ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಅಧ್ಯಕ್ಷಾವಧಿಯ ಚರಮಗೀತೆಯ ಮೊದಲ ಚರಣವೇ?

Last Updated 15 ಜೂನ್ 2017, 19:50 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತಮ್ಮ ಹುಟ್ಟುಹಬ್ಬವನ್ನು ಜೂನ್ 14ರಂದು ಆಚರಿಸಿಕೊಳ್ಳುತ್ತಿದ್ದ ಡೊನಾಲ್ಡ್ ಟ್ರಂಪ್‌ ಅವರಿಗೆ ಉಡುಗೊರೆಯಾಗಿ ದೊರಕಿದ್ದು ಅವರ ನೆಮ್ಮದಿಯನ್ನು ಕಳೆಯುವಂತಹ ಸುದ್ದಿ: 2016ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ರಷ್ಯಾ ಮಧ್ಯಪ್ರವೇಶ ಮಾಡಿತ್ತೆಂಬ ಆಪಾದನೆಗಳ ತನಿಖೆ ಮಾಡುತ್ತಿದ್ದ ವಿಶೇಷ ನ್ಯಾಯವಾದಿ ರಾಬರ್ಟ್ ಮ್ಯುಲ್ಲರ್ ಈಗ ಟ್ರಂಪ್ ಅವರೇ ನ್ಯಾಯಪ್ರಕ್ರಿಯೆಗೆ ಅಡಚಣೆಯನ್ನು (ಅಬ್ಸಟ್ರಕ್ಷನ್ ಆಫ್‌ ಜಸ್ಟೀಸ್) ಮಾಡಿದ್ದಾರೆ ಎನ್ನುವ ಆರೋಪದ ತನಿಖೆ ಆರಂಭಿಸಿದ್ದಾರೆ.

ಮ್ಯುಲ್ಲರ್  ಅಮೆರಿಕದ ಪ್ರತಿಷ್ಠಿತ ಆಂತರಿಕ ಭದ್ರತೆ ಮತ್ತು ತನಿಖಾ ಸಂಸ್ಥೆಯಾದ ಫೆಡರಲ್ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್‌ನ (ಎಫ್‌ಬಿಐ) ನಿರ್ದೇಶಕರಾಗಿದ್ದವರು. ಮೇ 17ರಂದು ಅವರಿಗೆ ಅಮೆರಿಕದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಹಾಳುಮಾಡಲು ರಷ್ಯಾ ಮಾಡಿದ ಪ್ರಯತ್ನಗಳ ಸತ್ಯಾಸತ್ಯಗಳ ಅರಿಯುವ ಜವಾಬ್ದಾರಿಯನ್ನು ನೀಡಲಾಗಿತ್ತು. 2016ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಟ್ರಂಪ್‌ ಅವರ ತಂಡವು ರಷ್ಯನ್ನರೊಡನೆ ಯಾವ ಬಗೆಯ ಸಂಬಂಧವನ್ನು ಹೊಂದಿತ್ತು ಎನ್ನುವುದು ಸಹ ಈ ತನಿಖೆಯ ಒಂದು ಮುಖ್ಯ ಆಯಾಮವಾಗಿತ್ತು.

ಈಗ ಟ್ರಂಪ್ ಅವರೇ ತನಿಖೆಯ ನೇರ ಕೇಂದ್ರಬಿಂದುವಾಗಿದ್ದಾರೆ ಎನ್ನುವ ಅಂಶ ಅವರ ಅಧ್ಯಕ್ಷಾವಧಿಯ ಚರಮಗೀತೆಯ ಮೊದಲ ಚರಣವೇ? ಈ ಪ್ರಶ್ನೆ ಇಂದು ತೀವ್ರವಾಗಿ ಕೇಳಿಬರುತ್ತಿದ್ದರೂ ಇದು ಹೊಸ ವಿಚಾರವೇನಲ್ಲ. ಐದು ತಿಂಗಳ ಹಿಂದೆ ಜನವರಿ 20ರಂದು ಟ್ರಂಪ್ ಅಧಿಕಾರ ಸ್ವೀಕರಿಸಿದಾಗಲೇ, ತಮ್ಮ ಪೂರ್ಣ ಅವಧಿಯನ್ನು ಟ್ರಂಪ್ ಅವರು ಪೂರೈಸುವುದಿಲ್ಲ ಎನ್ನುವ ಸಂಶಯವನ್ನು ಡೇವಿಡ್ ಬ್ರೂಕ್ಸ್ ಸೇರಿದಂತೆ ಹಲವು ಸಂಪ್ರದಾಯವಾದಿ (ಕನ್ಸರ್ವೇಟಿವ್) ಪಂಡಿತರೇ ವ್ಯಕ್ತಪಡಿಸಿದ್ದರು. ವಾರಗಳು, ತಿಂಗಳುಗಳು ಕಳೆದಂತೆ ಟ್ರಂಪ್ ಅವರ ನಡವಳಿಕೆ, ಹೇಳಿಕೆ ಮತ್ತು ನೀತಿಗಳು ಅಂತಹ ಸಾಧ್ಯತೆಯನ್ನು ಹೆಚ್ಚುಸುತ್ತಿವೆ.

ಈಗ ಟ್ರಂಪ್‌ ಮೇಲಿರುವ ನ್ಯಾಯಪ್ರಕ್ರಿಯೆಯ ಅಡಚಣೆಯ ಆರೋಪ ಗಂಭೀರವಾದುದು. ಇದು ಹೊರಹೊಮ್ಮುತ್ತಿರುವ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಡೊನಾಲ್ಡ್ ಟ್ರಂಪ್ ರಷ್ಯಾದ ಜೊತೆಗೆ ಹೊಂದಿದ್ದ ಸಂಬಂಧದ ಮೂರು ಆಯಾಮಗಳನ್ನು ಗಮನಿಸಬೇಕು. ಮೊದಲನೆಯದಾಗಿ, ತಮ್ಮ ಬದುಕಿನುದ್ದಕ್ಕೂ ಟ್ರಂಪ್, ರಷ್ಯನ್ನರ ಜೊತೆಗೆ ಹೊಂದಿದ್ದ ಸಂಬಂಧದ ಬಗ್ಗೆ, ಅವರು ವ್ಯಾವಹಾರಿಕವಾಗಿ ರಷ್ಯಾದಿಂದ ಪಡೆದಿರಬಹುದಾದ ಅನುಕೂಲಗಳ ಬಗ್ಗೆ ಹಲವು ಅನುಮಾನಗಳಿವೆ. ತಮ್ಮ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಟ್ರಂಪ್ ಕಳೆದ ಎರಡು ದಶಕಗಳಲ್ಲಿ ರಷ್ಯಾದ ಉದ್ಯಮಿಗಳು ಮತ್ತು ಭೂಗತಲೋಕದ ವ್ಯಕ್ತಿಗಳಿಂದ ಬಂಡವಾಳ ಪಡೆದಿದ್ದರು. ರಷ್ಯಾ ಹಾಗೂ ಇತರ ಸೋವಿಯೆತ್ ರಿಪಬ್ಲಿಕ್‌ಗಳ ಭೂಗತಲೋಕಕ್ಕೆ ಸೇರಿದವರಿಗೆ ತಮ್ಮ ಕಟ್ಟಡಗಳಲ್ಲಿ  ಮನೆಗಳನ್ನು ಮಾರಿದ್ದಾರೆ ಹಾಗೂ ಆ ಮೂಲಕ ನ್ಯಾಯಮ್ಮತವಲ್ಲದ ದಾರಿಗಳಲ್ಲಿ ಗಳಿಸಿದ ಹಣವನ್ನು ಪಡೆದಿದ್ದಾರೆ ಎನ್ನುವುದೆಲ್ಲವೂ ಪುರಾವೆಸಹಿತ ಸಾಬೀತಾಗಿದೆ.

ಹೀಗೆ ಕಪ್ಪುಹಣದ ಚಲಾವಣೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಾಮಾನ್ಯವಾಗಿ ನಡೆಯುತ್ತದೆ ಎನ್ನುವುದು ಸತ್ಯವಾದರೂ, ಟ್ರಂಪ್ ಅವರ ಸಂದರ್ಭದಲ್ಲಿ ಸಮಸ್ಯಾತ್ಮಕವಾಗಬಹುದಾದ ವಿಚಾರಗಳೂ ಇವೆ. ಉದಾಹರಣೆಗೆ, ಟ್ರಂಪ್ ಅವರಿಗೆ ಅಮೆರಿಕ ಅಥವಾ ಪಶ್ಚಿಮ ಯುರೋಪಿನ ಬ್ಯಾಂಕುಗಳು ಬಂಡವಾಳ ಒದಗಿಸಲು ಹಿಂದೇಟು ಹಾಕಿದಾಗ, ರಷ್ಯಾದ ಬ್ಯಾಂಕುಗಳಿಂದ ಬಂಡವಾಳ ದೊರಕಿದೆ. ಅಲ್ಲದೆ ರಷ್ಯಾ ಹಾಗೂ ಪೂರ್ವ ಯುರೋಪಿನ ಮಾಫಿಯಾಗಳಿಗೆ ಸೇರಿದವರು ನೂರಾರು ಅಪಾರ್ಟ್‌ಮೆಂಟ್‌ಗಳನ್ನು ಟ್ರಂಪ್ ಅವರ ವಿವಿಧ ಕಟ್ಟಡಗಳಲ್ಲಿ ಕೊಂಡಿದ್ದರು. ಇಂತಹ ಮಾರಾಟಗಳ ಬಗ್ಗೆ ಹಾಗೂ ಈ ವ್ಯಕ್ತಿಗಳ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆಗಳು ಎರಡು ದಶಕಗಳಿಂದಲೂ ತನಿಖೆ ನಡೆಸಿವೆ.

ಈ ಹಿನ್ನೆಲೆಯಲ್ಲಿ ಟ್ರಂಪ್ ಅವರೇನಾದರೂ ಬೆದರಿಕೆಗೆ ಈಡಾಗಬಹುದಾದ ಕೆಲಸಗಳನ್ನು ಮಾಡಿರಬಹುದೇ ಎನ್ನುವ ಅನುಮಾನ ಅಮೆರಿಕದ ತನಿಖಾ ಸಂಸ್ಥೆಗಳ ಅಧಿಕಾರಿಗಳ ಮನಸ್ಸಿನಲ್ಲಿ 2016ರ ನವೆಂಬರ್ ಚುನಾವಣೆಗೆ ಮೊದಲೇ ಮೂಡಿದುದು ಸಹ ಉಂಟು. ಇದರ ಬಗ್ಗೆ ವಿವರಗಳನ್ನು ಕಲೆಹಾಕಿ, ಕಡತವನ್ನು ಸಿದ್ಧಪಡಿಸಲು ಇಂಗ್ಲೆಂಡಿನ ಹಿರಿಯ ಗೂಢಚಾರರೊಬ್ಬರಿಗೆ ಅಮೆರಿಕನ್ ಅಧಿಕಾರಿಗಳು ಕೇಳಿದ್ದರು. ಆ ವರದಿಯ ಕೆಲವು ಅಂಶಗಳು ಸಹ ಇತ್ತೀಚಿನ ತಿಂಗಳುಗಳಲ್ಲಿ ಬಹಿರಂಗಗೊಂಡಿವೆ.

ಇವಿಷ್ಟು ವ್ಯವಹಾರಗಾರ ಟ್ರಂಪ್‌ ಅವರಿಗೆ ಸಂಬಂಧಿಸಿದ ವಿಚಾರಗಳು. ನಾವು ಗಮನಿಸಬೇಕಿರುವ ಎರಡನೆಯ ಆಯಾಮವು ಟ್ರಂಪ್ ಅವರ ರಾಜಕೀಯ ಜೀವನಕ್ಕೆ ಸಂಬಂಧಿಸಿದುದು. ಅಮೆರಿಕದ ಸಾರ್ವಜನಿಕ ಜೀವನದಲ್ಲಿ ಉದ್ಯಮಿಯಾಗಿ, ಮನರಂಜಕನಾಗಿ ಖ್ಯಾತಿ ಗಳಿಸಿದ್ದ ಟ್ರಂಪ್, ರಾಜಕಾರಣವನ್ನು ಪ್ರವೇಶಿಸಿದ್ದು 2015ರಲ್ಲಿ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಉಮೇದುದಾರಿಕೆಯನ್ನು ಬಯಸಿ ಅವರು ಸ್ಪರ್ಧೆಗಿಳಿದರು. ರಿಪಬ್ಲಿಕನ್ ಪಕ್ಷದ ಪ್ರೈಮರಿ ಚುನಾವಣೆಗಳಲ್ಲಿ ಅವರಿಗೆ ಯಶಸ್ಸು ಸಿಕ್ಕಿದ್ದು ಸಹ ಅನಿರೀಕ್ಷಿತವೇ. ಆದರೆ ಅವರು ರಿಪಬ್ಲಿಕನ್ ಅಭ್ಯರ್ಥಿಯಾದ ನಂತರ ರಷ್ಯನ್ನರು ಟ್ರಂಪ್‌ ಅವರನ್ನು ಅಧ್ಯಕ್ಷರನ್ನಾಗಿಸಬೇಕೆಂದು ಪ್ರಯತ್ನ ಪಟ್ಟರು ಎನ್ನುವುದು ಎಲ್ಲರಿಗೂ ತಿಳಿದಿರುವ, ಯಾರೂ ಅಲ್ಲಗಳೆಯದ ವಿಚಾರ. ರಷ್ಯನ್ನರ ಪ್ರಯತ್ನಗಳು ಯಾವ ಪ್ರಮಾಣದಲ್ಲಿ ಪ್ರಭಾವವನ್ನು ಬೀರಿರಬಹುದು ಅಥವಾ ಅವುಗಳು ಟ್ರಂಪ್‌ ಗೆಲುವಿಗೆ ನಿರ್ಣಾಯಕ ಅಂಶಗಳಾದವೇ ಎನ್ನುವುದನ್ನು ಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಹಿಲರಿ ಕ್ಲಿಂಟನ್‌ರ ಆಂತರಿಕ ಚರ್ಚೆಗಳನ್ನು, ಇ–ಮೇಲ್‌ಗಳನ್ನು ಕದ್ದು, ಸಾರ್ವಜನಿಕವಾಗಿ ಬಿಡುಗಡೆ ಮಾಡಿರುವುದು ನಿಜವೇ. ಜೊತೆಗೆ ಹೀಗೆ ಬಿಡುಗಡೆ ಮಾಡಿದ ದಾಖಲೆಗಳು ಹಿಲರಿಯವರ ವಿಶ್ವಾಸಾರ್ಹತೆಗೆ ಧಕ್ಕೆಯನ್ನು ಉಂಟುಮಾಡಿದವು ಎನ್ನುವುದು ಸಹ ಸತ್ಯ.

ಈಗ ರಾಬರ್ಟ್ ಮ್ಯುಲ್ಲರ್ ತನಿಖೆ ನಡೆಸುತ್ತಿರುವುದು ರಷ್ಯನ್ನರ ಈ ಕಾರ್ಯಾಚರಣೆಗಳ ವಿರುದ್ಧವೇ. ಆದರೆ ಇದಕ್ಕೆ ಮತ್ತೊಂದು ಆಯಾಮವಿದೆ. ಅದೇನೆಂದರೆ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರ ಸಮಿತಿಗೆ ಸೇರಿದ ಕಾರ್ಯಕರ್ತರು ಯಾರಾದರೂ ರಷ್ಯನ್ನರ ಜೊತೆಗೆ ಅನುಚಿತ ಸಂಬಂಧವನ್ನು ಹೊಂದಿದ್ದರೆ ಹಾಗೂ ಅವರಿಗೆ ರಷ್ಯನ್ನರು ಡೆಮಾಕ್ರಟಿಕ್ ಪಕ್ಷದವರ ವಿರುದ್ಧ ನಡೆಸುತ್ತಿದ್ದ ಸಂಚುಗಳ ಅರಿವಿತ್ತೆ ಎನ್ನುವ ಸಂಶಯ. ಇದಕ್ಕೆ ಪುಷ್ಟಿ ಕೊಡುವಂತಹ ಅನುಮಾನಗಳು ಮೂಡಿದ್ದು ನಾನು ಮೇಲೆ ಗುರುತಿಸಿದ ಬಗೆಯ ಟ್ರಂಪ್ ಹಾಗೂ ರಷ್ಯನ್ನರ ನಡುವಿನ ದೀರ್ಘಕಾಲೀನ ವ್ಯಾವಹಾರಿಕ ಸಂಬಂಧಗಳಿಂದ. ಇದರ ಜೊತೆಗೆ ಟ್ರಂಪ್ ಪ್ರಚಾರ ಸಮಿತಿಯಲ್ಲಿ ಮುಖ್ಯಪಾತ್ರ ವಹಿಸಿದ್ದ ಕೆಲವರು ರಷ್ಯನ್ನರಿಂದ ಹಲವು ಬಗೆಯ ಲಾಭ ಪಡೆದಿದ್ದವರು. ಉದಾಹರಣೆಗೆ, ಜನರಲ್ ಮೈಕೇಲ್ ಫ್ಲಿನ್ ರಷ್ಯಾದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನೂರಾರು ಸಾವಿರ ಡಾಲರ್‌ಗಳನ್ನು ಸಂಭಾವನೆಯಾಗಿ ಪಡೆದಿದ್ದರು. ಅಲ್ಲದೆ ಟರ್ಕಿ ಸೇರಿದಂತೆ ಹಲವು ದೇಶಗಳ ಪರವಾಗಿ ವಾಷಿಂಗ್ಟನ್‌ನಲ್ಲಿ ಲಾಬಿ ಮಾಡಿದ್ದರು. ಅಲ್ಲದೆ ಸ್ವತಃ ಟ್ರಂಪ್ ಅವರ ಅಳಿಯ ಜರಡ್ ಕುಶ್‍ನರ್ ರಷ್ಯನ್ನರ ಜೊತೆಗೆ ಹೊಂದಿದ್ದ ವ್ಯಾವಹಾರಿಕ ಸಂಬಂಧಗಳ ಬಗ್ಗೆ ಹಲವು ಪ್ರಶ್ನೆಗಳಿವೆ.

ಈಗ ಟ್ರಂಪ್ ಅವರಿಗೆ ಸಮಸ್ಯೆಯಾಗಿರುವುದು ಅವರ ಬೆಂಬಲಿಗರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ರಷ್ಯನ್ನರ ಜೊತೆಗೆ ತಮಗಿದ್ದ ಸಂಬಂಧದ ವಿವರಗಳನ್ನು ಸರಿಯಾಗಿ ನೀಡಲಿಲ್ಲ ಎನ್ನುವ ಆರೋಪ. ಈ ಆರೋಪಕ್ಕೆ ಸಾಕಷ್ಟು ಬುನಾದಿಯೂ ಇದೆ. ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿದ್ದ ಜನರಲ್ ಫ್ಲಿನ್ ಮತ್ತು ಈಗಿನ ಅಟಾರ್ನಿ ಜನರಲ್ ಜೆಫ್‌ ಸೆಷನ್ಸ್ ಇಬ್ಬರೂ ತಮ್ಮ ನೇಮಕಾತಿಯನ್ನು ಅನುಮೋದಿಸುವ ಅಮೆರಿಕದ ಸೆನೆಟ್‌ಗೆ ತಪ್ಪು ಮಾಹಿತಿ ನೀಡಿದರು. ಹಾಗಾಗಿ ಫ್ಲಿನ್ ರಾಜೀನಾಮೆ ನೀಡಬೇಕಾಗಿ ಬಂದರೆ, ರಷ್ಯನ್ನರ ಹಸ್ತಕ್ಷೇಪದ ತನಿಖೆಯ ಉಸ್ತುವಾರಿಯನ್ನು ತಾವು ವಹಿಸುವುದಿಲ್ಲ ಎಂದು ಸೆಷನ್ಸ್ ಹೇಳಬೇಕಾಯಿತು. ಇವುಗಳ ನಡುವೆ ಟ್ರಂಪ್ ಅವರ ಅಳಿಯ ಸಹ ರಷ್ಯನ್ನರ ಜೊತೆಗೆ 2016ರ ಚುನಾವಣೆಗಳ ನಂತರ ಅನುಚಿತ ಸಂಬಂಧ ಹೊಂದಿದ್ದರು ಹಾಗೂ ರಷ್ಯನ್ನರ ರಹಸ್ಯ ಸಂಪರ್ಕ ಸಾಧನಗಳನ್ನು ವಾಷಿಂಗ್ಟನ್‌ನಲ್ಲಿ  ಬಳಸುವ ಬಗ್ಗೆ ಯೋಜಿಸಿದ್ದರು ಎನ್ನುವುದು ಈಗ ಬಯಲಾಗಿದೆ.

ಶೀತಲಯುದ್ಧದ ದಿನಗಳಿಂದಲೂ ಅಮೆರಿಕದ ಎಲ್ಲ ಅಧ್ಯಕ್ಷರನ್ನೂ ರಷ್ಯಾ ಎನ್ನುವ ಗುಮ್ಮ ಕಾಡುತ್ತಿದೆ. ಆದರೆ ಅವರಿಗೆಲ್ಲ ರಷ್ಯನ್ನರು ವಿರೋಧಿಗಳಾಗಿದ್ದರೆ, ಟ್ರಂಪ್‌ ಅವರಿಗೆ ಈಗ ದುಃಸ್ವಪ್ನವಾಗುತ್ತಿರುವವರು ಅವರಿಗೆ ಚಿರಪರಿಚಿತರಾಗಿರುವ ರಷ್ಯನ್ನರು. ಈಗ ತಮಗೆ ಮುಜುಗರ ತರಬಹುದಾದ ಅವರ ಜೊತೆಗಿನ ಸಂಬಂಧವನ್ನು ಮುಚ್ಚಿಡಲು ಇಲ್ಲವೇ ಈ ಸಂಬಂಧಗಳ ಬಗೆಗಿನ ತನಿಖೆಯನ್ನೇ ಕೊನೆಮಾಡಲು ಟ್ರಂಪ್ ಹವಣಿಸುತ್ತಿದ್ದಾರೆ. ಇದರ ಅಂಗವಾಗಿಯೇ ಎಫ್‌ಬಿಐ ನಿರ್ದೇಶಕರಾಗಿದ್ದ ಜೇಮ್ಸ್ ಕೋಮಿಯವರನ್ನು ಮೇ 9ರಂದು ತೆಗೆದುಹಾಕಿದರು. ಕೋಮಿಯವರನ್ನು ವಜಾ ಮಾಡಿದ್ದು ಟ್ರಂಪ್‍ ಹಾಗೂ ಅವರ ಸಹವರ್ತಿಗಳ ಬಗೆಗಿನ ಅನುಮಾನಗಳನ್ನು ಹೆಚ್ಚಿಸಿತೇ ಹೊರತು ಕಡಿಮೆ ಮಾಡಲಿಲ್ಲ. ಕಳೆದ ವಾರ ಸೆನೆಟ್ ಮುಂದೆ ತಮ್ಮ ಸಾಕ್ಷ್ಯವನ್ನು ನೀಡಿದ ಕೋಮಿಯವರು ಟ್ರಂಪ್‌ ಅವರ ಪ್ರಾಮಾಣಿಕತೆ ಹಾಗೂ ಬದ್ಧತೆಗಳ ಬಗ್ಗೆಯೇ ಮೂಲಭೂತ ಪ್ರಶ್ನೆಗಳನ್ನು ಎತ್ತಿದರು. ರಷ್ಯಾದ ಕುರಿತಾದ ತನಿಖೆಗಳನ್ನು ನಿಲ್ಲಿಸುವಂತೆ ನೇರವಾಗಿ, ಪರೋಕ್ಷವಾಗಿ ಕೇಳಿದರು ಎಂದರು. ಇಂದು ನ್ಯಾಯಪ್ರಕ್ರಿಯೆಯ ಅಡಚಣೆಯ ಆರೋಪ ಹೊರಹೊಮ್ಮಿರುವುದು ಸಹ ಈ ಹಿನ್ನೆಲೆಯಲ್ಲಿಯೇ.

ಟ್ರಂಪ್ ಒಬ್ಬ ವಿಲಕ್ಷಣ, ಅತಿರೇಕದ, ಸ್ವಕೇಂದ್ರಿತ ವ್ಯಕ್ತಿ. ಅವರಿಗೆ ಅಥವಾ ಅವರ ನಂಬಿಕಸ್ಥ ನಿಕಟವರ್ತಿಗಳಿಗೆ ರಾಜಕಾರಣದ ಒಳಸುಳಿಗಳನ್ನು ನಿರ್ವಹಿಸುವ ಅನುಭವವಾಗಲೀ  ಸಾರ್ವಜನಿಕ ಒಳಿತಿನ ಕಲ್ಪನೆಯಾಗಲೀ ಇಲ್ಲ. ಈಗ ಅವರನ್ನು ಕಷ್ಟಕ್ಕೆ ಸಿಲುಕಿಸಿರುವುದು ರಷ್ಯಾದ ಕುರಿತಾದ ತನಿಖೆಗಳನ್ನು ನಿಲ್ಲಿಸಲು ಅವರು ತೆಗೆದುಕೊಂಡ ಕ್ರಮಗಳು ಹಾಗೂ ಅವುಗಳ ಬಗ್ಗೆ ಸಾರ್ವಜನಿಕವಾಗಿ ಬಡಾಯಿ ಕೊಚ್ಚಿಕೊಂಡಿದ್ದು. ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಒಂದು ಹೇಳಿಕೆಯಿದೆ: ಅಪರಾಧಕ್ಕಿಂತ ಅದನ್ನು ಮುಚ್ಚಿಡಲು ಮಾಡುವ ಪ್ರಯತ್ನಗಳು ಹೆಚ್ಚು ಕೆಡುಕನ್ನು ಉಂಟುಮಾಡುತ್ತವೆ. ಹಿಂದೆ ನಿಕ್ಸನ್ನರ ಸಂದರ್ಭದಲ್ಲಾದಂತೆ ಈಗ ಸಹ ಟ್ರಂಪ್ ತಮ್ಮ ಅಧ್ಯಕ್ಷ ಪದವಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸಿದರೆ ಯಾರೂ ಆಶ್ಚರ್ಯಪಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT