ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಗರ್ ಹೆಜ್ಜೆ ಗುರುತು ಅಳಿಸಲಾಗದು

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಕ್ರಿಕೆಟ್ ಬೀಜ ಬೆಳೆದು ಹೆಮ್ಮರವಾಗಿದ್ದು ರಾಜ ಮಹಾರಾಜರ ಕೃಪೆಯಿಂದ. ಆದರೆ ಅವರಲ್ಲಿ `ನವಾಬ~ರಾಗಿ ವಿಜೃಂಭಿಸಿದವರು ಒಬ್ಬರೇ. ಕ್ರಿಕೆಟ್ ಅವರ ರಕ್ತದಲ್ಲಿತ್ತು, ಅವರ ನಡೆ ನುಡಿಯಲ್ಲಿತ್ತು.

ಒಂದೇ `ದೃಷ್ಟಿ~ಯಲ್ಲಿತ್ತು. ಅವರು ಈಗಿನಂತೆ ನೂರಾರು ಟೆಸ್ಟ್ ಆಡಲಿಲ್ಲ. ಬ್ಯಾಂಗ್ ಬ್ಯಾಂಗ್ ಕ್ರಿಕೆಟ್‌ನ ಸುಳಿಗೆ ಸಿಲುಕಲಿಲ್ಲ. ಆದರೆ ಅವರು ಆಡಿದಷ್ಟು ದಿನವೂ `ಹುಲಿ~ಯಂತೆಯೇ ಆಡಿದರು.

ಅವರಿಗೆ ಸಿಕ್ಕಿದ್ದು ಬರೀ ರಾಜಮರ್ಯಾದೆ ಮಾತ್ರ ಅಲ್ಲ. ಎಲ್ಲರೂ ಪ್ರೀತಿಸುವ ನಾಯಕನಾಗಿ, ಭಾರತದ ಸ್ಪಿನ್ನರುಗಳಿಗೆ ಅಸ್ತಿತ್ವ ತಂದುಕೊಟ್ಟರು. ಸುಮಾರು 14 ವರ್ಷಗಳ ಅವರ `ನವಾಬ~ಗಿರಿಯ ಮೂಸೆಯಲ್ಲಿ ಹೊರಬಂದ ಆಟಗಾರರು ಹಲವರು.

ಎಪ್ಪತ್ತು ವರ್ಷಗಳ ಪರಿಪೂರ್ಣ ಜೀವನ ನಡೆಸಿದ ಮನ್ಸೂರ್ ಅಲಿಖಾನ್ ಪಟೌಡಿ ಅವರನ್ನು ನಾನು ನೋಡಿದ್ದು ಒಮ್ಮೆ ಮಾತ್ರ. ಎಂಬತ್ತರ ದಶಕದ ಆರಂಭದಲ್ಲಿ `ಪ್ರಜಾವಾಣಿ~ಗೆ ಕ್ರಿಕೆಟ್ ಪಂದ್ಯಗಳ ವರದಿ ಮಾಡುವ ಹೊತ್ತಿಗೆ ಅವರು ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.

1975 ರಲ್ಲಿ, ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವೆ ಮದರಾಸಿನಲ್ಲಿ ನಡೆದ ಟೆಸ್ಟ್ ಪಂದ್ಯ ನೋಡಲು ಹುಬ್ಬಳ್ಳಿಯಿಂದ ಹೋದಾಗ ಪಟೌಡಿ ಅವರ ಆಟ ನೋಡಲು ಸಿಕ್ಕಿತ್ತು. ಅದರಲ್ಲಿ ಭಾರತ ಗೆದ್ದರೂ ಅವರೇನೂ ಹೆಚ್ಚು ರನ್ ಮಾಡಿರಲಿಲ್ಲ.

ಸ್ಪಿನ್ನರುಗಳಾದ ಪ್ರಸನ್ನ, ಚಂದ್ರಶೇಖರ್, ಬೇಡಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಆ ಸರಣಿಯ ನಂತರ ಪಟೌಡಿ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಪಟೌಡಿ ಅವರ ಬಗ್ಗೆ ನನಗೆ ಹೆಚ್ಚು ತಿಳಿದದ್ದು ರಾಜನ್ ಬಾಲಾ, ರಾನ್ ಹೆಂಡ್ರಿಕ್ಸ್ ಅವರಂಥ ಖ್ಯಾತ ಕ್ರಿಕೆಟ್ ಲೇಖಕರು ಮತ್ತು ಪಟೌಡಿ ಅವರ ನೆಚ್ಚಿನ ಗೆಳೆಯನಾಗಿದ್ದ ಎಂ. ಎಲ್. ಜಯಸಿಂಹ ಅವರಂಥ ಸುರಸುಂದರ ಆಟಗಾರನಿಂದ.

ಪಟೌಡಿ, ಜಯಸಿಂಹ ಮತ್ತು ಅಬ್ಬಾಸ್ ಅಲಿ ಬೇಗ್ ಮೈದಾನದೊಳಗಷ್ಟೇ ಅಲ್ಲ, ಮೈದಾನದ ಹೊರಗೂ ಪ್ರಾಣಸ್ನೇಹಿತರಾಗಿದ್ದರು. ಹೈದರಾಬಾದಿನಲ್ಲೊಮ್ಮೆ ರಸಸಂಜೆಯಲ್ಲಿ ಸೇರಿದ್ದಾಗ, ಜಯಸಿಂಹ ಅವರ ಮಾತಿನಲ್ಲಿ ನವಾಬರ ದರ್ಬಾರೇ ಕಣ್ಣಮುಂದೆ ಬಂದಂತಾಗಿತ್ತು.

ಜೈ, `ಸಿಂಹ~ದಂತೆಯೇ ಬದುಕಿದ ಆಟಗಾರ. ಪಟೌಡಿ ಬದುಕಿನುದ್ದಕ್ಕೂ ಹುಲಿಯಂತೆಯೇ ಜೀವಿಸಿದರು. ಅವರ ವ್ಯಕ್ತಿತ್ವಕ್ಕೆ ರಾಜಗಾಂಭೀರ್ಯದ ಜೊತೆ ಒಬ್ಬ ಪರಿಪೂರ್ಣ ಕ್ರಿಕೆಟ್ ಆಟಗಾರನ ಸೌಜನ್ಯ, ಸಭ್ಯತೆ, ಕೌಶಲ, ಹುಡುಗಾಟ ಎಲ್ಲವೂ ಇದ್ದವು.

ಅವರಲ್ಲಿ ಮುಚ್ಚುಮರೆ ಇರಲಿಲ್ಲ. ಬಿಳಿಯರು ಆಟದ ಜೊತೆ ಗುಂಡಿನ ಸವಿಯ ಸೊಬಗನ್ನೂ ಕಲಿಸಿಕೊಟ್ಟಿದ್ದರಲ್ಲವೇ? ಆದರೆ ನವಾಬನ ಎದುರು ಕುಡಿಯಲು ಆಟಗಾರರಿಗೆ ಯಾಕೋ ಅಳುಕು ಇತ್ತಂತೆ. ಎಲ್ಲರೂ ಹಣ್ಣಿನ ರಸದಲ್ಲಿ ವಿಸ್ಕಿ ಬೆರೆಸಿ ಕುಡಿಯುತ್ತಿದ್ದರಂತೆ.

ಅದನ್ನು ನೋಡಿದ ಪಟೌಡಿ, `ಮುಚ್ಚುಮರೆ ಬೇಡ, ಕುಡಿಯಿರಿ. ಆದರೆ ನಾಳೆಯ ಆಟ ನೆನಪಿನಲ್ಲಿರಲಿ~ ಎಂದು ಪ್ರೀತಿಯಿಂದ ಹೇಳುತ್ತಿದ್ದರಂತೆ. 

ವೆಸ್ಟ್‌ಇಂಡೀಸ್‌ನಲ್ಲಿ ನಾಯಕ ನಾರಿ ಕಂಟ್ರ್ಯಾಕ್ಟರ್ ತಲೆಗೆ ಪೆಟ್ಟು ತಿಂದು (ಗ್ರಿಫಿತ್ ಅವರ ಬೌನ್ಸರ್‌ನಲ್ಲಿ ತಲೆಗೆ ಅಪ್ಪಳಿಸಿದ ಚೆಂಡು ಕಂಟ್ರ್ಯಾಕ್ಟರ್ ಅವರ ಕ್ರಿಕೆಟ್ ಜೀವನ ಮುಗಿಯುವಂತೆ ಮಾಡಿತು.) ಆಗ ನಾಯಕನಾಗಿ ಆಯ್ಕೆಯಾದವರು 21 ವರ್ಷ ವಯಸ್ಸಿನ ಪಟೌಡಿ.

ಅದೊಂದು ದಾಖಲೆಯೇ ಆಗಿತ್ತು. ಅಷ್ಟು ಕಿರಿಯ ವಯಸ್ಸಿನ ಆಟಗಾರ ನಾಯಕನಾಗಿದ್ದುದು ಅದೇ ಮೊದಲು. (ಕೆಲವು ವರ್ಷಗಳ ಹಿಂದೆ ಜಿಂಬಾಬ್ವೆಯ ಟಟೆಂಡು ಟೈಬು ಆ ದಾಖಲೆ ಮುರಿದರು. ಆತ ನಾಯಕನಾದಾಗ 21 ತುಂಬಲು ನಾಲ್ಕು ದಿನ ಬೇಕಿದ್ದವು.) ಒಂದೆರಡು ವರ್ಷಗಳ ಹಿಂದೆಯಷ್ಟೇ, ಇಂಗ್ಲೆಂಡ್‌ನಲ್ಲಿ, ಕಾರು ಅಪಘಾತದಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದ ಅವರಿಗೆ ಅವರಲ್ಲಿದ್ದ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವವೇ ಆಟದಲ್ಲಿ ಮುಂದುವರಿಯುವಂತೆ ಮಾಡಿತು.

ಆದರೆ ಮಗನ ಸಾಧನೆಯನ್ನು ನೋಡುವ ಅದೃಷ್ಟ ಅವರ ತಂದೆಗೆ ಇರಲಿಲ್ಲ. ಭಾರತ ಮತ್ತು ಇಂಗ್ಲೆಂಡ್ ಪರ ಆಡಿದ್ದ ಇಫ್ತಿಕಾರ್ ಅಲಿಖಾನ್ ಪಟೌಡಿ, ಮಗನಿಗೆ ಕೇವಲ 11 ವರ್ಷ ಆಗಿದ್ದಾಗ ತೀರಿಕೊಂಡಿದ್ದರು.

“ಪಟೌಡಿ ಬ್ಯಾಟ್ ಮಾಡುವಾಗ ಚೆಂಡು ಒಂದರ ಮೇಲೊಂದರಂತೆ ಎರಡೆರಡು ಕಾಣುತ್ತಿತ್ತು. ಆದರೆ ಚುರುಕುಬುದ್ಧಿಯ ಆತ ನಿಜವಾದ ಚೆಂಡನ್ನು ಗುರುತಿಸಿ ಆಡುತ್ತಿದ್ದರು” ಎಂದು ರಾಜನ್ ಬಾಲಾ ಹೇಳುತ್ತಿದ್ದರು.

ಭಾರತ ಕ್ರಿಕೆಟ್‌ನಲ್ಲಿ ಪಶ್ಚಿಮ ವಲಯದವರ ಪ್ರಾಬಲ್ಯ ಹೆಚ್ಚಿದಾಗ ದಕ್ಷಿಣ ವಲಯದ ಆಟಗಾರರಿಗೆ ಅವಕಾಶ ಸಿಗುವಂತೆ ಮಾಡಿದವರು ಪಟೌಡಿ. ಪ್ರಸನ್ನ, ಚಂದ್ರಶೇಖರ್ ಮತ್ತು ಜಿ.ಆರ್. ವಿಶ್ವನಾಥ್ ಬಗ್ಗೆ ಅವರಿಗೆ ಅಪಾರ ವಿಶ್ವಾಸ ಇತ್ತು. ಆದರೆ ಕೊನೆಗೊಮ್ಮೆ ಅವರು ಪಶ್ಚಿಮದವರ ರಾಜಕೀಯಕ್ಕೇ ಬಲಿಯಾದರು.

1971 ರಲ್ಲಿ      ವೆಸ್ಟ್‌ಇಂಡೀಸ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಕೊಳ್ಳಲಿದ್ದ ಭಾರತ ತಂಡದ ನಾಯಕನ ಆಯ್ಕೆ ಪ್ರಶ್ನೆ ಎದುರಾಯಿತು. ಇಬ್ಬರು ಆಯ್ಕೆಗಾರರು ಪಟೌಡಿ ಪರ ಇದ್ದರೆ ಇನ್ನಿಬ್ಬರು ಅಜಿತ್ ವಾಡೇಕರ್ ಪರವಾಗಿದ್ದರು.

ಆಗ ಕ್ರಿಕೆಟ್ ಮಂಡಳಿ ಅಧ್ಯಕ್ಷ ವಿಜಯ್ ಮರ್ಚೆಂಟ್ ತಮ್ಮ `ಪರಮಾಧಿಕಾರ~ ಉಪಯೋಗಿಸಿ ವಾಡೇಕರ್ ಅವರನ್ನು ನಾಯಕನನ್ನಾಗಿ ಮಾಡಿದರು. ವಾಡೇಕರ್ ಅದೃಷ್ಟ ಎಷ್ಟೊಂದು ಚೆನ್ನಾಗಿತ್ತೆಂದರೆ, ಅವರು ಎರಡೂ ಸರಣಿಗಳನ್ನು ಗೆದ್ದರು. ಅದರೆ ಮುಂದಿನ ವರ್ಷಗಳಲ್ಲಿ ಇದೇ ವಾಡೇಕರ್ ನಾಯಕತ್ವದ ತಂಡ ಇಂಗ್ಲೆಂಡ್‌ನಲ್ಲಿ 42 ರನ್ನುಗಳಿಗೆ ಉರುಳಿದಾಗ ನಾಯಕಪಟ್ಟ ಕಳೆದುಕೊಂಡರು.

ಆಗ ಮರಳಿ ನಾಯಕರಾದವರು ಪಟೌಡಿ. ಆದರೆ ಅಷ್ಟೊತ್ತಿಗೆ ಅವರು ತಮ್ಮ ನಿವೃತ್ತಿಯ ಬಗ್ಗೆ ಯೋಚಿಸಿದ್ದರಿಂದ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿ ನಂತರ ಬ್ಯಾಟ್ ಕೆಳಗಿಟ್ಟರು.

ಈ ಕ್ರಿಕೆಟ್ ನವಾಬನನ್ನು ಮೋಹಿಸಿದ ಸುಂದರಿಯರಿಗೆ ಲೆಕ್ಕ ಇಲ್ಲ. ಆದರೆ `ಹುಲಿ~ ವಿಕೆಟ್ ಹಾರಿಸಿದವರು ಗುಳಿಕೆನ್ನೆಯ ಚೆಲುವೆ ಶರ್ಮಿಳಾ ಟ್ಯಾಗೋರ್.  ಅಬ್ಬಾಸ್ ಅಲಿ ಬೇಗ್ ತಮ್ಮ ಚೊಚ್ಚಲು ಟೆಸ್ಟ್‌ನಲ್ಲೇ ನೂರು ಹೊಡೆದಾಗ ಯುವತಿಯೊಬ್ಬಳು ಮೈದಾನದೊಳಗೆ ನುಗ್ಗಿ ಆತನನ್ನು ಚುಂಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

ರಸಿಕ ಜಯಸಿಂಹ ಕೂಡ `ಕೃಷ್ಣ~ನಂತೆಯೇ ಇದ್ದರೆಂದು ಅವರನ್ನು ಹತ್ತಿರದಿಂದ ನೋಡಿದವರು ಹೇಳುತ್ತಿದ್ದರು. ರಾಜರಿಗೆ ಸಹಜವಾದ ಬೇಟೆಯಾಡುವ ಹವ್ಯಾಸ ಪಟೌಡಿ ಅವರಿಗೂ ಇತ್ತು.

ವಯಸ್ಸು 60 ದಾಟಿದ ಮೇಲೂ ಬೇಟೆಯಾಡಲು ಹೋಗುತ್ತಿದ್ದ ಅವರು ಆರು ವರ್ಷಗಳ ಹಿಂದೆ, ಕೃಷ್ಣಮೃಗಗಳನ್ನು ಬೇಟೆಯಾಡುವಾಗ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರು.

ಪಟೌಡಿ-ಶರ್ಮಿಳಾ (ಮದುವೆ ನಂತರ ಆಯೇಷಾ ಸುಲ್ತಾನಾ) ವೈವಾಹಿಕ ಜೀವನ ಕೊನೆಯವರೆಗೂ ಸುಮಧುರವಾಗಿಯೇ ನಡೆದುಕೊಂಡು ಬಂತು. 42 ವರ್ಷಗಳ ಸುದೀರ್ಘ ದಾಂಪತ್ಯದ ನಂತರ ಈಗ ಶರ್ಮಿಳಾ ಏಕಾಂಗಿ. ಮಕ್ಕಳೆಲ್ಲ ತಾಯಿಯಂತೆಯೇ ಸಿನಿಮಾರಂಗಕ್ಕೆ ಕಾಲಿಟ್ಟರು. ಪಟೌಡಿ ಕ್ರಿಕೆಟ್ ನಂತರ ರಾಜಕೀಯಕ್ಕೆ ಬರುವ ಯತ್ನ ಮಾಡಿದರಾದರೂ ಅದರಲ್ಲಿ ಯಶಸ್ಸು ಸಿಗಲಿಲ್ಲ.

(ಇಂದಿನ ಕ್ರಿಕೆಟ್‌ಗೆ ಬೇಕಾದ ರಾಜಕೀಯ ಬುದ್ಧಿ ಹಾಗೂ ರಾಜಕೀಯಕ್ಕೆ ಬೇಕಾದ ಕ್ರಿಕೆಟ್ ಹುಚ್ಚು ಎರಡೂ ಅವರಲ್ಲಿ ಇರಲಿಲ್ಲವೆಂದು ಕಾಣುತ್ತದೆ!) ಆದರೆ ಅವರು ಕ್ರಿಕೆಟ್ ರಂಗಕ್ಕೆ `ಟೈಗರ್~ ಆಗಿಯೇ ಉಳಿದರು. ಅವರಿಗೆ `ಟೈಗರ್~ ಎಂದು ಹೆಸರು ಬಂದದ್ದು ಕ್ರಿಕೆಟ್‌ನಿಂದಲೇ ಎಂದೇ ಬಹಳಷ್ಟು ಜನ ಭಾವಿಸಿದ್ದರು.
 
ಯಾರೂ ಅದನ್ನು ಸ್ಪಷ್ಟವಾಗಿ ಹೇಳಿರಲಿಲ್ಲ. ಆದರೆ ಹುಡುಗನಾಗಿದ್ದಾಗ ಮನೆಯವರೇ ಆತನನ್ನು `ಟೈಗರ್~ ಎಂದು ಕರೆದದ್ದಾಗಿ ಅವರೇ ಒಂದು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು. ಟೈಗರ್ ಗರ್ಜನೆ ನಿಂತರೂ ಅದರ ಹೆಜ್ಜೆ ಗುರುತನ್ನು ಯಾರಿಗೂ ಅಳಿಸಲು ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT