ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಗೆಲುವು ಅಮೆರಿಕದ ಬಗ್ಗೆ ಏನನ್ನು ಹೇಳುತ್ತದೆ?

Last Updated 10 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಅಮೆರಿಕದ ರಾಜಕಾರಣದಲ್ಲೊಂದು ವಿರೋಧಾಭಾಸವಿದೆ. ಅದೇನೆಂದರೆ ತಾನು ಸಾಂಪ್ರದಾಯಿಕ ರಾಜಕಾರಣಿಯಲ್ಲ, ವಾಷಿಂಗ್ಟನ್ ನಗರದ ಶಕ್ತಿ ರಾಜಕಾರಣಕ್ಕೆ ಸೇರಿದವನಲ್ಲ ಎಂದು ಹೇಳುತ್ತಲೇ ರಾಜಕೀಯ ಅಧಿಕಾರವನ್ನು ಅಭ್ಯರ್ಥಿಗಳು ಬಯಸುತ್ತಾರೆ. ಈಗ ಅಧಿಕಾರದಲ್ಲಿರುವ ರಾಜಕಾರಣಿಗಳು ವಿವಿಧ ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆಯಲ್ಲಿ ತೊಡಗಿರುವುದರಿಂದ, ದೇಶದ ಸಾಮಾನ್ಯ ಜನರನ್ನು ತಾವು ಮಾತ್ರ ಸಮರ್ಥವಾಗಿ ಪ್ರತಿನಿಧಿಸಲು ಸಾಧ್ಯ ಎಂದು ವಾದಿಸುತ್ತಾರೆ. ಎಂಟು ವರ್ಷಗಳ ಹಿಂದೆ 2008ರಲ್ಲಿ ಬರಾಕ್ ಒಬಾಮ ಇಂತಹುದೆ ವಾದವನ್ನು ಮಂಡಿಸಿದ್ದರು. ಅವರಿಗೆ ಮೊದಲು 2000ದಲ್ಲಿ ಜಾರ್ಜ್ ಬುಷ್‌, 1992ರಲ್ಲಿ ಬಿಲ್ ಕ್ಲಿಂಟನ್ ಮತ್ತು 1980ರಲ್ಲಿ ರೊನಾಲ್ಡ್ ರೇಗನ್ ಸಹ ತಾವು ವಾಷಿಂಗ್ಟನ್ ವ್ಯವಸ್ಥೆಯ ಹೊರಗಿನಿಂದ ಬಂದವರು ಎಂದು ಹೇಳಿದ್ದರು. ರಾಜಕೀಯ ಮನೆತನದ ಬುಷ್‌ ಸಹ ಟೆಕ್ಸಾಸ್‌ನ ರಾಜ್ಯಪಾಲರಾಗಿದ್ದವರು. ಸಾಮಾನ್ಯ ಕೌಟುಂಬಿಕ ಹಿನ್ನೆಲೆಯವರೆ ಆದ ಕ್ಲಿಂಟನ್ ಮತ್ತು ರೇಗನ್ ಇಬ್ಬರೂ ಆರ್ಕನ್ಸಾಸ್ ಮತ್ತು ಕ್ಯಾಲಿಫೋರ್ನಿಯಾ ರಾಜ್ಯಗಳ ರಾಜ್ಯಪಾಲರಾಗಿದ್ದವರು. ಒಬಾಮ ಸಹ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮೊದಲು ಮೂರು ವರ್ಷಗಳ ಕಾಲ ಅಮೆರಿಕದ ಸೆನೆಟ್‌ನಲ್ಲಿ ಇಲಿನಾಯ್ ರಾಜ್ಯವನ್ನು ಪ್ರತಿನಿಧಿಸಿದ್ದರು.

‘ವಾಷಿಂಗ್ಟನ್ ನಗರದ ಸಾಂಪ್ರದಾಯಿಕ ರಾಜಕಾರಣವನ್ನು ಬದಲಿಸುತ್ತೇನೆ’ ಎಂದು ಸಮರ್ಥವಾಗಿ ವಾದಿಸುವ ಅಭ್ಯರ್ಥಿಗೆ ಅಮೆರಿಕದ ಮತದಾರರು ಸಾಮಾನ್ಯವಾಗಿ ಒಲಿಯುತ್ತಾರೆ. ಇದು ಅಧ್ಯಕ್ಷೀಯ ಚುನಾವಣೆಯಲ್ಲಿ ಮಾತ್ರವಲ್ಲ, ಇತರ ರಾಷ್ಟ್ರೀಯ ಮತ್ತು ಸ್ಥಳೀಯ ಚುನಾವಣೆಗಳಲ್ಲೂ ಕಾಣಬರುವ ಸತ್ಯ. ಹೀಗೆ ಅಸಾಂಪ್ರದಾಯಿಕ ರಾಜಕಾರಣಿಯಾಗಿ, ಬದಲಾವಣೆಯ ಅಭ್ಯರ್ಥಿಯಾಗಿ ತನ್ನನ್ನು ಬಿಂಬಿಸಿಕೊಳ್ಳುವ ವ್ಯಕ್ತಿ ಅಧಿಕಾರಕ್ಕೆ ಬಂದರೆ ಮುಂದಿನ ಚುನಾವಣೆಯ ವೇಳೆಗೆ ವ್ಯವಸ್ಥೆಯ ಅಂಗವೆಂಬ ಟೀಕೆಗೆ ಗುರಿಯಾಗುತ್ತಾರೆ. ವಾಷಿಂಗ್ಟನ್ ನಗರವನ್ನು ಅವರು ಬದಲಾಯಿಸುತ್ತಾರೊ ಇಲ್ಲವೆ ಅದೇ ಅವರನ್ನು ಬದಲಾಯಿಸುತ್ತದೆಯೊ ಗೊತ್ತಾಗುವುದಿಲ್ಲ. ಆಯ್ಕೆಯಾದ ಹೊರಗಿನವ ಮುಂದಿನ ಚುನಾವಣೆಯ ವೇಳೆಗೆ ಪಕ್ಕಾ ಒಳಗಿನವರಾಗಿ ಅಮೆರಿಕದ ಮತದಾರರಿಗೆ ಕಾಣುತ್ತಾರೆ. ಅದಕ್ಕಾಗಿಯೆ ಎಂಟು ವರ್ಷಗಳ ಹಿಂದೆ ಆಶಾವಾದದ, ಹೊಸತನದ ಪ್ರತಿನಿಧಿಯಾಗಿ ಅಮೆರಿಕದ ರಾಜಕಾರಣದಲ್ಲಿ ಕಾಣಿಸಿಕೊಂಡಿದ್ದ ಬರಾಕ್ ಒಬಾಮರನ್ನು ಹಳಸಿದ ಮತ್ತು ವಿಫಲವಾದ ನೀತಿಗಳ ಸಂಕೇತವಾಗಿ ಮತದಾರ ನೋಡಿದ್ದಾನೆ. ಹಾಗಾಗಿ ಅವರ ವಿರೋಧಿ ರಿಪಬ್ಲಿಕನ್ ಪಕ್ಷವು ಇಂದು ಅಧ್ಯಕ್ಷ ಪದವಿಯನ್ನು, ಕಾಂಗ್ರೆಸ್‌ನ ಎರಡೂ ಸದನಗಳನ್ನು ನಿಯಂತ್ರಿಸುತ್ತಿದೆ. ಅವರ ಬಹುಮುಖ್ಯ ಶಾಸನಗಳು ಮತ್ತು ಅಂತರರಾಷ್ಟ್ರೀಯ ನೀತಿಗಳು ರದ್ದಾಗುವ ಅಪಾಯವನ್ನು ಎದುರಿಸುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಒಬಾಮರ ಡೆಮಾಕ್ರಟಿಕ್ ಪಕ್ಷವು ರಾಜಕೀಯ ಪ್ರಸ್ತುತತೆಯನ್ನು ಗಳಿಸಿಕೊಳ್ಳುವ ಯಾವುದೆ ಸಾಧ್ಯತೆಗಳು ಕಾಣಿಸುತ್ತಿಲ್ಲ. ವಿಪರ್ಯಾಸದ ಸಂಗತಿಯೆಂದರೆ ಎಂಟು ವರ್ಷಗಳ ಹಿಂದೆ ಒಬಾಮ ಸಹ ರಾಜಕೀಯವಾಗಿ ಇಂದು ರಿಪಬ್ಲಿಕನ್ನರು ಇರುವ ಪರಿಸ್ಥಿತಿಯಲ್ಲಿದ್ದರು. ಅವರ ಪಕ್ಷವು ಅಮೆರಿಕದ ಅಧ್ಯಕ್ಷತೆ ಮತ್ತು ಕಾಂಗ್ರೆಸ್ಸಿನ ನಿಯಂತ್ರಣ ಹೊಂದಿತ್ತು. 2008ರ ಆ ದಿನಗಳಲ್ಲಿ ರಿಪಬ್ಲಿಕನ್ನರು ಅಧಿಕಾರವನ್ನು ಮತ್ತೆ ಹೇಗೆ ಪಡೆಯಬಹುದು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. 

ಮಂಗಳವಾರದ (08–11–2016) ಚುನಾವಣೆಯ ಫಲಿತಾಂಶಗಳನ್ನೂ ಮೇಲಿನ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ನೋಡಬಹುದು. ಎಲ್ಲ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್, ಅಮೆರಿಕ ಕಂಡಿರುವ ಅತ್ಯಂತ ಅಸಾಂಪ್ರದಾಯಿಕ ರಾಜಕಾರಣಿಗಳಲ್ಲೊಬ್ಬರು. ರಿಯಲ್ ಎಸ್ಟೇಟ್ ಉದ್ಯಮಿ, ಹೋಟೆಲ್ ಮಾಲೀಕ ಮತ್ತು ಟೆಲಿವಿಷನ್ ರಿಯಾಲಿಟಿ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿ ಅವರು ಅಮೆರಿಕದ ಸಾರ್ವಜನಿಕ ಬದುಕಿನಲ್ಲಿದ್ದರು. ಅವರ ಉದ್ದಿಮೆಗಳ ಬಗ್ಗೆ ಹಲವಾರು ಪ್ರಶ್ನೆಗಳು ಇನ್ನೂ ಇವೆ. ಅಲ್ಲದೆ ಟ್ರಂಪ್ ಇದುವರೆಗೆ ಯಾವುದೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ, ಯಾವುದೆ ಸಾರ್ವಜನಿಕ ಹುದ್ದೆಯನ್ನು ನಿರ್ವಹಿಸಿರಲಿಲ್ಲ. 

ಅಭ್ಯರ್ಥಿಯಾಗಿಯೂ ಸಹ ತನ್ನ ಅಸಾಂಪ್ರದಾಯಿಕ ಮತ್ತು ವಿಲಕ್ಷಣ ನಡವಳಿಕೆಗಳಿಗೆ, ಅತಿರೇಕದ ಹೇಳಿಕೆಗಳಿಗೆ ಟ್ರಂಪ್ ಅಮೆರಿಕನ್ನರ ಗಮನ ಸೆಳೆದಿದ್ದರು. ಅಮೆರಿಕವು ಎದುರಿಸುತ್ತಿರುವ ಯಾವುದೇ ಗಂಭೀರ ಸಮಸ್ಯೆಗೆ ಅವರು ವಾಸ್ತವದಲ್ಲಿ ಆಸರೆ ಪಡೆದಿದ್ದ ಸಾರ್ವಜನಿಕ ನೀತಿಗಳನ್ನು ಅವರು ದೇಶದ ಮುಂದಿಡಲಿಲ್ಲ. ಭಯೋತ್ಪಾದನೆ, ಅಕ್ರಮ ವಲಸೆ, ಹವಾಮಾನ ಬದಲಾವಣೆ (ಕ್ಲೈಮೇಟ್ ಚೇಂಜ್), ಅಮೆರಿಕದ ಆರ್ಥಿಕ ವ್ಯವಸ್ಥೆಯ ಪುನಶ್ಚೇತನ, ಅಮೆರಿಕನ್ನರಿಗೆ ಕೈಗೆಟಕುವ ದರಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವುದು ಇತ್ಯಾದಿ ಯಾವುದೇ ಸವಾಲಿಗೂ ಅವರ ಬಳಿ ಸಮರ್ಪಕ ಉತ್ತರಗಳಿರಲಿಲ್ಲ. ‘ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸುವುದು’ (ಮೇಕ್ ಅಮೆರಿಕ ಗ್ರೇಟ್ ಎಗೇನ್) ಎಂಬ ಅಡಿಬರಹವಷ್ಟೆ ಅವರ ಬಂಡವಾಳವಾಗಿತ್ತು. ಅಕ್ರಮ ವಲಸೆಯನ್ನು ತಡೆಯಲು ಅಮೆರಿಕದ ಗಡಿಯಲ್ಲಿ ಗೋಡೆ ಕಟ್ಟುವುದಾಗಿ ಘೋಷಿಸಿದರು. ಮಧ್ಯಪ್ರಾಚ್ಯದ ಭಯೋತ್ಪಾದಕರನ್ನು ಬಾಂಬ್ ಹಾಕಿ ನಾಶ ಮಾಡುವುದಾಗಿ ಹೇಳಿದರು. ಜೊತೆಗೆ ಅಮೆರಿಕದೊಳಗೆ ಭಯೋತ್ಪಾದಕರು ಬರದಂತೆ ತಡೆಯಲು, ಮುಸ್ಲಿಮರನ್ನು ದೇಶದೊಳಗೆ ಬಿಡುವುದಿಲ್ಲವೆಂದರು. ಅಮೆರಿಕದಲ್ಲಿ ಈಗಾಗಲೆ ಇರುವ ಮುಸ್ಲಿಮರ ನಿಷ್ಠೆಯನ್ನು ಪದೇ ಪದೇ ಪ್ರಶ್ನಿಸಿದರು. ಜಾಗತೀಕರಣದಿಂದ ಅಮೆರಿಕದ ವ್ಯಾಪಾರಕ್ಕೆ ಆಗಿರುವ ನಷ್ಟವನ್ನು ತುಂಬಿಕೊಳ್ಳಲು ಹೆಚ್ಚು ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ವಚನ ನೀಡಿದರು. ವಿಜ್ಞಾನವನ್ನು, ಅದರಲ್ಲೂ ಜಾಗತಿಕ ತಾಪಮಾನ ಹೆಚ್ಚಳ ಕುರಿತಾದ ಅಧ್ಯಯನಗಳನ್ನು ಪ್ರಶ್ನಿಸಿದರು.  ಪ್ರಜಾಸತ್ತಾತ್ಮಕ ಆಚರಣೆಗಳಿಗೆ ತಮ್ಮ ಬದ್ಧತೆಯನ್ನು ತೋರಿಸಲಿಲ್ಲ. ಬದಲಿಗೆ, ತಾನು ಗೆದ್ದರೆ ಮಾತ್ರ ಚುನಾವಣೆಯ ಫಲಿತಾಂಶಗಳನ್ನು ಒಪ್ಪುವುದಾಗಿ ಘೋಷಿಸಿದರು.  ಸರ್ವಾಧಿಕಾರಿಗಳನ್ನು, ಅದರಲ್ಲೂ ರಷ್ಯಾದ ವ್ಲಾದಿಮಿರ್ ಪುಟಿನ್‌್‌ರನ್ನು ಬಹಿರಂಗವಾಗಿ ಹೊಗಳಿದರು. ಅದೇ ಸಮಯದಲ್ಲಿ ತಮ್ಮ ದೇಶದ ನಾಯಕರುಗಳನ್ನೆ ಪ್ರಶ್ನಿಸಿದರು, ತೆಗಳಿದರು.

ಕಳೆದ 15 ತಿಂಗಳುಗಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್‌ರ ಮಾತುಗಳು ಮತ್ತು ನಡವಳಿಕೆಗಳೂ ವಿವಾದಾಸ್ಪದವಾಗಿವೆ. ಕಳೆದ ನಾಲ್ಕು ದಶಕಗಳಲ್ಲಿ ಆದಾಯ ತೆರಿಗೆ ದಾಖಲೆಗಳನ್ನು ಬಿಡುಗಡೆ ಮಾಡದ ಮೊದಲ ಅಧ್ಯಕ್ಷೀಯ ಅಭ್ಯರ್ಥಿಯವರು. ಬಹುಶಃ ಅದಕ್ಕೆ ಕಾರಣವೆಂದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಅವರು ಆದಾಯ ತೆರಿಗೆ ಕಟ್ಟಿಲ್ಲ. ಅವರು ಕಟ್ಟಬೇಕಿದ್ದ ಸುಮಾರು 90 ಕೋಟಿ  ಡಾಲರುಗಳಿಗೆ (ಅಂದರೆ ಇಂದಿನ ವಿನಿಮಯ ದರದಲ್ಲಿ ಆರು ಸಾವಿರ ಕೋಟಿ ರೂಪಾಯಿಗಳು) ವ್ಯಾವಹಾರಿಕ ಕಾರಣಗಳಿಂದ ತೆರಿಗೆ ವಿನಾಯಿತಿಯನ್ನು ಟ್ರಂಪ್ ಪಡೆದಿದ್ದಾರೆ. ತನ್ನ ಎಲ್ಲ ಎದುರಾಳಿಗಳನ್ನು ಟ್ರಂಪ್ ಭಾಷಣಗಳಲ್ಲಿ ಮತ್ತು ಟ್ವೀಟ್‌ಗಳಲ್ಲಿ ಹೀಗಳೆಯುತ್ತಲೇ ಬಂದರು. ಈ ತೆಗಳಿಕೆಗಳೇ ಟ್ರಂಪ್‌ರಿಗೆ ಅಪಾರ ಪ್ರಚಾರವನ್ನೂ ಒದಗಿಸಿದವು. ಹಿಲರಿ ಕ್ಲಿಂಟನ್‌ರನ್ನಂತೂ ‘ಮೋಸಗಾತಿ ಹಿಲರಿ’ (ಕ್ರುಕೆಡ್ ಹಿಲರಿ) ಎಂದೇ ಸಂಬೋಧಿಸಿದರು. ಆಕೆಯನ್ನು ‘ಜೈಲಿಗಟ್ಟಿ’ ಎಂದು ಪದೇ ಪದೇ ಅವರು, ಮತ್ತವರ ಬೆಂಬಲಿಗರು ಕೂಗಿದರು. ಬರಾಕ್ ಒಬಾಮರ ಪೌರತ್ವವನ್ನು ಟ್ರಂಪ್ ಪ್ರಶ್ನಿಸಿದರು ಹಾಗೂ ಅವರ ಅಧ್ಯಕ್ಷತೆಯೇ ಅಕ್ರಮವೆಂದು ವಾದಿಸಿದರು.

ಇದೆಲ್ಲವೂ ಕೇವಲ ಅಶುದ್ಧ ನಾಲಿಗೆಯ ಸಮಸ್ಯೆಯಲ್ಲ. ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರನ್ನು ಕುರಿತು ಅವರು ಹೊಲಸಾಗಿ ಮಾತನಾಡಿದ್ದ ವಿಡಿಯೊಗಳು ಬಿಡುಗಡೆಯಾದವು. ಟ್ರಂಪ್‌ರಿಂದ ಲೈಂಗಿಕ ಕಿರುಕುಳಗಳನ್ನು ಅನುಭವಿಸಿದ್ದ ಮಹಿಳೆಯರು ಬಹಿರಂಗವಾಗಿ ಅವರ ವಿರುದ್ಧ ದನಿಯೆತ್ತಿದರು. ತನಗೆ ಇಷ್ಟವಾದ ಮಹಿಳೆಯನ್ನು ಆಕರ್ಷಿಸಲು ಆಕೆಯ ಯೋನಿಗೆ ಕೈಹಾಕುತ್ತೇನೆ ಎಂದು ಹೇಳಿದ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಲು ಮೊದಲ ಬಾರಿಗೆ ಸ್ಪರ್ಧಿಸಿದ್ದ ಮಹಿಳೆಯೊಬ್ಬರನ್ನು ಸೋಲಿಸಿದರು. ಆ ಮಹಿಳೆ, ಹಿಲರಿ ಕ್ಲಿಂಟನ್‌. ಆಕೆಯ ಎಲ್ಲ ಮಿತಿಗಳ ನಡುವೆಯೂ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿಯೇ ಅತ್ಯಂತ ಅನುಭವಿ ಅಭ್ಯರ್ಥಿಯೆನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.

ಹಾಗಾದರೆ ಬಾಯಿ ಸರಿಯಿಲ್ಲದ, ಮೋಸದ ವ್ಯಾವಹಾರಿಕ ಒಪ್ಪಂದಗಳಿಗೆ ಹೆಸರಾದ, ಇಪ್ಪತ್ತು ವರ್ಷಗಳಿಂದ ಆದಾಯ ತೆರಿಗೆಯನ್ನೇ ಕಟ್ಟಿಲ್ಲದ ಮತ್ತು ಯಾವುದೇ ಸುಸಂಬದ್ಧ ಸಾರ್ವಜನಿಕ ನೀತಿಯನ್ನು ಪ್ರತಿಪಾದಿಸದ ಅಭ್ಯರ್ಥಿಯೊಬ್ಬರು ಅಮೆರಿಕದ ಅಧ್ಯಕ್ಷರಾಗಲು ಎಲ್ಲ ಅರ್ಹತೆಗಳನ್ನು ಪಡೆದಿದ್ದ ಎದುರಾಳಿಯನ್ನು ಸೋಲಿಸಿದ್ದು ಹೇಗೆ? ಈ ಪ್ರಶ್ನೆಗೆ ಸರಳ ಉತ್ತರಗಳಿಲ್ಲ. ಒಬಾಮರಿಗೆ ಹೋಲಿಸಿದಾಗ, ಹಿಲರಿಯವರ ಬಹುದೊಡ್ಡ ಬೆಂಬಲಿಗ ಸಮುದಾಯಗಳಾದ ಕಪ್ಪುವರ್ಣೀಯರು, ಹಿಸ್ಪಾನಿಕ್ ಸಮುದಾಯ ಮತ್ತು ಯುವಜನತೆ ಹಿಲರಿಯವರಿಗೆ ಶೇ 6ರಷ್ಟು ಕಡಿಮೆ ಮತ ನೀಡಿದ್ದಾರೆ. ಟ್ರಂಪ್ ಅವರಿಂದ ಹೆಚ್ಚು ಅಪಾಯವಿರುವುದು ಈ ಸಮುದಾಯಗಳಿಗೇನೆ. ಆದರೂ ಚಲಾವಣೆಯಾದ 12 ಕೋಟಿ ಮತಗಳಲ್ಲಿ, ಹಿಲರಿ ತಮ್ಮ ಎದುರಾಳಿ ಟ್ರಂಪ್‌ ಅವರಿಗಿಂತ 2 ಲಕ್ಷ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಆದರೆ ಅಮೆರಿಕದ ಎಲೆಕ್ಟೊರಲ್ ಕಾಲೇಜ್ ವ್ಯವಸ್ಥೆಯಡಿಯಲ್ಲಿ ಟ್ರಂಪ್ 30 ರಾಜ್ಯಗಳನ್ನು ಗೆದ್ದು, ಸುಲಭವಾಗಿ ಹಿಲರಿಯವರನ್ನು ಸೋಲಿಸಿದರು.

ಟ್ರಂಪ್ ಅವರ ಗೆಲುವನ್ನು ವರ್ಣ-ಜನಾಂಗೀಯ ರಾಜಕಾರಣದ ಹಿನ್ನೆಲೆಯಲ್ಲಿ ಮಾತ್ರ ವಿವರಿಸಬಹುದು ಎನ್ನಿಸುತ್ತಿದೆ. ಈಗ ಲಭ್ಯವಿರುವ ಮತದಾನದ ಮಾಹಿತಿಯನ್ನು ನೋಡಿದಾಗ, ಶ್ವೇತವರ್ಣೀಯರು ಒಂದಾಗಿ ಹಲವು ಮುಖ್ಯ ರಾಜ್ಯಗಳಲ್ಲಿ ಮತ ಹಾಕಿರುವಂತೆ ಕಾಣುತ್ತದೆ. ಅಂದರೆ ಮತಚಲಾವಣೆಯಲ್ಲಿ ನಿರ್ಣಾಯಕವಾಗುತ್ತಿರುವುದು ಅವರ ವರ್ಗೀಯ ಹಿತಾಸಕ್ತಿಯಲ್ಲ, ಬದಲಿಗೆ ಸಾಮಾಜಿಕ ಗುರುತು (ಐಡೆಂಟಿಟಿ). ವಲಸಿಗರು ಹೆಚ್ಚಾಗಿ, ತಮ್ಮ ದೇಶವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಆತಂಕ ಒಂದೆಡೆ ಶ್ವೇತವರ್ಣೀಯರನ್ನು ಕಾಡಿದರೆ, ಮತ್ತೊಂದೆಡೆ ಜಾಗತೀಕರಣದ ಕಾರಣದಿಂದ ಉತ್ಪಾದನಾ ಉದ್ದಿಮೆಗಳು ಅಮೆರಿಕದ ಆಚೆಗೆ ಹೋಗಿ ಹಲವು ಕೈಗಾರಿಕಾ ರಾಜ್ಯಗಳು ಬಿಕ್ಕಟ್ಟಿನಲ್ಲಿವೆ. ಇದಕ್ಕೆಲ್ಲ ಉತ್ತರವಾಗಿ ಶ್ವೇತವರ್ಣೀಯ ರಾಷ್ಟ್ರೀಯತೆ ಹೊರಹೊಮ್ಮುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಎರಡು ಅಂಶಗಳನ್ನು ನೀಡಬಹುದು. ಮೊದಲಿಗೆ, ಡೆಮಾಕ್ರಟಿಕ್  ಪಕ್ಷದ ಪ್ರಬಲ ಕೇಂದ್ರಗಳಾದ ಮಿಷಿಗನ್, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ರಾಜ್ಯಗಳನ್ನು ಮತ್ತು ಒಬಾಮ ಗೆದ್ದಿದ್ದ ಒಹಾಯೊ, ಐಯೊವ ಮತ್ತು ಫ್ಲಾರಿಡಾ ರಾಜ್ಯಗಳನ್ನು ಟ್ರಂಪ್ ಅನಿರೀಕ್ಷಿತವಾಗಿ ಗೆದ್ದರು. ಎರಡನೆಯದಾಗಿ,   ಪದವೀಧರ  ಶ್ವೇತ ವರ್ಣೀಯ ಮಹಿಳೆಯರಲ್ಲಿ ಶೇ 45ರಷ್ಟು ಮಂದಿ ಟ್ರಂಪ್‌ ಅವರಿಗೆ ಮತ ಹಾಕಿದ್ದಾರೆ.  ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗುವ ಅವಕಾಶವಿದ್ದಾಗಲೂ, ಸುಶಿಕ್ಷಿತ ಮಹಿಳೆಯರೆ ಸ್ತ್ರೀದ್ವೇಷಿಯಂತೆ ನಡೆದುಕೊಳ್ಳುವ ಪುರುಷನಿಗೆ ಮತಹಾಕಿದ್ದಾರೆ.

ಟ್ರಂಪ್‌ರ ವಿಜಯವು ಅಮೆರಿಕದ ಬಗ್ಗೆ ಏನನ್ನು ಹೇಳುತ್ತದೆ ಹಾಗೂ ಟ್ರಂಪ್ ಮುಂದಿನ ನಾಲ್ಕು ವರ್ಷಗಳಲ್ಲಿ ಅಮೆರಿಕವನ್ನು ಹೇಗೆ ಮುನ್ನಡೆಸುವರು ಎನ್ನುವ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಯ ಅವಶ್ಯಕತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT