ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದ ಆಶಾವಾದದ ಪುನಶ್ಚೇತನ

Last Updated 21 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪಶ್ಚಿಮದ ದೇಶವೊಂದರಲ್ಲಿ ಶಾಶ್ವತವಾಗಿ ನೆಲೆಸುವ ಯೋಚನೆ ನನ್ನ ಜಾತಿ ಮತ್ತು ವರ್ಗದ ಇತರ ಹಲವರ ಹಾಗೆ ನನ್ನಲ್ಲಿ ಯಾವತ್ತೂ ಸ್ವಲ್ಪವೇ ಸ್ವಲ್ಪ ಆಕರ್ಷಣೆಯನ್ನೂ ಮೂಡಿಸಿಲ್ಲ. ನನಗೆ ಸಾಕಷ್ಟು ಮತ್ತು ಅದಕ್ಕಿಂತ ಹೆಚ್ಚಿನದನ್ನು ಈ ದೇಶ ಕೊಟ್ಟಿದೆ; ನಾನು ಇಲ್ಲಿ ಹುಟ್ಟಿದವನು, ಇಲ್ಲಿಯೇ ಕೆಲಸ ಮಾಡುತ್ತಾ ಸಂತೃಪ್ತವಾಗಿ ಬದುಕುತ್ತಿರುವವನು ಮತ್ತು ಇಲ್ಲಿಯೇ ಸಾಯುವುದನ್ನು ಬಯಸುತ್ತೇನೆ.

ಆದರೆ, ಒಂದು ಸಂದರ್ಭದಲ್ಲಿ ಮಾತ್ರ ನನಗೆ ಭಾರತ ಬಿಟ್ಟು ಹೋಗುವ ವ್ಯಾಮೋಹ ಉಂಟಾಗಿತ್ತು. ಆದರೆ ಅದು ಯುರೋಪ್ ಅಥವಾ ಉತ್ತರ ಅಮೆರಿಕಕ್ಕೆ ಅಲ್ಲ, ಬದಲಿಗೆ ದಕ್ಷಿಣ ಆಫ್ರಿಕಾಕ್ಕೆ. 1994-95ರಲ್ಲಿ ನಾನು ಬರ್ಲಿನ್‍ನ ವೈಸೆನ್‍ಷಾಫ್ಟ್‌ಸ್ಕಾಲೆಗ್‍ನ ಫೆಲೊ ಆಗಿದ್ದೆ. ನನ್ನ ಹೆಂಡತಿ ಮತ್ತು ಪುಟ್ಟ ಮಕ್ಕಳು ಜತೆಗಿದ್ದರು. ನಾನು ಬರ್ಲಿನ್‍ನಲ್ಲಿದ್ದಾಗ ಒಂದು ದಿನ ಪೀಟರ್‍ಮಾರಿಟ್ಸ್‌ಬರ್ಗ್‍ನ ನಟಾಲ್  ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥೆಯಿಂದ ಒಂದು ಪತ್ರ ಬಂತು. ಪಾರಿಸರಿಕ ಇತಿಹಾಸದ ಬಗ್ಗೆ ನನ್ನ ಕೆಲಸವನ್ನು ತಿಳಿದುಕೊಂಡಿದ್ದ ಅವರು, ಅವರ ವಿಭಾಗದ ಹುದ್ದೆಗೆ ಅರ್ಜಿ ಹಾಕಲು ಆಸಕ್ತಿ ಇದೆಯೇ ಎಂದು ಕೇಳಿದ್ದರು. ಪಾರಿಸರಿಕ ಇತಿಹಾಸ ಕ್ಷೇತ್ರ ಆ ದೇಶಕ್ಕೆ ಹೆಚ್ಚು ಮಹತ್ವದ ವಿಚಾರವಾಗಿ ಬೆಳೆಯುತ್ತಿತ್ತು.

ನವದೆಹಲಿಯಲ್ಲಿ ನಾವು ಆರು ವರ್ಷ ನೆಲೆಸಿದ್ದೆವು ಮತ್ತು ಜರ್ಮನಿಯ ಕೆಲಸ ಮುಗಿದ ಮೇಲೆ ನಮ್ಮ ತವರು ನಗರ ಬೆಂಗಳೂರಿನಲ್ಲಿ ಶಾಶ್ವತವಾಗಿ ನೆಲೆಯಾಗಲು ಬಯಸಿದ್ದೆವು. ಹಾಗಾಗಿ  ಬರ್ಲಿನ್, ಈ ಎರಡು ನಗರಗಳ ನಡುವೆ ನನಗೆ ಮತ್ತು ನನ್ನ ಹೆಂಡತಿಗೆ ಒಂದು ಮಧ್ಯಂತರ ನಿಲುಗಡೆಯಷ್ಟೇ ಆಗಿತ್ತು. 1990ರ ದಶಕದ ಮೊದಲ ಭಾಗ ಉತ್ತರ ಭಾರತದಲ್ಲಿ ಜನಾಂಗೀಯ ಸಂಘರ್ಷಗಳು ನಡೆದ ಅವಧಿ. ಕೆಲವು ಘರ್ಷಣೆಗಳನ್ನು ನಾನು ಕಣ್ಣಾರೆ ಕಂಡಿದ್ದೆ. ಕುಟುಂಬದ ಕೆಲವು ಸದಸ್ಯರು ಮತ್ತು ಮಾಜಿ ಗೆಳೆಯರು ಮತಾಂಧರಾಗುವುದನ್ನು ನೋಡಿದ್ದೆ; ಸ್ವಾತಂತ್ರ್ಯದ ಬಳಿಕ 1989ರಲ್ಲಿ ಅತ್ಯಂತ ಕೆಟ್ಟ ಗಲಭೆ ನಡೆದ ಭಾಗಲ್ಪುರಕ್ಕೆ ನಾನು ಭೇಟಿ ನೀಡಿದ್ದೆ. ಮೂರು ವರ್ಷದ ಬಳಿಕ ಬಾಬರಿ ಮಸೀದಿಯನ್ನು ಧ್ವಂಸ ಮಾಡಲಾಯಿತು. ‘464 ವರ್ಷ ಬಾಬರಿ ಮಸೀದಿಯ ಮೇಲೆ ಇದ್ದ ಮೂರು ಗುಮ್ಮಟಗಳ ಹಾಗೆಯೇ ಭಾರತದ ಮೂರು ಸ್ತಂಭಗಳಾದ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಕಾನೂನು ಸುವ್ಯವಸ್ಥೆ ಈಗ ಧಾರ್ಮಿಕ ರಾಷ್ಟ್ರೀಯವಾದದ ಕ್ರೋಧದ ಅಪಾಯ ಎದುರಿಸುತ್ತಿದೆ’ ಎಂದು "ಟೈಮ್ಸ್" ಪತ್ರಿಕೆ ಬರೆದಿತ್ತು.

ನನ್ನ ದೇಶದ ಭವಿಷ್ಯದ ಬಗ್ಗೆ ನನಗೆ ಭೀತಿಯಾಗಿತ್ತು. ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಚಿಂತನೆಗಳ ಜತೆ ಬೆಳೆದಿದ್ದ ನಾನು ಲಾಲ್‍ಕೃಷ್ಣ ಅಡ್ವಾಣಿ ಮತ್ತು ಅಶೋಕ್ ಸಿಂಘಾಲ್ ಅವರ ಆಡಳಿತವನ್ನು ಎದುರು ನೋಡುತ್ತಿರಲಿಲ್ಲ. ಆದರೆ, ಭಾರತ ಗಣರಾಜ್ಯವು ಪ್ರಜಾಸತ್ತೆ ಮತ್ತು ಬಹುತ್ವದ ಪರಂಪರೆಗೆ ಬೆನ್ನು ತಿರುಗಿಸತೊಡಗಿತ್ತು. ಅದೇ ಹೊತ್ತಿಗೆ, ದಕ್ಷಿಣ ಆಫ್ರಿಕಾ ಗಣರಾಜ್ಯವು ಬಿಳಿಯರ ಆಡಳಿತದಿಂದ ಪ್ರಜಾಪ್ರಭುತ್ವದತ್ತ ಸಾಗತೊಡಗಿ ತನ್ನ ಇತಿಹಾಸದಲ್ಲಿ ಹೊಸ ಮತ್ತು ಭವ್ಯ ಅಧ್ಯಾಯವನ್ನು ಆರಂಭಿಸಿತ್ತು. ವರ್ಣಭೇದ ಆಡಳಿತದ ಪತನ ಇತ್ತೀಚಿನ ಕಾಲದ ಅತ್ಯಂತ ಮಹತ್ವದ ನಡೆ ಎಂದು ನಾನು ಭಾವಿಸಿದ್ದೇನೆ. ನೆಲ್ಸನ್‌ ಮಂಡೇಲಾ ಅವರು ಗಾಂಧಿ ಮತ್ತು ನೆಹರೂ ಅವರಲ್ಲಿರುವ ಅತ್ಯುತ್ತಮ ಅಂಶಗಳ ಸಂಯೋಜನೆಯಂತೆ ಕಾಣಿಸುತ್ತಿದ್ದರು. ಒಂದು ದೇಶವಾಗಿ ನಮ್ಮ ಮುಂದಿದ್ದ ಅವಕಾಶಗಳನ್ನು ನಾವು ಕಳೆದುಕೊಂಡಿದ್ದೆವು; ಮಂಡೇಲಾ ನೇತೃತ್ವದಲ್ಲಿ ದಕ್ಷಿಣ ಆಫ್ರಿಕನ್ನರು ಈ ಅವಕಾಶವನ್ನು ಗಟ್ಟಿಯಾಗಿ ಹಿಡಿದುಕೊಳ್ಳಬಾರದೇ? ಒಬ್ಬ ಇತಿಹಾಸಕಾರನಾಗಿ, ಅದನ್ನು ಹತ್ತಿರದಿಂದ ನಾನು ನೋಡಬಾರದೇ? ಮತ್ತು ಹೊಸ ದಕ್ಷಿಣ ಆಫ್ರಿಕಾ ರೂಪುಗೊಳ್ಳುವಲ್ಲಿ ಯಾವುದಾದರೂ ರೀತಿಯಲ್ಲಿ ನಾನೂ ಭಾಗಿಯಾಗಬಾರದೇ?

ಇಂತಹ ಮನಸ್ಥಿತಿಯಲ್ಲಿ ನಾನು ಇದ್ದಾಗ ಪೀಟರ್‍ಮಾರಿಟ್ಸ್‌ಬರ್ಗ್‍ನಿಂದ ನನಗೆ ಆ ಆಹ್ವಾನ ಬಂದಿತ್ತು. ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯದ ಮೊದಲ ಹಂತದಲ್ಲಿ ಅಲ್ಲಿಗೆ ಹೋಗುವ ಅವಕಾಶ ನನ್ನಲ್ಲಿ ಕಾತರ ಮೂಡಿಸಿತ್ತು. ಈ ಬಗ್ಗೆ ಹೆಂಡತಿ ಜತೆ ಮಾತನಾಡಿದೆ. ಈ ಅವಕಾಶದ ಬಗ್ಗೆ ಅವಳೂ ಮುಕ್ತವಾಗಿದ್ದಳು. ಅವಳಿಗೆ ಹೆಚ್ಚು ಹತ್ತಿರವಾಗಿದ್ದ ಸಹೋದರಿ ದಕ್ಷಿಣ ಆಫ್ರಿಕಾಕ್ಕೆ ಹಲವು ಬಾರಿ ಭೇಟಿ ನೀಡಿದ್ದರು ಮತ್ತು ಅಲ್ಲಿ ಆತ್ಮೀಯ ಗೆಳೆಯರನ್ನು ಹೊಂದಿದ್ದರು. ಆಕೆಯೂ ಅಲ್ಲಿ ನೆಲೆಸುವ ಬಗ್ಗೆ ಯೋಚಿಸುತ್ತಿದ್ದರು. ನನ್ನ ಹೆಂಡತಿ ನಿಪುಣ ಗ್ರಾಫಿಕ್ ವಿನ್ಯಾಸಕಾರ್ತಿ; ಹಾಗಾಗಿ ಆ ಊರಿನಲ್ಲಿ ಅವಳಿಗೊಂದು ಕೆಲಸ ಕಂಡುಕೊಳ್ಳುವುದು ಕಷ್ಟದ ಕೆಲಸವಾಗಿರಲಿಲ್ಲ.

ಆದರೆ, ನಟಾಲ್ ವಿಶ್ವವಿದ್ಯಾಲಯದ ಕೆಲಸ ಕೈಗೂಡಲಿಲ್ಲ. ಗೆಳೆಯರೊಬ್ಬರನ್ನು ಭೇಟಿಯಾಗಲು 1997ರಲ್ಲಿ ಮೊದಲ ಬಾರಿಗೆ ನಾನು ದಕ್ಷಿಣ ಆಫ್ರಿಕಾಕ್ಕೆ ಹೋದೆ. ಸ್ವಲ್ಪ ಕಾಲದ ಬಳಿಕ, ಗಾಂಧಿಯ ಬಗ್ಗೆ ಹಲವು ಸಂಪುಟಗಳ ಪುಸ್ತಕದ ಕೆಲಸದಲ್ಲಿ ತೊಡಗಿದೆ. ದಕ್ಷಿಣ ಆಫ್ರಿಕಾಕ್ಕೆ ಹಲವು ಬಾರಿ ಭೇಟಿ ನೀಡಿದೆ. ಈ ಮಧ್ಯೆ, ದಕ್ಷಿಣ ಆಫ್ರಿಕಾದ ರಾಜಕಾರಣವನ್ನು ಸಾಕಷ್ಟು ಹತ್ತಿರದಿಂದ ಗಮನಿಸಲು ಆರಂಭಿಸಿದೆ.

ಇಪ್ಪತ್ತಮೂರು ವರ್ಷಗಳ ಹಿಂದೆ, ನಾನು ದಕ್ಷಿಣ ಆಫ್ರಿಕಾಕ್ಕೆ ಹೋಗುವ ಬಗ್ಗೆ ಯೋಚಿಸುತ್ತಿದ್ದಾಗ ನೆಲ್ಸನ್ ಮಂಡೇಲಾ ಆ ದೇಶದ ಅಧ್ಯಕ್ಷರಾಗಿದ್ದರು. ಮಂಡೇಲಾ ಅವರು ಗಾಂಧಿಯಂತಹ ವ್ಯಕ್ತಿ ಎಂದು ಇತಿಹಾಸ ಬಿಂಬಿಸುತ್ತದೆ; ಮಾತು ಮತ್ತು ನಡತೆಯಲ್ಲಿ ಘನತೆಯ, ಅಪಾರವಾದ ನೈತಿಕ ಮತ್ತು ದೈಹಿಕ ಧೈರ್ಯದ, ತಮ್ಮ ಶೋಷಕರ ಬಗೆಗೂ ಕೆಡುಕಿನ ಭಾವ ಇಲ್ಲದ, ತಮ್ಮ ರಾಜಕೀಯ ವೈರಿಗಳೊಂದಿಗೂ ಸಂವಾದಕ್ಕಿಳಿಯುವ ವ್ಯಕ್ತಿ. ಇದು ನಿಖರವಾದ ಚಿತ್ರಣ ಅಲ್ಲ ಎಂದು ಹೇಳಲಾಗದು; ಆದರೆ, ಮಂಡೇಲಾ ಅವರು ಗಾಂಧಿಯನ್ನು ಮೆಚ್ಚಿದ್ದಕ್ಕಿಂತ ಬಹಳ ಹೆಚ್ಚಾಗಿ ನೆಹರೂ ಅವರನ್ನು ಮೆಚ್ಚಿಕೊಂಡಿದ್ದರು. ಅವರ ವೃತ್ತಿ ಜೀವನವನ್ನು ನಿಕಟವಾಗಿ ಗಮನಿಸಿದ್ದರು. ಹಾಗಾಗಿಯೇ, ನೆಹರೂ ಸರ್ಕಾರದ ಮುಖ್ಯಸ್ಥರಾಗಿ ಅತಿದೀರ್ಘ ಕಾಲ ಉಳಿದರು ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದರು. ಈ ಎಚ್ಚರಿಕೆಯ ನಿದರ್ಶನವೇ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಒಂದು ಅವಧಿ ಪೂರ್ಣಗೊಳಿಸಿದ ಬಳಿಕ ರಾಜಕೀಯದಿಂದ ನಿವೃತ್ತಿ ಪಡೆಯಲು ಅವರನ್ನು ಪ್ರೇರೇಪಿಸಿರಬಹುದು.

ಮಂಡೇಲಾ ಅವರ ಉತ್ತರಾಧಿಕಾರಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಬಂದ ತಾಬೊ ಎಂಬೆಕಿ ಅತ್ಯಂತ ಸಮರ್ಥ ಮತ್ತು ಬುದ್ಧಿವಂತ ವ್ಯಕ್ತಿ. ಆದರೆ, ಜನಾಕರ್ಷಣೆಯ ವ್ಯಕ್ತಿತ್ವ ಅವರಿಗೆ ಇರಲಿಲ್ಲ ಹಾಗೂ ಸಹೋದ್ಯೋಗಿಗಳನ್ನು ನಿಭಾಯಿಸುವ ದೊಡ್ಡ ಸಾಮರ್ಥ್ಯವೂ ಅವರಿಗೆ ಒಲಿದಿರಲಿಲ್ಲ. ಏಡ್ಸ್ ಸಮಸ್ಯೆಯನ್ನು ಅವರು ನಿರಾಕರಿಸುತ್ತಲೇ ಬಂದರು ಮತ್ತು ರಾಬರ್ಟ್ ಮುಗಾಬೆಯಂತಹ ಆಫ್ರಿಕಾದ ನಿರಂಕುಶಾಧಿಕಾರಿಗಳನ್ನು ಬೆಂಬಲಿಸಿದರು. ಎಂಬೆಕಿ ಎರಡು ಅವಧಿ ಪೂರ್ಣಗೊಳಿಸಿದ ಬಳಿಕ ಕಗಲೇಮಾ ಮೊಟ್ಲಾಂಟೆ ಅವರು ಅಧ್ಯಕ್ಷರಾಗಿ ಒಂದು ವರ್ಷವೂ ಪೂರ್ತಿಯಾಗಿ ಅಧಿಕಾರದಲ್ಲಿ ಇರಲಿಲ್ಲ.

ಮತ್ತೆ, ಜಾಕೊಬ್ ಜುಮಾ ಅಧಿಕಾರಕ್ಕೆ ಬಂದರು. ಜುಮಾ ಜನಾಕರ್ಷಣೆ ಹೊಂದಿದ್ದರೂ ಅವರಿಗೆ ವ್ಯಕ್ತಿತ್ವ ಇಲ್ಲ. ಅಧಿಕಾರದಾಹಿ ಮತ್ತು ಆತ್ಮರತಿಯ ಈ ವ್ಯಕ್ತಿ ಸ್ತ್ರೀಲಂಪಟ ಕೂಡ ಹೌದು. ಭಾರತದ ಉದ್ಯಮ ಕುಟುಂಬವೊಂದರ ಜತೆ ಅವರು ಅತಿಯಾದ ಆತ್ಮೀಯತೆ ಹೊಂದಿದ್ದಾರೆ. ಹಲವು ಬಾರಿ ವಾಗ್ದಂಡನೆ ಎದುರಿಸಿದರೂ ತಮ್ಮ ಅಧಿಕಾರ ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಆದರೆ ಹೆಸರು ಮಾತ್ರ ಕೆಟ್ಟಿತು. ಜುಮಾ ಅವರ ಅವಧಿ ಮುಂದಿನ ವರ್ಷ ಕೊನೆಯಾಗಲಿದೆ. ಅವರ ಉತ್ತರಾಧಿಕಾರಿಯಾಗಿ ಸಿರಿಲ್ ರಮಫೋಸ ಅವರನ್ನು ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ) ಸೂಚಿಸಿದೆ. ವರ್ಣಭೇದ ನೀತಿಯ ವಿರುದ್ಧದ ಹೋರಾಟದಲ್ಲಿ ಸಿರಿಲ್ ಬಹಳ ಸಕ್ರಿಯವಾಗಿದ್ದರು. 1998ರಲ್ಲಿ ಮಂಡೇಲಾ ಅವರ ಉತ್ತರಾಧಿಕಾರಿಯಾಗುವವರ ಪಟ್ಟಿಯಲ್ಲಿ ಸಿರಿಲ್ ಹೆಸರೂ ಇತ್ತು. ಎಂಬೆಕಿ ಆ ಹುದ್ದೆಗೆ ಹೋದ ಬಳಿಕ ಸಿರಿಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಅದರಲ್ಲಿ ಯಶಸ್ವಿಯೂ ಆದರು. ಪಕ್ಷದ ನೇತೃತ್ವ ವಹಿಸಿಕೊಳ್ಳುವಲ್ಲಿ ಜುಮಾ ಅವರ ಮಾಜಿ ಹೆಂಡತಿ ನಕೊಸೆಜನ ದೊಮಿನ ಜುಮಾ ಅವರಿಂದ ಭಾರಿ ಸ್ಪರ್ಧೆಯನ್ನು ಸಿರಿಲ್ ಎದುರಿಸಿದ್ದರು. ದಕ್ಷಿಣ ಆಫ್ರಿಕಾದ ರಾಜಕಾರಣದಲ್ಲಿ ಎಎನ್‍ಸಿ ಸಂಪೂರ್ಣ ಪ್ರಾಬಲ್ಯ ಹೊಂದಿದೆ. ಹಾಗಾಗಿ ಅಲ್ಲಿನ ಐದನೇ ಅಧ್ಯಕ್ಷರಾಗಿ ಸಿರಿಲ್ ಆಯ್ಕೆಯಾಗುವುದು ಬಹುತೇಕ ಖಚಿತ.

ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಡುವೆ ಕೆಲವು ಎದ್ದು ಕಾಣುವ ಸಾಮ್ಯಗಳಿವೆ. ಕಾಂಗ್ರೆಸ್‍ನ ಹಾಗೆಯೇ ಎಎನ್‍ಸಿ ಕೂಡ ಬಿಳಿಯರ ಆಳ್ವಿಕೆಯ ವಿರುದ್ಧದ ಹೋರಾಟದ ನೇತೃತ್ವ ವಹಿಸಿತ್ತು; ಕೊನೆಗೂ ಸ್ವಾತಂತ್ರ್ಯ ದೊರೆತು ದೇಶ ಪ್ರಜಾಸತ್ತಾತ್ಮಕವಾದಾಗ ಈ ಪಕ್ಷಗಳಿಗೆ ದೀರ್ಘ ಕಾಲ ಅಧಿಕಾರದಲ್ಲಿರುವ ವಿಶ್ವಾಸಾರ್ಹತೆ ಮತ್ತು ಹಕ್ಕನ್ನು ಅದು ಕೊಟ್ಟಿತು. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‍ನ ಹಾಗೆಯೇ ಎಎನ್‍ಸಿ ಕೂಡ ದುರಂಹಕಾರದಿಂದ ವರ್ತಿಸಿತು ಮತ್ತು ಭ್ರಷ್ಟವಾಯಿತು. ರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರದಲ್ಲಿದ್ದರೂ ಎಎನ್‍ಸಿಗೆ ಕೆಲವು ಪ್ರಾಂತ್ಯಗಳಲ್ಲಿ ಪ್ರಬಲ ಸ್ಪರ್ಧೆ ಎದುರಾಗಿದೆ. ಕೇಪ್‍ನಲ್ಲಿ ಡೆಮಾಕ್ರಟಿಕ್ ಅಲಯೆನ್ಸ್ ಒಡ್ಡುತ್ತಿರುವ ಸ್ಪರ್ಧೆ ಗಮನಾರ್ಹ.

ನೆಲ್ಸನ್ ಮಂಡೇಲಾ ಅವರ ನಾಡಿಗೆ ಹೋಗುವ ಬಗ್ಗೆ 1990ರ ದಶಕದಲ್ಲಿ ನಾನು ಚಿಂತಿಸಿದ್ದೆ. ನನ್ನ ದೇಶವು ಅದರ ಸ್ಥಾಪಕ ತತ್ವಗಳಿಗೆ ಬೆನ್ನು ತಿರುಗಿಸತೊಡಗಿದ್ದು ಅದಕ್ಕೆ ಕಾರಣ. 23 ವರ್ಷ ಬಳಿಕ ನಾನು ದಕ್ಷಿಣ ಆಫ್ರಿಕಾ ಬಗ್ಗೆ ಏನು ಹೇಳಬಹುದು? ಆ ದೇಶ ಎದುರಿಸುತ್ತಿರುವ ಸಮಸ್ಯೆಗಳು ನೈಜ ಮತ್ತು ಗಣನೀಯ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಪರಾಧ, ಪ್ರತಿಭಾ ಪಲಾಯನ ಮತ್ತು ತಿರುವು ಮುರುವಾದ ಜನಾಂಗೀಯವಾದ ಇವುಗಳಲ್ಲಿ ಸೇರಿವೆ. ಇನ್ನೊಂದೆಡೆ, ಈ ದೇಶದಲ್ಲಿ ಈಗಲೂ ಉತ್ತಮವಾದ ವಿಶ್ವವಿದ್ಯಾಲಯಗಳು, ಸಮೃದ್ಧ ನೈಸರ್ಗಿಕ ಸಂಪನ್ಮೂಲ ಇವೆ; ಪ್ರವಾಸೋದ್ಯಮ ಬೆಳೆಯುತ್ತಿದೆ; ಅಪ್ರತಿಮವಾದ ನ್ಯಾಯಶಾಸ್ತ್ರಜ್ಞರು, ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಇದ್ದಾರೆ. ಇನ್ನೂ ಇವುಗಳನ್ನು ನಾಶಪಡಿಸಲು ಸಾಧ್ಯವಾಗಿಲ್ಲ.

ಅಧ್ಯಕ್ಷರಾಗಿ ಜಾಕೊಬ್ ಜುಮಾ ದೊಡ್ಡ ವೈಫಲ್ಯ. ಅವರ ಉತ್ತರಾಧಿಕಾರಿಗಳಾಗಲು ಸ್ಪರ್ಧೆಯಲ್ಲಿದ್ದ ಇಬ್ಬರು ನಾಯಕರು ಭಿನ್ನ ದೃಷ್ಟಿಕೋನಗಳನ್ನು ಪ್ರದರ್ಶಿಸಿದ್ದಾರೆ. ರಮಫೋಸ ತಮ್ಮನ್ನು ಸುಧಾರಕನಾಗಿ ಬಿಂಬಿಸಿಕೊಂಡರೆ, ದೊಮಿನಿ ಜನಪ್ರಿಯತೆಯ ಮೊರೆ ಹೋಗಿದ್ದಾರೆ. ರಮಫೋಸ ಗೆದ್ದಿದ್ದಾರೆ, ಆದರೆ ಅಲ್ಪ ಅಂತರದ ಗೆಲುವಿನಿಂದಾಗಿ ಪಕ್ಷದೊಳಗೆ ಅವರಿಗೆ ಪ್ರತಿರೋಧ ಎದುರಾಗಬಹುದು. ಆದ್ದರಿಂದಲೇ, ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಜೇಸನ್ ಬರ್ಕ್ ಹೀಗೆ ಬರೆದಿದ್ದಾರೆ: ‘ಪಕ್ಷದ ಸುಧಾರಣೆ ಮತ್ತು ಕಳೆದ ಒಂದು ದಶಕದಲ್ಲಿ ಬೆಳೆದಿರುವ ಭ್ರಷ್ಟಾಚಾರವನ್ನು ಪೋಷಿಸುವ ಜಾಲದ ವಿರುದ್ಧ ಕ್ರಮ ಕೈಗೊಳ್ಳುವ ರಮಫೋಸ ಅವರ ನಿರೀಕ್ಷಿತ ಕ್ರಮಗಳಿಗೆ ಬೆಂಬಲ ನೀಡುವ ಸಾಧ್ಯತೆ ಇಲ್ಲದವರೇ ಪಕ್ಷದ ಹಿರಿಯ ಹುದ್ದೆಗಳಿಗೆ ಬಂದಿದ್ದಾರೆ’. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಎರಡೂವರೆ ದಶಕದ ಬಳಿಕವೂ ಸಮಾಜದಲ್ಲಿ ಇರುವ ಕಂದಕಗಳು, ಜಾತಿ ಮತ್ತು ಜನಾಂಗ ಹಾಗೂ ಪ್ರಾದೇಶಿಕ ಅಸಮಾನತೆಗಳನ್ನು ಪಕ್ಷದ ಹೊರಗೆ ಹೊಸ ಅಧ್ಯಕ್ಷರು ಎದುರಾಗಬೇಕಾಗುತ್ತದೆ.

1994ರಲ್ಲಿ ಅಲ್ಪಕಾಲ ನಾನು ದೇಶ ಬಿಟ್ಟು ಹೋಗುವುದನ್ನು ಚಿಂತಿಸಿದ ಬಳಿಕ ಮತ್ತೆಂದೂ ಅಂತಹ ಯೋಚನೆ ನನಗೆ ಬಂದಿಲ್ಲ. ನಾನು ಭಾರತದಲ್ಲಿಯೇ ಬದುಕಿ ಇಲ್ಲಿಯೇ ಸಾಯುತ್ತೇನೆ. ನನ್ನ ದೇಶವನ್ನು ಬಿಟ್ಟರೆ, ಭಾವನಾತ್ಮಕ ಮತ್ತು ಐತಿಹಾಸಿಕ ಕಾರಣಗಳಿಗಾಗಿ, ನಾನು ಭವಿಷ್ಯದ ಬಗ್ಗೆ ಭಯಪಡುವ ಮತ್ತೊಂದು ದೇಶ ದಕ್ಷಿಣ ಆಫ್ರಿಕಾ ಮಾತ್ರ. ಸಿರಿಲ್‍ಗೆ ಅಥವಾ ಅವರ ಪಕ್ಷಕ್ಕೆ ಮತ ಹಾಕಲು ನನಗೆ ಅವಕಾಶವಿಲ್ಲ; ಹಾಗಿದ್ದರೂ ಎಎನ್‍ಸಿಯ ನೇತೃತ್ವವನ್ನು ಸಿರಿಲ್ ವಹಿಸಿಕೊಂಡಾಗ ಅವರಿಗೆ ಶುಭ ಹಾರೈಸುವವರಲ್ಲಿ ಭಾರತದ ಪ್ರಜೆಯಾದ ನಾನೂ ಇರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT