮಾಡಲು ಸಾಧ್ಯವಿದೆ ಎಂದು ದಲೈಲಾಮ ಅವರು ಸೂಚ್ಯವಾಗಿ ಹೇಳಿದ್ದಾರಾದರೂ, ಭಾರತದ ಆಡಳಿತಗಾರರು ಮಾತ್ರ ಇಡೀ ವಿವಾದದಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವುದು ವಾಸ್ತವ.

ಈ ವಿವಾದವನ್ನು ಬೆನ್ನಿಗೆ ಕಟ್ಟಿಕೊಂಡರೆ ದೂರದಲ್ಲಿರುವ `ಬೀಜಿಂಗ್~ ಎಂಬ ಪೆಡಂಭೂತ ಬೆಂಕಿ ಕಾರತೊಡಗುತ್ತದೆ ಎಂಬ ಸಂಗತಿ ಭಾರತಕ್ಕೆ ಗೊತ್ತಿದೆ. ಇವುಗಳೇನೇ ಇರಲಿ, ಟಿಬೆಟನ್ನರು ಮಾತ್ರ ತಮ್ಮ ಹೋರಾಟವನ್ನು ಕೈಬಿಟ್ಟಿಲ್ಲ.

ಅಮೆರಿಕಾದ ಕೊಲರಡೊ ಪ್ರಾಂತ್ಯದ ಕ್ಯಾಂಪ್ ಹೇಲ್ ಎನ್ನುವ ಸ್ಥಳ ಟಿಬೆಟ್‌ನಿಂದ ಬಹಳ ದೂರದಲ್ಲಿದೆ. ಅಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಟಿಬೆಟನ್ ಯುವಕರಿಗೆ ಗೆರಿಲ್ಲಾ ಯುದ್ಧತಂತ್ರದ ಬಗ್ಗೆ ತರಬೇತಿ ನೀಡಲಾಗಿದೆಯಂತೆ. ಆ ಯುವಕರು ಚೀನಾದ ಪ್ರಬಲ ಪ್ರಜಾ ವಿಮೋಚನಾ ಸೇನೆಯ ವಿರುದ್ಧ ಹೋರಾಡಲಿದ್ದಾರಂತೆ.

ಆದರೆ ಆ ರೀತಿ ತರಬೇತಾದ ಯುವಕರು ಈವರೆಗೆ ಗಂಭೀರವಾಗಿ ಪರಿಗಣಿ ಸುವಂತಹದ್ದೇನನ್ನೂ ಮಾಡಲಾಗಿಲ್ಲ ಎನ್ನುವುದಂತೂ ನಿಜ. ಅದೇನೇ ಇರಲಿ, ವಿಪರ್ಯಾಸವೆಂದರೆ ಬೀಜಿಂಗ್‌ನಲ್ಲಿರುವ ಅಧಿಕಾರಸ್ಥರಿಗೆ ಇದಕ್ಕೆ ಸಂಬಂಧಿಸಿದಂತೆ ಭಾರತದ ಮೇಲೆಯೇ ಅನುಮಾನ. ಟಿಬೆಟನ್ನರ ಸ್ವಾತಂತ್ರ್ಯ ಚಳವಳಿಯ ಹಿಂದೆ ನವದೆಹಲಿಯ ಸಹಾಯಹಸ್ತವಿದೆ ಎಂಬುದು ಚೀನಾದ ನಂಬಿಕೆ.

ಈ ನಡುವೆ ವಿದೇಶಾಂಗ ಸಚಿವ ಎಸ್.ಎಂ.ಕಷ್ಣ ಅವರು `ಟಿಬೆಟ್ ನಮಗೆ ಕಾಶ್ಮೀರದಂತೆ, ಜ್ವಲಂತ ಸಮಸ್ಯೆಯಾಗಿದೆ~ ಎಂದು ಬಿಟ್ಟರು. ಚೀನಾದ ಅನುಮಾನಕ್ಕೆ ಈ ಮಾತುಗಳು ಇನ್ನಷ್ಟೂ ಪುಷ್ಟಿ ನೀಡಿಬಿಟ್ಟಿದೆ.

ಬ್ರಿಟಿಷರು 1947ರಲ್ಲಿ ಭಾರತವನ್ನು ಬಿಟ್ಟು ಹೋದ ನಂತರ, `ಟಿಬೆಟ್ ಮೇಲೆ ಚೀನಾದ ಪರಮಾಧಿಕಾರ ಸರಿ~ ಎಂದು ಒಪ್ಪಿಕೊಂಡಿರುವಂತಹ ಹೇಳಿಕೆಯನ್ನು ಭಾರತ ನೀಡಿತ್ತು. ಆ ದಿನಗಳಲ್ಲಿ ಟಿಬೆಟನ್ನರು ಭಾರತದ ವಿರುದ್ಧ ಕೆಂಡಾಮಂಡಲವಾಗಿಬಿಟ್ಟಿದ್ದರು.

ತಮ್ಮಡನೆ ಯಾವುದೇ ವಿಚಾರ ವಿನಿಮಯ ನಡೆಸದೆ, ತಮ್ಮನ್ನು ಸಂಪರ್ಕಿಸದೆಯೇ ಏಕಪಕ್ಷೀಯವಾಗಿ ಭಾರತ ಇಂತಹದ್ದೊಂದು ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಅಂದು ಟಿಬೆಟನ್ನರು ಹೇಳಿದ್ದರು. ನಂತರದ ದಶಕದಲ್ಲಿ ಚೀನಾದವರ ಆಕ್ರಮಣ, ದಬ್ಬಾಳಿಕೆಯನ್ನು ಸಹಿಸಲಾಗದೆ ದಲೈಲಾಮ ನೇತೃತ್ವದಲ್ಲಿ ಸಹಸ್ರಾರು ಮಂದಿ ಟಿಬೆಟ್ ತೊರೆದು ಭಾರತಕ್ಕೆ ನಿರಾಶ್ರಿತರಾಗಿ ಬಂದರೆನ್ನಿ.

ಬಂದ ನಂತರ ಕೂಡಾ ದಲೈಲಾಮ ಮಾತನಾಡುವಾಗಲೆಲ್ಲಾ ಭಾರತ ಅಂದು ಎಸಗಿದ್ದ ತಪ್ಪನ್ನು ಪ್ರಸ್ತಾಪಿಸುತ್ತಲೇ ಇರುತ್ತಾರೆ.

ಒಂದು ಪ್ರದೇಶದ ಮೇಲೆ ಪರಮಾಧಿಕಾರವೆಂದರೆ ಅದು ಸ್ವಾತಂತ್ರ್ಯವೆಂದೇನಲ್ಲ. ಅದೊಂದು ಅವಲಂಬಿತ ರಾಜ್ಯದ ಮೇಲೆ ಪ್ರಬಲ ಸರ್ಕಾರವೊಂದು ಹೊಂದಿರುವ ರಾಜಕೀಯ ಅಧಿಕಾರವಷ್ಟೆ.

ಅಂದು ಭಾರತದ ಅಧಿಕಾರಸ್ಥರು ಮಾತನಾಡುತ್ತಾ ಟಿಬೆಟ್ ಮೇಲೆ ಚೀನಾಕ್ಕೆ ಇರಬಹುದಾಗ ರಾಜಕೀಯ ಅಧಿಕಾರದ ಬಗ್ಗೆ ಮಾತನಾಡಿರಬಹುದೇ ಹೊರತು, ಪರಮಾಧಿಕಾರದ ಬಗ್ಗೆ ಅಲ್ಲ. ದಲೈಲಾಮ ಕೂಡಾ ಈಗ ವಾಸ್ತವಾಂಶಗಳನ್ನು ಅರಿತುಕೊಂಡಿರಬೇಕು. ಭಾರತ ಕೂಡಾ ಚೀನಾದ ಜತೆಗೆ ಉತ್ತಮ ಬಾಂಧವ್ಯವನ್ನು ಮುಂದುವರಿಸಲು ಸದಾ ತುದಿಗಾಲಲ್ಲಿ ನಿಂತಿರುತ್ತದೆ.

ಭಾರತದಲ್ಲಿ ನಿರಾಶ್ರಿತರಾಗಿ ನೆಲೆಸಿರುವ ಟಿಬೆಟನ್ನರು ಈ ದೇಶದ ಹೊರಗೆ ಯಾವುದೇ ಸಂಬಂಧವಿರಿಸಿಕೊಳ್ಳುವುದಿದ್ದರೂ, ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಅನುಮತಿ ಪಡೆದಿರಲೇಬೇಕೆಂದು ಎಚ್ಚರಿಕೆಯ ಸ್ವರೂಪದ ಸೂಚನೆಯನ್ನೂ ನೀಡಲಾಗಿದೆ. ಟಿಬೆಟನ್ ನಿರಾಶ್ರಿತರ ಜತೆಗೆ ಅಗತ್ಯಕ್ಕಿಂತ ಹೆಚ್ಚಿನ ಸಂಬಂಧವಿರಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂಬ ಸೂಚನೆಯನ್ನೂ ಸ್ಥಳೀಯ ಜನರಿಗೂ ರವಾನಿಸಲಾಗಿದೆ.
 
ದಲೈಲಾಮ ಅವರ ತಿರುಗಾಟ ಮತ್ತು ಹೇಳಿಕೆಗಳ ಮೇಲೆಯೂ ಒಂದಿಷ್ಟು ಕಡಿವಾಣ ಎಳೆಯಲಾಗಿದೆ. ದಲೈಲಾಮ ಕೂಡಾ ಮಾತನಾಡುವುದೂ ಕಡಿಮೆಯೇ. ಇವುಗಳೆಲ್ಲದರ ನಡುವೆಯೂ ಅವರು ಈಚೆಗೊಂದು ಸಂದರ್ಶನದಲ್ಲಿ ಮಾತನಾಡುತ್ತಾ ಟಿಬೆಟ್‌ಗೆ ಅರ್ಥಪೂರ್ಣ ಸ್ವಾಯತ್ತೆ ತುರ್ತಿನ ಪರಿಹಾರವಾಗಬಹುದು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ವರ್ಷದ ಹಿಂದೆಯೂ ಅವರು ಇಂತಹದೇ ಹೇಳಿಕೆ ನೀಡಿದ್ದರು. ಆಗಲೂ ಬೀಜಿಂಗ್ ನಕಾರಾತ್ಮಕ ಧೋರಣೆ ತಳೆದಿತ್ತು. ಈ ಸಲ ಕೂಡ ಚೀನಾ ಬದಲಾಗಬಹುದು ಎಂದು ನಾವು ನಿರೀಕ್ಷಿಸುವಂತಿಲ್ಲ.

ದಲೈಲಾಮ ಟಿಬೆಟ್ ಕುರಿತು ಭಾರತದ ನಿಲುವಿನ ಬಗ್ಗೆ ಮಾತನಾಡುವಾಗಲೆಲ್ಲಾ 1962ರ ಇಂಡೋ-ಚೀನಾ ಕದನದ ಸಂದರ್ಭದಲ್ಲೂ ಜವಾಹರಲಾಲ್ ನೆಹರು ಅವರು ಟಿಬೆಟ್ ಬಗ್ಗೆ ಏನನ್ನೂ ಪ್ರಸ್ತಾಪಿಸಿರಲಿಲ್ಲ ಎಂಬುದನ್ನು ಒತ್ತಿ ಹೇಳುತ್ತಾರೆ. ಟಿಬೆಟ್‌ನಲ್ಲಿ ಟಿಬೆಟನ್ನರನ್ನು ಸಂಪೂರ್ಣವಾಗಿ ಹೊರ ಹಾಕುವ ಬಗ್ಗೆ ಆ ದಿನಗಳಲ್ಲಿಯೇ ನಡೆಯುತ್ತಿದ್ದ ಚೀನಾ ಕಾರ್ಯಕ್ರಮದ ಬಗ್ಗೆ ಕೂಡಾ ನೆಹರು ಅವರು ಜಗತ್ತಿನ ಗಮನಕ್ಕೆ ತರಲು ಪ್ರಯತ್ನಿಸಿರಲಿಲ್ಲ. ಇಂತಹ ಹಲವು ಸಂದರ್ಭಗಳಲ್ಲಿ ಭಾರತದ ನಿಲುವು ದಲೈಲಾಮ ಅವರಿಗೆ ಅಸಹನೀಯ ಎನಿಸಿರಲೂಬಹುದು.

ದೆಹಲಿಯ ಧೋರಣೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಲೂ ಬಂದಿದ್ದಾರೆ. ನೆಹರು ನಂತರ ಮನಮೋಹನ್ ಸಿಂಗ್‌ವರೆಗೆ ಆಗಿ ಹೋದ ಪ್ರಧಾನಿಗಳಾರೂ ಟಿಬೆಟ್ ವಿಷಯದಲ್ಲಿ ನೆಹರು ಅವರಿಗಿಂತ ಭಿನ್ನ ಧೋರಣೆಯನ್ನಂತೂ ತಳೆದಿಲ್ಲ. ಚೀನಾದ ಬೇರೆ ಬೇರೆ ಭಾಗಗಳಿಂದ ಜನರನ್ನು ಕರೆತಂದು ಟಿಬೆಟ್‌ನಲ್ಲಿ ನೆಲೆಸುವಂತೆ ಮಾಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ. ಟಿಬೆಟನ್ನರನ್ನು ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತಿದೆ. ಅಲ್ಲಿ ನಡೆದಿರುವ `ಜನಾಂಗ ನಿರ್ಮೂಲನ~ ಕಾರ್ಯಕ್ರಮದ ವಿರುದ್ಧ ಭಾರತದ ಅಧಿಕಾರಸ್ಥರಲ್ಲಿ ಯಾರೂ ಧ್ವನಿ ಎತ್ತಿಲ್ಲ.

ಟಿಬೆಟ್‌ನಲ್ಲಿ ಶತಮಾನಗಳಿಂದ ಇರುವ ಬೌದ್ಧ ಸಂಸ್ಕೃತಿಯನ್ನು `ಬೀಜಿಂಗ್~ನ ಆಡಳಿತಗಾರರು ಅಮಾನುಷವಾಗಿ ನಾಶ ಮಾಡುತ್ತಿದ್ದಾರೆ ಎಂದು ಈಗ ದಲೈಲಾಮ ಅವರೊಬ್ಬರೇ ಧ್ವನಿ ಎತ್ತಿ ಹೇಳುತ್ತಾ ಸಂಚರಿಸುತ್ತಿದ್ದಾರೆ. ಇಡೀ ಜಗತ್ತಿಗೆ ಟಿಬೆಟನ್ನರ ನೋವು ಗೊತ್ತಿದೆ. ಆದರೆ ಟೆಬೆಟ್‌ನಲ್ಲಿ ಹಾಡುಹಗಲೇ ನಡೆದಿರುವ ಒಂದು ಸಂಸ್ಕೃತಿ ಮತ್ತು ಪರಂಪರೆಯ ಕಗ್ಗೊಲೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ಟಿಬೆಟ್ ನೆಲದಲ್ಲಿ ಟಿಬೆಟನ್ನರು ಅನುಸರಿಸುವ ಧಾರ್ಮಿಕ ನಂಬಿಕೆ, ಸಂಪ್ರದಾಯ, ಆಚರಣೆಗಳ ಒಂದು ಎಳೆಯನ್ನು ಕಂಡರೂ ಅದನ್ನು ನಿರ್ನಾಮ ಮಾಡಲು ಚೀನಾದಿಂದ ನಿಯೋಜಿತಗೊಂಡಿರುವ ಭದ್ರತಾ ಸಿಬ್ಬಂದಿ ಬಂದೂಕು ಎತ್ತಿಕೊಳ್ಳುತ್ತಾರೆ. ಆ ಮಟ್ಟಿಗೆ ಟಿಬೆಟ್‌ನಲ್ಲಿ ಟಿಬೆಟ್‌ತನ ಒಂದಿನಿತೂ ಉಳಿಯದಂತೆ ಮಾಡಲು ಸರ್ವ ರೀತಿಯ ಪ್ರಯತ್ನಗಳು ನಡೆದಿವೆ.

 ಅರುಣಾಚಲ ಪ್ರದೇಶ ರಾಜ್ಯವು ಚೀನಾಕ್ಕೆ ಸೇರಿದ್ದು ಎಂದು ಬೀಜಿಂಗ್‌ನಲ್ಲಿರುವ ಅಧಿಕಾರಸ್ಥರು ಹೇಳಿಕೆ ನೀಡಿದಾಗ, ಜಮ್ಮು ಮತ್ತು ಕಾಶ್ಮೀರದ ಮಂದಿಗೆ ಪ್ರತ್ಯೇಕ ಹಾಳೆಯಲ್ಲಿ ಬರೆದು ವೀಸಾ ನೀಡುವ ಮೂಲಕ ಕಾಶ್ಮೀರದ ಮೇಲಿನ ಭಾರತದ ಪರಮಾಧಿಕಾರವನ್ನು ಚೀನಾ ಧಿಕ್ಕರಿಸಿದಾಗ ದೆಹಲಿ ಮಂದಿ ಮೈಕೊಡವಿ ಎದ್ದು ನಿಂತಿದ್ದರು. `ಅದೇಗೆ ಸಾಧ್ಯ~ ಎಂದು ಚೀನಾವನ್ನು ಪ್ರಶ್ನಿಸಿದ್ದರು. ಇಂತಹ ಸಂದಿಗ್ಧದಲ್ಲಿ ತಾವು ಟಿಬೆಟ್ ಮೇಲೆ ಚೀನಾದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವುದು ಅದೆಷ್ಟು ಸರಿ ಎಂಬುದಾಗಿ ಭಾರತದ ಆಡಳಿತಗಾರರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆಯಲ್ಲವೇ ?

ಟಿಬೆಟ್ ಇವತ್ತು ಆಕ್ರಮಣಕ್ಕೆ ಒಳಗಾಗಿರುವ ಭೂಪ್ರದೇಶವಾಗಿದೆ. ಅಲ್ಲಿನ ಆಡಳಿತದಲ್ಲಿ ಸ್ಥಳೀಯ ಜನರ ಯಾವುದೇ ಪಾಲ್ಗೊಳ್ಳುವಿಕೆಯಂತೂ ಇಲ್ಲವೇ ಇಲ್ಲ. ಲಾಸಾ ಪಟ್ಟಣದ ಮೇಲೆ ಬೀಜಿಂಗ್ ಸಂಪೂರ್ಣ ಹಿಡಿತ ಹೊಂದಿದೆ. ಅಲ್ಲಲಿ `ಬೀಜಿಂಗ್~ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ತಮ್ಮ ಅನಿವಾರ್ಯತೆ ಬಹಳಷ್ಟಿದೆ ಎಂಬುದು ಗೊತ್ತಿದ್ದೂ ದಲೈಲಾಮ ಅವರು ನಿವೃತ್ತಿಯ ಮಾತನಾಡುತ್ತಿರುವುದು ದುರದೃಷ್ಟಕರವಲ್ಲದೆ ಇನ್ನೇನು.
 
ದಲೈಲಾಮ ವಿರಮಿಸಬಾರದು. ಅವರು ಮತ್ತೆ ಜಗತ್ತಿನಾದ್ಯಂತ ಪ್ರವಾಸ ಕೈಗೊಳ್ಳಬೇಕು. ಜಗತ್ತಿನ ಜನರ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸಬೇಕು. ಚೀನಾದ ಕ್ರೌರ್ಯದ ಮುಖದ ಪರಿಚಯವನ್ನು ಜಗತ್ತಿನ ಎದುರು ಬಿಚ್ಚಿಡುವ ಅಗತ್ಯವಿದೆ. ಜಗತ್ತಿನಾದ್ಯಂತ ಟಿಬೆಟ್ ಪರವಾದ ಅಭಿಪ್ರಾಯ ಮೂಡುವಂತೆ ಅವರು ಪ್ರಯತ್ನಿಸಬೇಕಿದೆ.
 
ಬೀಜಿಂಗ್‌ನಲ್ಲಿ ಕುಳಿತ್ತಿರುವ ಆಡಳಿತಗಾರರು ಇನ್ನಾದರೂ ಟಿಬೆಟ್‌ನಲ್ಲಿ ಟಿಬೆಟನ್ನರು ನೆಮ್ಮದಿಯಿಂದ, ಶಾಂತಿಯಿಂದ ಬದುಕುವುದಕ್ಕೆ ಅವಕಾಶ ಮಾಡಿಕೊಡಲಿ. ಟಿಬೆಟನ್ನರು ತಮ್ಮ ಧರ್ಮ, ನಂಬಿಕೆ, ಮೌಲ್ಯಗಳೊಂದಿಗೆ ತಮ್ಮದೇ ನೆಲದಲ್ಲಿ ತಮ್ಮಷ್ಟಕ್ಕೆ ತಾವು ಬದುಕಿಕೊಂಡಿರಲಿ. ಆ ದಿಸೆಯಲ್ಲಿ ಚೀನಾ ಯೋಚಿಸುವುದು ಒಳಿತು.
(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT