ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣದ ತೆರೆಯ ಮೇಲೆ ಬಂಡಾಯದ ಅಲೆ

Last Updated 30 ಮೇ 2013, 19:59 IST
ಅಕ್ಷರ ಗಾತ್ರ

ಉತ್ತರ ಭಾರತದಲ್ಲಿ ಸಮಕಾಲೀನ ವಸ್ತುಗಳ ಚಲನಚಿತ್ರಗಳು ಪರಿಣಾಮ ಬೀರುತ್ತಿರುವಂತೆಯೇ ಅದರ ಪ್ರಭಾವ ಇತರ ಭಾಷಾ ಚಿತ್ರರಂಗದ ಮೇಲೂ ಆಗಲಾರಂಭಿಸಿತು.

ನಿರ್ಮಾಪಕರು ಅಂದಿನ ದಿನಗಳಲ್ಲಿ ಪ್ರಯೋಗಗಳಿಗಾಗಿ ಕಾಯುತ್ತಿದ್ದರು. ಹೊಸ ಹೊಸ ವಸ್ತು ಹಾಗೂ ಅದರ ನಿರ್ವಹಣೆ ತೆರೆಯ ಮೇಲೆ ಹೇಗೆ ಸಾಧ್ಯ ಎನ್ನುವ ಬಗ್ಗೆ ತೀವ್ರ ಕುತೂಹಲಿಗಳಾಗಿದ್ದರು.

ಇಂದು ದಕ್ಷಿಣ ಭಾರತದ ಚಲನಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಮಹತ್ವದ ಸ್ಥಾನ ಪಡೆದಿದ್ದರೆ, ದೇಶದ ಅತ್ಯಧಿಕ ಚಿತ್ರಗಳು ದಕ್ಷಿಣ ಭಾರತದಲ್ಲೇ ತಯಾರಾಗುತ್ತಿದ್ದರೆ ಅದಕ್ಕೆ, 1917ರಲ್ಲಿ ಮೂಕಿ ಚಿತ್ರಗಳ ಕಾಲದಲ್ಲೇ ಮದ್ರಾಸಿನಲ್ಲಿ ಆರ್. ನಟರಾಜ ಮೊದಲಿಯಾರ್ ಅವರು ಹಾಕಿಕೊಟ್ಟ ಬುನಾದಿಯೇ ಕಾರಣ.

`ಕೀಚಕ ವಧಾ' ಚಿತ್ರದ ಮೂಲಕ ಅವರು ಮೂಕಿ ಚಿತ್ರಗಳ ಯುಗವನ್ನು ಆರಂಭಿಸಿದ್ದೇ ತಡ ಇತರರೂ ಚಿತ್ರ ತಯಾರಿಕೆಗೆ ಮುಂದಾದರು. ಕೆ. ಸುಬ್ರಹ್ಮಣ್ಯಂ, ಎಸ್.ಎಸ್. ವಾಸನ್ ಅವರುಗಳು ಚಿತ್ರಕಥೆ ಮೂಲಕ ಕ್ರಾಂತಿಕಾರಿ ಮಾರ್ಗ ಹಿಡಿದರು. ಅಣ್ಣಾದೊರೈ, ಕರುಣಾನಿಧಿ ಅಂತವರು ಕ್ರಾಂತಿಕಾರಿ ಕಥಾ ಪರಂಪರೆಯನ್ನು ಮುಂದುವರೆಸಿದರು. ತೆಲುಗು ಚಿತ್ರರಂಗದಲ್ಲಿ ಆರ್. ಪ್ರಕಾಶ್, ಎಚ್.ಎಂ. ರೆಡ್ಡಿ, ಸಿ. ಪುಲ್ಲಯ್ಯ, ಗುಡವಳ್ಳಿ ರಾಮಬ್ರಹ್ಮಂ, ಪಿ. ಪುಲ್ಲಯ್ಯ, ವೈ.ವಿ. ರಾವ್, ಬಿ.ಎನ್. ರೆಡ್ಡಿ ಪ್ರಯೋಗಕ್ಕಿಳಿದಿದ್ದರು.

ಫಾಲ್ಕೆ ಅವರ `ರಾಜಾ ಹರಿಶ್ಚಂದ್ರ' ಚಿತ್ರದಿಂದ ಪ್ರೇರಣೆ ಪಡೆದಿದ್ದ ನಟರಾಜ ಮೊದಲಿಯಾರ್, 1917ರಲ್ಲಿ ಕ್ಯಾಮೆರಾವೊಂದನ್ನು ಖರೀದಿಸಿ, ಸ್ಟುಡಿಯೊ ಒಂದನ್ನು ಸಿದ್ಧಪಡಿಸಿಕೊಂಡರು. ಮೊದಲ ಚಿತ್ರವಾಗಿ `ಕೀಚಕ ವಧಾ' ಕಥೆಯನ್ನು ಚಿತ್ರೀಕರಿಸಲು ಸಿದ್ಧತೆ ಮಾಡಿಕೊಂಡರು. ದಕ್ಷಿಣ ಭಾರತದ ಮೊದಲ ಮೂಕಿ ಚಿತ್ರದ ನಾಂದಿ ಹೀಗೆ. `ಆರಂಭದ ಚಿತ್ರದಲ್ಲೇ ಹಿಂಸೆ, ಹೊಡೆದಾಟದ ವಸ್ತು ಏಕೆ ಆಯ್ಕೆ ಮಾಡಿಕೊಳ್ಳುತ್ತೀರಿ? ಅದು ಶುಭ ಸೂಚನೆ ಅಲ್ಲ. ಬೇರೆ ಕಥೆ ಆಯ್ಕೆ ಮಾಡಿಕೊಳ್ಳಿ' ಎಂದು ನಟರಾಜ ಮೊದಲಿಯಾರ್ ಅವರಿಗೆ ಅವರ ಸ್ನೇಹಿತರು, ಬಂಧುಗಳು ಸಲಹೆ ಮಾಡಿದರು. ಆದರೆ ತಮಿಳುನಾಡಿನಲ್ಲಿ ಮೂಢನಂಬಿಕೆಗಳ ವಿರುದ್ಧ ಆಗಲೇ ಹೋರಾಟ ಆರಂಭವಾಗಿತ್ತು. ನಟರಾಜ ಮೊದಲಿಯಾರ್ ತಮ್ಮ ನಿಲುವು ಬದಲಿಸಿಕೊಳ್ಳಲಿಲ್ಲ.

ಬಹುಶಃ ಇಂದು ಮಾರಾಮಾರಿ ಚಿತ್ರಗಳು ಜನಪ್ರಿಯ, ಸಾರ್ವಕಾಲಿಕ ವಸ್ತುವೆನಿಸಿದ್ದರೆ `ಕೀಚಕ ವಧಾ'ನಂತಹ ಚಿತ್ರದ ಮೂಲಕ ಅದನ್ನು ನಟರಾಜ ಮೊದಲಿಯಾರ್ ಸಾಬೀತುಗೊಳಿಸಿದ್ದರು ಎನಿಸುತ್ತದೆ. `ಕೀಚಕ ವಧಾ' ಚಿತ್ರಕ್ಕೆ ತಮಿಳು, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಬ್‌ಟೈಟಲ್‌ಗಳಿದ್ದವು. ಹಿಂದಿ ಸಂಭಾಷಣೆಯನ್ನು ಮಹಾತ್ಮ ಗಾಂಧಿ ಅವರ ಪುತ್ರ ದೇವದಾಸ್ ಗಾಂಧಿ ಬರೆದಿದ್ದರು.

ಕರಾಚಿ, ರಂಗೂನ್ ಸೇರಿ ಭಾರತದಾದ್ಯಂತ ಪ್ರದರ್ಶನಗೊಂಡ ಈ ಚಿತ್ರ 15 ಸಾವಿರ ರೂಪಾಯಿ ಲಾಭ ತಂದುಕೊಟ್ಟು ಇತರರು ಚಿತ್ರ ತಯಾರಿಕೆಗೆ ಇಳಿಯಲು ಪ್ರೇರೇಪಿಸಿತು. ಆರು ವರ್ಷಗಳ ಅವಧಿಯಲ್ಲಿ ಆರು ಪೌರಾಣಿಕ ಮೂಕಿ ಚಿತ್ರಗಳನ್ನು ನಿರ್ಮಿಸಿ ನಟರಾಜ ಮೊದಲಿಯಾರ್, ತಮಿಳು ಚಿತ್ರರಂಗಕ್ಕೆ ಭದ್ರಬುನಾದಿ ಹಾಕಿದರು.

ವಾಕ್ಚಿತ್ರದ ಆರಂಭದ ದಿನಗಳಲ್ಲಿ ಕಥಾವಸ್ತುವಿನ ಮೂಲಕ ಕ್ರಾಂತಿಕಾರಿ ಚಿಂತನೆಯನ್ನು ತಮಿಳು ಚಿತ್ರರಂಗಕ್ಕೆ ತಂದವರು ಕೆ. ಸುಬ್ರಹ್ಮಣ್ಯಂ. 1936ರಲ್ಲಿ ಜಾತಿ ಸಮಸ್ಯೆಯನ್ನು ತೆರೆಯ ಮೇಲೆ ತರುವುದೆಂದರೆ ಬೆಂಕಿಗೆ ತುಪ್ಪ ಸುರಿದಂತೆ. 1936ರಲ್ಲಿ ಅವರು ನಿರ್ಮಿಸಿದ `ಬಾಲಯೋಗಿನಿ' ಬ್ರಾಹ್ಮಣ ವಿಧವೆಯೊಬ್ಬಳ ಹೋರಾಟದ ಕಥೆ.

ಈ ಚಿತ್ರದ ನಾಯಕಿಯಾಗಿ ಬ್ರಾಹ್ಮಣ ಯುವತಿಯನ್ನೇ ಆಯ್ಕೆ ಮಾಡಿದ್ದ ಸುಬ್ರಹ್ಮಣ್ಯಂ, ಆಕೆಗೆ ತಲೆ ಬೋಳಿಸಿ, ಬಿಳಿ ಸೀರೆ ಉಡಿಸಿ ಅಭಿನಯಕ್ಕಿಳಿಸಿದ್ದರು. ಪಾಶ್ಚಾತ್ಯ ಸಂಸ್ಕೃತಿ ಭಾರತದಿಂದ ತೊಲಗಬೇಕು, ಭಾರತೀಯ ಪರಂಪರೆ ಉಳಿಯಬೇಕು ಎಂಬ ಆಶಯ ಚಿತ್ರದಲ್ಲಿತ್ತು. ಚಿತ್ರದ ಕಥೆಯ ಬಗ್ಗೆ ಅದರಲ್ಲೂ ಬ್ರಾಹ್ಮಣರ ಬಗ್ಗೆ ಟೀಕೆ ಮಾಡಿರುವುದು, ಹಾಗೂ ಬ್ರಾಹ್ಮಣ ಯುವತಿಯನ್ನೇ ವಿಧವೆಯನ್ನಾಗಿ ತೋರಿಸಿರುವುದರಿಂದ ಕುಪಿತರಾದ ತಂಜಾವೂರು ಬ್ರಾಹ್ಮಣರು ಸಭೆ ಸೇರಿ, ಸುಬ್ರಹ್ಮಣ್ಯಂ ಅವರನ್ನು ಸಮಾಜದಿಂದ ಹೊರ ಹಾಕಿದ್ದರು.

ಮುಂದೆ ಸುಬ್ರಹ್ಮಣ್ಯಂ ನಿರ್ದೇಶಿಸಿದ `ಭಕ್ತ ಚೇತ' ಹರಿಜನ ಸಂತನ ಜೀವನ ಚಿತ್ರ. ದೇವರ ದೃಷ್ಟಿಯಲ್ಲಿ ಅಸ್ಪೃಶ್ಯತೆ ಎನ್ನುವುದೇ ಇಲ್ಲ ಎಂದು ವಾದಿಸುವ ಸಂತನ ಕತೆ ಇದು. ಕಲ್ಕಿ ಅವರ ಕಾದಂಬರಿ ಆಧರಿಸಿದ `ಸೇವಾ ಸದನ' ಚಿತ್ರದಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನ ಇರಬೇಕು ಎಂಬ ವಾದವಿತ್ತು. 1939ರಲ್ಲಿ ಸುಬ್ರಹ್ಮಣ್ಯಂ ನಿರ್ದೇಶಿಸಿದ `ತ್ಯಾಗಭೂಮಿ' ವಿಚಾರ ಪ್ರಚೋದಕ ಚಿತ್ರವಾಗಿ ಹೆಸರಾಯಿತು. ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವ ದೃಶ್ಯಗಳು ಹೇರಳವಾಗಿದ್ದವು.

`ತ್ಯಾಗಭೂಮಿ'ಯಲ್ಲಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಪ್ರತಿಪಾದನೆಯನ್ನು ಕಾಣಬಹುದಿತ್ತು. ಶ್ರೀಮಂತನೊಬ್ಬ ತನ್ನ ಬಡ ಪತ್ನಿಯನ್ನು ಶ್ರೀಮಂತಿಕೆಯ ಗರ್ವದಿಂದ ತ್ಯಜಿಸುತ್ತಾನೆ. ಅಂದಿನ ಕಾಲದಲ್ಲಿ ಬೀದಿಗೆ ಬಿದ್ದ ಮಹಿಳೆ ಕೆರೆಯೋ ಬಾವಿಯನ್ನೋ ನೋಡಿಕೊಳ್ಳಬೇಕಾದ ಸ್ಥಿತಿ. ಆದರೆ `ತ್ಯಾಗಭೂಮಿ'ಯ ನಾಯಕಿ, ಜೀವನದಲ್ಲಿ ಬದುಕಿ ಸಾಧಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾಳೆ, ಕೆಲಸಕ್ಕೆ ಸೇರಿ ಶ್ರೀಮಂತಳೂ ಆಗುತ್ತಾಳೆ. ಇತ್ತ ಅವಳನ್ನು ತ್ಯಜಿಸಿದ ಪತಿರಾಯ ಪಾಪರ್ ಆಗಿ ಬೀದಿಗೆ ಬೀಳುತ್ತಾನೆ.

ಪತ್ನಿ ಶ್ರೀಮಂತಳಾಗಿರುವುದನ್ನು ಕಂಡು ಮರಳಿ ಅವಳ ಬಳಿ ಬರುತ್ತಾನೆ. ಪತಿಯೇ ಪರದೈವ, ಕೈ ಹಿಡಿದವನೇ ಕಡೆಯವರೆಗೂ ಎಂಬ ನಂಬಿಕೆಯಲ್ಲೇ ಇರುವ ಭಾರತೀಯ ಮಹಿಳೆಯರ ಮನಸ್ಥಿತಿಯನ್ನೇ ಸುಬ್ರಹ್ಮಣ್ಯಂ ಚಿತ್ರಿಸುವುದಾಗಿದ್ದರೆ, ಪತ್ನಿ ಕಾಲಿಗೆ ಬಿದ್ದು ಕಣ್ಣೀರಕೋಡಿ ಹರಿಸಲೇಬೇಕಿತ್ತು. ಆದರೆ, ಚಿತ್ರದ ನಾಯಕಿ ಗಂಡನನ್ನು ತಿರಸ್ಕರಿಸುತ್ತಾಳೆ.

ನನ್ನ ಜೀವನವನ್ನು ನಾನು ರೂಪಿಸಿಕೊಂಡಿರುವುದರಿಂದ ನಿನ್ನ ಅವಶ್ಯಕತೆ ನನಗಿಲ್ಲ ಎಂದು ಹೇಳುವ ಮೂಲಕ ಬಂಡಾಯದ ಸ್ವಾಭಿಮಾನ ಮೆರೆಯುತ್ತಾಳೆ. ಅಂದಿನ ಕಾಲದಲ್ಲಿ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸಿನಿಮಾ ಮಾಧ್ಯಮ ಪರಿಣಾಮಕಾರಿಯಾಗಿ ಮಾಡಿದೆ.

`ಬಾಲಯೋಗಿನಿ' ಚಿತ್ರದಲ್ಲಿ ಸುಬ್ರಹ್ಮಣ್ಯಂ ಬೇಬಿ ಸರೋಜ ಎಂಬ ಬಾಲನಟಿಯನ್ನು ಪರಿಚಯಿಸಿದರು. ಆ ಪಾತ್ರ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಜನ ತಮ್ಮ ಮನೆಯಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ `ಸರೋಜ' ಎಂದೇ ಹೆಸರಿಡಲಾರಂಭಿಸಿದರು. 1936ರಿಂದ ಮೂರು ವರ್ಷಗಳ ಕಾಲ ತಮಿಳುನಾಡಿನಾದ್ಯಂತ ಸರೋಜ ಗಾಳಿ ಬೀಸಲಾರಂಭಿಸಿತ್ತು. `ಬಾಲಯೋಗಿನಿ', `ಸೇವಾಸದನ' ಮತ್ತು `ತ್ಯಾಗಭೂಮಿ' ಚಿತ್ರಗಳ ಮೂಲಕ ಸುಬ್ರಹ್ಮಣ್ಯಂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕ್ರಾಂತಿಕಾರಿ ಬದಲಾವಣೆಗಳ ಸಾಧ್ಯತೆಯನ್ನು ತೋರಿಸಿಕೊಟ್ಟರು.

ಚಲನಚಿತ್ರಗಳಲ್ಲಿ ವೈಭವಕ್ಕೆ ಆದ್ಯತೆ ನೀಡಿದ ಎಸ್.ಎಸ್. ವಾಸನ್ ಅವರ ಚಿತ್ರ ಶೈಲಿಯೇ ವಿಭಿನ್ನ. 1936ರಲ್ಲಿ ಎಂ.ಕೆ. ರಾಧ ಅವರು ನಾಯಕರಾಗಿದ್ದ `ಸತಿ ಲೀಲಾವತಿ' ಚಿತ್ರವನ್ನು ವಾಸನ್ ನಿರ್ಮಿಸಿದರು. (ಈ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಎಂ.ಜಿ. ರಾಮಚಂದ್ರನ್ ಮುಂದೆ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಆಗಿ ಮೆರೆದರು). ಈ ಚಿತ್ರವನ್ನು ಸಿನಿಮಾ ಉಪಕರಣಗಳನ್ನು ಮಾರಲು ಅಮೆರಿಕದಿಂದ ಬಂದಿದ್ದ ಎಲ್ಲಿಸ್ ಆರ್. ಡಂಕನ್ ಎನ್ನುವ ವ್ಯಕ್ತಿಯಿಂದ ನಿರ್ದೇಶನ ಮಾಡಿಸಿದ್ದು ವಾಸನ್ ಅವರ ವಿಶೇಷ ಶೈಲಿಯಾಗಿತ್ತು.

ಭಾಷೆಯೇ ಗೊತ್ತಿಲ್ಲದ ವ್ಯಕ್ತಿ ನಿರ್ದೇಶಿಸಿದ ಚಿತ್ರ ಭಾರಿ ಯಶಸ್ವಿಯಾಯಿತು. ಆನಂತರವೂ ಡಂಕನ್ `ಶಕುಂತಲ', `ಮೀರಾ' ಚಿತ್ರಗಳನ್ನು ನಿರ್ದೇಶಿಸಿದ್ದು, ಅವೂ ಜನಪ್ರಿಯವಾದವು. ಹಾಲಿವುಡ್ ಚಿತ್ರಗಳನ್ನು ಮೀರಿಸುವ ಚಿತ್ರಗಳು ಭಾರತದಲ್ಲಿ ತಯಾರಾಗಬೇಕು ಎನ್ನುವುದು ಅವರ ಹಂಬಲವಾಗಿತ್ತು.

ಅವರ ಚಿತ್ರತಯಾರಿಕಾ ಸಂಸ್ಥೆಯಲ್ಲಿ  ಎಂ.ಕೆ. ರಾಧ, ರಂಜನ್ ಮೊದಲಾದವರಿದ್ದರು. ತಮಿಳು, ತೆಲುಗು ಎರಡೂ ಭಾಷೆಗಳಲ್ಲಿ ವಾಸನ್ ಅವರ ಜೆಮಿನಿ ಸ್ಟುಡಿಯೊ ತಯಾರಿಕೆ ಅವ್ಯಾಹತವಾಗಿ ಮುಂದುವರೆಯಿತು. `ಮಂಗಮ್ಮ ಶಪಥಂ' (1948), `ಬಾಲನಾಗಮ್ಮ' (1942), `ಜೀವನ್ಮುಖಿ' ಮೊದಲಾದ ಚಿತ್ರಗಳು ಯಶಸ್ವಿಯಾದವು.

ಜೆಮಿನಿ ಸಂಸ್ಥೆಯ `ಚಂದ್ರಲೇಖ' (1948) ತಮಿಳು ಚಿತ್ರರಂಗದಲ್ಲೇ ಏಕೆ, ಭಾರತೀಯ ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಿತು. ಚಂದ್ರಲೇಖದ ಹಿಂದಿ ರೀಮೇಕ್ ಭಾರತದ ಇತರ ಭಾಗಗಳಲ್ಲಿ ಬಿಡುಗಡೆಯಾದ ಕಡೆಯೆಲ್ಲಾ ಇತಿಹಾಸ ಸೃಷ್ಟಿಸಿತು. ವಾಸನ್ ನಿರ್ದೇಶಿಸಿದ ಮೊದಲ ಚಿತ್ರವಿದು. ಹಾಲಿವುಡ್ ಮಾದರಿಯಲ್ಲೇ ಚಿತ್ರ ನಿರ್ಮಿಸಬೇಕೆಂಬ ವಾಸನ್ ಆಸೆ ಈಡೇರಿತ್ತು.

ಭಾರತದಲ್ಲಿ ಅದುವರೆಗೆ ಅಷ್ಟು ದುಬಾರಿ ವೆಚ್ಚದ ಚಿತ್ರವನ್ನು ಯಾರೂ ನಿರ್ಮಿಸುವ ಸಾಹಸ ಮಾಡಿರಲಿಲ್ಲ. ತಾಂತ್ರಿಕವಾಗಿ, ದೃಶ್ಯವೈಭವದಿಂದ ಕಂಗೊಳಿಸಿದ ಚಿತ್ರವನ್ನು ಇಂಗ್ಲಿಷ್ ಭಾಷೆಗೂ ಡಬ್ ಮಾಡಿ ಅಮೆರಿಕದಲ್ಲಿ ಪ್ರದರ್ಶಿಸಲಾಯಿತು. ದಕ್ಷಿಣ ಭಾರತ, ಭಾರತೀಯ ಚಿತ್ರರಂಗಕ್ಕೆ ಸದಾ ಈ ರೀತಿಯ ಧೈರ್ಯ ತುಂಬುವ ಕೆಲಸ ಮಾಡುತ್ತಲೇ ಇದೆ.

ಇಂದಿಗೂ ಅಂತಹ ವೈಭವದ ಚಿತ್ರಗಳನ್ನು ನಿರ್ಮಿಸುವ, ಕೋಟಿಗಟ್ಟಲೆ ಹಣ ಸುರಿದು ಚಿತ್ರ ನಿರ್ಮಿಸುವ ಪರಂಪರೆ ತಮಿಳು ಚಿತ್ರರಂಗದಲ್ಲಿ ಮಾತ್ರ ಇದೆ. `ದೇವದಾಸ್' ಹಿಂದಿ ಚಿತ್ರವನ್ನು ನೂರುಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗುತ್ತಿದೆ ಎನ್ನುವುದೇ ಬಾಲಿವುಡ್‌ನ ಹೆಗ್ಗಳಿಕೆಯಾಗಿತ್ತು.

ಆದರೆ ರಜನೀಕಾಂತ್ ಅಭಿನಯದ `ಯಂದಿರನ್' ಚಿತ್ರವನ್ನು ರೂ250 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ತಮಿಳು ನಿರ್ಮಾಪಕರು, ಅದರಿಂದ ರೂ 450 ಕೋಟಿ ವ್ಯವಹಾರ ಮಾಡುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟರು. ಇಂತಹ ಹುಚ್ಚು ಸಾಹಸಕ್ಕೆ ಪ್ರೇರಣೆಯೇ `ಚಂದ್ರಲೇಖಾ'. ಅಂತಹ ಪರಂಪರೆ ತಮಿಳು ಚಿತ್ರರಂಗದಲ್ಲಿ ಬೇರೂರಿದೆ.

ಪತಿಯ ಹಿಂಸೆಯ ವಿರುದ್ಧ ಹೋರಾಡುವ ಮಹಿಳೆ ಚಿತ್ರಣವಾದ `ಮಂಗಳ' (1950), ಬಡತನದ ವಿರುದ್ಧ ಸಮರ ಸಾರುವ `ಸಂಸಾರ್' (1951) ಮೊದಲಾದ ಚಿತ್ರಗಳು ಜೆಮಿನಿ ಸಂಸ್ಥೆಯ ಘನತೆಯನ್ನು ಹೆಚ್ಚಿಸಿದವು. ಸುಬ್ರಹ್ಮಣ್ಯಂ ಅವರು ಹಾಕಿಕೊಟ್ಟ ಹಾದಿಯಲ್ಲಿ ಮತ್ತೆ ಹೊರಳಿದ ಅಣ್ಣಾದೊರೈ `ವೇಲೈಕ್ಕಾರಿ' ಚಿತ್ರದಲ್ಲಿ ದಿನಗೂಲಿ ಕೆಲಸಗಾರರ ಜೀವನವನ್ನು ಚಿತ್ರಿಸಿ, ಪ್ರೇಕ್ಷಕರನ್ನು ಚಿಂತನೆಗೆ ತೊಡಗಿಸಿದರು. ಕರುಣಾನಿಧಿ `ಪರಾಶಕ್ತಿ' ಮೂಲಕ ಮತ್ತಷ್ಟು ಆಕ್ರೋಶವನ್ನು ಹೊರಹಾಕುವ ಮೂಲಕ ಚಲನಚಿತ್ರ ಮಾಧ್ಯಮಕ್ಕಿರುವ ಕಟ್ಟುವ ಶಕ್ತಿಯನ್ನು ತೋರಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT