ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾವೇ ಪ್ರಯೋಗಪಶುವಾದ ಮಹಾನ್ ವೈದ್ಯ ಬರ್ನ್‌ಸ್ಟೈನ್

Last Updated 30 ಜೂನ್ 2013, 19:59 IST
ಅಕ್ಷರ ಗಾತ್ರ

ಡಾ. ರಿಚರ್ಡ್ ಬರ್ನ್‌ಸ್ಟೈನ್ ಎಂಬ ವೈದ್ಯರ ಕಥೆ ಇದು. ಎಂಜಿನಿಯರ್ ಆಗಿದ್ದ ಇವರು ಹೇಗೆ ವೈದ್ಯರಾದರು ಎನ್ನುವುದೇ ಒಂದು ಕುತೂಹಲದ, ವಿಸ್ಮಯದ ಕಥೆ. ಎಂಬತ್ತು ವರ್ಷ ವಯಸ್ಸಿನ ಇವರು ಡಯಾಬಿಟಿಸ್ ಪೀಡಿತರ ಚಿಕಿತ್ಸೆಗೆ ಹೆಸರಾಗಿದ್ದಾರೆ. `ಅಮೆರಿಕನ್ ಡಯಾಬಿಟಿಕ್ ಅಸೋಸಿಯೇಷನ್'ನಂಥ ಸಂಸ್ಥೆಗಳ ಯಾವುದೇ ಶಿಫಾರಸನ್ನೂ ಇವರು ಪಾಲಿಸುವುದಿಲ್ಲ. ಹಾಗಾಗಿ ಬೇರೆ ವೈದ್ಯರಿಗೂ ಇವರಿಗೂ ಅಜಗಜಾಂತರ.

ತಮ್ಮ ಮೇಲೆ ತಾವೇ ಪ್ರಯೋಗ ಮಾಡಿಕೊಂಡು ಕಂಡುಕೊಂಡ ಸತ್ಯಗಳ ಆಧಾರದ ಮೇಲೆ ಅವರು ಚಿಕಿತ್ಸೆ ನೀಡುತ್ತಾರೆ. ವೈದ್ಯರ ಜ್ಞಾನ ಬಹುಪಾಲು ಪುಸ್ತಕದಿಂದ, ರೋಗಿಗಳನ್ನು ಉಪಚರಿಸುವ ಸಮಯದ ಗ್ರಹಿಕೆಯಿಂದ ಬರುತ್ತದೆ. ಆದರೆ ಬರ್ನ್ ಸ್ಟೈನ್ ಅವರ ಪ್ರಾಕ್ಟೀಸ್ ಸಂಪೂರ್ಣವಾಗಿ ಸ್ವಂತ ಅನುಭವದ ಫಲ. ಈ ಕಾರಣಕ್ಕೆ ಅವರು ಇತರ ವೈದ್ಯರಿಗಿಂತ ಭಿನ್ನವಾಗಿ ಕಾಣುತ್ತಾರೆ. 

ಅವರು ಬರೆದ ಪುಸ್ತಕ `ದಿ ಡಯಾಬಿಟಿಸ್ ಸಲ್ಯೂಶನ್' ಪ್ರಪಂಚದ ಎಲ್ಲೆಡೆ ಹೆಸರಾಗಿದೆ. ನಾನು ಅವರ ಬಗ್ಗೆ ಕೇಳಿದ ಮೇಲೆ ಅವರ ಪುಸ್ತಕವನ್ನು ಸ್ಟ್ರಾಂಡ್ ಪುಸ್ತಕದ ಅಂಗಡಿಯವರಿಗೆ ಹೇಳಿ ತರಿಸಿಕೊಂಡೆ. ಮತ್ತೆ ಮತ್ತೆ ಓದಿದೆ. ಹಾಗೆಯೇ ಅವರ ಬಗ್ಗೆ ಬಂದಿರುವ ವರದಿಗಳನ್ನೆಲ್ಲ ಓದಿದೆ.

ವಿಜ್ಞಾನಿಯೊಬ್ಬನ ತೀಕ್ಷ್ಣ ಕುತೂಹಲದ ಜೊತೆ ಹೊಸ ಜಗತ್ತನ್ನು ಕಾಣುವ ಸಾಹಸ ಪ್ರವೃತ್ತಿ ಅವರದ್ದು. ಹಾಗಾಗಿ ಅವರು ಅಸಾಧಾರಣ ಯಶಸ್ಸು ಕಂಡಿದ್ದಾರೆ. ತಮ್ಮ ಓರಗೆಯ ಮಧುಮೇಹಿಗಳೆಲ್ಲ ತೀರಿಕೊಂಡಿರುವಾಗ, ಇವರು ತಮ್ಮ ತೊಂದರೆಗಳನ್ನು ಗುಣಪಡಿಸಿಕೊಂಡು ಆರೋಗ್ಯವಾಗಿದ್ದಾರೆ.   

1946ರಲ್ಲಿ ಬರ್ನ್‌ಸ್ಟೈನ್ ಅವರಿಗೆ 12 ವರ್ಷ.  ಟೈಪ್-1 ಡಯಾಬಿಟಿಸ್- ಬಾಲ್ಯದಲ್ಲೇ ಬರುವ ಡಯಾಬಿಟಿಸ್ - ಅವರಿಗೆ ಇತ್ತು. ವೈದ್ಯರು ಹೇಳಿದ ಎಲ್ಲ ಮಾತನ್ನೂ ಕೇಳುತ್ತ, ಅವರು ಕೊಟ್ಟ ಔಷಧಿ ಪಥ್ಯವನ್ನೆಲ್ಲ ಪಾಲಿಸುತ್ತಿದ್ದರು. ಆದರೂ ಅವರ ಅರೋಗ್ಯ ಕೆಡುತ್ತಲೇ ಹೋಯಿತು. ಒಂದರ ಮೇಲೊಂದು ಉಪ ಕಾಯಿಲೆಗಳು ಆವರಿಸತೊಡಗಿದವು.

ಆ ಕಾಲದಲ್ಲಿ ಡಯಾಬಿಟಿಸ್ ಇರುವವರಿಗೆ ಉಪಚಾರ ಇಂದಿನಂತೆ ಇರಲಿಲ್ಲ. ಇನ್ಸುಲಿನ್ ತೆಗೆದುಕೊಳ್ಳಬೇಕಾದರೆ ದೊಡ್ಡ ಸೂಜಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಶುದ್ಧಗೊಳಿಸಬೇಕಿತ್ತು. ಮನೆಯಲ್ಲೇ `ಬ್ಲಡ್ ಶುಗರ್' ನೋಡಿಕೊಳ್ಳುವ ಪುಟ್ಟ ಮೀಟರ್ ಇರಲಿಲ್ಲ. ಮೂತ್ರದಲ್ಲಿ ಸಕ್ಕರೆ ಇದೆಯೇ ಎಂದು ಕಂಡುಕೊಳ್ಳಲು ಟೆಸ್ಟ್ ಟ್ಯೂಬ್ ಮತ್ತು ಸ್ಪಿರಿಟ್ ಲ್ಯಾಂಪ್ ಬೇಕಾಗಿತ್ತು.

ಮೊದಲೇ ಪುಟ್ಟದಾಗಿದ್ದ ರಿಚರ್ಡ್ ಅವರ ಬೆಳವಣಿಗೆ ಕುಂಠಿತವಾಗಿತ್ತು. ಪ್ರಾಯಕ್ಕೆ ಬರುವ ಹೊತ್ತಿಗೆ ಅರೋಗ್ಯ ಇನ್ನೂ ಹದಗೆಟ್ಟಿತು. ಕಿಡ್ನಿ ಕಲ್ಲುಗಳು, `ಪ್ರೋಜನ್ ಶೋಲ್ಡರ್',' ಪೆರಿಫರಲ್ ನ್ಯೂರೋಪಥಿ'ಯಂಥ ತೊಂದರೆಗಳು ತೀವ್ರವಾಗಿ ತೊಂದರೆ ಕೊಡಲು ಪ್ರಾರಂಭಿಸಿದವು. ಇವರು ಸಲಹೆ ಕೇಳುತ್ತಿದ್ದ ವೈದ್ಯರು ಇದೆಲ್ಲ ಸಾಮಾನ್ಯ ಎಂಬಂತೆ ತಳ್ಳಿಹಾಕುತ್ತಿದ್ದರು. ಡಯಾಬಿಟಿಸ್ ಬಂದವರ ಕಥೆಯೇ ಇಷ್ಟು ಎಂಬ ಧೋರಣೆ ವೈದ್ಯರದ್ದು. ಇತ್ತ ಬರ್ನ್‌ಸ್ಟೈನ್ ಅವರಿಗೆ ಇರುಳು ಕುರುಡು, ಕ್ಯಾಟರಾಕ್ಟ್‌ನಂಥ ಕಣ್ಣಿನ ಬಾಧೆಗಳೂ ಶುರುವಾದವು.

ಮೂವತ್ತು ದಾಟಿದ ಕೆಲ ವರ್ಷಕ್ಕೆ ಅಕಾಲಿಕ ಮುಪ್ಪು ಬಂದಂತೆ ಕಾಣುತ್ತಿದ್ದರು. ವ್ಯಾಯಾಮದಿಂದ ಅರೋಗ್ಯ ಸುಧಾರಿಸಬಹುದು ಎಂದು ಜಿಮ್‌ಗೆ ಹೋಗತೊಡಗಿದರು. ಇದರಿಂದ ಬೇಸರ ಸ್ವಲ್ಪ ಕಡಿಮೆಯಾಯಿತು. ಆದರೆ ಡಯಾಬಿಟಿಸ್ ಸಮಸ್ಯೆ ಅಷ್ಟೇನೂ ಬಗೆಹರಿಯಲಿಲ್ಲ.     

ಬರ್ನ್‌ಸ್ಟೈನ್ ಅವರು ಮದುವೆಯಾದದ್ದು ಒಬ್ಬ ವೈದ್ಯೆಯನ್ನು. ಮಕ್ಕಳಾದ ಮೇಲೆ ಅವರನ್ನು ಕಾಡಿದ ಪ್ರಶ್ನೆ: `ಕಂದಮ್ಮಗಳು ಬೆಳೆದು ದೊಡ್ಡವರಾಗುವ ವೇಳೆ ನಾನು ಇನ್ನೂ ಬದುಕಿರುತ್ತೇನೆಯೇ?' ಇಂಥ ನೋವು, ಆತಂಕಗಳನ್ನು ಅನುಭವಿಸುತ್ತಿದ್ದ ಅವರ ಜೀವನ 1969ರಲ್ಲಿ ಒಂದು ತಿರುವನ್ನು ಪಡೆಯಿತು. ಅವರ ಜೀವನದ ದಿಕ್ಕು ಬದಲಾಯಿತು.

ಹಾಸ್ಪಿಟಲ್ ಉಪಕರಣಗಳ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ವರ್ತಕ ಪತ್ರಿಕೆಯಲ್ಲಿ ಒಂದು ಜಾಹೀರಾತು ನೋಡಿದರು. ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಂಡುಹಿಡಿದು ಅದರ ಪ್ರಮಾಣವನ್ನು ಹೇಳುವ ಒಂದು ಉಪಕರಣ ಮಾರುಕಟ್ಟೆಗೆ ಬಂದಿತ್ತು. ಇವರು ಅದನ್ನು ಕೊಳ್ಳಲು ಪ್ರಯತ್ನಿಸಿದರು. ವೈದ್ಯರಿಗೆ ಮಾತ್ರ ಅದು ಲಭ್ಯ ಎಂದು ತಿಳಿದಾಗ ಹೆಂಡತಿಯ ಹೆಸರಲ್ಲಿ ಅದನ್ನು ಕೊಂಡರು. ನಂತರ ಎಂಜಿನಿಯರ್ ವೃತ್ತಿಯ ಕರಾರುವಾಕ್ಕಾದ ವಿಧಾನಗಳನ್ನು ಪ್ರಯೋಗಿಸಿ ತಮ್ಮ ಆರೋಗ್ಯದ ತಪಾಸಣೆ ಮಾಡಿಕೊಂಡರು.

ತಮ್ಮ ರಕ್ತದಲ್ಲಿ ಎಷ್ಟು ಸಕ್ಕರೆಯ ಪ್ರಮಾಣ ಇದೆ ಎಂದು ನೋಡಿಕೊಳ್ಳುತ್ತಲೇ ಹಲವು ವಿಷಯಗಳನ್ನು ಗ್ರಹಿಸಿದರು. ದಿನದಲ್ಲಿ ನಾಲ್ಕೈದು ಬಾರಿ ರಕ್ತ ಪರೀಕ್ಷೆ ಮಾಡಿಕೊಂಡು ಗ್ರಾಫ್ ಮಾಡಿಕೊಂಡರು. ಏನು ತಿಂದಾಗ ರಕ್ತದ ಸಕ್ಕರೆಯ ಅಂಶ ಹೆಚ್ಚಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಆಗ ಅವರಿಗೆ ಗೊತ್ತಾದದ್ದು: ಕಾರ್ಬೋಹೈಡ್ರೇಟ್ ತಿಂದಾಗ ಸಕ್ಕರೆ ಅಂಶ ಏರುವಂತೆ ಪ್ರೊಟೀನ್, ಕೊಬ್ಬಿನಂಶದ ಪದಾರ್ಥ ತಿಂದಾಗ ಏರುವುದಿಲ್ಲ.

ತಮ್ಮ ವೈದ್ಯರ ಮಾತನ್ನು ಉಲ್ಲಂಘಿಸಿ ಪ್ರೊಟೀನ್ ಹೆಚ್ಚಾಗಿ ತಿನ್ನತೊಡಗಿದರು.  ಇದರಿಂದ ಕಿಡ್ನಿ ಕಾಯಿಲೆಯಾಗಿ ಸಾವು ಸಂಭವ ಎಂದು ವೈದ್ಯರು ಹೇಳಿದ್ದನ್ನು ನಿರ್ಲಕ್ಷಿಸಿದರು. ಇವರ ತರ್ಕ: ಅರೋಗ್ಯ ಇಷ್ಟು ಕೆಟ್ಟಿರುವಾಗ ಪ್ರಯೋಗ ಮಾಡುವುದರಿಂದ ಹೆಚ್ಚಿನ ಹಾನಿಯಾಗಲಾರದು. ಈ ಡೆಸ್ಪರೇಟ್ ಪ್ರಯೋಗ ವಿಚಿತ್ರವಾಗಿ, ವೈದ್ಯರು ನಿರೀಕ್ಷಿಸಿದ್ದಕ್ಕಿಂತ ಬೇರೆ ರೀತಿ ಕೆಲಸ ಮಾಡಿತು. ಬರಬರುತ್ತಾ ಬರ್ನ್‌ಸ್ಟೈನ್ ಅವರ ಅರೋಗ್ಯ ಸುಧಾರಿಸಿತು.

ಅವರು ಇನ್ನೂ ಅಧ್ಯಯನ ಮಾಡ ಹೊರಟರು. ವಾಷಿಂಗ್ಟನ್‌ನಲ್ಲಿದ್ದ ಮೆಡಿಕಲ್ ಗ್ರಂಥಾಲಯಕ್ಕೆ ಒಂದು ಮನವಿ ಮಾಡಿ, ಶುಲ್ಕ ಕಟ್ಟಿ ಮೆಡಿಕಲ್ ಪತ್ರಿಕೆಗಳಲ್ಲಿ ಬಂದ ವರದಿಗಳನ್ನೆಲ್ಲಾ ತರಿಸಿಕೊಂಡರು. ಈ ಅಧ್ಯಯನದಿಂದ ಗೋಚರವಾದ ವಿಷಯ: ಪ್ರಾಣಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಾಮಾನ್ಯ ಸ್ಥಿತಿಗೆ ತರಬಹುದು. ಬರ್ನ್‌ಸ್ಟೈನ್ ಅವರನ್ನು ಕಾಡಿದ ಪ್ರಶ್ನೆ: ಹಾಗಾದರೆ ಮನುಷ್ಯರಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲವೇ? ಈ ಪ್ರಶ್ನೆಯನ್ನು ಅನುಭವಸ್ಥ ವೈದ್ಯರ ಬಳಿ ಕೇಳಿದಾಗ ಅವರು ಹೇಳಿದ್ದು: ಮನುಷ್ಯರು ಪ್ರಾಣಿಗಳಲ್ಲ!

ಕೊನೆಗೆ ತಮ್ಮ ಆರೋಗ್ಯದಲ್ಲಿ ಆದ ಸುಧಾರಣೆಯ ಬಗ್ಗೆ ಬರೆದು ಮೆಡಿಕಲ್ ಜರ್ನಲ್‌ಗಳಲ್ಲಿ ಪ್ರಕಟಿಸಲು ಪ್ರಯತ್ನಿಸಿದರು. ಇದರಿಂದ ಹಲವು ರೋಗಿಗಳಿಗೆ ಸಹಾಯವಾಗುತ್ತದೆ ಎಂದು ಎಣಿಸಿದ್ದರು. ಇವರು ವೈದ್ಯರಲ್ಲದೇ ಇದ್ದ ಕಾರಣ ಜರ್ನಲ್‌ಗಳು ಇವರ ಬರವಣಿಗೆಯನ್ನು ಪ್ರಕಟಿಸಲು ನಿರಾಕರಿಸಿದವು. ಇದನ್ನೇ ಸವಾಲಾಗಿ ಸ್ವೀಕರಿಸಿ ಬರ್ನ್‌ಸ್ಟೈನ್ ಎಂಬಿಬಿಎಸ್ ಮಾಡಿದರು. ನಂತರ ಎಂಡಿ ಮಾಡಿ, ತಮ್ಮದೇ ಕ್ಲಿನಿಕ್ ತೆರೆದು ಪ್ರಾಕ್ಟೀಸ್ ಮಾಡಲಾರಂಭಿಸಿದರು. ಇಂದು ನ್ಯೂಯಾರ್ಕ್‌ನ ಅತಿ ದುಬಾರಿ ಡಾಕ್ಟರ್‌ಗಳಲ್ಲಿ ಇವರೂ ಒಬ್ಬರು!

ಹಾಗಾದರೆ ಬರ್ನ್‌ಸ್ಟೈನ್ ಅವರ ಮದ್ದೇನು? ಅವರ ಪ್ರಕಾರ, ಡಯಾಬಿಟಿಸ್ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ಅದಕ್ಕೆ ಪಥ್ಯದಲ್ಲಿ ಪರಿಹಾರವಿದೆ. ಅದರಿಂದ ಆಗುವ ಹಾನಿಯನ್ನು ಕಡಿಮೆ ಮಾಡಬಹುದು. ಕಾರ್ಬೋಹೈಡ್ರೇಟ್ ತಿನ್ನುವುದನ್ನು ಕಡಿಮೆ ಮಾಡಿ, ಪ್ರೊಟೀನ್ ಮತ್ತು ಕೊಬ್ಬಿನ ಅಂಶವನ್ನು ಹೆಚ್ಚು ತಿನ್ನುವುದೇ ಅವರ ರೋಗ ನಿವಾರಣಾ ಮಾರ್ಗ. ಇದರ ಬಗ್ಗೆ ಹೆಚ್ಚು ತಿಳಿಯಲು ಅವರ ಪುಸ್ತಕ ಓದಿ. ಅವರ ವೆಬ್‌ಸೈಟ್ ಕೂಡ ಸಹಾಯಕ. ಅಲ್ಲಿ ಒಂದು ಚರ್ಚೆಯ ವೇದಿಕೆ ಕೂಡ ಇದೆ. ನೋಂದಾಯಿಸಿಕೊಂಡು ಪ್ರಶ್ನೆಗಳನ್ನು ಕೇಳಬಹುದು. ಅವರ ವಿಧಾನವನ್ನು ಪಾಲಿಸುವ ಇತರರು ಇಲ್ಲಿ ತಮ್ಮ ಅನುಭವಗಳನ್ನು, ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ. 

ಸಾಮಾನ್ಯವಾಗಿ ಫಾರ್ಮಾ ಸಂಸ್ಥೆಗಳ ದುಡ್ಡಿನಿಂದ ನಡೆದ ಕ್ಲಿನಿಕಲ್ ಟ್ರಯಲ್ಸ್‌ನ ಆಧಾರದ ಮೇಲೆ ವೈದ್ಯರು ಇಂದು ಔಷಧ ಬರೆದು ಕೊಡುತ್ತಾರೆ. ಡಯಗ್ನೋಸ್ಟಿಕ್ ಉಪಕರಣಗಳು ಹೆಚ್ಚಾಗಿವೆ. ರೋಗವನ್ನು ಗುಣಪಡಿಸುವುದಕ್ಕಿಂತ `ಮ್ಯೋನೇಜ್' ಮಾಡುವುದಕ್ಕೆ ಹೆಚ್ಚು ಆದ್ಯತೆ ದೊರೆಯುತ್ತಿದೆ (ಹೀಗೆ ಮಾಡುವುದರಿಂದ ವೈದ್ಯಕೀಯ ಉದ್ಯಮಕ್ಕೆ ದೀರ್ಘ ವ್ಯಾಪಾರವಾಗುತ್ತದೆ).

ಇಂದಿಗೂ ಬರ್ನ್‌ಸ್ಟೈನ್ ಅವರ ತೀರ್ಮಾನಗಳನ್ನು ವೈದ್ಯಕೀಯ ಮುಖ್ಯವಾಹಿನಿ ಒಪ್ಪಿಲ್ಲ. ಅವರು ಛಲ ಬಿಡದೆ ತಮ್ಮ ಯಶಸ್ಸನ್ನು ತಮ್ಮ ಪೇಷೆಂಟ್‌ಗಳ ಮೂಲಕ ಸಾರುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಡಾ. ಬರ್ನ್‌ಸ್ಟೈನ್‌ರಂಥ ವೈದ್ಯರ ಅವಶ್ಯಕತೆ ಎಷ್ಟಿದೆ ಎಂದು ಮತ್ತೆ ಹೇಳಬೇಕಾಗಿಲ್ಲ.
 

ಯಾಬಿಟಿಸ್‌ಗೆ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ತಾವೇ ವೈದ್ಯರಾದ ಎಂಜಿನಿಯರ್ ರಿಚರ್ಡ್ ಬನ್‌ಸ್ಟೈನ್ ಅವರದ್ದು ಸೋಜಿಗ ಹುಟ್ಟಿಸುವ ಕಥಾನಕ. ಡಯಾಬಿಟಿಸ್ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ಅದಕ್ಕೆ ಪಥ್ಯದಲ್ಲಿ ಪರಿಹಾರವಿದೆ ಎಂಬುದನ್ನು ಸ್ವಾನುಭವದಿಂದ ತೋರಿಸಿಕೊಟ್ಟ ದಿಟ್ಟರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT