ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತುಪರಿಸ್ಥಿತಿಯ ನೆನಪು ಮತ್ತು ಪ್ರಸಕ್ತ ಸಂದರ್ಭ

Last Updated 25 ಜೂನ್ 2013, 19:59 IST
ಅಕ್ಷರ ಗಾತ್ರ

ಇತಿಹಾಸದ ಕೆಲವು ಸಂದರ್ಭಗಳನ್ನು ನಾವು ಮರೆಯುವಂತೆಯೇ ಇಲ್ಲ. ಅದರಲ್ಲಿಯೂ ಇಂದಿಗೆ 38 ವರ್ಷಗಳ ಹಿಂದೆ, ಜೂನ್ 26ರ ರಾತ್ರಿಯ ಆ ಘಟನೆ ನನ್ನ ಸ್ಮೃತಿಪಟಲದಲ್ಲಿ ಸದಾ ಜೀವಂತವಿದೆ. ಏಕೆಂದರೆ ಆ ರಾತ್ರಿ ಭಾರತದ ಕರಾಳ ತುರ್ತು ಪರಿಸ್ಥಿತಿಗೆ ಅಂಕಿತ ಬಿದ್ದಿದ್ದು ತಾನೆ. ಅಂದು ವ್ಯಕ್ತಿ ಸ್ವಾತಂತ್ರ್ಯದ ಬೆಳಕು ಆರಿ ಸರ್ವಾಧಿಕಾರದ ಕಗ್ಗತ್ತಲು ದೇಶದಾದ್ಯಂತ ಆವರಿಸಿತ್ತು. ಸಂವಿಧಾನವೇ ಮೂಲೆಗುಂಪಾಗಿತ್ತು. ಪತ್ರಿಕಾ ಸ್ವಾತಂತ್ರ್ಯ ಕಳೆದು ಹೋಗಿತ್ತು. ತನ್ನ ಮೇಲೆ ಟೀಕೆ ಮಾಡುವವರನ್ನು ಸರ್ಕಾರ ಎಲ್ಲಿಯೇ ಆಗಲಿ, ಹೇಗೆಯೇ ಆಗಲಿ ಬಂಧಿಸಿ ಸೆರೆಮನೆಗೆ ತಳ್ಳುವ ಸ್ವಾತಂತ್ರ್ಯ ಪಡೆದುಕೊಂಡಿತ್ತು !

ಚುನಾವಣೆಯ ಸಂದರ್ಭದಲ್ಲಿ ಅಕ್ರಮ ಎಸಗಿದ್ದಾರೆಂಬ ಆರೋಪದ ಮೇಲೆ ಪ್ರಧಾನಿ ಇಂದಿರಾಗಾಂಧಿಯವರು ತಮ್ಮ ಸ್ಥಾನ ಕಳೆದುಕೊಳ್ಳುವಂತಾಗಿತ್ತು. ಆಗ ನ್ಯಾಯಾಲಯದ ತೀರ್ಪನ್ನು ಇಂದಿರಾ ಗಾಂಧಿಯವರು ಕಡೆಗಣಿಸಿದರು. ಅವರು ಅಲಹಾಬಾದ್ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗಬಹುದಿತ್ತು. ಆದರೆ ಅವರು ಇಡೀ ವ್ಯವಸ್ಥೆಯನ್ನೇ ತಮ್ಮ ಮೂಗಿನ ನೇರಕ್ಕೆ ಇಟ್ಟುಕೊಂಡು, ಅಧಿಕಾರದಲ್ಲಿ ಮುಂದುವರಿಯಲು ಯತ್ನಿಸಿದ್ದರು.

ಪ್ರಜಾಪ್ರಭುತ್ವದ ಮೂಲತತ್ವಗಳ ಮೇಲೆಯೇ ನಿಂತಿರುವ ಭಾರತದಂತಹ ದೇಶದಲ್ಲಿ ಸರ್ವಾಧಿಕಾರದ ಕರಿನೆರಳು ಬಿದ್ದಿದ್ದನ್ನು ಅಂದು ಇಡೀ ಜಗತ್ತು ನೋಡಿ ಅಚ್ಚರಿಗೊಂಡಿತ್ತು. ಮೂರು ದಶಕಗಳ ಕಾಲ ಪ್ರಜಾಸತ್ತೆಯ ಮೌಲ್ಯಗಳ ಅಡಿಯಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದ ಭಾರತೀಯರಿಗಂತೂ ಅಂದು ತುರ್ತುಪರಿಸ್ಥಿತಿಯ ಹೇರಿಕೆಯನ್ನು ನಂಬಲು ಸಾಧ್ಯವೇ ಆಗುತ್ತಿರಲಿಲ್ಲ.

ಅವತ್ತು ಇಂದಿರಾ ಗಾಂಧಿಯವರ ಆಪ್ತರೊಬ್ಬರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ `ಈ ಎಲ್ಲಾ ಆಗುಹೋಗುಗಳ ನಡುವೆ ನಮ್ಮ ಶತ್ರುಗಳ ಬಾಯಿ ಮುಚ್ಚಿಸುವುದು ಹೇಗೆಂದು ನನಗೆ ಗೊತ್ತು, ಆದರೆ ನಮ್ಮ ಮಿತ್ರರಿಗೆ ಏನೆಂದು ಸಮಜಾಯಿಷಿ ಹೇಳಲಿ' ಎಂದು ಪ್ರಧಾನಿಯವರ ಎದುರಲ್ಲೇ ಮುಜುಗರ ಪಟ್ಟುಕೊಂಡಿದ್ದರಂತೆ. ಆದರೆ ಇಂದಿರಾ ಗಾಂಧಿಯವರು ಯಾವ ಸಂಕೋಚವೂ ಇಲ್ಲದೆ ಆಡಳಿತ ವ್ಯವಸ್ಥೆಯ ಮೇಲೆ ಸಂಪೂರ್ಣ ಹಿಡಿತ ಹೊಂದುವುದರ ಬಗ್ಗೆಯಷ್ಟೇ ಗಮನ ಕೇಂದ್ರೀಕರಿಸಿದ್ದರು.

ಅವರ ಪುತ್ರ ಸಂಜಯ ಗಾಂಧಿಯವರಂತೂ ಅತ್ಯಂತ ಪ್ರಭಾವಿ ಶಕ್ತಿಯಾಗಿ ಬೆಳೆದು ನಿಂತಿದ್ದರು. ಎರಡು ವರ್ಷಗಳ ಕಾಲ ತುರ್ತುಪರಿಸ್ಥಿತಿ ಇತ್ತು. ಅದೃಷ್ಟವಶಾತ್, ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಮ್ಮ, ಮಗ ಮತ್ತು ಅವರ ಅನುಯಾಯಿಗಳು ಸಂಪೂರ್ಣ ಮೂಲೆಗುಂಪಾಗಿ ಹೋದರು. ಅಂದು ದೇಶದ ಮತದಾರರು ಪ್ರಜ್ಞಾವಂತಿಕೆ ಮೆರೆದಿದ್ದರು.

ಆ ದಿನಗಳಲ್ಲಿ ಅಮ್ಮ ಮತ್ತು ಮಗ ನಡೆಸಿದ ದೌರ್ಜನ್ಯ ಜಗತ್ತಿನ ಎದುರು ಭಾರತದ ಘನತೆಯನ್ನು ಕುಂದಿಸುವಂತಹದ್ದಾಗಿತ್ತು. ಕೆಲವು ಪ್ರದೇಶಗಳಲ್ಲಿದ್ದ ಜನರನ್ನು ಬಲವಂತವಾಗಿ ಹೊರದಬ್ಬಿದ ಪರಿ ಇದೆಯಲ್ಲಾ ಅದು ಅಮಾನವೀಯವಾಗಿತ್ತು.

ಕೊಳಚೆ ಪ್ರದೇಶಗಳನ್ನು ನಿರ್ಮೂಲನ ಮಾಡಿ ನಗರಗಳನ್ನು ಸುಂದರಗೊಳಿಸುವ ದಿಸೆಯಲ್ಲಿ ಕೊಳಚೆಪ್ರದೇಶಗಳಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದವರನ್ನು ಹೊರಗಟ್ಟಿದ ಪರಿ ಎಂತವರೂ ನೊಂದುಕೊಳ್ಳುವಂತಿತ್ತು. ಆ ನಂತರದ ದಿನಗಳಲ್ಲಿ ಮುಂಬೈನಲ್ಲಿ ಶಿವಸೇನೆಯ ಕಾರ್ಯಕರ್ತರೂ ಅಲ್ಲಿ ಬಾಂಗ್ಲಾದೇಶದ ವಲಸೆಗಾರರ ವಿರುದ್ಧ ಅದೇ ಮಾದರಿಯಲ್ಲಿ ನಡೆದುಕೊಂಡಿದ್ದೂ ಸತ್ಯ.

ಆ ದಿನಗಳಲ್ಲಿ ಆಡಳಿತ ಸೇವೆ ಮತ್ತು ಪೊಲೀಸ್ ಪಡೆ ಸಂಪೂರ್ಣವಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಮೇಲೆ ಕುಳಿತವರ ಮರ್ಜಿಗೆ ತಕ್ಕಂತೆ ಕೆಲಸ ಮಾಡುವುದನ್ನಷ್ಟೇ ಇಂದಿರಾಗಾಂಧಿ ಬಯಸಿದ್ದರು. ಇವತ್ತು, ಪಕ್ಷಭೇದವಿಲ್ಲದೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳೂ ಅದೇ ಧೋರಣೆ ತಳೆದಿರುವುದು ಕಂಡು ಬರುತ್ತದೆ. ಇಂತಹ ಮುಖ್ಯಮಂತ್ರಿಗಳು ತಮ್ಮ ಟೀಕಾಕಾರರನ್ನು ಸದೆಬಡಿಯುವ ದಿಸೆಯಲ್ಲಿ ಹಿಂದೆ ಇಂದಿರಾಗಾಂಧಿಯವರು ನಡೆದುಕೊಂಡಂತೆ ವರ್ತಿಸುತ್ತಿರುವುದೂ ಕಂಡು ಬರುತ್ತಿದೆ !

ಅಂದು ತುರ್ತುಪರಿಸ್ಥಿತಿ ಹೇರಿಕೆಯ ಬಗ್ಗೆ ಆಗಿನ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳಲ್ಲಿ ನಾಲ್ವರು ಅದೆಷ್ಟು ನಮ್ರವಾಗಿ ವರ್ತಿಸಿದ್ದರೆಂಬುದನ್ನೂ ನಾವು ಮರೆಯುವಂತಿಲ್ಲ. ಅವರಲ್ಲಿ ಪಿ.ಎನ್.ಭಗವತಿಯವರಂತೂ ತುರ್ತುಪರಿಸ್ಥಿತಿಯನ್ನು ಇನ್ನಿಲ್ಲದಂತೆ ಸಮರ್ಥಿಸಿಕೊಂಡಿದ್ದರು.

ಆದರೆ ನ್ಯಾಯಮೂರ್ತಿ ಎಚ್.ಆರ್.ಖನ್ನಾ ಅವರು ಮಾತ್ರ ಇಂದಿರಾಗಾಂಧಿಯವರ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ. ಅಂದು ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕ ಮಾಡಬೇಕಾದಾಗ ಎಲ್ಲಾ ಅರ್ಹತೆಗಳಿದ್ದ ಎಚ್.ಆರ್.ಖನ್ನಾ ಅವರನ್ನು ಕಡೆಗಣಿಸಲಾಯಿತು. ಖನ್ನಾ ಅವರ ಸೇವಾ ಹಿರಿತನವನ್ನೂ ಬದಿಗೊತ್ತಲಾಯಿತು. ಭಾರತದ ನ್ಯಾಯಾಂಗ ವ್ಯವಸ್ಥೆ ಆಗಿನ ಆ ಆಘಾತದಿಂದ ಇವತ್ತಿಗೂ ಚೇತರಿಸಿಕೊಂಡಿಲ್ಲ.

ಆದರೆ ಇಂದಿರಾ ಗಾಂಧಿಯವರ ತಂದೆ ಜವಾಹರಲಾಲ್ ನೆಹರು ಅವರು ಈ ತೆರನಾಗಿರಲಿಲ್ಲ. ಸ್ವಾತಂತ್ರ್ಯಾನಂತರ ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯನ್ನು ನೆಹರು ಇಷ್ಟಪಟ್ಟಿದ್ದರು. ಈ ವ್ಯವಸ್ಥೆಯ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದರು. ಆ ದಿನಗಳಲ್ಲಿ ನಡೆದ ಘಟನೆಯೊಂದು ನನಗೆ ಈಗ ನೆನಪಾಗುತ್ತಿದೆ. ಆಗಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೆಹರ್‌ಚಾಂದ್ ಮಹಾಜನ್ ಅವರ ವಿಚಾರಧಾರೆ ನೆಹರು ಅವರಿಗೆ ಇಷ್ಟವಾಗಿರಲಿಲ್ಲ.

ಹೀಗಾಗಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕ ಮಾಡುವ ಸಂದರ್ಭದಲ್ಲಿ ಮಹಾಜನ್ ಅವರ ಸೇವಾ ಹಿರಿತನವನ್ನು ಕಡೆಗಣಿಸಿ, ಇನ್ನೊಬ್ಬರನ್ನು ಅಲ್ಲಿ ಕುಳ್ಳಿರಿಸುವ ಯೋಚನೆಯೂ ನಡೆದಿತ್ತು. ಆಗ ಬಹಳ ಮಂದಿ ನ್ಯಾಯಮೂರ್ತಿಗಳು ಅಂತಹದ್ದೊಂದು ಪ್ರಕ್ರಿಯೆ ನಡೆದರೆ ತಾವು ರಾಜೀನಾಮೆ ನೀಡುತ್ತೇವೆ ಎಂದು ಪ್ರಕಟಿಸಿದ್ದರು. ನೆಹರು ತಕ್ಷಣ ಮಹಾಜನ್ ಅವರನ್ನೇ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿದ್ದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಲವಂತವಾಗಿ ಹೇರಲಾದ ಕುಟುಂಬ ಯೋಜನೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ನಡೆದುಕೊಂಡ ರೀತಿಯನ್ನು ಈ ನಾಡು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಸಂಜಯ ಗಾಂಧಿಯವರ ಈ ಆಲೋಚನೆಗೆ ಇಂದಿರಾ ಗಾಂಧಿಯವರು ಹಿಂದುಮುಂದು ನೋಡದೆ ಹಸಿರು ನಿಶಾನೆ ತೋರಿಸಿಬಿಟ್ಟಿದ್ದರು. ಕುಟುಂಬ ಯೋಜನೆಯ ಬಲವಂತದ ಕಾರ್ಯಕ್ರಮಗಳಿಗೆ  ಚಾಲನೆ ನೀಡಿದ್ದರು.

ಚರಿತ್ರೆಯಲ್ಲಿ ಸ್ಟಾಲಿನ್ ಮತ್ತು ಮಾವೋ ತ್ಸೆ ತುಂಗ್ ಅವರಂತಹ ಸರ್ವಾಧಿಕಾರಿಗಳು ನಡೆದುಕೊಂಡಿದ್ದಕ್ಕಿಂತ ಹೆಚ್ಚು ಕ್ರೂರವಾಗಿ ಈ ಕಾರ್ಯಕ್ರಮದ ಅನುಷ್ಠಾನದ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡಿತ್ತು. 65 ಮೀರಿದ ವೃದ್ಧರು, ಇನ್ನೂ ಹದಿನಾರು ತುಂಬಿರದ ಬಾಲಕರು ಎಂಬ ವ್ಯತ್ಯಾಸವಿಲ್ಲದೆ ದಾರಿಯಲ್ಲಿ ಸಿಕ್ಕವರನ್ನೆಲ್ಲಾ ಎಳೆದೊಯ್ದು ಆ ದಿನಗಳಲ್ಲಿ ಕುಟುಂಬ ಯೋಜನೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆ ದಿನಗಳಲ್ಲಿ ಈ ದೇಶದ ಯಾವುದೇ ಮನೆಗೆ ನುಗ್ಗಿ ಅಲ್ಲಿರುವವರು ಕುಟುಂಬ ಯೋಜನೆ ನಿಯಮವನ್ನು ಪಾಲಿಸಿದ್ದಾರಾ ಇಲ್ಲವಾ ಎಂದು ಪರಿಶೀಲಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿತ್ತು !

ಯಾವುದೇ ವಿಚಾರಣೆಯಿಲ್ಲದೆ ಅನಿರ್ದಿಷ್ಟ ಕಾಲದವರೆಗೆ ಯಾರನ್ನೇ ಆಗಲಿ ಬಂಧನದಲ್ಲಿಡುವ ಕಾನೂನು ಈ ದೇಶಕ್ಕೆ ವಸಾಹತುಷಾಹಿಗಳ ಕೊಡುಗೆ ಎನ್ನವುದು ನಮಗೆ ಗೊತ್ತಿದೆ. ಇಂದಿರಾ ಗಾಂಧಿಯವರು ಸ್ವತಂತ್ರ ಭಾರತದಲ್ಲಿ ಈ ಕಾನೂನನ್ನೇ ತಮ್ಮ ಅಸ್ತ್ರವಾಗಿಸಿಕೊಂಡಿದ್ದೊಂದು ವಿಪರ್ಯಾಸ. ಆ ದಿನಗಳಲ್ಲಿ ದೇಶದ ವಿವಿಧ ಕಡೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಈ ಕಾನೂನಿನ ಅಡಿಯಲ್ಲಿ ಬಂಧಿಸಿಡಲಾಗಿತ್ತು.

ಆದರೆ ಆ ದಿನಗಳಲ್ಲಿದ್ದ ಅಂತಹ ಕಾನೂನನ್ನು ಗೃಹ ಸಚಿವಾಲಯ ಇವತ್ತೂ ಜೀವಂತವಿರಿಸಿಕೊಂಡಿರುವುದೊಂದು ದುರಂತವಾಗಿದೆ. ಭಯೋತ್ಪಾದಕರನ್ನು ಸದೆಬಡಿಯುವ ನೆಪದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆಯೇ ಈಗಿನ ಸರ್ಕಾರ ಸವಾರಿ ನಡೆಸತೊಡಗಿದೆ. ಇವತ್ತು ಕೆಲವು ಸಂದರ್ಭಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರನ್ನು ವಿಚಾರಣೆ ಇಲ್ಲದೆಯೇ ಬಂಧಿಸಿಡುವ ಅವಕಾಶವಿದೆ.

ಅದಕ್ಕೆ ಸರ್ಕಾರದಿಂದ ನೇಮಕಗೊಂಡಿರುವ ಸಲಹಾ ಸಮಿತಿಯ ಒಪ್ಪಿಗೆಯಂತೂ ಬೇಕು. ಇಂತಹ ಸಂದರ್ಭದಲ್ಲಿ ಜೈಲಿನೊಳಗೇ ವಿಚಾರಣೆ ನಡೆಸಬೇಕಾಗುತ್ತದೆ. ಈ ಕಾನೂನಿನ ಅಡಿಯಲ್ಲಿ ಡಾ.ವಿನಾಯಕ ಸೆನ್ ಅವರನ್ನು ಬಂಧಿಸಿದ್ದು ಕೆಲವು ಸಮಯದ ಹಿಂದೆ ಸುದ್ದಿಯಾಗಿತ್ತು. ವಿನಾಯಕ ಸೆನ್ ಅವರಿಗೆ ಮಾವೋವಾದಿಗಳ ಜತೆಗೆ ಸಂಪರ್ಕವಿದೆ ಎಂದು ಜಾರ್ಖಂಡ್ ಸರ್ಕಾರ ಆರೋಪಿಸಿತ್ತು.

ತುರ್ತು ಪರಿಸ್ಥಿತಿಯ ಸಂದರ್ಭದ ಅನಾಹುತಗಳ ಬಗ್ಗೆ ನಮಗೆಲ್ಲರಿಗೂ ಗೊತ್ತಿದ್ದರೂ ನಾವು ಏಕೆ ಅದರಿಂದ ಪಾಠ ಕಲಿಯಲಿಲ್ಲ ಎಂಬ ಬಗ್ಗೆ ನನಗೆ ಅಚ್ಚರಿ ಎನಿಸುತ್ತಿದೆ. ಅಂದು ಪ್ರಜಾಸತ್ತೆಯ ಮೌಲ್ಯಗಳನ್ನೇ ಬೀದಿಗೆ ಎಸೆದಿದ್ದ ಇಂದಿರಾ ಗಾಂಧಿಯವರ ಹಾದಿಯಲ್ಲಿಯೇ ಇವತ್ತು ಅನೇಕ ರಾಜಕಾರಣಿಗಳು ವರ್ತಿಸುತ್ತಿರುವುದು ವಿಷಾದಕರ.

ಬಹುತೇಕ ಎಲ್ಲಾ ಪಕ್ಷಗಳ ರಾಜಕಾರಣಿಗಳಲ್ಲಿ ಇಂತಹ ಧೋರಣೆ ಕಂಡು ಬರುತ್ತಿದೆ. ಇಂತಹ ವಿಷಯಗಳಲ್ಲಿ ತಪ್ಪೆಸಗಿದವರಿಗೆ ಯಾವುದೇ ಶಿಕ್ಷೆಯಾಗದಿರುವುದೂ ಅಂತಹ ಧೋರಣೆಯ ಮುಂದುವರಿಕೆಗೆ ಕಾರಣ ಎಂದೆನಿಸತೊಡಗಿದೆ. ಆ ದಿನಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ಸವಾರಿ ನಡೆಸಿದವರು ಇವತ್ತು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಉನ್ನತ ಸ್ಥಾನಗಳಲ್ಲಿದ್ದಾರೆ. ಇದಕ್ಕೇನನ್ನುವುದು?

ಅಂದು ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ವಿರುದ್ಧ ಜನಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದವರು ಸಂಪೂರ್ಣ ವೈಫಲ್ಯ ಕಂಡು, ಮತ್ತೆ ಇಂದಿರಾ ಗಾಂಧಿಯವರೇ ಅಧಿಕಾರದ ಗದ್ದುಗೆ ಏರಿದ್ದರು. ಆಗ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ದೌರ್ಜನ್ಯಗಳ ಬಗ್ಗೆ ನಡೆಯುತ್ತಿದ್ದ ತನಿಖೆಗಳೆಲ್ಲದರ ದಿಕ್ಕು ತಪ್ಪಿಸಿದರು. ಆಗ ಆರೋಪಿ ಸ್ಥಾನದಲ್ಲಿದ್ದ ಅಧಿಕಾರಿಗಳನ್ನೆಲ್ಲಾ ಮತ್ತೆ ಆಯಕಟ್ಟಿನ ಸ್ಥಾನಗಳಲ್ಲಿ ಕುಳ್ಳಿರಿಸಿದರು.

ತುರ್ತುಪರಿಸ್ಥಿತಿಯನ್ನು ಹೇರದೆಯೇ ಅದರ ಆಶಯಗಳನ್ನು ಇಂತಹ ಅಧಿಕಾರಿಗಳ ಕೈನಿಂದ ಇಂದಿರಾ ಗಾಂಧಿಯವರು ಕಾರ್ಯರೂಪಕ್ಕೆ ತಂದಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಡೆದಿದ್ದ ಹಲ್ಲೆಯ ನೆನಪು ದಿನ ಕಳೆದಂತೆ ಜನಮಾನಸದಿಂದ ಅಳಿಸಿ ಹೋಯಿತು. ಇವತ್ತಿನ ಯುವಜನರು ಭಾರತ ಹಾದು ಬಂದ ಇಂತಹ ಸಂಕಷ್ಟದ ಕಾಲಘಟ್ಟಗಳ ಬಗ್ಗೆ ಅರಿವೇ ಇಲ್ಲದಂತಿದ್ದಾರೆ.

ಹಿರಿಯರಿಗೆ ಆ ದಿನಗಳ ಬಗ್ಗೆ ಮಾತನಾಡುವ ಉತ್ಸಾಹವೂ ಇದ್ದಂತಿಲ್ಲ. ದುಃಸ್ವಪ್ನವೊಂದನ್ನು ಮರೆತಂತೆ ಅವರು ಕುಳಿತು ಬಿಟ್ಟಿದ್ದಾರೆ. ಆದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತೆಗೆದುಕೊಂಡಿದ್ದಂತಹ ಹಲವು ನಿರ್ಧಾರಗಳನ್ನು, ಕಾನೂನು ಕ್ರಮಗಳು ಇದೀಗ ಭದ್ರತೆ ಮತ್ತು ಶಾಂತಿಯ ನೆಪದಲ್ಲಿ ಮತ್ತೆ ಅನುಷ್ಠಾನಕ್ಕೆ ಬಂದಿದೆ. ಇಂತಹ ಕಾನೂನು ಕ್ರಮಗಳಿಗೆ ಸಂಬಂಧಿಸಿದಂತೆ ಅವತ್ತು ಮತ್ತು ಇವತ್ತಿಗೆ ಸ್ವಲ್ಪ ವ್ಯತ್ಯಾಸವಿದೆ ಅಷ್ಟೆ.

ಲೋಕಪಾಲ ಮಸೂದೆಯ ಬಗ್ಗೆ ಪ್ರಸಕ್ತ ವ್ಯಾಪಕ ಚರ್ಚೆ ಕೇಳಿ ಬರುತ್ತಿದೆ. ಆದರೆ ಸರ್ವತಂತ್ರ ಸ್ವತಂತ್ರ ಲೋಕಪಾಲ ವ್ಯವಸ್ಥೆ ರೂಪಿಸಲು ಸರ್ಕಾರ ಮುಂದಡಿ ಇಡುತ್ತಲೇ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಅದು ಯಾವುದೇ ಹೊಂದಾಣಿಕೆಗೆ ಸಿದ್ಧವಿದ್ದಂತೆ ಕಂಡು ಬರುತ್ತಿಲ್ಲ.

ಪ್ರಧಾನ ಮಂತ್ರಿಗಳ ವಿರುದ್ಧವೇ ಆರೋಪ ಕೇಳಿ ಬಂದಾಗ ಅದನ್ನು ತನಿಖೆಗೆ ಎತ್ತಿಕೊಳ್ಳುವ ಶಕ್ತಿ ಇಲ್ಲದಿದ್ದರೆ ಅಂತಹ ಲೋಕಪಾಲ ಮಸೂದೆಯಿಂದ ಲಾಭವಾದರೂ ಏನು? ಅದೇ ರೀತಿ ನ್ಯಾಯಾಂಗ ವ್ಯವಸ್ಥೆಯೊಳಗಿರುವವರು, ಸಂಸತ್ ಸದಸ್ಯರು ಮುಂತಾದ ಪ್ರಭಾವಿ ಅಧಿಕಾರಸ್ತರ ಮೇಲೆಯೂ ತನಿಖೆ ನಡೆಸುವ ಸಾಮರ್ಥ್ಯ ಲೋಕಪಾಲರಿಗೆ ಇದೆಯಾ ? ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿರುವ ಸಿಬಿಐನಂತಹ ತನಿಖಾ ಸಂಸ್ಥೆಯಿಂದ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ ?

ಅದೇನೆ ಇದ್ದರೂ ಮೂರು ದಶಕಗಳ ಹಿಂದಿನ ಆ ಕೆಟ್ಟಕನಸು ಮತ್ತೆ ಮರುಕಳಿಸಲಿಕ್ಕಿಲ್ಲ ಅಥವಾ ಇನ್ನೊಂದು ತುರ್ತು ಪರಿಸ್ಥಿತಿ ಸುಲಭದಲ್ಲಿ ಬರಲು ಸಾಧ್ಯವಿಲ್ಲ ಎಂಬ ನಿರಾಳ ಸ್ಥಿತಿ ನಮ್ಮದು. ಏಕೆಂದರೆ ತುರ್ತುಸ್ಥಿತಿ ಹೇರಬೇಕೆಂದರೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬೆಂಬಲ ಬೇಕು ಮತ್ತು ರಾಜ್ಯಗಳ ವಿಧಾನ ಸಭೆಗಳಲ್ಲಿಯೂ ಆ ಮಟ್ಟಿಗಿನ ಒಪ್ಪಿಗೆ ಸಿಗಲೇಬೇಕು. 

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT