ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಸ್ಥಿತಿ: ಹಲವು ಖಳರಿಗೆ ಒಳ್ಳೆಯದೇ ಆಯಿತು!

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಇಂದಿರಾ ಗಾಂಧಿ ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಿ, ವಿಶ್ವದ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆಯನ್ನು ಸರ್ವಾಧಿಕಾರದ ಅಡಿ ನಿಲ್ಲಿಸಿದ್ದ ಕ್ರಮಕ್ಕೆ, ಕಳೆದ ಭಾನುವಾರ, ಅಂದರೆ ಜೂನ್ 25ರಂದು, ಮತ್ತೊಂದು ವರ್ಷ ಸಂದಿದಂತೆ ಆಯಿತು. ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ 21 ತಿಂಗಳ ಅವಧಿಯಲ್ಲಿ ಇಂದಿರಾ ಗಾಂಧಿ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಮತ್ತು ಪತ್ರಕರ್ತರನ್ನು ಜೈಲಿಗೆ ಅಟ್ಟಿದರು, ಪತ್ರಿಕೆಗಳ ಮೇಲೆ ನಿರ್ಬಂಧ ವಿಧಿಸಿದರು, ಸಂವಿಧಾನವೇ ನೀಡಿರುವ ಮೂಲಭೂತ ಹಕ್ಕುಗಳು ಅಮಾನತಿನಲ್ಲಿ ಇರುವಂತೆ ಮಾಡಿದರು ಮತ್ತು ಇಡೀ ಭಾರತವನ್ನು ಪೊಲೀಸ್ ಆಳ್ವಿಕೆಯ ನಾಡನ್ನಾಗಿ ಪರಿವರ್ತಿಸಿದರು.

ನ್ಯಾಯಾಲಯಗಳಲ್ಲಿ ನ್ಯಾಯ ಕೋರುವ ಹಕ್ಕನ್ನು ಜನ ಕಳೆದುಕೊಂಡ ನಂತರ, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ತಾವೇ ಕಾನೂನು ಕೈಗೆತ್ತಿಕೊಂಡರು.  ಜನರ ಮೇಲೆ ಹಲವು ಬಗೆಯ ದೌರ್ಜನ್ಯಗಳನ್ನು ನಡೆಸಿದರು. ಜನರ ಸಂತಾನಶಕ್ತಿ ಹರಣಕ್ಕೆ ಆದೇಶಿಸಲಾಯಿತು. ನಗರಗಳನ್ನು ‘ಶುದ್ಧಗೊಳಿಸಲು’ ಹಾಗೂ ಸಂಜಯ್ ಗಾಂಧಿ ಅವರ ಆಲೋಚನೆಗಳಿಗೆ  ಪ್ರೋತ್ಸಾಹ ನೀಡಲು ಬಡವರ ಮನೆಗಳನ್ನು ಧ್ವಂಸಗೊಳಿಸಲಾಯಿತು. ಭಾರತವು ಸರ್ವಾಧಿಕಾರಿ ಆಡಳಿತಕ್ಕೆ ಮುಖಾಮುಖಿಯಾಯಿತು. ಜನರ ಪಾಲಿಗೆ ಪ್ರಜಾತಾಂತ್ರಿಕ ಮಾರ್ಗಗಳು ಇರಲಿಲ್ಲ. ಹಲವರು ತಮ್ಮ ಅಧಿಕಾರವನ್ನು ಅತಿಯಾಗಿ ದುರ್ಬಳಕೆ ಮಾಡಿಕೊಂಡರು. ತುರ್ತು ಪರಿಸ್ಥಿತಿ ಕೊನೆಗೊಂಡ ನಂತರ, ಆ ಅವಧಿಯಲ್ಲಿ ನಡೆದ ದೌರ್ಜನ್ಯಗಳ ಬಗ್ಗೆ ವಿಚಾರಣೆ ನಡೆಸಿದ ಷಾ ಆಯೋಗವು ಹಲವು ಜನ ಖಳರನ್ನು ಗುರುತಿಸಿತು. ರಾಜಕಾರಣಿಗಳ ಪೈಕಿ ಇಂದಿರಾ ಗಾಂಧಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಬನ್ಸಿ ಲಾಲ್, ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ವಿ.ಸಿ. ಶುಕ್ಲಾ ಅವರ ಹೆಸರುಗಳನ್ನು ಷಾ ಆಯೋಗವು ಉಲ್ಲೇಖಿಸಿತು. ಅಧಿಕಾರಿಗಳು ಹಾಗೂ ಪೊಲೀಸರ ಪೈಕಿ ಇಂದಿರಾ ಗಾಂಧಿ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಆರ್.ಕೆ. ಧವನ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕ್ರಿಶನ್ ಚಂದ್ ಹಾಗೂ ಅವರ ಕಾರ್ಯದರ್ಶಿ ನವೀನ್ ಚಾವ್ಲಾ, ಪೊಲೀಸ್ ಡಿಐಜಿ ಪಿ.ಎಸ್. ಭಿಂದರ್ ಮತ್ತು ದೆಹಲಿ ಪೊಲೀಸ್ ಸಿಐಡಿ ವಿಭಾಗದಲ್ಲಿ ಎಸ್‌ಪಿ ಆಗಿದ್ದ ಕೆ.ಎಸ್. ಬಾಜ್ವಾ ವಿರುದ್ಧ ಆಯೋಗ ಗಂಭೀರ ದೋಷಾರೋಪ ಹೊರಿಸಿತು.

ಬನ್ಸಿ ಲಾಲ್ ಅವರು ಕೇವಲ ವೈಯಕ್ತಿಕ ಕಾರಣಗಳಿಗಾಗಿ, ‘ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡರು’ ಎಂದು ಆಯೋಗ ಹೇಳಿತು. ‘ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು’ ಲಾಲ್ ಅವರು ‘ಕೆಳಮಟ್ಟಕ್ಕೆ, ದ್ವೇಷ ತೀರಿಸಿಕೊಳ್ಳುವ ಮಟ್ಟಕ್ಕೆ’ ಇಳಿದಿದ್ದರು. ‘ಬನ್ಸಿ ಲಾಲ್ ಅವರು ನನ್ನನ್ನು ಯಾವಾಗ ಬೇಕಿದ್ದರೂ ಮೀಸಾ ಅಡಿ ಬಂಧಿಸಬಹುದು ಎಂಬ ಭೀತಿಯಲ್ಲಿ ನಾನಿದ್ದೆ’ ಎಂದು ಲಾಲ್ ನಂತರ ಆ ಹುದ್ದೆಗೆ ಬಂದ ಬಿ.ಡಿ. ಗುಪ್ತ ಅವರು ಆಯೋಗದ ಮುಂದೆ ಹೇಳಿದ್ದರು. ಲಾಲ್ ಅವರು ಸೃಷ್ಟಿಸಿದ್ದ ಭೀತಿ ಅಷ್ಟಿತ್ತು.
ಪತ್ರಕರ್ತರು, ಸ್ವತಂತ್ರವಾಗಿ ಅಭಿಪ್ರಾಯ ಹೇಳುತ್ತಿದ್ದ ಪತ್ರಿಕೆಗಳು, ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಮುಂದಾಗಿದ್ದ ಮತ್ತು ಸರ್ಕಾರಿ ನೌಕರರನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲು ಒತ್ತಡ ತಂದಿದ್ದ ಶುಕ್ಲಾ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದರು ಎಂದು ಆಯೋಗ ಹೇಳಿತು.

‘ಯಾವುದೇ ಆಡಳಿತ ವ್ಯವಸ್ಥೆಯ ಪಾಲಿಗೆ ಭಿಂದರ್ ಅವರ ವರ್ತನೆಯು ದೊಡ್ಡ ಕಪ್ಪು ಚುಕ್ಕೆ’ ಎಂದು ಆಯೋಗ ಹೇಳಿತು. ಗುಂಡು ಹಾರಿಸಲು ಅನುಮತಿ ನೀಡುವಂತೆ ಭಿಂದರ್ ಅವರು ಮ್ಯಾಜಿಸ್ಟ್ರೇಟರ ಮೇಲೆ ಒತ್ತಡ ತಂದಿದ್ದರು, ಅನುಮತಿ ಪತ್ರದ ಮೇಲೆ ಸಹಿ ಹಾಕುವುದಕ್ಕಿಂತ ಹಿಂದಿನ ದಿನಾಂಕ ನಮೂದಿಸುವಂತೆ ಒತ್ತಾಯಿಸಿದ್ದರು. ಇದನ್ನು ಮಾಡಲು ಮ್ಯಾಜಿಸ್ಟ್ರೇಟರು ಒಪ್ಪದಿರುವ ಮುನ್ಸೂಚನೆ ಸಿಕ್ಕಾಗಲೆಲ್ಲ ಮಧ್ಯಪ್ರವೇಶಿಸುತ್ತಿದ್ದ ಸಂಜಯ್ ಗಾಂಧಿ ಸಹಿ ಹಾಕುವಂತೆ ಒತ್ತಡ ಹೇರುತ್ತಿದ್ದರು.

ಬಂಧನಕ್ಕೆ ಬೇಕಿರುವ ಕಾರಣಗಳನ್ನು ಗಮನಿಸದೆಯೇ, ಮೀಸಾ ಕಾಯ್ದೆಯ ಅಡಿ ಬಂಧನ ವಾರಂಟ್‌ಗೆ ಮ್ಯಾಜಿಸ್ಟ್ರೇಟ್‌ಗಳು ಸಹಿ ಹಾಕಬೇಕು ಎಂಬುದು ಆರ್.ಕೆ. ಧವನ್ ಅವರ ಬಯಕೆ ಆಗಿತ್ತು. ಸಹಿ ಮಾಡಲು ತಡ ಮಾಡಿದರೆ ಅಥವಾ ಹಿಂದೇಟು ಹಾಕಿದರೆ ‘ನನಗೆ ವೈಯಕ್ತಿಕವಾಗಿ ಅಪಾಯ ಉಂಟಾಗಬಹುದು ಎಂಬ ಭಾವನೆ ನನ್ನಲ್ಲಿ ಮೂಡಿತ್ತು’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಒಬ್ಬರು ಹೇಳಿದ್ದಾರೆ. ಹೇಳಿದ ಮಾತು ಕೇಳದ ಐಎಎಸ್‌ ಅಧಿಕಾರಿಗಳನ್ನು ಜೈಲಿಗೆ ತಳ್ಳುವ ಬೆದರಿಕೆಯನ್ನು ನವೀನ್ ಚಾವ್ಲಾ ಅವರು ಒಡ್ಡಿದ್ದರು. ತಾವು ತಮ್ಮ ಕಾರ್ಯದರ್ಶಿಯಿಂದ ಸೂಚನೆ ಪಡೆಯುತ್ತಿದ್ದುದು ನಿಜ ಎಂದು ಲೆಫ್ಟಿನೆಂಟ್ ಗವರ್ನರ್ ಒಪ್ಪಿಕೊಂಡಿದ್ದರು! ಜೈಲು ಆಡಳಿತ ವ್ಯವಸ್ಥೆಯಲ್ಲಿ ಚಾವ್ಲಾ ಅವರಿಗೆ ಸ್ಥಾನ ಇರಲಿಲ್ಲ. ಹೀಗಿದ್ದರೂ, ಕೆಲವು ಕೈದಿಗಳು ಸೆಕೆಯಿಂದ ಬೇಯಬೇಕು ಎನ್ನುವ ಉದ್ದೇಶಕ್ಕೆ ಅವರಿಗೆ ಆ್ಯಸ್‌ಬೆಸ್ಟಾಸ್‌ ಚಾವಣಿ ಇರುವ ಕೊಠಡಿಗಳನ್ನು ನೀಡುವಂತೆ ಚಾವ್ಲಾ ಹೇಳುತ್ತಿದ್ದರು ಎಂದು ತಿಹಾರ್ ಜೈಲಿನ ಎಸ್‌ಪಿ ಹೇಳಿದ್ದಾರೆ. ಅಲ್ಲದೆ, ತೊಂದರೆ ಕೊಡುವ ಕೆಲವರನ್ನು ‘ಹುಚ್ಚರ ಜೊತೆ ಜೈಲಿನಲ್ಲಿ ಇರಿಸಬೇಕು’ ಎಂದೂ ಚಾವ್ಲಾ ಹೇಳುತ್ತಿದ್ದರು.

ಭಿಂದರ್, ಬಾಜ್ವಾ ಮತ್ತು ಚಾವ್ಲಾ ಬಗ್ಗೆ ವಿಚಾರಣೆ ಪೂರ್ಣಗೊಳಿಸುವ ವೇಳೆ ಆಯೋಗ ಕೆಲವು ಮಾತುಗಳನ್ನು ಹೇಳಿದೆ. ಇವರ ವರ್ತನೆಯು ‘ಸರ್ವಾಧಿಕಾರದಿಂದ, ದಯೆಯೇ ಇಲ್ಲದಂತೆ ಇತ್ತು’. ‘ನ್ಯಾಯಯುತ ವರ್ತನೆ ಹಾಗೂ ಇತರರ ಮಾತು ಆಲಿಸುವ ಗುಣ ಬಯಸುವ ಯಾವುದೇ ಸಾರ್ವಜನಿಕ ಹುದ್ದೆಯನ್ನು ಹೊಂದಲು ಇವರು ತಮ್ಮನ್ನು ತಾವೇ ಅನರ್ಹರನ್ನಾಗಿ ಮಾಡಿಕೊಂಡಿದ್ದಾರೆ’ ಎಂದೂ ಆಯೋಗ ಹೇಳಿದೆ. ‘ಭಿನ್ನಾಭಿಪ್ರಾಯಗಳ ಕತ್ತು ಹಿಸುಕಲಾಯಿತು. ಪ್ರಜಾಪೀಡಕರು ಎಲ್ಲ ಹಂತಗಳಲ್ಲಿ ರಾತ್ರೋರಾತ್ರಿ ಹುಟ್ಟಿಕೊಂಡರು. ಅಧಿಕಾರದಲ್ಲಿ ಇದ್ದವರಿಗೆ ಹತ್ತಿರವಿರುವ ಕಾರಣದಿಂದಾಗಿ ಪ್ರಜಾಪೀಡಕರು ತಮಗೆ ಅಧಿಕಾರ ಇದೆ ಎಂದು ಬಹುತೇಕ ಸಂದರ್ಭಗಳಲ್ಲಿ ಹೇಳಿಕೊಂಡರು.’
ಷಾ ಆಯೋಗವು ಇವರ ವಿರುದ್ಧ ಇಷ್ಟೊಂದು ಗಂಭೀರ ಆರೋಪಗಳನ್ನು ಹೊರಿಸಿದ್ದರೂ, 1980ರಲ್ಲಿ ಇಂದಿರಾ ಗಾಂಧಿ ಅವರು ಅಧಿಕಾರಕ್ಕೆ ಮರಳಿದ ನಂತರ ಇವರೆಲ್ಲರೂ ತಮ್ಮ ವೃತ್ತಿಗಳಲ್ಲಿ ಏಳ್ಗೆ ಕಂಡರು! ಇದಕ್ಕೆ ಕ್ರಿಶನ್ ಚಂದ್ ಮಾತ್ರ ಅಪವಾದ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಅವರು ಅನೈತಿಕವೆನಿಸುವ ಹಲವು ಕೃತ್ಯಗಳನ್ನು ಎಸಗಿದ್ದರೂ, ಷಾ ಆಯೋಗ ಆರೋಪಗಳನ್ನು ಹೊರಿಸಿದ ನಂತರ ಅವರ ಆತ್ಮಸಾಕ್ಷಿ ಚುಚ್ಚಲಾರಂಭಿಸಿತು. ದಕ್ಷಿಣ ದೆಹಲಿಯಲ್ಲಿದ್ದ ತಮ್ಮ ನಿವಾಸದಿಂದ 1978ರ ಜುಲೈ 9ರ ರಾತ್ರಿ ಹೊರಬಂದ ಇವರು, ಹಾಳು ಬಾವಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಈ ಕುಖ್ಯಾತ ಗುಂಪಿನ ಇತರರಿಗೆ ಏನಾಯಿತು ಎಂಬುದರ ವಿವರ ಇಲ್ಲಿದೆ:

ಬನ್ಸಿ ಲಾಲ್: ತುರ್ತು ಪರಿಸ್ಥಿತಿ ನಂತರ ಇವರು ಪುಟಿದೆದ್ದರು. ರಾಜೀವ್ ಗಾಂಧಿ ಸರ್ಕಾರದಲ್ಲಿ ರೈಲ್ವೆ ಸಚಿವರಾದರು. 1980 ಹಾಗೂ 1990ರ ದಶಕಗಳಲ್ಲಿ ಹರಿಯಾಣದ ಮುಖ್ಯಮಂತ್ರಿ ಆಗಿದ್ದರು. ಅವರ ಹೆಸರಿನಲ್ಲಿ ಒಂದು ಕಾಲುವೆ ಕೂಡ ಇದೆ. ಇವರು 2006ರ ಮಾರ್ಚ್‌ನಲ್ಲಿ ಮೃತಪಟ್ಟರು.

ವಿ.ಸಿ. ಶುಕ್ಲಾ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮನಸೋಚ್ಛೆ ವರ್ತಿಸಿದ್ದರೂ, ಅದರಿಂದಾಗಿ ಶುಕ್ಲಾ ಅವರ ವೃತ್ತಿ ಜೀವನದ ಮೇಲೆ ಕೆಟ್ಟ ಪರಿಣಾಮವೇನೂ ಆಗಲಿಲ್ಲ. ರಾಜೀವ್ ಗಾಂಧಿ ಸರ್ಕಾರದಲ್ಲಿ ಅವರು ಪುನಃ ಸಚಿವರಾದರು. ಹಾಗೆಯೇ, ವಿ.ಪಿ. ಸಿಂಗ್, ನರಸಿಂಹ ರಾವ್ ಸರ್ಕಾರಗಳಲ್ಲಿಯೂ ಸಚಿವರಾಗಿದ್ದರು. ಇವರು 2013ರ ಮೇ ತಿಂಗಳಲ್ಲಿ ಮೃತಪಟ್ಟರು.

ಆರ್.ಕೆ. ಧವನ್: ಇಂದಿರಾ ಗಾಂಧಿ ಅವರು 1980ರಲ್ಲಿ ಅಧಿಕಾರಕ್ಕೆ ಮರಳಿದ ನಂತರ ಧವನ್ ಅವರು ಪುನಃ ಇಂದಿರಾ ಅವರನ್ನು ಸೇರಿಕೊಂಡರು. ನಂತರ ಧವನ್ ಅವರು ರಾಜ್ಯಸಭಾ ಸದಸ್ಯರಾದರು. ನರಸಿಂಹ ರಾವ್ ಸರ್ಕಾರದಲ್ಲಿ ಸಚಿವರೂ ಆದರು.

ನವೀನ್ ಚಾವ್ಲಾ: ಇವರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೇಕಿರುವ ಗುಣಗಳೇ ಇಲ್ಲದಿದ್ದರೂ, ಮನಮೋಹನ್ ಸಿಂಗ್ – ಸೋನಿಯಾ ಗಾಂಧಿ ಅವರು ಚಾವ್ಲಾ ಅವರನ್ನು 2005ರಲ್ಲಿ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದರು. ಚಾವ್ಲಾ ಅವರ ನಿಷ್ಪಕ್ಷಪಾತ ಧೋರಣೆ ಬಗ್ಗೆ ಹಿಂದಿನ ಮುಖ್ಯ ಚುನಾವಣಾ ಆಯುಕ್ತರು ಅನುಮಾನ ವ್ಯಕ್ತಪಡಿಸಿದ್ದರೂ, ಚಾವ್ಲಾ ಮುಖ್ಯ ಚುನಾವಣಾ ಆಯುಕ್ತರ ಹುದ್ದೆ ಏರಿದರು.

ಪಿ.ಎಸ್. ಭಿಂದರ್: ಷಾ ಆಯೋಗವು ಹೊರಿಸಿದ ದೋಷಾರೋಪಗಳು ಈ ಪೊಲೀಸ್ ಅಧಿಕಾರಿಯ ಪಾಲಿಗೆ ಅದ್ಭುತವಾಗಿ ಕೆಲಸ ಮಾಡಿರುವಂತಿವೆ! ಇಂದಿರಾ ಗಾಂಧಿ ಅವರು ಅಧಿಕಾರಕ್ಕೆ ಮರಳಿದ ನಂತರ, ಇವರು ದೆಹಲಿ ಪೊಲೀಸ್ ಆಯುಕ್ತರಾದರು. ಪೊಲೀಸ್ ಮಹಾನಿರ್ದೇಶಕರಾಗಿ ನಿವೃತ್ತರಾದರು.

ಜಯರಾಮ್ ಪಡಿಕ್ಕಲ್: ಪಿ. ರಾಜನ್ ಎಂಬ ವಿದ್ಯಾರ್ಥಿಯೊಬ್ಬನಿಗೆ ಹಿಂಸೆ ನೀಡಿದ, ಪೊಲೀಸ್ ವಶದಲ್ಲಿದ್ದಾಗ ನಡೆದ ಆತನ ಹತ್ಯೆಯ ಪ್ರಕರಣದಲ್ಲಿ ಕೇರಳ ಪೊಲೀಸ್ ಇಲಾಖೆಯ ಕ್ರೈಂ ಬ್ರ್ಯಾಂಚ್‌ನ ಡಿಐಜಿ ಜಯರಾಮ್ ಅವರು ಮುಖ್ಯ ಆರೋಪಿಗಳಲ್ಲಿ ಒಬ್ಬರು. ನಂತರದ ದಿನಗಳಲ್ಲಿ ಇವರು ಡಿಜಿಪಿ ಹುದ್ದೆಗೆ ಏರಿದರು. 1997ರಲ್ಲಿ ಮೃತಪಟ್ಟರು.

ತುರ್ತು ಪರಿಸ್ಥಿತಿ ವೇಳೆ ಹೇಬಿಯಸ್ ಕಾರ್ಪಸ್ ಪ್ರಕರಣಗಳಲ್ಲಿ ವ್ಯಕ್ತಿಯ ಜೀವಿಸುವ ಸ್ವಾತಂತ್ರ್ಯದ ಪರ ಧ್ವನಿ ಎತ್ತಿದ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರಂತಹ ಹೀರೋಗಳು ಬೆಲೆ ತೆರಬೇಕಾದ ಸ್ಥಿತಿ ಬಂತು. ಆದರೆ, ಈ ಅವಧಿಯ ಖಳರು ವೃತ್ತಿಯಲ್ಲಿ ಮೇಲೆ ಬಂದರು. ಇದೊಂದು ವ್ಯಂಗ್ಯ. ಖನ್ನಾ ಅವರಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಲು ಇಂದಿರಾ ಗಾಂಧಿ ಅವಕಾಶ ನೀಡಲಿಲ್ಲ.

ಈ ಮೊದಲೇ ಹೇಳಿರುವಂತೆ, ಭನ್ಸಿ ಲಾಲ್, ವಿ.ಸಿ. ಶುಕ್ಲಾ, ಆರ್.ಕೆ. ಧವನ್, ನವೀನ್ ಚಾವ್ಲಾ, ಪಿ.ಎಸ್. ಭಿಂದರ್, ಕೆ.ಸ್. ಬಾಜ್ವಾ ಅವರು ರಾಜಕೀಯದಲ್ಲಿ ಮತ್ತು ನೌಕರಿಯಲ್ಲಿ ಉನ್ನತ ಸ್ಥಾನಗಳಿಗೆ ಏರಿದರು, ಯಾವ ಅಡೆತಡೆಯೂ ಇಲ್ಲದೆ. ತುರ್ತು ಪರಿಸ್ಥಿತಿ ವೇಳೆ ಎಸಗಿದ ತಪ್ಪುಗಳು ಇವರ ಪಾಲಿಗೆ ಪ್ರಶಂಸಾ ಪತ್ರಗಳ ರೀತಿಯಲ್ಲಿ ಇದ್ದವು. ನಮ್ಮ ಸಂವಿಧಾನ ಹಾಗೂ ಪ್ರಜಾತಾಂತ್ರಿಕ ಜೀವನ ಕ್ರಮದ ಮೇಲೆ ಇಂಥದ್ದೊಂದು ಘೋರ ಪೆಟ್ಟು ನೀಡಿದವರ ಬಗ್ಗೆ ನಮ್ಮ ಪ್ರತಿಕ್ರಿಯೆ ಹೀಗಿರುತ್ತದೆ ಎಂದಾದರೆ, ನಮ್ಮ ಪ್ರಜಾತಂತ್ರ ಸುರಕ್ಷಿತವಾಗಿ ಇರುತ್ತದೆಯೇ? ನಮ್ಮ ದೇಶದಲ್ಲಿ ಆಗಿರುವಂಥದ್ದು ಇನ್ನೆಲ್ಲಾದರೂ ಆಗಿದೆಯೇ ಎಂಬ ಆಶ್ಚರ್ಯಭರಿತ ಪ್ರಶ್ನೆ ಎದುರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT