ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಚ್ಛವಾಗಿ ಕಾಣುವ ಆಚರಣೆ ನಿವಾರಣೆಯತ್ತ ಹೆಜ್ಜೆ

Last Updated 6 ಸೆಪ್ಟೆಂಬರ್ 2017, 19:25 IST
ಅಕ್ಷರ ಗಾತ್ರ

ತ್ರಿವಳಿ ತಲಾಖ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು, ಮಹಿಳೆಯರನ್ನು ತುಚ್ಛವಾಗಿ ಕಾಣುವ ಆಚರಣೆಯೊಂದನ್ನು ಕೊನೆಗಾಣಿಸುವತ್ತ ನಮ್ಮನ್ನು ಒಂದು ಹೆಜ್ಜೆ ಮುಂದೆ ಕರೆದೊಯ್ಯುತ್ತದೆ ಎಂಬುದರಲ್ಲಿ ಹೆಚ್ಚಿನ ಅನುಮಾನ ಬೇಡ. ಆದರೆ ಈ ತೀರ್ಪು, ನಮ್ಮ ಸಂವಿಧಾನದ ರಾಜ್ಯ ನಿರ್ದೇಶನ ತತ್ವಗಳಲ್ಲಿ ಹೇಳಿರುವ ಏಕರೂಪ ನಾಗರಿಕ ಸಂಹಿತೆಯ ಕಡೆಗಿನ ದಾಪುಗಾಲು ಎಂಬಂತೆ ಕಾಣುವುದು ದೊಡ್ಡ ನಿರೀಕ್ಷೆ ಆಗುತ್ತದೆ.

ಒಂದೇ ಬಾರಿಗೆ ಮೂರು ಬಾರಿ ‘ತಲಾಖ್‌’ ಎಂದು ಹೇಳಿ, ಪತ್ನಿಗೆ ವಿಚ್ಛೇದನ ನೀಡುವ ಪದ್ಧತಿಗೆ ಮಾನ್ಯತೆ ಇದೆಯೇ ಎಂಬ ಸೀಮಿತ ವಿಚಾರದ ಬಗ್ಗೆ ಮಾತ್ರ ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ಪರಿಶೀಲನೆ ನಡೆಸಿರುವ ಕಾರಣ ನಾವು ವಿವೇಚನೆಯಿಂದ ಮಾತನಾಡಬೇಕಾಗುತ್ತದೆ. ನ್ಯಾಯಸಮ್ಮತವಾಗಿ ಇಲ್ಲ ಎಂಬ ಕಾರಣ ನೀಡಿ ಯಾವುದೇ ಶಾಸನವನ್ನು ಪ್ರಶ್ನಿಸಲು ಸಾಧ್ಯವಿದ್ದರೂ, ವಿವಾಹ, ವಿಚ್ಛೇದನ, ಆಸ್ತಿ ಹಕ್ಕು, ಜೀವನಾಂಶ, ಉಡುಗೊರೆ, ಪಾಲನೆ–ಪೋಷಣೆ, ವ್ಯಕ್ತಿಯ ಮರಣದ ನಂತರ ಆತನ ಆಸ್ತಿಯ ಮೇಲಿನ ಹಕ್ಕುಗಳ ವಿಚಾರದಲ್ಲಿ ಮುಸ್ಲಿಮರಿಗೆ ಸಂಬಂಧಿಸಿದಂತೆ ಜಾರಿಯಲ್ಲಿರುವುದು 1937ರ ’ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್) ಅನ್ವಯ ಕಾಯ್ದೆ’ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟತೆ ಇತ್ತು.

ತ್ರಿವಳಿ ತಲಾಖ್‌ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಉಲ್ಲೇಖಿಸಿದ ಒಂದು ಪ್ರಮುಖ ತೀರ್ಪು, 2002ರಲ್ಲಿ ಹೊರಬಂದ ಶಮೀಮ್ ಆರಾ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಣ ಪ್ರಕರಣಕ್ಕೆ ಸಂಬಂಧಿಸಿದ್ದು. ‘ತಲಾಖ್‌ಗೆ ಸಕಾರಣಗಳು ಇರಬೇಕು, ತಲಾಖ್‌ಗೂ ಮೊದಲು ಪತ್ನಿಯ ಕಡೆಯಿಂದ ಹಾಗೂ ಪತಿಯ ಕಡೆಯಿಂದ ತಲಾ ಒಬ್ಬರು ಪತಿ–ಪತ್ನಿ ನಡುವೆ ರಾಜಿ ಮಾಡಿಸಲು ಪ್ರಯತ್ನ ನಡೆಸಿರಬೇಕು. ಈ ಪ್ರಯತ್ನ ವಿಫಲವಾದರೆ ತಲಾಖ್‌ ಜಾರಿಗೆ ತರಬಹುದು. ಪವಿತ್ರ ಕುರ್‌ ಆನ್‌ ಪ್ರಕಾರ ತಲಾಖ್‌ ನೀಡುವ ಸರಿಯಾದ ವಿಧಾನ ಇದು’ ಎಂದು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು.

‘ತ್ರಿವಳಿ ತಲಾಖ್‌ ಎನ್ನುವುದು ತಕ್ಷಣಕ್ಕೆ ಆಗುವಂಥದ್ದು. ತಲಾಖ್‌ ಎಂದು ಮೂರು ಬಾರಿ ಹೇಳಿದ ನಂತರ ಬದಲಾಯಿಸಲು ಅವಕಾಶವಿಲ್ಲ. ಹಾಗಾಗಿ, ಇಬ್ಬರು ಸಂಧಾನಕಾರರ ಮೂಲಕ ದಾಂಪತ್ಯ ಬಂಧನವನ್ನು ಉಳಿಸಲು ಅವಶ್ಯವಿರುವ ಪ್ರಯತ್ನ ನಡೆಸಲು ಇಲ್ಲಿ ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ಯು.ಯು. ಲಲಿತ್ ಈಗಿನ ಪ್ರಕರಣದಲ್ಲಿ ಹೇಳಿದ್ದಾರೆ. ವಿವಾಹ ಸಂಬಂಧ ಉಳಿಸಿಕೊಳ್ಳುವ ಯತ್ನವನ್ನೇ ಮಾಡದೆ ಮುಸ್ಲಿಂ ಪುರುಷ ತನಗೆ ತೋಚಿದಂತೆ, ಮದುವೆಯನ್ನು ಹುಚ್ಚುಚ್ಚಾಗಿ ಮುರಿಯಬಹುದು ಎಂಬ ಕಾರಣಕ್ಕೆ ತ್ರಿವಳಿ ತಲಾಖ್‌ ಪದ್ಧತಿಯು ಸ್ಪಷ್ಟವಾಗಿ ತಪ್ಪು ಎಂದು ಅವರು ಘೋಷಿಸಿದ್ದಾರೆ. ಹಾಗಾಗಿ, ದೇಶದ ಸಂವಿಧಾನದ 14ನೇ ವಿಧಿಯಲ್ಲಿ ಹೇಳಿರುವ ಮೂಲಭೂತ ಹಕ್ಕುಗಳಿಗೆ ಈ ಮಾದರಿಯ ತಲಾಖ್‌ ವಿರುದ್ಧವಾಗಿದೆ ಎಂದು ಹೇಳಬೇಕು. 1937ರ ಕಾಯ್ದೆಯ ಸೆಕ್ಷನ್ 2ಕ್ಕೆ ಮಾನ್ಯತೆ ಇಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಈ ಸೆಕ್ಷನ್‌ನಲ್ಲಿನ ತ್ರಿವಳಿ ತಲಾಖ್‌ಗೆ ಮಾನ್ಯತೆ ನೀಡಿ, ಅದನ್ನು ಜಾರಿಗೆ ತರಲು ಅವಕಾಶ ಮಾಡಿಕೊಟ್ಟಿರುವಷ್ಟರಮಟ್ಟಿಗಿನ ಭಾಗವು ಅಸಿಂಧುಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಸಂವಿಧಾನದ 25ನೇ ವಿಧಿಯಲ್ಲಿ ಹೇಳಿರುವ, ‘ಧರ್ಮದ ಆಚರಣೆ, ಪ್ರಚಾರ ಮಾಡುವುದು ಹಾಗೂ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯ’ದ ಬಗ್ಗೆ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ: ‘25ನೇ ವಿಧಿಯು ರಕ್ಷಣೆ ನೀಡಿರುವುದು ಧರ್ಮದ ಅತ್ಯಗತ್ಯ ಆಚರಣೆಗಳಿಗೆ ಮಾತ್ರ.’ ‘ಅನುಮತಿ ಇದೆ ಎಂಬ ಒಂದೇ ಕಾರಣಕ್ಕೆ ಆಚರಣೆಯೊಂದಕ್ಕೆ ಧರ್ಮದ ಮಾನ್ಯತೆ ಸಿಗುವುದಿಲ್ಲ’ ಎಂದು ಒಂದು ತೀರ್ಪು ಹೇಳುತ್ತದೆ. ಧರ್ಮದ ಅತ್ಯಗತ್ಯ ಅಂಶಗಳು ಯಾವುವು ಎಂಬುದನ್ನು ಇನ್ನೊಂದು ತೀರ್ಪಿನಲ್ಲಿ ಚರ್ಚಿಸಲಾಗಿದೆ. ‘ಧಾರ್ಮಿಕ ನಂಬಿಕೆಯೊಂದನ್ನು ಅನುಸರಿಸಲು ಬೇಕಿರುವ ತೀರಾ ಮೂಲಭೂತ ಆಚರಣೆಗಳನ್ನು ಅತ್ಯಗತ್ಯ ಎಂದು ವರ್ಗೀಕರಿಸಬಹುದು’ ಎಂದು ‌ಕೋರ್ಟ್‌ ಹೇಳಿತ್ತು. ‘ಒಂದು ಅಂಶ ಅಥವಾ ಆಚರಣೆಯು ಒಂದು ಧರ್ಮದ ಪಾಲಿಗೆ ಅತ್ಯಗತ್ಯವೇ ಎಂದು ತೀರ್ಮಾನಿಸುವುದು ಹೇಗೆ? ಆ ಅಂಶ ಅಥವಾ ಆಚರಣೆಯ ಅನುಪಸ್ಥಿತಿಯಲ್ಲಿ ಆ ಧರ್ಮದ ಸ್ವರೂಪ ಬದಲಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ ಇದನ್ನು ತೀರ್ಮಾನಿಸಬಹುದು. ಇಂತಹ ಅತ್ಯಗತ್ಯ ಅಂಶಗಳಿಗೆ ಮಾತ್ರ ನಮ್ಮ ಸಂವಿಧಾನ ರಕ್ಷಣೆ ನೀಡಿದೆ.’

ಈ ಪರೀಕ್ಷೆಯ ಮೂಲಕ ನ್ಯಾಯಮೂರ್ತಿಗಳಾದ ನಾರಿಮನ್ ಮತ್ತು ಲಲಿತ್ ಅವರು, ‘ತ್ರಿವಳಿ ತಲಾಖ್‌ ಎಂಬುದು ಧರ್ಮದ ಅತ್ಯಗತ್ಯ ಆಚರಣೆ ಆಗುವುದಿಲ್ಲ’ ಎಂದು ತೀರ್ಮಾನಿಸಿದ್ದಾರೆ. ‘ಭಾರತೀಯ ಸುನ್ನಿ ಮುಸ್ಲಿಮರ ದೃಷ್ಟಿಕೋನದಿಂದ ನೋಡಿದಾಗ, ಈ ಆಚರಣೆಯ ಅನುಪಸ್ಥಿತಿಯಲ್ಲಿ ಇಸ್ಲಾಂ ಧರ್ಮದ ಮೂಲ ಸ್ವರೂಪವು ಬದಲಾಗುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ಪ್ರತ್ಯೇಕ ತೀರ್ಪು ಬರೆದಿರುವ ನ್ಯಾಯಮೂರ್ತಿ ಕುರಿಯನ್ ಅವರು, ತ್ರಿವಳಿ ತಲಾಖ್‌ಗೆ ಕಾನೂನಿನ ಮಾನ್ಯತೆ ಇದೆಯೇ ಎಂಬ ಸರಳ ಪ್ರಶ್ನೆಗೆ ಈ ಪ್ರಕರಣದಲ್ಲಿ ಉತ್ತರ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ತ್ರಿವಳಿ ತಲಾಖ್‌ ಆಚರಣೆಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್‌, ಶಮೀಮ್ ಆರಾ ಪ್ರಕರಣದಲ್ಲಿ ಕೆಲವೇ ಪದಗಳನ್ನು ಬಳಸಿ ಹೇಳಿತ್ತು. ಸಂವಿಧಾನದ 141ನೇ ವಿಧಿಯ ಅನುಸಾರ, ಶಮೀಮ್ ಆರಾ ಪ್ರಕರಣದಲ್ಲಿ ಹೇಳಿರುವ ಮಾತುಗಳು ದೇಶಕ್ಕೆ ಅನ್ವಯ ಆಗುವ ಕಾನೂನಂತಿವೆ ಎಂದು ನ್ಯಾಯಮೂರ್ತಿ ಕುರಿಯನ್ ಹೇಳಿದ್ದಾರೆ.

‘ಮುಸ್ಲಿಂ ವೈಯಕ್ತಿಕ ಕಾನೂನು ಅನ್ವಯ ಕಾಯ್ದೆ– 1937’ರ ಸೆಕ್ಷನ್ 2ರ ಅನ್ವಯ ‘ವಿವಾಹ, ವಿಚ್ಛೇದನ, ತಲಾಖ್‌’ನಂತಹ ವಿಚಾರಗಳಲ್ಲಿ ಮುಸ್ಲಿಮರು ವೈಯಕ್ತಿಕ ಕಾನೂನು ಷರಿಯತ್‌ ಅನ್ನು ಅನುಸರಿಸಬೇಕು. ಶಾಸನವೊಂದು ನ್ಯಾಯಸಮ್ಮತವಾಗಿ ಇಲ್ಲ ಎಂಬ ಆಧಾರದ ಅಡಿ ಅದನ್ನು ಪ್ರಶ್ನಿಸಬಹುದು ಎಂಬ ವಿಚಾರದಲ್ಲಿ ನ್ಯಾಯಮೂರ್ತಿ ಕುರಿಯನ್ ಅವರು ನ್ಯಾಯಮೂರ್ತಿಗಳಾದ ನಾರಿಮನ್ ಹಾಗೂ ಲಲಿತ್ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ‘ನ್ಯಾಯಸಮ್ಮತವಲ್ಲದ ಶಾಸನವೊಂದಕ್ಕೆ ಭಾರತದ ಸಾಂವಿಧಾನಿಕ ಪ್ರಜಾತಂತ್ರವು ಜನ್ಮ ನೀಡಲು ಸಾಧ್ಯವಿಲ್ಲ ಎಂಬ ವಿಚಾರವನ್ನು ನಾನು ಕೂಡ ಬಲವಾಗಿ ಸಮರ್ಥಿಸುತ್ತೇನೆ’ ಎಂದು ಕುರಿಯನ್ ಅವರು ಹೇಳಿದ್ದಾರೆ.

ತಲಾಖ್‌ ವಿಚಾರದಲ್ಲಿ ಕುರ್‌ ಆನ್‌ನ ಮಾತುಗಳು ಸ್ಪಷ್ಟವಾಗಿಯೂ, ಗೊಂದಲಕ್ಕೆ ಅವಕಾಶವಿಲ್ಲದಂತೆಯೂ ಇವೆ. ಪವಿತ್ರ ಕುರ್‌ ಆನ್‌ ವಿವಾಹ ವ್ಯವಸ್ಥೆಗೆ ಪಾವಿತ್ರ್ಯ ಹಾಗೂ ಶಾಶ್ವತತೆಯನ್ನು ನೀಡಿದೆ. ಆದರೆ, ತೀರಾ ಅನಿವಾರ್ಯ ಸಂದರ್ಭಗಳಲ್ಲಿ ತಲಾಖ್‌ಗೆ ಅವಕಾಶ ನೀಡಲಾಗಿದೆ. ಹೀಗಿದ್ದರೂ, ರಾಜಿ ಪ್ರಯತ್ನ ಹಾಗೂ ಆ ಪ್ರಯತ್ನ ಯಶಸ್ಸು ಕಂಡರೆ ವಿವಾಹ ಸಂಬಂಧದ ‍ಪುನರ್‌ ಸ್ಥಾಪನೆಯು ಕುರ್‌ ಆನ್‌ ಪ್ರಕಾರ ಆಗಬೇಕಿರುವ ಕ್ರಮಗಳು. ‘ತ್ರಿವಳಿ ತಲಾಖ್‌ ಪ್ರಕ್ರಿಯೆಯಲ್ಲಿ ಈ ಪ್ರಯತ್ನಗಳಿಗೆ ಅವಕಾಶ ಇಲ್ಲ. ಹಾಗಾಗಿ, ತ್ರಿವಳಿ ತಲಾಖ್‌ ಪದ್ಧತಿಯು ಪವಿತ್ರ ಕುರ್‌ ಆನ್‌ನ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ತ್ರಿವಳಿ ತಲಾಖ್‌ ಆಚರಣೆಯು ಷರಿಯತ್ಅನ್ನು ಉಲ್ಲಂಘಿಸುತ್ತದೆ.’ ಈ ಅಭಿಪ್ರಾಯವನ್ನು ಹಲವು ಹೈಕೋರ್ಟ್‌ಗಳು ವ್ಯಕ್ತಪಡಿಸಿವೆ. ಇದು ಸುಪ್ರೀಂ ಕೋರ್ಟ್‌ ನೀಡಿರುವ ಶಮೀಮ್ ಆರಾ ತೀರ್ಪಿನಲ್ಲೂ ಧ್ವನಿಸಿದೆ. ‘ಈ ತೀರ್ಪನ್ನು, ತ್ರಿವಳಿ ತಲಾಖ್‌ ಪದ್ಧತಿ ನಿಷೇಧಿಸುವ ಕಾನೂನಿನಂತೆ ಪರಿಗಣಿಸಲಾಗಿದೆ’ ಎಂದು ನ್ಯಾಯಮೂರ್ತಿ ಕುರಿಯನ್ ಹೇಳಿದ್ದಾರೆ.

ಮುಸ್ಲಿಂ ಮಹಿಳೆಯರ ಪರವಾಗಿ ಹಲವಾರು ನ್ಯಾಯಮೂರ್ತಿಗಳು ಧ್ವನಿ ಎತ್ತಿದ್ದಾರೆ. ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ಇವರಲ್ಲಿ ಒಬ್ಬರು. ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ಅಯ್ಯರ್ ಅವರು ಎ. ಯೂಸುಫ್ ರಾವ್ತರ್ ಮತ್ತು ಸೌರಮ್ಮ ನಡುವಣ ಪ್ರಕರಣದಲ್ಲಿ, ‘ತಕ್ಷಣ ವಿಚ್ಛೇದನ ನೀಡುವ ನ್ಯಾಯಸಮ್ಮತವಲ್ಲದ, ಏಕಪಕ್ಷೀಯ ಅಧಿಕಾರ ಮುಸ್ಲಿಂ ಪತಿಗೆ ಇದೆ ಎಂಬ ದೃಷ್ಟಿಕೋನವು ಇಸ್ಲಾಮಿಕ್ ನಿಯಮಗಳಿಗೆ ಸರಿಹೊಂದುವುದಿಲ್ಲ’ ಎಂದು ಹೇಳಿದ್ದಾರೆ. ‘ಪತಿ ತನ್ನ ಪತ್ನಿಯನ್ನು ತೊರೆದರೆ, ಚಿತ್ತ ಚಾಂಚಲ್ಯಕ್ಕೆ ಒಳಗಾಗಿ ಆಕೆಯನ್ನು ದೂರ ತಳ್ಳಿದರೆ ಆತ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ, ಪತ್ನಿಯನ್ನು ತಿರಸ್ಕರಿಸುವ ಪತಿ, ದೇವರ ಶಾಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಪ್ರವಾದಿಯವರು ಹೇಳಿದ್ದಾರೆ’ ಎಂದು ಅಯ್ಯರ್ ಬರೆದಿದ್ದಾರೆ. ವಿಚ್ಛೇದನಕ್ಕೆ ಕಾರಣಗಳು ಏನು ಎಂಬ ಬಗ್ಗೆ ಪತಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಕುರ್‌ ಆನ್‌ ಬಗ್ಗೆ ವಿಶ್ಲೇಷಣೆ ಮಾಡಿದವರು ಸರಿಯಾಗಿಯೇ ಗುರುತಿಸಿದ್ದಾರೆ. ಆದರೆ, ಭಾರತದಲ್ಲಿ ಅನ್ವಯವಾಗರುವ ಮುಸ್ಲಿಂ ಕಾನೂನು, ಪ್ರವಾದಿಯವರು ಹಾಗೂ ಪವಿತ್ರ ಕುರ್‌ ಆನ್‌ ಹೇಳಿರುವುದಕ್ಕೆ ವಿರುದ್ಧವಾದ ದಾರಿ ಹಿಡಿದಿವೆ. ಈ ತಪ್ಪು ಕಲ್ಪನೆಗಳು, ವಿಚ್ಛೇದನ ನೀಡುವ ಪತ್ನಿಯ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಹಾಳು ಮಾಡಿವೆ ಎಂದೂ ನ್ಯಾಯಮೂರ್ತಿ ಅಯ್ಯರ್ ಬರೆದಿದ್ದಾರೆ.

ಹಲವು ವರ್ಷಗಳ ಹಿಂದೆ, ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಖಾಲಿದ್ ಅವರು ತ್ರಿವಳಿ ತಲಾಖ್‌ ವಿಚಾರದಲ್ಲಿ ಆಕ್ರೋಶದಿಂದ ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಮೊಹಮ್ಮದ್ ಹನೀಫಾ ಮತ್ತು ಪಾತುಮ್ಮಳ್ ಬೀವಿ ನಡುವಣ ಪ್ರಕರಣದಲ್ಲಿ ನ್ಯಾಯಮೂರ್ತಿ ಖಾಲಿದ್ ಅವರು, ‘ಮುಸ್ಲಿಂ ಗೃಹಿಣಿಯರು ಈ ದಬ್ಬಾಳಿಕೆಯನ್ನು ಎಲ್ಲ ಕಾಲಗಳಲ್ಲೂ ಅನುಭವಿಸಬೇಕೇ? ದುರದೃಷ್ಟವಂತ ಪತ್ನಿಯ ವಿಚಾರದಲ್ಲಿ ಅವರ ವೈಯಕ್ತಿಕ ಕಾನೂನುಗಳು ಇಷ್ಟೊಂದು ಕ್ರೂರವಾಗಿ ಇರಬೇಕೇ? ಅವರ ನೋವನ್ನು ಹೋಗಲಾಡಿಸುವಂತೆ ಕಾನೂನುಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡಲಾಗದೇ? ಇದನ್ನು ನೋಡಿ ನನ್ನ ಆತ್ಮಸಾಕ್ಷಿ ಕಲಕಿಹೋಗಿದೆ. ಸಮುದಾಯದ ಅಭಿಪ್ರಾಯ ರೂಪಿಸುವ ನಾಯಕರ ಸಾಕ್ಷಿ‍ಪ್ರಜ್ಞೆ ಕೂಡ ಕಲಕುತ್ತದೆಯೇ ಇದು ಎಂಬುದು ಈಗಿರುವ ಪ್ರಶ್ನೆ’ ಎಂದು ಅವರು ಹೇಳಿದ್ದರು.

ತ್ರಿವಳಿ ತಲಾಖ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಹು‍ಮತದ ಅಭಿಪ್ರಾಯವು, ನ್ಯಾಯಮೂರ್ತಿ ಖಾಲಿದ್ ಅವರು ವ್ಯಕ್ತಪಡಿಸಿದ್ದ ಕಳವಳಗಳಿಗೆ ಉತ್ತರಿಸುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT