ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ರಾಜಕೀಯ, ಮಂದ ಅರ್ಥಲಯ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತದ ಅರ್ಥವ್ಯವಸ್ಥೆ ಎಂದರೆ ಅದು ಹಾಗೇನೇ. ಹೇಗೆ ಎಂದರೆ ಅದೊಂದು ದೈತ್ಯನಂತೆ. ದೈತ್ಯ ಎನ್ನುವ ಪದ ಬಳಸಿದ್ದು ಎರಡರ್ಥದಲ್ಲಿ. ಮೊದಲನೆಯದಾಗಿ ಅದರ ಅಗಾಧ ಗಾತ್ರ. ಈ ಗಾತ್ರವೇ ಅದರ ಶಕ್ತಿ. ಅದನ್ನು ವಿಚಲಿತಗೊಳಿಸುವುದು ಅಷ್ಟೊಂದು ಸುಲಭವಲ್ಲ. ಸಾಮಾನ್ಯ ಆರ್ಥಿಕ ಬಿರುಗಾಳಿಗೆಲ್ಲಾ ಅದು ಮಿಸುಕಾಡುವುದಿಲ್ಲ. ಇಡೀ ಜಗತ್ತಿನ ಆರ್ಥಿಕತೆ ಹಿಂಜರಿತಕ್ಕೊಳಗಾಗಿದ್ದ ಸಂದರ್ಭಗಳಲ್ಲೂ ಅದು ತೀರಾ ತಗ್ಗಲಿಲ್ಲ, ಬಗ್ಗಲಿಲ್ಲ. ಹಿಂದೆ, ಅಂದರೆ ಆರ್ಥಿಕ ಉದಾರೀಕರಣದ ಪೂರ್ವದಲ್ಲಿ ಭಾರತದ ಆರ್ಥಿಕತೆಯನ್ನು ‘ನಿದ್ರಿಸುತ್ತಿರುವ ಆನೆ’ ಅಂತ ಕರೆದವರುಂಟು. ಇರಲಿ. ಭಾರತದ ಆರ್ಥಿಕತೆಯ ಬಗ್ಗೆ ದೈತ್ಯ ಎನ್ನುವ ಪದ ಬಳಸಿದ್ದಕ್ಕೆ ಎರಡನೆಯ ಕಾರಣ ಸಾಮಾನ್ಯವಾಗಿ ಎಲ್ಲ ಅರ್ಥವ್ಯವಸ್ಥೆಗೂ ಅನ್ವಯವಾಗುವಂತಹದ್ದು. ಅರ್ಥ ಜಗತ್ತು ಅಪ್ಪಟ ವ್ಯವಹಾರದ ಜಗತ್ತು. ಅಲ್ಲಿ ಕರುಣೆ, ಭಾವನೆ, ಮಮತೆ, ಸಮತೆ ಇತ್ಯಾದಿಗಳಿಗೆಲ್ಲಾ ಸ್ಥಾನವಿಲ್ಲ. ಹಣ, ಹಣ ಮತ್ತು ಹಣ. ಋಣ, ಋಣ ಮತ್ತು ಋಣ. ಎಲ್ಲವೂ ಕಡ್ಡಿ ಮುರಿದಂತೆ. ಇದೆ ಅಥವಾ ಇಲ್ಲ.

ಅರ್ಥವ್ಯವಸ್ಥೆಯ ದೈತ್ಯತ್ವದ ಈ ಎರಡು ಮುಖಗಳನ್ನು ಅರ್ಥ ಮಾಡಿಕೊಂಡರೆ ಅದರ ಕುರಿತಾದ ಇನ್ನೊಂದು ಸತ್ಯ ನಮ್ಮ ಅರಿವಿಗೆ ಬರುತ್ತದೆ. ಯಾವುದೇ ದೇಶವಾದರೂ ಸರಿ ಅದಕ್ಕೆ ಅದರ ಅರ್ಥವ್ಯವಸ್ಥೆಯ ಕುರಿತು ಸಂಪೂರ್ಣ ತಿಳಿದಿರುವುದಿಲ್ಲ. ಏನು ಮಾಡಿದರೆ ಅರ್ಥವ್ಯವಸ್ಥೆ ಬೆಳೆಯುತ್ತದೆ, ಏನು ಮಾಡಿದರೆ ಅದು ಕುಸಿಯುತ್ತದೆ ಎನ್ನುವುದನ್ನು ಒಂದು ಮಿತಿಯಾಚೆಗೆ ಯಾವ ದೇಶಕ್ಕೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಯಾವುದರ ಪರಿಣಾಮ ಇನ್ಯಾವುದರ ಮೇಲೋ ಎಷ್ಟು ಆಗುತ್ತದೆ ಎಂದು ಇದಮಿತ್ಥಂ ಎಂದು ಸರ್ವಸಮ್ಮತವಾಗಿ ಯಾರಿಗೂ ಲೆಕ್ಕಹಾಕಲು ಬರುವುದಿಲ್ಲ. ಅಮೆರಿಕ ಜಗತ್ತಿಗೆಲ್ಲಾ ದೊಡ್ಡಣ್ಣನಾಗಿ ಮೆರೆಯುತ್ತಿದ್ದ ಕಾಲದಲ್ಲೂ ತನ್ನದೇ ಅರ್ಥ ವ್ಯವಸ್ಥೆಯ ಮೇಲೆ ಬಾರಿ ಬಾರಿ ನಿಯಂತ್ರಣ ಕಳೆದುಕೊಂಡು ದೊಡ್ಡ ಮಟ್ಟದ ಆರ್ಥಿಕ ಕುಸಿತಗಳನ್ನು ಅನುಭವಿಸಿತ್ತು. ಅರ್ಥಜಗತ್ತು ಮನುಷ್ಯನ ಸೃಷ್ಟಿ. ಆದರೆ ಅದು ಸದಾ ಮನುಷ್ಯನ ಅಧೀನದಲ್ಲಿರುವುದಿಲ್ಲ. ಅದು ಮನುಷ್ಯನಿಗೆ ಎಂದೆಂದಿಗೂ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಭಾರೀ ಆರ್ಥಿಕ ಭರವಸೆಗಳನ್ನೆಲ್ಲಾ ಬಾರಿ ಬಾರಿ ನೀಡುವ ನಾಯಕರು ಸದಾ ನೆನಪಿನಲ್ಲಿಡಬೇಕಾದ ಸತ್ಯ ಇದು.

ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ದರ ಕುಸಿಯುತ್ತಿದೆ. ಈ ದರವನ್ನು ಕಾಲು ವರ್ಷಕ್ಕೊಮ್ಮೆ ಅಂದರೆ ಮೂರು ತಿಂಗಳಿಗೊಮ್ಮೆ ಲೆಕ್ಕ ಹಾಕಲಾಗುತ್ತದೆ. ಆರ್ಥಿಕ ಬೆಳವಣಿಗೆಯ ದರ ಎಡೆಬಿಡದೆ ಕುಸಿಯುತ್ತಿರುವುದನ್ನು ಕಳೆದ ಆರು ತ್ರೈಮಾಸಿಕ ಲೆಕ್ಕಾಚಾರಗಳು ಸಾರಿ ಹೇಳುತ್ತಿವೆ. ಆರಂಭದಲ್ಲಿ ಅದರ ಲೆಕ್ಕಾಚಾರಗಳ ಕುರಿತಾದ ಗೊಂದಲವಿತ್ತು. ಈಗ ಹಾಗೇನಿಲ್ಲ. ಅಧಿಕೃತ ಸಂಸ್ಥೆಗಳೇ ಸಾರುತ್ತಿರುವಂತೆ ಆರ್ಥಿಕ ಬೆಳವಣಿಗೆಯ ದರ ‘ನೈಜ ಕುಸಿತ’ ವನ್ನು ಅನುಭವಿಸುತ್ತಿದೆ. ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ ಎಂಬ ಹೆಗ್ಗಳಿಕೆ ಕೈಜಾರಿದೆ.

ಕೆಲವರು ಇದನ್ನು ನೋಟು ರದ್ದತಿಯ ಪರಿಣಾಮ ಎನ್ನುತ್ತಾರೆ. ಇರಬಹುದು. ಇನ್ನು ಕೆಲವರು ಇದು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಜಾರಿಗೆ ತಂದ ಬದಲಾವಣೆಯ (ಜಿ.ಎಸ್.ಟಿ.) ಪರಿಣಾಮ ಎನ್ನುತ್ತಿದ್ದಾರೆ. ಇರಬಹುದು. ಬೆಳವಣಿಗೆಯ ದರ ಕುಸಿದಿದ್ದಕ್ಕೆ ನೋಟು ರದ್ದತಿ ಮತ್ತು ಹೊಸ ತೆರಿಗೆ ವ್ಯವಸ್ಥೆ ಕಾರಣವಾಗಿದ್ದರೆ ಅದರಲ್ಲಿ ದೊಡ್ಡ ಮಟ್ಟಿಗೆ ಚಿಂತಿಸುವಂಥದ್ದು ಏನೂ ಇಲ್ಲ. ಇವೆರಡೂ ತಾತ್ಕಾಲಿಕ ಅಡಚಣೆಗಳು. ನಿಧಾನವಾಗಿ ಸರಿ ಹೋಗುವಂತಹವುಗಳು. ಆದರೆ ಇವೆರಡೇ ಕಾರಣಗಳಿಗೆ ಆರ್ಥಿಕತೆಯ ಬೆಳವಣಿಗೆ ಕುಂಟುತ್ತಿದೆ ಅಂತ ಯಾರಿಗೂ ಖಾತ್ರಿ ಇಲ್ಲ. ಇನ್ನು ಸುಮಾರು ಒಂದೂವರೆ ತಿಂಗಳು ಕಳೆದರೆ ನೋಟು ರದ್ದತಿಗೆ ವರ್ಷ ತುಂಬುತ್ತದೆ. ಅದಕ್ಕೆ ಮೊದಲೇ ಆರ್ಥಿಕ ಬೆಳವಣಿಗೆಯ ವಿಳಂಬ ಲಯ ಪ್ರಾರಂಭವಾಗಿತ್ತು. ಅಂದರೆ ಕಾರಣಗಳು ಇವೆರಡೇ ಅಲ್ಲ ಎಂದಾಯಿತು. ಇವೆರಡು ಹೆಚ್ಚೆಂದರೆ ಗಾಯದ ಮೇಲೆ ಎಳೆದ ಬರೆಗಳು ಅಂತ ಹೇಳಬಹುದೇನೋ. ಆದರೆ ಬರೆ ಎಳೆಯುವುದು ಇಲ್ಲಿ ಒಂದು ಚಿಕಿತ್ಸೆ ತಾನೇ?

ಏನೇ ಇರಲಿ. ಸದ್ಯಕ್ಕೆ ನೋಟು ಅಮಾನ್ಯತೆ ಮತ್ತು ಜಿ.ಎಸ್.ಟಿ.ಗಳ ವಿಷಯಗಳಾಚೆಗೆ ಯಾವ ಕಾರಣಕ್ಕಾಗಿ ಅರ್ಥ ವ್ಯವಸ್ಥೆ ಸೊರಗಿತು ಎನ್ನುವ ಪ್ರಶ್ನೆ ಕೇಳೋಣ. ಈ ಪ್ರಶ್ನೆಗೆ ಖಾಸಗಿ ಬಂಡವಾಳ ಹರಿದು ಬರುತ್ತಿಲ್ಲ ಎನ್ನುವ ಉತ್ತರ ಸಿಗುತ್ತದೆ. ನಿರ್ಯಾತ ಹೆಚ್ಚುತ್ತಿಲ್ಲ, ಆಯಾತ ತಗ್ಗುತ್ತಿಲ್ಲ ಎನ್ನುವ ಉತ್ತರ ಸಿಗುತ್ತದೆ. ದೇಶದಲ್ಲಿ ಎರಡು ರೀತಿಯ ಬರವಿತ್ತು. ಒಂದು ಪ್ರಾಕೃತಿಕ ಬರ. ಇನ್ನೊಂದು ಖಾಸಗಿ ಬಂಡವಾಳ ಹೂಡಿಕೆಯ ಬರ. ಮಳೆ ಬಂದಿದೆ. ಹೆಚ್ಚಿನ ಜಲಾಶಯಗಳಿಗೆ ನೀರು ಹರಿದಿದೆ. ಪ್ರಾಕೃತಿಕ ಬರ ಅಲ್ಪಸ್ವಲ್ಪ ನೀಗಿದೆ. ಖಾಸಗಿ ಬಂಡವಾಳ ಮಾತ್ರ ಇನ್ನೂ ಹರಿಯುತ್ತಿಲ್ಲ. ಅರೆರೆ ಇದ್ಯಾಕೆ ಹೀಗೆ?

ಅಂಕಿ-ಸಂಖ್ಯೆಗಳನ್ನು ಪುಂಖಾನುಪುಂಖವಾಗಿ ನೀಡಬಹುದು. ಅದು ಬೇಡ. ಪ್ರಜಾಕೀಯದ ಭಾಷೆಯಲ್ಲಿ ಇನ್ನೂ ಕೆಲ ಆರ್ಥಿಕ ವಿಚಾರಗಳನ್ನು ನೋಡೋಣ. ಅವರ ಕಾಲದಲ್ಲಿ ಬೆಲೆ ಏರಿತು. ಪೆಟ್ರೋಲ್ ಬೆಲೆ, ಅಕ್ಕಿ ಬೆಲೆ, ತರಕಾರಿ ಬೆಲೆ. ಇವರ ಕಾಲದಲ್ಲೂ ಬೆಲೆಗಳು ಏರುತ್ತಿವೆ. ಪೆಟ್ರೋಲ್ ಬೆಲೆ, ಅಕ್ಕಿ ಬೆಲೆ, ತರಕಾರಿ ಬೆಲೆ. ಡಾಲರಿನೆದುರು ರೂಪಾಯಿ ಮೌಲ್ಯ ಆಗಲೂ ಏರಿದೆ, ಇಳಿದಿದೆ. ಈಗಲೂ ಏರುತ್ತಿದೆ, ಇಳಿಯುತ್ತಿದೆ. ಆಗ ನಿರುದ್ಯೋಗವಿತ್ತು. ಅವರ ಕಾಲಕ್ಕೆ ಉದ್ಯೋಗ ಖಾತ್ರಿ ಯೋಜನೆ ಬಂತು. ಇವರ ಕಾಲಕ್ಕೆ ಉದ್ಯೋಗ ಖಾತ್ರಿ ಯೋಜನೆಯೂ ಮುಂದುವರಿದಿದೆ, ನಿರುದ್ಯೋಗದ ಹೆಚ್ಚಳವೂ ಮುಂದುವರಿದಿದೆ. ಅವರ ಕಾಲದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇವರ ಕಾಲದಲ್ಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಕಾಲದಲ್ಲಿ ರೈತರು ತಮ್ಮ ತಮ್ಮ ಹಳ್ಳಿಗಳಲ್ಲಿ ಕೊರಳಿಗೆ ಕುಣಿಕೆ ಬಿಗಿಯುತ್ತಿದ್ದವರು ಇವರ ಕಾಲಕ್ಕೆ ‘ನಾವು ಸಾಯುತ್ತಿರುವುದು ವೈಯಕ್ತಿಕ ಕಾರಣಗಳಿಗಲ್ಲ’ ಎಂದು ಸಾರಿ ಹೇಳಲೋ ಎಂಬಂತೆ ದೆಹಲಿಯ ಬೀದಿಯಲ್ಲಿ ಧರಣಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ- ಜತೆಗೆ ದೇಶದ ಗಮನ ಸೆಳೆಯಲು ಬೆಚ್ಚಿಬೀಳಿಸುವ ಪ್ರತಿಭಟನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ಅವರ ಕಾಲದಲ್ಲಿ ಹೀಗೆಲ್ಲಾ ಆಗುತ್ತಿದ್ದಾಗ ನೀತಿನಿರೂಪಣೆಗೆ ಲಕ್ವ ಹೊಡೆದಿದೆ (policy paralysis) ಎಂದು ಇವರು ತಾರಕಸ್ಥಾಯಿಯಲ್ಲಿ ದೇಶಕ್ಕೆ ಸಾರಿ ಹೇಳುತ್ತಿದ್ದರು. ಇಂದು ಇವರು ಅಧಿಕಾರದಲ್ಲಿ ಗಟ್ಟಿಯಾಗಿ ಬೇರೂರಿದ್ದಾರೆ. ಈಗ ಲಕ್ವ ಹೋಗಿದೆ. ಎಲ್ಲಾ ಸಮಸ್ಯೆಗಳಿಗೆ ತಾರಕ ಮಂತ್ರಗಳಾಗಿ ನೀತಿಗಳೆಲ್ಲಾ ಪಟಪಟನೆ ಪುಟಿದೇಳುತ್ತಿವೆ. ಹಳೆಯ ಚಿಂತನೆಯ ಯೋಜನಾ ಆಯೋಗ ಹೋಗಿದೆ. ‘ಹೊಚ್ಚ ಹೊಸ’ ಚಿಂತನೆಯ ನೀತಿ ಆಯೋಗ ಬಂದಿದೆ. ವಿದೇಶಿ ಮಾದರಿಗಳು ಹೋಗಿವೆ. ಅಪ್ಪಟ ದೇಸಿ ಮಾದರಿಗಳು ಚಿಗುತುಕೊಂಡಿವೆ. ಇಷ್ಟೆಲ್ಲಾ ಆಗಿಯೂ ಅರ್ಥ ವ್ಯವಸ್ಥೆ ಮಾತ್ರ ಯಾಕೆ ಸೊರಗಿದೆ, ಯಾಕೆ ಕುಂಟುತ್ತಿದೆ? ಯಾರಿಗೂ ಗೊತ್ತಿಲ್ಲ.

ಹಿಂದಿನ ಸರ್ಕಾರವನ್ನು ಮುನ್ನಡೆಸುತ್ತಿದ್ದ ವ್ಯಕ್ತಿಗೆ ಅರ್ಥವಿಚಾರಗಳು ಅಂಗೈನಲ್ಲಿದ್ದ ನೆಲ್ಲಿಕಾಯಿ. ಈಗ ಸರ್ಕಾರ ನಡೆಸುತ್ತಿರುವ ನಾಯಕನಿಗೆ ಅರ್ಥವಿಚಾರಗಳು ಬಾಯಲ್ಲಿರುವ ನೆಲ್ಲಿಕಾಯಿ. ಅವರ ಸಹಾಯಕ್ಕೊಬ್ಬರು ಪ್ರಾಯೋಗಿಕ ಅರ್ಥಶಾಸ್ತ್ರದಲ್ಲಿ ಅನುಭವ ಪಡೆದ ಕಾನೂನು ಪರಿಣತರು ಅರ್ಥಮಂತ್ರಿಯಾಗಿದ್ದರು. ಇವರ ಜತೆಗೂ ಅಂತಹವರೇ ಒಬ್ಬರಿದ್ದಾರೆ. ಆದರೇನಾಯಿತು? ಎಷ್ಟೇ ದೊಡ್ಡ ಅರ್ಥಶಾಸ್ತ್ರಜ್ಞ ಅರ್ಥವ್ಯವಸ್ಥೆಯನ್ನು ಮುನ್ನಡೆಸಲಿ, ಅವರ ಸಹಾಯಕ್ಕೆ ಅದೆಂತಹ ಸಾಣೆಹಿಡಿದ ಮೆದುಳಿನ ನಿಷ್ಣಾತರೇ ಇರಲಿ, ಅರ್ಥ-ವ್ಯವಸ್ಥೆಗೆ ಮೂಗುದಾರ ಹಾಕಿ ರಾಜಕೀಯದಲ್ಲಿ ಉಳುಮೆ ಮಾಡುವುದು ಮಾತ್ರ ಕಷ್ಟ ಎಂದು ಮತ್ತೊಮ್ಮೆ ಮಾತ್ರ ಸಾಬೀತಾಯಿತು.

ಆರ್ಥಿಕತೆಯನ್ನು ಸುಸ್ಥಿರವಾಗಿ ಬೆಳೆಸುವ, ಮಾನವೀಯವಾಗಿ ಪಳಗಿಸುವ ಸೂತ್ರ ಯಾವ ದೇಶದಲ್ಲೂ, ಯಾವ ಕಾಲದಲ್ಲೂ ಯಾರಿಗೂ ಒಲಿದಿಲ್ಲ ಅನ್ನಿಸುತ್ತದೆ. ಒಲಿದಿಲ್ಲ ಎನ್ನುವುದು ಸಮಸ್ಯೆಯಲ್ಲ. ಒಲಿದಿಲ್ಲ ಎನ್ನುವುದು ತಿಳಿದಿಲ್ಲ ಎನ್ನುವುದು ಸಮಸ್ಯೆ. ಆದುದರಿಂದ ಎಲ್ಲರೂ ಏನೇನೋ ಭರವಸೆ ನೀಡುತ್ತಾರೆ. ಏನೇನೂ ಮಾಡುತ್ತಾರೆ. ಏನೇನೋ ಮಾಡಿದ್ದರಿಂದ ಕೆಲವೊಮ್ಮೆ ಏನೇನೂ ಒಳ್ಳೆಯದಾಗುತ್ತದೆ, ಕೆಲವೊಮ್ಮೆ ಏನೇನೋ ಕೆಟ್ಟದ್ದೂ ಆಗುತ್ತದೆ. ಒಳ್ಳೆಯದಾದ ಕಾಲಕ್ಕೆ ಆಡಳಿತ ನಡೆಸಿದವ ಜಾಣ, ಕೆಟ್ಟುಹೋದ ಕಾಲಕ್ಕೆ ಆಡಳಿತ ನಡೆಸುತ್ತಿದ್ದವ ಕೋಣ. ಎಲ್ಲವೂ ಆಗಿ ಹೋದ ಮೇಲೆ ಸಿದ್ಧಾಂತಗಳ ದಿಬ್ಬಣ. ಆಹಾ ಅರ್ಥಶಾಸ್ತ್ರವೇ!

ಅರವತ್ತು ವರ್ಷಗಳಲ್ಲಿ ಅವರು ನಡೆಸಿದ ಆರ್ಥಿಕ ದುರಾಡಳಿತವನ್ನು ಸರಿಪಡಿಸಲು ಸಮಯ ಬೇಡವೇ ಎನ್ನುವ ಪ್ರಶ್ನೆಯನ್ನು ಈಗ ಆಡಳಿತ ನಡೆಸುವವರು ಆಗಾಗ ಕೇಳುತ್ತಿದ್ದಾರೆ. ಅದು ಸರಿಯಾದ ಪ್ರಶ್ನೆ. ಆ ಪ್ರಶ್ನೆಯನ್ನು ಇನ್ನೂ ಸರಿಯಾಗಿ ಪರಿಶೀಲಿಸುವ. ಕೇಂದ್ರದಲ್ಲಿ ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ಅವಧಿ ಕೊನೆಗೊಳ್ಳುವ ಹೊತ್ತಿಗೆ ಅಂದರೆ 2019ಕ್ಕೆ ಸ್ವತಂತ್ರ ಭಾರತಕ್ಕೆ 72 ವರ್ಷ ತುಂಬುತ್ತದೆ. ಈ ಅವಧಿಯಲ್ಲಿ ಕಾಂಗ್ರೆಸ್ ಸುಮಾರು 54 ವರ್ಷ ಆಡಳಿತ ನಡೆಸಿದೆ. ಕಾಂಗ್ರೆಸ್ಸೇತರ ಸರ್ಕಾರ ಆಡಳಿತ ನಡೆಸಿದ್ದು ಸುಮಾರು 16 ವರ್ಷ. ಈ ಸರ್ಕಾರದ ಅವಧಿ ಮುಗಿಯುವ ವೇಳೆಗೆ 18 ವರ್ಷಗಳ ಕಾಲ ಕಾಂಗ್ರೆಸ್ಸೇತರ ಸರ್ಕಾರಗಳು ಆಡಳಿತ ನಡೆಸಿರುತ್ತವೆ. ಅಂದರೆ ಅಲ್ಲಿಗೆ ಒಟ್ಟು ಅವಧಿಯ ಮುಕ್ಕಾಲು ಭಾಗ ಕಾಂಗ್ರೆಸ್ ಆಡಳಿತ, ಕಾಲು ಭಾಗ ಕಾಂಗ್ರೆಸ್ಸೇತರ ಆಡಳಿತ ಎಂದಾಯಿತು. ಕಾಗ್ರೇಸ್ಸೇತರ ಆಡಳಿತದಲ್ಲಿ ಬಿಜೆಪಿಯೇ ಪ್ರಧಾನ. ಆದುದರಿಂದ ನ್ಯಾಯಸಮ್ಮತವಾಗಿ ಈ ತನಕದ ಸಾಧನೆ ಮತ್ತು ವೈಫಲ್ಯಗಳನ್ನು ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಪಕ್ಷಗಳು 3:1ರ ಅನುಪಾತದಲ್ಲಿ ಹಂಚಿಕೊಳ್ಳಬೇಕಾಗುತ್ತದೆ. ಅವರು ಮಾಡಿದ್ದನ್ನು ಸರಿಪಡಿಸಲು ಸಮಯ ಬೇಕು ಎನ್ನುವಷ್ಟು ಅಲ್ಪಾವಧಿಯದ್ದೇನಲ್ಲ ಭಾರತದ ಕಾಂಗ್ರೆಸ್ಸೇತರ ಆಡಳಿತಾವಧಿ.
ಅರ್ಥ ವಿಚಾರಗಳಲ್ಲಿ ಕಾಣಿಸಿಕೊಳ್ಳುವ ಅವಾಂತರಗಳಿಗೂ ಚುನಾವಣೆಯಲ್ಲಿ ಜನ ವೋಟು ಹಾಕುವುದಕ್ಕೂ ನೇರ ನೇರಾ ಸಂಬಂಧವಿಲ್ಲ.

2014ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗಳಿಸಿದ ಯಶಸ್ಸಿಗೆ ಅರ್ಧಕ್ಕರ್ಧ ಕಾರಣ ಅದು ಜನರ ಮನಸ್ಸಿನಲ್ಲಿ ಬಿತ್ತಿದ ಆರ್ಥಿಕ ಭರವಸೆಗಳು ಎಂಬುದೇನೋ ಸರಿ. ಆರ್ಥಿಕ ಪರಿಸ್ಥಿತಿ ಹೀಗೇ ಮುಂದುವರಿದು ಆ ಭರವಸೆಗಳೆಲ್ಲಾ ಈಡೇರದೆ ಉಳಿದರೂ ಅದು ಆಳುವ ಪಕ್ಷದ ರಾಜಕೀಯ ದುರದೃಷ್ಟದ ಆರಂಭ ಅಂತ ಈಗಲೇ ಹೇಳುವ ಹಾಗಿಲ್ಲ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದ್ದು ಆರ್ಥಿಕ ಸಾಧನೆ-ವೈಫಲ್ಯಗಳ ಆಧಾರದ ಮೇಲೆ ವೋಟು ನೀಡುವ ಪ್ರಜಾತಂತ್ರ ಸಂಸ್ಕೃತಿ ಈ ದೇಶದಲ್ಲಿ ಇನ್ನೂ ಅಂಡಾವಸ್ಥೆಯಲ್ಲಿದೆ- ಭ್ರೂಣಾವಸ್ಥೆಯನ್ನೂ ಸರಿಯಾಗಿ ತಲುಪಿಲ್ಲ. ಎರಡನೆಯದಾಗಿ, ಭರವಸೆ ಮುರಿದ ಈಗಿನ ಆಳುವ ಪಕ್ಷ ಮತ್ತು ಅದರ ನಾಯಕ ಹುಟ್ಟಿಸುವ ಅಳಿದುಳಿದ ಒಂದಷ್ಟು ಭರವಸೆಯನ್ನಾದರೂ ಜನರಲ್ಲಿ ಹುಟ್ಟಿಸಬಲ್ಲ ಪರ್ಯಾಯ ಪಕ್ಷವಾಗಲೀ ನಾಯಕರಾಗಲೀ ಇಲ್ಲ. ಆದುದರಿಂದ ಸದ್ಯದ ಮಟ್ಟಿಗೆ ಅರ್ಥಶಾಸ್ತ್ರ ಅರ್ಥಶಾಸ್ತ್ರವೇ, ರಾಜಕೀಯ ರಾಜಕೀಯವೇ ಅಂತ ಹೇಳಬಹುದು. ಆದರೆ ಒಂದಿದೆ. ಆರ್ಥಿಕ ಸ್ಥಿತಿ ಹೀಗೇ ಮುಂದುವರಿದು,

ಪರ್ಯಾಯ ಇಲ್ಲ ಎನ್ನುವ ಒಂದೇ ಕಾರಣಕ್ಕೆ ಬಿಜೆಪಿ ಮತ್ತು ಅದರ ನಾಯಕತ್ವ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಂತಾದರೆ ಅಲ್ಲೊಂದು ಚುನಾವಣಾ ರಾಜಕೀಯದ ಸೂಕ್ಷ್ಮ ಪಲ್ಲಟವನ್ನು ಗುರುತಿಸಬೇಕಾಗುತ್ತದೆ. ಅದು ಏನು ಎಂದರೆ ಹೋದ ಚುನಾವಣೆಯ ಕಾಲಕ್ಕೆ ಜನ ಯಾರನ್ನು ದೇಶದ ಬಾನಂಗಳದಲ್ಲಿ ಉದಯಿಸುತ್ತಿರುವ ಉತ್ತುಂಗ ನಾಯಕ ಎನ್ನುವ ಹಾಗೆ ಕಂಡು ಮತ ನೀಡಿದರೋ ಅವರನ್ನೇ ಮುಂದಿನ ಚುನಾವಣೆಯ ಹೊತ್ತಿಗೆ ‘ಅಳಿದೂರಿನಲ್ಲಿ ಇನ್ಯಾರಿದ್ದಾರೆ ಇವರನ್ನು ಬಿಟ್ಟು’ ಎನ್ನುವ ನೆಲೆಯಲ್ಲಿ ಗುರುತಿಸಿ ಮತ ನೀಡಬೇಕಾದ ಪರಿಸ್ಥಿತಿ ಬಂದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT