ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿ ಕೊಠಡಿಯೊಳಗಿನಿಂದಲೇ ಆರಂಭಿಸಿ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ  ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ, 2017 ಅನ್ನು ರಾಜ್ಯ ವಿಧಾನಸಭೆಯು ಮಂಗಳವಾರ (ಜೂನ್ 20ರಂದು) ಅಂಗೀಕರಿಸಿತು. ಹಿಂದಿನ ಬುಧವಾರ (ಜೂನ್ 14) ಮಂಡಿತವಾಗಿದ್ದ ಈ ಪ್ರಮುಖ ಮಸೂದೆಯನ್ನು ಚರ್ಚಿಸಲು ಸದನದಲ್ಲಿ ಸಾಕಷ್ಟು ಸಮಯ ದೊರಕಲಿಲ್ಲ. ಉನ್ನತ ಶಿಕ್ಷಣ ಕ್ಷೇತ್ರದ ಇತರೆ ಪಾಲುದಾರರಿಗೂ ಮಸೂದೆ ಲಭ್ಯವಾಗಿ, ಅದರ ಸಾಧಕಬಾಧಕಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವ ಅವಕಾಶವೂ ದೊರಕಲಿಲ್ಲ. ಅಲ್ಲದೆ ಇಂತಹ ಸಂದರ್ಭ ಒದಗಿಬಂದಾಗ, ಈಗ ಅಧಿಕಾರದಲ್ಲಿರುವ ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳು, ಡೀನ್ ಮತ್ತಿತರೆ ಶಾಸನಬದ್ಧ ಅಧಿಕಾರಿಗಳು ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಹಾಗೂ ಜನಾಭಿಪ್ರಾಯವನ್ನು ರೂಪಿಸುವ ಪರಂಪರೆಗೆ ಸೇರಿದವರಲ್ಲ. ತಮ್ಮ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯ ಹರಣವಾಗುತ್ತದೆ ಎಂದಾಗ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಾರ್ವಜನಿಕ ಹೋರಾಟವೊಂದನ್ನು ರೂಪಿಸುವವರಲ್ಲ. ಹಾಗಾಗಿ ಅವರುಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವಂತೆಯೂ ಇಲ್ಲ. ಆದರೆ ಪ್ರಮುಖ ಶಾಸನಗಳು ವಿಧಾನಮಂಡಲದಲ್ಲಾಗಲೀ ಸಾರ್ವಜನಿಕವಾಗಿಯಾಗಲೀ ಚರ್ಚೆಯಾಗದೆ ಅಂಗೀಕಾರವಾಗುವುದು ವಿಷಾದದ ಸಂಗತಿಯೆಂದು ಹೇಳಲೇಬೇಕಾಗುತ್ತದೆ.

ಈ ನಡುವೆ ಬುಧವಾರದಂದು (ಜೂನ್ 21) ಇದೇ ಮಸೂದೆಯು ವಿಧಾನಪರಿಷತ್ತಿನಲ್ಲಿ ಮಂಡನೆಯಾಗಬೇಕಿತ್ತು. ಆದರೆ ವಿರೋಧಪಕ್ಷಗಳ ಸದಸ್ಯರು ಪಟ್ಟು ಹಿಡಿದು ಅಧಿವೇಶನದ ಕಡೆಯ ದಿನದಂದು ಮಂಡನೆಯಾಗಲು ಬಿಡಲಿಲ್ಲ. ಕಲಾಪ ನಿಯಮಗಳ ಅನುಸಾರ ಕನಿಷ್ಠ ಮೂರು ದಿನಗಳ ಸಮಯವಾದರೂ ಮಸೂದೆಗಳನ್ನು ಅಧ್ಯಯನ ಮಾಡಲು ಬೇಕು ಎಂದು ಅವರುಗಳು ವಾದಿಸಿದರು. ಹಾಗಾಗಿ ಸದ್ಯಕ್ಕೆ ಈ ಮಸೂದೆಯು ಮುಂದಿನ ಅಧಿವೇಶನದವರೆಗೆ ಮುಂದೆ ಹೋಗಿದೆ.

ಕರ್ನಾಟಕದ ಸಾರ್ವಜನಿಕ ವಲಯದ ರಾಜ್ಯ ವಿಶ್ವವಿದ್ಯಾಲಯಗಳ ಆಡಳಿತಕ್ಕೆ ಏಕ­ರೂಪತೆಯನ್ನು ತರುವ ಉದ್ದೇಶ­ದಿಂದ ಈ ಮಸೂದೆಯು ರಚಿತವಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ವಾದಿಸು­ತ್ತಾರೆ. ಅವರ ಉದ್ದೇಶದಲ್ಲಿ ನನಗೆ ಯಾವ ಸಮಸ್ಯೆಯೂ ಕಾಣು­ವುದಿಲ್ಲ. 2016ರ ಜೂನ್ ತಿಂಗಳಿನಲ್ಲಿ ಉನ್ನತ ಶಿಕ್ಷಣಖಾತೆಯ ಉಸ್ತು­ವಾರಿಯನ್ನು ಪಡೆದ ನಂತರದಲ್ಲಿ ರಾಜ್ಯದ ವಿಶ್ವ­ವಿದ್ಯಾಲಯಗಳಲ್ಲಿ ಕಾಣಬರುವ ಭ್ರಷ್ಟತೆ ಮತ್ತು ಸ್ವಜನಪಕ್ಷಪಾತಗಳ ಬಗ್ಗೆ ಅವರು ಹಲವಾರು ಬಾರಿ ಮಾತ­ನಾಡಿದ್ದಾರೆ. ಅವರ ಮಾತುಗಳು ಅತಿಶ­ಯೋಕ್ತಿಯೆನಿಸಿದರೂ, ಕುತೂಹಲದ ವಿಷಯ­ವೆಂದರೆ ವಿಶ್ವವಿದ್ಯಾಲಯಗಳ ಒಳಗಿ­ನಿಂದ ಬಹಿರಂಗವಾಗಿ ಪ್ರತಿ­ಭಟನೆಯ ದನಿಗಳು ಏಳಲಿಲ್ಲ. ಅವರ ಭರ್ತ್ಸನೆಯ ಗುರಿಯಾಗಿದ್ದವರು ಮೌನಕ್ಕೆ ಶರಣಾದರು.
ಈ ವಿಚಾರಗಳೆಲ್ಲವೂ ಒಂದೆಡೆ ಇರಲಿ. ನಾವು ಇಂದು ಕೇಳಿ­ಕೊಳ್ಳಬೇಕಿರುವ ಪ್ರಶ್ನೆಯಿದು: ಇಂದು ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಸಚಿವರು ಗುರುತಿಸುತ್ತಿರುವ ಬಿಕ್ಕಟ್ಟಿನ ಸ್ವರೂಪವೇನು ಹಾಗೂ ಅದನ್ನು ಪರಿಹರಿಸಲು ಅವರು ಪ್ರಸ್ತಾಪಿಸುತ್ತಿರುವ ಪರ್ಯಾಯ­ಗಳಾವುವು? ಸಚಿವರ ಮಾತುಗಳಲ್ಲಿ ಪದೇಪದೇ ಕೇಳಿ­ಬಂದಿರುವುದು ಕಾಮಗಾರಿ ಮತ್ತು ನೇಮಕಾತಿ ಕ್ಷೇತ್ರಗಳಲ್ಲಿನ ಭ್ರಷ್ಟತೆ ಮತ್ತು ಸ್ವಜನಪಕ್ಷಪಾತ. ಇದಕ್ಕೆ ಅದಕ್ಷ ಆಡಳಿತ ವ್ಯವಸ್ಥೆಯೊಂದನ್ನು ಸೇರಿಸಬಹುದು. ಇದಕ್ಕೆ ಅವರು ಸೂಚಿಸುತ್ತಿರುವ ಪರಿಹಾರಗಳೇನು?

ಸಚಿವರ ಪರ್ಯಾಯಗಳು ಎರಡು ಬಗೆಯವಾಗಿವೆ. ಮೊದಲಿಗೆ, ವಿಶ್ವ­ವಿದ್ಯಾಲಯಗಳ ಆಡಳಿತದ ಮೇಲೆ ರಾಜ್ಯಸರ್ಕಾರದ ನಿಯಂತ್ರಣವನ್ನು ಹೆಚ್ಚಿಸುವುದು. ಉದಾಹರಣೆಗೆ, ಕಾಮಗಾರಿ ಮತ್ತು ಬೋಧಕರ ನೇಮಕಾತಿಗಳನ್ನು ನಿರ್ವಹಿಸಲು ರಾಜ್ಯ­ಮಟ್ಟದ ಸಾಮಾನ್ಯ ಮಂಡಳಿಗಳು (ಉನ್ನತ ಶಿಕ್ಷಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ಮತ್ತು ವಿಶ್ವ­ವಿದ್ಯಾಲಯಗಳ ಬೋಧಕರ ಸಾಮಾನ್ಯ ನೇಮಕಾತಿ ಮಂಡಳಿ) ಕೆಲಸ ಮಾಡಲಿವೆ. ಒಂದು ಕೋಟಿ ರೂಪಾಯಿ ಮೊತ್ತಕ್ಕಿಂತ ಹೆಚ್ಚಿನ ಕಾಮಗಾರಿಗಳನ್ನು ಕೈಗೆತ್ತಿ­ಕೊಳ್ಳುವ ಮುನ್ನ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕು. ಕುಲಪತಿಗಳ ಆಯ್ಕೆ ಸಮಿತಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳ ಸಂಖ್ಯೆ ಒಂದರಿಂದ ಎರಡಕ್ಕೆ ಏರಲಿದೆ ಮತ್ತು ಇವರುಗಳಲ್ಲಿ ಒಬ್ಬರು ಸಮಿತಿಯ ಅಧ್ಯಕ್ಷರೂ ಆಗಿರುತ್ತಾರೆ. ಆಡಳಿತದಲ್ಲಿ ದಕ್ಷತೆಯನ್ನು ತರಲು ಕುಲಸಚಿವರ ಹುದ್ದೆಗೆ ಬೋಧಕವರ್ಗದವರ ಬದಲಿಗೆ ಐ.ಎ.ಎಸ್. ಅಥವಾ ಹಿರಿಯ ಕೆ.ಎ.ಎಸ್. ಅಧಿಕಾರಿಗಳನ್ನು ಮಾತ್ರ ನೇಮಿಸುವ ಪ್ರಸ್ತಾಪವಿದೆ.

ಎರಡನೇ ಬಗೆಯ ಪರಿಹಾರಗಳು ಸಾಂಕೇತಿಕವಾದವು. ಉದಾಹರಣೆಗೆ, ಈ ಕೆಳಗಿನ ಪ್ರಸ್ತಾಪಿತ ಬದಲಾವಣೆಗಳನ್ನು ಗಮನಿಸಿ. ಕುಲಪತಿಗಳು ಪ್ರತಿತಿಂಗಳು ಹತ್ತು ಗಂಟೆಗಳಾದರೂ ಪಾಠ ಮಾಡ­ಬೇಕು. ವಿಶ್ವವಿದ್ಯಾಲಯಗಳ ಸಿಂಡಿ­ಕೇಟ್‌ಗಳನ್ನು ಕಾರ್ಯನಿರ್ವಾಹಕ ಪರಿಷತ್ತು ಎಂದು ಕರೆಯಬೇಕು. ಕಾರ್ಯ­ನಿರ್ವಾಹಕ ಪರಿಷತ್ತು ಮತ್ತು ವಿದ್ಯಾ­ವಿಧಾಯಕ ಪರಿಷತ್ತು ಇವುಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ಕನಿಷ್ಠ ವಿದ್ಯಾರ್ಹತೆಯನ್ನು ಸೂಚಿಸ­ಲಾಗಿದೆ. ಇವುಗಳಿಂದ ಯಾವುದೆ ಗಮನಾರ್ಹ ಸುಧಾರಣೆ ಅಥವಾ ಬದಲಾವಣೆಯಾಗುವುದಿಲ್ಲ.

ನಾನು ಮೇಲೆ ಪ್ರಸ್ತಾಪಿಸಿದ ಮೊದಲ ವರ್ಗದ ಬದಲಾವಣೆಗಳು ವಿಶ್ವ­ವಿದ್ಯಾಲಯಗಳಿಗೆ ಈಗಿರುವ ಸ್ವಾಯತ್ತತೆ­ಯನ್ನು ಕಸಿದುಕೊಳ್ಳುವ ಕ್ರಮಗಳು. ಸಚಿವರು ಗುರುತಿಸಿರುವ ಭ್ರಷ್ಟತೆ ಮತ್ತು ಸ್ವಜನಪಕ್ಷಪಾತಗಳು ನಮ್ಮ ಇಂದಿನ ವಿಶ್ವ­ವಿದ್ಯಾಲಯಗಳ ವಾಸ್ತವ ಎನ್ನುವುದನ್ನು ಒಪ್ಪದಿರಲು ಯಾರಿಗೂ ಯಾವ ಕಾರಣಗಳೂ ದೊರಕುವುದಿಲ್ಲ. ಆದರೆ ಈ ವಾಸ್ತವ ಸೃಷ್ಟಿಯಾಗಿರುವುದು ಈ ಹಿಂದೆ ಪರಿಣಾಮಕಾರಿ ಕಾಯಿದೆಗಳು ಮತ್ತು ನಿಯಮಗಳು ಇರಲಿಲ್ಲವೆನ್ನುವ ಕಾರಣ­ದಿಂದಲ್ಲ, ಬದಲಿಗೆ ಇದ್ದವುಗಳನ್ನು ಸಹ ನಿರ್ಲಕ್ಷಿಸಿರುವುದರಿಂದ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದ ಅಧಿಕಾರಶಾಹಿಯ ಮತ್ತಷ್ಟು ಪದರಗಳು ಬೇಕಿತ್ತೇ ಎನ್ನುವ ಪ್ರಶ್ನೆ ಏಳುತ್ತದೆ. ಹಾಗಾಗಿಯೇ ರಾಜ್ಯ­ಸರ್ಕಾರದ ನಿಯಂತ್ರಣ, ಮೇಲ್ವಿ­ಚಾರಣೆಗಳನ್ನು ವಿಶ್ವವಿದ್ಯಾಲಯಗಳ ಮೇಲೆ ಹೇರುವ ಬದಲು, ವಿಶ್ವ­ವಿದ್ಯಾಲಯ­ಗಳೊಳಗಿನ ಆಡಳಿತ ಮತ್ತು ಶೈಕ್ಷಣಿಕ ಸಂಸ್ಕೃತಿಗಳನ್ನು ಬದಲಿಸುವ ಆಂದೋಲನವನ್ನು ಸಚಿವರು ಪ್ರಾರಂಭಿಸಬೇಕಿತ್ತು. ಆಗ ವಿಶ್ವ­ವಿದ್ಯಾಲಯಗಳೊಳಗಿನ ಸಮಾನಮನಸ್ಕರೂ ಅವರ ಜೊತೆ ಕೈಜೋಡಿಸುತ್ತಿದ್ದರು.

ಈ ಮಾತನ್ನು ಹೇಳಲು ಎರಡು ಕಾರಣಗಳಿವೆ. ಮೊದಲಿಗೆ, ಈ ಮಸೂದೆ ಪ್ರಸ್ತಾಪಿಸುವಂತೆ ವಿಶ್ವವಿದ್ಯಾಲಯದ ಆಡಳಿತದಲ್ಲಿ ಸರ್ಕಾರದ ಪಾತ್ರವು ಹೆಚ್ಚಾದರೆ, ಅದರಿಂದ ಆಡಳಿತಾತ್ಮಕ ಸುಧಾರಣೆಗಳಾಗುತ್ತವೆ, ಭ್ರಷ್ಟತೆ ಕಡಿಮೆ­ಯಾಗುತ್ತದೆ ಹಾಗೂ ಪಾರದರ್ಶಕತೆ ಹೆಚ್ಚುತ್ತದೆ ಎನ್ನುವ ವಿಶ್ವಾಸ ನನಗಂತೂ ಇಲ್ಲ. ಬೇರೆ ಯಾರಲ್ಲಿಯೂ ಇರುವಂತೆ ತೋರುತ್ತಿಲ್ಲ. ಈಗಾಗಲೇ ವಿಶ್ವ­ವಿದ್ಯಾಲಯಗಳ ಕಡತಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ವರ್ಷಗಟ್ಟಲೆ ದೂಳು ಹಿಡಿಯುತ್ತಿವೆ. ಮುಂದೆ ರಾಜ್ಯ ಸರ್ಕಾರದ ಮೇಲ್ವಿಚಾರಣೆಯು ಹೆಚ್ಚಿ­ದಂತೆ ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆ ಹೆಚ್ಚುವುದಿಲ್ಲ. ಬದಲಿಗೆ ನೇಮಕಾತಿ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ವಿಶ್ವವಿದ್ಯಾಲಯಗಳ ಎಲ್ಲ ಯೋಜನೆಗಳು ಮತ್ತಷ್ಟು ನಿಧಾನವಾಗುತ್ತವೆ.

ಐ.ಎ.ಎಸ್. ಇಲ್ಲವೆ ಕೆ.ಎ.ಎಸ್. ಅಧಿಕಾರಿಗಳನ್ನು ನೇಮಿಸುವುದರಿಂದ ವಿಶ್ವ­ವಿದ್ಯಾಲಯ ಹಾಗೂ ಸರ್ಕಾರಗಳ ನಡುವಣ ಹೊಂದಾಣಿಕೆಯಲ್ಲಿ (ಕೋ-ಅರ್ಡಿನೇಷನ್) ಸುಧಾರಣೆ­ಯಾಗ­ಬಹುದು. ಆದರೆ ವಿಶ್ವ­ವಿದ್ಯಾಲಯಗಳ ಆಡಳಿತದಲ್ಲಿ ದಕ್ಷತೆ ಬರುತ್ತದೆ ಎನ್ನುವು­ದರಲ್ಲಿ ಅನುಮಾನಗಳಿವೆ. ತಮಗೆ ಈಗಿರುವ ಜವಾಬ್ದಾರಿಗಳನ್ನೇ ಈ ಅಧಿ­ಕಾರಿಗಳು ಹೇಗೆ ನಿಭಾಯಿಸುತ್ತಿದ್ದಾರೆ ಗಮನಿಸಿ. ಇದೇ ಮಾತನ್ನು ನಿವೃತ್ತ ಕುಲ­ಪತಿಗಳಿರುವ ವಿವಿಧ ಮಂಡಳಿಗಳ ವಿಚಾರ­ದಲ್ಲಿಯೂ ಹೇಳಬೇಕಾಗುತ್ತದೆ. ತಾವು ಅಧಿಕಾರದಲ್ಲಿದ್ದಾಗ ಗಣನೀಯ ಸಾಧನೆಯನ್ನು ಮಾಡಿದ ದಾಖಲೆ ಇದ್ದಿದ್ದರೆ, ಅಂತಹ ಕುಲಪತಿಗಳ ವಿಶ್ವಾ­ಸಾರ್ಹತೆ ಹೆಚ್ಚಿರುತ್ತಿತ್ತು. ಸರ್ಕಾರದ ಸಮಿತಿ - ಮಂಡಳಿಗಳಲ್ಲಿ ಪುನರ್ವಸತಿ ಬಯಸುವವರಿಂದ ವಿಶ್ವವಿದ್ಯಾಲಯಗಳ ಏಳಿಗೆ ಹೇಗೆ ಸಾಧ್ಯ?

ಎರಡನೆಯದಾಗಿ, ನಾನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಗಮನಿಸಿರು­ವಂತೆ ಕರ್ನಾಟಕದ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಬಿಕ್ಕಟ್ಟು ಉನ್ನತ ಶಿಕ್ಷಣ ಸಚಿವರು ಅಂದಾಜು ಮಾಡಿ­ರುವುದಕ್ಕಿಂತಲೂ ಭಿನ್ನವಾದುದು ಮತ್ತು ಹೆಚ್ಚು ತೀವ್ರವಾದುದು. ನಾವೀಗ ತಳ­ಮುಟ್ಟಿದ್ದೇವೆಯೊ ಇಲ್ಲವೊ ಇನ್ನೂ ಗೊತ್ತಾ­ಗುತ್ತಿಲ್ಲ. ಈ ಅಂಕಣದಲ್ಲಿ ಹಿಂದೆ ಸಹ ಹಲವಾರು ಬಾರಿ ಈ ಬಿಕ್ಕಟ್ಟಿನ ಸ್ವರೂಪದ ಬಗ್ಗೆ ವಿವರವಾಗಿ ಬರೆದಿದ್ದೆ. ಇಂದಿನ ಚರ್ಚೆಗೆ ಪ್ರಸ್ತುತವಾದ ಮೂರು ಅಂಶಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಪ್ರಸ್ತಾಪಿಸುತ್ತೇನೆ. ಸಚಿವರು ಗುರುತಿಸುತ್ತಿ­ರುವ ಭ್ರಷ್ಟತೆ ಮತ್ತು ಸ್ವಜನ­ಪಕ್ಷಪಾತಗಳನ್ನು ಮೀರಿದ ನೈತಿಕ ಅಧಃಪತನವನ್ನು ನಾವು ಕರ್ನಾಟಕದ ವಿಶ್ವ­ವಿದ್ಯಾಲಯಗಳಲ್ಲಿ ಇಂದು ಕಾಣುತ್ತೇವೆ. ನಮ್ಮ ಯಾವುದೇ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಕ್ಕೂ ಸ್ಪಷ್ಟವಾದ ಶೈಕ್ಷಣಿಕ ಗುರಿಯನ್ನು ಪ್ರತಿಪಾದಿಸುವ ಸಾಮರ್ಥ್ಯ ನಮ್ಮ ವಿಶ್ವವಿದ್ಯಾಲಯಗಳಿಗೆ ಇಲ್ಲ. ನಮ್ಮ ಬಗೆಗಿನ, ನಮಗೆ ಅಗತ್ಯವಾಗಿರುವ ಹೊಸಜ್ಞಾನವನ್ನು ಸೃಷ್ಟಿಸುವ ಶಕ್ತಿ­ಯಾಗಲಿ, ಉತ್ಸುಕತೆಯಾಗಲಿ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಈ ಬಿಕ್ಕಟ್ಟುಗಳನ್ನು ಹೊಸ ಸುಧಾರಿತ ಶಾಸನಗಳನ್ನು ಬರೆಯುವುದರಿಂದ ಮತ್ತು ವೃತ್ತಿಪರ ಆಡಳಿತಗಾರರನ್ನು ನೇಮಿಸುವುದರಿಂದ ಶಮನ ಮಾಡಲು ಸಾಧ್ಯವಿಲ್ಲ.

ಈ ಬಿಕ್ಕಟ್ಟುಗಳಿರುವ ಸಂದರ್ಭ­ವನ್ನಾದರೂ ಗಮನಿಸಿ. ಅತ್ಯಂತ ಕ್ಷಿಪ್ರವಾಗಿ ಬದಲಾಗುತ್ತಿರುವ ಇಂದಿನ ವಾಸ್ತವವು ಇನ್ನೊಂದು ಶತ­ಮಾನದೊಳಗೆ, ಅಂದರೆ ನಮ್ಮ ಮಕ್ಕಳ ಜೀವಿತಾವಧಿಯೊಳಗೆ, ಸೇಪಿಯನ್ನರಾದ ನಮ್ಮ ಮಾನವಕುಲದ ಪ್ರಾಬಲ್ಯವು ಭೂಮಿಯ ಮೇಲೆ ಇರುತ್ತದೆಯೊ ಇಲ್ಲವೊ ಎನ್ನುವ ಪ್ರಶ್ನೆಯನ್ನು ಪ್ರಬಲವಾಗಿ ಎತ್ತುತ್ತಿದೆ. ಗ್ರಹಾಂತರ ವಲಸೆ ಹೋಗುವ ಸಾಧ್ಯತೆಗಳು ನಮ್ಮ ಜೀವಿತಾ­ವಾಧಿಯಲ್ಲಿಯೆ ಉದ್ಭವವಾಗುತ್ತಿವೆ. ಅಂತಹ ವಾಸ್ತವದ ಸಂದರ್ಭದಲ್ಲಿ ನಮ್ಮ ಭವಿಷ್ಯದ ಅರಿವನ್ನು ಕಟ್ಟಿ­ಕೊಡಬೇಕಿರುವ, ಅದಕ್ಕೆ ನಮ್ಮನ್ನು ಸಿದ್ಧರಾಗಿಸಬೇಕಿರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಹೇಗೆ ಎಂದು ಯಾರೂ ಕೇಳಿಕೊಳ್ಳುತ್ತಿಲ್ಲ.

ಈ ಮಾತುಗಳನ್ನು ಬರೆಯುವಾಗ, ಅಧ್ಯಾಪಕನಾಗಿ ನನ್ನ ಹೊಣೆಗಾರಿಕೆ ಮತ್ತು ಅಧಿಕಾರಗಳೇನು ಎನ್ನುವ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡುತ್ತಿದೆ. ನನ್ನ ಶೈಕ್ಷಣಿಕ ಅರ್ಹತೆಗಳು ಮತ್ತು ಕರ್ನಾಟಕದಾಚೆಗಿನ ವೃತ್ತಿಬದುಕುಗಳು ಏನೇ ಇದ್ದರೂ, ರಾಜ್ಯ ವಿಶ್ವವಿದ್ಯಾಲಯ ವ್ಯವಸ್ಥೆಯೊಳಗೆ ನಾನು ಬಹುತೇಕ ಎಲ್ಲರಿಗಿಂತ ಕಡಿಮೆ ಸೇವಾವಧಿಯಿರುವ, ಕಿರಿಯ ಅಧ್ಯಾಪಕ ಎನ್ನುವುದನ್ನು ಮರೆಯದೆ ಈ ಮಾತುಗಳನ್ನು ಬರೆಯುತ್ತಿದ್ದೇನೆ. ನಮ್ಮ ವಿಶ್ವವಿದ್ಯಾಲಯಗಳ ಪುನರುಜ್ಜೀವನ, ನನ್ನ ಹಾಗೂ ನನ್ನಂತಹ ಅಧ್ಯಾಪಕರುಗಳ ತರಗತಿಗಳ ಕೊಠಡಿಯೊಳಗಿನಿಂದ ಮಾತ್ರ ಸಾಧ್ಯ. ಉನ್ನತ ಶಿಕ್ಷಣ ವ್ಯವಸ್ಥೆಗೆ ಸೇರಿದ ಮಿಕ್ಕವರೆಲ್ಲರೂ, ಸಚಿವರು ಮತ್ತು ಕುಲಪತಿಗಳು ಸೇರಿದಂತೆ, ಮಾಡ­ಬೇಕಾಗಿರುವುದು ಒಂದೇ ಕೆಲಸ: ತಾವು ಪಾಠ ಮಾಡುವ ವಿಷಯಗಳ ಶೈಕ್ಷಣಿಕ ಗುರಿಯೇನು ಎಂದು ಹೇಳಬಲ್ಲ, ಹೊಸಜ್ಞಾನ ಸೃಷ್ಟಿಸಬಲ್ಲ, ಬೋಧನೆ-ಸಂಶೋಧನೆಗಳಿಗೆ ಬದ್ಧತೆಯಿರುವ ಅಧ್ಯಾಪಕರನ್ನು ನೇಮಿಸಿ. ಅವರು ಕೇಳಿದ್ದನ್ನು ಒದಗಿಸಿ, ಅವರ ತರಗತಿಯಿಂದ ದೂರವಿರಿ.

ಈಗ ಕೃಪೆ ಮಾಡಿ ನನ್ನ ತರಗತಿಯಿಂದ ಹೊರಹೋಗುವಿರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT