ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಪದ: ಸಮಾನತೆಯ ಆಶಯದ ಅಧ್ಯಾತ್ಮ ಪರಂಪರೆ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಈ ತಿಂಗಳ 10ನೆಯ ತಾರೀಕಿನಂದು ಕನ್ನಡ ತತ್ವಪದಗಳ 32  ಸಂಪುಟಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ‘ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಂಪುಟ ಮಾಲೆ’ ಎಂಬ ಯೋಜನೆಯಡಿ 50 ಸಂಪುಟಗಳಲ್ಲಿ ತತ್ವಪದಗಳನ್ನು ಸಂಗ್ರಹಿಸಿ, ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಇದರ ಮೊದಲ ಕಂತಾಗಿ ಈಗ ಬಿಡುಗಡೆಯಾಗಿರುವ 32 ಸಂಪುಟಗಳು ಕನ್ನಡದ ಓದುಗರಿಗೆ ದೊರಕಿವೆ.

ಕನ್ನಡ ತತ್ವಪದಗಳ ಪ್ರಕಟಣೆಯ ಅಗತ್ಯ ಎಷ್ಟು ಎಂಬುದನ್ನು ಎಷ್ಟು ಒತ್ತಿ ಹೇಳಿದರೂ ಸಾಲದು. ವೈಯಕ್ತಿಕವಾದ ಒಂದು ಮಾತನ್ನು ಇಲ್ಲಿ ಹೇಳಬಯಸುತ್ತೇನೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಇತಿಹಾಸಗಳನ್ನು ಸುಮಾರು ಮೂರು ದಶಕಗಳಿಂದ ನಾನು ಗಂಭೀರವಾಗಿ ಅಭ್ಯಸಿಸುತ್ತಿದ್ದೇನೆ. ಈ ಸಮಯದಲ್ಲಿ ನನ್ನ ಸಂಶೋಧನೆಗೆ ಹೊಸದಿಕ್ಕನ್ನು ಕೊಡುವ ಶಕ್ತಿಯುಳ್ಳ ಈ ಬಗೆಯ ಪ್ರಾಥಮಿಕ ಆಕರಗಳ ಪ್ರಕಟಣೆ ಯಾವುದೂ ಆಗಿರಲಿಲ್ಲ. ಹಾಗಾಗಿ ಸಮಗ್ರ ತತ್ವಪದಗಳ ಜನಪ್ರಿಯ ಸಂಪುಟಗಳ ಪ್ರಕಟಣೆಯು ನನ್ನೊಳಗಿನ ಸಂಶೋಧಕ ಕಾತರದಿಂದ ಕಾದುನೋಡುತ್ತಿದ್ದ ಕ್ಷಣ. ಇದಕ್ಕೆ ಕಾರಣವೇನೆಂದರೆ ಮುಂದಿನ 10–15 ವರ್ಷಗಳ ಕಾಲ ಅಭ್ಯಾಸ ಮಾಡಲು ಅಗತ್ಯವಿದ್ದ ಆರ್ಕೈವ್ (ಪ್ರಾಥಮಿಕ ದಾಖಲೆಗಳ ಸಂಗ್ರಹ) ಒಂದು ನನಗೆ ದೊರಕಿದೆ ಎನ್ನುವುದು.

ಕನ್ನಡ ತತ್ವಪದಗಳ ಪ್ರಕಟಣೆಯು ನನ್ನ ಸ್ವಾರ್ಥದ ಬಯಕೆಯನ್ನು ಪೂರೈಸುವ ಯೋಜನೆ ಮಾತ್ರವಾಗಿದ್ದರೆ ಅದನ್ನು ಸಾರ್ವಜನಿಕವಾಗಿ ಶ್ಲಾಘಿಸುವ ಅಗತ್ಯವಿರುತ್ತಿರಲಿಲ್ಲ. ಈಗ ಅಧ್ಯಯನಕ್ಕೆ ಲಭ್ಯವಾಗಿರುವ ತತ್ವಪದಗಳು ನಮ್ಮ ಇತಿಹಾಸ ಮತ್ತು ನಾಗರಿಕತೆಗಳಿಗೆ ಸಂಬಂಧಿಸಿದಂತೆ ನಮ್ಮ ಸ್ವಗ್ರಹಿಕೆಗಳನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿರುವಂತಹವು. ಈ ಮಾತು ಶೈಕ್ಷಣಿಕ (ಅಕಾಡೆಮಿಕ್) ಅಧ್ಯಯನದ ನೆಲೆಗಳಿಂದ ರೂಪುಗೊಂಡಿರುವ ನಮ್ಮ ಸ್ವಗ್ರಹಿಕೆಗಳ ಮಟ್ಟಿಗಂತೂ ಸಂಪೂರ್ಣವಾಗಿ ಸತ್ಯವಾದುದು.

ನನ್ನ ಮೇಲಿನ ಮಾತನ್ನು ಎರಡು ರೀತಿಯಲ್ಲಿ ವಿವರಿಸಬಯಸುತ್ತೇನೆ. ನಾವಿಲ್ಲಿ ಗುರುತಿಸಬೇಕಿರುವ ಮೊದಲ ಅಂಶವೆಂದರೆ ತತ್ವಪದಗಳ ಜೊತೆಗೆ ಇದುವರೆಗೆ ಕನ್ನಡ ಭಾಷಿಕರಿಗಿದ್ದ ಸಂಬಂಧ. ಈ ವಿಶ್ಲೇಷಣೆಯಲ್ಲಿ ಕನ್ನಡಿಗರ ಜೊತೆಗೆ ಮರಾಠಿ, ತೆಲುಗು ಮತ್ತು ದಖನಿ ಉರ್ದುವಿನಂತಹ ನೆರೆಹೊರೆಯ ಭಾಷೆಗಳನ್ನು ಸೇರಿಸಿದರೂ ತಪ್ಪಾಗುವುದಿಲ್ಲ. ತತ್ವಪದಗಳು ಬರವಣಿಗೆಯಲ್ಲಿ, ಮುದ್ರಣದಲ್ಲಿ ಹೆಚ್ಚಾಗಿ ಲಭ್ಯವಿರಲಿಲ್ಲ, ನಿಜ. ಆದರೆ ಅವುಗಳು ಸಾಮಾನ್ಯ ಕನ್ನಡಿಗರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದವು. ತತ್ವಪದಕಾರರು, ಅವರ ರಚನೆಗಳ ಹಾಡುಗಾರರು ಮತ್ತು ವ್ಯಾಖ್ಯಾನಕಾರರು ಹಾಗೂ ತತ್ವಪದಗಳಲ್ಲಿದ್ದ ವಿಚಾರಗಳು ನಮ್ಮ ಸಮುದಾಯಗಳಿಂದ ಯಾವಾಗಲೂ ಮರೆಯಾಗಿರಲಿಲ್ಲ. ಹೀಗೆ ತತ್ವಪದಗಳು ಮತ್ತು ಜನರ ನಡುವೆ ಇದ್ದ ಸಾವಯವ ಸಂಬಂಧವು ಕನ್ನಡ ಭಾಷಿಕರ ಸಂವೇದನೆ, ಜೀವನದೃಷ್ಟಿ ಮತ್ತು ಮಾನವೀಯ ಮೌಲ್ಯಗಳನ್ನು ರೂಪಿಸುತ್ತಲೇ ಬಂದಿವೆ. ಈ ಮಾತುಗಳು ವಸಾಹತುಶಾಹಿಪೂರ್ವ ಕಾಲಕ್ಕೆ ಮಾತ್ರವಲ್ಲ, ಆಧುನಿಕ ಕಾಲಕ್ಕೂ ಅನ್ವಯವಾಗುವ ಸತ್ಯಗಳು.

ಹೀಗೆ ತತ್ವಪದಗಳು ಜನಮಾನಸದಲ್ಲಿದ್ದರೂ ಶೈಕ್ಷಣಿಕ ಅಧ್ಯಯನಗಳಿಗೆ ಲಭ್ಯವಾಗಿರಲಿಲ್ಲ. ಆದುದರಿಂದ ನಮ್ಮ ಆಧುನಿಕ ಸ್ವಗ್ರಹಿಕೆಗಳನ್ನು, ಇಂದಿನ ತಿಳಿವಳಿಕೆಯನ್ನು ರೂಪಿಸುವ ಸಮಾಜವಿಜ್ಞಾನದ ಅಥವಾ ಸಾಹಿತ್ಯದ ಅಧ್ಯಯನಗಳೊಳಗೆ ತತ್ವಪದಗಳು ಪ್ರವೇಶಿಸಿದ್ದು ಕಡಿಮೆಯೇ. ಆದರೆ ಕರ್ನಾಟಕದ ಇತಿಹಾಸ ಮತ್ತು ಸಮಾಜಗಳ ಅಧ್ಯಯನಕ್ಕೆ ಬಹುಶಃ ವಚನಗಳಷ್ಟೇ ಮುಖ್ಯವಾದ ಪರಂಪರೆಯಿದು. ಈ ಹಿನ್ನೆಲೆಯಲ್ಲಿ ತತ್ವಪದಗಳ ಪ್ರಕಟಣೆಯ ಯೋಜನೆಯು 20ನೆಯ ಶತಮಾನದ ಪ್ರಾರಂಭದಲ್ಲಿ ಫ.ಗು. ಹಳಕಟ್ಟಿ ಮತ್ತಿತರರು ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿದ ಕೆಲಸದಷ್ಟೇ ಮುಖ್ಯವಾದುದು.

ನಮ್ಮ ಶೈಕ್ಷಣಿಕ ಅಧ್ಯಯನಗಳ ಮಿತಿಯನ್ನು ತೋರಿಸುವ ಗಮನಾರ್ಹ ವಿಪರ್ಯಾಸವೊಂದು ಇಲ್ಲಿದೆ. ಅದೇನೆಂದರೆ ಸಮುದಾಯದೊಳಗೆ ಜನರ ನಾಲಿಗೆ ಮೇಲೆ ನಲಿದಾಡುವ ರಚನೆಗಳು ಮತ್ತು ವಿಚಾರಗಳು ಮುದ್ರಣದಲ್ಲಿ ಕಾಣಿಸಿಕೊಳ್ಳುವ ತನಕ ಅವುಗಳನ್ನು ನಾವು ಅಧ್ಯಯನ ಮಾಡುವುದಿಲ್ಲ. ಹೀಗೆ ಮಾಡುವುದರಿಂದ ಇತಿಹಾಸ ಮತ್ತು ಸಮಾಜದ ಬಗೆಗಿನ ನಮ್ಮ ಗ್ರಹಿಕೆಗಳು ಅಪೂರ್ಣವಾಗಿಯೇ ಉಳಿಯುತ್ತವೆ ಎನ್ನುವುದರ ಬಗ್ಗೆ ನಮಗೆ ಆತಂಕವಿಲ್ಲ. ಈ ಕಾರಣದಿಂದಲೇ ತತ್ವಪದಗಳ ಬಗ್ಗೆ ಇದುವರೆಗೆ ಅಲ್ಲೊಂದು ಇಲ್ಲೊಂದು ಸಂಕಲನ, ಲೇಖನ ಅಥವಾ ಅಧ್ಯಯನ ಪ್ರಕಟವಾಗಿದ್ದರೂ, ಒಟ್ಟಾರೆಯಾಗಿ ಸುಮಾರು 500–600 ವರ್ಷಗಳ ಅವಧಿಯಲ್ಲಿ ಕಟ್ಟಲಾದ ಸಾಂಸ್ಕೃತಿಕ ಪರಂಪರೆಯೊಂದು ಬಹುಮಟ್ಟಿಗೆ ಅಲಕ್ಷಿತವಾಗಿಯೇ ಉಳಿದಿತ್ತು.

ಈಗ ತತ್ವಪದಗಳು ಸಮಗ್ರವಾಗಿ ಪ್ರಕಟವಾದ ನಂತರ ಅವುಗಳು ನಮ್ಮನ್ನು ಯಾವ ಬಗೆಯ ಹೊಸಚಿಂತನೆಗೆ ಒಡ್ಡಬಹುದು? ಇದು ನಾನು ಚರ್ಚಿಸಲು ಬಯಸುವ ಎರಡನೆಯ ಅಂಶ. ತತ್ವಪದಗಳ ಮೊದಲ ಓದಿನಿಂದಲೇ ಕನ್ನಡದ ತಳಸಮುದಾಯಗಳು ಸ್ಥಳೀಯವಾಗಿ ಕಟ್ಟಿಕೊಳ್ಳುತ್ತಿದ್ದ ಸಾಂಸ್ಕೃತಿಕ ಮತ್ತು ವೈಚಾರಿಕ ಪರಂಪರೆಗಳು ನಮಗೆ ಸ್ಪಷ್ಟವಾಗಿ ಗೋಚರವಾಗುತ್ತವೆ. ಇಂತಹುದೇ ಹಿನ್ನೆಲೆಯನ್ನು ಹೊಂದಿದ್ದ ವಚನ, ದಾಸ ಮತ್ತು ಜಾನಪದ ಮಹಾಕಾವ್ಯ ಪರಂಪರೆಗಳಿಂದ ಇದುವರೆಗೆ ಕನ್ನಡದ ವೈಶಿಷ್ಟ್ಯ ಮತ್ತು ವೈವಿಧ್ಯದ ಕಥನಗಳನ್ನು ಕಟ್ಟಿಕೊಂಡಿದ್ದೆವು. ಈ ಪರಂಪರೆಗಳ ನಡುವೆಯೂ ತತ್ವಪದಗಳು ಮತ್ತಷ್ಟು ಭಿನ್ನವಾಗಿ ಕಾಣುತ್ತವೆ. ಈ ಎಲ್ಲ ಪರಂಪರೆಗಳಲ್ಲೂ ದಾರ್ಶನಿಕ ಚಿಂತನೆ, ಸಾಹಿತ್ಯಕ ಮತ್ತು ಸಂಗೀತಾತ್ಮಕ ಆಯಾಮಗಳು ಹಾಗೂ ಇವುಗಳಲ್ಲಿ ಬೇರುಗಳನ್ನು ಹೊಂದಿರುವ ಬದುಕಿನ ಆಚರಣೆಗಳು ಕಾಣುತ್ತವೆ. ಆದರೆ ತತ್ವಪದ ಲೋಕದಲ್ಲಿ ಕಾಣುವ ಮುಕ್ತತೆ ಮತ್ತು ಸಮಾನತೆಯ ಆಯಾಮಗಳು ಕನ್ನಡ ನೆಲದ ವಿಶಿಷ್ಟ ಪರಂಪರೆಗಳ ನಡುವೆಯೂ ಅಪರೂಪದ್ದು. ಎಲ್ಲ ಜಾತಿಯ, ಧರ್ಮಗಳ ಹಾಗೂ ಬೇರೆ ಬೇರೆ ಭಾಷೆಗಳ ಜನರು ತಮ್ಮ ಸಾಮುದಾಯಿಕ ನೆಲೆಗಳ ನಡುವೆಯೂ ತತ್ವಪದ ಲೋಕದೊಳಗೆ ವಿಹರಿಸಿದ್ದಾರೆ. ತತ್ವಪದಕಾರರು ಮತೀಯವಾಗಲಿಲ್ಲ, ಮಠೀಯವಾಗಲಿಲ್ಲ. ಬದಲಿಗೆ ಕನ್ನಡ ನೆಲದಲ್ಲಿ ಜೀವಂತವಾಗಿದ್ದ (ಅದ್ವೈತ, ಶಾಕ್ತ, ಸೂಫಿ ಇತ್ಯಾದಿ) ಹತ್ತಾರು ಪರಂಪರೆಗಳಿಂದ ಚೈತನ್ಯ ಪಡೆಯುತ್ತ ತಮ್ಮ ರಚನೆಗಳನ್ನು, ಆಚರಣೆಗಳನ್ನು ಅವರು ಕಟ್ಟುತ್ತ ಬಂದಿದ್ದಾರೆ. ಜೊತೆಗೆ ತತ್ವಪದಗಳ ರಚನೆ ಮತ್ತು ವ್ಯಾಖ್ಯಾನಗಳೆರಡೂ ಯಾವುದೋ ಒಂದು ಕಾಲಘಟ್ಟಕ್ಕೆ ಮಾತ್ರ ಸೀಮಿತಗೊಳ್ಳದೆ ಇಂದಿನ ತನಕವೂ ಉಳಿದುಬಂದಿವೆ. ಹಾಗಾಗಿಯೇ ಶಿಶುನಾಳ ಷರೀಫನಂತಹವರು ವಸಾಹತುಶಾಹಿಗೂ, ಆಧುನಿಕ ಯಂತ್ರಗಳಿಗೂ ಪ್ರತಿಕ್ರಿಯಿಸಲು ಸಾಧ್ಯವಾಯಿತು.

ಹೀಗೆ ಸ್ಥಳೀಯವಾಗಿ ಸಣ್ಣ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ರಚಿತವಾದ ತತ್ವಪದಗಳು ಸಾಮಾನ್ಯ ಜನರು ಕೂಡ ತಮ್ಮ ಸಂಸ್ಕೃತಿ ಮತ್ತು ವಿಚಾರಗಳನ್ನು ಕಟ್ಟಿಕೊಳ್ಳುವ ಶಕ್ತಿಯಿದ್ದ ಸೃಷ್ಟಿಕರ್ತರು (ಆಥರ್) ಎನ್ನುವ ಒಳನೋಟವನ್ನು ಮಾತ್ರ ನಮಗೆ ನೀಡುತ್ತಿಲ್ಲ. ಅದರ ಜೊತೆಗೆ ಮುಖ್ಯವಾದ ಮತ್ತೊಂದು ಪ್ರಶ್ನೆಯೊಂದನ್ನು ಎದುರಿಸುವಂತೆ ಅವುಗಳು ನಮ್ಮನ್ನು ಒತ್ತಾಯಿಸುತ್ತವೆ. ಅದಾವುದೆಂದರೆ ಭಾರತೀಯ ನಾಗರಿಕತೆಯಲ್ಲಿ ವಿಚಾರಗಳ ಚಲನೆಯ ದಿಕ್ಕು ಯಾವುದು? ಈ ಪ್ರಶ್ನೆಯ ಚರ್ಚೆಯನ್ನು ಒಂದು ಉದಾಹರಣೆಯೊಡನೆ ಮುಂದುವರೆಸೋಣ. ಶಂಕರರು ಭಾರತೀಯ ಅದ್ವೈತ ಚಿಂತನೆಗಳನ್ನು ಸಮನ್ವಯಗೊಳಿಸಿದವರು ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. ಅದ್ವೈತ ಪರಂಪರೆಯ ತತ್ವಪದಕಾರರು (ಕೈವಾರ ನಾರಣಪ್ಪನವರನ್ನು ಉದಾಹರಣೆಯಾಗಿ ಇಲ್ಲಿ ಪರಿಗಣಿಸಬಹುದು) ಶಂಕರರಿಂದ ಪ್ರೇರಿತರಾಗುತ್ತಿದ್ದಾರೆಯೇ ಅಥವಾ ಅವರ ಚಿಂತನೆಗಳು ಸ್ವಾಯತ್ತವಾದ ನೆಲೆಯನ್ನು ಹೊಂದಿವೆಯೇ? ನನಗಿರುವ ಅನುಮಾನವಿದು: ಕರ್ನಾಟಕದ ಹಳ್ಳಿಗಳಲ್ಲಿದ್ದ ತತ್ವಪದಕಾರರು ಸಂಸ್ಕೃತದ ಅದ್ವೈತ ಪರಂಪರೆಯ ಸ್ಥೂಲ ಪರಿಚಯ ಹೊಂದಿದ್ದಿರಬಹುದು. ಆದರೆ ಅವರು ಸ್ವತಂತ್ರವಾಗಿ, ಸ್ವಾಯತ್ತವಾಗಿ ತಮ್ಮ ಪರಂಪರೆಯನ್ನು ಕಟ್ಟಿಕೊಂಡವರು. ಮಾತ್ರವಲ್ಲ, ಆ ಮೂಲಕ ಸಂಸ್ಕೃತ ಪರಂಪರೆಯನ್ನೂ ಪ್ರಭಾವಿಸುವ ಚೈತನ್ಯವನ್ನು ಹೊಂದಿದ್ದವರು.

ಈ ಅಂಶವನ್ನು ಒತ್ತಿಹೇಳಲು ಇಂದು ಒಂದು ಐತಿಹಾಸಿಕ ಒತ್ತಡವಿದೆ. ಅದೇನೆಂದರೆ ಕರ್ನಾಟಕದ ಎಲ್ಲ ಸಮುದಾಯದವರು ತಮ್ಮ ಸಾಂಸ್ಕೃತಿಕ ಮತ್ತು ವೈಚಾರಿಕ ಪ್ರಜ್ಞೆಗಳನ್ನು ಕಟ್ಟಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದವರು ಎಂದು ನಾವು ಗುರುತಿಸಬೇಕಾಗಿರುವ ಅನಿವಾರ್ಯ ಇಂದು ಇದೆ. ಅಂದರೆ ಅವರು ಸಂಸ್ಕೃತಿ ಮತ್ತು ವಿಚಾರಗಳನ್ನು ಹೊರಗೆಲ್ಲಿಂದಲೋ ಸ್ವೀಕರಿಸುವವರು ಆಗಿರಲಿಲ್ಲ. ಬದಲಿಗೆ ತಮ್ಮ ಪ್ರಪಂಚವನ್ನು ಕಟ್ಟಿಕೊಳ್ಳುವ ಕ್ರಿಯಾಶೀಲತೆ ಮತ್ತು ಬೌದ್ಧಿಕತೆಯನ್ನು ಹೊಂದಿದ್ದವರು ಎಂದೇ ನಾವು ನೋಡಬೇಕಿದೆ. ಕರ್ನಾಟಕ ಈ ರೀತಿಯಲ್ಲಿ ಫಲವತ್ತಾದ, ಹುಲುಸಾದ ಪ್ರದೇಶವಾಗಿತ್ತು ಎನ್ನುವ ಇತಿಹಾಸದ ಪುನಾರಚನೆಗೆ ಸಮಗ್ರ ತತ್ವಪದಗಳ ಸಂಗ್ರಹ ಮತ್ತು ಪ್ರಕಟಣೆ ನಮಗೆ ಅತ್ಯಗತ್ಯವಾದ ಸಂಪನ್ಮೂಲ. ಹೀಗೆ ನೋಡಿದಾಗ ಕರ್ನಾಟಕದ ಹಿಂದಿನ ದಿನಗಳು ನಾವಂದುಕೊಂಡದ್ದಕ್ಕಿಂತ ಹೆಚ್ಚು ಸಮಾನತೆಗೆ, ಕ್ರಿಯಾಶೀಲತೆಗೆ, ಸೌಹಾರ್ದಕ್ಕೆ ಅವಕಾಶವಿದ್ದ ಸಮಯವಾಗಿ ಕಾಣುತ್ತವೆ.

ಈ ರೀತಿಯಲ್ಲಿ ತತ್ವಪದಗಳನ್ನು ಸೃಜನಶೀಲ, ವೈಚಾರಿಕ ಮತ್ತು ಸಮಾ­ನತೆಯ ಆಶಯಗಳಿರುವ ಪರಂ­ಪರೆಯೆಂದು ಗುರುತಿಸುವಾಗಲೇ ನಮ್ಮ ಸಮಾಜ­ದಲ್ಲಿ, ಈ ಹಿಂದೆ ಮತ್ತು ಪ್ರಸ್ತುತ­ದಲ್ಲಿ ಸಹ, ಇರುವ ಅಸಮಾನತೆ ಮತ್ತು ಅಮಾನವೀಯತೆಗಳನ್ನು ನಾವು ಯಾವುದೇ ಕಾರಣಕ್ಕೂ ಮರೆ­ಯುವಂತಿಲ್ಲ. ಜಾತಿಯ ಕಟ್ಟು­ಪಾಡುಗಳಾಗಲೀ, ಅಸ್ಪೃಶ್ಯತೆಯ ಆಚ­ರಣೆಗಳಾಗಲೀ ತತ್ವಪದಗಳಂತಹ ಪರಂ­ಪರೆಗಳ ನಡುವೆಯೂ ಉಳಿದವು, ಮೆರೆದವು ಎನ್ನುವುದನ್ನು ನಾವು ನಿರ್ಲಕ್ಷಿಸುವಂತಿಲ್ಲ. ಸಮಾನ ಸಮಾಜದ ಕಡೆಗೆ ಚಲಿಸುವ ನಮ್ಮ ಗುರಿ ಹೆಚ್ಚು ಪ್ರಾಯೋಗಿಕವಾಗುವುದು ನಮ್ಮ ಮಿತಿಗಳ ಪ್ರಾಮಾಣಿಕ ಮತ್ತು ನೈಜ ಚಿತ್ರಣವನ್ನು ಹೊಂದಿದ್ದಾಗ ಮಾತ್ರ.

ಇಂದಿನಿಂದ ಡಾ. ಬಿ.ಆರ್. ಅಂಬೇಡ್ಕರರ 126ನೆಯ ಜನ್ಮದಿನದ ಆಚರಣೆಯ ಅಂಗವಾಗಿ ಅಂತರರಾಷ್ಟ್ರೀಯ ವಿಚಾರಸಂಕಿರಣವು ಬೆಂಗಳೂರಿನಲ್ಲಿ ನಡೆಯಲಿದೆ. ಸಮಾನತೆಯ ಅನ್ವೇಷಣೆ ಎನ್ನುವ ಧ್ಯೇಯ ವಾಕ್ಯ­ವನ್ನು ಹೊಂದಿರುವ ಈ ವಿಚಾರ­ಸಂಕಿರಣದಲ್ಲಿ ಜಗತ್ತಿನ ಹಲವಾರು ಪ್ರಮುಖ ಚಿಂತಕರು ವಿಚಾರವಿನಿಮಯ ನಡೆಸಲಿದ್ದಾರೆ. ಬಾಬಾಸಾಹೇಬರ    ಬಹು­ಮುಖ್ಯ ತುಡಿತಗಳಲ್ಲೊಂದು ಸಮಾ­ನತೆಯ ಆಶಯ ವನ್ನು ಹೊಂದಿದ್ದ ಅಧ್ಯಾತ್ಮ ಪರಂಪರೆಯನ್ನು ಹುಡು­ಕುವುದು. ತತ್ವಪದಗಳು ಸಹ ಅಂತಹ ಒಂದು ಪರಂಪರೆಯೆನ್ನುವುದರಲ್ಲಿ ನನಗೆ ಯಾವುದೇ ಅನುಮಾನ ಇಲ್ಲ. ಸಮಕಾಲೀನ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣಕ್ಕೆ ಹೊಸಚೈತನ್ಯವನ್ನು ನೀಡಬಲ್ಲ ತತ್ವಪದಗಳ ಪ್ರಕಟಣೆಯ ಹಿಂದಿರುವ ಸಂಪೂರ್ಣ ತಂಡಕ್ಕೆ ಅಭಿನಂದನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT