ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯ ತುಡಿತ

Last Updated 2 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕಳೆದ ವಾರ ನನ್ನ ಸ್ನೇಹಿತ ಅನೂಪ ದೇಶಪಾಂಡೆ ಅವರು ನನ್ನನ್ನು ಧಾರ­ವಾಡದ ವನಿತಾ ಸೇವಾ ಸಮಾಜಕ್ಕೆ ಕರೆದುಕೊಂಡು ಹೋದರು. ಈ ಸಂಸ್ಥೆ­ಗೊಂದು ಸುಂದರ ಇತಿಹಾಸವಿದೆ.  1928 ರಲ್ಲಿ ಭಾಗೀರಥಿಬಾಯಿ ಪುರಾಣಿಕ  ಹಾಗೂ ಅವರ ಜೊತೆಗಿದ್ದ ಮಹಿಳೆಯರ ಸಾಹಸಗಾಥೆಯ ಫಲ ಈ ಸಂಸ್ಥೆ. ಭಾಗೀರಥಿಬಾಯಿ ಮದುವೆ­ಯಾದದ್ದು ತನ್ನ ಎಂಟನೇ ವರ್ಷದಲ್ಲಿ ಹಾಗೂ ವಿಧವೆಯಾದದ್ದು ಹನ್ನೆರಡನೆ ವಯಸ್ಸಿಗೆ. ಮದುವೆ ಎಂದರೆ ಏನೆಂದು ತಿಳಿ­ಯುವ ಮೊದಲೇ ಮದುವೆಯೂ ಆಗಿಹೋಗಿ ವಿಧವೆಯ ಪಟ್ಟ ಬಂದಿತ್ತು.

ತನ್ನಂತಹ ಅನೇಕ ಮಹಿಳೆಯರ ಸಂಕಷ್ಟ ನೋಡಿ ತಾನೂ ಅಳುತ್ತ ಕೂಡ್ರುವ ಸ್ವಭಾವದವರಲ್ಲ ಅವರು. ನಾಲ್ಕೈದು ಸಮಾನಮನಸ್ಕರವನ್ನು ಸೇರಿಸಿಕೊಂಡು ಮಹಿಳೆಯರ ಸಹಾಯಕ್ಕೆಂದೇ ವನಿತಾ ಸೇವಾ ಸಮಾಜವನ್ನು ಪ್ರಾರಂಭಿಸಿದರು. ಅಲ್ಲಿ ಅನೇಕ ಅನಾಥ ಮಹಿಳೆಯರಿಗೆ ಆಶ್ರಮಧಾಮ ಕಟ್ಟಿದರು. ಸಹಾಯ ಮಾಡುವುದೆಂದರೆ ಅವರನ್ನು ಕೂಡ್ರಿಸಿ ರಕ್ಷಿಸುವುದು ಮಾತ್ರವಲ್ಲ, ಅವರಿಗೆ ಆತ್ಮಗೌರವದಿಂದ ಸ್ವಾವಲಂಬಿ­ಯಾಗು­ವಂತೆ ಮಾಡುವುದು ಎಂಬುದನ್ನು ನಂಬಿದ ಭಾಗೀರಥಿಬಾಯಿ ಅವರಿಗೆ ಸುಮಾರು ಇಪ್ಪತ್ತೆರಡು ತರಹದ ವೃತ್ತಿಗಳ ಬಗ್ಗೆ ತರಬೇತಿ ನೀಡಿದರಂತೆ. ಹೊಲಿಗೆ, ಅಡುಗೆ, ಕಸೂತಿ, ಕಲೆ ಹೀಗೆ ಬದುಕನ್ನು ಕಟ್ಟಿಕೊಡುವ ಅನೇಕ ವೃತ್ತಿಗಳು ಅಲ್ಲಿದ್ದ ಮಹಿಳೆಯರ ಕೈ ಹಿಡಿದವು.

ನಂತರ ಅವರು ಮಕ್ಕಳ ಶಾಲೆಯನ್ನು ಸ್ಥಾಪಿಸಿದರು.  ಭಾಗೀರಥಿ­ಬಾಯಿ ಅಕ್ಷರಶಃ ತಮ್ಮ ಕೊನೆಯುಸಿರು ಇರುವವರೆಗೆ ಸಂಸ್ಥೆಗಾಗಿ ದುಡಿದರು. ತಮ್ಮ ಕಚೇರಿ­ಯಲ್ಲೇ ತಮ್ಮ ಪ್ರಾಣವನ್ನು ತೊರೆದವರು ಅವರು. ಇಂದಿಗೂ ಆ ಶಾಲೆ ನಡೆ­ಯುತ್ತಿದೆ.  ನಿರ್ಮಲಾತಾಯಿ ಗೋಖಲೆ ಹಾಗೂ ಅವರ ಮಗ ರಾಜೇಂದ್ರ ಗೋಖಲೆ  ಅದರ ಸೂತ್ರ ಹಿಡಿದಿದ್ದಾರೆ. ಈ ಶಾಲೆಯ ಬಹುತೇಕ ಮಕ್ಕಳು ಸಮಾಜದ ತೀರ ಹಿಂದುಳಿದ ವರ್ಗಕ್ಕೆ ಸೇರಿದವರು. ಆಶ್ಚರ್ಯವೆಂದರೆ ಈ ಶಾಲೆಯಲ್ಲಿ ಮಕ್ಕಳಿಗೆ ಯಾವ ಫೀಸೂ ಇಲ್ಲ. ಬದಲಾಗಿ ಯಾರು ಯಾರೋ ದಾನಿಗಳು ಮುಂದೆ ಬಂದು ಮಕ್ಕಳ ಸಮವಸ್ತ್ರಕ್ಕೆ, ಪುಸ್ತಕ ಚೀಲಕ್ಕೆ, ಪುಸ್ತಕಗಳಿಗೆ, ಹಣ ನೀಡಿ ಹೋಗುತ್ತಾ­ರಂತೆ.

ಆದರೆ ಶಾಲೆಯ ಕಟ್ಟಡಕ್ಕೆ, ಆವರಣದ ವ್ಯವಸ್ಥೆಗೆ, ಮಕ್ಕಳಿಗೆ ಇನ್ನೂ ಹೆಚ್ಚು ಅನುಕೂಲ ಮಾಡಲು ತುಂಬಾ ಜನರ ಕೈ, ಮನಸ್ಸುಗಳು ಸೇರಬೇಕು. ಹಾಗೆ ಸಹಾಯ ಹಸ್ತ ಬಂದರೆ ಆದರ್ಶವನ್ನೇ ಉಸಿರಾಗಿಟ್ಟು ಆ ತಾಯಿ ಕಟ್ಟಿದ ಈ ಸಂಸ್ಥೆ ಮತ್ತಷ್ಟು ಊರ್ಜಿತ­ವಾದೀತು. ರಾಜೇಂದ್ರ ಗೋಖಲೆ ಅವರು ಹೇಳಿದ ಒಂದು ಘಟನೆ ನನ್ನ ಮನ ಕಲಕಿತು.  ಇಲ್ಲಿ ಬರುವ ಮಕ್ಕಳೆಲ್ಲ ತುಂಬ ಬಡತನದಿಂದ ಬಂದವರು. ಅವರಿಗೆ ಮಧ್ಯಾಹ್ನದ ಬಿಸಿಯೂಟ ಇಸ್ಕಾನ್‌ನಿಂದ ಬರುತ್ತದೆ. ಮೊದ­ಮೊದಲು ಗೋಖಲೆಯವರಿಗೆ ಈ ಬಿಸಿ­ಯೂಟದ ಮಹತ್ವ ತಿಳಿದಿರ­ಲಿಲ್ಲವಂತೆ. ಅದು ತರುವ ಸಂತಸದ ಆಳ ಹೊಳೆದಿ­ರಲಿಲ್ಲ. ಒಂದು ದಿನ ಹೀಗೆ ಬಿಸಿಯೂಟ ಬಡಿಸಿದ ಮೇಲೆ ಒಬ್ಬ ಬಾಲಕ ತಾನು ಹಾಕಿಸಿಕೊಂಡದ್ದರಲ್ಲಿ ಒಂದರ್ಧ ತೆಗೆದು ಮತ್ತೊಂದು ಡಬ್ಬಿ­ಯಲ್ಲಿ ಹಾಕಿಕೊಂಡ­ದ್ದನ್ನು ಇವರು ಕಂಡರು.

ನಂತರ ಆ ಬಾಲಕ ಡಬ್ಬಿ­ಯನ್ನು ಹಿಡಿದುಕೊಂಡು ತನ್ನ ಮನೆ­ಯತ್ತ ಹೋಗಲು ನಡೆದ. ತಕ್ಷಣ ಅವನನ್ನು ಗೋಖಲೆ ತಡೆದರು.  ಶಾಲೆಯಲ್ಲಿ ಕೊಡುವ ಊಟವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾ­ನಲ್ಲ ಎಂದು ಕೋಪ ಬಂದು ಅವನನ್ನು ಕೇಳಿದಾಗ ಆತ ಕಣ್ಣಂಚಿನಲ್ಲಿ ನೀರು ತಂದುಕೊಂಡು ಹೇಳಿದ, ‘ಸರ್, ನನ್ನ ಅಪ್ಪ, ಅಮ್ಮ ಇಬ್ಬರೂ ಕೆಲಸಕ್ಕೆ ಹೋಗು­ತ್ತಾರೆ. ಮನೆಯಲ್ಲಿ ನನ್ನ ಪುಟ್ಟ ತಮ್ಮ ಒಬ್ಬನೇ ಇರುತ್ತಾನೆ. ಅವನಿಗೆ ಊಟವಿಲ್ಲ. ಅದಕ್ಕೇ ನನ್ನದರಲ್ಲೇ ಸ್ವಲ್ಪ ತೆಗೆದುಕೊಂಡು ಅವನಿಗಾಗಿ ಕೊಡಲು ಹೋಗುತ್ತಿದ್ದೆ’. ಅವನ ಮನೆಯ ಕಷ್ಟ ಗೋಖಲೆಯವರ ಮನಸ್ಸಿಗೆ ರಾಚಿತು.  ‘ಅಯ್ಯೋ ಮಗು, ಇನ್ನಷ್ಟು ತುಂಬಿ­ಕೊಂಡು ಹೋಗು’ ಎಂದರು.

ಬಡವರ, ತೀರ ಬಡವರ ಮಕ್ಕಳಿಗೂ ಒಳ್ಳೆಯ ಶಿಕ್ಷಣ ದೊರಕಬೇಕು.  ಹಣ­ವಿಲ್ಲದ ಮಕ್ಕಳಿಗೆ ಆದರ್ಶದೊಂದಿಗೆ ಶಿಕ್ಷಣ ನೀಡಬೇಕೆನ್ನುವ ತುಡಿತದಿಂದ ಆ ತಾಯಿ ಭಾಗೀರಥಿಬಾಯಿ ಅವರು ಕಟ್ಟಿದ ವನಿತಾ ಸೇವಾ ಸಮಾಜದಂಥ ಅದೆಷ್ಟು ಸಂಸ್ಥೆಗಳು ನಮ್ಮ ದೇಶದಲ್ಲಿ­ವೆಯೋ? ಅವುಗಳಿಗೆಲ್ಲ ಸಹಾಯ ಮಾಡುವ ಮನಸ್ಸು ದುಡ್ಡಿರುವವರಿಗೆ ಬಂದರೆ ಅದೆಷ್ಟು ಮುಗ್ಧಮಕ್ಕಳ ಮುಖದ ಮೇಲೆ ನಗು ಮೂಡೀತೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT