ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಬ್ಲೆಟ್ ಕೊಳ್ಳುವ ಮುನ್ನ

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ಟ್ಯಾಬ್ಲೆಟ್ ಎಂದರೇನು? ಸರಿಯಾಗಿ ಹೇಳುವುದಾದರೆ ಟ್ಯಾಬ್ಲೆಟ್ ಗಣಕ (ಕಂಪ್ಯೂಟರ್) ಎನ್ನಬೇಕು. ಇವು ಗಾತ್ರದಲ್ಲಿ ನೆಟ್‌ಬುಕ್ ಮತ್ತು ದೊಡ್ಡ ಫೋನ್‌ಗಳ ನಡುವಿನ ಗಾತ್ರದವು. ಇವುಗಳ ಗಾತ್ರ ಸುಮಾರು 7 ಇಂಚಿನಿಂದ 10 ಇಂಚು ಉದ್ದ, 5 ರಿಂದ 8 ಇಂಚು ಅಗಲ, ಸುಮಾರು ಅರ್ಧ ಇಂಚು ದಪ್ಪ ಇರುತ್ತವೆ. ಇವುಗಳಿಗೆ ಭೌತಿಕ ಕೀಲಿಮಣೆ ಇರುವುದಿಲ್ಲ. ಬದಲಿಗೆ ಸ್ಪರ್ಶಸಂವೇದಿ (touchsensitive screen) ಪರದೆ ಇರುತ್ತದೆ. ಮಾಡುತ್ತಿರುವ ಕೆಲಸಕ್ಕೆ ಅಗತ್ಯವಿದ್ದಲ್ಲಿ ಅದರಲ್ಲಿ ಕೀಲಿಮಣೆ ಮೂಡಿಬರುತ್ತದೆ. ಜನಸಾಮಾನ್ಯರಿಗೆ ಬಹುಮಟ್ಟಿಗೆ ಅಗತ್ಯವಿರುವ ಕೆಲಸಗಳನ್ನೆಲ್ಲ ಇದು ಮಾಡಬಲ್ಲುದು.

ಉದಾಹರಣೆಗೆ ಇಮೇಲ್, ಅಂತರಜಾಲ ವೀಕ್ಷಣೆ, ಚಾಟ್ ಮಾಡುವುದು, ವಿಡಿಯೋ ಚಾಟ್ ಮಾಡುವುದು, ಕಡತ ತಯಾರಿ, ವಿ-ಪುಸ್ತಕ (ಇಬುಕ್) ಓದುವುದು, ಫೋಟೊ ತೆಗೆಯುವುದು, ಸಂಗೀತ ಆಲಿಸುವುದು, ವಿಡಿಯೋ ವೀಕ್ಷಣೆ  ಇತ್ಯಾದಿ. ಇವುಗಳನ್ನು ಬಳಸಿ ಪ್ರೋಗ್ರಾಮಿಂಗ್, ಉತ್ತಮ ಗ್ರಾಫಿಕ್ಸ್, ಚಿತ್ರಸಂಚಲನೆ (ಅನಿಮೇಶನ್) ಎಲ್ಲ ತಯಾರಿಸಲು ಅಸಾಧ್ಯ. ಅಂದರೆ ಒಂದು ಶಕ್ತಿಶಾಲಿ ಗಣಕ ಬೇಕೆನ್ನುವವರಿಗೆ ಈ ಟ್ಯಾಬ್ಲೆಟ್‌ಗಳು ಹೇಳಿದ್ದಲ್ಲ. ಅಂತೂ ಟ್ಯಾಬ್ಲೆಟ್ ಬೇಕೇ ಬೇಕು ಎನ್ನುವವರಿಗೆ ಎದುರಾಗುವ ಮುಂದಿನ ಪ್ರಶ್ನೆ -ಟ್ಯಾಬ್ಲೆಟ್ ಕೊಳ್ಳುವುದು ಹೇಗೆ? ಉತ್ತರಕ್ಕೆ ಪ್ರಯತ್ನಿಸೋಣ.

ಕಾರ್ಯಾಚರಣ ವ್ಯವಸ್ಥೆ
ಟ್ಯಾಬ್ಲೆಟ್ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (Operating System - OS)  ಮುಖ್ಯವಾದವು ಆಪಲ್ ಐಓಎಸ್ (iOS), ಆಂಡ್ರಾಯ್ಡ ಮತ್ತು ಮೈಕ್ರೋಸಾಫ್ಟ್ ವಿಂಡೋಸ್8. ಇವುಗಳಲ್ಲಿ ಐಓಎಸ್ ಮತ್ತು ಆಂಡ್ರಾಯ್ಡ ಶೇಕಡ 90ರಷ್ಟು ಮಾರುಕಟ್ಟೆ ಪಾಲು ಹೊಂದಿವೆ.

ಇವೆರಡಕ್ಕೂ ಸುಮಾರು ಆರೇಳು ಲಕ್ಷಗಳಷ್ಟು ಕಿರುತಂತ್ರಾಂಶಗಳು (app)  ಲಭ್ಯವಿವೆ. ಆಪಲ್ ಕಂಪೆನಿಯ ಐಪ್ಯಾಡ್ ಐಓಎಸ್ ಅನ್ನು ಬಳಸುತ್ತದೆ. ಐಪ್ಯಾಡ್ ಗುಣಮಟ್ಟದಲ್ಲಿ ತುಂಬ ಉತ್ತಮವಾಗಿದೆ. ಆದರೆ ತುಂಬ ದುಬಾರಿ ಮತ್ತು ಬಳಕೆದಾರರಿಗೆ ಅದರ ಮೇಲೆ ಸಂಪೂರ್ಣ ಅಧಿಕಾರ ನೀಡುವುದಿಲ್ಲ. ಉದಾಹರಣೆಗೆ ಅದನ್ನು ಯುಎಸ್‌ಬಿ ಡ್ರೈವ್ ಆಗಿ ಬಳಸಲು ಸಾಧ್ಯವಿಲ್ಲ. ಸಿನಿಮಾ ನೋಡಬೇಕಿದ್ದರೂ ಫೈಲನ್ನು ಅದರ ಮಾದರಿಗೆ ಮಾರ್ಪಡಿಸಿ ನೋಡಬೇಕು. ಆಂಡ್ರಾಯ್ಡ ಬಹುಮಟ್ಟಿಗೆ ಇದರ ವಿರುದ್ಧವಾಗಿದೆ.

ಆಂಡ್ರಾಯ್ಡ ಆಧಾರಿತ ಟ್ಯಾಬ್ಲೆಟ್‌ಗಳು ಅತಿ ಕಡಿಮೆ ದರಕ್ಕೂ ದೊರೆಯುತ್ತವೆ. ಆದುದರಿಂದಲೇ ಭಾರತದಲ್ಲಿ ತುಂಬ ಜನಪ್ರಿಯವಾಗಿರುವುದು ಆಂಡ್ರಾಯ್ಡ. ವಿಂಡೋಸ್8 ಆಧಾರಿತ ಟ್ಯಾಬ್ಲೆಟ್‌ಗಳು ಇನ್ನೂ ಭಾರತದಲ್ಲಿ ಲಭ್ಯವಿಲ್ಲ. ಬ್ಲ್ಯಾಕ್‌ಬೆರ‌್ರಿ ಓಎಸ್ ಆಧಾರಿತ ಟ್ಯಾಬ್ಲೆಟ್ ಒಂದೇ ಒಂದು ಇದೆ. 

ಪ್ರೋಸೆಸರ್
ಪ್ರೋಸೆಸರ್ ವೇಗ ಹೆಚ್ಚಿದ್ದಷ್ಟು ಆದಷ್ಟು ಒಳ್ಳೆಯದು. ಇದನ್ನು ಗಿಗಾಹರ್ಟ್ಸ್‌ಗಳಲ್ಲಿ ಅಳೆಯುತ್ತಾರೆ. ಎರಡು ಅಥವಾ ಹೆಚ್ಚು ಹೃದಯ ಇದ್ದರೆ ಇನ್ನೂ ಒಳ್ಳೆಯದು. ಇಂತಹವುಗಳನ್ನು ಡ್ಯುಯಲ್ ಕೋರ್ (ಎರಡು ಹೃದಯ) ಅಥವಾ ಕ್ವಾಡ್‌ಕೋರ್ (ನಾಲ್ಕು ಹೃದಯ) ಎನ್ನುತ್ತಾರೆ. 

ಗಾತ್ರ ಮತ್ತು ರೆಸೊಲ್ಯೂಶನ್
ಸಾಮಾನ್ಯವಾಗಿ ಟ್ಯಾಬ್ಲೆಟ್‌ಗಳು 7ರಿಂದ10 ಇಂಚಿನ ಗಾತ್ರದಲ್ಲಿ ದೊರೆಯುತ್ತವೆ. 7 ಇಂಚಿನವನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳಬಹುದು. ಇವು ಇಬುಕ್ ರೀಡರ್ ಆಗಿ ಬಳಕೆಗೆ ಯೋಗ್ಯ. ಸಾಮಾನ್ಯ ಪುಸ್ತಕದ ಗಾತ್ರದಲ್ಲೇ ಇರುತ್ತವೆ. ದೊಡ್ಡ ಕಿಸೆಯಿದ್ದರೆ ಕಿಸೆಯಲ್ಲಿ ಇಟ್ಟುಕೊಳ್ಳಲೂ ಬಹುದು. ಸಿನಿಮಾ ನೋಡಲೂಬಹುದು. ಆದರೆ ಸಿನಿಮಾ ನೋಡಲು 10 ಇಂಚಿನ ಟ್ಯಾಬ್ಲೆಟ್ ಹೆಚ್ಚು ಸೂಕ್ತ. ಪರದೆಯ ರೆಸೊಲ್ಯೂಶನ್ ಹೆಚ್ಚಿಗೆ ಇದ್ದಷ್ಟು ಒಳ್ಳೆಯದು. ಐಪ್ಯಾಡ್‌ನ ರೆಸೊಲ್ಯೂಶನ್ 2048 x1536 ಪಿಕ್ಸೆಲ್ ಇದೆ. ಆಂಡ್ರಾಯ್ಡ ಟ್ಯಾಬ್ಲೆಟ್‌ಗಳಲ್ಲಿ ಹಲವು ರೆಸೊಲ್ಯೂಶನ್‌ನ ಮಾದರಿಗಳು ದೊರೆಯುತ್ತವೆ. ಕನಿಷ್ಠ 1280 x 800 ಪಿಕ್ಸೆಲ್ ಇದ್ದರೆ ಒಳ್ಳೆಯದು. ಟ್ಯಾಬ್ಲೆಟ್‌ನ ದಪ್ಪ ಕಡಿಮೆ ಇದ್ದರೆ ಕೈಯಲ್ಲಿ ಹಿಡಿಯಲು ಅನುಕೂಲ.  

ಪರದೆ
ಈಗ ಎಲ್ಲ ಟ್ಯಾಬ್ಲೆಟ್‌ಗಳು ಸ್ಪರ್ಶಸಂವೇದಿ ಕೆಪಾಸಿಟಿವ್ ಪರದೆಯನ್ನು ಒಳಗೊಂಡಿವೆ. ಇವು ರೆಸಿಸ್ಟಿವ್ ಪರದೆಗಳಿಗಿಂತ ಒಳ್ಳೆಯವು. ಇದು ಎಷ್ಟು ವೇಗವಾಗಿ ಸ್ಪಂದಿಸುತ್ತದೆ ಎಂಬುದು ಬಹು ಮುಖ್ಯವಾಗುತ್ತದೆ. ಈ ವಿಷಯವನ್ನು ಅಂತರಜಾಲ ತಾಣದಲ್ಲಿ ನೀಡಿರುವ ಗುಣವೈಶಿಷ್ಟ್ಯ ನೋಡಿ ತಿಳಿಯಲು ಅಸಾಧ್ಯ. ಕೈಯಲ್ಲಿ ಹಿಡಿದು ನೋಡಿಯೇ ತಿಳಿಯಬೇಕು.

ಗ್ಯಾಜೆಟ್‌ಗಳ ವಿಮರ್ಶೆ ನೀಡುವ ಹಲವು ಜಾಲತಾಣಗಳಿವೆ. ಅಲ್ಲಿ ಓದಿಯೂ ತಿಳಿಯಬಹುದು. ಅಮೆಝಾನ್‌ನಂತಹ ಜಾಲತಾಣಗಳಲ್ಲಿ ಗ್ರಾಹಕರು ವಿಮರ್ಶೆ ಬರೆಯುವ ಸೌಲಭ್ಯ ನೀಡಿದ್ದಾರೆ. ಅವನ್ನೂ ಓದಬಹುದು. ಸರಳವಾಗಿ ಹೇಳುವುದಾದರೆ ಕಡಿಮೆ ಬೆಲೆಯ ಟ್ಯಾಬ್ಲೆಟ್‌ಗಳಲ್ಲಿ ಬಳಸುವ ಪರದೆಯ ಸಂವೇದನೆ ನಿಧಾನವಾಗಿರುತ್ತದೆ.

ಮೆಮೊರಿ
ಮೆಮೊರಿ ಹೆಚ್ಚಿಗೆ ಇದ್ದಷ್ಟು ಒಳ್ಳೆಯದು. 8, 16, 32 ಅಥವಾ 64 ಗಿಗಾಬೈಟ್ ಮೆಮೊರಿಯ ಮಾದರಿಗಳು ಲಭ್ಯವಿವೆ. ಮೆಮೊರಿ ಹೆಚ್ಚಿಸಲು ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ ಇದ್ದರೆ ಒಳ್ಳೆಯದು. ಅಂತೆಯೇ ಯುಎಸ್‌ಬಿ ಕಿಂಡಿಯ ಮೂಲಕ ಯುಎಸ್‌ಬಿ ಡ್ರೈವ್ ಜೋಡಿಸುವಂತಿದ್ದರೆ ಇನ್ನೂ ಒಳ್ಳೆಯದು. ಸಾಮಾನ್ಯವಾಗಿ ಆಂಡ್ರಾಯ್ಡ 2.3 ಅಥವಾ 4 ಆಧಾರಿತ ಟ್ಯಾಬ್ಲೆಟ್‌ಗಳಲ್ಲಿ ಈ ಸೌಲಭ್ಯ ಇದೆ. ಐಪ್ಯಾಡ್‌ನಲ್ಲಿ ಈ ಸೌಲಭ್ಯಗಳಿಲ್ಲ.

ಅಂತರಜಾಲ ಸಂಪರ್ಕ
ಹೆಚ್ಚಿನವುಗಳಲ್ಲಿ ವೈಫೈ ಸೌಲಭ್ಯ ಇರುತ್ತದೆ. ಜೊತೆಗೆ 3G ಇದ್ದರೆ ಇನ್ನೂ ಒಳ್ಳೆಯದು. ಆಗ ಸಿಮ್ ಕಾರ್ಡ್ ಹಾಕಿ ಈ ಸೌಲಭ್ಯವಿರುವ ಎಲ್ಲ ಸ್ಥಳಗಳಲ್ಲಿ ಅಂತರಜಾಲ ಸಂಪರ್ಕ ಪಡೆಯಬಹುದು. ಕೇವಲ ವೈಫೈ ಆದರೆ ಮನೆಯ ಒಳಗೆ, ಕಚೇರಿಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಕಾಫಿ ಕೇಂದ್ರಗಳಲ್ಲಿ, ಇತ್ಯಾದಿ ವೈಫೈ ಸೌಲಭ್ಯ ಇರುವಲ್ಲಿ ಮಾತ್ರ ಅಂತರಜಾಲ ವೀಕ್ಷಣೆ, ಇಮೇಲ್ ಕಳುಹಿಸುವುದು ಮತ್ತು ಪಡೆಯುವುದು ಮಾಡಬಹುದು. 3G ಇದ್ದರೆ ಮೊಬೈಲ್ ಫೋನಿನಂತೆ ಬಳಸಲೂಬಹುದು. ಆದರೆ ದೊಡ್ಡ ಟ್ಯಾಬ್ಲೆಟ್ ಅನ್ನು ಕಿವಿಗೆ ಇಟ್ಟುಕೊಂಡು ಮಾತನಾಡುವುದು ಅಸಾಧ್ಯ. ಬ್ಲೂಟೂತ್ ಅಥವಾ ಹೆಡ್‌ಫೋನ್ ಜೋಡಿಸಿ ಮಾತನಾಡಬಹುದು.

ಕ್ಯಾಮೆರಾ
ಕ್ಯಾಮೆರಾ ಉತ್ತಮವಾದಷ್ಟೂ ಒಳ್ಳೆಯದು. ಹೆಚ್ಚಿಗೆ ಮೆಗಾಪಿಕ್ಸೆಲ್ ಇದ್ದ ಮಾತ್ರಕ್ಕೆ ಕ್ಯಾಮೆರಾ ಉತ್ತಮವಾಗಬೇಕಿಲ್ಲ. ಅಷ್ಟಕ್ಕೂ ಟ್ಯಾಬ್ಲೆಟ್‌ನಲ್ಲಿ ಕ್ಯಾಮೆರಾ ಬೇಕೇ ಬೇಕೆ? ನೀವೇ ತೀರ್ಮಾನಿಸಿ. ಎರಡು ಕ್ಯಾಮೆರಾ ಇದ್ದರೆ ವಿಡಿಯೋ ಚಾಟ್ ಮಾಡಲು ಅನುಕೂಲ. ಕೆಲವು ಟ್ಯಾಬ್ಲೆಟ್‌ಗಳಲ್ಲಿ ವಿಡಿಯೋ ಮಾಡುವ ಸೌಲಭ್ಯ ಇರುತ್ತದೆ. ಹೈಡೆಫಿನಿಶನ್ ವಿಡಿಯೋ ಮಾಡುವಂತಿದ್ದರೆ ಇನ್ನೂ ಒಳ್ಳೆಯದು.
 
ಕಿರುತಂತ್ರಾಂಶ ಲಭ್ಯತೆ
ಐಪ್ಯಾಡ್ (ಐಓಎಸ್) ಮತ್ತು ಆಂಡ್ರಾಯ್ಡ ಎರಡಕ್ಕೂ ಸುಮಾರು 7 ಲಕ್ಷ ಕಿರುತಂತ್ರಾಂಶಗಳು ಲಭ್ಯವಿವೆ. ಒಂದು ವಿಷಯ ಇಲ್ಲಿ ಗಮನಿಸಬೇಕು. ಹಲವು ಕಿರುತಂತ್ರಾಂಶಗಳ ಐಓಎಸ್ ಮತ್ತು ಆಂಡ್ರಾಯ್ಡ ಆವೃತ್ತಿಗಳೆರಡೂ ಲಭ್ಯವಿದ್ದರೂ ಐಓಎಸ್ ಆವೃತ್ತಿ ಬಹುಮಟ್ಟಿಗೆ ಉಚಿತವಾಗಿರುವುದಿಲ್ಲ. ಆದರೆ ಅದರ ಆಂಡ್ರಾಯ್ಡ ಆವೃತ್ತಿ ಉಚಿತವಾಗಿರುವ ಸಾದ್ಯತೆ ಹೆಚ್ಚು. ಇದಕ್ಕೆ ಮುಖ್ಯ ಕಾರಣ ಆಂಡ್ರಾಯ್ಡ ಕಿರುತಂತ್ರಾಂಶವು ಜಾಹೀರಾತು ಆಧಾರಿತವಾಗಿದ್ದು ಅದರ ಮೂಲಕ ಹಣ ಮಾಡುತ್ತದೆ. ಬ್ಲ್ಯಾಕ್‌ಬೆರ‌್ರಿ ಓಎಸ್‌ಗೆ ಕೆಲವು ಸಾವಿರ ಕಿರುತಂತ್ರಾಂಶಗಳು ಮಾತ್ರ ಲಭ್ಯವಿವೆ. ವಿಂಡೋಸ್8ಕ್ಕೂ ಲಕ್ಷಗಟ್ಟಳೆ ಕಿರುತಂತ್ರಾಂಶಗಳು ಲಭ್ಯವಿವೆ. 

ಲೇಖಕರ ಇಮೇಲ್: gadgetloka@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT