ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯ ಮಾಡದ ಶಿಸ್ತು

Last Updated 12 ಜೂನ್ 2011, 19:30 IST
ಅಕ್ಷರ ಗಾತ್ರ

ಮೊನ್ನೆ, ಶ್ರೀ ನಾಥಾಜಿರಾವ್ ಹಲಗೇಕರ್ ಅವರ ಪುತ್ಥಳಿಯ ಅನಾವರಣವನ್ನು ಬೆಳಗಾವಿಯಲ್ಲಿ ತ್ರಿಪುರಾ ರಾಜ್ಯದ ರಾಜ್ಯಪಾಲರು ನೆರವೇರಿಸಿದರೆಂಬುದನ್ನು ಓದಿ ತುಂಬ ಸಂತೋಷವಾಯಿತು.

ನಾಥಾಜಿರಾವ್ ಹಲಗೇಕರರು ಬಹುದೊಡ್ಡ ಸಾಧನೆ ಮಾಡಿದ ವ್ಯಕ್ತಿ. ಬೆಳಗಾವಿಯಲ್ಲಿ ಮರಾಠಾಮಂಡಳ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು. ಇಪ್ಪತ್ತೆಂಟು ವರ್ಷಗಳಷ್ಟು ದೀರ್ಘಕಾಲ ಆ ಸಂಸ್ಥೆಯ ಅಧ್ಯಕ್ಷರಾಗಿ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ ನಡೆಸಿದರು. ಪ್ರಾಥಮಿಕ ಶಾಲೆಗಳು, ಮಾಧ್ಯಮಿಕ ಶಾಲೆಗಳು, ಪದವಿ ಕಾಲೇಜು, ಫಾರ್ಮಸಿ ಕಾಲೇಜು, ಡೆಂಟಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳು ಸಾಲುಸಾಲಾಗಿ ಬೆಳೆದು ನಿಂತವು.

ಈ ಇಪ್ಪತ್ತೆಂಟು ವರ್ಷಗಳ ಕಾಲ ಅವರು ಸಂಸ್ಥೆಯನ್ನು ಅತ್ಯಂತ ನಿಷ್ಠೆಯಿಂದ ಮತ್ತು ಅಷ್ಟೇ ಬಿಗಿಯಾದ ಶಿಸ್ತಿನಿಂದ ಮುನ್ನಡೆಸಿದರು. ಶಿಸ್ತನ್ನು ಎಲ್ಲರೂ ಪಾಲಿಸಲೇಬೇಕಿತ್ತು. ಅಲ್ಲಿ  ಯಾವ ದಾಕ್ಷಿಣ್ಯವೂ ನಡೆಯುವಂತಿರಲಿಲ್ಲ.

1997 ರಲ್ಲಿ ಒಂದು ಘಟನೆ ನಡೆಯಿತು. ನಾಥಾಜಿರಾವ್‌ರ ಕಿರಿಯ ಮಗಳು ರಾಜಶ್ರೀಯವರು ದಂತ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿಯಾಗಿದ್ದರು. ಆಕೆಗಿನ್ನೂ ಸಣ್ಣ ವಯಸ್ಸು. ಒಂದು ದಿನ ಕಾಲೇಜಿನಲ್ಲಿ ಯಾವುದೋ ದೊಡ್ಡ ಕಾರ್ಯಕ್ರಮವಿತ್ತು. ಅದಕ್ಕಾಗಿ ಎಲ್ಲರೂ ಶ್ರಮಪಟ್ಟಿದ್ದರು. ಮರುದಿನ ರಾಜಶ್ರೀಯವರು ಮತ್ತೆ ಅವರ ಕೆಲವು ಸ್ನೇಹಿತರು ಕಾಲೇಜಿಗೆ ಹದಿನೈದು ನಿಮಿಷ ತಡವಾಗಿ ಬಂದರು. ಹಿಂದಿನ ದಿನದ ಹಬ್ಬದ ವಾತಾವರಣ ಮುಂದುವರೆದಿರುತ್ತದೆ ಎಂಬ ನಂಬಿಕೆ ಅವರದು. ಈ ಪ್ರಸಂಗ ನಾಥಾಜಿರಾವ್‌ರ ಗಮನಕ್ಕೆ ಬರದೇ ಇರಲಿಲ್ಲ. ತಕ್ಷಣ ಯಾರು ಯಾರು ತಡವಾಗಿ ಬಂದವರು ಎಂಬ ಮಾಹಿತಿ ತೆಗೆದರು. ಅಂದೇ ಪ್ರತಿಯೊಬ್ಬರಿಗೂ ಒಂದು ಎಚ್ಚರಿಕೆಯ ಪತ್ರ ಸಿದ್ಧವಾಯಿತು. ಅವರೆಲ್ಲರನ್ನೂ ಕರೆಯಿಸಿ ಅದನ್ನು ಕೊಟ್ಟಿದ್ದೂ ಆಯಿತು. ಪಾಪ! ಅವರಿಗೆಲ್ಲ ಮುಖಭಂಗವಾದಂತಾಯಿತು. ಆದರೂ ಅವರಿಗೊಂದು ಸಮಾಧಾನ, ಆಸೆ. ನಾಥಾಜಿರಾವ್‌ರ ಮಗಳು ರಾಜಶ್ರೀ ಕೂಡ ತಡವಾಗಿ ಬಂದಿದ್ದರಲ್ಲವೇ? ಅಧ್ಯಕ್ಷರಾದ ನಾಥಾಜಿರಾವ್‌ರಿಗೆ ತಮ್ಮ ಮಗಳ ಮೇಲೆ ಇದ್ದ ಅಪಾರ ಪ್ರೀತಿಯ ಕಲ್ಪನೆ ಅವರಿಗಿತ್ತು. ಆದ್ದರಿಂದ ತಾವು ರಾಜಶ್ರೀ ಕಡೆಗೆ ಹೋಗಿ ಅವರನ್ನು ಕರೆದುಕೊಂಡು ಅಧ್ಯಕ್ಷರಿಗೆ ಒಂದು ಮಾತು ಹೇಳಿಸಿದರೆ ಈ ಎಚ್ಚರಿಕೆಯ ಪತ್ರದ ಅವಮಾನದಿಂದ ಪಾರಾಗಬಹುದು ಎಂದುಕೊಂಡು ಎಲ್ಲರೂ ಅವರ ಕಡೆಗೆ ಬಂದರು.

ತಮ್ಮ ಗೋಳನ್ನು ರಾಜಶ್ರೀ ಅವರಿಗೆ ಹೇಳಿ ಸಹಾಯ ಕೇಳಿದರು. ಆಗ ಆದದ್ದು ವಿಶೇಷ. ರಾಜಶ್ರೀ ನಿಧಾನವಾಗಿ ತಮ್ಮ ಕೈ ಚೀಲವನ್ನು ತೆಗೆದು ಅಲ್ಲಿದ್ದ  ಲಕೋಟೆಯಿಂದ ಕಾಗದವನ್ನು ಹೊರ ತೆಗೆದು ಸ್ನೇಹಿತರ ಕೈಗಿಟ್ಟರು. ಅದು ಅಧ್ಯಕ್ಷರು ತಮ್ಮ ಮಗಳಿಗೂ ನೀಡಿದ ಅದೇ ಎಚ್ಚರಿಕೆಯ ಪತ್ರ. ಸ್ನೇಹಿತರ ಮುಖ ಕಪ್ಪಿಟ್ಟಿತು. ತಮ್ಮ ಮುದ್ದಿನ ಮಗಳಿಗೂ, ಉಳಿದವರಿಗೆ ನೀಡಿದಂತೆ ಎಚ್ಚರಿಕೆಯ ಪತ್ರವನ್ನು ನೀಡಿರಬಹುದೆಂದು ಅವರಿಗೆ ಅನ್ನಿಸಿರಲಿಲ್ಲ!

ಶಿಸ್ತಿನ ನಡವಳಿಕೆಯಲ್ಲಿ ತನ್ನವರು, ಬೇರೆಯವರು ಎಂಬ ತಾರತಮ್ಯವಿಲ್ಲ ಎಂಬುದನ್ನು ಸಂಸ್ಥೆಯ ಎಲ್ಲರೂ ಅರಿತರು. ಮುಖ್ಯವಾಗಿ ರಾಜಶ್ರೀಯವರೂ ಅರಿತರು. ಅದನ್ನು ಮೈಗೂಡಿಸಿಕೊಂಡರು. ಈಗ ಅವರೇ ಸಂಸ್ಥೆಯ ಅಧ್ಯಕ್ಷೆಯಾಗಿದ್ದಾರೆ. ತಂದೆ ಹಾಕಿಕೊಟ್ಟ ಅಂದಿನ ಪಾಠವನ್ನು ಮರೆಯದೇ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ಮಕ್ಕಳನ್ನು ಮುಂದೆ ತರಬೇಕೆಂದು ಏನೆಲ್ಲ ಸರ್ಕಸ್ ಮಾಡುವ ತಂದೆತಾಯಂದಿರನ್ನು ಕಂಡಿದ್ದೇವೆ. ಅವರನ್ನು ಅವಶ್ಯಕ್ಕಿಂತ ಹೆಚ್ಚು ಮುದ್ದು ಮಾಡಿ ಹಾಳುಮಾಡಿದವರನ್ನು ನೋಡಿದ್ದೇವೆ, ಕಾಯಿದೆ ತಿರುಚಿ, ವ್ಯವಸ್ಥೆಯನ್ನು ಬದಲಿಸಿ ಹೇಗಾದರೂ ತಮ್ಮ ಮಕ್ಕಳು ಅಧಿಕಾರಕ್ಕೆ ಬರಲೆಂದು ಹಪಾಹಪಿ ಪಟ್ಟವರನ್ನು, ಇದರಿಂದಾಗಿ ಶಿಸ್ತಿನ ನೆಲೆಗಟ್ಟನ್ನು ಕಳೆದುಕೊಂಡ ಯುವಕರ ಚಿತ್ರಗಳು ನಮ್ಮ ಕಣ್ಣ ಮುಂದಿವೆ. ಇಂಥ ಸಂದರ್ಭದಲ್ಲಿ ನಾಥಾಜಿರಾವ್ ಹಲಗೇಕರರಂಥವರು ತುಂಬ ಆದರ್ಶವಾದಿಗಳಂತೆ ಕಾಣುತ್ತಾರೆ. ಹಾಗೆ ಕೆಲವರಾದರೂ ಮಾದರಿಗಳಾಗಿ ಇರುವುದು ಸಮಾಜಕ್ಕೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT