ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿಯ ಕಷ್ಟಗಳ ಮಳೆಗೆ ಎದೆಗೊಟ್ಟು...

Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ಗುಲ್ಬರ್ಗದಿಂದ ದೆಹಲಿಗೆ ರೈಲಿನಲ್ಲಿ ಹೋಗಿ, ಅಲ್ಲಿಂದ ಕಾಶ್ಮೀರ್ ಗೇಟ್‌ನಲ್ಲಿ ಇಂಟರ್‌ಸ್ಟೇಟ್ ಬಸ್ ಹತ್ತಿ ಮಸ್ಸೂರಿಗೆ ಹೋದೆ. ಜುಲೈ 12, 1978ರಿಂದಲೇ ಅಲ್ಲಿ ತರಬೇತಿ ಪ್ರಾರಂಭವಾಗಿತ್ತು. ನಾನು ಪಂಚಾಯಿತಿ ಚುನಾವಣೆಯ ಕೆಲಸ ಮುಗಿಸಿ ಹೊರಟಿದ್ದರಿಂದ ನಾಲ್ಕು ದಿನ ತಡವಾಗಿ (ಜುಲೈ 16) ಸೇರಿದೆ.

ಐಎಎಸ್, ಐಪಿಎಸ್, ಆದಾಯ ತೆರಿಗೆ, ರೈಲ್ವೆ ಮೊದಲಾದ ಸೇವೆಗಳಿಗೆ ಆಯ್ಕೆಯಾದ ಸುಮಾರು 400 ಮಂದಿ ಬುನಾದಿ ತರಬೇತಿಗೆಂದು ಅಲ್ಲಿದ್ದೆವು. ದೇಶದ ವಿವಿಧೆಡೆಗಳಿಂದ ಬಂದಿದ್ದವರ ಜೊತೆ ತರಬೇತಿ ಪಡೆಯುವ ಮೊದಲ ಅವಕಾಶ ನನ್ನದಾಗಿತ್ತು. ಸಮುದ್ರಮಟ್ಟದಿಂದ ಏಳು ಸಾವಿರ ಅಡಿ ಎತ್ತರದಲ್ಲಿದ್ದ ಪ್ರದೇಶ ಮಸ್ಸೂರಿ. ತಂಪಾದ ವಾತಾವರಣ.

ಅಲ್ಲಿಗೆ ಹೋದ ಮೊದಲ ದಿನವೇ ವುಲನ್ ಸ್ವೆಟರ್‌ಗಳು, ಕೋಟ್‌ಗಳನ್ನು ಖರೀದಿಸಿದೆವು. ಇಬ್ಬರು ಅಭ್ಯರ್ಥಿಗಳಿಗೆ ಒಂದೊಂದು ಕೋಣೆಯನ್ನು ಇಳಿದುಕೊಳ್ಳಲು ಕೊಟ್ಟಿದ್ದರು. ಭಾರತೀಯ ಸಂವಿಧಾನ, ದೇಶದ ಆಡಳಿತ, ಪ್ರತಿ ಸೇವೆಯ ವಿಷಯದಲ್ಲಿ ಅನುಸರಿಸಬೇಕಾದ ಮೂಲ ನಿಯಮಗಳ ಕುರಿತು ಅಲ್ಲಿ ಎಲ್ಲರಿಗೂ ತರಬೇತಿ ನೀಡಲಾಯಿತು.

ಆದಾಯ ತೆರಿಗೆ ಇಲಾಖೆಯಿಂದ ಗೋಪಾಲಕೃಷ್ಣ ಎಂಬುವರು ನಮ್ಮ ಜೊತೆ ತರಬೇತಿಗೆ ಬಂದವರಲ್ಲಿ ಮುಖ್ಯರಾದವರು. ಅವರು ಇತ್ತೀಚೆಗೆ ಮುಖ್ಯ ಆಯುಕ್ತರಾಗಿ ನಿವೃತ್ತರಾದರು. ರಾಜಸ್ತಾನಿ ಕೇಡರ್‌ನ ಐಎಎಸ್ ಅಧಿಕಾರಿ ವಿಕ್ರಂ ಮೆಹತಾ ಕೂಡ ನಮ್ಮ ಬ್ಯಾಚ್‌ನವರೇ. ಅವರ ತಂದೆ ಜಗತ್ ಮೆಹತಾ ಹಿಂದೆ ವಿದೇಶಾಂಗ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದರು. ಆಗ ಸಿಕ್ಕಿಂ ರಾಜ್ಯದ ರಾಜರ ಕೆಲವು ಸಂಬಂಧಿಕರಿಗೆ ನೇರವಾಗಿ ಐಎಎಸ್‌ಗೆ ನೇಮಕಾತಿ ನೀಡಿದ್ದರು. ಅವರೆಲ್ಲಾ ವಯಸ್ಸಿನಲ್ಲಿ ಹಿರಿಯರಾದರೂ ನಮ್ಮ ಜೊತೆ ತರಬೇತಿಗೆಂದು ಬಂದಿದ್ದರು. ನಾವೆಲ್ಲರೂ ಒಳ್ಳೆಯ ಸ್ನೇಹಿತರಾಗಿ ಅಲ್ಲಿ ಅಭ್ಯಾಸ ಮಾಡಿದೆವು.

ಆಗಷ್ಟೇ ತುರ್ತುಪರಿಸ್ಥಿತಿ ಮುಗಿದಿತ್ತು. ದೇವರಾಜ ಅರಸು ನೇತೃತ್ವದ ಕರ್ನಾಟಕ ಸರ್ಕಾರ ಇಪ್ಪತ್ತು ಅಂಶಗಳ ಆಡಳಿತ ಕಾರ್ಯಕ್ರಮಗಳನ್ನು, ಭೂಸುಧಾರಣೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದರಿಂದ ಇಡೀ ದೇಶದಲ್ಲಿ ನಮ್ಮ ರಾಜ್ಯದ ಕೀರ್ತಿ ಹಬ್ಬಿತ್ತು. ಹಾಗಾಗಿ ಕರ್ನಾಟಕದವರು ಎಂದರೆ ಎಲ್ಲರಿಗೂ ಗೌರವ. ಎರಡು ವರ್ಷ ನಾನು ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ಮಾಡಿದ್ದರಿಂದ ಕರ್ನಾಟಕದ ಆಡಳಿತದ ಕುರಿತು ಮಾತನಾಡುವ ಅವಕಾಶ ಸಿಕ್ಕಾಗ, ಸಮರ್ಥವಾಗಿ ಋಣ ಪರಿಹಾರ ಕಾಯ್ದೆ, ಭೂಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದ ಪ್ರಕ್ರಿಯೆಯನ್ನು ವಿವರವಾಗಿ ಹೇಳುತ್ತಿದ್ದೆ.

ಬಡತನ ನಿರ್ಮೂಲನೆಗೆ ಅನುಸರಿಸುತ್ತಿರುವ ಮಾರ್ಗಗಳೇನು ಎಂಬುದೂ ಗೊತ್ತಿತ್ತು. ಉಪನ್ಯಾಸಕರು ಆಗಾಗ ನನಗೆ ಮಾತನಾಡುವ ಅವಕಾಶ ಕೊಡುತ್ತಿದ್ದರು. ಅಲ್ಲಿ ತರಬೇತಿಗೆ ಬಂದಿದ್ದ ಉಳಿದ ಭಾಗಗಳ ಅಭ್ಯರ್ಥಿಗಳು ನನ್ನ ಮಾತು ಕೇಳಿದ ಮೇಲೆ ನಮ್ಮ ರಾಜ್ಯದ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು ಎನ್ನುತ್ತಿದ್ದರು.

ಚಾರಣ ಕೂಡ ತರಬೇತಿಯ ಭಾಗವಾಗಿತ್ತು. ನಾನು ಬದರಿನಾಥ, ಕೇದಾರನಾಥ, ವ್ಯಾಲಿ ಆಫ್ ಫ್ಲವರ್ಸ್‌ ಪ್ರದೇಶಗಳನ್ನು ಚಾರಣಕ್ಕೆ ಆಯ್ದುಕೊಂಡೆ. 1978ರಲ್ಲಿ ಆ ಪ್ರದೇಶಗಳನ್ನು ಕ್ರಮಿಸುವ ಅವಕಾಶ ನನ್ನದಾಯಿತು. ಯಾವ ರಾಜ್ಯಕ್ಕೆ ನಮ್ಮನ್ನು ಕೆಲಸಕ್ಕೆ ನಿಯೋಜಿಸಬಹುದು ಎಂದು ಆ ಕಾಲಘಟ್ಟದಲ್ಲಿ ಗೊತ್ತಿರಲಿಲ್ಲ. ಒಡಿಶಾ ಕೇಡರಿನ ನಿರ್ದೇಶಕ ಜುನೇಜಾ ಎಂಬ ಒಳ್ಳೆಯ ಅಧಿಕಾರಿ ನಮಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಿದರು.

ಜವಾಹರಲಾಲ್ ವಿಶ್ವವಿದ್ಯಾಲಯದಿಂದ ಬಂದ ಅಭ್ಯರ್ಥಿಗಳು ಆಗ ಹೆಚ್ಚಾಗಿದ್ದರು. ಅವರೆಲ್ಲಾ ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದವರು. ಉತ್ತರ ಪ್ರದೇಶ ಕೇಡರ್‌ನ ಎನ್.ಸಿ. ಸಕ್ಸೇನಾ ಎಂಬುವರು ಅಲಿಗಡದಲ್ಲಿ ಜಿಲ್ಲಾಧಿಕಾರಿಯಾಗಿ ಉತ್ತಮ ಕೆಲಸಗಳನ್ನು ಮಾಡಿದ್ದರು. ಅವರು ನಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿದರು. ದೇಶದ ಧಾರ್ಮಿಕ ಪರಂಪರೆ, ಸಾಮಾಜಿಕ ಪರಂಪರೆಗಳ ಮೇಲೆ ಬೆಳಕು ಚೆಲ್ಲಿದರಷ್ಟೇ ಅಲ್ಲದೆ ಕೋಮು ಸೌಹಾರ್ದ ಕಾಪಾಡಿಕೊಂಡು ಹೋಗುವುದು ಹೇಗೆಂಬ ಸೂಕ್ಷ್ಮಗಳನ್ನೂ ತಿಳಿಸಿಕೊಟ್ಟರು.

ನಾಲ್ಕು ತಿಂಗಳು ಮಸ್ಸೂರಿಯಲ್ಲಿ ತರಬೇತಿ ಮುಗಿಸಿದ ಮೇಲೆ ನಾಗ್ಪುರಕ್ಕೆ ಹೋದೆವು. ಅಲ್ಲಿ ಫೈರ್‌ಫೋರ್ಸ್ ಹೋಂಗಾರ್ಡ್ ಕಾಲೇಜುಗಳಿವೆ. ಅಗ್ನಿಶಾಮಕ ಪಡೆ ಹೇಗೆ ಕೆಲಸ ಮಾಡುತ್ತದೆ, ಅಲ್ಲಿ ಇರುವ ಅತ್ಯಾಧುನಿಕ ಉಪಕರಣಗಳು ಯಾವುವು ಮೊದಲಾದ ಸಂಗತಿಗಳ ಮೇಲೆ ಬೆಳಕು ಚೆಲ್ಲುವ 15 ದಿನಗಳ ತರಬೇತಿಯನ್ನು ನಮಗೆ ಕೊಟ್ಟರು. ಅದಾದ ಮೇಲೆ ನಾವು ಹೈದರಾಬಾದ್‌ಗೆ ಹೋಗಿ ಸರ್ದಾರ್ ವಲ್ಲಭಭಾಯಿ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಮೂಲ ಪೊಲೀಸ್ ತರಬೇತಿ ಪಡೆದೆವು.

ಬಿಹಾರದ ಆರ್.ಡಿ. ಸಿಂಗ್ ಎಂಬುವರು ಅಲ್ಲಿ ನಿರ್ದೇಶಕರಾಗಿದ್ದರು. ನಮಗೆಲ್ಲಾ ಅಲ್ಲಿ ಪೊಲೀಸರಿಗೆ ಮಾಡುವಂಥ ಹೇರ್‌ಕಟ್ ಮಾಡಿಸಲಾಯಿತು. ವ್ಯಾಯಾಮ, ಕಸರತ್ತು, ಪಿಸ್ತೂಲ್, ರಿವಾಲ್ವರ್, ಬಂದೂಕು, ರೈಫಲ್, ಎಲ್‌ಎನ್‌ಜಿ ಎಲ್ಲವುಗಳ ಬಳಕೆ ಹೇಗೆ ಎಂದು ಮೊದಲು ಅರಿತಿದ್ದೇ ಅಲ್ಲಿ. ಯೋಗ ಕೂಡ ತರಬೇತಿಯ ಭಾಗವಾಗಿತ್ತು. ಶಸ್ತ್ರಾಸ್ತ್ರವಿಲ್ಲದೆ ಕಾರ್ಯಾಚರಣೆ ನಡೆಸುವುದು ಹೇಗೆ ಎಂಬುದನ್ನು ಕಲಿಸಿದರು.

ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ, ಭಾರತೀಯ ದಂಡ ಸಂಹಿತೆ, ಭಾರತದ ಸಾಕ್ಷ್ಯದ ಕಾಯ್ದೆ, ತನಿಖೆ ಮಾಡುವ ವಿಧಾನ... ಎಲ್ಲ ಕಲಿಕೆಯೂ ಆಸಕ್ತಿಕರವಾಗಿತ್ತು. ಮೋಟಾರ್ ಡ್ರೈವಿಂಗ್ ಕೂಡ ಕಲಿತೆವು. ಕುದುರೆ ಸವಾರಿಯನ್ನು ಮೊದಲೇ ನಾನು ಕಲಿತಿದ್ದರಿಂದ ಅಲ್ಲಿ ಅಷ್ಟೇನೂ ಕಷ್ಟವಾಗಲಿಲ್ಲ.

ಒಂದು ವರ್ಷ ಕಷ್ಟಪಟ್ಟು ಕಲಿತು, ನಾವು ತರಬೇತಿ ಮುಗಿಸಿದೆವು. ವೈ.ಬಿ. ಚೌಹಾಣ್ ಆಗ ಉಪ ಪ್ರಧಾನಿಯಾಗಿದ್ದರು. ನಮ್ಮ ನಿರ್ಗಮನ ಪಥಸಂಚಲನಕ್ಕೆ ಅವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರಿಗೆ ಎಸ್ಕಾರ್ಟ್ ಆಫೀಸರ್ ಆಗಿ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು.

ಕರ್ನಾಟಕಕ್ಕೆ ಬಂದು ನಾನು ರಿಪೋರ್ಟ್ ಮಾಡಿಕೊಂಡೆ. ಅದುವರೆಗೆ ಹಿಂದಿಯಲ್ಲಿ ಕಮಾಂಡ್ ಕೊಡುವ ಡ್ರಿಲ್‌ಗಳನ್ನು ನಾವು ಮಾಡಿದ್ದೆವು. ಇಲ್ಲಿ ಸ್ಥಳೀಯವಾಗಿ ಇಂಗ್ಲಿಷ್ ಕಮಾಂಡ್‌ಗಳನ್ನು ಆಧರಿಸಿದ ಡ್ರಿಲ್ ಇರುತ್ತದೆ. ಅದನ್ನು ಕಲಿಯಲೆಂದೇ ನಮಗೆ ಮೈಸೂರಿನ ಪೊಲೀಸ್ ಟ್ರೈನಿಂಗ್ ಕಾಲೇಜಿಗೆ ಕಳುಹಿಸಿದರು. ಅಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ, ಕರ್ನಾಟಕ ಅಬಕಾರಿ ಕಾಯ್ದೆ, ಕರ್ನಾಟಕ ಪೊಲೀಸ್ ನಿಯಮಾವಳಿ ಮೊದಲಾದ ಸಂಗತಿಗಳನ್ನು ನಮಗೆ ಹೇಳಿಕೊಟ್ಟರು.

ನಾವು ತರಬೇತಿ ಪಡೆದ ಹೊತ್ತಿನಲ್ಲಿ ಧರ್ಮವೀರ ಆಯೋಗದ ವರದಿ ಅನುಷ್ಠಾನಕ್ಕೆ ಬರಬಹುದು ಎಂದು ಎಲ್ಲರೂ ಆಸೆಗಣ್ಣಿನಿಂದ ಇದ್ದರು. ಪೊಲೀಸ್ ಇಲಾಖೆಯ ಸುಧಾರಣೆಗೆ ಅನೇಕ ಮಹತ್ವದ ಶಿಫಾರಸುಗಳನ್ನು ಆಯೋಗದ ವರದಿ ಒಳಗೊಂಡಿತ್ತು. ದುರ್ದೈವದ ಸಂಗತಿ ಎಂದರೆ, ಇಂದಿಗೂ ಆಯೋಗದ ಶಿಫಾರಸುಗಳು ಜಾರಿಗೆ ಬಂದಿಲ್ಲ.

ಮೈಸೂರಿನ ಪೊಲೀಸ್ ಟ್ರೈನಿಂಗ್ ಕಾಲೇಜಿನಲ್ಲಿ ತರಬೇತಿ ಮುಗಿದ ಮೇಲೆ ಜಿಲ್ಲಾಮಟ್ಟದಲ್ಲೂ ನಾವು ಕಲಿಯುವುದು ಬಾಕಿ ಇತ್ತು. ಆ ಕಲಿಕೆಗೆಂದು ನನ್ನನ್ನು ಮೈಸೂರು ಜಿಲ್ಲೆಗೇ ನಿಯೋಜಿಸಿದರು. ಎಸ್.ಎನ್.ಎಸ್. ಮೂರ್ತಿ ಆಗ ಡಿಐಜಿ ಆಗಿದ್ದರು. ರೇವಣಸಿದ್ಧಯ್ಯ ಎಸ್‌ಪಿ ಆಗಿ ಕೆಲಸ ಮಾಡುತ್ತಿದ್ದರು. ಚಾಮರಾಜನಗರ ಉಪ ವಿಭಾಗಕ್ಕೆ ಕೆಲಸ ಮಾಡಲು ನನ್ನನ್ನು ಕಳುಹಿಸಿಕೊಟ್ಟರು.

ಕಾನ್‌ಸ್ಟೆಬಲ್, ಹೆಡ್‌ಕಾನ್‌ಸ್ಟೆಬಲ್, ಸಬ್ ಇನ್ಸ್‌ಪೆಕ್ಟರ್, ಡಿಎಸ್‌ಪಿ ಹೀಗೆ ಎಲ್ಲಾ ಹುದ್ದೆಗಳಲ್ಲೂ ಸ್ವಲ್ಪ ಸ್ವಲ್ಪ ದಿನ ಕೆಲಸ ಮಾಡಿ ಪಳಗಬೇಕಿತ್ತು. ಹತ್ತು ತಿಂಗಳು ಚಾಮರಾಜನಗರ ಅರಣ್ಯ ಅಂಚಿನ ಪ್ರದೇಶದಲ್ಲಿ ನಾನು ಕೆಲಸ ಮಾಡಿದೆ. ಚಾಟಿಪುರ, ಮಸಣಪುರ ಮೊದಲಾದ ಕಡೆಗಳಲ್ಲಿ ಆಗ ತೇಗ, ಬೀಟೆ, ಶ್ರೀಗಂಧದ ಕಳ್ಳಸಾಗಣೆ ವ್ಯವಸ್ಥಿತವಾಗಿ ನಡೆಯುತ್ತಿತ್ತು. ನಾನು ರೇಡ್ ಮಾಡಿ ಲಾರಿಗಳಲ್ಲಿದ್ದ ಲೋಡುಗಟ್ಟಲೆ ಅಕ್ರಮ ಮರಗಳನ್ನು ವಶಪಡಿಸಿಕೊಂಡೆ.

ಅಷ್ಟೇ ಅಲ್ಲದೆ ಗಾಂಜಾ ಸಾಗಣೆ, ಜೂಜು ನಡೆಸುತ್ತಿದ್ದವರ ಮೇಲೂ ಕೇಸುಗಳನ್ನು ಹಾಕಿದೆ. ವಿಶ್ವೇಶ್ವರಯ್ಯ ಎಂಬ ಇನ್ಸ್‌ಪೆಕ್ಟರ್ ಅಲ್ಲಿ ತನಿಖಾ ಕಾರ್ಯದಲ್ಲಿ ತುಂಬಾ ನಿಪುಣರಾಗಿದ್ದರು. ಅವರಿಂದಲೇ ನಾನು ಕಳ್ಳತನ, ಕೊಲೆ ಪ್ರಕರಣಗಳ ಸೂಕ್ಷ್ಮ ತನಿಖೆ, ಸಾಕ್ಷಿಗಳನ್ನು ಸಂಗ್ರಹಿಸುವ ಕ್ರಮವನ್ನು ಚೆನ್ನಾಗಿ ಕಲಿತೆ. ಆಗ ಪ್ರೊಬೆಷನರಿ ಅವಧಿಯಲ್ಲಿ ನಾನು ದಾಖಲಿಸಿದ ಹಲವಾರು ಕೇಸ್‌ಗಳು ಇನ್ನೂ ತೀರ್ಮಾನವಾಗಿಲ್ಲ. ಡಿಜಿಪಿ ಆದಮೇಲೆಯೂ ಹೋಗಿ ಕೆಲವು ಪ್ರಕರಣಗಳಿಗೆ ಸಾಕ್ಷ್ಯ ಹೇಳಿ ಬಂದಿದ್ದೇನೆ. ಪ್ರಕರಣ ವಿಲೇವಾರಿ ನಮ್ಮಲ್ಲಿ ಇಷ್ಟು ವಿಳಂಬವಾಗಿ ಆಗುತ್ತಿರುವುದು ದುರ್ದೈವ.

ಚಾಮರಾಜನಗರದಲ್ಲಿ ಹತ್ತು ತಿಂಗಳು ಕೆಲಸ ಮಾಡಿದ ನಂತರ ಬೆಂಗಳೂರಿನಲ್ಲಿ ಸಿಐಡಿ, ಹೋಂಗಾರ್ಡ್ ವಿವಿಧೆಡೆ ಒಂದು ತಿಂಗಳು ಹೆಚ್ಚಿನ ತರಬೇತಿ ಪಡೆದುಕೊಂಡದ್ದೂ ಆಯಿತು. ನನಗೆ ಮದುವೆ ಆಗಿತ್ತಾದರೂ ತರಬೇತಿ ಅವಧಿಯಲ್ಲಿ ಎದುರಾದ ಎಲ್ಲಾ ಕಷ್ಟಗಳನ್ನು ಸಂತೋಷವಾಗಿ ಎದುರಿಸಿದೆ. ಕೊನೆಗೆ ಬೆಳಗಾವಿಗೆ ಎಎಸ್‌ಪಿ ಆಗಿ ನನ್ನನ್ನು ನಿಯೋಜಿಸಿದರು.

ಮುಂದಿನ ವಾರ: ಬೆಳಗಾವಿಯಲ್ಲಿ ಎಎಸ್‌ಪಿ ಆಗಿ ಕಂಡದ್ದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT