ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನ ಸಂಗ್ರಾಮದ ಅಪಾಯಕಾರಿ ಸಂದೇಶಗಳು

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಸದ್ಯ ನಡೆಯುತ್ತಿರುವ ದನ ಸಂಗ್ರಾಮದಲ್ಲಿ ನ್ಯಾಯಾನ್ಯಾಯಗಳ ನಿಷ್ಕರ್ಷೆ ತೀರಾ  ಸಂಕೀರ್ಣವಾದ ವಿಷಯ. ದನ ಪೂಜನೀಯ ಎನ್ನುವ ನಂಬಿಕೆಯನ್ನು ತಲತಲಾಂತರಗಳಿಂದ ರಕ್ತಗತವಾಗಿಸಿಕೊಂಡವರ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ದನವನ್ನು ಸೃಷ್ಟಿಕರ್ತ ನಿರ್ಮಿಸಿದ ಆಹಾರ ಶೃಂಖಲೆಯ ಭಾಗವನ್ನಾಗಿ ಕಾಣುತ್ತಾ ಬ೦ದವರ ಮಾಂಸಾಹಾರದ ಹಕ್ಕನ್ನೂ ಗೌರವಿಸಬೇಕು. ಇವೆರಡರ ನಡುವೆ ಒಂದು ಸಮತೋಲನವನ್ನು ಕಾಯ್ದು ಕೊಳ್ಳುವುದು ಅತೀ ಕಷ್ಟದ ವಿಷಯ.

ಆದರೆ ಈ ಸೂಕ್ಷ್ಮ ಸಮತೋಲನ ಭಾರತೀಯ ಸಮಾಜದಲ್ಲಿ ಶತಶತಮಾನಗಳಿಂದ ನೆಲೆಸಿತ್ತು. ದನವನ್ನು ಪೂಜಿಸುವವರು,  ದನದ ಮಾಂಸ ತಿನ್ನುವವರ ಹಕ್ಕನ್ನು ಮತ್ತು ದನದ ಮಾಂಸ ತಿನ್ನುವವರು, ದನವನ್ನು  ಪೂಜಿಸುವವರ ನಂಬಿಕೆಯನ್ನು ಪರಸ್ಪರ ಗೌರವಿಸಿದರೋ ಬಿಟ್ಟರೋ ಎಂದು ಹೇಳುವುದು ಕಷ್ಟ. ಆದರೆ ಅವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದರು.  ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಬಹಳ ಮುಖ್ಯ ಎನಿಸುವ ಈ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ದನದ ಮಾಂಸವನ್ನು ದೈನಂದಿನ ಆಹಾರದ ಭಾಗವನ್ನಾಗಿಸಿಕೊಂಡಿದ್ದ ಮುಸ್ಲಿಂ ಮತ್ತು ಬ್ರಿಟಿಷ್ ಆಡಳಿತಗಾರರ ಕಾಲದಲ್ಲಿ ಅಬಾಧಿತವಾಗಿದ್ದ ಹಾಗೆಯೇ ಯಾವ ಮಾಂಸವನ್ನೂ ಸೇವಿಸಬಾರದು ಎನ್ನುವ ಕಠಿಣ ಧಾರ್ಮಿಕ ನಂಬಿಕೆ ಹೊಂದಿದ್ದ ಜೈನ ದೊರೆಗಳ ಕಾಲದಲ್ಲೂ ಅಬಾಧಿತವಾಗಿತ್ತು. ಯಾವ ಹೊತ್ತಿಗೆ ಹೀಗೆ ಪರಸ್ಪರ ಅರ್ಥ ಮಾಡಿಕೊಳ್ಳುವ ಮನಃಸ್ಥಿತಿ ಅಂತ್ಯವಾಯಿತೋ ಅಂದಿನಿಂದ ಅನಿಷ್ಟದ ದಿನಗಳು ಪ್ರಾರಂಭವಾಗುತ್ತವೆ ಎಂದೇ ಲೆಕ್ಕ. ಅವು ಈಗ ಪ್ರಾರಂಭವಾಗಿವೆ.

ದನವನ್ನು ಜನ ಸಾಕುವುದರ ಹಿಂದೆ ಇರುವುದು ಅರ್ಥಶಾಸ್ತ್ರ. ದನ ಪವಿತ್ರ ಅಥವಾ ಪೂಜನೀಯ ಎನ್ನುವ ಕಾರಣಕ್ಕೆ ಯಾರೂ ದನವನ್ನು ಸಾಕುವುದಿಲ್ಲ. ದನ ಸಾಕುವ ಜನ ಅದನ್ನು ಕಟುಕರಿಗೆ ಮಾರುವುದರ ಹಿಂದೆ ಇರುವುದು ಕೂಡಾ ಅಪ್ಪಟ ಅರ್ಥಶಾಸ್ತ್ರ. ದನದ ಮಾರಾಟ ಎಂದರೆ ದನ ಪವಿತ್ರ ಎನ್ನುವ ನಂಬಿಕೆಯ ನಿರಾಕರಣೆಯಲ್ಲ. ಮಾರಾಟಕ್ಕಿರುವ ದನಗಳನ್ನು ಜನ ಮಾಂಸಕ್ಕಾಗಿ ಕೊಳ್ಳುವುದರ ಹಿಂದೆ ಇರುವುದು ಕೂಡಾ ಅರ್ಥಶಾಸ್ತ್ರ. ದನ ಪವಿತ್ರ ಎನ್ನುವವರ ನಂಬಿಕೆಯ ಮೇಲೆ ಆಕ್ರಮಣವೆಸಗಲು ಯಾರೂ ಅದನ್ನು ಕೊಂದು ತಿನ್ನುವುದಿಲ್ಲ.

ಇವೆಲ್ಲವುಗಳ ನಡುವೆಯೂ ದನ ಪವಿತ್ರ ಎನ್ನುವ ಒಂದು ನಂಬಿಕೆ ಇತ್ತು ಮತ್ತು ಇದೆ. ಈ ನಂಬಿಕೆ ಬಹುಸಂಖ್ಯಾತ ಹಿಂದೂಗಳಲ್ಲಿ ಬಹುಮಂದಿ ದನದ ಮಾಂಸವನ್ನು ತಿನ್ನದಂತೆ ತಡೆದಿದೆ. ಆ ನಂಬಿಕೆಯನ್ನು ಪ್ರಶ್ನಿಸುವ ಅಥವಾ ಅಪಹಾಸ್ಯ ಮಾಡುವ ಹಕ್ಕು ಯಾರಿಗೂ ಇಲ್ಲ. ಆದರೆ ಇದು ಅರ್ಥಶಾಸ್ತ್ರದ ಎದುರು ಸೋತ ನಂಬಿಕೆ; ಸೋತಿದೆ ಎಂದು ಯಾರೂ ಒಪ್ಪಲು ಸಿದ್ಧವಿಲ್ಲದ ನಂಬಿಕೆ. ಇಲ್ಲಿ ನಂಬಿಕೆ ಮತ್ತು ಅರ್ಥಶಾಸ್ತ್ರದ ನಡುವಣ ಸಮತೋಲನ ಕೆಲಸಕ್ಕೆ ಬರುವ ದನಗಳನ್ನು ರಕ್ಷಿಸಿದೆ, ಕೆಲಸಕ್ಕೆ ಬಾರದ ದನಗಳನ್ನು ಕೊಂದಿದೆ. ದನವನ್ನು ಪೂಜಿಸುವವರು ಅದು ಮುದಿಯಾದಾಗ ಅಥವಾ ಕೆಲಸಕ್ಕೆ ಬಾರದಿದ್ದಾಗ ನಂಬಿಕೆಯನ್ನು ಬದಿಗಿಟ್ಟು ಮಾರಿಬಿಡುತ್ತಿದ್ದರು. ಅವರಿಂದ ದನ ಖರೀದಿಸಿದವರು ಮಾಂಸಕ್ಕಾಗಿಯೇ ಅದನ್ನು ಕೊಳ್ಳುತ್ತಾರೆ ಎನ್ನುವುದು ಮಾರುವವರಿಗೆ ಗೊತ್ತಿತ್ತು. ಆದರೂ ತಮ್ಮ ನಂಬಿಕೆ ತಮಗೆ ಅಡ್ಡ ಬಾರದಂತೆ ಕಣ್ಣುಮುಚ್ಚಿ ಅವರು ವ್ಯವಹಾರ ನಡೆಸುತ್ತಿದ್ದರು. ಹಾಗೆಯೇ, ಮಾಂಸದ ವ್ಯಾಪಾರ ಮಾಡುವವರು ದನ ಯಾರಿಗೆ ಪವಿತ್ರವೋ ಅವರನ್ನು ಹೆಚ್ಚು ಎದುರು ಹಾಕಿಕೊಳ್ಳದೆ ತಮ್ಮ ವಹಿವಾಟು ನಡೆಸುತ್ತಿದ್ದರು. ಈ ಸಮತೋಲನದ ವ್ಯವಹಾರದಲ್ಲಿ ದನದ ಜತೆ ಸಂಬಂಧ ಇರಿಸಿಕೊಂಡವರೆಲ್ಲಾ ಧರ್ಮಾತೀತರಾಗಿ ಪಾಲುದಾರರು. ಇವಿಷ್ಟು ವಾಸ್ತವ. ದನ ಎನ್ನುವ ಬಹುಉಪಯೋಗಿ ಜೀವಿಗೆ ಸಾಕ್ಷಾತ್ ಸೃಷ್ಟಿಕರ್ತ ಕರುಣಿಸಿದ ಕ್ರೂರ ವಾಸ್ತವ. ಇದಕ್ಕಿಂತಾಚೆಗೆ ಇರುವುದೆಲ್ಲ ರಾಜಕೀಯ. ಅಪ್ಪಟ ರಾಜಕೀಯ. ಆಷಾಢಭೂತಿತನವನ್ನು ಎಗ್ಗಿಲ್ಲದೆ ಆವಾಹಿಸಿಕೊಂಡು ನಡೆಯುವ ರಾಜಕೀಯ.

ಈ ರಾಜಕೀಯದ ಅಂಗವಾಗಿ ದನಗಳ ಹತ್ಯೆ ಆಗುವುದನ್ನು ನಿಲ್ಲಿಸಿಯೇ ಸಿದ್ಧ ಎಂದು ಒಂದಷ್ಟು ಜನ ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಗೋರಕ್ಷಕರು ಎಂದು ಕರೆಸಿಕೊಳ್ಳುವ ಈ ಮಂದಿ, ದನ-ಕರುಗಳ ಹಾಗೂ ಇತರ ಜಾನುವಾರುಗಳ ಸಾಗಾಣಿಕೆ ನಡೆಸುವ ವಾಹನಗಳನ್ನು ನಿಲ್ಲಿಸಿ ಸಾಗಾಣಿಕೆ ನಡೆಸುವ ವ್ಯಕ್ತಿಗಳನ್ನು ಮನಸೋ ಇಚ್ಛೆ ಥಳಿಸುತ್ತಿದ್ದಾರೆ. ಕೆಲವರನ್ನು ಕೊ೦ದೇಬಿಟ್ಟಿದ್ದಾರೆ. ಆದರೆ ದನರಕ್ಷಣೆಯ ಈ ಆಕ್ರಮಣ ರಾಜಕೀಯ ಅದೆಂತಹ ಅಪಾಯಗಳನ್ನು ಸೃಷ್ಟಿಸುತ್ತಿದೆ ಎನ್ನುವುದನ್ನು ಯಾರೂ ಇನ್ನೂ ಗಂಭೀರವಾಗಿ ಪರಿಗಣಿಸಿದ ಹಾಗಿಲ್ಲ.

ಈ ರೀತಿಯ ಹಿಂಸಾಚಾರದಿಂದ ದನಗಳ ರಕ್ಷಣೆ ಸಾಧ್ಯವಿಲ್ಲ. ಯಾಕೆಂದರೆ ಮೇಲೆ ಹೇಳಿದಂತೆ ದನ ಅದನ್ನು ಸಾಕುವವರಿಗೆ ಮೂಲತಃ ಆರ್ಥಿಕ ಸರಕು, ಪೂಜೆಯ ದೈವವಲ್ಲ. ಎಲ್ಲಾ ಧರ್ಮಗಳಿಗೆ ಸೇರಿದ ರೈತರೂ ತಮಗೆ ಉಪಯೋಗವಿಲ್ಲದ ದನಗಳನ್ನು ಮಾರುತ್ತಾರೆ. ಮಾರುವುದು ಬೇಡ ಎಂದಾದರೆ ನಾವು ಅವುಗಳನ್ನು ಏನು ಮಾಡಬೇಕು ಎನ್ನುವ ರೈತರ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.  ಒಂದು ವೇಳೆ ಸರ್ಕಾರ ಅಂತಹ ದನಗಳಿಗೆ ಆಶ್ರಯ ಒದಗಿಸಬೇಕು ಎಂದಾದರೆ ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ದನಶುಶ್ರೂಷೆಗೆಂದೇ  ಹೊಸದೊಂದು ತೆರಿಗೆಯನ್ನೇ ಹಾಕಬೇಕಾದೀತು. ಅಷ್ಟಾದರೂ ದನಗಳ ರಕ್ಷಣೆ ಆದೀತು ಎಂದು ಭಾರತೀಯ ವ್ಯವಸ್ಥೆಯನ್ನು ಬಲ್ಲ ಯಾರೂ ನಂಬಲು ಸಾಧ್ಯವಿಲ್ಲ. ಸದ್ಯಕ್ಕೆ ಯಾವ ವ್ಯವಸ್ಥೆಯೂ ಇಲ್ಲದೆ ದನಗಳ ಸಾಗಾಣಿಕೆಯ ಮೇಲೆ ಅಘೋಷಿತ ನಿಷೇಧ ಹೇರಿದ್ದರಿಂದ ಹೆದರಿದ ಜನ, ತಮಗೆ ಬೇಡವಾದ ಜಾನುವಾರುಗಳನ್ನು ವಿವಿಧ ಮಾರ್ಗಗಳನ್ನು ಬಳಸಿ ಗುಪ್ತವಾಗಿ ಕೊಲ್ಲುತ್ತಿದ್ದಾರೆ ಎಂದು ವರದಿಗಳಿವೆ. ಮುಖ್ಯವಾಗಿ ಇಲ್ಲಿ ಇರುವುದು ಗಂಡು ಕರುಗಳ ವಿಷಯ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಹುಟ್ಟುವುದಕ್ಕೆ ಮುನ್ನವೇ ಕರುಗಳ ಲಿಂಗ ಪತ್ತೆ ಹಚ್ಚಿ ಗೋ-ಭ್ರೂಣಹತ್ಯೆ ನಡೆಯುವ ಸ್ಥಿತಿ ಬಂದರೂ ಬಂದೀತು. ಪರ್ಯಾಯ ವ್ಯವಸ್ಥೆ ಇಲ್ಲದೆ ಒಂದು ಸಮತೋಲನವನ್ನು ಕೆಡಿಸಿದರೆ ಏನೇನೆಲ್ಲ ಆಗಬಹುದೋ ಅವೆಲ್ಲವೂ ಈಗ ಆಗುತ್ತಿವೆ.

ದನ ಒಯ್ಯುವವರನ್ನು ಥಳಿಸುವವರ ಮತ್ತು ಅಂತಹವರನ್ನು ಸಮರ್ಥಿಸುವವರ ವಾದ ಸರಣಿ ಬೇರೆ ಇದೆ. ಅವರ ಪ್ರಕಾರ ಮಾಂಸಕ್ಕಾಗಿ ದನ ಸಾಗಾಣಿಕೆ ನಡೆಸುವವರು ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ. ಆದುದರಿಂದ ಅವರನ್ನು ಹಿಡಿದು ಬಡಿಯುವುದರಲ್ಲಿ ತಪ್ಪಿಲ್ಲ. ವಿಚಿತ್ರ ಎಂದರೆ ಇಂತಹ ವಿತಂಡವಾದ ಸರಣಿಯನ್ನು ಸರ್ಕಾರಗಳೇ ಪರೋಕ್ಷವಾಗಿ ಸಮರ್ಥಿಸುತ್ತಿವೆ. ಒಂದು ವೇಳೆ ದನಗಳ ಸಾಗಾಟದಲ್ಲಿ ಕಾನೂನು ಉಲ್ಲಂಘನೆ ಆಗುತ್ತಿದ್ದರೆ ಅದನ್ನು ಸೂಕ್ತವಾದ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೂಲಕ ನಿಯಂತ್ರಿಸಬೇಕೇ ಹೊರತು ಗೋರಕ್ಷಕರು ಎಂದು ಕರೆಸಿಕೊಳ್ಳುವ ಖಾಸಗಿ ಸಂಘಟನೆಗಳ ಮೂಲಕವಲ್ಲ. ಕಾನೂನು ಪರಿಪಾಲನೆಯನ್ನು ಸರ್ಕಾರವೇ ಮಾಡಬೇಕು ಹೊರತು ಖಾಸಗಿ ಸಂಘಟನೆಗಳಿಗೆ ಹೊರಗುತ್ತಿಗೆಯಾಗಿ ನೀಡಲು ಪ್ರಜಾತಂತ್ರ ಆಡಳಿತ ವ್ಯವಸ್ಥೆಯಲ್ಲಿ ಅವಕಾಶವೇ ಇಲ್ಲ. ಅಸಲಿ ಸಂಘಟನೆಗಳು ದನಗಳ ರಕ್ಷಣೆಗೆ ಇಳಿದರೆ ಪರವಾಗಿಲ್ಲ, ನಕಲಿ ಸಂಘಟನೆಗಳನ್ನು ಮಾತ್ರ ತಡೆಯಬೇಕು ಎನ್ನುವ ವಾದ ಒಪ್ಪಲು ಸಾಧ್ಯವೇ ಇಲ್ಲ.

ವಿಚಿತ್ರ ಎಂದರೆ ಬಿಜೆಪಿಯೇತರ ಪಕ್ಷಗಳು ನಡೆಸುವ ಸರ್ಕಾರಗಳ ಕಡೆಯಿಂದಲೂ  ದನರಕ್ಷಕರು ನಡೆಸುವ ದಾಂದಲೆಯ ಕುರಿತು ಒಂದು ಖಡಕ್ ಆದ ಸಂದೇಶ ಇನ್ನೂ ರವಾನೆಯಾಗಿಲ್ಲ. ಎಷ್ಟೋ ಕಡೆ ಪೊಲೀಸರು, ತೊಂದರೆಗೊಳಗಾದವರನ್ನು ರಕ್ಷಿಸುವ ಬದಲು ದನರಕ್ಷಕರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಅಂದರೆ ಸರ್ಕಾರಗಳೇ ಮುಂದೆ ನಿಂತು ಅರಾಜಕತೆಯನ್ನು ಪ್ರೋತ್ಸಾಹಿಸಿದ ಹಾಗಾಯಿತು. ಅರಾಜಕತೆಯನ್ನು ಪೋಷಿಸುವ ಸರ್ಕಾರ ಇದ್ದೂ ಸತ್ತಂತೆ. ಸಂತ್ರಸ್ತರ ಪಾಲಿಗೆ ‘ಸರ್ಕಾರದ ಭಯ’ (ರಾಜನ ಭಯ) ಮತ್ತು ಸರ್ಕಾರವಿಲ್ಲದ ಭಯ (ಅರಾಜಕತೆಯ ಭಯ) ಏಕಕಾಲದಲ್ಲಿ ಎರಗಿದಂತೆ.

ಕಾನೂನು ಉಲ್ಲಂಘಿಸಿದವರನ್ನು ಖಾಸಗಿಯಾಗಿ ಯಾರಾದರೂ ಹಿಡಿದು ಥಳಿಸಬಹುದೆಂಬ ಬಾಲಿಶ ವಾದ ಪರೋಕ್ಷವಾಗಿ ಅರಾಜಕತೆಗೆ ನೀಡುವ ಸಮರ್ಥನೆಯಾಗುತ್ತದೆ. ಆಳುವ ಸರ್ಕಾರಗಳು ಇಷ್ಟನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುವುದು ದುರಂತ. ಈ ವಾದವನ್ನು ಮುಂದುವರಿಸಿದರೆ ಏನನ್ನೆಲ್ಲಾ ಸಮರ್ಥಿಸಬೇಕಾಗಿ ಬಂದೀತು ನೋಡಿ. ಲಂಚ ಪಡೆಯುವುದು ಕಾನೂನು ಪ್ರಕಾರ ತಪ್ಪು. ನಾಳೆ ಮಾರ್ಗದ ಬದಿ ಸಂಚಾರ ನಿಯಮ ಮುರಿಯುವವರ ಕೈಯಿಂದ ಲಂಚ ಸುಲಿಯುವ ಟ್ರಾಫಿಕ್ ಪೊಲೀಸರನ್ನು ಜನ  ಸೇರಿ ಥಳಿಸತೊಡಗಿದರೆ? ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಕಾನೂನು ಮುರಿದೇ ಕಾನೂನು ಜಾರಿಗೊಳಿಸುವುದು. ನಾಳೆ ಅಮಾಯಕರನ್ನು ಪೊಲೀಸರ ಕೈಯಿಂದ ರಕ್ಷಿಸಲೆಂದು ಒಂದು ರಕ್ಷಣಾ ದಳ ಪ್ರಾರಂಭವಾಗಿ ಪೊಲೀಸ್ ಠಾಣೆಗಳ ಮೇಲೆ ಮುಗಿಬಿದ್ದರೆ?  ಅಧಿವೇಶನಕ್ಕೆ ಹಾಜರಿರದ ಶಾಸಕರನ್ನು ಕಟ್ಟಿ ಥಳಿಸತೊಡಗಿದರೆ?
ಭಾರತದಲ್ಲಿ ಯಾವ ವ್ಯವಹಾರವೂ ನೂರಕ್ಕೆ ನೂರು ಕಾನೂನನ್ನು ಪಾಲಿಸಿ ನಡೆಯುವುದೇ ಇಲ್ಲ.  ಕಾನೂನು ಪಾಲಿಸಿಲ್ಲ ಎನ್ನುವುದು ಈ ದೇಶದಲ್ಲಿ ದಾಳಿ ನಡೆಸಲು ಸಿಗಬಹುದಾದ ಅತ್ಯಂತ ಸುಲಭ ಕಾರಣ. ಎಷ್ಟೋ ಕಾನೂನುಗಳು ಯಾರೂ ಪಾಲಿಸಲಾಗದ ರೀತಿ ಇರುತ್ತವೆ. ಸ್ವತಃ ಕಾನೂನಿನ ಪರಿಧಿಯೊಳಗೆ ವ್ಯವಹರಿಸಬೇಕಾದ ಪೊಲೀಸರೇ ಈ ಪರಿಸ್ಥಿತಿಯನ್ನು ಬೇಕಾದಷ್ಟು ದುರುಪಯೋಗ ಪಡಿಸಿಕೊಂಡು ಜನರನ್ನು ಪೀಡಿಸುತ್ತಾರೆ. ಇನ್ನು ಕಾನೂನು ಪಾಲನೆಯ ಮೇಲೆ ಕಣ್ಣಿಡಲು ಖಾಸಗಿ ಪುಢಾರಿ ಪಡೆಗಳನ್ನು ಛೂ ಬಿಟ್ಟರೆ ಏನೇನಾಗಬಹುದು ಎನ್ನುವುದನ್ನು ಊಹಿಸುವುದು ಕಷ್ಟವೇನಲ್ಲ.  ದನರಕ್ಷಣೆಗೆ ಇಳಿದ  ಖಾಸಗಿ ಪಡೆಗಳ ಕೈಗೆ ಸಿಕ್ಕಿಬಿದ್ದವರು ತಾವು ದನವನ್ನು ಸಾಕಲು ಕೊಂಡೊಯ್ಯುತ್ತಿದ್ದೇವೆ ಎಂದರೂ ದಾಳಿಗೆ ಒಳಗಾಗುತ್ತಿದ್ದಾರೆ, ಕಾನೂನಿನ ಪ್ರಕಾರ ವಧಿಸಲು ಅರ್ಹವಾದ ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದೇವೆ ಎಂದರೂ ದಾಳಿ ಎದುರಿಸಬೇಕಾಗಿದೆ.  ಖಾಸಗಿ ಪಡೆಗಳು ಕಾನೂನು ಜಾರಿಗೊಳಿಸಲು ಹೊರಟರೆ ಇದಕ್ಕಿಂತ ಭಿನ್ನ ಪರಿಸ್ಥಿತಿಯನ್ನು ನಿರೀಕ್ಷಿಸಲಾಗದು. ಸರ್ಕಾರ, ಸಮಾಜದ ಆಗುಹೋಗುಗಳಲ್ಲಿ ಮೂಗು ತೂರಿಸಬಾರದು ಎಂದು ಉಗ್ರವಾಗಿ ಪ್ರತಿಪಾದಿಸುತ್ತಿದ್ದ ರಾಜಕೀಯ ತತ್ವ ಶಾಸ್ತ್ರಜ್ಞರು  ಕೂಡಾ ಕಾನೂನು ಪಾಲನೆಯ ಕೆಲಸ ಸರ್ಕಾರ ಮಾತ್ರ ನಡೆಸಬೇಕು ಎನ್ನುವುದನ್ನು ಒತ್ತಿ ಹೇಳಿದ್ದು ಈ ಕಾರಣಕ್ಕೇ.

ನಮ್ಮ ಸುತ್ತಮುತ್ತ ನಡೆಯಬಾರದ್ದೆಲ್ಲಾ ನಡೆಯುತ್ತಿರುವಾಗ ಅಧಿಕಾರದಲ್ಲಿ ಇರುವವರಲ್ಲಿ ಕೆಲವರು ಹೀಗೆ ಆಗುತ್ತಿರಲಿ ಎಂದು ಒಳಗೊಳಗಿನಿಂದಲೇ ಬಯಸುತ್ತಿದ್ದಾರೆ. ಇನ್ನು ಕೆಲವರು ಏನೂ ಆಗುತ್ತಿಲ್ಲ ಎನ್ನುವಂತೆ ಇದ್ದಾರೆ. ಇದಕ್ಕಿಂತ ಅಪಾಯಕಾರಿ ಪರಿಸ್ಥಿತಿ ಇನ್ನೊಂದಿಲ್ಲ. ಇವರಿಗೆಲ್ಲಾ ತಾವೇನು ಮಾಡುತ್ತಿದ್ದೇವೆ ಎನ್ನುವುದು ತಿಳಿಯದೇ ಇರಬಹುದು. ಅಥವಾ ತಾವು ಮಾಡುತ್ತಿರುವುದರ ಘೋರ ಪರಿಣಾಮಗಳೇನು ಎನ್ನುವುದರ ಅರಿವು  ಇಲ್ಲದಿರಬಹುದು. ತಿಳಿಯದೇ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಇವರನ್ನು ಚರಿತ್ರೆ ಕ್ಷಮಿಸುವುದಿಲ್ಲ. ನಾಳೆ ಇವರ ಮನೆಯೊಳಗೇ ಹೆಣ ಬೀಳಬಹುದು. ಈಗಾಗಲೇ ಬಿದ್ದಿದೆ ಕೂಡಾ. ಇದಕ್ಕೆ ಪುರಾವೆ ಬೇಕಾದವರು ಚರಿತ್ರೆ ಓದಬಹುದು. ಹಾಗೆಂದು ಬಹಳ ಹಿಂದಿನ ಚರಿತ್ರೆಯ ಪುಟಗಳನ್ನೇನೂ ತಿರುವಿ ಹಾಕಬೇಕಿಲ್ಲ. ಇನ್ನೂ ಮಾರದೆ ಮನೆಯಲ್ಲಿ ಪೇರಿಸಿಟ್ಟಿರುವ ಹಳೆಯ ವೃತ್ತ ಪತ್ರಿಕೆಗಳ ಅಥವಾ ವೃತ್ತ ಪತ್ರಿಕೆಗಳ ಹೆಸರಿನಲ್ಲಿ ಪ್ರಕಟವಾಗುವ ಮುಖವಾಣಿಗಳ ಪುಟಗಳ ಮೇಲೆ ಕಣ್ಣಾಯಿಸಿದರೆ ಸಾಕು, ಪ್ರತ್ಯಕ್ಷ ಸಾಕ್ಷ್ಯಗಳು ಮತ್ತು ಪರೋಕ್ಷ ಸೂಚನೆಗಳು ಸಿಗುತ್ತವೆ.

ಕೊನೆಯದಾಗಿ ಒಂದು ಪ್ರಶ್ನೆ ಕಾಡುತ್ತದೆ. ಈ ಎಲ್ಲಾ ವಿಕೃತ ಕೇಕೆಗಳ ನಡುವೆ, ಇಡೀ ದೇಶದಲ್ಲಿ  ಯಾರ ಬಾಯಿಯಿಂದಲೂ ಒಂದೇ ಒಂದು ಸಮಚಿತ್ತದ ಎಚ್ಚರಿಕೆ,  ಸಮತೋಲನದ ಕರೆ, ಪ್ರಬುದ್ಧತೆಯ ನುಡಿ ಗಟ್ಟಿಯಾಗಿ ಹುಟ್ಟದೇ ಇರುವುದು ಏನನ್ನು ಸೂಚಿಸುತ್ತದೆ? ಭಾರತದ ರಾಜಕೀಯ ನಾಯಕತ್ವ ಮತ್ತು ಧಾರ್ಮಿಕ ನಾಯಕತ್ವ ದೊಡ್ಡ ಮಟ್ಟದ ಬೌದ್ಧಿಕ-ನೈತಿಕ ದಿವಾಳಿತನವನ್ನು ಎದುರಿಸುತ್ತಿವೆ ಎಂದಲ್ಲವೇ? ನಮ್ಮ ನಡುವಣ ಅಧ್ಯಾತ್ಮೋದ್ಯಮಿಯೊಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ರೈತರಲ್ಲಿ ಅಧ್ಯಾತ್ಮ ಕೊರತೆ ಇರುವುದು ಎಂದಿದ್ದಾರೆ. ಆದರೆ ದನ ರಕ್ಷಿಸುವ ನೆಪದಿಂದ ಜನರು ಜನರನ್ನು ಕೊಲ್ಲುತ್ತಿರುವ ಸ್ಥಿತಿ ನಿರ್ಮಾಣವಾಗಿರುವುದು ಯಾಕೆ ಎಂದು ಯೋಚಿಸುವ ಕೆಲಸ ಅವರ ಅಧ್ಯಾತ್ಮೋದ್ಯಮದ ವ್ಯಾಪ್ತಿಗೂ ಬರುವುದಿಲ್ಲ ಅಥವಾ ಅಧ್ಯಾತ್ಮವೂ ವ್ಯಾಪಾರ ವಸ್ತುವಾಗಿರುವ ಸ್ಥಿತಿಯಲ್ಲಿ ಯಾರು ಯಾರಿಗೂ ಏನನ್ನೂ ಕೇಳಲಾಗದ ಮತ್ತು ಹೇಳಲಾಗದ ಪರಿಸರವೊಂದು ನಿರ್ಮಾಣವಾಗುತ್ತಿದೆ. ದನದ ವಿಚಾರದಲ್ಲಿ ಎದ್ದಿರುವ ಅಸಹನೆ, ಆಕ್ರಮಣ ಮತ್ತು ಅತಿಕ್ರಮಣ ಇತ್ಯಾದಿಗಳೆಲ್ಲ  ಭಾರತಕ್ಕೆ ಅಂಟಿಕೊಳ್ಳುತ್ತಿರುವ ಒಂದು ದೊಡ್ಡ ರೋಗದ ಕೆಲ ಲಕ್ಷಣಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT