ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮ ಸರದಿ ಬರುವವರೆಗೆ ಎಲ್ಲರೂ ಕಾಯಬೇಕು

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ನುಮಾನ ಬೇಡ, ಇದು ರಾಜಕಾರಣ. `ರಾಜಕಾರಣ' ಶಬ್ದದಲ್ಲಿ ಎಷ್ಟೊಂದು ಅರ್ಥ ಹುದುಗಿದೆ! ಮೂವತ್ತು ವರ್ಷ ರಾಜ್ಯದ ರಾಜಕಾರಣ ನೋಡಿದವರಿಗೆ ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಹೆಚ್ಚು ಕಷ್ಟವಲ್ಲ. ಇದೆಲ್ಲ ಹಿಂದೆ ಆಗಿದೆ. ಇದರಲ್ಲಿ ಹೊಸದೇನೂ ಇಲ್ಲ. ಆಶ್ಚರ್ಯ ಎಂದರೆ ಕಾಂಗ್ರೆಸ್ ಸರ್ಕಾರದಲ್ಲಿ ಬೇಗ ಆಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮಧ್ಯೆ ಸಂಬಂಧ ಮಧುರವಾಗಿ ಉಳಿದಿದೆ ಎಂದು ನಂಬುವುದು ಕಷ್ಟ. ಅವರಿಬ್ಬರ ನಡುವೆ ಪೈಪೋಟಿ ನಡೆದಿದೆ. ಇದು ಅಧಿಕಾರ ಹಿಡಿದ ಮೊದಲ ದಿನವೇ ಆರಂಭವಾಗಿದೆ. ಪರಮೇಶ್ವರ್ ಅವರಿಗೆ ಅಧಿಕಾರ ಇಲ್ಲದೆ ಇರುವುದು ಕಷ್ಟ ಎನಿಸುತ್ತಿದೆ.

ತಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಅಧಿಕಾರಕ್ಕೆ ಬಂದ ಸರ್ಕಾರ ಇದು. ಆದರೆ, ಅಧಿಕಾರದ ಗದ್ದುಗೆಯಲ್ಲಿ ತಾನು ಇಲ್ಲ ಎಂದು ಅವರಿಗೆ ಮತ್ತೆ ಮತ್ತೆ ಸಂಕಟವಾಗುತ್ತಿದೆ. ನಿಜ, ಅವರು ಸಂಪುಟದಲ್ಲಿ ಇರಬೇಕಿತ್ತು. ಆದರೆ ಆ ಅಧಿಕಾರ ಅವರಿಗೆ ಸಹಜವಾಗಿ ಸಿಗಬೇಕಿತ್ತು. ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತುದು ಅದಕ್ಕೆ ಕಾರಣ ಆಗಬಾರದಿತ್ತು.

ಅವರು ಮುಖ್ಯಮಂತ್ರಿ ಆಗುವುದು ಸಾಧ್ಯ ಇರಲಿಲ್ಲ. ಆದರೆ, ಉಪಮುಖ್ಯಮಂತ್ರಿಯೋ ಮತ್ತೊಂದೋ ಆಗಬೇಕಿತ್ತು. ಆಗಲಿಲ್ಲ. ಅದು ಈಗ ಮುಗಿದ ಅಧ್ಯಾಯ. ಮತ್ತೆ ಅವರ ಮನೆಯ ಹೊಸ್ತಿಲಿಗೆ ಅಧಿಕಾರ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಆದರೆ, ಪರಮೇಶ್ವರ್ ಅವರು ತಾವು ಅಧಿಕಾರದ ಹಿಂದೆ ಇದ್ದೇನೆ ಎಂದು ತೋರಿಸಿಕೊಳ್ಳಬಾರದು. ಅದನ್ನು ಹಿಡಿಯಲು ಪ್ರಯತ್ನವನ್ನೂ ಮಾಡಬಾರದು. ಆಗ ಉಳಿದ ಮಂತ್ರಿ ಪದವಿ ಆಕಾಂಕ್ಷಿಗಳಿಗೂ ಪಕ್ಷದ ಅಧ್ಯಕ್ಷರಾದ ಅವರಿಗೂ ವ್ಯತ್ಯಾಸ ಇರುವುದಿಲ್ಲ.

ಮೊನ್ನೆ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬಂದಾಗ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು  ಸಹಿ ಸಂಗ್ರಹ ನಡೆದುದು ಒಳ್ಳೆಯ ಬೆಳವಣಿಗೆ ಅಲ್ಲ. ಪರಮೇಶ್ವರ್ ಅವರ ಆಪ್ತ ಸ್ನೇಹಿತರಿಗೇ ಅದು ಇಷ್ಟವಾಗಲಿಲ್ಲ. ಪರಮೇಶ್ವರ್ ಆತುರ ಮಾಡುತ್ತಿದ್ದಾರೆ ಎಂದು ಅವರಿಗೆಲ್ಲ ಅನಿಸಿತು. ಆದರೆ ಪರಮೇಶ್ವರ್ ಅವರಿಗೆ ಧಾವಂತ. ಅವರು ಮುಖ್ಯಮಂತ್ರಿ ಮತ್ತು ಸಂಪುಟದ ಸದಸ್ಯರಿಗೆ ಪತ್ರ ಬರೆದು ಪಕ್ಷದ ಪ್ರಣಾಳಿಕೆಯ ಅನುಷ್ಠಾನಕ್ಕೆ ಸಲಹೆ ಮಾಡಿದ್ದಾರೆ.

ಮುಖ್ಯಮಂತ್ರಿಗೆ ಬರೆದ ಪತ್ರದ ಜತೆಗೆ ಪ್ರಣಾಳಿಕೆಯ ಪ್ರತಿಯನ್ನೂ ಇಟ್ಟಿದ್ದಾರೆ. ಪತ್ರ ಬರೆದ ವಾರದ ನಂತರ ಅದು ಮಾಧ್ಯಮಗಳಿಗೆ ತಲುಪುವಂತೆ ನೋಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ನಿನ್ನೆಗೆ ಎರಡು ತಿಂಗಳಾಗಿದೆ. ಈ ಸರ್ಕಾರದ ಅವಧಿ ಇನ್ನೂ ನಾಲ್ಕು ವರ್ಷ ಹತ್ತು ತಿಂಗಳು. ಒಂದು ಪಕ್ಷದ ಪ್ರಣಾಳಿಕೆ ಜಾರಿಗೆ ತರಲು ಪೂರ್ತಿ ಐದು ವರ್ಷಗಳು ಇರುತ್ತವೆ.

ಒಂದು ರೂಪಾಯಿಗೆ ಒಂದು ಕಿಲೊ ಅಕ್ಕಿ ಕೊಡಲೂ ಐದು ವರ್ಷ ಅವಧಿ ಇತ್ತು. ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ದಿನವೇ ಅಕ್ಕಿ ಕೊಡುವ ತೀರ್ಮಾನ ಮಾಡಿ ದುಡುಕಿದರು ಎನ್ನಬಹುದಾದರೆ ಪರಮೇಶ್ವರ್ ಅವರು ಮೊದಲ ಬಜೆಟ್‌ನಲ್ಲಿಯೇ ಪ್ರಣಾಳಿಕೆ ಜಾರಿಗೆ ತರುವಂತೆ ಸಲಹೆ ಮಾಡುವುದೂ ದುಡುಕಿನ ಸೂಚನೆಯೇ ಆಗುತ್ತದೆ. ಪಕ್ಷ ಮತ್ತು ಸರ್ಕಾರದ ನಡುವೆ ಬಿರುಕು ಬಿಟ್ಟಿದೆ ಎಂದು ತಿಳಿದುಕೊಳ್ಳಲು ಆತ ದೊಡ್ಡ ಅನುಭಾವಿಯೇನೂ ಆಗಿರಬೇಕಾಗಿಲ್ಲ.

ಇದು ಪಕ್ಷ ಎಂಬ ಒಂದು ವ್ಯವಸ್ಥೆಯ ದುರಂತ ಕೂಡ ಹೌದು. ಒಂದು ಪಕ್ಷ ಅಧಿಕಾರಕ್ಕೆ ಬರುವವರೆಗೆ ಎಲ್ಲರಿಗೂ ಅದು ಬೇಕಾಗುತ್ತದೆ; ಕಾರ್ಯಕರ್ತರು ಬೇಕಾಗುತ್ತಾರೆ. ಅದು ಅಧಿಕಾರಕ್ಕೆ ಬಂದ ಕೂಡಲೇ ಪಕ್ಷ ಮತ್ತು ಸರ್ಕಾರದ ನಡುವೆ ಅಂತರ ಹೆಚ್ಚುತ್ತ ಹೋಗುತ್ತದೆ. ಅಧಿಕಾರಕ್ಕೆ ಬರುವವರೆಗೆ ಪಕ್ಷದ ಕಚೇರಿಯಲ್ಲಿ ಠಳಾಯಿಸುವವರೆಲ್ಲ ಅಧಿಕಾರ ಬಂದ ಕೂಡಲೇ ವಿಧಾನಸೌಧದಲ್ಲಿ ಠಳಾಯಿಸತೊಡಗುತ್ತಾರೆ.

ಸಚಿವರು ವಾರದಲ್ಲಿ ಒಂದು ದಿನ ಪಕ್ಷದ ಕಚೇರಿಗೆ ಬರಬೇಕು ಎಂದು ಅಧ್ಯಕ್ಷರು ಫರ್ಮಾನು ಹೊರಡಿಸಬೇಕಾಗುತ್ತದೆ! ಪಕ್ಷದಲ್ಲಿ ಅನಾಥ ಭಾವ ಬೆಳೆಯುತ್ತ ಹೋಗುತ್ತದೆ. ಅಧಿಕಾರ ಹೋಗುತ್ತದೆ ಎಂದು ಗೊತ್ತಾಗುವ ವೇಳೆಗೆ ಮತ್ತೆ ಪಕ್ಷ ನೆನಪಾಗುತ್ತದೆ. ಆಗ ಕಾಲ ಮಿಂಚಿರುತ್ತದೆ. ಪರಮೇಶ್ವರ್ ಅವರ ಮನಸ್ಸಿನಲ್ಲಿ ಈಗ ಅದೇ ಅನಾಥ ಭಾವನೆ ಇದೆ. ಪಕ್ಷದ ಪ್ರಣಾಳಿಕೆಯಲ್ಲಿ ಆದ್ಯತೆಯ ಭರವಸೆಯಾಗಿದ್ದ ಒಂದು ರೂಪಾಯಿಗೆ ಒಂದು ಕಿಲೊ ಅಕ್ಕಿ ಹಂಚುವ ಕಾರ್ಯಕ್ರಮದಲ್ಲಿ ಅವರು ವೇದಿಕೆಯ ನಟ್ಟನಡುವೆ ಇರಬೇಕಿತ್ತು.

ಶಿಷ್ಟಾಚಾರದ ನೆಪದಲ್ಲಿ ಅವರು ದೂರ ಉಳಿಯಬೇಕಾಯಿತು. ಅಥವಾ ದೂರ ಉಳಿಸಲಾಯಿತು! ಮತ್ತೆ ರಾಜಕಾರಣ. ಪರಮೇಶ್ವರ್ ಅವರು ಕೆಲವರು ಮಾಧ್ಯಮದ ಸ್ನೇಹಿತರನ್ನು ಕರೆದು ಮಾತನಾಡಿದರು. ಅಕ್ಕಿಯ ಸುದ್ದಿಯ ಜತೆಗೆ ಪರಮೇಶ್ವರ್ ಅವರ ಸಂದರ್ಶನವೂ ಪತ್ರಿಕೆಗಳಲ್ಲಿ ಬಂತು. ಮತ್ತೆ ಅದೇ ಮಾತು : ಮುಖ್ಯಮಂತ್ರಿ ಜತೆಗೆ ತಮ್ಮ ಸಂಬಂಧ ಹಳಸಿಲ್ಲ, ಸಚಿವರಿಗೆ ಪತ್ರ ಬರೆಯಬಹುದು; ಅದರಲ್ಲಿ ತಪ್ಪೇನೂ ಇಲ್ಲ ಇತ್ಯಾದಿ. ಪರಮೇಶ್ವರ್ ಅವರಿಗೆ ಅಕ್ಕಿಯ ಸಂಭ್ರಮದ ನಡುವೆ ತಾವು ಕಳೆದು ಹೋಗುವುದು ಬೇಕಿರಲಿಲ್ಲ.

ತಾನು ಇದ್ದೇನೆ, ಪಕ್ಷ ಇದೆ ಎಂದು ಸರ್ಕಾರಕ್ಕೆ ತೋರಿಸಬೇಕಿತ್ತು. ಸಮರ್ಥವಾಗಿಯೇ ತೋರಿಸಿಕೊಟ್ಟರು. ಪರಿಸ್ಥಿತಿಯ ಚಿತಾವಣೆಯಿಂದಾಗಿಯೋ ಏನೋ ಪಕ್ಷದ ಮೂಲನಿವಾಸಿಯ ಕೈಯಲ್ಲಿ ಇಲ್ಲದ ಸರ್ಕಾರಕ್ಕೆ ಮೂಗುದಾರ ಹಾಕುವ ಮಾತೂ ಕೇಳಿ ಬಂದಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಬಹಳ ದಿನವೇನೂ ಆಗಿಲ್ಲ. ಅದು ನಿಯಂತ್ರಣ ತಪ್ಪಿ ಸಿಕ್ಕ ಸಿಕ್ಕ ದಿಕ್ಕಿಗೆ ಹೊರಟಿದೆ ಎಂದೂ ಅನಿಸಿಲ್ಲ.

ಮೂಗುದಾರ ಯಾವಾಗ ಹಾಕುತ್ತಾರೆ? ಮೂಗು ಬಲಿತು ಹೂಂಕರಿಸುವ ಸಮಯದಲ್ಲಿ ಅಲ್ಲವೇ? ಈಗಲೇ ಆ ಮಾತು ಏಕೆ? ದೂರ ನಿಂತು ನೋಡುವವರಿಗೆ ಎಲ್ಲವೂ ಸರಿಯಿಲ್ಲ ಎಂದು ಅನಿಸಲು ಹೆಚ್ಚು ಕಾರಣಗಳು ಬೇಕಿಲ್ಲ. ಹಿಂದೆಲ್ಲ ಹೀಗೆ ಪಕ್ಷದ ನಾಯಕರ ನಡುವೆ, ಪಕ್ಷ ಮತ್ತು ಸರ್ಕಾರದ ಮುಖ್ಯಸ್ಥರ ನಡುವೆ ಪತ್ರ ವ್ಯವಹಾರ ಆಗಿರಲಿಲ್ಲ ಎಂದು ಅಲ್ಲ. ಅದೆಲ್ಲ ತಡವಾಗಿ ಶುರು ಆಗುತ್ತಿತ್ತು. ಅಂತಿಮವಾಗಿ ಅದರಿಂದ ಒಳ್ಳೆಯದೇನೂ ಆಗಿರಲಿಲ್ಲ.

ಸದಾನಂದಗೌಡರು ಇನ್ನೇನು ಮುಖ್ಯಮಂತ್ರಿ ಪದವಿ ಕಳೆದುಕೊಳ್ಳುವ ಸಮಯ. ಯಡಿಯೂರಪ್ಪ ಮತ್ತು ಗೌಡರ ನಡುವಿನ ಸಂಬಂಧ ಹಳಸಿತ್ತು. ರಾಜ್ಯದಲ್ಲಿ ಬರ ಬಿದ್ದಿತ್ತು. ಯಡಿಯೂರಪ್ಪ ಮಾಧ್ಯಮದವರನ್ನು ಕರೆದು ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸಿದರು. ಅಧಿಕಾರಿಗಳನ್ನು ಬೈದರು. ಸಚಿವರು, ಅಧಿಕಾರಿಗಳು ಪ್ರವಾಸಕ್ಕೆ ಹೋಗದೆ ಇಲ್ಲೇನು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. `ನಿಮ್ಮದೇ ಸರ್ಕಾರ. ನೀವೇ ಮಾಡಿದ ಮುಖ್ಯಮಂತ್ರಿ.

ಅವರ ಜತೆಗೆ ಮಾಧ್ಯಮದ ಮೂಲಕ ಮಾತನಾಡುತ್ತಿದ್ದೀರಲ್ಲ ಏಕೆ' ಎಂದು ಕೇಳಿದೆ. `ಸದಾನಂದಗೌಡರ ಕಿವಿಯಲ್ಲಿ ಹೇಳಿದರೆ ಜನರಿಗೆ ಗೊತ್ತಾಗುತ್ತದೆಯೇ' ಎಂದು ಯಡಿಯೂರಪ್ಪ ನನಗೇ ಮರುಪ್ರಶ್ನೆ ಹಾಕಿದರು. ಪರಮೇಶ್ವರ್ ಅವರಿಗೂ ಬರೀ ಮುಖ್ಯಮಂತ್ರಿಗೆ ಮತ್ತು ಅವರ ಸಂಪುಟ ಸದಸ್ಯರಿಗೆ ಕಿವಿಯಲ್ಲಿ ಹೇಳುವುದು ಬೇಕಿಲ್ಲ. ಜನರಿಗೆ ಗೊತ್ತಾಗಬೇಕು ಎಂದೇ ಅವರು ಪತ್ರ ಬರೆಯುತ್ತಿದ್ದಾರೆ. ಅದನ್ನು ಮಾಧ್ಯಮಗಳಿಗೆ ತಲುಪಿಸುತ್ತಿದ್ದಾರೆ; ಸಂದರ್ಶನ ಕೊಡುತ್ತಿದ್ದಾರೆ.

ಕಳೆದ ಬಿಜೆಪಿ ಸರ್ಕಾರದಲ್ಲಿ ಆ ಪಕ್ಷದ ನಾಯಕರಿಗೆಲ್ಲ ಹೀಗೆ ಪತ್ರ ಬರೆಯಲು ವೇಳೆ ಇರಲಿಲ್ಲ. ಏನಿದ್ದರೂ ಅವರು ತಮ್ಮ ಮನೆಯ ಮುಂದೆ ನಿತ್ಯ ಕಾಯುತ್ತಿದ್ದ ಮಾಧ್ಯಮದ ಮುಂದೆಯೇ ಎಲ್ಲವನ್ನೂ ಖುಲ್ಲಂ ಖುಲ್ಲಾ ಮಾತನಾಡುತ್ತಿದ್ದರು. ಐದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಬಂದರು; ಪಕ್ಷ ಮತ್ತು ಸರ್ಕಾರ ಎರಡೂ ಚಿಂದಿ ಚಿಂದಿ ಆಗಿ ಹೋದುವು. ಚಿಂದಿ ಚಿಂದಿ ಆಗುವುದರಲ್ಲಿ ಜನತಾದಳದವರು ನಿಸ್ಸೀಮರು. ಅವರೂ ಹೀಗೆಯೇ ಜಗಳಗಂಟರು.

ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡ ಜಗಳ ಮಾಡಿದ್ದಕ್ಕೆ ಲೆಕ್ಕವಿಲ್ಲ. ದೇವೇಗೌಡ ಮತ್ತು ಜೆ.ಎಚ್.ಪಟೇಲರು ಜಗಳ ಮಾಡಿದ್ದಕ್ಕೆ ಲೆಕ್ಕವಿಲ್ಲ. ದೇವೇಗೌಡ ಮತ್ತು ಸಿದ್ದರಾಮಯ್ಯ ಜಗಳ ಆಡಿದ್ದಕ್ಕೂ ಲೆಕ್ಕವಿಲ್ಲ. ಅಕ್ಕಪಕ್ಕದ `ಅನುಗ್ರಹ' ಮತ್ತು `ಕಾವೇರಿ' ಬಂಗಲೆಗಳಲ್ಲಿ ವಾಸವಾಗಿದ್ದ ದೇವೇಗೌಡ ಮತ್ತು ಪಟೇಲರ ನಡುವೆ ಇದೇ ರೀತಿ ಪತ್ರ ವ್ಯವಹಾರ ನಡೆಯುತ್ತಿತ್ತು.

ಅಧಿಕಾರಕ್ಕೆ ಬಂದಾಗಲೆಲ್ಲ ಜಗಳವಾಡಿ, ಪಾದಚಾರಿಗಳಾಗಿ, ಮತ್ತೆ ಒಂದಾಗಿ, ಆ ಪ್ರಕ್ರಿಯೆಯಲ್ಲಿ ಚೂರು ಚೂರಾಗಿ, ಎಂದೂ ಏಕಾಂಗಿಯಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂಬ ಸ್ಥಿತಿಗೆ ಈಗ ಜನತಾದಳದ ಒಂದು ಭಾಗ ಬಂದು ನಿಂತಿದೆ. ವಿಧಾನಸಭೆಗೆ ಚುನಾವಣೆ ಆಗಿ ಎರಡೇ ತಿಂಗಳಾಗಿದೆ. ಬಿಜೆಪಿ ಬಿಟ್ಟು ಹೋಗಿದ್ದ ಯಡಿಯೂರಪ್ಪ ಈಗ ಪಕ್ಷದ ಬಾಗಿಲಲ್ಲಿ ನಿಂತಿದ್ದಾರೆ. ಅನಂತಕುಮಾರ್ ಜತೆಗೂ ಮಾತುಕತೆಗೆ ಸಿದ್ಧ ಎಂದಿದ್ದಾರೆ.

ಎಂಥ ನಗೆಪಾಟಲು! ಸೋಲು ಕಲಿಸುವ ಪಾಠ ಇದು ಮತ್ತು ದೂರವಾದ ಅಧಿಕಾರ ಕಲಿಸುವ ಪಾಠ ಇದು. ಈ ಸಾರಿಯ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮನಮೋಹನಸಿಂಗ್ ಒಂದೇ ಬಿಜೆಪಿ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳು ಆಗಿಹೋದರು ಎಂದಿದ್ದರು. ಸ್ಥಿರ ಸರ್ಕಾರಕ್ಕೆ ಕಾಂಗ್ರೆಸ್ ಮಾದರಿ ಎಂದಿದ್ದರು. ಅವರಿಗೆ ನೆನಪಿಲ್ಲ. ಇದೇ ಕರ್ನಾಟಕದಲ್ಲಿ, ಅವರದೇ ಕಾಂಗ್ರೆಸ್ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳು ಆಗಿ ಹೋಗಿದ್ದರು.

ಅದು1989ರಿಂದ 94ರ ನಡುವಿನ ಅವಧಿ. 1989ರಲ್ಲಿ ಜನರು ಕಾಂಗ್ರೆಸ್ ಸರ್ಕಾರಕ್ಕೆ ಭಾರಿ ಬಹುಮತದ ಆಶೀರ್ವಾದ ಮಾಡಿದ್ದರು. ಆದರೆ ಒಬ್ಬರೇ ಮುಖ್ಯಮಂತ್ರಿಗೆ ಅಧಿಕಾರ ಮಾಡಲು ಆಗಲಿಲ್ಲ. ವೀರೇಂದ್ರ ಪಾಟೀಲ, ಎಸ್.ಬಂಗಾರಪ್ಪ ಮತ್ತು ವೀರಪ್ಪ ಮೊಯಿಲಿ ಆಗ ಮುಖ್ಯಮಂತ್ರಿಗಳಾಗಿದ್ದರು. ನಂತರ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತು ಹೋಯಿತು. ಈ ಸಾರಿಯ ವಿಧಾನಸಭೆ ಚುನಾವಣೆಯಲ್ಲಿಯೂ ಜನರು ಒಳ್ಳೆಯ ಆಡಳಿತಕ್ಕೆ ಮತ ನೀಡಿದ್ದಾರೆ.

ಕೆಟ್ಟ ಆಡಳಿತದ ವಿರುದ್ಧ ಮತ ಹಾಕಿದ್ದಾರೆ. ಸಿದ್ದರಾಮಯ್ಯ ಅವರ ಇದುವರೆಗಿನ ಆಡಳಿತದಲ್ಲಿ ಹುಳುಕು ಹುಡುಕುವುದು ಕಷ್ಟ. ಪಕ್ಷದ ಅಧ್ಯಕ್ಷರ `ಕಿರಿಕಿರಿ'ಯನ್ನೂ ಅವರು ಜಾಣ್ಮೆಯಿಂದಲೇ ನಿಭಾಯಿಸಿದ್ದಾರೆ. ಮಾಧ್ಯಮದವರ ಮುಂದೆ ಹಗುರ ಮಾತು ಆಡಿಲ್ಲ. ಪರಮೇಶ್ವರ್ ಅವರಿಗೆ ಅಧಿಕಾರ ತಪ್ಪಿರುವುದರಿಂದ ದಲಿತರಿಗೆ ನೋವಾಗಿದೆ ನಿಜ. ಆದರೆ, ರಾಜ್ಯದಲ್ಲಿ ಕುರುಬ ಸಮುದಾಯದ ಒಬ್ಬ ವ್ಯಕ್ತಿಗೂ ಇದೇ ಮೊದಲು ಅಧಿಕಾರ ಸಿಕ್ಕಿದೆ.

ಸಿದ್ದರಾಮಯ್ಯ ಒಬ್ಬ ದಕ್ಷ ಆಡಳಿತಗಾರ. ಇದುವರೆಗೆ ಅವರಿಗೆ ಯಾವುದೇ ಕಳಂಕ ತಟ್ಟಿಲ್ಲ. ಕನಿಷ್ಠ ಈ ಅವಧಿಯಲ್ಲಿ ಅವರನ್ನು ಜಾತಿವಾದಿ ಎಂದು ಹೇಳುವುದು ಕಷ್ಟ. ದೇವರಾಜ ಅರಸು ಮತ್ತು ವೀರಪ್ಪ ಮೊಯಿಲಿ ಅವರನ್ನು ಬಿಟ್ಟರೆ ತನ್ನ ಸಮುದಾಯದ ಒಬ್ಬರಿಗೂ ಮಂತ್ರಿ ಪದವಿ ಕೊಡದ ಮುಖ್ಯಮಂತ್ರಿ ಅವರು. ಅರಸು ಮತ್ತು ಮೊಯಿಲಿ ಅವರಿಗೆ ಮನಸ್ಸು ಇದ್ದರೂ ಮಂತ್ರಿ ಮಾಡಲು ಅವರ ಸಮುದಾಯದ ಜನರು ಇರಲಿಲ್ಲ.

ಸಿದ್ದರಾಮಯ್ಯ ಅವರಿಗೆ ಆ ಸೌಕರ್ಯ ಇಲ್ಲ. ಒಬ್ಬಿಬ್ಬರು ಕುರುಬ ಶಾಸಕರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದು ಅವರಿಗೆ ಕಷ್ಟ ಆಗುತ್ತಿರಲಿಲ್ಲ. ಅದನ್ನು ತಪ್ಪು ಎಂದೂ ಯಾರೂ ಹೇಳುತ್ತಿರಲಿಲ್ಲ. ಈಗ ಸಿದ್ದರಾಮಯ್ಯ ಅವರಿಗೆ ಒಂದು ಅವಕಾಶ ಕೊಡಬೇಕು. ಪರಮೇಶ್ವರ್ ತಮ್ಮ ಸರದಿಗಾಗಿ ಕಾಯಬೇಕು. ಒಂದು ದಿನ ಅವರೂ ಮುಖ್ಯಮಂತ್ರಿ ಆಗಬಹುದು. ಅವಸರದಿಂದ ಅಪಾಯವೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT