ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬು ದೊಡ್ಡಪ್ಪ; ಆಶಾಲು ಅದರಪ್ಪ!

Last Updated 3 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬಟ್ಟೆ ಹೊತ್ತ ಬ್ಯಾಗುಗಳು, ಪ್ಲಾಸ್ಟಿಕ್ ಕವರುಗಳು, ದಿಂಬು ಟವಲ್ಲುಗಳು, ಊಟದ ಡಬ್ಬಿಗಳು ಎಲ್ಲವೂ ಕೊಡವ ಓನರಮ್ಮನ ಮನೆಯಿಂದ ತೆಲುಗು ಜಯಾ ಮನೆಗೆ ಬಂದವು. ಒಂದಿಡೀ ದಿನ ಬರೀ ಸಾಮಾನುಗಳನ್ನು ಜೋಡಿಸಿಕೊಳ್ಳೋದೇ ಆಯಿತು.

ಪ್ರತೀ ಸಾರಿ ಸಾಮಾನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಾಗಿಸುವಾಗ ಆಗುವ ಒಂದು ಭಾವಯಾತ್ರೆ ಅಂದರೆ ಒಂದೊಂದು ಸಾಮಾನನ್ನೂ ಮತ್ತೆ ಮತ್ತೆ ಪುನರಾವಲೋಕಿಸಿ ನೋಡುವುದು.

ಇದು ತಗೊಂಡು ಎಷ್ಟು ವರ್ಷವಾಯಿತು, ಯಾವಾಗ ತಗೊಂಡೆ, ಎಲ್ಲಿ ತಗೊಂಡೆ, ಚೌಕಾಶಿ ಹೇಗಿತ್ತು, ಕೊಂಡಾಗ ಜೊತೆಗೆ ಯಾರಿದ್ದರು, ಅವರು ಇದರ ಬಗ್ಗೆ ಏನು ಹೇಳಿದ್ದರು, ಮನೆಗೆ ತಂದು ತೋರಿಸಿದ ಮೇಲೆ ಉಳಿದವರ ಪ್ರತಿಕ್ರಿಯೆ ಹೇಗಿತ್ತು, ಯಾವಾಗಲಾದರೂ ಕಳೆದುಕೊಂಡಿದ್ದೆನಾ, ಆಮೇಲೆ ಹೇಗೆ ವಾಪಸ್‌ ಸಿಕ್ಕಿತು – ಉಉಉಉಉಸ್ಸಪ್ಪಾ...

ಇದೆಲ್ಲಕ್ಕೂ, ಅಂದರೆ ಪುನರಾವಲೋಕಿಸುತ್ತಾ ಸಾಮಾನು ಸಾಗಿಸಲಿಕ್ಕೆ ಶನಿವಾರ ಮಧ್ಯಾಹ್ನ ಸಮಯ ಮೀಸಲಿಡಲಾಗಿತ್ತು. ಭವದ ಬಂಧ ಮತ್ತೆ ಗಟ್ಟಿ ಮಾಡಿಕೊಳ್ಳುತ್ತಾ ತಮ್ಮದೆನ್ನುವ ಎಲ್ಲವನ್ನೂ ಸಾಗಿಸಿದರು. ಓನರಮ್ಮ ವಿಚಿತ್ರವಾಗಿ ಆಡುತ್ತಾ ಮತ್ತೆ ದೇವರ ಹಾಗೆ ಕಣ್ಣಿಗೆ ಕಾಣಿಸದಂತೆ ಮಾಯವಾಗಿ ಬರೀ ಆದೇಶಗಳನ್ನಷ್ಟೇ ಮಕ್ಕಳ ಬಳಿ ಬಿಟ್ಟಿದ್ದರು. ಕೊನೆ ಗಳಿಗೆಯ ಮುಲಾಜು ಬೇಡ ಎಂದು ಇರಬೇಕೇನೋ.

ನಾಲ್ಕೂ ಜನ ತಮಗೆ ಒಂದು ರೀತಿಯಲ್ಲಿ ಕಾಯಕಲ್ಪ ದೊರಕಿತೇನೋ ಅನ್ನುವ ಧನ್ಯತಾ ಭಾವದಲ್ಲಿ ಜಯಾ ಅಲಿಯಾಸ್ ಜಯಸುಧಾ ಮನೆಗೆ ಹೋದರು. ತೆಳ್ಳನೆಯ ಬಂಗಾರ ಬಣ್ಣದ ಫ್ರೇಮಿನ ಕನ್ನಡಕ ಹಾಕಿಕೊಂಡು, ನಿನ್ನೆ ಮೊನ್ನೆ ಕಾಲೇಜು ಮೆಟ್ಟಿಲು ಹತ್ತಿದ್ದಾಳೇನೋ ಎನ್ನುವ ಹಾಗೆ ಚಂದದ ನಗೆ ಬೀರುತ್ತಾ ಇರುತ್ತಿದ್ದ ಜಯಸುಧಾ ಬಹಳ ಮುದ್ದಿನಲ್ಲೇ ಬೆಳೆದ ಹುಡುಗಿ. ಇಪ್ಪತ್ತೊಂದೋ ಇಪ್ಪತ್ತೆರಡೋ ವಯಸ್ಸಿಗೆ ಮದುವೆಯಾಗಿ ಪಟ್ಟ ಕಷ್ಟವೆಂದರೆ, ಅಡುಗೆ ಮಾಡಲು ಬಾರದೇ ಇದ್ದುದು.

‘ಅಯ್ಯೋ ಎಷ್ಟು ಪ್ರಾಬ್ಲಮ್ ಆಯಿತು ಗೊತ್ತಾ! ನನ್ ಗಂಡ ಪಾಪ ತುಂಬಾ ಅಡ್ಜಸ್ಟ್ ಮಾಡ್ಕೊಂಡ್ರು. ಅವರು ಗಾಡ್ಲೀ ಮ್ಯಾನ್ (ದೇವರಂಥಾ ಮನುಷ್ಯ)’ ಅಂತ ಆಗಾಗ ಹೇಳುತ್ತಿದ್ದರು.

ಅಂಥ ಗಂಡ ಆದಿಕೇಶವ – ದೊಡ್ಡ ಬಿಸಿನೆಸ್ ಕುಟುಂಬದ ಸದಸ್ಯ– ಅದು ಹೇಗೋ ದುಡ್ಡು ಕಳೆದುಕೊಂಡು ಪಡಬಾರದ ಪಾಡು ಪಟ್ಟುಬಿಟ್ಟರು. ‘ಅವರು ಕಷ್ಟಪಡುವಾಗ ಯಾರೂ ಸಹಾಯಕ್ಕೆ ಬರಲಿಲ್ಲ. ಅದೇ ದೊಡ್ಡ ಕೊರಗು ಆಗಿಬಿಡ್ತು ಅವರಿಗೆ. ಆಮೇಲೆ ಅವರ ಅಪ್ಪ ಅಮ್ಮ ಕೂಡ ಆಲ್ ಮೋಸ್ಟ್ ಅವರನ್ನು ಫ್ಯಾಮಿಲಿಯಿಂದ ಹೊರಗೆ ಹಾಕಿದರು. ಅದೇ ಸಮಯಕ್ಕೆ ನನಗೆ ಒಂದು ಮಿಸ್ ಕ್ಯಾರೇಜ್ (ಗರ್ಭಪಾತ) ಆಯಿತು. ಆಮೇಲೆ ಮಕ್ಕಳಾಗೋಕೆ ಬಹಳ ಟೈಮ್ ಬೇಕಾಯಿತು’

ಇದನ್ನೆಲ್ಲಾ ಹೇಳುವಾಗ ಜಯಸುಧಾ ಬಹಳ ಹನಿಗಣ್ಣಾಗುತ್ತಿದ್ದಳು. ‘ಈಗ ಹಸ್ಬೆಂಡ್ ಎಲ್ಲಿದಾರೆ?’ 
‘ದುಬೈನಲ್ಲಿ ಇದಾರೆ. ಕಷ್ಟದಲ್ಲಿ ಇದ್ದಾಗ ಸಾಲ ತೆಗೆದುಕೊಂಡ್ವಿ. ಅದನ್ನ ತೀರಿಸಬೇಕಲ್ಲ? ಅದಕ್ಕೇ ಅಲ್ಲಿಂದ ಕೆಲಸದ ಆಫರ್ ಬಂದ ತಕ್ಷಣ ಹಿಂದೂ ಮುಂದು ನೋಡದೆ ಒಪ್ಪಿಕೊಂಡು ಹೋದರು’

ನಷ್ಟ ಅನುಭವಿಸಿದ್ದು ಒಂದು ಕಷ್ಟ, ಗರ್ಭಪಾತ ಆದದ್ದೊಂದು ಆಘಾತ, ಮನೆಯವರ ತಿರಸ್ಕಾರ – ಎಲ್ಲವೂ ಸೇರಿ ಜಯಸುಧಾಗೆ ಮತ್ತೆ ಮಗ ಹುಟ್ಟುವ ಹೊತ್ತಿಗೆ ಬಹಳ ಸಮಯ ಕಳೆದಿತ್ತು. ಸಾಲವೂ ಬೆಳೆದಿತ್ತು. ಮಗ ಹುಟ್ಟಿದ ಒಂದೇ ವರ್ಷಕ್ಕೆ ಗಂಡ ಆದಿಕೇಶವನಿಗೆ ದುಬೈನಲ್ಲಿ ಕೆಲಸ ಸಿಕ್ಕಿ ಸಾಲ ತೀರಿಸುವಷ್ಟು ದಿನ ಅಲ್ಲಿ ಕೆಲಸ ಮಾಡಿ ಬರ್ತೀನಿ ಅಂತ ಹೋದವರು ಮೂರು ವರ್ಷದಿಂದ ಅಲ್ಲೇ ಇದ್ದರು.

‘ನೀವೂ ಹೋಗಬೋದಿತ್ತಲ್ಲಾ? ಇಲ್ಲಿ ಯಾಕೆ ಉಳಕೊಂಡ್ರಿ?’ ಸೂಸನ್ ಜಯಾ ದೀದಿಯನ್ನು ಕೇಳಿದಳು.
‘ಎಲ್ಲರೂ ಹೋದರೆ ಖರ್ಚು ಹೆಚ್ಚು ಅಂತ ಹೋಗಲಿಲ್ಲ. ಅಲ್ಲದೆ ಇಲ್ಲಿ ಈ ಫ್ಲಾಟು ಇದೆ. ಖರ್ಚು ಹೆಚ್ಚಿಲ್ಲ. ಅಲ್ಪ ಸ್ವಲ್ಪ ಖರ್ಚಿಗೆ ಅಂಗಡಿ ವ್ಯವಹಾರ ಇದೆ. ಹೇಗೋ ನಡೆಯುತ್ತೆ’ ಅಂದರು ಜಯಾ. ಸೂಸನ್ ಮತ್ತೆ ಹೆಚ್ಚು ಪ್ರಶ್ನೆ ಮಾಡಲು ಹೋಗಲಿಲ್ಲ.

ಇವರು ನಾಲ್ಕು ಜನಕ್ಕೆ ರೂಮು ಬಾಡಿಗೆ ಕೊಟ್ಟ ಮೇಲೆ ಜಯಾಗೆ ಇದ್ದ ಖರ್ಚಿನ ಚಿಂತೆ ನೀಗುವ ಹಾಗೆ ಇತ್ತು. ಏಕೆಂದರೆ ಪುಟಗೋಸಿ ಟೆಲಿಫೋನ್ ಬೂತಿನ ಆದಾಯ ಅಷ್ಟರಲ್ಲೇ ಇತ್ತು. ಅದೇನಿದ್ದರೂ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಒಂದು ‘ಕವರ್’ ಅಷ್ಟೇ. ಜಯಾಗೆ ಅದ್ಯಾವುದೂ ಮಾಡಿ ಗೊತ್ತಿರಲಿಲ್ಲ. ಬೂತಿನ ಜೊತೆ ಜಯಾ ಒಂದು ಜೆರಾಕ್ಸ್ ಮಷೀನ್ ಇಟ್ಟುಕೊಂಡಿದ್ದರು. ಅದರಿಂದ ಹುಟ್ಟುತ್ತಿದ್ದ ಕಾಸು ದುಡಿಮೆ ಅಂತ ಹೇಳಿಕೊಳ್ಳಲೂ ಲಾಯಕ್ಕಿರಲಿಲ್ಲ.

ಈ ಬೂತಿನಲ್ಲಿ ಕೆಲಸಕ್ಕೆ ಸಹಾಯ ಮಾಡಲು ಆಗುತ್ತಾನೆ ಅಂತ ಆಂಧ್ರದ ತಮ್ಮ ಊರಾದ ನೆಲ್ಲೂರಿನಿಂದ ಕೋಟಿ ಎನ್ನುವ ಚಿಕ್ಕ ವಯಸ್ಸಿನ ಮೊದಲ ಪಿಯುಸಿ ಓದುತ್ತಿದ್ದ ಹುಡುಗನನ್ನು ಕರೆದುತಂದಿದ್ದರು. ಅವನಿಂದ ಸಹಾಯವೇನೋ ಆಗುತ್ತಿತ್ತು. ಆದರೆ ಅವನಿಗೆ ತೆಲುಗು ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಇಂಗ್ಲಿಷನ್ನಂತೂ ಬಹಳ ಕಷ್ಟಪಟ್ಟು ಹೆಜ್ಜೆ ಹೆಜ್ಜೆಗೂ ಕೊಲೆ ಮಾಡುತ್ತಲೇ ಮಾತನಾಡುತ್ತಿದ್ದ.

ಇನ್ನು ಕನ್ನಡ ಕಲಿಯಲು ಸಮಯ ಬೇಡವೇ? ವರ್ಷಾನುವರ್ಷ ಪೀಳಿಗೆಗಳೇ ಕರ್ನಾಟಕದಲ್ಲಿ ಬೆಳೆಯುತ್ತಿದ್ದರೂ ಒಂದೇಒಂದಕ್ಷರ ಕನ್ನಡ ಮಾತನಾಡದ ಜನರಿರುವಾಗ ನಿನ್ನೆ ಮೊನ್ನೆ  ಬಂದ ಕೋಟಿ ಎಂಬ ಹರೆಯದ ಹುಡುಗ ಕನ್ನಡ ಕಲಿಯಲೆಂದು ನಿರೀಕ್ಷೆ ಮಾಡುವುದಾದರೂ ಹೇಗೆ?

ಅಂತೂ ಸಹಾಯಕ್ಕೆ ಅಂತ ಕರೆತಂದ ಹುಡುಗ ತನ್ನ ಅವಶ್ಯಕತೆಗೆ ಒದಗಿಬರುವ ತನಕ ದುಡಿಮೆಯ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು ಅಂತ ನಿರ್ಧರಿಸಿ ಒಂದು ಪೀಜಿ ಶುರು ಮಾಡಿದರೆ ಹೇಗೆ ಎನ್ನುವ ದಿವ್ಯ ಐಡಿಯಾವನ್ನು ಮನಸ್ಸಿನಲ್ಲೇ ಕಾವು ಕೊಟ್ಟು ಕುಳಿತಿದ್ದ ಜಯಾಗೆ ಸಾಕ್ಷಾತ್ ಭಗವಂತನೇ ಕಳಿಸಿದ ಹಾಗೆ ಸೂಸನ್ ಬಂದು ಈ ಏರಿಯಾದಲ್ಲಿ ಬೇರೆ ಪೀಜಿಗಳಿವೆಯೇ ಎಂಬ ಮಾಹಿತಿ ಕೇಳಿದಾಗ ಜಯಾಗೆ ತನ್ನೆಲ್ಲಾ ಕಷ್ಟಗಳಿಗೆ ಧಿಡೀರ್ ಅಂತ ಉತ್ತರ ಸಿಕ್ಕ ಹಾಗನ್ನಿಸಿಬಿಟ್ಟಿತ್ತು.

‘ದುಡ್ಡು ಹೆಚ್ಚಿಗೆ ಬರದಿದ್ರೆ ಬೇಡ. ಏರಿಯಾದಲ್ಲಿ ಫಿಕ್ಸ್ ಆಗಿರೋ ಬಾಡಿಗೆಗಿಂತ ಕಡಿಮೆಗೇ ಬರಲಿ. ಒಳ್ಳೆಯ ಹುಡುಗಿಯರು, ಪ್ರಾಬ್ಲಮ್ ಕೊಡದೆ ಇದ್ದರೆ ಸಾಕು’ ಅಂತ ಜಯಾ ಮನಸ್ಸಿನಲ್ಲೇ ಅಂದುಕೊಂಡಿದ್ದ ಹಾಗೇ ಈ ನಾಲ್ಕು ಜನ ಸಿಕ್ಕಿದ್ದರು.

ಪೀಜಿ ಬಾಡಿಗೆಯಿಂದ ಸಾಧ್ಯವಾಗಬಹುದಾಗಿದ್ದ ಮೊದಲನೆ ಹಂತದ ಸ್ವಾತಂತ್ರ್ಯ ಅಂದರೆ ಗಂಡ ಕಳಿಸುವ ದುಡ್ಡನ್ನು ಸಾಲ ತೀರಿಸಲು ಬಳಸಿಕೊಳ್ಳುವುದು. ‘ಇಲ್ಲಿ ಖರ್ಚಿಗೂ, ಆದಾಯಕ್ಕೂ ಸಮ ಆದ್ರೆ ಬಹಳ ಅನುಕೂಲ. ಅವರು ಕಳಿಸೋ ದುಡ್ಡಲ್ಲಿ ಇಪ್ಪತ್ತು ಸಾವಿರವಾದ್ರೂ ಮಿಗುತ್ತೆ. ಅದರಲ್ಲಿ ದೊಡ್ಡ ಸಾಲದ ಕಂತು ಬೇಗ ತೀರುತ್ತೆ’ ಅಂತ ಜಯಾ ಮತ್ತು ಅವರಮ್ಮ ಮಾತಾಡಿಕೊಳ್ಳುತ್ತಿದ್ದುದನ್ನು ಚಿತ್ರಾ ಕೂಡ ಕೇಳಿಸಿಕೊಂಡಿದ್ದಳು.

ಮಗ ಚಿಕ್ಕವನು. ಅವನ ಅಪ್ಪ ದುಬೈಗೆ ಹೋದಾಗ ಅವನಿಗೆ ಒಂದು ವರ್ಷ ಮಾತ್ರ. ತನ್ನ ಅಪ್ಪ ಎಲ್ಲಿ ಅಂತ ಕೇಳಿದಾಗಲೆಲ್ಲಾ ಒಮ್ಮೊಮ್ಮೆ ಐ ಎಸ್‌ಡಿ (ಅಂತರ್ರಾಷ್ಟ್ರೀಯ ಕರೆ) ಕಾಲ್ ಮಾಡುತ್ತಿದ್ದಳು. ಬರೀ ಧ್ವನಿ ಸಂಬಂಧದಲ್ಲಿ ಅಪ್ಪನ ಆಯಾಮ ಹೇಗೆ ಅನಾವರಣಗೊಳ್ಳಲು ಸಾಧ್ಯ? ಹಾಗಂತ ವಾಪಸ್‌ ಬರೋಣವೆಂದರೆ ಸಾಲದ ಶೂಲ ಆರಾಮಾಗಿರಲು ಬಿಡುವುದಿಲ್ಲ. ಬಹುತೇಕ ಸಾರಿ ಫೋನ್ ಮಾಡಕ್ಕಾಗದೆ ಒದ್ದಾಡುತ್ತಿದ್ದಳು ಜಯಾ.

ಒಂದು ತಿಂಗಳು ಕಳೆಯುವಷ್ಟರಲ್ಲಿ ಮನೆಯಲ್ಲಿ ಹೆಚ್ಚಿನ ಜನರ ಇರುವಿಕೆ ಎಂಥ ಕಿರಿಕಿರಿ ಎನ್ನುವುದು ಜಯಾಗೆ ಅರ್ಥವಾಯಿತು. ಯಾರೂ ಗಲಾಟೆ ಮಾಡುವ ವಯಸ್ಸಿನ ಮಕ್ಕಳಲ್ಲ.

ಆದರೂ ಸಂಜೆ ಮನೆಗೆ ಬಂದಾಗ ಡೈನಿಂಗ್ ಟೇಬಲ್ಲಿಗೆ ಇಬ್ಬರು, ಸೋಫಾ ಮೇಲೆ ಒಬ್ಬರು, ಅಡುಗೆ ಮನೆಯಲ್ಲಿ ಇನ್ನೊಬ್ಬರು ಜೊತೆಗೆ ತೆಲುಗು ಸಿನಿಮಾ ನೋಡುತ್ತಾ ಜಗತ್ತಿನ ಪರಿವೆಯೇ ಇಲ್ಲದೆ ಕೂತಿರುವ ಕೋಟಿ ಎನ್ನುವ ಟೀನೇಜರ್ರು, ಮೊಮ್ಮಗನ ಕಾಟಗಳಿಂದ ಸುಸ್ತಾಗಿ ಕೂತಿರುವ ತನ್ನ ಅಮ್ಮ, ಮತ್ತೆ ಆಟ ಶುರು ಮಾಡಲು ತಾನು ಬರಲಿ ಅಂತಲೇ ಕಾಯುತ್ತಿದ್ದ ಮಗ– ಎಲ್ಲದರಿಂದಲೂ ಜಯಸುಧಾಗೆ ಸಾಕು ಸಾಕಾಗಿ ಹೋಯಿತು.

ವಯಸ್ಸು ಮೂವತ್ತರ ಹತ್ತಿರವಿದ್ದರೂ ಮುಟ್ಟು ನಿಲ್ಲುವ ಪ್ರಕ್ರಿಯೆಯ ಎಲ್ಲಾ ಹಿಂಸೆಗಳೂ ಅನಾವರಣಗೊಂಡವು. ಹೀಗೇ ಅಂತ ಹೇಳಲಾಗದ ಕಿರಿಕಿರಿ ಅನುಭವಿಸಲು ಪ್ರಾರಂಭಿಸಿದಳು. ಕೂತಲ್ಲಿ ಕೂರಲಾಗುತ್ತಿಲ್ಲ. ನಿಂತಲ್ಲಿ, ನೋಡಿದಲ್ಲಿ ಕಸ ಕೊಂಪೆ ಕಂಡು ಸಿಟ್ಟು. ವಿಪರೀತ ಮಾನಸಿಕ ಏರುಪೇರು.

ಇದೆಲ್ಲಾ ಗಂಡ ದೂರ ಇರುವುದರಿಂದಲೇ ಆಗುತ್ತಿದೆ ಎನ್ನುವ ಪರೋಕ್ಷ ಭಾವನೆ. ಆದರೆ ಅದರ ಬಗ್ಗೆ ಏನೂ ಮಾಡಲಾಗುವುದಿಲ್ಲವೆಂಬ ಅಸಹಾಯಕತೆ.
ಮೊಬೈಲ್ ಇಲ್ಲದ ಕಾಲ ಅಲ್ಲವೇ ಅದು? ಆಗಾಗ ಬೂತಿಗೆ ಸಾಧಾರಣ ಕಾರಿನಲ್ಲಿ ಮಸ್ತ್ ರೊಕ್ಕದ ಗಿರಾಕಿಗಳೊಂದಿಗೆ ಬರುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟನೊಬ್ಬ ಜಯಾಗೆ ಪರಿಚಯವಾದ.

ಗಂಡಸು ಅಂದರೆ ಭರ್ಜರಿ ಗಂಡಸೇ ಅದು. ತಕ್ಕಮಟ್ಟಿಗಿನ ಎತ್ತರ; ಅಡ್ಡಡ್ಡ ಗಾತ್ರ, ಪಕ್ಕಾ ಕೋಲಾರದ ಮನುಷ್ಯ ಆ ಮುನಿರಾಜು. ತೆಲುಗು, ತಮಿಳು, ಮಲಯಾಳಂ ಮತ್ತು ಹರುಕು ಹಿಂದಿ ಭಾಷೆಯ ಅವತರಣಿಕೆಯನ್ನು ಚೆನ್ನಾಗಿ ಮಾತನಾಡುತ್ತಿದ್ದ. ಜಯಾ ಮನೆ ಹತ್ತಿರವೇ ನಾಲ್ಕೈದು ಫ್ಲಾಟುಗಳ ‘ಡೀಲ್’ ಅನ್ನೂ ಯಾರ್‍್ಯಾರಿಗೋ ಕುದುರಿಸಿಕೊಟ್ಟ ಕಾರಣಕ್ಕೆ ಸಾಧಾರಣ ಕಾರು ಹೋಗಿ, ದೊಡ್ಡ ಹೊಳೆಹೊಳೆಯುವ ಕಾರು ಬಂತು. ಡ್ರೈವರ್ ಬಂದ. ಬಿಸ್‌ನೆಸ್ ವಿಚಾರದಲ್ಲಿ ಮುನಿ ಪಕ್ಕಾ ಜವಾರಿ ಮನುಷ್ಯ.

ರಿಯಲ್ ಎಸ್ಟೇಟ್ ಅಂದರೆ ಗೊತ್ತಲ್ಲ? ಈ ಕತ್ತಲ ಹೊಳಪಿನ ಗಂಡಸಿಗೆ ದುಡ್ಡಿನ ನಕ್ಷತ್ರಗಳ ಜಾಡು ಗೊತ್ತಿತ್ತು. ಅದಕ್ಕೆ ತಕ್ಕಂತೆ ಹಾಕಬೇಕಾದ ಹೆಜ್ಜೆಯ ಜಾಡೂ ಗೊತ್ತಿತ್ತು. ಹಾಗಾಗಿ ಕಾರು ಬದಲಾದಾಗ ತನ್ನ ಶರಟುಗಳ ಬ್ರಾಂಡೂ ಬದಲಾಯಿತು.

ರಾಜಕಾರಣಿಗಳ ಸಹವಾಸದಲ್ಲಿ ಬಿಳಿ ಶರಟು, ಮತ್ತೆ ಸೈಟು ಕೊಳ್ಳುವಾತುರದ ಹಿಂದಿ ಭಾಷಿಕರ ಸಂಪರ್ಕದಲ್ಲಿದ್ದಾಗ ಬ್ರಾಂಡೆಡ್ ಬಣ್ಣದ ಶರಟುಗಳು. ಕುತ್ತಿಗೆಯಲ್ಲಿದ್ದ ಗರಿಕೆಯ ಕಡ್ಡಿಯಂತಿದ್ದ ತೆಳ್ಳನೆ ಬಂಗಾರದ ಚೈನು ಮಾಯವಾಗಿ ಇದ್ದಕ್ಕಿದ್ದ ಹಾಗೆ ಎಳೆ ಕಬ್ಬಿನ ಜಲ್ಲೆಯಷ್ಟಾಯಿತು.

ಬೆರಳುಗಳಲ್ಲಿ ಎಂಥೆಂಥದೋ ಹರಳಿನ ಉಂಗುರಗಳು. ಯಾವುದೋ ಅದೃಷ್ಟ ರತ್ನದ್ದು ಒಂದು. ಜನ್ಮದೋಷ ಪರಿಹಾರಕ್ಕೆ ಇನ್ನೊಂದು. ಅದೆಲ್ಲದರ ಪರಿಣಾಮ ಮ್ಯಾನೇಜ್ ಮಾಡಕ್ಕೆ ನವರತ್ನ. ಕೆಲಸದಲ್ಲಿ ತೊಂದರೆ ಆಗದಿರಲಿ ಅಂತ ಒಂದು ಚಂದ್ರನ ಬಣ್ಣದ ಕಲ್ಲು– ಹೀಗೇ. ಮತ್ತೂ ದುಡ್ಡು ಜಾಸ್ತಿಯಾದಾಗ ಸೊಂಟದಲ್ಲಿದ್ದ ಬೆಳ್ಳಿಯ ಉಡುದಾರದ ಜಾಗಕ್ಕೆ ಬಂಗಾರದ್ದು ಬಂತು. ‘ಆ ಬಂಗಾರದ್ ಉಡ್ದಾರಾನೇ ಬೆಲ್ಟ್ ಥರಾ ಐತೆ ಅಕಾ’ ಅಂತ ಕೋಟಿ ಹೇಳಿದ.

ಬಡತನದಲ್ಲಿರುವ ಕೋಟಿಯ ತಂದೆ ತಾಯಿಗಳನ್ನು ನೆನೆಸಿಕೊಂಡು ಜಯಾ ಕೋಟಿಯನ್ನು ಮುನಿರಾಜುವಿನ ಹತ್ತಿರ ಬಿಟ್ಟರೆ ಒಳ್ಳೇದಾಗುತ್ತಲ್ಲವೇ ಅಂತ ಯೋಚಿಸಿದಳು. ‘ಇಲ್ಲಿಗೆ ಹೇಗಿದ್ರೂ ಸಂಬಳಕ್ಕೇ ಕರೆದುಕೊಂಡು ಬಂದಿರೋದು. ಅವನು ಹೆಂಗೂ ಕಾಲೇಜಿಗೆ ಹೋಗಲ್ಲ. ಅದರ ಬದಲು ರಿಯಲ್ ಎಸ್ಟೇಟ್ ವ್ಯವಹಾರ ಕಲಿತ್ರೆ ದುಡ್ಡು ಸಂಪಾದ್ನೆ ಮಾಡ್ಕೋತಾನೆ. ಚುರುಕು ಇದಾನೆ, ಅವನಿಗೆ ಆ ಫೀಲ್ಡ್ ಹೊಂದುತ್ತೆ. ಅಲ್ಲದೆ ಮುನಿರಾಜುಗೆ ಒಳ್ಳೆ ಅಸಿಸ್ಟೆಂಟ್ ಆಗ್ತಾನೆ’ ಅಂತ ತನ್ನ ತಾಯಿಯ ಹತ್ತಿರ ಹೇಳಿದಳು.

ಇದೆಲ್ಲಾ ನಡೆಯುತ್ತಿರುವಾಗ ಪೀಜಿಯಲ್ಲಿರುವವರು ತಮ್ಮ ಪಾಡಿಗೆ ತಾವು ಆರಾಮಾಗಿ ಆಫೀಸಿಗೆ ಹೋಗುವುದು ಬರುವುದು ಮಾಡಿಕೊಂಡಿದ್ದರು. ಖಾರ್ ಖಾರವಾದ ದಟ್ಟ ಕೆಂಪು ಬಣ್ಣದ ಆಂಧ್ರ ಅವಕಾಯಿ (ಉಪ್ಪಿನಕಾಯಿ), ಬಿಸಿ ಅನ್ನ, ಉಪ್ಪು, ತುಪ್ಪ, ಚಪಾತಿ, ಗೊಂಗುರ ಪಚ್ಚಡಿ, ಟೊಮೆಟೊ ಚಟ್ನಿ ಇತ್ಯಾದಿಗಳನ್ನು ಟ್ರಕ್ ಗಟ್ಟಲೇ ಪ್ರಮಾಣದಲ್ಲಿ ಸೇವಿಸುತ್ತಾ, ತಮ್ಮನ್ನು ಈ ಜಾಗಕ್ಕೆ ತಂದಿಟ್ಟ ಪರಿಸ್ಥಿತಿಗಳಿಗೆ ದೊಡ್ಡ ಥ್ಯಾಂಕ್ಸ್ ಹೇಳುತ್ತಾ ಕೋಟಿಯ ಹತ್ತಿರ ಹರುಕು ಮುರುಕು ಇಂಗ್ಲಿಷ್ ಮಿಶ್ರಿತ ತೆಲುಗು ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು.

ಕೋಟಿಗೂ ಇವರ ಸಹವಾಸ ಚೆನ್ನಾಗಿ ಹೊಂದಿತ್ತು. ಉಉಉಉಉಉದ್ದಕ್ಕೆ ಸರ್ವೆ ಕಂಬದ ಹಾಗೆ ನಿಲ್ಲುತ್ತಿದ್ದ ಹುಡುಗನೂ ಕತ್ತಲೆಯ ಬಣ್ಣವೇ. ನಕ್ಕರೆ ಮಾತ್ರ ಫಳಕ್ ಅಂತ ಹಲ್ಲುಗಳ ಹಳದಿ ಮಿಶ್ರಿತ ಬಿಳಿ ಬಣ್ಣ ಕಾಣಿಸುತ್ತಿತ್ತು. ಬಿಟ್ಟರೆ ಕಣ್ಣಗುಡ್ಡೆಯನ್ನಾವರಿಸಿದ್ದ ಬಿಳಿ ಆವರಣವೂ ಬಹುತೇಕ ಗಾಳಿ ತಾಕಿದ ಸೇಬು ತುಂಡಿನ ಬಣ್ಣವೇ.

ಇಂಥ ಕೋಟಿಗಿದ್ದ ಏಕೈಕ ಆಸೆ ಬದುಕಿನಲ್ಲಿ ದಿಢೀರ್ ಅಂತ ಶ್ರೀಮಂತನಾಗಿಬಿಡಬೇಕು ಎನ್ನುವುದು. ‘ಏನೇ ಹೇಳಕ್ಕಾ ಡಬ್ಬು ಉಂಡಾಲಿ (ದುಡ್ಡು ಇರಬೇಕು)! ಅದೊಂದೇ ಮಾತಾಡೋದು! ಉಳಿದದ್ದೆಲ್ಲಾ ಸೈಲೆಂಟ್!’ ಅಂತ ಆಗಾಗ ಹೇಳುತ್ತಲಿದ್ದ.

ಜಯಾಗೂ ಇವನು ರಿಯಲ್ ಎಸ್ಟೇಟ್ ಕೆಲಸಕ್ಕೆ ಸರಿಯಾಗಿ ಸೆಟ್ ಆಗ್ತಾನೆ ಅನ್ನಿಸಿತು. ಮುನಿರಾಜು ಇನ್ನೊಮ್ಮೆ ಬೂತಿಗೆ ಯಾವುದೋ ಪೇಪರ್ ಜೆರಾಕ್ಸ್ ಮಾಡಿಸಲು ಬಂದಾಗ ಕೋಟಿಯನ್ನು ಮುಂದಿಟ್ಟು ಇವನನ್ನು ನಿಮ್ಮ ಬಳಿ ಕೆಲಸಕ್ಕೆ ಸೇರಿಸಿಕೊಳ್ಳಿ ಅಂತ ಜಯಾ ಕೇಳಿಕೊಂಡಳು.

ಐವತ್ತು ವಯಸ್ಸಿನ ಮುನಿರಾಜು ತನಗಿಂತ ಅರ್ಧ ವಯಸ್ಸಿನ ಹೆಣ್ಣು ತನ್ನ ಬಳಿ ಸಹಾಯ ಕೋರುತ್ತಿರುವುದನ್ನು ಕಂಡು ಸ್ವಲ್ಪ ಹೆಚ್ಚೇ ಗಂಡಸ್ತನ ಅನುಭವಿಸಿದ. ಬಂಗಾರ, ದುಡ್ಡು, ಕಾರು, ದೊಡ್ಡದೊಡ್ಡವರ ಸಹವಾಸ ಇದೆಲ್ಲದರ ಜೊತೆ ಅಬಲೆಯ ಸಂಸಾರಕ್ಕೆ ತಾನು ಆಧಾರವೂ ಆಗಿಬಿಟ್ಟರೆ ತನಗಿಂತಾ ಇನ್ನೊಬ್ಬ ‘ಗಂಡಸಿನಂತಾ ಗಂಡಸು’ ಇರಲು ಸಾಧ್ಯವೇ ಅಂತ ಅನ್ನಿಸಿರಬೇಕೇನೋ. ಎಲ್ಲವೂ ಇದ್ದ ಮೇಲೆ ‘ಚಿನ್ನ ವೀಡು’ (ಉಪಸಂಸಾರ) ಇಲ್ಲದಿದ್ದರೆ ಸಮಾಜದಲ್ಲಿ ತನ್ನ ಬೆಲೆಯಾದರೂ ಏನು?

‘ಕೋಟಿ ಬೇಕಾದರೆ ಬರಲಿ. ಕೆಲಸ ಹೇಳಿಕೊಡ್ತೀನಿ’ ಅಂತ ಮೊದಲು ಸ್ವಲ್ಪ ಉಡಾಫೆಯಿಂದಲೇ ಹೇಳಿದ ಮುನಿರಾಜು. ಜಯಾ ಕೋಟಿಗೆ ಕಳಿಸುತ್ತಿದ್ದ ಊಟ ಮುನಿರಾಜುವಿನ ಹೊಟ್ಟೆ ಸೇರುತ್ತಿದೆ ಅಂತ ಕೋಟಿಯೇ ಹೇಳಿದ. ‘ಅಕಾ... ನೀನ್ ಪಪ್ಪು (ಆಂಧ್ರ ಶೈಲಿಯ ತೊವ್ವೆ) ಬಹಳ ಚೆನ್ನಾಗಿ ಮಾಡ್ತೀಯಂತೆ... ಅವಕಾಯಿ ಕೂಡ ಚೆನ್ನಾಗಿರುತ್ತೆ. ಅಕ್ಕನಿಗೆ ದೊಡ್ಡ ಡಬ್ಬಿ ಕಳಿಸಕ್ಕೆ ಹೇಳು ಅಂತ ಹೇಳಿದಾರೆ’ ಅಂತ ಹೇಳುತ್ತಾ ಕೋಟಿ ತನಗರಿವಿಲ್ಲದೇ ನಾಜೂಕಯ್ಯನಾದ.

ಅದೆಲ್ಲಾ ಸಂಬಂಧ ಸೋಪಾನಕ್ಕೆ ಮೆಟ್ಟಿಲುಗಳು ಅಂತ ಅನನುಭವಿ ಜಯಾಗೆ ಅರ್ಥವಾಗುವುದಾದರೂ ಹೇಗೆ? ಸರಿ, ಇಬ್ಬರಿಗೂ ಸೇರಿ ಊಟ ಕಳಿಸತೊಡಗಿದಳು. ಹೀಗೇ ಶುರುವಾಗಿ ಮುನಿರಾಜು ಸಂಜೆ ಹೊತ್ತು ಮನೆಗೆ ಊಟಕ್ಕೆ ಅಂತ ಬಂದು ನಡುರಾತ್ರಿಗೆ ಹೊರಡುವಷ್ಟು ಸಲಿಗೆ ಬಂತು. ಮುನಿರಾಜು ಇದ್ದಾಗ ಪೀಜಿಗಳು ಯಾರೂ ಹೊರಗೆ ಬರುತ್ತಿರಲಿಲ್ಲ. ಅವರು ಟೀವಿ ನೋಡುವುದಾದರೆ ಮುನಿರಾಜು ಜಯಾ ರೂಮಿನಲ್ಲಿ ಕೂತಿರುತ್ತಿದ್ದ.

ತನಗೆ ಅಂತಲೇ ಒಂದು ಟೀಕ್ ಆರಾಮ ಖುರ್ಚಿ ತಂದಿಟ್ಟುಕೊಂಡಿದ್ದ. ಜಯಾ ಮಗನನ್ನು ತನ್ನ ಅಮ್ಮನ ಜೊತೆ ಊರಿಗೆ ಕಳಿಸಿಬಿಟ್ಟಿದ್ದಳು.
ಹೀಗೇ ಮುನಿರಾಜು ರಾತ್ರಿಯವರೆಗೂ ಉಳಿದುಕೊಂಡಿದ್ದ ಒಂದು ಮಧ್ಯರಾತ್ರಿ ಬಾತ್ರೂಮಿಗೆ ಅಂತ ಎದ್ದಿದ್ದ ಸೂಸನ್ ಜಯಾ ರೂಮಿಂದ ಚಿತ್ರ ವಿಚಿತ್ರ ಸದ್ದುಗಳು ಬರುವುದನ್ನು ಆಲಿಸಿದಳು. ಸ್ವಲ್ಪ ಹೊತ್ತಿನ ನಂತರ ಆ ಸದ್ದುಗಳು ನಿಂತು ಹೋದವು. ಮುನಿರಾಜು ಇನ್ನೂ ಮನೇಲಿ ಇದ್ದಾನಾ? ಎಂದುಕೊಳ್ಳುತ್ತ ಸೂಸನ್ ಬಂದು ವಿಜಿಯನ್ನು ಎಬ್ಬಿಸಿದಳು.

‘ಜಯಾ ರೂಮಿಂದ ಏನೇನೋ ಸೌಂಡ್ಸು ಕಣೇ...’

‘ಏನ್ ಸೌಂಡಾದ್ರೆ ನಿನ್ಗೇನು? ಸುಮ್ನೆ ಮುಚ್ಕೊಂಡು ಮಲ್ಕೊ’

‘ಕತ್ತೆ ನೀನು. ಮುನಿರಾಜು ಇನ್ನೂ ಇದ್ದಾನೇನೋ’

‘ಇದ್ದರೆ ಇದ್ದ. ನಮ್ಮ ರೂಮಿಗೆ ಬಂದರೆ ಪ್ರಾಬ್ಲಮ್ಮು. ಜಯಾ ಮೇಲೆ ದೌರ್ಜನ್ಯ ಮಾಡ್ತಾ ಇದ್ದರೆ ಇನ್ನೊಂದು ಪ್ರಾಬ್ಲಮ್ಮು. ಎರಡೂ ಇಲ್ಲದೆ ಅವರಿಬ್ಬರೂ ಒಪ್ಪಿಕೊಂಡು ಸಂಬಂಧ ಬೆಳೆಸಿದರೆ ನಿನಗೇನು ಕಷ್ಟ?’

ಹೌದಲ್ಲ! ನನಗೇನು ಕಷ್ಟ ಅಂತ ಸೂಸನ್ ಸುಮ್ಮನೆ ಮಲಗಿದರೂ ಪಕ್ಕದ ರೂಮಿನಿಂದ ಬರುತ್ತಿದ್ದ ಸೌಂಡುಗಳನ್ನು ನಿರ್ಲಕ್ಷಿಸಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT