ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ತಾಳಿ ಭಾಗ್ಯ' ಎಂಬ ಶಾಟ್‌ಗನ್ ವೆಡ್ಡಿಂಗ್

Last Updated 16 ಜೂನ್ 2013, 19:59 IST
ಅಕ್ಷರ ಗಾತ್ರ

ತಾಳಿ ಭಾಗ್ಯ ಎಂದು ತಮಾಷೆಯಾಗಿ ಕರೆಯಿಸಿಕೊಳ್ಳುವ, ಲಂಚ ಕೊಡಲಾಗದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಮದುವೆ ಮಾಡಿಸಿ, ಹೆಣ್ಣು ಕೊಟ್ಟ ಮಾವನ ಕೈಯಲ್ಲಿ ಲಂಚ ಸಂದಾಯ ಮಾಡಿಸುವ ಪದ್ಧತಿಯ ಬಗ್ಗೆ ಕೇಳಿದ ಹಲವು ನಗರ ವಾಸಿಗಳು, ಆಧುನಿಕರು ದಿಗ್ಭ್ರಮೆಗೊಳ್ಳುತ್ತಾರೆ. ಹೀಗೂ ಉಂಟೆ ಎಂದು ಕೇಳುತ್ತಾರೆ.

ಟಿ.ವಿ. ವಾರ್ತೆ ನೋಡುವವರಿಗೆ, ಪತ್ರಿಕೆಗಳನ್ನು ಓದುವವರಿಗೆ ಗೊತ್ತಿರುವಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಎಸ್‌ಸಿ ನೇಮಕಗಳನ್ನು ತನಿಖೆ ಮಾಡಿಸುತ್ತಿದ್ದಾರೆ. ಇದು ಕಾನೂನಿನ ದೃಷ್ಟಿಯಿಂದ ಕುತೂಹಲಕಾರಿ ವಿಷಯ. ಆಯೋಗ ಒಂದು ಸ್ವಾಯತ್ತ ಸಂಸ್ಥೆ. ಸರ್ಕಾರ ಇಂಥ ಕ್ರಮ ಕೈಗೊಳ್ಳಬಹುದೆ ಎಂದು ಕೆಲವರು ಕೇಳುತ್ತಿದ್ದಾರೆ. ಈ ತನಿಖೆ ಮುಗಿದು, ವರದಿ ಬಂದು, ಯಾರು ಎಂಥ ಕ್ರಮ ಯಾರ ಮೇಲೆ ಜರುಗಿಸಿತ್ತಾರೋ ನೋಡೋಣ.

ತನಿಖೆ ಮಾಡುವವರು ದುಡ್ಡು ಕಾಸಿನ ಅವ್ಯವಹಾರ ಬಯಲು ಮಾಡಬಹುದು. ಸರಿಯಾದ ಕ್ರಮ ಪಾಲಿಸಿರದಿದ್ದರೆ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಮಾಡಬಹುದು. ಕಾಗದ ಪತ್ರ ತೆಗೆಸಿ ಯಾವುದು ಸರಿ ಯಾವುದು ತಪ್ಪು ಎಂದು ವರದಿ ಬರೆಯಬಹುದು. ಅಮಾನತು, ಜೈಲು ಆಗಬಹುದು.

ಆದರೆ `ತಾಳಿ ಭಾಗ್ಯ' ಪಡೆದುಕೊಂಡವರಿಗೆ ಏನು ಶಿಕ್ಷೆ ಕೊಡಲು ಸಾಧ್ಯ? ಪರ್ಸನಲ್ ಸ್ಪೇಸ್ ಎಂದು ಭಾವಿಸುವ ವೈವಾಹಿಕ ಸಂಬಂಧದ ವಿಷಯದಲ್ಲೇ ಲಂಚ ಬಂದು ಪ್ರತಿಷ್ಠಾಪನೆಯಾದಾಗ ಪರಿಣಾಮಗಳೇನಾಗಬಹುದು? ನೌಕರಿ, ಲಂಚ, ಜಂಬಕ್ಕಾಗಿಯೇ ಮೂಡಿಬಂದ ಸಂಬಂಧಗಳು ಹೇಗಿರುತ್ತವೆ?

ಖಾಸಗಿ ವಲಯ ಬೆಳೆದು ಎಲ್ಲ ಕ್ಷೇತ್ರಗಳನ್ನು ಆವರಿಸಿದರೂ ಸರ್ಕಾರಿ ನೌಕರಿಯ ಆಕರ್ಷಣೆ ಮಾಸಿ ಹೋಗಿಲ್ಲ. ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಇನ್ಫೋಸಿಸ್ ಸೇರುವುದು, ಅಮೆರಿಕಾಕ್ಕೆ ಹೋಗುವುದು ಹೇಗೆ ಕನಸೋ, ಹಾಗೆಯೇ ಹಳ್ಳಿ ಪಟ್ಟಣಗಳ ಎಷ್ಟೋ ಕುಟುಂಬಗಳಲ್ಲಿನ ಕನಸು ಐಎಎಸ್, ಕೆಎಎಸ್‌ನಲ್ಲಿ ಉನ್ನತ ಸರ್ಕಾರಿ ನೌಕರಿ ಪಡೆಯುವುದು. ಚುರುಕು ಹುಡುಗರಿಗೆ ಹಿರಿಯರು ಕೊಡುವ ಕಿವಿಮಾತು: ತಹಶೀಲ್ದಾರ್, ಜಿಲ್ಲಾಧಿಕಾರಿ ಆಗು.
 
ಇಂಗ್ಲಿಷ್ ಶಾಲೆಗಳಲ್ಲಿ ಓದು ಮುಗಿಸಿ, ಐಐಟಿಯಲ್ಲಿ ಎಂಜಿನಿಯರಿಂಗ್, ಐಐಎಂನಲ್ಲಿ ಮ್ಯೋನೇಜ್‌ಮೆಂಟ್ ಕಲಿಯಲು ಹಂಬಲಿಸುವವರಿಗೆ ಈ ಸರ್ಕಾರಿ ಕೆಲಸದ ಆಕರ್ಷಣೆ ವಿಚಿತ್ರವಾಗಿ ಕಾಣುತ್ತದೆ. ಗ್ಲೋಬಲೈಜ್ಡ್ ಯುವಕರಿಗೆ ಗೊತ್ತಿಲ್ಲದ ವಿಷಯ: ಒಂದು ಕಾಲದಲ್ಲಿ ಸರ್ಕಾರದ ಸಂಬಳ ಖಾಸಗಿಗಿಂತ ಹೆಚ್ಚಿರುತ್ತಿತ್ತು. ಅಲ್ಲಿ ಸಿಗುತ್ತಿದ್ದ ಗೌರವವೂ ಹೆಚ್ಚಿರುತ್ತಿತ್ತು.

ಶಿಕ್ಷಕರಿಗೆ, ಗುಮಾಸ್ತರಿಗೆ, ಲೆಕ್ಕಪತ್ರ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಸರ್ಕಾರ ಕೈತುಂಬ ಸಂಬಳ ಕೊಡುತ್ತಿತ್ತು. ಸರ್ಕಾರಿ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಖಾಸಗಿಯವರಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತಿದ್ದವು. ಆದರೆ ಇಂದು ಎಷ್ಟೋ  ಕ್ಷೇತ್ರಗಳಲ್ಲಿ ಖಾಸಗಿ ವಲಯ ಸರ್ಕಾರಕ್ಕಿಂತ ತುಂಬ ಮುಂದೆ ಹೋಗಿಬಿಟ್ಟಿದೆ. ಸಂಬಳ ಭತ್ಯೆ ಧಾರಾಳವಾಗಿ ಕೊಡುತ್ತದೆ.

ಖಾಸಗಿಯವರು ಸಾಫ್ಟ್‌ವೇರ್, ವೈದ್ಯಕೀಯ ಮತ್ತು ಹೊಸ ಉದ್ಯಮಗಳಲ್ಲಿ ನಿಗದಿ ಮಾಡುವ ಸಂಬಳ ಸರ್ಕಾರದಲ್ಲಿ ಸಿಗುವುದು ಅಸಂಭವನೀಯ. ಆದರೂ ಕೆಲ ಪ್ರತಿಭಾವಂತರು ಸರ್ಕಾರಿ ನೌಕರಿಯ ಪ್ರತಿಷ್ಠೆಯನ್ನು ಇಷ್ಟಪಡುತ್ತಾರೆ. ಸರ್ಕಾರಿ ಕೆಲಸದಲ್ಲಿ ಸಿಗುವ ಜನಸೇವಾ ಅವಕಾಶ ಬೇರೆಲ್ಲೂ ಸಿಗುವುದಿಲ್ಲ ಎಂದು ಆದರ್ಶವಾದಿಗಳು ಅತ್ತ ಹೋಗುತ್ತಾರೆ.  ನಾನು ಬಲ್ಲ ಒಬ್ಬ ಎಂಜಿನಿಯರ್ ದೊಡ್ಡ ಆಟೊಮೊಬೈಲ್ ಕಂಪನಿಯಲ್ಲಿ ಕೆಲಸದಲ್ಲಿದ್ದರೂ, ಬಿಡುವಿನ ಸಮಯದಲ್ಲಿ ಓದಿಕೊಂಡು ಸಿವಿಲ್ ಸರ್ವಿಸ್ ಪರೀಕ್ಷೆ ಪಾಸು ಮಾಡಿದ್ದಾರೆ.  

ತಾಳಿ ಭಾಗ್ಯದಂಥ ಒಂದು ಘಾತಕ ವ್ಯವಸ್ಥೆಯನ್ನು ಹುಟ್ಟುಹಾಕಿದ ರಾಜಕಾರಣಿಗಳು ತಲೆತಲೆಮಾರುಗಳವರೆಗೂ ಅದರ ಲಾಭ ಪಡೆಯುವ ಖುಷಿಯಲ್ಲಿರುತ್ತಾರೆ. ಇನ್ನೊಂದೆಡೆ ನೋಡಿ. ಇಂಥ ಹುನ್ನಾರಕ್ಕೆ ಒಪ್ಪಿದ ಹುಡುಗ ಹುಡುಗಿಯರ ಖಾಸಗಿ ಜೀವನ ಏನಾಗಬಹುದು? ಕ್ರಯ ಕೊಟ್ಟುಕೊಂಡ ಪತಿ ಎಂದು ಹುಡುಗಿ ಮೇಲುಗೈ ಪಡೆಯುತ್ತಾಳೆಯೇ? ಹುಡುಗ ತಿರುಗಿಬಿದ್ದರೆ ಏನಾಗಬಹುದು? ಬೀಗರ ನಡುವೆ ಘರ್ಷಣೆ ಯಾವ ರೀತಿಯಿರಬಹುದು?

ಮನೆಯೊಳಗಿನ ರಾಜಕೀಯ ಹೊರಗಿನ ರಾಜಕೀಯವನ್ನು ಬಿಂಬಿಸುತ್ತಿರುತ್ತದೆಯೇ? ಇದೆಲ್ಲ ವಿಷಮಯವಾಗಿ, ದಾರುಣವಾಗಿ ಕಾಣುತ್ತದೆ. ಒಳ್ಳೆಯ ಕಾದಂಬರಿಕಾರ ಯಾರಾದರೂ ಇದನ್ನೆಲ್ಲ ಗಮನಿಸಿದರೆ ಮಹಾನ್ ಕೃತಿ ಬರೆಯಬಹುದೇನೋ! `ಗಾಡ್ ಫಾದರ್' ಎಂಬ ಹಾಲಿವುಡ್ ಚಿತ್ರ ಇಂಥ ಸನ್ನಿವೇಶವನ್ನು ಸೆರೆ ಹಿಡಿದಿದೆ. ಚಿತ್ರದಲ್ಲಿನ ಮಾಫಿಯ ಕುಟುಂಬದವರಿಂದಲೇ ಕೂಡಿರುತ್ತದೆ. ಹೊರಗಿನವರ ಮೇಲೆ ಎಸಗುವ ಕ್ರೈಂ ಮನೆಯೊಳಗೂ ಒಮ್ಮಮ್ಮೆ ನುಸುಳುತ್ತದೆ.  
  
ಕೆಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಕೆಲಸಕ್ಕೆ ಕಾಯುತ್ತಿರುವ ಒಬ್ಬ ಅಭ್ಯರ್ಥಿಯನ್ನು ಪತ್ರಕರ್ತ ಬಸು ಮೇಗಳಕೇರಿ ಮಾತಾಡಿಸಿದಾಗ ಅವರ ಕಿವಿಗೆ ಬಿದ್ದ ಕಥೆ ಚಕ್ರವ್ಯೆಹದಲ್ಲಿ ಸಿಲುಕಿದವನೊಬ್ಬನ ಕಥೆಯಾಗಿತ್ತು. ಈಗ ಆತನಿಗೆ 29 ವರ್ಷ. ಈ ಮೊದಲು ಸ್ಪರ್ಧೆಯಲ್ಲಿ ಗೆದ್ದರೂ ಲಂಚ ಕೊಡಲು ಮನಸ್ಸಿಲ್ಲದೆ ನಿರುದ್ಯೋಗಿಯಾಗಿಯೇ ಉಳಿದು ಕೊಂಡಿದ್ದರು. ಸಮಯ ಮೀರಿಹೊಗುತ್ತಿದೆ.

ಈಗ `ತಾಳಿ ಭಾಗ್ಯ'ಕ್ಕೆ ಒಪ್ಪುವ ಮನೋಸ್ಥಿತಿಯಲ್ಲಿದ್ದಾರೆ. ತಮಗಿಂತ ಕಿರಿಯ ಹುಡುಗರ ಜತೆ ಮತ್ತೆ ಮತ್ತೆ ಪರೀಕ್ಷೆ ಬರೆಯುವ, ಪೈಪೋಟಿಗೆ ಇಳಿಯುವ ಚಿಂತೆಯಿಂದ ದಣಿದಿದ್ದಾರೆ. ಮೋಸದ ವ್ಯವಸ್ಥೆಯನ್ನು ಒಪ್ಪಿದ ತಮ್ಮ ಸ್ನೇಹಿತರ ಐಶ್ವರ್ಯವನ್ನು, ಕೌಟುಂಬಿಕ ಜೀವನದ ವೈಭವವನ್ನು ಕಂಡು ಪೆಚ್ಚಾಗಿದ್ದಾರೆ. ಕೆಟ್ಟ ವ್ಯವಸ್ಥೆಯಲ್ಲಿ ಕೆಟ್ಟ ಆಯ್ಕೆಗಳೇ ಒಳ್ಳೆಯ ಆಯ್ಕೆಗಳು ಎನ್ನುವ ತೀರ್ಮಾನಕ್ಕೆ ತಲುಪಿದ್ದಾರೆ.

ವೈಯಕ್ತಿಕ ಮಟ್ಟದಲ್ಲಿ ಹತಾಶೆ, ಜಿಗುಪ್ಸೆ ಸೃಷ್ಟಿ ಮಾಡಿರುವ ಈ `ತಾಳಿ ಭಾಗ್ಯ' ಎಂಬ ಭೀಕರ ವ್ಯವಸ್ಥೆಯನ್ನು ಹುಟ್ಟು ಹಾಕಿದವರಿಗೆ ಎಂದಾದರೂ ಶಿಕ್ಷೆ ಆಗುವ ಸಾಧ್ಯತೆ ಇದೆಯೇ? ಇದರಲ್ಲಿ ತೊಡಗಿರುವವರಿಗೆ ತಮ್ಮ ಆತ್ಮವಂಚನೆಯ ಅರಿವಾಗುವ ಸಾಧ್ಯತೆ ಇದೆಯೇ? `ಲಂಚ ಕೊಡು ಅಥವಾ ನಾವು ಹೇಳಿದ ಹುಡುಗಿಯನ್ನು ಲಗ್ನ ಮಾಡಿಕೊ' ಎಂಬುದಕ್ಕಿಂತ ದೊಡ್ಡ ತಮಾಷೆಯ, ದುರಂತದ ಬ್ಲಾಕ್‌ಮೇಲ್ ಇರಲು ಸಾಧ್ಯವೇ?

ಅಮೆರಿಕನ್ ಜನಪದದಲ್ಲಿ ಶಾಟ್‌ಗನ್ (ಅಂದರೆ ಕೋವಿ) ವೆಡ್ಡಿಂಗ್ ಎಂಬ ಐಡಿಯಾ ಇದೆ. ಹುಡುಗಿ ಬಸುರಾದಾಗ ಅವಳ ತಂದೆ ಕೋವಿ ಹಿಡಿದು ಹುಡುಗನನ್ನು ಬಲವಂತವಾಗಿ ಮದುವೆಗೆ ಒಪ್ಪಿಸುವ ಪದ್ಧತಿಯನ್ನು ಹೀಗೆ ವರ್ಣಿಸುತ್ತಾರೆ. ಅವರ ಶಾಟ್‌ಗನ್ ವೆಡ್ಡಿಂಗ್‌ಗೂ ನಮ್ಮ ತಾಳಿ ಭಾಗ್ಯದ ಲಗ್ನಕ್ಕೂ ಒಂದು ಸಣ್ಣ ವ್ಯತ್ಯಾಸವಿದೆ. ಅಲ್ಲಿ ಹುಡುಗನ ತಪ್ಪು ಬಸುರು ಮಾಡುವುದು. ಇಲ್ಲಿ ಹುಡುಗನ ತಪ್ಪು ಸರ್ಕಾರಿ ಕೆಲಸದ ಭೋಗ ಬಯಸುವುದು! 

ಮರಳಿದ ವಸಂತ್ ಮೊಕಾಶಿ
ಪ್ರಸಿದ್ಧ ಬರಹಗಾರ ಶಂಕರ್ ಮೊಕಾಶಿ ಪುಣೇಕರ್ ಅವರ ಕಾದಂಬರಿ ಆಧರಿಸಿ `ಗಂಗವ್ವ ಗಂಗಾಮಾಯಿ' ಎಂಬ ಚಿತ್ರ ಮಾಡಿ ಹೆಸರಾಗಿದ್ದ ವಸಂತ್ ಮೊಕಾಶಿ ಏನು ಮಾಡುತ್ತಿದ್ದಾರೆ?

ವರ್ಷಕ್ಕೊಮ್ಮೆ ಸಿನಿಮಾ ಸ್ಕ್ರಿಪ್ಟ್ ಬರೆಯುವ ಒಂದು ಕೋರ್ಸ್ ಕಲಿಸುತ್ತಿದ್ದ ಅವರು ಈಗ 15 ನಿಮಿಷದ ಕಿರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರನ ಬೆಳಕಲ್ಲೇ ಸಮುದ್ರದ ತಡಿಯ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಮೊನ್ನೆ ಸಿಕ್ಕಾಗ ಸ್ಕ್ರಿಪ್ಟ್ ರೈಟಿಂಗ್ ಬಗ್ಗೆ ಹೇಳುತ್ತಿದ್ದರು.

`ಕಮರ್ಷಿಯಲ್' ಸಿನಿಮಾ ಮಾಡಲು ಸಹಾಯವಾಗುವಂತೆ ಚಿತ್ರಕಥೆ ಬರೆಯುವುದನ್ನು ಕಲಿಸಿ ಕೊಡಿ ಎಂದು ಅವರ ಮೇಲೆ ಒತ್ತಾಯ ಇತ್ತಂತೆ. ಅದಕ್ಕೆ ಅವರ ಉತ್ತರ: ಸುಭಾಷ್ ಘಾಯ್ ಮತ್ತು ಗಿರೀಶ್ ಕಾಸರವಳ್ಳಿ ಇಬ್ಬರೂ ಕಲಿತದ್ದು ಪುಣೆಯ ರಾಷ್ಟ್ರೀಯ ಸಿನಿಮಾ ಮತ್ತು ಟೆಲಿವಿಷನ್ ಸಂಸ್ಥೆಯಲ್ಲಿ.

ಇಬ್ಬರಿಗೂ ಇದ್ದದ್ದು ಒಂದೇ ಪಠ್ಯ ಕ್ರಮ. ಆದರೆ ಅವರು ಆರಿಸಿಕೊಂಡ ಮಾರ್ಗ ಬೇರೆ ಬೇರೆ.' ಕೋರ್ಸ್ ನಡೆಸುವವರು ಅವರ ವಾದವನ್ನು ಒಪ್ಪಿಕೊಂಡಿದ್ದಾರಂತೆ.

ನಿತೀಶ್ ಕುಮಾರ್ ಆಯ್ಕೆ
ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಭಸ್ಮಾಸುರನಿಗೆ ಹೋಲಿಸಿದ್ದಾರೆ. ಮೋದಿ ಮೇಲುಗೈ ಆದ ಕಾರಣ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯ ಮೈತ್ರಿ ಕೂಟದಿಂದ ಹೊರಬಂದಿದ್ದಾರೆ. ಭಸ್ಮಾಸುರನನ್ನು ತಣ್ಣಗೆ ಮಾಡುವುದು ಮೋಹಿನಿ.

ಈಗ ನಿತೀಶ್ ಯಾವ ಮೋಹಿನಿಯನ್ನು ನೆಚ್ಚಿಕೊಳ್ಳುತ್ತಾರೆ? ಸೋನಿಯಾನೋ ಅಥವಾ ಮಮತಾ ಬ್ಯಾನೆರ್ಜೀನೋ? ಅವರಿಗೆ ಸಿಗಬಹುದಾದ ಎಚ್ಚರ: ಮಮತಾ ಒಲಿದು ಚೆನ್ನಾಗಿದ್ದರೆ ಮೋಹಿನಿಯಾಟ. ಮೂಡ್ ಕೆಟ್ಟರೆ ಮೋಹಿನಿಕಾಟ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT