ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಥಾಸ್ತು!

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಜುಲೈ 1 ನಮಗೆ ವಿಶಿಷ್ಟ ದಿನ. ಆ ದಿನವನ್ನು ನಾವು `ಪುತ್ರಿಯರ ದಿನ'ವೆಂದೂ `ವೈದ್ಯರ ದಿನ'ವೆಂದೂ ಆಚರಿಸುತ್ತೇವೆ. ಈ ಲೇಖನ ಎ್ಲ್ಲಲ ಹೆಣ್ಣುಮಕ್ಕಳಿಗೆ ಅರ್ಪಣೆ. ಅಪ್ಪಾಜಿ ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗ, `ನಿಮ್ಮ ಯಶಸ್ಸಿನ ಗುಟ್ಟೇನು' ಎಂದು ಜನ ಕೇಳುತ್ತಿದ್ದರು. ಅವರು ಯಾವಾಗಲೂ ಹೇಳುತ್ತಿದ್ದದ್ದು- `ನನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಮಧ್ಯಾಹ್ನದ ಅರ್ಧಗಂಟೆಯ ನಸುನಿದ್ದೆ' ಎಂದು.

1979ರ ಫೆಬ್ರುವರಿ 23ರಂದು ನನ್ನ ಕಿರಿಯ ಸಹೋದರಿ ನಿಶಾ ದುರಂತ ಘಟನೆಯೊಂದರಲ್ಲಿ ನಮ್ಮನ್ನು ಅಗಲಿದಳು. ಮನೆಯಲ್ಲಿ ದೋಷಪೂರಿತ ಬಾಯ್ಲರ್‌ನಲ್ಲಿ ಪ್ರವಹಿಸಿದ ವಿದ್ಯುತ್ ಆಕೆಯ ಜೀವ ಬಲಿಪಡೆದುಕೊಂಡಿತ್ತು. ಅಂದು ಅಪ್ಪಾಜಿ ವಿಧಾನಸೌಧದಲ್ಲಿ ಆಗಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೋರಮಾ ಮಧ್ವರಾಜ್ ಅವರೊಂದಿಗೆ `ಅಂತರರಾಷ್ಟ್ರೀಯ ಹೆಣ್ಣುಮಗುವಿನ ವರ್ಷ' ಅಭಿವೃದ್ಧಿ ಕಾರ್ಯಕ್ರಮದ ಕುರಿತ ಚರ್ಚೆ ನಡೆಸುತ್ತಿದ್ದರು. ಆಗಲೇ ಅವರಿಗೆ ತಮ್ಮ ಕಿರಿ ಮಗಳ ಸಾವಿನ ಸುದ್ದಿ ತಲುಪಿದ್ದು.

ಬದುಕಿನ ವ್ಯಂಗ್ಯವೆಂದರೆ ಇದೇ ಎನಿಸುತ್ತದೆ. ಇಂದಿಗೂ ನಾವು ನಿಶಾಳನ್ನು ಮರೆತಿಲ್ಲ. ಬದುಕಿದ್ದರೆ ಆಕೆಗೆ 47 ವರ್ಷ ತುಂಬಿರುತ್ತಿತ್ತು. ಮೂವತ್ತು ವರ್ಷದ ಹಿಂದೆ ನಡೆದ ಈ ಘಟನೆ ಇನ್ನೂ ಹಸಿಯಾಗಿದೆ. ನಿಶಾಳ ಅಗಲಿಕೆಯೊಂದಿಗೆ ನಾನು ಅಪ್ಪಾಜಿಯ ಏಕೈಕ ಮಗಳಾದೆ. ಹೆಣ್ಣುಮಗುವಿನ ಮೇಲಿನ ಅವರ ಅಗಾಧ ಕಾಳಜಿ ಸಾಂಕ್ರಾಮಿಕದಂತೆ ನನ್ನನ್ನೂ ವ್ಯಾಪಿಸಿದೆ.

ನನಗೆ ಸಿಮ್ರಾನ್ ನೆನಪಾಗುತ್ತಿದ್ದಾಳೆ. ಬಡಕುಟುಂಬವೊಂದರ ಹನ್ನೆರಡು ವರ್ಷದ ಆಕೆ, 2013ರ ಏಪ್ರಿಲ್‌ನಿಂದಲೂ ನನ್ನ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಹೆಸರಿನತ್ತ ನಾನು ತುಂಬಾ ಆಕರ್ಷಿತಳಾದೆ. ಆ ನತದೃಷ್ಟೆಗೆ ತಗುಲಿದ ಕಾಯಿಲೆಯ ಬಗ್ಗೆ ಬೇಸರವಾಗುತ್ತಿದೆ. ಸಿಮ್ರಾನ್, ತನ್ನ ಪೋಷಕರ ಮೂರನೇ ಮತ್ತು ಅತಿ ಮುದ್ದಿನ ಮಗು. ಆಕೆಯ ತಂದೆ ಬಟ್ಟೆಗಳನ್ನು ಹೊಲಿಯುತ್ತಾರೆ ಮತ್ತು ತಾಯಿ ಅವುಗಳನ್ನು ಮಾರಿ ಬದುಕು ಸಾಗಿಸುತ್ತಾರೆ. ಆಕೆಯ ಹಿರಿಯಣ್ಣ ವೆಲ್ಡಿಂಗ್ ಕಾರ್ಖಾನೆಯೊಂದರಲ್ಲಿ ನೌಕರ.

ಸಿಮ್ರಾನ್‌ಳ ಕಾಯಿಲೆ ಜೀವಕ್ಕೆ ಕುತ್ತು ತರುವಷ್ಟು ತೀವ್ರವಾದಾಗ `ಮೇಕ್ ಎ ವಿಷ್ ಫೌಂಡೇಶನ್' (ಎಂಎಡಬ್ಲ್ಯೂಎಫ್) ಎನ್‌ಜಿಓ ಸಂಸ್ಥೆಯ ಪಟ್ಟಿಗೆ ಆಕೆಯ ಹೆಸರು ಸೇರಿಸುವ ಪರಿಸ್ಥಿತಿ ಬಂದಿತು. ಕಾಯಿಲೆ ಪೀಡಿತ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವ ನನ್ನ ಸ್ನಾತಕೋತ್ತರ ವಿದ್ಯಾರ್ಥಿಗಳು ಆಕೆಯ ಬಯಕೆಗಳನ್ನು ತಿಳಿದುಕೊಂಡು ಸಂಸ್ಥೆಯ ಸ್ವಯಂಸೇವಕರಿಗೆ ಮಾಹಿತಿ ನೀಡಿದರು. ಪ್ರೀತಿಯ ಸಿಮ್ರಾನ್ ಬಯಸಿದ್ದು ನಸುಗೆಂಪು ಬಣ್ಣದ ಫ್ರಾಕ್! ಆ ಬಯಕೆ ಈಡೇರಿತ್ತು- ತಥಾಸ್ತು!

ಏನಿದು `ಮೇಕ್ ಎ ವಿಷ್ ಫೌಂಡೇಶನ್'? ಇದರ ಕುರಿತು ನಾನು ಹೇಳಲೇಬೇಕು.

`ಎಂಎಡಬ್ಲ್ಯೂಎಫ್' ಭಾರತದಲ್ಲಿ ಶುರುವಾಗಿದ್ದು 1996ರಲ್ಲಿ. ಬಾಂಬೆಯ ಗೀತಾ ಮತ್ತು ಉದಯ್ ಜೋಷಿ ಅವರ ಕೂಸು ಇದು. ಅವರ ಏಕೈಕ ಪುತ್ರ ಗಂಧರ್ವ ಲ್ಯುಕೆಮಿಯಾದಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದ. ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು. ಆ ಮಗು ಆಸ್ಪತ್ರೆಯಲ್ಲಿದ್ದಾಗ ಅಲ್ಲಿಗೆ ಧಾವಿಸಿದ ಅಮೆರಿಕದ `ಮೇಕ್ ಎ ವಿಷ್' ಸಂಸ್ಥೆಯ ಸ್ವಯಂಸೇವಕರು ಗಂಧರ್ವನ ಜೊತೆ ಸಾಕಷ್ಟು ಸಮಯ ಕಳೆದರು. ಪೋಷಕರು ಮತ್ತು ಆಸ್ಪತ್ರೆ ಆಡಳಿತದ ಅನುಮತಿ ಪಡೆದು, ಡಿಸ್ನಿಲ್ಯಾಂಡ್ ನೋಡಬೇಕೆಂಬ ಗಂಧರ್ವನ ಬಯಕೆಯನ್ನು ಈ ಸಂಸ್ಥೆ ಈಡೇರಿಸಿತು. ತಮ್ಮ ಮಗು ಡಿಸ್ನಿಲ್ಯಾಂಡ್ ನೋಡಬೇಕೆಂಬ ಬಯಕೆಯನ್ನು ಯಾವತ್ತೂ ಬಹಿರಂಗಪಡಿಸದೆ ಇದ್ದದ್ದು ಪೋಷಕರಲ್ಲಿ ಅಚ್ಚರಿ ಮೂಡಿಸಿತು.

ಅವರು ಮಗುವಿನ ಕಾಯಿಲೆ ನಿರ್ವಹಣೆ ಮತ್ತು ಬಹುದೂರದಲ್ಲಿನ ಅಮೆರಿಕಕ್ಕೆ ಆತನನ್ನು ಕರೆದೊಯ್ಯಲು ಹಣ ಹೊಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಬಹುಶಃ ತಂದೆತಾಯಿಗೆ ಮತ್ತಷ್ಟು ಹೊರೆ ಮಾಡುವುದು ಆ ಮಗುವಿಗೆ ಇಷ್ಟವಿದ್ದಂತಿರಲಿಲ್ಲ. ಬಾಂಬೆಗೆ ಮಗನೊಂದಿಗೆ ಮರಳಿದ ಗೀತಾ ಮತ್ತು ಉದಯ್ ಜೋಷಿ, ಕೆಲವು ತಿಂಗಳ ಬಳಿಕ ಆತನನ್ನು ಕಳೆದುಕೊಂಡರು.

ಅಮೆರಿಕದ `ಮೇಕ್ ಎ ವಿಷ್' ಸಂಸ್ಥೆಯ ಚಟುವಟಿಕೆ ಈ ದಂಪತಿಯ ಮನಸ್ಸಿನಲ್ಲಿ ಅಳಿಸಲಾಗದ ಗುರುತು ಮೂಡಿಸಿತ್ತು. ಇದು `ಮೇಕ್ ಎ ವಿಷ್ ಫೌಂಡೇಶನ್' ಅನ್ನು ಭಾರತದಲ್ಲಿ ಸ್ಥಾಪಿಸಲು ಅವರಿಗೆ ಪ್ರೇರಣೆ ನೀಡಿತು. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಈ ಸಂಸ್ಥೆಯ ಶಾಖೆಗಳಿವೆ.

ಜನವರಿ 2008. ಕಾಯಿಲೆ ಪೀಡಿತ ಮತ್ತು ಸಾಯುವ ಸ್ಥಿತಿಯಲ್ಲಿರುವ ಮಕ್ಕಳ ಆಸೆಗಳನ್ನು ಈಡೇರಿಸಲು ಅವಕಾಶ ನೀಡುವಂತೆ ಅನಿತಾ ನಮ್ಮ ಆಸ್ಪತ್ರೆಯ ಆಡಳಿತ ವಿಭಾಗದ ಮುಖ್ಯಸ್ಥರಿಗೆ ಕೋರಿಕೆ ಸಲ್ಲಿಸಿ ಕಾರಿಡಾರ್‌ನಲ್ಲಿ ಕಾದುಕುಳಿತಿದ್ದರು. ಅವರ ಮನವಿ ಖಡಾಖಂಡಿತವಾಗಿ ತಿರಸ್ಕೃತವಾದದ್ದರಲ್ಲಿ ಅಚ್ಚರಿಯಿರಲಿಲ್ಲ. ನಾನು ಆಕೆಗೆ ನೆರವಾಗುವುದಾಗಿ ಭರವಸೆ ನೀಡಿದೆ. ಅವರನ್ನು ಡೀನ್ ಡಾ. ಸುಭಾಷ್ ಅವರ ಬಳಿ ಕರೆದೊಯ್ದೆ. ಅವರು ಸಂತೋಷ ವ್ಯಕ್ತಪಡಿಸಿದ್ದು ಮಾತ್ರವಲ್ಲ, ರೋಗಪೀಡಿತ ಮಕ್ಕಳನ್ನು ಇನ್ನೊಂದು ಬಗೆಯಲ್ಲಿ ಆರೈಕೆ ಮಾಡುವ ಸಂಸ್ಥೆಯ ಕಾಳಜಿಯನ್ನು ಪ್ರಶಂಸಿಸಿದರು.

2008ರ ಫೆಬ್ರುವರಿಯಿಂದ ಅನಿತಾ, ಅನು ಅಶೋಕ್ ಮತ್ತವರ ಸ್ವಯಂಸೇವಕರ ತಂಡ ವಾಣಿ ವಿಲಾಸ ಆಸ್ಪತ್ರೆ ಹಾಗೂ ಇತರೆ ಆಸ್ಪತ್ರೆಗಳಲ್ಲಿ ಸಕ್ರಿಯವಾದರು. ನಮ್ಮಿಂದ ಸಾಧ್ಯವಾಗದ್ದನ್ನು ಅವರು ಸಾಧಿಸಿದರು. ವೈದ್ಯರಾಗಿ ನಾವು ರೋಗ ಪತ್ತೆ ಮತ್ತು ಚಿಕಿತ್ಸೆಯ ಮೇಲಷ್ಟೇ ಗಮನ ಹರಿಸುತ್ತೇವೆ. ಪೋಷಕರ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತದೆ ಎಂಬ ಭಯದಿಂದ ಹೆಚ್ಚಿನ ಮಕ್ಕಳು ತಮ್ಮ ಬಯಕೆಗಳನ್ನು ವ್ಯಕ್ತಪಡಿಸುವುದೇ ಇಲ್ಲ.

ನಮ್ಮ ವಿದ್ಯಾರ್ಥಿಯೊಬ್ಬರ ದೂರವಾಣಿ ಕರೆ ಸ್ವೀಕರಿಸಿದ ಸಂಸ್ಥೆ ಸ್ವಯಂ ಸೇವಕರೊಬ್ಬರನ್ನು (ಅವರಿಗೆ ನೀಡುವುದು ಬಸ್ ಪ್ರಯಾಣದ ವೆಚ್ಚವನ್ನು ಮಾತ್ರ) ಕಳುಹಿಸಿತು. ಅವರು ನಿಮಿಷದಿಂದ ಗಂಟೆಗಳವರೆಗೆ, ಕೆಲವು ದಿನಗಳವರೆಗೆ ಜೀವಕ್ಕೆ ಮಾರಕವಾದ ಕಾಯಿಲೆ ಹೊತ್ತ ಈ ಪುಟಾಣಿಗಳೊಂದಿಗೆ ಸಮಯ ಕಳೆದರು. ಮಕ್ಕಳ ವಿಶ್ವಾಸ ಮತ್ತು ಗೆಳೆತನ ಸಂಪಾದಿಸಿದ ಬಳಿಕ ಆ ಮಕ್ಕಳ ಬಯಕೆಗಳ ಸುತ್ತ ಮಾತು ಹುಟ್ಟಿಕೊಂಡಿತು. ಬಡ ಕುಟುಂಬದ ಪುಟ್ಟ ಮಕ್ಕಳಲ್ಲಿ ಸುಲಭವಾಗಿ ಈಡೇರಿಸಲು ಸಾಧ್ಯವಾಗುವಂಥ ಚಿಕ್ಕ ಚಿಕ್ಕ ಆಸೆಗಳಿರುತ್ತವೆ. ಅವರನ್ನು ಸಂತೋಷಪಡಿಸುವ ಮತ್ತು `ಎಂಡೊರ್ಪಿನ್' ಎಂದು ಕರೆಯಲಾಗುವ ಪರ್ಯಾಯ ಮಾರ್ಗದ ಮೂಲಕ ಅವರು ಕಾಯಿಲೆಯಿಂದ ಚೇತರಿಸಿಕೊಳ್ಳಲು ಸಹಕರಿಸುವ ವಿಧಾನಗಳನ್ನು ನಾವು ಈ ಸಂಸ್ಥೆಯ ಮೂಲಕ ಅರಿತುಕೊಂಡೆವು.

`ಎಂಡೊರ್ಪಿನ್' ವಿಧಾನ ಜೀವಕೋಶ ಮಟ್ಟದಲ್ಲಿ ಕೆಲಸ ಮಾಡಿ, ಮಲಗಿರುವ ಕೋಶಗಳನ್ನು ಎಚ್ಚರಗೊಳಿಸುತ್ತದೆ. ಇದರಿಂದ ಕೋಶಗಳಿಗೆ ಔಷಧ ಸರಾಗವಾಗಿ ತಲುಪಿ ರೋಗಿಗಳು ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಪ್ರಾರ್ಥನೆ, ಯೋಗ ಮತ್ತು ಧ್ಯಾನದ ಮೂಲಕ ನಡೆಸುವ ಪ್ರಕ್ರಿಯೆ.

ಮೂರರಿಂದ ಹದಿನೆಂಟು ವರ್ಷದೊಳಗಿನ, ಜೀವ ಕಂಟಕ ಕಾಯಿಲೆಯಿಂದ ನರಳುತ್ತಿರುವ ಮಕ್ಕಳ ಆಸೆಗಳನ್ನು, ಅವರ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಈಡೇರಿಸುವುದು `ಎಂಎಡಬ್ಲ್ಯೂಎಫ್' ನಿಲುವು. ಮಕ್ಕಳ ಬಯಕೆಗಳನ್ನು ಈಡೇರಿಸುವುದು ಮತ್ತು ಅವರಲ್ಲಿ ಚೈತನ್ಯ ಮೂಡಿಸುವುದು ಅವರ ಏಕೈಕ ಧ್ಯೇಯ. ಮಕ್ಕಳ ಆಸೆಗಳ ಈಡೇರಿಕೆಯು ಅವರಲ್ಲಿ ಸಕಾರಾತ್ಮಕ ಪರಿಣಾಮ ಬೀರುವುದರ ಮೂಲಕ, ಗುಣಪಡಿಸಲಾಗದ ಕಾಯಿಲೆಯಿದ್ದರೂ `ಗುಣವಾಗಬಲ್ಲೆ' ಎನ್ನುವ ಹಾಗೂ ತನ್ನಿಂದ ಎಲ್ಲವೂ ಸಾಧ್ಯ ಎಂಬ ವಿಶ್ವಾಸವನ್ನು ಮೂಡಿಸುವ ಶಕ್ತಿ ಈ ಚಿಕಿತ್ಸೆಗಿದೆ ಎನ್ನುವ ನಂಬಿಕೆ ಸಂಸ್ಥೆಯದು.

`ಎಂಎಡಬ್ಲ್ಯೂಎಫ್' ನಾಲ್ಕು ವಿಧದ ಬಯಕೆಗಳನ್ನು ಈಡೇರಿಸುತ್ತದೆ: ಪ್ರವಾಸದ ಬಯಕೆಗಳು (ನೋಡಬೇಕೆಂದಿರುವ ತಾಣ), ವೃತ್ತಿ ಬಯಕೆಗಳು (ವೈದ್ಯನಾಗಬೇಕೆಂಬ ಆಸೆ), ಸೆಲೆಬ್ರಿಟಿ ಬಯಕೆಗಳು (ಭೇಟಿ ಮಾಡಬೇಕು ಎಂದು ಬಯಸಿದವರು), ಉಡುಗೊರೆ ಬಯಕೆಗಳು (ಬೇಕು ಎನಿಸುತ್ತಿರುವುದು).

ಅಪ್ಪಾಜಿ ಒಮ್ಮೆ ಯು.ಕೆ.ಯಲ್ಲಿದ್ದಾಗ ಮೂತ್ರಪಿಂಡ ಕಾಯಿಲೆ ತೀವ್ರತೆಯ ಅಂಚಿನಲ್ಲಿದ್ದ ಅವರ ರೋಗಿ ಡಯಾನಾ ತನಗಾಗಿ ಖ್ಯಾತ ಗಾಯಕ ಕ್ಲಿಫ್ ರಿಚರ್ಡ್ ಹಾಡಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದಳಂತೆ. ರಿಚರ್ಡ್ ಆಕೆಗಾಗಿ ಹಾಡಿದರು. ಡಯಾನಾ ಆತನ ತೋಳಿನ ಮೇಲೆ ಕೊನೆಯುಸಿರೆಳೆದಳು.

ಅಂದು ನಾನು ದೈನಂದಿನ ರೌಂಡ್ಸ್‌ಗಳನ್ನು ಮುಗಿಸಿ ಮನೆಗೆ ಕಾರಿನಲ್ಲಿ ಹಿಂದಿರುಗುತ್ತಿದ್ದೆ. ಡಾ. ಸುಮಾ ಮತ್ತು ಡಾ. ಅರುಣ್ ದಿಕ್ಕು ತೋಚದವರಂತೆ ನನಗೆ ಕರೆ ಮಾಡಿದರು. ಸಿಮ್ರಾನ್ ರಕ್ತವಾಂತಿ ಮಾಡಿಕೊಳ್ಳುತ್ತಿದ್ದು, ಸುಮಾರು 1000 ಮಿಲಿ ಲೀಟರ್‌ಗಿಂತಲೂ ಹೆಚ್ಚು ರಕ್ತವಾಂತಿಯಾಗಿದೆ ಎಂದು ತಿಳಿಸಿದರು. ತೀವ್ರ ಮಳೆ ಮತ್ತು ಟ್ರಾಫಿಕ್‌ನಿಂದಾಗಿ ನನಗೆ ಹಿಂದಿರುಗಲು ಸಾಧ್ಯವಾಗಲಿಲ್ಲ. ನಾನು ಆಸ್ಪತ್ರೆಗೆ ಹಿಂದಿರುಗುವವರೆಗೂ ಅವರು ಕಾದಿದ್ದರೆ ಸಿಮ್ರಾನ್‌ಳನ್ನು ಕಳೆದುಕೊಳ್ಳುತ್ತಿದ್ದೆವು. ಅದು ವೈದ್ಯಕೀಯದಲ್ಲಿ ನಮಗಿರುವ `ಜೆಮ್' (ಗೋಲ್ಡನ್ ಅವರ್ ಆಫ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್), ಅಂದರೆ, ತುರ್ತು ಪರಿಸ್ಥಿತಿ ನಿರ್ವಹಣೆಯ ಸುವರ್ಣ ಸಮಯ.

ಸಮಯವನ್ನು ವ್ಯರ್ಥವಾಗಿ ಕಳೆಯುವುದು ನಮ್ಮಿಂದ ಸಾಧ್ಯವಾಗುವುದಿಲ್ಲ. ನಾನು ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ ಆ ಮಗುವಿನ ದೇಹದಿಂದ ರಕ್ತವನ್ನು ಹೊರತೆಗೆಯುವಂತೆ ಸಂದೇಶಗಳನ್ನು ರವಾನಿಸಿದೆ. ಗೊಂದಲಕ್ಕೊಳಗಾದ ನನ್ನ ವಿದ್ಯಾರ್ಥಿಗಳು, `ಸಿಮ್ರಾನ್ ರಕ್ತವನ್ನು ಕಳೆದುಕೊಳ್ಳುತ್ತಿದ್ದಾಳೆ (ಹೆಮೊಪ್ಟಿಸಿಸ್), ಆದರೆ ಮೇಡಂ ಆಕೆಯಲ್ಲಿನ ರಕ್ತವನ್ನು ಹೊರತೆಗೆಯುವಂತೆ ಹೇಳುತ್ತಿದ್ದಾರೆ. ಅವರ ಎಣಿಕೆಯಲ್ಲಿ ತಪ್ಪಾಗಿರಬೇಕು' ಎಂದು ಊಹಿಸಿದರು.

ನನ್ನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಡಾ. ಅರುಣ್‌ಗೆ ಹೇಳಿದ ನಂತರ ಅವರಿಬ್ಬರೂ ಕೆಲಸದ ಅವಧಿ ಮುಗಿದ ನಂತರವೂ ಅಲ್ಲಿಯೇ ಉಳಿದು ಫೆಲೊಬೊಟಮಿ (ರಕ್ತನಾಳಗಳಿಂದ ರಕ್ತವನ್ನು ಹೊರತೆಗೆಯುವುದು) ಮೂಲಕ ರಕ್ತವನ್ನು ಹೊರತೆಗೆದರು. ಸಿಮ್ರಾನ್ ಬದುಕುಳಿದಳು! ಇಲ್ಲದಿದ್ದರೆ ಅದೇ ಆಕೆಯ ಕೊನೆಯ ದಿನವಾಗುತ್ತಿತ್ತು.

ಸಿಮ್ರಾನ್‌ಳಲ್ಲಿ ಇರುವುದು ಅತಿ ಅಪರೂಪವಾದ ಹುಟ್ಟಿನಿಂದಲೇ ಬಂದ ಹೃದಯ ಕಾಯಿಲೆ. ಆಕೆಗೆ ಐದು ತಿಂಗಳಿರುವಾಗ ಅದು ಪತ್ತೆಯಾಗಿತ್ತು. ಆಕೆಯ ಹೃದಯದ ಮಹಾಪಧಮನಿಗಳ ಸ್ಥಾನಪಲ್ಲಟವಾಗಿತ್ತು. (ಮಹಾಪಧಮನಿಯು ಬಲ ಗೂಡಿನಿಂದ ಉದ್ಭವಿಸಿತ್ತು ಮತ್ತು ಶ್ವಾಸಧಮನಿ ಎಡ ಭಾಗದ ಗೂಡಿನಿಂದ ಹುಟ್ಟಿತ್ತು. ಸಹಜ ಹೃದಯಗಳಲ್ಲಿ ಇದು ವಿರುದ್ಧವಾಗಿರುತ್ತದೆ). ಹೀಗಾಗಿ ಅಲ್ಲಿ ಶುದ್ಧ ಮತ್ತು ಅಶುದ್ಧ ರಕ್ತಗಳ ಮಿಶ್ರಣವಾಗುತ್ತಿತ್ತು. ಆಕೆಯ ಬಣ್ಣ ನೀಲಿಗಟ್ಟಿತ್ತು (ತುಟಿ, ನಾಲಿಗೆ, ಉಗುರುಗಳು ಇತ್ಯಾದಿ). ರಕ್ತಗಳ ಮಿಶ್ರಣವು ರಕ್ತವನ್ನು ದಪ್ಪಗಾಗಿಸಿತ್ತು. ಇದನ್ನು ಪಾಲಿಸಿಥೆಮಿಯಾ ಎಂದು ಕರೆಯುತ್ತಾರೆ. ಇದು ಸರಾಗ ರಕ್ತಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತದಲ್ಲದೆ, ರಕ್ತನಾಳಗಳಲ್ಲಿ ತಡೆಯೊಡ್ಡುತ್ತದೆ. ರಕ್ತವನ್ನು ಹೊರತೆಗೆಯುವುದರಿಂದ ಅದನ್ನು ತೆಳ್ಳಗಾಗಿಸಿ ರಕ್ತಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು.

ಆ ದಿನದ ಘಟನೆಯಲ್ಲಿ ಸಿಮ್ರಾನ್ ಬದುಕುಳಿದಳು. ಹೃದಯ ಸೋಂಕಿನಿಂದ (ಹೃದಯ ಪೊರೆಯೊಳಗಿನ ಉರಿಯೂತದ ಸಾಂಕ್ರಾಮಿಕ ಕಾಯಿಲೆ) ಆಕೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ. ಸಂಕೀರ್ಣ ಹೃದಯ ಸಮಸ್ಯೆಯೊಂದಿಗೆ ಆಕೆ ತನ್ನ ಮನೆಗೆ ಮರಳಲು ಸಿದ್ಧಳಾಗುತ್ತಿದ್ದಾಳೆ. ಆದರೆ ಶ್ವಾಸಧಮನಿ ರಕ್ತದೊತ್ತಡದ (ಶ್ವಾಸಧಮನಿ ರಕ್ತನಾಳಗಳಲ್ಲಿನ ಒತ್ತಡದ ಹೆಚ್ಚಳ) ಕಾರಣ ಶಸ್ತ್ರಚಿಕಿತ್ಸೆ ಮಾಡಲಾಗದ ಸಂಕೀರ್ಣ ಹೃದಯ ಸಮಸ್ಯೆಯ ಪರಿಸ್ಥಿತಿಯಲ್ಲಿರುವ ಆಕೆ ಬದುಕುಳಿಯುವ ಬಗ್ಗೆ ಯಾವುದೇ ಭರವಸೆಗಳಿಲ್ಲ.

ನಮಗೆ ಕಟ್ಟಕಡೆಯದಾಗಿ ಮಾಡಲು ಸಾಧ್ಯವಾಗಿದ್ದು `ನಸುಗೆಂಪು ಫ್ರಾಕ್' ಧರಿಸಬೇಕೆಂಬ ಆಕೆಯ ಆಸೆಯನ್ನು ನೆರವೇರಿಸುವುದು ಮಾತ್ರ. ತನ್ನ ಮತ್ತೊಂದು ಬಯಕೆಯನ್ನೂ ಡಾ. ಸುನೀತಾರ ಬಳಿ ಸಿಮ್ರಾನ್ ಹೇಳಿಕೊಂಡಿದ್ದಳು. ದೊಡ್ಡವಳಾದ ಬಳಿಕ ನರ್ಸ್ ಆಗುವುದು ಆಕೆಯ ಕನಸು. ನನ್ನ ವಾರ್ಡ್‌ನಲ್ಲಿರುವ ರೋಗ ಪೀಡಿತ ಮಕ್ಕಳ ಆರೈಕೆ ಮಾಡಬೇಕೆಂಬ ಅಭಿಲಾಷೆ ಆಕೆಯದು.

ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಗುವಿನ ಬಯಕೆಗಳಿಗೆ `ಎಂಎಡಬ್ಲ್ಯೂಎಫ್' ತಥಾಸ್ತು ಎನ್ನುತ್ತದೆ! ಬೆಂಗಳೂರು ಒಂದರಲ್ಲೇ ಇದುವರೆಗೆ ಸುಮಾರು 1500 ಕಾಯಿಲೆ ಪೀಡಿತ ಮಕ್ಕಳ ಬಯಕೆಗಳು ಹೀಗೆ ಈಡೇರಿವೆ. ಬೆಂಗಳೂರಿನಲ್ಲಿ ಎಂಎಡಬ್ಲ್ಯೂಎಫ್‌ಅನ್ನು ಪ್ರಾರಂಭಿಸಿದ ವಿಜಯ್ ಲಾಧಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ನಿಧಿಯೆಲ್ಲವೂ ಸಂಗ್ರಹವಾಗುತ್ತಿರುವುದು ಸಂಪೂರ್ಣ ವಂತಿಗೆಗಳ ಮೂಲಕ. ಸ್ವಯಂಸೇವಕರು ಉಚಿತವಾಗಿ ಕೆಲಸ ಮಾಡುತ್ತಾರೆ. ಇದು ಮಾನವೀಯತೆಯ ಮತ್ತೊಂದು ಅದ್ಭುತ ಸಮುದಾಯ. ಅವರನ್ನು ನಾವು ಪ್ರೋತ್ಸಾಹಿಸಬೇಕು ಮತ್ತು ಅವರು ಬೆಳೆಯಲು ನೆರವಾಗಬೇಕು. (www.makeawish.org)

ಸಿಮ್ರಾನ್ ತನ್ನಾಸೆಯಂತೆ ನರ್ಸ್ ಆಗುತ್ತಾಳೆಯೇ? ಆಕೆಯ ಸಂಕೀರ್ಣ ಹೃದಯ ಕಾಯಿಲೆ ಅದಕ್ಕೆ ಅನುವು ಮಾಡಿಕೊಡುವುದೇ?
ಸಿಮ್ರಾನ್‌ಳ ಸಂಪರ್ಕ ಸಂಖ್ಯೆ: 95350 55563/ 99457 39487
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT