ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೂಪ್ಲಿಕೇಟ್ ವಸ್ತುಗಳ ಜಗತ್ತು

Last Updated 29 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭಾರತದಲ್ಲಿ ಡೂಪ್ಲಿಕೇಟ್ ವಸ್ತುಗಳು ಎಷ್ಟು ಸರ್ವವ್ಯಾಪಿ ಎಂದು ಎಲ್ಲರಿಗೂ ಗೊತ್ತು. ಬೆಂಕಿ ಪೊಟ್ಟಣದಿಂದ ಹಿಡಿದು ಎಲೆಕ್ಟ್ರಾನಿಕ್  ವಸ್ತುಗಳವರೆಗೆ ಇಲ್ಲಿ ಎಲ್ಲ ನಕಲಾಗುತ್ತವೆ. ಅಂಥ ವಸ್ತುಗಳನ್ನು ಮಾರುವ ಅಂಗಡಿಗಳು ಬೆಂಗಳೂರಿನ ಗಾಂಧಿನಗರ, ಮೆಜೆಸ್ಟಿಕ್ ಪ್ರದೇಶದಲ್ಲಿ ಎಷ್ಟೋ ಇವೆ. ‘ಕೌಂಟರ್‌ಫೀಟಿಂಗ್’ ಎಂದು ಕರೆಯುವ ಈ ದಂಧೆ ಕೇವಲ ಭಾರತದ ಸಮಸ್ಯೆಯಲ್ಲ. (ಬಂಡವಾಳಶಾಹಿ ವ್ಯವಸ್ಥೆ ಪ್ರಮೋಟ್ ಮಾಡುವ ಬ್ರಾಂಡ್ ಹುಚ್ಚನ್ನು ವಿರೋಧಿಸುವವರ ಪ್ರಕಾರ ಇದು ಸಮಸ್ಯೆಯೇ ಅಲ್ಲ. ಅದು ಹಾಗಿರಲಿ).

ಮಲೇಷ್ಯಾ, ಇಂಡೋನೇಷ್ಯಾ ಕಡೆ ಟೂರ್ ಹೋಗುವ ಭಾರತೀಯರ ಪೈಕಿ ಬೆಂಗಳೂರಿಗರೂ ದೊಡ್ಡ ಸಂಖ್ಯೆಯಲ್ಲಿರುತ್ತಾರೆ. ರಜೆಯ ಸೀಸನ್ ಬಂತೆಂದರೆ ಭಾರತದೊಳಗಿನ ಪ್ಲೇನ್‌ ಮತ್ತು ಹೋಟೆಲ್ ದರ  ಏರಿಬಿಡುತ್ತದೆ. ಗೋವಾಕ್ಕೆ ಹೋಗುವುದಕ್ಕಿಂತ ಸಿಂಗಪುರ, ಕ್ವಾಲಾಲಂಪುರ, ಫುಕೆಟ್‌ನಂಥ ಊರುಗಳಿಗೆ ಪ್ರವಾಸ ಹೋಗುವುದು ಅಗ್ಗವಾಗಿಬಿಡುತ್ತದೆ. (ಇದಕ್ಕೆ ಒಂದು ಕಾರಣ ಆ ಪ್ರದೇಶದಲ್ಲಿ ಬಜೆಟ್ ವಿಮಾನಗಳ ಹಾರಾಟ ಹೆಚ್ಚಾಗಿರುವುದು; ಮತ್ತೊಂದು ಕಾರಣ ಆ ಆರ್ಥಿಕ ವ್ಯವಸ್ಥೆಗಳು ಪ್ರವಾಸಿಗರ ದುಡ್ಡಿನ ಮೇಲೆ ಅವಲಂಬಿತವಾಗಿದ್ದು, ಕಡಿಮೆ ದರದಿಂದ ಆಕರ್ಷಿತರಾಗಿ ಬರುವವರು, ತಲುಪಿದ ಮೇಲೆ ಖರ್ಚು ಮಾಡೇಮಾಡುತ್ತಾರೆ ಎಂದು ನಂಬಿರುತ್ತವೆ).

ಹೀಗೆ ಟೂರ್ ಹೋದವರ ಕಣ್ಣಿಗೆ ಬೀಳುವುದು ಅಲ್ಲಿ ಸಿಗುವ ನಕಲಿ ಪದಾರ್ಥಗಳು. ಲಕ್ಷಕ್ಕೂ ಕಡಿಮೆ ಇರದ ಕೈಗಡಿಯಾರಗಳನ್ನು ಇಲ್ಲಿ ಮುನ್ನೂರು ನಾನೂರು ರೂಪಾಯಿಗೆ ಮಾರುತ್ತಿರುತ್ತಾರೆ. ರೊಲೆಕ್ಸ್, ಡೀಸೆಲ್, ಟ್ಯಾಗ್ ಹಾಯರ್ ನಂತಹ ವಾಚ್‌ಗಳು ಇಷ್ಟು ಅಗ್ಗದ ಬೆಲೆಗೆ ಲಭ್ಯವಿರುವುದು ಹೇಗೆ ಸಾಧ್ಯ? ಕಪ್ಪು ಕನ್ನಡಕ, ಜೀನ್ಸ್, ಬೂಟು, ಲಗೇಜ್, ಹ್ಯಾಂಡ್ ಬ್ಯಾಗ್‌ಗಳು ಎಲ್ಲವನ್ನೂ ಕಡಿಮೆ ಬೆಲೆಗೆ ಕಂಡ ಭಾರತೀಯ ಪ್ರವಾಸಿಗರು ಅಷ್ಟು ಭರದಿಂದ ಶಾಪಿಂಗ್ ಮಾಡುವುದರಲ್ಲಿ ಆಶ್ಚರ್ಯವೇನಿದೆ?
ನಮ್ಮ ಭಾಷೆಯಲ್ಲಿ ಇವೆಲ್ಲ ಡೂಪ್ಲಿಕೇಟ್ ಮಾಲುಗಳು. ಆ ದೇಶಗಳಲ್ಲಿ ಅಂಥ ವಸ್ತುಗಳನ್ನು ‘ರೆಪ್ಲಿಕಾ’ಗಳೆಂದು ಕರೆಯುತ್ತಾರೆ.

ಹೆಸರುವಾಸಿ ಸಂಸ್ಥೆಗಳು ತಯಾರಿಸಿದ ವಸ್ತುಗಳನ್ನು ಅಸಲಿಯಂತೆಯೇ ಕಾಣುವ ರೀತಿ ನಕಲು ಮಾಡಿ ಮಾರುವ ದಂಧೆ ದೊಡ್ಡ ಪ್ರಮಾಣದ್ದು. ಬೆಲೆಯಲ್ಲಿ ಅಷ್ಟು ವ್ಯತ್ಯಾಸವಿರುವುದರಿಂದ ಗಿರಾಕಿಗಳು ನಕಲಿ ಎಂದು ತಿಳಿದೇ ಕೊಳ್ಳುತ್ತಾರೆ. ಬ್ರಾಂಡ್ ಮಾಲಿಗೆ ಹೋಲಿಸಿದರೆ ತುಂಬ ಅಗ್ಗವೆನಿಸುವ ರೆಪ್ಲಿಕಾಗಳಿಗೆ ದೊಡ್ಡ ಮಾರುಕಟ್ಟೆ ಇರುವುದರಲ್ಲಿ ಆಶ್ಚರ್ಯವೇನಿಲ್ಲ. ದೊಡ್ಡ ಬ್ರಾಂಡ್ ಪೂರ್ತಿ ಬೆಲೆ ಕೊಟ್ಟು ಖರೀದಿ ಮಾಡುವವರು ಕೊಳ್ಳಲಾಗದವರಿಗಿಂತ ಕಡಿಮೆ ಸಂಖ್ಯೆಯಲ್ಲಿಯೇ ಇರುತ್ತಾರೆ.

ನಾನು ಬಲ್ಲ ಒಬ್ಬ ಎಲೆಕ್ಟ್ರಿಷಿಯನ್ ಹೇಳುವಂತೆ, ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಒರಿಜಿನಲ್ ಮಾಲಿನ ಜೊತೆಗೇ ನಕಲಿ ಮಾಲನ್ನು ಕೂಡ ಮಾರುತ್ತಿರುತ್ತಾರೆ. ಇಲ್ಲಿ ಗಿರಾಕಿಗಳು ತಿಳಿದು ರೆಪ್ಲಿಕಾ ಕೊಳ್ಳುವುದಕ್ಕಿಂತ ಮೋಸ ಹೋಗುವುದು ಹೆಚ್ಚು. ಫ್ಯಾನ್, ಮಿಕ್ಸಿ, ಗೀಸರ್‌ನಂಥ ವಸ್ತುಗಳು ನೋಡಲು ಒಂದೇ ಥರ ಕಂಡರೂ ಬೇರೆ ಬೇರೆ ಗುಣಮಟ್ಟದ್ದಾಗಿರುತ್ತವೆ. ‘ಇದು ನೋಡಿ ಡೂಪ್ಲಿಕೇಟ್’ ಎಂದು ಹೇಳಿ ಕೊಡುವ ಅಂಗಡಿಯವರು ಕೆಲವರಿದ್ದರೆ, ಇನ್ನು ಕೆಲವರು ಕಂಪೆನಿಯವರೇ ಗುರುತಿಸಲಾರದಷ್ಟು ಹೋಲಿಕೆಯಿರುವ ನಕಲಿ ಮಾಲನ್ನು ಒರಿಜಿನಲ್ ಬೆಲೆಗೆ ಮಾರುತ್ತಿರುತ್ತಾರೆ.

ತೊಂಬತ್ತರ ದಶಕಕ್ಕಿಂತ ಮುಂಚೆ ಇಲ್ಲಿ ವಿದೇಶಿ ವಸ್ತುಗಳು ಈಗ ಸಿಗುವಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಆಗ ಕಳ್ಳ ಸಾಗಾಣಿಕೆ ಮಾಡಿದ ಅಸಲಿ ಮಾಲಿನ ಜೊತೆಗೆ ಅದೇ ಥರ ಕಾಣುವ ನಕಲಿ ಮಾಲನ್ನೂ ಇಲ್ಲಿ ಮಾರುತ್ತಿದ್ದರು. ‘ಮೇಡ್ ಇನ್ ಜಪಾನ್’ ಅನ್ನುವುದನ್ನು ‘ಮೇಡ್ ಆ್ಯಸ್ ಜಪಾನ್’ ಎಂದು ಮುದ್ರಿಸಿ ಮಾರುವುದು ಸಾಮಾನ್ಯವಾಗಿತ್ತು. ಮುಂಬೈನಲ್ಲಿ ತಯಾರಾದ ಪದಾರ್ಥಗಳಿಗೆ ‘ಮೇಡ್ ಇನ್ ಯುಎಸ್ಎ’ ಎಂದು ಮುದ್ರೆ ಹಾಕುತ್ತಿದ್ದರು ಎಂದು ನೀವು ಕೇಳಿರಬಹುದು. ಅವರನ್ನು ವಿಚಾರಿಸಿದರೆ ಅವರು ಹೇಳಿದ್ದರಂತೆ: ‘ಯುಎಸ್ಎ ಅಂದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಲ್ಲ; ಉಲ್ಲಾಸ್ ನಗರ್ ಸಿಂಧಿ ಅಸೋಸಿಯೇಷನ್!’

ಅರ್ಮಾನಿ, ಗುಚ್ಚಿಯಂಥ ದುಬಾರಿ ಸೂಟ್‌ಗಳನ್ನು ೨೪ ಗಂಟೆಗಳಲ್ಲಿ ನಕಲು ಮಾಡಿ ನಿಮ್ಮ ಅಳತೆಗೆ, ತುಂಬಾ ಕಡಿಮೆ ಬೆಲೆಗೆ ಹೊಲಿದು ಕೊಡುವ ಒಬ್ಬ ಎಕ್ಸ್‌ಪರ್ಟ್ ಮುಂಬೈನಲ್ಲಿದ್ದಾನಂತೆ. ಆದರೆ ನಕಲು ಮಾಡುವುದು ಪ್ರೀಮಿಯಂ ಎನಿಸಿಕೊಳ್ಳುವ ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ. ಮ್ಯೂಸಿಕ್ ಉದ್ಯಮದಲ್ಲಿ ಪೈರಸಿ ವಿಷಯ ಮಾತಾಡುತ್ತಿರುತ್ತಾರೆ. ಅದು ಬೇರೆ ಥರದ ನಕಲು. (ಅಸಲಿ ವಸ್ತು ಇದ್ದಲ್ಲಿಯೇ ಇರುತ್ತದೆ, ಅದು ಕಳುವಾಗದ ಕಾರಣ ಪೈರಸಿಯನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ಕೆಲವರು ವಾದಿಸುತ್ತಾರೆ). ಆದರೆ ರೆಪ್ಲಿಕಾ ಸಂಸ್ಕೃತಿಗೆ ಹತ್ತಿರವಾದ ಒಂದು ಪರಿಪಾಠವನ್ನು ಹಾಡುಗಾರಿಕೆಯಲ್ಲಿ ಕಾಣಬಹುದು. ಕಿಶೋರ್ ಕುಮಾರ್ ಅನುಕರಣೆ ಮಾಡಿ ಕುಮಾರ್ ಸಾನು ಎಂಬ ಗಾಯಕ ಕೆಲವು ವರ್ಷ ಚಲಾವಣೆಯಲ್ಲಿದ್ದ.

ಶಬ್ಬೀರ್ ಕುಮಾರ್ ಎಂಬ ಗಾಯಕ ಮೊಹಮ್ಮದ್ ರಫಿ ಅನುಕರಣೆ ಮಾಡುತ್ತಾ ಸ್ವಲ್ಪ ಸಮಯ ಮಿಂಚಿ ಮಾಯವಾದ. ಒಬ್ಬ ಕಲಾವಿದರು ಬಾಲಮುರಳಿ ಕೃಷ್ಣ ಅವರನ್ನು ನಕಲು ಮಾಡಿ ಹಾಡಿದ ಗೀತೆ ಬಾಲಮುರಳಿ ಹೆಸರಿಗೇ ಕ್ರೆಡಿಟ್ ಆಗಿಹೋಯಿತು ಎಂದು ಕರುಬುತಿರುತ್ತಾರೆ. ಅದರಲ್ಲಿ ಆಶ್ಚರ್ಯವೇನಿದೆ? ಒಂದು ಮಾಲನ್ನು ತುಂಬಾ ಅದ್ಭುತವಾಗಿ ನಕಲು ಮಾಡಿದಾಗ ಒರಿಜಿನಲ್ ಸಂಸ್ಥೆಗೇ ಅದರ ಎಲ್ಲ ಶ್ರೇಯಸ್ಸು ಸೇರಿದರೆ ಅದರಲ್ಲಿ ತಪ್ಪೇನಿದೆ! ಎಷ್ಟೋ ಆರ್ಕೆಸ್ಟ್ರಾಗಳಲ್ಲಿ ಎಸ್‌.ಪಿ. ಬಾಲಸುಬ್ರಮಣ್ಯಂ, ರಾಜಕುಮಾರ್, ಪಿ.ಬಿ. ಶ್ರೀನಿವಾಸರಂತೆ ಹಾಡುವ ಕಲಾವಿದರಿರುತ್ತಾರೆ. ಅವರಲ್ಲಿ ಅನೇಕರಿಗೆ ತಮ್ಮ ಸ್ವಂತ ಧ್ವನಿಯೇ ಮರೆತುಹೋಗಿರುತ್ತದೆ. ಒಂದಷ್ಟು ಕೆಲಸ ಸಿಕ್ಕರೂ, ಅವರು ಅಸಲಿ ಗಾಯಕರಷ್ಟು ಹೆಸರು, ದುಡ್ಡು ಮಾಡುವುದಿಲ್ಲ.

ಅನುಕರಣೆ ಒಂದಷ್ಟು ದೂರ ಕರೆದೊಯ್ಯುತ್ತದಾದರೂ, ಸ್ವಂತಿಕೆ ಕಲೆಯಲ್ಲಿ ಮುಖ್ಯ ಎನ್ನುವ ಪಾಠ ಇದರಲ್ಲಿ ಅಡಗಿದೆಯೇನೋ?
ಆದರೆ ಇತರ ನಕಲಿ ವಸ್ತುಗಳ ವಿಷಯವೇ ಬೇರೆ. ಅವು ಅಸಲಿಯಷ್ಟು ಚೆನ್ನಾಗಿರುವುದಿಲ್ಲ ಎನ್ನುವುದು ಕೆಲವು ಸಂದರ್ಭಗಳಲ್ಲಿ ನಿಜ. ಈಚೆಗೆ ಬೆಂಗಳೂರಿನಲ್ಲಿ ಒಂದು ಟ್ರೆಂಡ್ ಶುರುವಾಗಿದೆ. ನಾಲ್ಕೈದು ಸ್ನೇಹಿತರು ಕಾರ್ ಮಾಡಿಕೊಂಡು ತಮಿಳುನಾಡಿನ ಅಂಬೂರಿಗೆ ಹೋಗಿ ಶೂಸ್ ಖರೀದಿ ಮಾಡಿ ಬರುತ್ತಾರೆ. ಆ ಊರು ಚರ್ಮ ಪರಿಷ್ಕರಣೆ ಮಾಡುವುದಕ್ಕೆ ಪ್ರಸಿದ್ಧ. ಎಷ್ಟೋ ದೊಡ್ಡ ಸಂಸ್ಥೆಗಳು ತಮ್ಮ ವಸ್ತುಗಳನ್ನು ಆ ಊರಿನ ಕಾರ್ಖಾನೆಗಳಲ್ಲಿ ಮಾಡಿಸಿ ತಮ್ಮ ಲೇಬಲ್ ಹಚ್ಚಿ ಮಾರುತ್ತವೆ.

ಜಾಹೀರಾತು, ಮಾರ್ಕೆಟಿಂಗ್, ಶೋರೂಂ ಬಾಡಿಗೆಯ ಖರ್ಚು ವೆಚ್ಚಕ್ಕೆ ತಮ್ಮ ಲಾಭವನ್ನು ಸೇರಿಸಿ ಬ್ರಾಂಡೆಡ್ ಪ್ರಾಡಕ್ಟ್‌ಗಳಿಗೆ ಬೆಲೆ ನಿಗದಿ ಮಾಡಿರುತ್ತಾರೆ. ಆದರೆ ಅದ್ಯಾವುದೂ ಖರ್ಚಿಲ್ಲದೆ ಕಡಿಮೆ ಬೆಲೆಗೆ ಅದೇ ಕಾರ್ಖಾನೆಯಲ್ಲಿ ತಯಾರಾದ ವಸ್ತುಗಳು ಅಂಬೂರಿನಲ್ಲಿ ಸಿಗುತ್ತವೆ. ಹಾಗೆಯೇ ತಿರುಪ್ಪೂರಿಗೆ ಹೋದರೆ ಒಳ ಉಡುಪು, ಟೀಶರ್ಟ್ ತುಂಬ ಅಗ್ಗವಾಗಿ ಸಿಗುತ್ತವೆ. ಬ್ರಾಂಡೆಡ್ ವಸ್ತುಗಳಿಗೆ ಹೋಲಿಸಬಹುದಾದ ಗುಣ ಮಟ್ಟದ ವಸ್ತುಗಳು ಹೀಗೆ ಸಿಗುವುದೂ ಸಾಧ್ಯ.

ನಕಲಿ ಮಾಡುವವರನ್ನು ಹಿಡಿಯಲೆಂದೇ ಖಾಸಗಿ ಪತ್ತೇದಾರಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಎಲ್ಲಿ ಇಂಥ ವಸ್ತುಗಳು ಮಾರಾಟ ಆಗುತ್ತಿವೆ ಎಂದು ಪತ್ತೆಹಚ್ಚಿ ಪೋಲಿಸರಿಂದ ದಾಳಿ ಮಾಡಿಸುವ ಕೆಲಸದಲ್ಲಿ ಈ ಸಂಸ್ಥೆಗಳು ತೊಡಗಿವೆ. ಹೀಗೆ ಮಾಡಿ ನಕಲಿ ವ್ಯಾಪಾರದಿಂದ ನಷ್ಟ ಅನುಭವಿಸಿದ ಸಂಸ್ಥೆಗಳಿಂದ ಸಂಭಾವನೆ ಪಡೆಯುತ್ತವೆ.

‘ಚೀತ ಫೈಟ್’ ಎಂದು ಹೆಸರಿರುವ ಬೆಂಕಿ ಪೊಟ್ಟಣಕ್ಕೆ ‘ಗೀತ ಫೈಟ್’ ಎಂದು ಅದೇ ಶೈಲಿಯ ಅಕ್ಷರದ ಲೇಬಲ್ ಮುದ್ರಿಸಿ ಮಾರುವ ಪರಿಣತಿ ಹೊಂದಿರುವ ಉದ್ಯಮಶೀಲರು, ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ತಮ್ಮದೇ ಬ್ರಾಂಡ್ ಯಾಕೆ ಸ್ಥಾಪಿಸುವುದಿಲ್ಲ? ಅನುಕರಣೆಯಿಲ್ಲದೆ ಕಲೆಯಿಲ್ಲ ಎಂಬುದು ನಿಜವಾದರೂ ಅನುಕರಣೆಯೊಂದೇ ಕಲೆಯಾಗುವುದಿಲ್ಲ. ಈ ನಕಲಿ ವ್ಯಾಪಾರವನ್ನು ಹಾಗೆಯೇ ನೋಡಬಹುದೇ? ಅದು ಅಸಲಿ ಉದ್ಯಮಶೀಲತೆಯತ್ತ ಇಟ್ಟ ಮೊದಲ ಹೆಜ್ಜೆಯಾಗಬಹುದೇ?

ವರ್ಲ್ಡ್ ಸಿನಿಮಾ ಎಲ್ಲಿ ನೋಡುವುದು?
ಹಾಲಿವುಡ್, ಬಾಲಿವುಡ್ ಸಿನಿಮಾ ಬಿಟ್ಟು ಬೇರೆ ಥರದ ಸಿನಿಮಾ ನೋಡಬೇಕಾದರೆ ಎಲ್ಲಿ ಹೋಗಬೇಕು? ಟೀವಿಯಲ್ಲಿ ಈಗ ‘ಯುಟಿವಿ– ವರ್ಲ್ಡ್ ಸಿನಿಮಾ’ ಎಂಬ ಚಾನೆಲ್ ಇದೆ. ಅಲ್ಲಿ ಬೇರೆ ಬೇರೆ ದೇಶದ, ಅಪರೂಪವೆನಿಸುವ ಸಿನಿಮಾ ಹಾಕುತ್ತಿರುತ್ತಾರೆ.
(ಯಾಕೋ ‘ಟಾಟಾ ಸ್ಕೈ’ನಲ್ಲಿ ಈ ಚಾನೆಲ್ ಬರುವುದಿಲ್ಲ). ‘ಎನ್ಲೈಟನ್’, ‘ಪಲಡೋರ್’, ‘ಮೋಸೆರ್ ಬೇರ್’ ಸಂಸ್ಥೆಗಳ ಡಿವಿಡಿಗಳು ಈಗ ಮೊದಲಿಗಿಂತ ಹೆಚ್ಚಾಗಿ ಮ್ಯೂಸಿಕ್ ಅಂಗಡಿಗಳಲ್ಲಿ ಕಣ್ಣಿಗೆ ಬೀಳುತ್ತವೆ.

ಹಳೆಯ ಯುರೋಪಿಯನ್ ಚಿತ್ರಗಳ ಜೊತೆಗೆ ಇರಾನ್, ಟರ್ಕಿಯಂಥ ದೇಶಗಳಲ್ಲಿ ತಯಾರಾಗುತ್ತಿರುವ ಹೊಸ ಚಿತ್ರಗಳು ಈಗ ನೋಡಲು ಸಿಗುತ್ತವೆ. ಬಿಗ್ ಫ್ಲಿಕ್ಸ್‌ನಂಥ ಸಂಸ್ಥೆಗಳು ಡೌನ್‌ಲೋಡ್ ಸೌಲಭ್ಯವನ್ನು ಒದಗಿಸುತ್ತಿವೆ. ಸುಚಿತ್ರ ಫಿಲ್ಮ್‌ ಸೊಸೈಟಿ ಯಂಥ ಸಂಸ್ಥೆಗಳೂ ಬೆಂಗಳೂರಿಗೆ ಬೇರೆ ಬೇರೆ ಥರದ ಸಿನಿಮಾ ತೋರಿಸುವ ಕೆಲಸದಲ್ಲಿ ತೊಡಗಿವೆ. ಒಳ್ಳೆಯ ಸಿನಿಮಾ ಅಭಿರುಚಿ ಬೆಳೆಸಿಕೊಳ್ಳಲು ಸೌಕರ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿರುವಂತೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT