ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಐಡೆಂಟಿಟಿಯ ಕೊನೆ ಇಲ್ಲದ ಬಿಕ್ಕಟ್ಟುಗಳು

Last Updated 22 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯಂದು `ಪ್ರಜಾವಾಣಿ~ ಹೊರತಂದ ವಿಶೇಷ ಸಂಚಿಕೆ  ಉಂಟು ಮಾಡಿರುವ ಸಂಚಲನಕ್ಕೆ ಓದುಗರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳೇ ಸಾಕ್ಷಿ.

ವಿಶೇಷ ಎಂದರೆ ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಸಾಹಿತಿಗಳು, ಸಮಾಜ ಸೇವಕರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳವರೆಗೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 90ರಷ್ಟು ಓದುಗರು ದಲಿತೇತರರು. ಅವರ ಮನಸ್ಸಲ್ಲಿ ಮೂಡಿದ ಅಪರಾಧಿ ಪ್ರಜ್ಞೆ, ಆತ್ಮಾವಲೋಕನದ ಹಂಬಲ, ಬದಲಾವಣೆಯ ತುಡಿತಗಳನ್ನು ಅವರು ಬರೆದ ಪತ್ರಗಳಲ್ಲಿ ಕಾಣಬಹುದು.

ಜಾತಿ-ಧರ್ಮಗಳಿಂದ  ಸೀಳಿ ಹೋಗಿರುವ ಸಮಾಜದಲ್ಲಿ ಈ ರೀತಿಯಲ್ಲಿ ಆಲೋಚನೆಯನ್ನಾದರೂ ಮಾಡಬಲ್ಲ ಜಾಗೃತ ಸಮುದಾಯ ಇದೆ ಎನ್ನುವುದೇ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುವಂತಹ ಬೆಳವಣಿಗೆ.

ಆಶಯದ ಮಟ್ಟದಲ್ಲಿ ಇವೆಲ್ಲ ಸರಿ, ಆದರೆ ಆಚರಣೆಯಲ್ಲಿ ಈಗಲೂ ಅಸ್ಪೃಶ್ಯತೆಯಂತಹ ಅಮಾನವೀಯ ನಡವಳಿಕೆಯನ್ನು ಮೈಗೂಡಿಸಿಕೊಂಡಿರುವ ಮತ್ತು ಅದನ್ನು ಬೆಂಬಲಿಸುವ ಜನವರ್ಗ ದೊಡ್ಡಸಂಖ್ಯೆಯಲ್ಲಿ ನಮ್ಮ ನಡುವೆ ಇದೆ ಎನ್ನುವುದು ಆಶಯ ಮತ್ತು ಆಚರಣೆಯ ನಡುವಿನ ಕಂದಕವನ್ನು ತೋರಿಸುತ್ತದೆ.

ವಿಶೇಷ ಸಂಚಿಕೆಯನ್ನು ರೂಪಿಸುವಾಗ ನಮ್ಮ ಸಂಪಾದಕರು ನೀಡಿದ್ದ ಕೆಲವು ಸಲಹೆಗಳಲ್ಲಿ ಎರಡು ಪ್ರಮುಖವಾದುವುಗಳು. ನಮ್ಮಲ್ಲಿಯೇ ಯಾರಾದರೊಬ್ಬ ದಲಿತೇತರ ಸಹೋದ್ಯೋಗಿ ದಲಿತರ ಕೇರಿಗೆ ಹೋಗಿ ಒಂದು ದಿನ ಜತೆಯಲ್ಲಿಯೇ ಇದ್ದು ಅವರ ನಿತ್ಯ ಜೀವನದ ಯಥಾವತ್ ವರದಿಯನ್ನು ಮಾಡಬೇಕೆಂಬುದು ಅವುಗಳಲ್ಲೊಂದು.

ಅದರಂತೆ ನಮ್ಮ ಮೈಸೂರಿನ ಹಿರಿಯ ವರದಿಗಾರ ಸುದೇಶ್ ದೊಡ್ಡಪಾಳ್ಯ ಅವರು ನಂಜನಗೂಡು ತಾಲ್ಲೂಕಿನ ಕಪ್ಪಸೋಗೆ ಎಂಬ ಊರಿಗೆ ಹೋಗಿ ಒಂದು ದಿನ ಅಲ್ಲಿದ್ದು ತಮ್ಮ ಅನುಭವವನ್ನು ದಾಖಲಿಸಿದ್ದರು. ಸಂಚಿಕೆಯ ಅತಿಥಿ ಸಂಪಾದಕರಾದ ದೇವನೂರ ಮಹಾದೇವ ಅವರಿಂದಲೂ ವಿಶೇಷ ಪ್ರಶಂಸೆಗೆ ಪಾತ್ರವಾದ ಈ ವರದಿ ಪ್ರಜ್ಞಾವಂತರೆಲ್ಲ ಆತ್ಮಸಾಕ್ಷಿಯನ್ನು ಕೆಣಕುವಂತಿತ್ತು.

ಅದೇ ಅದರ ಉದ್ದೇಶ ಆಗಿತ್ತೇ ಹೊರತಾಗಿ ಯಾವುದೋ ಒಂದು ಊರಿನ ಮರ್ಯಾದೆ ತೆಗೆಯುವುದು ಇಲ್ಲವೇ ಜಗಳ ಹಚ್ಚುವುದು ಆಗಿರಲಿಲ್ಲ. ಕಪ್ಪಸೋಗೆ ಎಂಬ ಊರನ್ನು ಪ್ರಾತಿನಿಧಿಕವಾಗಿ ಆಯ್ಕೆಮಾಡಲಾಗಿತ್ತು. ಇದರ ಅರ್ಥ ಆ ಊರೊಂದನ್ನು ಬಿಟ್ಟು ಬೇರೆಲ್ಲೂ ಅಸ್ಪೃಶ್ಯತೆಯ ನಡವಳಿಕೆ ಇಲ್ಲ ಎಂದಲ್ಲ. ಅಲ್ಲಿಗಿಂತಲೂ ಭೀಕರವಾದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಆಚರಿಸುವ ಊರುಗಳು ಇವೆ.

 ಆದರೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಊರಿನ ಮರ್ಯಾದೆ ಹಾಳಾಯಿತೆಂದು ಅಲ್ಲಿನ ಒಂದು ವರ್ಗದ ಜನರು ಪ್ರತಿಭಟಿಸಿದ್ದಾರೆ. ಇದರಿಂದಾಗಿ ಅಲ್ಲಿ ನಿರ್ಮಾಣವಾಗಿದ್ದ ಬಿಗುವಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹೋಗಿ ನಾಲ್ಕುದಿನ ಕಾವಲು ನಿಲ್ಲಬೇಕಾಯಿತು.

ನಮ್ಮ ವರದಿಗಾರರನ್ನು ಊರಿಗೆ ಕರೆದುಕೊಂಡು ಬಂದವನು ಎಂಬ ಶಂಕೆಯಿಂದ ಅದೇ ಊರಿನ ದಲಿತ ವಿದ್ಯಾರ್ಥಿಯೊಬ್ಬನನ್ನು ಬೆದರಿಸುವ ಪ್ರಯತ್ನಗಳೂ ನಡೆದಿವೆ. ಊರಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿಲ್ಲ ಎಂದು ಯಾರೂ ಧೈರ್ಯದಿಂದ ಮುಂದೆ ಬಂದು ಹೇಳುತ್ತಿಲ್ಲ. ಅಂತಹ ನಡವಳಿಕೆಯಿಂದ ಊರಿನ ಮರ್ಯಾದೆ ಹಾಳಾಗುತ್ತಿದೆ ಎನ್ನುವ ಅವಮಾನವೂ ಅವರನ್ನು ಕಾಡುತ್ತಿಲ್ಲ. ಅವೆಲ್ಲವೂ ಪತ್ರಿಕೆಯಲ್ಲಿ ಪ್ರಕಟವಾಗಬಾರದಿತ್ತು ಎನ್ನುವುದಷ್ಟೇ ಅವರ ವಾದ. ಇದಕ್ಕೇನು ಪರಿಹಾರ?

 ಪೊಲೀಸರು ಒಂದಷ್ಟು ದಿನ ಕಾವಲು ಕಾಯಬಹುದು, ಅದರ ನಂತರ? ಕಪ್ಪಸೋಗೆ ಎನ್ನುವ ಊರು ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು. ಆ ಊರಲ್ಲಿ ಇಂತಹ ಘಟನೆ ನಡೆದಾಗ ಅಲ್ಲಿಗೆ ಮೊದಲು ಧಾವಿಸಿಹೋಗಬೇಕಾದವರು ಅಲ್ಲಿನ ಶಾಸಕರು.

ಆದರೆ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ನೊಂದಿರುವ ದಲಿತರಿಗೆ ನೆರವಾಗಬೇಕೆಂಬ ಪ್ರಾಮಾಣಿಕ ಉದ್ದೇಶ ಮೀಸಲು ಕ್ಷೇತ್ರದ ದಲಿತ ಪ್ರತಿನಿಧಿಗಳಿಗೆ ಇದ್ದರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ.

ಎಲ್ಲ ಜಾತಿ-ಧರ್ಮಗಳ ಮತಗಳನ್ನು ಅವಲಂಬಿಸಿರುವ ಅವರು ಕೇವಲ ದಲಿತರ ಪರವಾಗಿ ನಿಂತರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಭವಿಷ್ಯದಲ್ಲಿ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದೆಂಬ ಎಚ್ಚರಿಕೆಯಿಂದಲೇ ಅಂಬೇಡ್ಕರ್ ಅವರು ದಲಿತ ಮತದಾರರಷ್ಟೇ ದಲಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕಿಗಾಗಿ ಒತ್ತಾಯಿಸಿದ್ದು.  

ಇತಿಹಾಸವನ್ನು ಕೆದಕಿ, ಪ್ರತ್ಯೇಕ ಮತದಾನ ಹಕ್ಕು ಯಾಕೆ ಸಿಗಲಿಲ್ಲ ಎನ್ನುವ ಚರ್ಚೆಯನ್ನು ಬೆಳೆಸುವುದರಿಂದ ಇನ್ನಷ್ಟು ಮನಸ್ಸುಗಳು ಒಡೆದುಹೋಗಬಹುದೇ ಹೊರತು ಬೇರೇನೂ ಲಾಭವಾಗಲಾರದು. ಇದಕ್ಕಾಗಿ ಬೇರೆಯೇ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು ವಿಶೇಷ ಸಂಚಿಕೆಯ ಸಂಪಾದಕೀಯಕ್ಕೆ ಸೂಚಿಸಿದ್ದ `ಸಾಮಾಜಿಕ ಪೊಲೀಸರು~ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುವ ಅಗತ್ಯ ಇದೆ. ಜರ್ಮನಿಯೂ ಸೇರಿದಂತೆ ಕೆಲವು ದೇಶಗಳಲ್ಲಿ ಇಂತಹದ್ದೊಂದು ವ್ಯವಸ್ಥೆ ಇರುವುದನ್ನು ಅವರು ಹೇಳಿದ್ದರು.

ಜಾತಿ ತಾರತಮ್ಯ ಇಲ್ಲವೇ ಅಸ್ಪೃಶ್ಯತೆಯ ಆಚರಣೆ ವಿಕೋಪಕ್ಕೆ ಹೋಗುವವರೆಗೆ ಕಾಯುತ್ತ ಕೂರದೆ, ಅಂತಹ ನಡವಳಿಕೆಗಳ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಎರಡು ಪಂಗಡಗಳ ಜತೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯ.

ವೃತ್ತಿನಿರತ ರಾಜಕಾರಣಿಗಳನ್ನು ದೂರ ಇಟ್ಟು ಸಾಮಾಜಿಕ ಕಳಕಳಿ ಹೊಂದಿರುವ ಅಧಿಕಾರಿಗಳು,ಪ್ರಾಧ್ಯಾಪಕರು, ವಕೀಲರು, ಪತ್ರಕರ್ತರು, ಸಮಾಜಸೇವಕರು -ಹೀಗೆ ವಿವಿಧ ವರ್ಗಗಳ ಪ್ರತಿನಿಧಿಗಳನ್ನು ಈ `ಸಾಮಾಜಿಕ ಪೊಲೀಸ್~ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ದೇವನೂರ ಹೇಳುತ್ತಾರೆ.

  ಕಪ್ಪಸೋಗೆಯಿಂದಲೇ ಇಂತಹದ್ದೊಂದು ಸಾಮಾಜಿಕ ಸಾಮರಸ್ಯದ ಪ್ರಯೋಗವನ್ನು ಪ್ರಾರಂಭಿಸಬಹುದೇನೋ?

`ಹಳ್ಳಿಗಳಲ್ಲಿ ಇಂತಹ ಪರಿಸ್ಥಿತಿ ಇರಬಹುದು, ನಗರದ ಶಿಕ್ಷಿತ ವಲಯಗಳಲ್ಲಿ ಅಸ್ಪೃಶ್ಯತೆ ಎಲ್ಲಿದೆ? ಯಾರು ಯಾರ ಮನೆಯ ಒಳಗೆ ಹೋಗಿ ಊಟ-ತಿಂಡಿ ಮಾಡುವ ಪರಿಸ್ಥಿತಿ ಇಲ್ಲವೇ? ಮಡಿ-ಮೈಲಿಗೆಯನ್ನು ಯಾರು ಆಚರಿಸುತ್ತಾರೆ?~ ಎಂದೆಲ್ಲ ಪ್ರಶ್ನಿಸುವವರು ಇದ್ದಾರೆ. ಮೇಲ್ನೋಟಕ್ಕೆ ಇದು ಸತ್ಯದಂತೆ ಕಾಣುತ್ತದೆ ಕೂಡಾ.
 
ಆದರೆ ಇದು ನಿಜವಾದ ಸತ್ಯ ಅಲ್ಲ. ಇದಕ್ಕೆ ಸಂಬಂಧಿಸಿದಂತೆ ಸಂಪಾದಕರು ಕೊಟ್ಟಿದ್ದ ಇನ್ನೊಂದು ಸಲಹೆ ಕುತೂಹಲಕರವಾಗಿತ್ತು. `ಸರ್ಕಾರೇತರ ಅದರಲ್ಲೂ ಮುಖ್ಯವಾಗಿ ಅಸಂಪ್ರದಾಯಿಕವಾದ, ಉದಾಹರಣೆಗೆ ಕ್ರಿಕೆಟ್, ಸಿನೆಮಾ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಂದ ಅನುಭವವನ್ನು ಬರೆಸಬೇಕು, ಆ ಮೂಲಕ ಅವರನ್ನು ಸ್ಪೂರ್ತಿದಾಯಕರನ್ನಾಗಿ ಬಿಂಬಿಸಬೇಕು~ ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ಆದರೆ ಅಂತಹವರನ್ನು ಹುಡುಕಲು ಹೊರಟಾಗ ಆದ ಅನುಭವ ಉತ್ತೇಜನಕಾರಿಯಾಗಿರಲಿಲ್ಲ. ಸಾಂಪ್ರದಾಯಿಕವಾಗಿ ದಲಿತರ ಪ್ರಾತಿನಿಧ್ಯ ಇಲ್ಲದೆ ಇರುವ ಹಲವಾರು ಕ್ಷೇತ್ರಗಳಲ್ಲಿ ಈಗ ದಲಿತರಿದ್ದಾರೆ ಎನ್ನುವುದು ನಿಜ. ಆದರೆ ಅವರಲ್ಲಿ ಹೆಚ್ಚಿನವರು ತಮ್ಮ ಗುರುತು ಬಹಿರಂಗಕ್ಕೆ ಇಚ್ಚಿಸುವುದಿಲ್ಲ. ಇದರಿಂದಾಗಿ ಈ ಬಗ್ಗೆ ಲೇಖನ ಪ್ರಕಟಣೆ ಸಾಧ್ಯವಾಗಲಿಲ್ಲ.

ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿರುವ ದಲಿತರು ತಮ್ಮ ಜಾತಿಯನ್ನು ಬಹಿರಂಗಪಡಿಸಲು ಇಚ್ಚಿಸುವುದಿಲ್ಲ. ರಾಜಕೀಯದಲ್ಲಿ ಜಾತಿ ಒಂದು ಬಂಡವಾಳದ ರೂಪದಲ್ಲಿ ಕೆಲಸ ಮಾಡುವುದರಿಂದ ಅಲ್ಲಿ  ದಲಿತರು ಪೈಪೋಟಿಗೆ ಬಿದ್ದು ಜಾತಿಯನ್ನು ಘೋಷಿಸಿಕೊಳ್ಳುತ್ತಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ದಲಿತ ಸಾಹಿತ್ಯ ಚಳುವಳಿ ಶಕ್ತಿಶಾಲಿ ರೂಪದಲ್ಲಿ ಸಾಗಿಬಂದ ಕಾರಣದಿಂದಾಗಿ ಆ ಕ್ಷೇತ್ರದಲ್ಲಿಯೂ ದಲಿತ ಲೇಖಕರು ತಮ್ಮ ಗುರುತನ್ನು ಬಹಿರಂಗಪಡಿಸಲು ಹಿಂಜರಿಯುವುದಿಲ್ಲ.

ಆದರೆ ಬೇರೆ ಕ್ಷೇತ್ರಗಳಲ್ಲಿ ಅಂತಹ ಸ್ಥಿತಿ ಇಲ್ಲ. ದಲಿತರೆನ್ನುವುದು ಬಹಿರಂಗಗೊಂಡರೆ ಬಹಳ ಕಷ್ಟಪಟ್ಟು ಗಳಿಸಿಕೊಂಡಿರುವ ಸ್ಥಾನಕ್ಕೆ ಕುತ್ತು ಬರಬಹುದು ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ. ಇದು ಕಣ್ಣಿಗೆ ಕಾಣಿಸಿಕೊಳ್ಳದ ಮತ್ತು ರಹಸ್ಯವಾಗಿ ಕಾರ್ಯರೂಪದಲ್ಲಿರುವ ಅಸ್ಪೃಶ್ಯತೆ.

ಹಳ್ಳಿಗಳಲ್ಲಿ ಎಲ್ಲರ ಕಣ್ಣಿಗೆ ಕಾಣಿಸುವಂತೆ ಬಹಿರಂಗವಾಗಿ ನಡೆಯುತ್ತಿರುವ `ಮುಟ್ಟದಿರುವ~ ಇಲ್ಲವೆ `ಒಳಗೆ ಕರೆದುಕೊಳ್ಳದ~ ಸಾಮಾನ್ಯ ಬಗೆಯ ಅಸ್ಪೃಶ್ಯತೆಗಿಂತ ಭಿನ್ನವಾದುದು. ನಗರದಲ್ಲಿ ದಲಿತರಿಗೆ ಮನೆಯೊಳಗೆ ಪ್ರವೇಶ ಇರುತ್ತದೆ, ಜತೆಯಲ್ಲಿಯೇ ಕೂತು ಊಟಮಾಡುವ ಅವಕಾಶವೂ ಇರುತ್ತದೆ.

ಆದರೆ ಅದೇ ದಲಿತ ಯುವಕ ಯಾವುದೋ ಉದ್ಯೋಗಕ್ಕೆ ಅರ್ಜಿ ಹಾಕಿದರೆ ಅದನ್ನು ಮೆತ್ತಗೆ ಪಕ್ಕಕ್ಕೆ ಸರಿಸಲಾಗುತ್ತದೆ. ಸರ್ಕಾರಿ ಇಲಾಖೆಗಳಲ್ಲಿ ಭರ್ತಿಯಾಗದೆ ಬಿದ್ದಿರುವ ಬ್ಯಾಕ್‌ಲಾಗ್ ಹುದ್ದೆಗಳ ಹಿಂದೆಯೂ ಇಂತಹದ್ದೇ ಹುನ್ನಾರ ಇದೆ. ಪರಿಣಾಮದ ದೃಷ್ಟಿಯಿಂದ ನೋಡಿದರೆ ಇದು ಹಳ್ಳಿಗಳಲ್ಲಿ ನಡೆಯುವ ಅಸ್ಪೃಶ್ಯತೆಗಿಂತಲೂ ಕ್ರೂರವಾದುದು.
 
ಬಹಿರಂಗವಾಗಿ ಆಚರಿಸಲಾಗುವ ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸಬಹುದು, ಅದರ ವಿರುದ್ಧ ಹೋರಾಟಕ್ಕೆ ಕಾನೂನಿನ ಬೆಂಬಲವೂ ಇದೆ. ಆದರೆ ಕಣ್ಣಿಗೆ ಕಾಣದ ಎರಡನೆ ಬಗೆಯ ಅಸ್ಪೃಶ್ಯತೆಯನ್ನು ಎದುರಿಸಲು ಅಂತಹ ಯಾವ ಹತಾರಗಳೂ ಸದ್ಯಕ್ಕೆ ಇಲ್ಲ, ಸುಲಭದಲ್ಲಿ ಶತ್ರುವರ್ಗ ರಚಿಸುವ ವ್ಯೆಹಗಳು ಬಡಪಾಯಿ ದಲಿತರಿಗೆ ಗೊತ್ತಾಗುವುದೂ ಇಲ್ಲ.

ದಲಿತ ಸಮುದಾಯದ ಯಶಸ್ವಿ ವ್ಯಕ್ತಿಗಳೆಲ್ಲರೂ ಇಂತಹ ಆತಂಕದಿಂದಲೇ ತಮ್ಮ  ಗುರುತನ್ನು ಬಚ್ಚಿಡುತ್ತಾರೆ ಎಂದು ಸಾರಸಗಟಾಗಿ ಹೇಳುವುದು ಕೂಡಾ ಸರಿಯಾಗಲಾರದು. ದೇಶ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲೊಬ್ಬರಾಗಿರುವ ವಿಜಯಕೃಷ್ಣ ತಮ್ಮನ್ನು ದಲಿತರೆಂದು ಗುರುತಿಸಿಕೊಳ್ಳಲೇ ಇಲ್ಲ, ಈಗಲೂ ಯಾರಾದರೂ ತಮ್ಮ ಜಾತಿ ಮೂಲಕ ಗುರುತಿಸುವುದು ಅವರಿಗೆ ಇಷ್ಟವಾಗುವುದಿಲ್ಲ.

ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಆ ರೀತಿ ನಡೆದುಕೊಂಡಿದ್ದರೆ ಅದಕ್ಕೆ ಕಾರಣಗಳು ಇರಬಹುದು. ಆದರೆ ಈಗ ? ಖ್ಯಾತ ಸಂಗೀತಗಾರ ಇಳಯರಾಜಾ ಅವರು  ಇಂದು ಯಾವ ಎತ್ತರಕ್ಕೆ ಏರಿದ್ದಾರೆಂದರೆ ಅವರು ದಲಿತರೆಂದು ಹೇಳಿಕೊಂಡರೂ ಆ ಕಾರಣಕ್ಕಾಗಿ ಅವರನ್ನು ಈಗ ಇರುವ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಾಗಲಾರದು.
 
ಪೊಲೀಸ್ ಸೇವೆಯಿಂದ ನಿವೃತ್ತರಾಗಿರುವ ಡಾ.ಅಜಯಕುಮಾರ್‌ಸಿಂಗ್ ದಲಿತರೆಂದು ಹೇಳಿಕೊಳ್ಳುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಇಂತಹ ಪ್ರಭಾವಶಾಲಿ ದಲಿತ ಸಾಧಕರು  ಜಾತಿ ರಹಸ್ಯವನ್ನು ಕಾಪಾಡಿಕೊಂಡು ಬರುವುದನ್ನು ಸಮರ್ಥಿಸಿಕೊಳ್ಳುವುದು ಕಷ್ಟ.

ಇತ್ತೀಚೆಗೆ ನಮ್ಮ ಪುರವಣಿಯೊಂದರಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ರಂಗಕರ್ಮಿಯ ಪರಿಚಯ ಪ್ರಕಟವಾಯಿತು. ಅದನ್ನು ಓದಿದ ಸ್ನೇಹಿತರೊಬ್ಬರು ದಲಿತ ಕಲಾವಿದ ಎಂದು ಕರೆದಿದ್ದು ಸರಿಯೇ ಎಂದು ಪ್ರಶ್ನಿಸಿದರು. ಇವೆಲ್ಲವೂ ಚರ್ಚೆ ನಡೆಯಬೇಕಾದ ಸೂಕ್ಷ್ಮ ವಿಚಾರಗಳು. ಒಬ್ಬ ಕಳ್ಳನನ್ನೊ, ವಂಚಕನನ್ನೋ ಆತ ಹುಟ್ಟಿದ ಜಾತಿ ಮೂಲಕ ಪರಿಚಯಿಸುವುದು  (ಉದಾಹರಣೆಗೆ ಚಂದಪ್ಪ ಹರಿಜನ) ಖಂಡಿತ ಸರಿ ಅಲ್ಲ.
 
ವ್ಯಕ್ತಿಯೊಬ್ಬ ನಡೆಸಿರುವ ಅಪರಾಧಕ್ಕೂ, ಆತ ಹುಟ್ಟಿದ ಜಾತಿಗೂ ಸಂಬಂಧ ಇರುವುದಿಲ್ಲ. ಆದರೆ ಉತ್ತಮ ಕೆಲಸ ಮಾಡಿರುವ ಇಲ್ಲವೆ ಇತರರಿಗೆ ಸ್ಪೂರ್ತಿ ನೀಡಬಲ್ಲಂತಹ ಸಾಧನೆ ಮಾಡಿದ  ದಲಿತ ವ್ಯಕ್ತಿಯನ್ನು ದಲಿತನೆಂದು ಯಾಕೆ ಪರಿಚಯಿಸಬಾರದು ಎಂದು ಕೇಳುವವರಿದ್ದಾರೆ.

ದಲಿತ ಸಾಧಕರು ತಮ್ಮ ಜಾತಿಯನ್ನು ಬಹಿರಂಗ ಪಡಿಸುವುದರಿಂದ, ಕೀಳರಿಮೆಯಿಂದ ಬಳಲುತ್ತಿರುವ ಕೋಟ್ಯಂತರ ದಲಿತ ಯುವಕ-ಯುವತಿಯರಿಗೆ ಸ್ಫ್ಪೂರ್ತಿ ನೀಡಿದಂತಾಗುತ್ತದೆ ಎನ್ನುವುದು ಅವರ ವಾದ. ವಿಜಯಕೃಷ್ಣ, ಇಳಯರಾಜಾ ಇಲ್ಲವೇ ಇತ್ತೀಚಿನ ಯಶಸ್ವಿ ಚಿತ್ರ `ಸಂಜು ವೆಡ್ಸ್ ಗೀತಾ~ ಚಿತ್ರದ ನಿರ್ದೇಶಕ ನಾಗಶೇಖರ್ ಅವರು ಜಾತಿಯ ಬಲದಿಂದ ಸಾಧನೆಯ ಶಿಖರ ಏರಿದವರಲ್ಲ.
 
ಆದರೆ ಜಾತಿ ಎನ್ನುವ ಹೊರೆಯನ್ನು ಬೆನ್ನಮೇಲೆ ಕಟ್ಟಿಕೊಂಡು ಸಾಧನೆಯ ಶಿಖರವನ್ನು ಏರಿದ ಅವರ ಪ್ರಯತ್ನ ಖಂಡಿತ ಇತರ ದಲಿತರು ಸಾಧನೆಯ ಹಾದಿಯಲ್ಲಿ ಮುಂದುವರಿಯಲು ಪ್ರೇರೇಪಿಸುವಂತಹದ್ದು. ಈ ಹಿನ್ನೆಲೆಯಲ್ಲಿ ದಲಿತ ಐಡೆಂಟಿಟಿಯ ಬಿಕ್ಕಟ್ಟನ್ನು ಇನ್ನಷ್ಟು ಚರ್ಚೆಗೆ ಒಡ್ಡುವ ಅಗತ್ಯ ಇದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT