ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃತೀಯ ರಂಗದ ಹೆಜ್ಜೆ ಜಾಡು...

Last Updated 30 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಧ್ಯಂತರ ಚುನಾವಣೆ ಅನಿವಾರ್ಯ ಎಂದೆನಿಸತೊಡಗಿದೆ. ವಿಭಿನ್ನ ಪ್ರಾಂತ್ಯಗಳ ಮುಖಂಡರು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿದ್ದಾರೆ. ಅವರೆಲ್ಲಾ ತಮ್ಮ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ದಾಪುಗಾಲು ಇಡಲು ಇದು ಸಕಾಲ ಎನ್ನುವುದು ಅವರಿಗೂ ಗೊತ್ತಿದೆ. ಈಗಿರುವ ಸಾಮರ್ಥ್ಯವನ್ನು ಇನ್ನಷ್ಟೂ ಗಟ್ಟಿಗೊಳಿಸಿಕೊಳ್ಳುವ ದಿಸೆಯಲ್ಲಿ ಅವರೆಲ್ಲರೂ ಗಮನ ಕೇಂದ್ರೀಕರಿಸಲೇ ಬೇಕಾಗಿದೆ. ಇಂತಹ ಬೆಳವಣಿಗೆಗಳ ನಡುವೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅದೇಕೋ ಏನೋ ತಮ್ಮ ಪ್ರಭಾವಲಯವನ್ನು ಕಳೆದುಕೊಳ್ಳುತ್ತಿದ್ದಾರೆನಿಸುತ್ತಿದೆ. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಸ್ಥಿತಿ ಕೂಡಾ. ಇಂತಹ ಮುಖಂಡರು ಸಾರ್ವತ್ರಿಕ ಚುನಾವಣೆಯಲ್ಲಿ ಹೇಗೆ ಮತದಾರರ ಮನಸ್ಸನ್ನು ಗೆಲ್ಲುತ್ತಾರೆ ಎನ್ನುವುದರ ಮೇಲೆ ಎಲ್ಲವೂ ಅಡಗಿದೆ.

ಒಂದಂತೂ ನಿಜ, ಫಲಿತಾಂಶ ಏನಾಗಬಹುದೆಂದು ಯಾರೂ ಊಹಿಸಬಹುದಾಗಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಯಾವುದೇ ಒಂದು ಪಕ್ಷವೂ ಬಹುಮತ ಗಳಿಸುವುದು ಅಸಾಧ್ಯ. ಆದರೆ ಚುನಾವಣೆಯ ನಂತರ ಯಾವ ಯಾವ ಪಕ್ಷಗಳು ಪರಸ್ಪರ ಕೈಜೋಡಿಸಬಹುದೆಂದೂ ಈಗಲೇ ಊಹಿಸಲು ಸಾಧ್ಯವೇ ಇಲ್ಲ. ಕೋಮುವಾದಿ ಧೋರಣೆ ಇತ್ಯಾದಿಗಳೆಲ್ಲಾ ಚರ್ಚೆಗೆ ಬಂದು ಅಂತಿಮದಲ್ಲಿ ಸಮಾನ ಮನಸ್ಕರು ತಮಗೆ ಅನುಕೂಲವಾಗುವ ರೀತಿಯಲ್ಲಿ ಒಂದೆಡೆ ಸೇರುವ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಕೆಲವು ಪಕ್ಷಗಳು ತಾವು ಕೋಮುವಾದಿಯಲ್ಲ ಎಂಬುದನ್ನು ಅದೆಷ್ಟರ ಮಟ್ಟಿಗೆ ಸಮರ್ಥವಾಗಿ ಸಾಬೀತು ಪಡಿಸುತ್ತವೆ ಎನ್ನುವುದರ ಮೇಲೆ ಕೆಲವು ಹೊಂದಾಣಿಕೆಗಳು ಕಂಡು ಬರಬಹುದು. ಹಿಂದುತ್ವವಾದದ ಬಿಜೆಪಿ ಮತ್ತು ಆ ಪಕ್ಷದ ಧೋರಣೆಯನ್ನು ಇಷ್ಟ ಪಡುವ ಪಕ್ಷಗಳೆಲ್ಲಾ ಒಂದು ಕಡೆ ಇದ್ದರೆ, ಅದಕ್ಕೆ ವಿರುದ್ಧ ನಿಲುವಿನ ಇತರ ಪಕ್ಷಗಳೆಲ್ಲಾ ಇನ್ನೊಂದು ಕಡೆ ಸೇರಬಹುದು.

ಈ ನಡುವೆ ಮೂರನೇ ಗುಂಪೊಂದು ಎದ್ದು ನಿಲ್ಲುವ ಸಾಧ್ಯತೆ ಸ್ಪಷ್ಟವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಗುಂಪುಗಳ ಮುಂಚೂಣಿಯಲ್ಲಿದ್ದರೆ, ಈ ಎರಡಕ್ಕೂ ಪರ್ಯಾಯ ಎನಿಸಿರುವ ಪಕ್ಷಗಳು ಇನ್ನೊಂದು ಗುಂಪಿನಲ್ಲಿ ನಿಲ್ಲಬಹುದು. ಅಧಿಕಾರದ ಕೀಲಿಕೈ ಹಿಡಿಯುವವರಿಗೆ ಅಗತ್ಯವಾದ 273 ಸದಸ್ಯ ಬಲ ಸಾಧಿಸಲು ಕಾಂಗ್ರೆಸ್ ಅಥವಾ ಬಿಜೆಪಿಯ ಬಾಹ್ಯ ಬೆಂಬಲವಂತೂ ಅಗತ್ಯ.

ಮುಂಬರುವ ಸಾರ್ವತ್ರಿಕ ಚುನಾವಣೆಯ ನಂತರ ತೃತೀಯ ರಂಗದ ಸಾಧ್ಯತೆಯ ಬಗ್ಗೆ ಇರುವ ಎಲ್ಲಾ ಊಹಾಪೋಹಗಳನ್ನು ಈಚೆಗೆ ಅಲ್ಲಗಳೆದಿರುವ ಬಿಜೆಪಿ ಮುಖಂಡರು ಪ್ರಸಕ್ತ ಮುಲಾಯಂ ಸಿಂಗ್ ಅವರು ಯುಪಿಎ ಸರ್ಕಾರಕ್ಕೆ ಇನ್ನೂ ತಮ್ಮ ಬೆಂಬಲವನ್ನು ಮುಂದುವರಿಸಿರುವುದರ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಮುಲಾಯಂ ಸಿಂಗ್ ಅವರು ಕಾಂಗ್ರೆಸ್ ವಿರುದ್ಧ ಹತ್ತು ಹಲವು ಆರೋಪಗಳನ್ನು ಮಾಡಿದ್ದಾರಲ್ಲಾ ಎಂದೂ ಆ ಮುಖಂಡರು ಪ್ರಶ್ನಿಸಿದ್ದಾರೆ. ಬಿಜೆಪಿಯ ಇಂತಹ ಯಾವುದೇ ಅನಿಸಿಕೆಗಳಿರಬಹುದು. ಆದರೆ ಮುಲಾಯಂ ಸಿಂಗ್ ತಮ್ಮದೇ ಯೋಚನಾ ಸರಣಿಯನ್ನು ಹೊಂದಿರುವಂತಿದೆ. ಅವರು ಮತ್ತು ಅವರ ಪುತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತೃತೀಯ ಶಕ್ತಿಯ ಪರಿಕಲ್ಪನೆಯನ್ನು ಜೀವಂತ ಉಳಿಸಿಕೊಂಡಿದ್ದಾರೆ. ಮುಲಾಯಂ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ನಡುವಣ ಸಂವಾದ ಮುಂದುವರಿದಿದೆ.

ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯೊಂದರ ಅಗತ್ಯದ ಕುರಿತ ಚರ್ಚೆ ಈಚೆಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅದು ಬೇಕೆಂಬ ಬಗ್ಗೆಯೂ ಮಾತು ಕೇಳಿ ಬರುತ್ತಿವೆ. ಆದರೆ ಇಂತಹದ್ದೊಂದು `ಶಕ್ತಿ'ಯ ಬಗ್ಗೆ ಹಿಂದೆ ಯೋಚನೆ ಮಾಡುತ್ತಿದ್ದ ಧಾಟಿಯಲ್ಲಿ ಈಗ ಯೋಚಿಸುವವರು ಕಡಿಮೆ. ಅದಕ್ಕೆ ಸಂಬಂಧಿಸಿದ ವಿಚಾರ ಸರಣಿಯೇ ಬದಲಾಗಿದೆ. ಈಚೆಗಿನ ದಿನಗಳಲ್ಲಿ ತಾತ್ವಿಕ ತಳಹದಿಯ ಹೊಂದಾಣಿಕೆಗಳು, ಮಾತುಕತೆ ಕಡಿಮೆಯಾಗುತ್ತಿವೆ. ವಿಭಿನ್ನ ಪಕ್ಷಗಳು ಭಿನ್ನ ಕಾರಣಗಳಿಗಾಗಿ ವಿವಿಧ ರೀತಿಯ ರಾಜಿ ಮಾಡಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ನೈತಿಕ ಅಂಶಗಳು ನಗಣ್ಯ ಎನಿಸತೊಡಗಿರುವುದೊಂದು ವಿಪರ್ಯಾಸ. ಇದರಿಂದಾಗಿ ಅಪಾತ್ರರು ಸಾರ್ವಜನಿಕ ರಂಗದಲ್ಲಿ ಎತ್ತರಕ್ಕೇರಿ ಬಿಡುತ್ತಾರೆ.

ಭಾರತ ಇಂತಹದ್ದೊಂದು ಸಂದಿಗ್ಧ ಕಾಲಘಟ್ಟದಲ್ಲಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ರಾಜಕೀಯ ಬದಲಾವಣೆಗಳೆಂದರೆ ಇಂತಹ ಹಲವು ಅಪಾತ್ರರು ತೆರೆಯ ಮರೆಗೆ ಸರಿದರೆ, ಅಂತಹದೇ ವ್ಯಕ್ತಿತ್ವದ ಇನ್ನೊಂದಷ್ಟು ಮಂದಿ ಆ ಸ್ಥಾನಕ್ಕೇರಿ ಬಿಡುತ್ತಾರೆ. ಬದಲಾವಣೆ ಬೇಕು ನಿಜ, ಆದರೆ ಅಂತಹ ಬದಲಾವಣೆಗಳು ಅನಿಶ್ಚಿತ ಮತ್ತು ಅಪ್ರಾಮಾಣಿಕತೆಯ ಮೌಲ್ಯಗಳಿಗೆ ದಾರಿ ಮಾಡಿಕೊಡುವಂತಹದ್ದಾಗಿರಬಾರದು.

ಒಂದು ವೇಳೆ ತೃತೀಯ ರಂಗ ರೂಪುಗೊಂಡಿತೆನ್ನಿ. ಅದರ ಮೇಲೆ ಅಪಾರವಾದ ಜವಾಬ್ದಾರಿ ಇರುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿಗಳು ಹಲವು ವರ್ಷಗಳಿಂದ ಹುಟ್ಟು ಹಾಕಿದ ಹಲವು ಗೋಜಲು, ಗೊಂದಲಗಳನ್ನೆಲ್ಲಾ ತಿಳಿಗೊಳಿಸಬೇಕಾಗುತ್ತದೆ. ಆ ಎರಡು ಪಕ್ಷಗಳು ಅಧಿಕಾರದಲ್ಲಿ ಉಳಿಯುವ ಏಕೈಕ ಉದ್ದೇಶದಿಂದ ಇಷ್ಟೂ ವರ್ಷಗಳಲ್ಲಿ ಸಮಾಜದ ಕೆಲವು ನೀಚತನಗಳನ್ನೆಲ್ಲಾ ರಾಜಕೀಯಕರಣಗೊಳಿಸುವಂತಹ ಅಪರಾಧ ಮಾಡಿವೆ. ತೋಳಬಲ ಮತ್ತು ಹಣದ ಬಲದಿಂದ ಈ ಪಕ್ಷಗಳು ಸಮಾಜದ ಮೌಲ್ಯಗಳನ್ನೆ ಹಾಳು ಮಾಡಿವೆ.

ಪ್ರಸಕ್ತ ಈಗ ತೃತೀಯ ರಂಗದಲ್ಲಿ ಕಾಣಿಸಿಕೊಳ್ಳುವ ಪಕ್ಷಗಳಲ್ಲೂ ಕೆಲವು ಗೊಂದಲಗಳಿವೆ. ತೃತೀಯ ಶಕ್ತಿ ಎನಿಸಲಿರುವ ಈ ಪಕ್ಷಗಳೆಲ್ಲವೂ ಹಿಂದೆ ಒಂದಲ್ಲ ಒಂದು ಸಲ ಕಾಂಗ್ರೆಸ್ ಅಥವಾ ಬಿಜೆಪಿಯ ಜತೆಗೆ ಕೈಜೋಡಿಸಿದ್ದವೇ ಆಗಿವೆ. ಇಂತಹ ಪರಿಸ್ಥಿತಿ ಇರುವಾಗ ತೃತೀಯ ರಂಗದ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಲೇವಡಿ ಮಾಡತೊಡಗಿರುವುದೊಂದು ವಿಪರ್ಯಾಸ. ಅದೇನೇ ಇರಬಹುದು, ಮುಂದಿನ ಚುನಾವಣೆಯ ನಂತರ ಸ್ವತಃ ಕಾಂಗ್ರೆಸ್ ಮತ್ತು ಬಿಜೆಪಿಯ ಪರಿಸ್ಥಿತಿಯೆ ಅಯೋಮಯ ಎಂಬಂತಾದರೂ ಅಚ್ಚರಿ ಏನಿಲ್ಲ.

ಇಂತಹ ರಾಜಕೀಯ ಪ್ರಕ್ರಿಯೆಗಳು ದೇಶದಾದ್ಯಂತ ನಡೆಯುತ್ತಿರುವಾಗ ಒಟ್ಟಾಭಿಪ್ರಾಯಗಳು ಏನೆಂಬ ಬಗ್ಗೆ ಪ್ರಶ್ನೆ ಧುತ್ತೆನ್ನುತ್ತಿದೆ.

ವಿಭಿನ್ನ ತತ್ವಗಳನ್ನು ಹೊಂದಿರುವ ಹಲವಾರು ಪಕ್ಷಗಳು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜತೆಗೆ ಹತ್ತು ಹಲವು ನಾಯಕರ ನಡುವಣ ವಾಗ್ವಾದಗಳೂ ಕಂಡು ಬರುತ್ತಿವೆ. ಇಂತಹ ವಿಭಿನ್ನ ವಿಚಾರಧಾರೆ, ನಾಯಕತ್ವಗಳ ನಡುವಿನಿಂದ ಮುಂದಿನ ಪ್ರಧಾನಿಯಾಗಿ ಯಾರು ಎದ್ದು ನಿಲ್ಲಬಹುದು ಎಂಬ ಸಂಗತಿಯೂ ಇದೀಗ ಕುತೂಹಲ ಕೆರಳಿಸಿದೆ. ಅಂತಹದ್ದೊಂದು ಮಹತ್ವದ ನಿರ್ಧಾರಕ್ಕೆ ಒಟ್ಟಭಿಪ್ರಾಯ ಎಂತಹದ್ದಿರಬಹುದು ಎಂಬ ಮಾತು ಸದ್ದು ಮಾಡುತ್ತಿದೆ. ಈ ದಿಸೆಯಲ್ಲಿ ಮುಲಾಯಂ ಸಿಂಗ್ ಅವರಂತೂ ಈಗಾಗಲೇ ಹಗಲುಗನಸಿನಲ್ಲಿ ಮುಳುಗೇಳುತ್ತಿದ್ದಾರೆ.

ತಮಿಳುನಾಡಿನ ಜಯಲಲಿತಾ, ಆಂಧ್ರಪ್ರದೇಶದ ತೆಲುಗು ದೇಶಂ ಮುಖಂಡ ಚಂದ್ರಬಾಬು ನಾಯ್ಡು ಕೂಡಾ ಅದೇ ರೀತಿ ಸಿಹಿಕನಸು ಕಾಣುತ್ತಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸದು. ಬಹುಜನ ಸಮಾಜ ಪಕ್ಷದ ಮಾಯಾವತಿ ಈಗಾಗಲೇ ಈ ನಿಟ್ಟಿನಲ್ಲಿ ತಮ್ಮ ಆಸೆಯನ್ನು ಬಹಿರಂಗ ಪಡಿಸಿರುವುದು ಎಲ್ಲರಿಗೂ ಗೊತ್ತಿರುವಂತಹದ್ದೆ. ಆದರೆ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿರುವ ಈ ನಾಡಿನ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಹೋಗುವಲ್ಲಿ ಇಂತಹ ಪ್ರಾದೇಶಿಕ `ಧೋರಣೆ'ಗಳನ್ನು ಹೊಂದಿರುವವರು ಅದೆಷ್ಟು ಯಶಸ್ವಿಯಾಗಬಹುದು ಎಂಬ ಚಿಂತೆ ನನ್ನನ್ನು ಕಾಡುತ್ತಲೇ ಇದೆ.

ಇಂತಹ ರಾಜಕೀಯ ವಾತಾವರಣದಲ್ಲಿ ಸಮಾನ ಮನಸ್ಕ ರಾಜಕಾರಣಿಗಳೆಲ್ಲಾ ಒಗ್ಗೂಡಿ ಅರ್ಹ ವ್ಯಕ್ತಿಯೊಬ್ಬರನ್ನು ಪ್ರಧಾನ ಮಂತ್ರಿ ಪಟ್ಟದಲ್ಲಿ ಕುಳ್ಳಿರಿಸಬೇಕು. ಅಂತಹ ವ್ಯಕ್ತಿಗೆ ಈ ದೇಶವನ್ನು ಸಮಗ್ರವಾಗಿ ನೋಡುವ ದೃಷ್ಟಿಕೋನ ಇರಬೇಕು. ವಿದೇಶ ವ್ಯವಹಾರ, ದೇಶದ ಆರ್ಥಿಕ ಅಭಿವೃದ್ಧಿ, ರಕ್ಷಣೆ ಇತ್ಯಾದಿಗಳೆಲ್ಲದರ ಬಗ್ಗೆ ಅಂತಹ ವ್ಯಕ್ತಿ ಆಳವಾದ ಜ್ಞಾನ ಹೊಂದಿರಬೇಕು ಮತ್ತು ವಿಶಾಲ ಮನೋಭಾವದವರಾಗಿರಬೇಕು. ಇವತ್ತು ಮಾನವ ಹಕ್ಕು, ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸ್ವಯಂ ಸ್ಫೂರ್ತಿಯಿಂದ ಕೆಲಸ ಮಾಡುತ್ತಿರುವಂತಹ ಸಾವಿರಾರು ಯುವಜನರು ದೇಶದಾದ್ಯಂತ ಕಂಡು ಬರುತ್ತಾರೆ.

ತಳಸ್ತರದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವಂತಹ ಇಂತಹ ಯುವಜನರು ತಮ್ಮ ಅನುಭವ, ಚಿಂತನೆಯನ್ನು ತೃತೀಯ ರಂಗಕ್ಕೆ ನೀಡಿ ಅದನ್ನು ಇನ್ನಷ್ಟೂ ಅರ್ಥಪೂರ್ಣಗೊಳಿಸಲು ಸಾಧ್ಯವಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಭಾ ವಲಯದಿಂದ ದೂರ ಇರುವ ಇಂತಹ ಯುವಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಕಮ್ಯುನಿಸ್ಟ್ ಪಕ್ಷಗಳು ಪ್ರಯತ್ನ ಪಡುತ್ತಲೇ ಇವೆ.

ಮಲ್ಲಿಕಾ ಸಾರಾಭಾಯ್ ಅವರು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ನನಗೆ ನೆನಪಾಗುತ್ತಿದೆ. ಎಲ್.ಕೆ. ಅಡ್ವಾಣಿಯವರ ವಿರುದ್ಧ ಅವರು ಆಗ ಸ್ಪರ್ಧಿಸಿದ್ದು, ಆ ಮೂಲಕ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ದೇಶಕ್ಕೆ ಸಂದೇಶ ರವಾನಿಸಲು ಪ್ರಯತ್ನಿಸಿದ್ದರು. ಕೆಲವು ಮಾನವ ಹಕ್ಕು ಹೋರಾಟಗಾರರೂ ಅದೇ ಹಾದಿಯಲ್ಲಿ ನಡೆದಿದ್ದರು. ಅಂತಹವರೆಲ್ಲಾ ಒಗ್ಗೂಡಿ ಲೋಕ್‌ನೀತಿ ಮಂಚ್ ಎಂಬ ರಾಜಕೀಯ ವೇದಿಕೆಯನ್ನು ಹುಟ್ಟು ಹಾಕಿದ್ದರು.

ಜನರ ಹಕ್ಕುಗಳಿಗಾಗಿ ಹೋರಾಟಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದ ಹಲವರು ಈ ವೇದಿಕೆಯ ಮೂಲಕ ಚುನಾವಣೆಗಳಿಗೆ ಸ್ಪರ್ಧಿಸಿದ್ದರು. ಈ ಮಂಚ್‌ಗೆ ಸೇರಲು ಇದ್ದ ಏಕೈಕ ಅರ್ಹತೆ ಎಂದರೆ ಆಸಕ್ತರಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳ ಬಗ್ಗೆ ನಂಬಿಕೆ ಇರಬೇಕು. ಮಲ್ಲಿಕಾ ಸಾರಾಭಾಯ್ ಸೇರಿದಂತೆ ಚುನಾವಣೆಗೆ ಸ್ಪರ್ಧಿಸಿದ್ದ ಯಾರೊಬ್ಬರೂ ಗೆದ್ದಿರಲಿಲ್ಲ. ಅದು ಅವರಲ್ಲಿ ಯಾರಿಗೂ ಬೇಸರ ಉಂಟು ಮಾಡಿರಲಿಕ್ಕೂ ಇಲ್ಲ, ಆ ದಿಸೆಯಲ್ಲಿ ಅವರೆಂದೂ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಆದರೆ ಹಣಬಲ ಮತ್ತು ಭುಜಬಲಗಳಿಂದ ಚುನಾವಣೆಗಳಲ್ಲಿ ಅಟ್ಟಹಾಸ ನಡೆಸುತ್ತಿದ್ದವರ ವಿರುದ್ಧ ಈ ತೆರನಾದ ಸ್ಪರ್ಧೆಯೇ ಒಂದು ಸಾಂಕೇತಿಕ ಪ್ರತಿಭಟನೆಯಂತೆ ಕಂಡು ಬಂದಿತ್ತು. ಈ ತೆರನಾದ ಸ್ಪರ್ಧೆಗಳು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ರಾಜಕೀಯ ರಂಗವನ್ನು ಶುದ್ದೀಕರಿಸುವ ಪ್ರಕ್ರಿಯೆಯಂತೆಯೂ ಕಂಡು ಬಂದಿವೆ. ಇಂತಹ ಆಂದೋಲನ ಹರಿಯುವ ನದಿಯಂತೆ ನಿರಂತರವಾದದ್ದು ಎಂದು ಅಂತಹ ಸ್ಪರ್ಧಿಗಳು ನಂಬಿದ್ದಾರೆ.

ಇವತ್ತು ಇಂತಹ ಮಂದಿಯ ಸಂಖ್ಯೆ ಕಡಿಮೆ ಇರಬಹುದು. ಆದರೆ ಇವರ ನಂಬಿಕೆಗಳು ಮತ್ತು ಸಂದೇಶಗಳು ಹೆಚ್ಚು ಹೆಚ್ಚಾಗಿ ಹರಡಿದರೆ ಜನಸಾಮಾನ್ಯರಲ್ಲಿ ಈ ದಿಸೆಯಲ್ಲಿ ಜಾಗೃತಿ ಮೂಡಿ ಈ ಆಂದೋಲನ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಸಾಧ್ಯವಿದೆ. ಗಾಂಧಿವಾದಿ ಜಯಪ್ರಕಾಶ್ ನಾರಾಯಣ ಅವರು 1977ರಲ್ಲಿ ಜನತಾ ಪಕ್ಷವನ್ನು ಹುಟ್ಟು ಹಾಕಿ ಚುನಾವಣೆಗೆ ಸ್ಪರ್ಧಿಸಿ ಲೋಕಸಭೆಯಲ್ಲಿ ಬಹುಮತ ಗಳಿಸಿದ್ದರು.

ಆ ಮೂಲಕ ಇಂದಿರಾಗಾಂಧಿ ನೇತೃತ್ವದ ಸರ್ಕಾರವನ್ನು ಬೀಳಿಸಿದ್ದನ್ನು ಹೇಗೆ ಮರೆಯಲು ಸಾಧ್ಯ. `ಲೋಕ್‌ನೀತಿ ಮಂಚ್' ನಂತಹ ಸಂಘಟನೆಗಳ ಜಾಗೃತಿ ಆಂದೋಲನಗಳಿಗೆ ಮುಂದೊಂದು ದಿನ ಫಲ ಸಿಗಲೂಬಹುದು. ಇಂತಹ ಚಳವಳಿಗಳು ಯೂರೊಪ್‌ನಲ್ಲಿರುವ `ಗ್ರೀನ್ಸ್' ಆಂದೋಲನದ ಮಾದರಿಯಲ್ಲಿ  ಯಶಸ್ಸು ಗಳಿಸಲು ಸಾಧ್ಯವಿದೆ ಎನ್ನುವುದು ನನ್ನ ಆಶಯ.

- ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT