ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪದ ನುಡಿ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದೊರೆ ರೆಗ್ಯುಲಸ್ ರೋಮ್ ಸಾಮ್ರೋಜ್ಯದ ಚರ್ಕವರ್ತಿಯಾಗಿದ್ದ. ಅವನ ಧೀರತನದೊಡನೆ ಅವನ ಪ್ರಾಮಾಣಿಕತೆಯೂ ತುಂಬ ಪ್ರಖ್ಯಾತವಾಗಿತ್ತು. ಅವನು ಮಾತುಕೊಟ್ಟರೆ ಆಯಿತು, ಹಾಗೆ ಆಗಿಯೇ ತೀರುತ್ತದೆ ಎಂಬ ನಂಬಿಕೆಯಿತ್ತು. ಅವನದು ಯಾವಾಗಲೂ ಒಂದೇ ಮಾತು, ಒಂದೇ ನಡೆ.

ಆ ಕಾಲದಲ್ಲಿ ಸಾಮ್ರೋಜ್ಯಗಳ ನಡುವೆ ಕದನಗಳು ಹೆಚ್ಚಾಗಿದ್ದವು. ರಾಜ್ಯ ವಿಸ್ತಾರಕ್ಕಾಗಿ, ಹಣಕ್ಕಾಗಿ, ಶೌರ್ಯ ಪ್ರದರ್ಶನಕ್ಕಾಗಿ, ದರ್ಪಕ್ಕಾಗಿ, ಸಣ್ಣ ದೊಡ್ಡ ಯುದ್ಧಗಳು ನಡೆಯುತ್ತಲೇ ಇದ್ದವು. ಒಮ್ಮೆ ರೋಮ್ ಸಾಮ್ರೋಜ್ಯದೊಂದಿಗೆ ಕಾರ್ಥಗೆ ಸಾಮ್ರೋಜ್ಯ ಯುದ್ಧ ಸಾರಿತ್ತು.

ಆ ಯುದ್ಧದಲ್ಲಿ ಬಹುಶಃ ಅತೀವವಾದ ಗೆಲುವಿನ ನಂಬಿಕೆಯಿಂದ ಕಡಿಮೆ ಸಂಖ್ಯೆಯ ಸೈನಿಕರನ್ನು ಕರೆದುಕೊಂಡು ಸಾಮ್ರೋಟ್ ರೆಗ್ಯುಲಸ್ ಯುದ್ಧಕ್ಕೆ ಹೋದ. ಈ ಕಾರ್ಥಗೆಯ ಸೈನ್ಯವನ್ನು ಸ್ವಲ್ಪವೇ ಸಮಯದಲ್ಲಿ ಹೊಡೆದುಹಾಕಿ ಬರುತ್ತೇನೆಂದು ಹೊರಟ ಅವನಿಗೆ ತಾನು ತಪ್ಪು ಮಾಡಿದೆ ಎಂಬ ಅರಿವು ಬೇಗನೇ ಬಂದಿತು. ವೈರಿ ಸೈನಿಕರಿಗೆ ಚಕ್ರವರ್ತಿಯೇ ಯುದ್ಧಕ್ಕೆ ಬರುತ್ತಿದ್ದಾನೆ ಎಂಬ ವಿಷಯ ಹೇಗೋ ಮೊದಲಿಗೇ ತಿಳಿದಿದ್ದರಿಂದ ಯಾರಿಗೂ ತಿಳಿಸದಂತೆ ಅಪಾರಸೈನ್ಯವನ್ನು ತಂದಿದ್ದರು.

ತಾನು ಅಂದುಕೊಂಡದ್ದಕ್ಕಿಂತ ನಾಲ್ಕುಪಟ್ಟು ಹೆಚ್ಚು ಸೈನ್ಯ ಬಂದದ್ದನ್ನು ನೋಡಿ ರೆಗ್ಯುಲಸ್‌ಗೆ ಚಿಂತೆಯಾಯಿತು. ಇವರ ಸೈನ್ಯ ಮುಂದೆ ನಡೆಯುತ್ತಿದ್ದಂತೆ ಕಾರ್ಥಗೆ ಸೈನ್ಯದ ಕೆಲವು ತುಕಡಿಗಳು, ಎಡಭಾಗ, ಬಲಭಾಗ ಮತ್ತು ಹಿಂದಿನಿಂದ ಸುತ್ತುವರೆದು ಆಕ್ರಮಣ ಮಾಡಿದವು. ಏನಾಗುತ್ತಿದೆ ಎಂಬುವುದು ತಿಳಿಯುವಷ್ಟರಲ್ಲಿ ವೈರಿ ಸೈನಿಕರು ಬಂದು ರೆಗ್ಯುಲಸ್‌ನನ್ನು ಮುತ್ತಿ ಸೆರೆ ಹಿಡಿದು ಬಿಟ್ಟರು. ಚಕ್ರವರ್ತಿ ಬಂಧಿತನಾದದ್ದನ್ನು ಕಂಡು ರೋಮನ್ ಸೈನ್ಯ ಪಲಾಯನ ಮಾಡಿತು.

ಚಕ್ರವರ್ತಿಯನ್ನು ಮುಂದೆ ಕೂಡ್ರಿಸಿಕೊಂಡು ಕಾರ್ಥಗೆ ರಾಜ್ಯದ ರಾಜ ಹೇಳಿದ. `ಈಗ ನಮ್ಮ ಸೈನ್ಯ ಬಲಿಷ್ಠವಾಗಿದೆ. ಇನ್ನೆರಡು ದಿನಗಳಲ್ಲಿ ನಾವು ಘೋರ ಯುದ್ಧಮಾಡುತ್ತೇವೆ. ಆಗ ನಿಮ್ಮ ದೇಶದಲ್ಲಿ ಭಾರೀ ಪ್ರಮಾಣದ ಜೀವ ಹಾನಿ, ವಸ್ತು ಹಾನಿಯಾಗುತ್ತದೆ. ಅದನ್ನು ತಪ್ಪಿಸುವ ಮನಸ್ಸು ನಿಮಗಿದ್ದರೆ ನಿಮ್ಮ ಸೈನಿಕರಿಗೆ ಯುದ್ಧ ನಿಲ್ಲಿಸಿ ಶರಣಾಗುವಂತೆ ಹೇಳಿ,ಇಲ್ಲದಿದ್ದರೆ ಈ ಎಲ್ಲ ಹಾನಿಗೆ ನೀವೇ ಜವಾಬ್ದಾರರಾಗುತ್ತೀರಿ.~ ರೆಗ್ಯುಲಸ್ ಹೇಳಿದ, `ನನಗೆ ಒಂದು ದಿನದ ಸಮಯ ಕೊಡಿ. ನಾಳೆ ನನ್ನ ತೀರ್ಮಾನ ಹೇಳುತ್ತೇನೆ.~ ಮರುದಿನ ತಾನೇ ಬಂದು ಹೇಳಿದ, `ಆಗಬಹುದು. ನಾನು ನಮ್ಮ ರಾಜ್ಯಕ್ಕೆ ತೆರಳಿ ನಾಯಕರೊಂದಿಗೆ ಚರ್ಚಿಸುತ್ತೇನೆ. ಅವರು ಶರಣಾದರೆ ಸರಿ, ಇಲ್ಲವಾದರೆ ಮರಳಿ ಬಂದು ನಾನೇ ನಿಮಗೆ ಶರಣಾಗುತ್ತೇನೆ.~ ಕಾರ್ಥಗೆ ರಾಜ ಈ ಮಾತಿಗೆ ಒಪ್ಪಿ ರೆಗ್ಯುಲಸ್‌ನನ್ನು ರೋಮ್ ದೇಶಕ್ಕೆ ಹೋಗಲು ಒಪ್ಪಿಗೆ ಕೊಟ್ಟ. ಉಳಿದ ಮಂತ್ರಿಗಳು ಆಶ್ಚರ್ಯಪಟ್ಟರು. ಹೀಗೆ ಸೆರೆಸಿಕ್ಕವನನ್ನು ಬಿಡಲಾಗುತ್ತದೆಯೇ? ಹೋದವನು ತಾನಾಗಿಯೇ ಮರಳುತ್ತಾನೆಯೇ? ಕಾರ್ಥಗೆಯ ರಾಜ ಹೇಳಿದ, `ನನಗೆ ರೆಗ್ಯುಲಸ್ ಚೆನ್ನಾಗಿ ಗೊತ್ತು. ಅವನು ಹೇಳಿದ ಮಾತನ್ನು ಮತ್ತೊಮ್ಮೆ ಪರೀಕ್ಷಿಸುವ ಕಾರಣವಿಲ್ಲ.~

ರೆಗ್ಯುಲಸ್ ತನ್ನ ರಾಜ್ಯಕ್ಕೆ ಬಂದು ಸೇನಾಪತಿಗಳಿಗೆ ಹೇಳಿದ, `ನನ್ನ ಮೈಮರೆವೆಯಿಂದ ನಾನು ಸಿಕ್ಕಿಬಿದ್ದೆ. ಆದರೆ ನೀವು ಚಿಂತೆ ಮಾಡಬೇಡಿ, ಯುದ್ಧ ಮುಂದುವರೆಸಿ. ಕಾರ್ಥಗೆಯ ಸೈನ್ಯ ಅಷ್ಟು ಬಲಿಷ್ಠವಾದದ್ದಲ್ಲ. ಅವರು ಅಷ್ಟು ಕಾಲ ತಮ್ಮ ಸೈನ್ಯವನ್ನು ಹಿಡಿದಿಡಲಾರರು. ಇನ್ನೊಂದು ವಾರದಲ್ಲಿ ಅವರ ಶಕ್ತಿ ಕುಸಿಯುತ್ತದೆ.~ ನಂತರ ಮರಳಿ ಕಾರ್ಥಗೆಗೆ ಹೊರಡಲು ಸಿದ್ಧನಾದ. ಆಗ ಸೇನಾಪತಿಗಳು,  `ಮತ್ತೆ ವೈರಿ ಪಾಳೆಯಕ್ಕೆ ಹೋಗುವುದೇ? ನಿಮ್ಮನ್ನು ಯಾರೂ ಬಂಧಿಸಲು ಸಾಧ್ಯವಿಲ್ಲ ಈಗ~ ಎಂದರು. ರೆಗ್ಯುಲಸ್ ಹೇಳಿದ,  `ನೀವು ಶರಣಾಗದಿದ್ದರೆ ಮರಳಿ ಬರುವುದಾಗಿ ಹೇಳಿ ಬಂದಿದ್ದೇನೆ. ನನಗೆ ಏನಾದರೂ ಚಿಂತೆಯಿಲ್ಲ, ನನ್ನ ದೇಶ ಸೋಲಬಾರದು ಮತ್ತು ನಾವು ಕೊಟ್ಟ ಮಾತು ತಪ್ಪಬಾರದು.~ ತಕ್ಷಣ ಕಾರ್ಥಗೆ ಸೈನ್ಯದ ಮುಖ್ಯಸ್ಥರ ಕಡೆಗೆ ನಡೆದ. ಹೀಗೆ ತನ್ನ ದೇಶವನ್ನೂ ರಕ್ಷಿಸಿದ ಮತ್ತು ಮಾತನ್ನೂ ಉಳಿಸಿಕೊಂಡ.

ಮಾತನಾಡಿದ್ದನ್ನು ಉಳಿಸಿಕೊಳ್ಳುವುದು ಬಹುದೊಡ್ಡ ಮೌಲ್ಯ. ಇತ್ತೀಚಿಗೆ ಬಹಳಷ್ಟು ಮಂದಿ ಮಾತನಾಡಿದ್ದಕ್ಕೂ, ನಡೆಯುತ್ತಿರುವುದಕ್ಕೂ ಕಾಣುವ ವ್ಯತ್ಯಾಸವನ್ನು ಕಂಡಾಗ ರೆಗ್ಯುಲಸ್‌ರಂಥವರು ಅತೀ ಎತ್ತರದ ನಿಲುಕಲಾರದ ಆದರ್ಶ ವ್ಯಕ್ತಿಗಳಾಗಿ ಕಾಣುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT