ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಗೋಡೆ ಸೇತುವೆಯಾದದ್ದು...

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಒಂದು ಊರಲ್ಲಿ ಅಣ್ಣ-ತಮ್ಮಂದಿರಿದ್ದರು. ಅವರು ತಂದೆ ಇರುವಾಗಲೇ ಆಸ್ತಿ ಭಾಗಮಾಡಿ­ಕೊಂಡಿದ್ದರೂ ಅಕ್ಕ ಪಕ್ಕದಲ್ಲೇ ವಾಸ­ವಾಗಿದ್ದರು. ಇಬ್ಬರ ಜಮೀನುಗಳು ಕೂಡ ಹೊಂದಿಕೊಂಡೇ ಇದ್ದವು. ಸುಮಾರು ನಲವತ್ತು ವರ್ಷಗಳ ಕಾಲ ಅನ್ಯೋನ್ಯತೆಯಿಂದ ಬದುಕಿದ್ದರು.
ವ್ಯವಸಾಯಕ್ಕೆ ಬೇಕಾದ ಪರಿಕರಗಳನ್ನು, ಸಾಮಗ್ರಿಗಳನ್ನು ಹಂಚಿಕೊಂಡು ಸಂತೋಷ­ವಾಗಿದ್ದರು.

ಯಾವುದೋ ಒಂದು ಸಣ್ಣ ಕಾರಣಕ್ಕೆ ಇಬ್ಬರ ನಡುವೆ ಒಂದು ಮಾತು ಬಂದು ಮನ ಕೆಡಿಸಿತು. ಅಷ್ಟು ವರ್ಷಗಳ ಸೌಹಾರ್ದ ಕರಗಿ ಹೋಯಿತು. ಒಂದು ಪುಟ್ಟ ಮನಸ್ತಾಪ ರಕ್ತ ಸಂಬಂಧವನ್ನು ಮುರಿದು ದ್ವೇಷ  ತಂದಿಟ್ಟಿತು. ಇಬ್ಬರ ನಡುವೆ ಹೊಡೆ­ದಾಟ­­ವಾಗುವ ಪ್ರಸಂಗವೂ ಬರು­ವಂತಿತ್ತು. ಆಗ ತಮ್ಮ ಅಣ್ಣನ ಮೇಲಿನ ಕೋಪದಿಂದ ಬುಲ್‌ಡೋಜರ್ ತರಿಸಿ ನದಿಯ ದಡದಿಂದ ನೀರನ್ನು ತನ್ನ ಹೊಲದ ಬದಿಗೆ ಹಾಯುವಂತೆ ಮಾಡಿದ. ಅಂದರೆ ಈ ನೀರಿನ ತೊರೆ ಇಬ್ಬರ ಜಮೀನನ್ನು ಸಂಪೂರ್ಣವಾಗಿ ಬೇರ್ಪಡಿಸುತ್ತಿತ್ತು.

ಹೀಗೆ ಒಂದು ಹಳ್ಳವನ್ನು ನಿರ್ಮಿಸಿ ಇಬ್ಬರ ನಡುವೆ ಕಂದಕವನ್ನು ಸೃಷ್ಟಿಸಿದ ತಮ್ಮನ ಬಗ್ಗೆ ಅಣ್ಣನಿಗೆ ಸಿಟ್ಟು ಕುದಿಯುತ್ತಿತ್ತು. ಆ ಸಮಯಕ್ಕೆ ಒಬ್ಬ ವ್ಯಕ್ತಿ ಅಣ್ಣನ ಬಳಿಗೆ ಬಂದ. ‘ಸ್ವಾಮೀ, ನಾನೊಬ್ಬ ಬಡಿಗ. ನಾನು ಈಗ ಒಂದು ವಾರದ ಮಟ್ಟಿಗೆ ಖಾಲಿ ಇದ್ದೇನೆ. ನನಗೇನಾದರೂ ಕೆಲಸವಿದ್ದರೆ ಹೇಳಿ. ಮಾಡಿಕೊಟ್ಟು ಹೋಗುತ್ತೇನೆ’ ಎಂದ. ಅಣ್ಣ ಹೇಳಿದ, ‘ನೀನು ಸರಿಯಾದ ಸಮಯಕ್ಕೇ ಬಂದಿದ್ದೀಯಾ. ನಿನಗೆ ಸಾಕಷ್ಟು ಕೆಲಸವಿದೆ. ಹೀಗೆ ಹೇಳಿ ಅವನನ್ನು ಮನೆಯ ಹಿಂದೆ ಕರೆದುಕೊಂಡು ಹೋದ. ಅಲ್ಲಿ ಅಪಾರವಾದ ಮರದ ಶೇಖರಣೆ ಇತ್ತು. ಅದನ್ನು ಬಡಗಿಗೆ ತೋರಿಸಿ, ನೋಡು ಈ ತೊರೆಯ ಆಚೆಗೆ ಇರುವವನು ನನ್ನ ತಮ್ಮ. ಅಷ್ಟು ಪ್ರೀತಿಯಿಂದ ಇದ್ದವರು ಈಗ ದಾಯಾದಿ­ಗಳಾಗಿ ನಿಂತಿದ್ದೇವೆ. ಅವನು ನಮ್ಮ ಜಮೀನುಗಳ ನಡುವೆ ತೊರೆ ಹಾಯಿಸು­ವುದಾದರೆ ನಾನೇಕೆ ಸುಮ್ಮನಿರಲಿ? ಇಲ್ಲಿ ಬೇಕಾದಷ್ಟು ಮರವಿದೆ. ಈ ಎರಡೂ ಜಮೀನುಗಳ ಮಧ್ಯೆ ಒಂದು ಮರದ ತಡೆಗೋಡೆ  ಕಟ್ಟಿಬಿಡು. ಅದು ಎಂಟು ಅಡಿ ಎತ್ತರವಿರಲಿ. ಅವನ ಮುಖ­ದರ್ಶನವೂ ನನಗೆ ಬೇಡ’ ಎಂದ. ಅವನಿಗೆ ಬೇಕಾದ ವಸ್ತುಗಳನ್ನು ಅಣಿ ಮಾಡಿಕೊಟ್ಟು ಅಣ್ಣ ಹೇಳಿದ, ‘ನಾನು ಮೂರು ದಿನ ಪಟ್ಟಣಕ್ಕೆ ವ್ಯವಹಾರಕ್ಕಾಗಿ ಹೋಗುತ್ತೇನೆ. ಆದಷ್ಟು ಬೇಗ ನಿನ್ನ ಕೆಲಸವನ್ನು ಮುಗಿಸಿಬಿಡು’. ಬಡಗಿ ಆಯ್ತು ಎಂದು ಒಪ್ಪಿಕೊಂಡ.

ಮೂರು ದಿನಗಳು ಕಳೆದವು. ಸಂಜೆಯ ಹೊತ್ತಿಗೆ ಅಣ್ಣ ಮರಳಿ ಬಂದು ನೋಡುತ್ತಾನೆ, ತಡೆಗೋಡೆಯ ಲಕ್ಷಣವೇ ಇಲ್ಲ! ಬದಲಾಗಿ ನೀರಿನ ತೊರೆಯ ಮೇಲೆ ಅತ್ಯಂತ ಸುಂದರ­ವಾದ ಮರದ ಸೇತುವೆ ನಿರ್ಮಾಣ­ವಾಗಿದೆ! ತೊರೆಯ ಈ ತುದಿಯಿಂದ ಆ ತುದಿಯವರೆಗೆ ಅತ್ಯಂತ ಆಕರ್ಷಕವಾದ ಸೇತುವೆ ಅದು. ಅದರ ಕಮಾನಿನಾ­ಕಾರದ ಲಕ್ಷಣವೇನು? ಎರಡೂ ಬದಿಗೆ ನಿರ್ಮಿಸಲಾದ ಅಲಂಕಾರವಾದ ಕಟಕಟೆಗಳೇನು! ಅವನ ಕಣ್ಣುಗಳು ಅದರ ಸುಂದರತೆಗೆ ಅರಳಿದವು.

ಆದರೆ, ತನ್ನಿಷ್ಟ ಪೂರೈಸದಿದ್ದುದಕ್ಕೆ ಸಿಟ್ಟು ಬಂದಿತು. ಆಗ ಅವನು ನೋಡಿದ, ಸೇತುವೆಯ ಆ ಬದಿಯಿಂದ ತಮ್ಮ ಮುಂದೆ ಬರುತ್ತಿದ್ದಾನೆ. ಅವನ ಹಿಂದೆಯೇ ಅವನ ಪರಿವಾರ! ತಮ್ಮ ಎರಡೂ ಕೈ ಚಾಚಿ, ಕಣ್ತುಂಬಿ ಮುಂದೆ ಬಂದ, ‘ಅಣ್ಣಾ ನನ್ನಷ್ಟು ಮೂರ್ಖ ಯಾರೂ ಇಲ್ಲಣ್ಣ. ನಮ್ಮಿಬ್ಬರ ನಡುವೆ ಭೇದ ಕಲ್ಪಿಸಲು ನಾನು ತೊರೆಯನ್ನು ಸೃಷ್ಟಿ ಮಾಡಿದರೆ ನೀನು ನನ್ನನ್ನು ಕ್ಷಮಿಸಿ ಅದಕ್ಕೆ ಸೇತುವೆ ಕಟ್ಟಿದ್ದೀಯಾ. ನನ್ನ ನಡೆಯನ್ನು, ಮಾತನ್ನು ಕ್ಷಮಿಸಿದ್ದೀಯಾ. ಅಣ್ಣಾ, ನಾನು ಇನ್ನು ನಿನಗೆಂದೂ ಮೋಸ ಮಾಡಲಾರೆ. ನೀನು ಹೇಳಿದಂತೆಯೇ ಇರುತ್ತೇನೆ’. ಅಣ್ಣನ ಕಣ್ಣಲ್ಲೂ ನೀರು. ಇಬ್ಬರೂ ಸೇತುವೆಯ ಮಧ್ಯಭಾಗದಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ದೂರನಿಂತಿದ್ದ ಬಡಗಿ ಕಣ್ಣೊರೆಸಿಕೊಂಡ. ಅಣ್ಣ ಬಡಗಿಯ ಕಡೆಗೆ ತಿರುಗಿ ಹೇಳಿದ ‘ನಿನ್ನ ಕೆಲಸ ಇನ್ನೂ ಮುಗಿದಿಲ್ಲ. ಬಹಳ ದಿನ ನೀನು ಇಲ್ಲೇ ಇರಬೇಕು’.

ಆಗ ಬಡಗಿ, ‘ಇಲ್ಲಣ್ಣ, ನಾನು ಇರಲಾರೆ. ಇನ್ನೂ ಬಹಳಷ್ಟು ಸೇತುವೆಗಳನ್ನು ಕಟ್ಟುವ ಕೆಲಸ ಕಾದಿದೆ’ ಎಂದು ಹೇಳಿ ಹೊರಟುಹೋದ. ನಮಗೂ ಎರಡು ಅವಕಾಶಗಳಿವೆ. ಒಂದು ತೊರೆ ನಿರ್ಮಿಸಿ ಭೇದವನ್ನು ತರುವುದು, ಎರಡನೆಯದು ಸೇತುವೆ ಕಟ್ಟುವುದು. ಮೊದಲನೆಯದು ಮನ­ದಲ್ಲಿ ವಿಷ ತುಂಬಿದರೆ ಎರಡನೆಯದು ಅಮೃತ ಸುರಿಸುತ್ತದೆ. ನಮ್ಮ ಆಯ್ಕೆ ಜೀವನದ ಗತಿಯನ್ನು ನಿರ್ಧರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT