ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೂಮನ್ ಗೆದ್ದಾಗ, ‘ಷಿಕಾಗೊ ಟ್ರಿಬ್ಯೂನ್’ ಸೋತಿತ್ತು

Last Updated 3 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಕ್ಷಣಗಣನೆ ಆರಂಭವಾಗಿದೆ. ಮುಂದಿನ ನಾಲ್ಕು ವರ್ಷ, ಅಮೆರಿಕವನ್ನು ಯಾರು ಮುನ್ನಡೆಸುತ್ತಾರೆ ಎನ್ನುವುದು ಇನ್ನು ನಾಲ್ಕು ಹಗಲು ಕಳೆದರೆ ಗೊತ್ತಾಗಿ ಬಿಡುತ್ತದೆ. ಸಮೀಕ್ಷೆಗಳು ಬಿಡಿ, ಅಂಕಿಸಂಖ್ಯೆಗಳನ್ನು ಬದಲಿಸುತ್ತಾ ಸೋಲು ಗೆಲುವಿನ ಭವಿಷ್ಯ ನುಡಿಯುತ್ತಿವೆ.
 
ಆದರೆ ಈ ಸಮೀಕ್ಷೆಗಳೆಲ್ಲಾ ನಿಜವಾಗಬೇಕೆಂದೇನಿಲ್ಲ. ಹಲವು ಬಾರಿ, ಚುನಾವಣಾ ಪೂರ್ವ ಸಮೀಕ್ಷೆಗಳು ಗೋತಾ ಹೊಡೆದ ಉದಾಹರಣೆಗಳಿವೆ. 2000ದಲ್ಲಿ ನಡೆದ ಚುನಾವಣೆಯಲ್ಲಿ ಅಲ್ ಗೋರ್ ಮತ್ತು ಬುಷ್ ನಡುವೆ ತೀವ್ರ ಸ್ಪರ್ಧೆ ಇತ್ತು.
 
ಫ್ಲಾರಿಡಾ ರಾಜ್ಯ ನಿರ್ಣಾಯಕವಾಗಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದರು. ಜಾರ್ಜ್ ಬುಷ್ ಅವರ ಸಹೋದರ ಜೆಬ್ ಬುಷ್, ಫ್ಲಾರಿಡಾ ಗೌರ್ನರ್ ಆಗಿದ್ದರು ಮತ್ತು ಅದು ರಿಪಬ್ಲಿಕನ್ ಪಕ್ಷದ ಪರವಾಗಿ ಇರಲಿದೆ ಎಂದು ಊಹಿಸಲಾಗಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆ ನಡೆಸಿದ ಸಂಸ್ಥೆಯೊಂದು, ಫ್ಲಾರಿಡಾವು ಅಲ್ ಗೋರ್ ಪಾಲಾಗಿದೆ ಎಂದು ಸಾರಿತು. 
 
ಸರಿ, ತಕ್ಷಣವೇ ಮಾಧ್ಯಮಗಳು ಅಮೆರಿಕ ನಕ್ಷೆಯಲ್ಲಿ ಫ್ಲಾರಿಡಾಕ್ಕೆ ನೀಲಿ ಬಣ್ಣ ಹಚ್ಚಿ, ಅಲ್ ಗೋರ್ ಮುಂದಿನ ಅಧ್ಯಕ್ಷ ಎಂದು ಚುನಾವಣೆಯ ದಿನ ರಾತ್ರಿ 8ರ ಹೊತ್ತಿಗೆಲ್ಲಾ ತೀರ್ಪು ನೀಡಿಬಿಟ್ಟವು. ಆದರೆ ಮತ ಎಣಿಕೆ ಇನ್ನೂ ಮುಗಿದಿರಲಿಲ್ಲ. ತಡರಾತ್ರಿ 2 ಗಂಟೆಯ ಹೊತ್ತಿಗೆ, ಚಿತ್ರಣವೇ ಬೇರೆ ಇತ್ತು. 
 
ಬುಷ್ 327 ಹೆಚ್ಚುವರಿ ಮತ ಪಡೆದಿದ್ದರು. ಅಲ್ ಗೋರ್ ಕೈಯಲ್ಲಿದ್ದ ತುತ್ತು, ಬುಷ್ ಬಾಯಿ ತಲುಪಿತ್ತು. ಆದರೆ ಅಲ್ ಗೋರ್, ತಕ್ಷಣಕ್ಕೆ ಸೋಲು ಒಪ್ಪಿಕೊಳ್ಳಲಿಲ್ಲ. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ನ್ಯಾಯಾಲಯದ ಮೆಟ್ಟಿಲು ತುಳಿದರು, ಸುಪ್ರೀಂ ಕೋರ್ಟ್ ತನಕ ವಿಷಯ ಹೋಯಿತು. ಕೊನೆಗೆ ಚುನಾವಣೆ ಮುಗಿದು ಒಂದು ತಿಂಗಳ ನಂತರ ಡಿಸೆಂಬರ್ 13ರಂದು, ಅಲ್ ಗೋರ್ ಸೋಲು ಒಪ್ಪಿಕೊಳ್ಳಬೇಕಾಯಿತು.
 
2004ರ ಚುನಾವಣೆಯಲ್ಲೂ ಹಾಗೆಯೇ ಆಗಿತ್ತು. ಚುನಾವಣೋತ್ತರ ಸಮೀಕ್ಷೆ ಜಾನ್ ಕೆರ್ರಿ, ಶೇಕಡ 51-48 ಮತಗಳ ಅಂತರದಿಂದ ಬುಷ್ ಅವರನ್ನು ಸೋಲಿಸಿದ್ದಾರೆ ಎಂದು ಹೇಳಿತ್ತು. ಸರಿ, ಜಾನ್ ಕೆರ್ರಿ ಪರ ಪ್ರಚಾರದ ಹೊಣೆ ಹೊತ್ತಿದ್ದ ಬಾಬ್ ಶ್ರೂಮ್ ಒಂದು ಹೆಜ್ಜೆ ಮುಂದೆ ಹೋಗಿ, ಮಾಧ್ಯಮಗಳ ಮುಂದೆ ಕೆರ್ರಿ ಅವರನ್ನು ‘Mr. President’ ಎಂದು ಸಂಬೋಧಿಸ ತೊಡಗಿದ್ದರು.
 
ಆದರೆ ಫಲಿತಾಂಶದಲ್ಲಿ ಎಡವಟ್ಟಾಗಿತ್ತು. ನಿರ್ಣಾಯಕ ರಾಜ್ಯಗಳಾದ ಓಹಿಯೊ, ಫ್ಲಾರಿಡಾ ಬುಷ್ ಅವರಿಗೆ ಒಲಿದಿತ್ತು. ಬುಷ್ ಶೇಕಡ 51-48ರ ಅಂತರದಿಂದ ಗೆಲುವು ಸಾಧಿಸಿದ್ದರು. 
 
ಅದು ಬಿಡಿ, ರಾಜಕೀಯ ಪಂಡಿತರು, ಪತ್ರಕರ್ತರು ಮುಂದಿಟ್ಟ ಲೆಕ್ಕಾಚಾರ ಹೇಗೆ ಆಯ ತಪ್ಪುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಎಂದರೆ 1948ರ ಅಧ್ಯಕ್ಷೀಯ ಚುನಾವಣೆ. 1945ರಲ್ಲಿ ಅಮೆರಿಕದ ಜನಪ್ರಿಯ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ನಿಧನರಾದರು. ಉಪಾಧ್ಯಕ್ಷರಾಗಿದ್ದ ಹ್ಯಾರಿ ಎಸ್ ಟ್ರೂಮನ್ ಆಡಳಿತದ ಚುಕ್ಕಾಣಿ ಹಿಡಿಯಬೇಕಾಯಿತು. ಆದರೆ ಅಮೆರಿಕ ಆರ್ಥಿಕವಾಗಿ ತಲ್ಲಣಿಸಿತ್ತು.
 
ಆಡಳಿತಕ್ಕೆ ಜಡತ್ವ ಅಂಟಿಕೊಂಡಿತ್ತು. ರೂಸ್ವೆಲ್ಟ್ ಅವರ ಪ್ರಭಾವ ಅಮೆರಿಕನ್ನರ ಮೇಲೆ ಗಾಢವಾಗಿತ್ತು. ಪತ್ರಿಕಾ ಅಂಕಣಕಾರರು ಅಮೆರಿಕದ ಸಮಸ್ಯೆಗಳನ್ನು ಚರ್ಚಿಸುವಾಗ, ‘ಒಂದೊಮ್ಮೆ ರೂಸ್ವೆಲ್ಟ್ ಇದ್ದಿದ್ದರೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದರು?’ ಎಂಬ ಪ್ರಶ್ನೆಯನ್ನು ಆಗಾಗ ಎತ್ತುತ್ತಿದ್ದರು. ಅದೇ ಧಾಟಿಯಲ್ಲಿ ರಿಪಬ್ಲಿಕನ್ನರು ‘ಟ್ರೂಮನ್ ಬದುಕಿದ್ದರೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದರು?’ ಎಂದು ಮಂಕು ಬಡಿದಂತಿದ್ದ ಟ್ರೂಮನ್ ಆಡಳಿತವನ್ನು ಛೇಡಿಸುತ್ತಿದ್ದರು. 
 
ಟ್ರೂಮನ್ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿತ್ತು. ಜನಮನ್ನಣೆಯ ಕ್ರಮಾಂಕ ಶೇಕಡ 36ಕ್ಕೆ ಇಳಿದಿತ್ತು. ಇದರ ನಡುವೆಯೇ ಮತ್ತೊಂದು ಚುನಾವಣೆ ಬಂತು. 1948ರ ಆ ಚುನಾವಣೆಗೆ ಟ್ರೂಮನ್, ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಪಕ್ಷದೊಳಗೆ ಭಿನ್ನಾಭಿಪ್ರಾಯವಿತ್ತು.
 
ಟ್ರೂಮನ್ ಚುನಾವಣೆಗೆ ನಿಂತರೆ, ಡೆಮಾಕ್ರಟಿಕ್ ಪಕ್ಷಕ್ಕೆ ಅಧಿಕಾರ ತಪ್ಪುವುದು ನಿಶ್ಚಿತ ಎಂದು ಪಕ್ಷದ ಪ್ರಮುಖರು ವಾದಿಸಿದರು. ಆದರೂ ಟ್ರೂಮನ್ ಮತ್ತೊಂದು ಅವಧಿಯ ಆಸೆ ಬಿಟ್ಟುಕೊಡಲಿಲ್ಲ. ಪ್ರತಿ ಊರಿಗೂ ಭೇಟಿ ಕೊಟ್ಟು ಮತ ಕೇಳುವ ಯೋಜನೆ ಹಾಕಿಕೊಂಡರು. ರೈಲಿನಲ್ಲಿ ದೇಶ ಸುತ್ತಲು ಹೊರಟರು. ಮತಯಾತ್ರೆಯ ಮೂಲಕ ಸುಮಾರು 31 ಸಾವಿರ ಮೈಲಿಯನ್ನು ಕ್ರಮಿಸಿದರು.
 
ಟ್ರೂಮನ್, ಆಡಳಿತಗಾರನಾಗಿ ಮೊದಲ ಅವಧಿಯಲ್ಲಿ ಸೋತಿದ್ದಷ್ಟೇ ಅಲ್ಲ. ಅವರೊಬ್ಬ ಮಾತುಗಾರರೂ ಆಗಿರಲಿಲ್ಲ. ಟ್ರೂಮನ್ ಭಾಷಣ ಮಾಡುತ್ತಿದ್ದಾರೋ, ಯಾವುದೋ ಮಸೂದೆಯ ಬಾಯಿಪಾಠ ಹೇಳುತ್ತಿದ್ದಾರೋ ತಿಳಿಯುತ್ತಿರಲಿಲ್ಲ. ತಮ್ಮ ದಪ್ಪ ಫ್ರೇಮಿನ ಕನ್ನಡಕವನ್ನು ಸರಿಮಾಡಿಕೊಂಡು ಭಾಷಣ ಓದಲು ಶುರು ಮಾಡಿದರೆ, ಕೇಳುಗರಿಗೆ ತಿಳಿಯಿತೋ ಇಲ್ಲವೋ, ಕೊನೆಯ ಅಕ್ಷರದವರೆಗೂ ಒದರಿ ‘ಥ್ಯಾಂಕ್ಸ್’ ಎಂದು ಕುಳಿತುಕೊಳ್ಳುತ್ತಿದ್ದರು.
 
ಇಂತಹ ವ್ಯಕ್ತಿತ್ವವನ್ನು ಜನರು ಶ್ವೇತಭವನಕ್ಕೆ ಆರಿಸುತ್ತಾರೆ ಎಂದು ಯಾರೂ ನಂಬಲು ಸಾಧ್ಯವಿರಲಿಲ್ಲ. ಆದರೆ ಎರಡನೇ ಅವಧಿಗೆ ಜನರ ಮುಂದೆ ಹೋಗುವಾಗ ಟ್ರೂಮನ್ ಸಂಪೂರ್ಣ ಬದಲಾಗಿದ್ದರು! 
 
ತಮ್ಮ ಸಲಹೆಗಾರರು ಕೊಟ್ಟ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿದರು. ಅವಸರಕ್ಕೆ ಕಡಿವಾಣ ಹಾಕಿದರು. ಎದುರಿಗಿದ್ದವರನ್ನು ನೋಡುತ್ತಾ, ಮನಮುಟ್ಟುವಂತೆ ಮಾತನಾಡುವ ಕಲೆ ಸಿದ್ಧಿಸಿಕೊಂಡರು. 1948ರ ಏಪ್ರಿಲ್‌ನಲ್ಲಿ ಟ್ರೂಮನ್ ಮಹತ್ವದ ರೇಡಿಯೊ ಭಾಷಣ ಮಾಡಿದ್ದರು.
 
ಆ ಭಾಷಣದಲ್ಲಿ ಅವರಲ್ಲಾದ ಬದಲಾವಣೆ ಗೋಚರಿಸಿತ್ತು. ‘ವಾಷಿಂಗ್ಟನ್ ಪೋಸ್ಟ್’ ವರದಿಗಾರ, ‘ಇದುವರೆಗೆ ನನ್ನ ವೃತ್ತಿ ಬದುಕಿನಲ್ಲಿ ಕೇಳಿದ ಅಮೆರಿಕ ವಿದೇಶಾಂಗ ನೀತಿ ಕುರಿತ ಅದ್ಭುತ ಭಾಷಣ ಇದು’ ಎಂದು ಪತ್ರಿಕೆಯಲ್ಲಿ ಬರೆದರು. ಆದರೆ ಬರಬರುತ್ತಾ ಟ್ರೂಮನ್, ‘ಘನತೆ’, ‘ಬಿಂಕ’ ಎಂಬುದನ್ನೆಲ್ಲಾ ಪಕ್ಕಕ್ಕಿಟ್ಟು ಜನರೊಂದಿಗೆ ಅನೌಪಚಾರಿಕವಾಗಿ ಮಾತನಾಡಲು ಆರಂಭಿಸಿದರು. ಅದನ್ನು ಪತ್ರಿಕೆಗಳು ಟೀಕಿಸಿದವು. ‘ಟ್ರೂಮನ್ ಕೇವಲ ಒಬ್ಬ ವ್ಯಕ್ತಿಯಾಗಿ ಮಾತನಾಡುತ್ತಿಲ್ಲ, ಅಮೆರಿಕ ಅಧ್ಯಕ್ಷರಾಗಿಯೂ ಮಾತನಾಡುತ್ತಿದ್ದಾರೆ. ಅದು ಅವರಿಗೆ ನೆನಪಿರಬೇಕು’ ಎಂದು ಬರೆದವು. 
 
ಆದರೆ ಟ್ರೂಮನ್ ಯಾವ ಟೀಕೆಯನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ತಮ್ಮ ಎದುರಾಳಿಯನ್ನು ತುಚ್ಛ ಭಾಷೆಯಲ್ಲಿ ತೆಗಳುವುದನ್ನು ಕೂಡ ಟ್ರೂಮನ್ ಮಾಡಿದ್ದರು. ಈ ಬಾರಿ ಟ್ರಂಪ್ ಮಾತಿನ ಧಾಟಿ ಹೆಚ್ಚು ಟೀಕೆಗೊಳಗಾಯಿತು. ಅದಾಗ ಟ್ರೂಮನ್ ಮಾತನ್ನೂ ಮಾಧ್ಯಮಗಳು ಒಪ್ಪಿಕೊಂಡಿರಲಿಲ್ಲ. ‘ಇದುವರೆಗೂ ಯಾವ ಅಧ್ಯಕ್ಷೀಯ ಅಭ್ಯರ್ಥಿಯೂ ಇಂತಹ ಉಗ್ರ ಭಾಷಣಗಳನ್ನು ಮಾಡಿರಲಿಲ್ಲ’ ಎಂದು ‘ನ್ಯೂಯಾರ್ಕ್ ಟೈಮ್ಸ್’ ಟ್ರೂಮನ್ ವಿಷಯದಲ್ಲಿ ಬರೆದಿತ್ತು.
 
ಟ್ರೂಮನ್ ಬಹುಸಂಖ್ಯೆಯಲ್ಲಿದ್ದ ರೈತಾಪಿ ವರ್ಗದ ಮನಗೆಲ್ಲುವ ಪ್ರಯತ್ನ ಮಾಡಿದರು. ಅವರ ಬದುಕು, ಸಂಸ್ಕೃತಿಗಳ ಕೊಂಡಿ ಹಿಡಿದು, ಹತ್ತಿರವಾಗಲು ಪ್ರಯತ್ನಿಸಿದರು. ‘ನಿಮ್ಮಲ್ಲಿ ನಾನೂ ಒಬ್ಬ’ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದರು. ಜೊತೆಗೆ ತನ್ನ ಯೋಜನೆಗಳ ಬಗ್ಗೆಯೂ ಹೇಳಿದರು. ಇದರಿಂದ ರೈತರಿಗೆ ಟ್ರೂಮನ್ ಆಪ್ತವಾದರು.
 
ಟ್ರೂಮನ್ ತಮ್ಮ ಭಾಷಣದಲ್ಲಿ ಕೆಲವೊಮ್ಮೆ ಮತದಾರರನ್ನು ಕಠಿಣ ಶಬ್ದ ಬಳಸಿ ಬೈದದ್ದೂ ಇದೆ. ‘1946ರಲ್ಲಿ ಮತದಾನಕ್ಕೆ ಬಾರದೆ ಮನೆಯಲ್ಲೇ ಕುಳಿತಿರಿ, ಅನರ್ಹರು ಕಾಂಗ್ರೆಸ್ಸಿಗೆ ಆಯ್ಕೆಯಾದರು. ಅದಕ್ಕೆ ನೀವೇ ಕಾರಣ. ಈ ಬಾರಿ ರಿಪಬ್ಲಿಕನ್ ಅಭ್ಯರ್ಥಿಯನ್ನು ಆರಿಸಿದರೆ, ನಿಮಗಿಂತ ಮುಟ್ಠಾಳರು ಬೇರೆಲ್ಲೂ ಸಿಗುವುದಿಲ್ಲ. ತಲೆಗೆ ಹೊಡೆತ ಬಿದ್ದಾಗಲೂ ಹೊಡೆದವರು ಯಾರು ಎಂದು ತಿಳಿಯದಿದ್ದರೆ, ನೀವು ಮೂರ್ಖರೇ ಸರಿ’. ಈ ಶೈಲಿಯಲ್ಲಿ ಟ್ರೂಮನ್ ಮಾತು ಸಾಗುತ್ತಿತ್ತು. 
 
ಕೆಲವೊಮ್ಮೆ ರೈಲಿನಲ್ಲಿ ಸಂಚರಿಸುವಾಗ, ರಾತ್ರಿ ಯಾವುದೋ ನಿಲ್ದಾಣದಲ್ಲಿ ಜನರ ಗುಂಪು ಎದುರಾದರೆ, ಇದ್ದ ಹಾಗೇ ಎದ್ದು ಬಂದು ಟ್ರೂಮನ್ ಮಾತನಾಡುತ್ತಿದ್ದರು. ‘ನನಗೆ ಗೊತ್ತು ನನ್ನ ಮಾತುಗಳಿಗಾಗಿ ನೀವಿಲ್ಲಿ ಬಂದಿದ್ದೀರಿ. ನಾನು ನಿದ್ರಿಸುತ್ತಿದ್ದೆ, ಯಾವಾಗಿನ ಉಡುಪಿನಲ್ಲೇ ನೀವು ನನ್ನನ್ನು ನೋಡಿರುತ್ತೀರಿ. ಈ ಉಡುಪಿನಲ್ಲೂ ಹೇಗೆ ಕಾಣುತ್ತೇನೆ ನೋಡಿ’ ಎನ್ನುತ್ತಿದ್ದರು. ಕೆಲವೊಮ್ಮೆ ಚಿತ್ತಭ್ರಮೆಯಾಗಿದೆ ಎನಿಸುವಂತೆ ಟ್ರೂಮನ್ ನಡವಳಿಕೆ ಇರುತ್ತಿತ್ತು. 
 
ಒಮ್ಮೆ ಒಂದು ಪ್ರಸಂಗ ನಡೆಯಿತು. ದಕ್ಷಿಣ ಐಡಾಹೋನಲ್ಲಿ ವಿಲ್ಲಾ ಕೋಟ್ ವಿಮಾನ ನಿಲ್ದಾಣದ ಲೋಕಾರ್ಪಣೆ ಮಾಡಿ ಭಾಷಣ ಆರಂಭಿಸಿದ ಟ್ರೂಮನ್, ‘ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯುವಕ ವಿಲ್ಲಾ ನಮಗೆಲ್ಲಾ ಆದರ್ಶವಾಗಬೇಕು’ ಎಂದು ಉದ್ದದ ಭಾಷಣ ಮಾಡಿದರು. ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ, ವಿಲ್ಲಾ ಅವರ ತಾಯಿ, ಟ್ರೂಮನ್ ಬಳಿ ಬಂದು ‘ನೀವು ಮಾತನಾಡಿದ್ದು ಕೇಳಿದೆ. ವಿಲ್ಲಾ ಯುವಕನ ಹೆಸರಲ್ಲ.
 
ಆಕೆ ನನ್ನ ಮಗಳು. ಆಕೆ ತೀರಿಕೊಂಡಿದ್ದು ಯುದ್ಧಭೂಮಿಯಲ್ಲಲ್ಲ, ವಿಮಾನ ಅಪಘಾತದಲ್ಲಿ’ ಎಂದಾಗ ಟ್ರೂಮನ್ ಪೆಚ್ಚಾಗಿದ್ದರು. ಇಷ್ಟಾದರೂ ಟ್ರೂಮನ್ ಅವರನ್ನು ಜನ ಇಷ್ಟಪಡುತ್ತಿದ್ದರು. ಆದರೆ ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತರಿಗೇ ಟ್ರೂಮನ್ ಮೇಲೆ ಭರವಸೆ ಇರಲಿಲ್ಲ.
 
‘ಕಾರ್ಯಕರ್ತರ ನಿರಾಸೆ ಎಷ್ಟರ ಮಟ್ಟಿಗಿತ್ತು ಎಂದರೆ, ಪಕ್ಷದ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗವಹಿಸುವ ಉಮೇದು ಅವರಿಗಿರಲಿಲ್ಲ. ಪಕ್ಷದ ವತಿಯಿಂದ ಆಹ್ವಾನ ಬಂದಾಗ, ಯಾವುದೋ ಶವಸಂಸ್ಕಾರಕ್ಕೆ ಹೋಗಲು ಸಿದ್ಧರಾಗುವಂತೆ ಅವರು ವರ್ತಿಸಿದ್ದರು’ ಎಂದು ‘ಅಸೋಸಿಯೇಟ್ ಪ್ರೆಸ್’ ಬರೆದಿತ್ತು. ಪಕ್ಷದ ರಾಷ್ಟ್ರೀಯ ಸಭೆಯಲ್ಲಿ ಟ್ರೂಮನ್, ಕಾರ್ಯಕರ್ತರನ್ನು ಹುರಿದುಂಬಿಸಲು ಶತಾಯಗತಾಯ ಪ್ರಯತ್ನಿಸಿದ್ದರು.
 
ಆ ನಂತರ ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲಾ, ತಾವು ವಾರಕ್ಕೆ 5 ಡಾಲರ್ ಸಂಬಳಕ್ಕೆ ದುಡಿಯುತ್ತಿದ್ದ ಬಗ್ಗೆ ಟ್ರೂಮನ್ ಹೇಳುತ್ತಿದ್ದರು. ಕುದುರೆ ಲಾಯದಲ್ಲಿ ದುಡಿಯುವಾಗ ಅವುಗಳ ಹಲ್ಲುಗಳ ಜೋಡಣಾ ಕ್ರಮದಿಂದ ಅವುಗಳ ವಯಸ್ಸು ಪತ್ತೆಹಚ್ಚುತ್ತಿದ್ದ ಬಗ್ಗೆ ವಿವರಿಸುತ್ತಿದ್ದರು.
 
ಜನರಿಗೆ ಒಮ್ಮೆಲೇ ಅಮೆರಿಕ ಅಧ್ಯಕ್ಷರಿಗೂ ಈ ವಿಷಯಗಳು ತಿಳಿದಿವೆಯಾ ಎನ್ನಿಸುತ್ತಿತ್ತು. ಆ ಮೂಲಕ ನಾನು ನಿಮ್ಮೊಳಗೊಬ್ಬ ಎಂಬ ಭಾವವನ್ನು ಟ್ರೂಮನ್ ಜನರಲ್ಲಿ ಬಿತ್ತುತ್ತಿದ್ದರು. ಹೀಗೆ ಟ್ರೂಮನ್ ವ್ಯಕ್ತಿತ್ವ ಮತ್ತು ಭಾಷಣ ವರ್ಣರಂಜಿತವಾಗಿದ್ದರೆ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಥಾಮಸ್ ಡ್ಯೂವಿ ಭಾಷಣ ನೀರಸವಾಗಿರುತ್ತಿತ್ತು.
 
‘ಹಿಂದಿನ ಯಾವ ಅಭ್ಯರ್ಥಿಗಳೂ ಹೀಗೆ ಮಾತನಾಡಿಲ್ಲ. ಮುಂದೆ ಕೂಡ ಯಾವ ಅಭ್ಯರ್ಥಿಯೂ ಇಷ್ಟು ಅವಿವೇಕದಿಂದ ಮಾತನಾಡಲಾರರು’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಥಾಮಸ್ ಡ್ಯೂವಿ ಭಾಷಣವನ್ನೆಲ್ಲಾ ಒಟ್ಟು ಮಾಡಿ, ಕುಟ್ಟಿ ಸೋಸಿದರೆ ಸಿಗುತ್ತಿದ್ದದ್ದು ನಾಲ್ಕೇ ವಾಕ್ಯ. ‘Agriculture is important. Our rivers are full of fish. You cannot have freedom without liberty. Our future lies ahead’.
 
ಹೀಗಿದ್ದರೂ ಪತ್ರಿಕೆಗಳು ಮಾತ್ರ ಟ್ರೂಮನ್ ಗೆಲ್ಲುತ್ತಾರೆ ಎಂದು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಟೈಮ್ಸ್ ಪತ್ರಿಕೆ ‘The next President of the United States’ ಎಂಬ ಸಂಚಿಕೆ ತಂದು ಮುಖಪುಟದಲ್ಲಿ ಡ್ಯೂವಿ ಭಾವಚಿತ್ರ ಪ್ರಕಟಿಸಿತ್ತು.
 
ಅಕ್ಟೋಬರ್ ಅಂತ್ಯದ ವೇಳೆಗೆ ರಾಜಕೀಯ ವಿಶ್ಲೇಷಕರು ‘ಅಮೆರಿಕದ ಅಧ್ಯಕ್ಷೀಯ ಚುನಾವಣಾ ಇತಿಹಾಸ ಗಮನಿಸಿದರೆ, ಮೊದಲು ಮುನ್ನಡೆ ಸಾಧಿಸಿದವರು ಗೆದ್ದದ್ದೇ ಹೆಚ್ಚು. ಹಾಗಾಗಿ ಟ್ರೂಮನ್ ಗೆಲ್ಲುತ್ತಾರೆ ಎಂದು ಯಾರೂ ಭಾವಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು. 
 
ಸಮೀಕ್ಷೆಗಳು ವಾರಕ್ಕೆ ಮೊದಲೇ ಡ್ಯೂವಿ ಅವರಿಗೆ ಪಟ್ಟ ಕಟ್ಟಿದ್ದವು. ಹಲವು ಪತ್ರಿಕೆಗಳು ಚುನಾವಣಾ ಮರುದಿನಕ್ಕೆ ಶೀರ್ಷಿಕೆಯನ್ನು ನಿಕ್ಕಿ ಮಾಡಿಕೊಂಡಿದ್ದವು. ಆದರೆ ಪತ್ರಕರ್ತರ, ರಾಜಕೀಯ ಪಂಡಿತರ ಊಹೆಗೆ ನಿಲುಕದ ಫಲಿತಾಂಶ, ಚುನಾವಣಾ ದಿನದ ತಡರಾತ್ರಿ ಬಂತು. ಹ್ಯಾರಿ ಟ್ರೂಮನ್ ಗೆದ್ದಿದ್ದರು. ಅಷ್ಟರ ಹೊತ್ತಿಗಾಗಲೇ, ‘ಷಿಕಾಗೊ ಡೈಲಿ ಟ್ರಿಬ್ಯೂನ್’ ಪತ್ರಿಕೆ ಮುದ್ರಣಾಲಯದಲ್ಲಿ ಅಚ್ಚಾಗುತ್ತಿತ್ತು.
 
ಮರುದಿನ ‘Dewey Defeats Truman’ ಎಂಬ ಒಕ್ಕಣೆಯೊಂದಿಗೇ, ಷಿಕಾಗೊ ಟ್ರಿಬ್ಯೂನ್ ಓದುಗರ ಕೈಸೇರಿತು! ‘ಷಿಕಾಗೊ ಡೈಲಿ ಟ್ರಿಬ್ಯೂನ್’ ಹಿಡಿದು ಬಾಯ್ತುಂಬ ನಕ್ಕ ಟ್ರೂಮನ್ ಭಾವಚಿತ್ರ, ಮತದಾರನ ಮನಸ್ಸನ್ನು ಅಳೆಯುವುದು ಸುಲಭವಲ್ಲ ಎಂಬ ಮಾತಿಗೆ ಸಾಕ್ಷಿಯಾಗಿ ಇತಿಹಾಸ ಸೇರಿತು. ಅಂದಹಾಗೆ, ಇನ್ನು ನಾಲ್ಕು ರಾತ್ರಿ ಕಳೆಯುವುದರೊಳಗೆ ಏನಾಗಬಹುದು? Fingers Crossed!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT