ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರಿಕೆಯ ಧರ್ಮರಕ್ಷಕರು

Last Updated 3 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇದು ಬುದ್ಧನ ಜಾತಕ ಕಥೆಗಳಲ್ಲಿ ಒಂದು. ಒಂದು ಜನ್ಮದಲ್ಲಿ ಬೋಧಿಸತ್ವ ಇಲಿ­ಗಳ ರಾಜನಾಗಿ ಕಾಡಿನಲ್ಲಿದ್ದ.  ಅವನ ದೇಹ ಬಹಳ ದೊಡ್ಡದಾಗಿ ಹಂದಿ­ಯಂತೆ ಕಾಣುತ್ತಿತ್ತು. ಉಳಿದ ಇಲಿಗಳು ಅದಕ್ಕೆ ತುಂಬ ವಿಧೇಯವಾಗಿದ್ದವು.  ರಾಜ ಇಲಿ ತನ್ನ ಪರಿವಾರದೊಂದಿಗೆ ದೊಡ್ಡ ಬಿಲವನ್ನು ಮಾಡಿಕೊಂಡು ಸುಖವಾಗಿತ್ತು.

ಆ ಸಮಯದಲ್ಲಿ ಕಾಡಿನಲ್ಲಿ ಒಂದು ನರಿಯಿತ್ತು. ಒಂದು ದಿನ ಕಾಡಿನಲ್ಲಿ ಬೆಂಕಿ ಹತ್ತಿಕೊಂಡಾಗ ಓಡಲಾರದೆ ಮರದ ಕೆಳಗೆ ಸಿಕ್ಕಿಹಾಕಿಕೊಂಡಿತ್ತು. ಆಗ ಅದರ ದೇಹದ ಕೂದಲುಗಳೆಲ್ಲ ಸುಟ್ಟು ಹೋದವು. ಆದರೆ ತಲೆಯ ಮೇಲೆ ಮಾತ್ರ ಒಂದು ಮುಷ್ಟಿಯಷ್ಟು ಕೂದಲು ಚಂಡಿಕೆಯಂತೆ ಉಳಿದುಕೊಂಡಿತು.  ಅದು ಒಂದು ವಿಚಿತ್ರ ಪ್ರಾಣಿಯಂತೆ ಕಾಣುತ್ತಿತ್ತು. ನೀರು ಕುಡಿಯಲು ಸರೋ­ವರಕ್ಕೆ ಹೋದಾಗ ತನ್ನ ಮುಖವನ್ನೂ, ಚಂಡಿಕೆಯನ್ನು ನೋಡಿಕೊಂಡಿತು. ಅದರ ನರಿ ಬುದ್ಧಿ ಎಲ್ಲಿ ಹೋದೀತು?  ಈ ಹೊಸರೂಪವನ್ನು ಸರಿಯಾಗಿ ಬಳಸಿಕೊ­ಳ್ಳ­ಬೇಕೆಂದು ಯೋಜನೆ ಹಾಕಿತು. ಒಂದು ದಿನ ಈ ಇಲಿಗಳು ಬಿಲದಲ್ಲಿ ಹೋಗುವು­ದನ್ನು ಕಂಡು ಹತ್ತಿರದಲ್ಲಿಯೇ ಸೂರ್ಯನಿಗೆ ಮುಖಮಾಡಿ, ಬಾಯಿತೆರೆ­ದುಕೊಂಡು ಒಂದೇ ಕಾಲಿನ ಮೇಲೆ ನಿಂತುಕೊಂಡಿತು.

ಆಹಾರಕ್ಕಾಗಿ ಅಲೆದಾಡುತ್ತಿದ್ದ ಬೋಧಿಸತ್ವ ಈ ವಿಚಿತ್ರ ಪ್ರಾಣಿಯನ್ನು ನೋಡಿ, ‘ಸ್ವಾಮಿ, ನೀವಾರು?’ ಎಂದು ಕೇಳಿತು. ಆಗ ಆ ನರಿ, ‘ನನ್ನ ಹೆಸರು ಅಗ್ನಿ ಭಾರ­ದ್ವಾಜ’ ಎಂದು ಗಂಭೀರವಾಗಿ ಹೇಳಿತು. ‘ನೀವು ಒಂದೇ ಕಾಲಿನ ಮೇಲೆ ಏಕೆ ನಿಂತು­­­­ಕೊಂಡಿದ್ದೀರಿ?’ ಎಂದು ಬೋಧಿಸತ್ವ ಕೇಳಿದರೆ, ‘ನಾಲ್ಕೂ ಕಾಲುಗಳನ್ನು ಊರಿ­ದರೆ ಭೂದೇವಿಗೆ ಭಾರವಾಗುತ್ತದೆಂದು ಒಂದೇ ಕಾಲ ಮೇಲೆ ನಿಂತಿದ್ದೇನೆ’ ಎಂದಿತು.

‘ಬಾಯಿಯನ್ನು ಏಕೆ ತೆರೆದುಕೊಂಡಿದ್ದೀರಿ?’ ಎಂದು ಕೇಳಿದರೆ, ‘ನಾನು ಗಾಳಿಯನ್ನಲ್ಲದೇ ಬೇರೇನನ್ನೂ ಸೇವಿಸುವುದಿಲ್ಲ’ ಎಂದಿತು. ‘ಹೀಗೇಕೆ ಪೂರ್ವಕ್ಕೆ ಮುಖ ಮಾಡಿ ನಿಂತಿದ್ದೀರಿ?’ ಎಂದರೆ, ‘ನಾನು ಸದಾ ಸೂರ್ಯದೇವನ ಚಿಂತನೆ­ಯಲ್ಲೇ ಇರುತ್ತೇನೆ, ಅವನಿಗೇ ನಮಸ್ಕಾರ ಮಾಡುತ್ತಿರುತ್ತೇನೆ’ ಎಂದಿತು ವಿನಯದಿಂದ.

ಆಗ ರಾಜ ಇಲಿಗೆ ಈ ಪ್ರಾಣಿ ಅತ್ಯಂತ ಧಾರ್ಮಿಕವಾದದ್ದು ಎಂಬ ನಂಬಿಕೆ ಬಂದಿತು. ಈ ಮಾತನ್ನು ತನ್ನ ಪರಿವಾರಕ್ಕೆಲ್ಲ ಹೇಳಿದಾಗ ಅವೆಲ್ಲ ಇಲಿಗಳೂ ತಾ ಮುಂದು, ನಾ ಮುಂದು ಎಂದು ಅಗ್ನಿ ಭಾರದ್ವಾಜನೆಂಬ ಈ ಪ್ರಾಣಿಯ ಸೇವೆಗೆ ನಿಂತವು. ಇವು ಸೇವೆಯನ್ನು ಮುಗಿಸಿಕೊಂಡು ಹೊರಡುವಾಗ ನರಿ ಕೊನೆಯ ಇಲಿಯನ್ನು ಗಪ್ಪೆಂದು ಹಿಡಿದು ಬಾಯಿಯಲ್ಲಿ ಹಾಕಿಕೊಂಡು ನುಂಗಿ ಬಾಯಿ ಒರೆಸಿಕೊಂಡು ನಿಲ್ಲುತ್ತಿತ್ತು. ಕೆಲವು ದಿನಗಳು ಕಳೆದ ಮೇಲೆ ರಾಜನಿಗೆ ಸಂಶಯ ಬಂದಿತು.

ಮೊದಲು ಬಿಲದಲ್ಲಿ ನಿಲ್ಲಲೂ ಸ್ಥಳವಿರುತ್ತಿರಲಿಲ್ಲ. ಈಗ ಸಾಕಷ್ಟು ವಿರಳವಾಗಿದೆ. ಹಾಗಾದರೆ ಇಲಿಗಳು ಹೇಗೆ ಕಡಿಮೆಯಾದವು ಎಂದು ಚಿಂತಿಸಿತು.  ಒಂದು ಕ್ಷಣ ಅಗ್ನಿ ಭಾರದ್ವಾಜನ ಮೇಲೂ ಸಂಶಯ ಬಂದಿತು. ಅದಕ್ಕಾಗಿ ಒಂದು ದಿನ ತಾನು ಆ ಅಗ್ನಿ ಭಾರದ್ವಾಜ ಮುನಿಯ ಸೇವೆಗೆ ಹೋಗದೇ ಮರ ಏರಿ ಕುಳಿತಿತು. ಉಳಿದ ಇಲಿಗಳು ಸೇವೆಯನ್ನು ಮುಗಿಸಿ ಬರುವಾಗ ಕೊನೆಯ ಇಲಿಯನ್ನು ನುಂಗಿದ್ದನ್ನು ಕಂಡಿತು. ಮೊದಲೇ ಬಲಿಷ್ಠವಾದ ರಾಜ ಇಲಿ ಮರದಿಂದಲೇ ನರಿಯ ಮೇಲೆ ಧುಮುಕಿ ಅದರ ಕತ್ತನ್ನು ಕಚ್ಚಿ ಕೊಂದುಹಾಕಿತು. ನಂತರ ಬರೀ ಚಿಹ್ನೆಗಳಿಗೆ ಮಾರುಹೋಗಿ ಯಾರನ್ನೂ ನಂಬದಿರಲು ತೀರ್ಮಾನಿಸಿತು.

ಇದು ಎರಡು ಸಾವಿರ ವರ್ಷಗಳಿಗೂ ಹಿಂದಿನ ಕಥೆ. ಅಷ್ಟು ಹಳೆಯದಾದರೂ ನಿನ್ನೆ ಮೊನ್ನೆ ನಡೆದ ಘಟನೆಯಂತೆ ಕಾಣುತ್ತದಲ್ಲವೇ? ಇಂದೂ ಅಲ್ಲಲ್ಲಿ ಕಾಣುವ, ಕೇಳುವ, ಓದುವ ವಿಷಯಗಳಲ್ಲಿ ಈ ತರಹದ ಭ್ರಾಂತಿಗಳನ್ನು ಉಂಟುಮಾಡಿ ಜನರನ್ನು ಮೋಸಮಾಡುವ ತೋರಿಕೆಯ ಧರ್ಮರಕ್ಷಕರಿದ್ದಾರೆಂಬುದು ಸರ್ವವಿದಿತ. ನಾವು ಜಾಗ್ರತರಾಗಿದ್ದಷ್ಟೂ ನಮಗೇ ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT