ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ಹಿಂದೆ ದಹಿಸಿ ಹೋದ ಕುಸುಮಗಳು

Last Updated 9 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ದನದ ದೊಡ್ಡಿ. ಕೈದಿಗಳನ್ನೂ ಅಷ್ಟು ನಿಷ್ಕರುಣೆಯಿಂದ ಕೂಡಿ ಹಾಕುವುದಿಲ್ಲ. ಆ ಕಿಷ್ಕಿಂಧೆಯಲ್ಲಿ ನರ್ಸರಿಯಿಂದ ಪ್ರೌಢಶಾಲೆಯವರೆಗಿನ ಒಂಬತ್ತು ನೂರು ಮಕ್ಕಳು. ತರಗತಿಗಳ ನಡುವೆ ಪ್ರತ್ಯೇಕ ಗೋಡೆಗಳಿಲ್ಲ. ಗಾಳಿ ಬೆಳಕಿನ ಕಿಟಕಿಗಳಿಲ್ಲ. ಕಿರಿದಾದ ಮತ್ತು ಕಡಿದಾದ ಮೆಟ್ಟಿಲುಗಳು. ಇಳಿದ ಕೂಡಲೇ ಧುತ್ತನೆ ಎದುರಾಗುವ ದಟ್ಟ ವಾಹನ ಸಂಚಾರದ ಗಲೀಜು ರಸ್ತೆ. ಆವರಣ ಗೋಡೆ ಇಲ್ಲ. ಆಟದ ಮೈದಾನವಿಲ್ಲ. ಗಿಡಮರಗಳಿಲ್ಲ. ಎರಡೂ ಬದಿ ಒಂದಿಂಚು ಜಾಗವಿಲ್ಲದೆ ಒತ್ತೊತ್ತಾಗಿ ಕಟ್ಟಿದ ವಾಸದ ಮನೆಗಳು. ಗೋಡೌನ್ ಆಗಲೂ ನಾಲಾಯಕ್ಕಾದ ಜಾಗದಲ್ಲಿ ಹೈಸ್ಕೂಲು. ಎದುರಿಗೆ ಫಲಕ ಮಾತ್ರ ಕೂಗಿ ಹೇಳುತ್ತದೆ: ಸರಸ್ವತಿ ನರ್ಸರಿ ಶಾಲೆ; ಶ್ರೀ ಕೃಷ್ಣ ಪ್ರೈಮರಿ ಮತ್ತು ಪ್ರೌಢ ಶಾಲೆ.

ಅಂದು ಬೆಳಗಿನ ಒಂಬತ್ತಕ್ಕೆ ಶಾಲೆ ಆರಂಭವಾಯಿತು. ಮಧ್ಯಾಹ್ನದ ಬಿಸಿ ಊಟಕ್ಕೆ ವಿಜಯಲಕ್ಷ್ಮಿ ಮತ್ತು ವಾಸಂತಿ ಸೌದೆ ಒಲೆ ಹಚ್ಚಿದರು. ಯಾರು ಎಚ್ಚರ ತಪ್ಪಿದರೋ ಬೆಂಕಿ ಕಟ್ಟಡಕ್ಕೆ ಹಬ್ಬಿತು. ಯಾರೂ ಓಡಿಹೋಗಬೇಡಿ. ತರಗತಿಯಲ್ಲಿ ಕುಳಿತುಕೊಳ್ಳಿ ಎಂದು ಮಕ್ಕಳಿಗೆ ಆದೇಶ ಕೊಟ್ಟ ಕೆಲವು ಶಿಕ್ಷಕರು ತಾವೇ ಓಡಿಹೋದರು. ಮೆಟ್ಟಿಲ ಮೇಲೆ ಸೌದೆ ರಾಶಿ. ಓಡಲೂ ಆಗದ ಇಕ್ಕಟ್ಟಾದ ಜಾಗ. ಕೆಲವು ಮಕ್ಕಳು ಓಡಿದರು. ಆಚೆ ಹೋಗಿದ್ದ ವಿಘ್ನೇಶ ತರಗತಿಯಲ್ಲಿ ಮರೆತು ಬಂದಿದ್ದ ಸ್ಕೂಲ್ ಬ್ಯಾಗು ಮತ್ತು ನೀರಿನ ಬಾಟಲ್ ತರಲು ಮತ್ತೆ ಓಡಿದ. ಆ ವೇಳೆಗೆ ಬೆಂಕಿ ಜೋರು ಅಡರಿತ್ತು. ವಿಘ್ನೇಶ ಸ್ಕೂಲ್ ಬ್ಯಾಗಿನ ಜತೆಗೇ ಸುಟ್ಟುಹೋದ. ಅಗ್ನಿ ಅಪಘಾತವನ್ನೆದುರಿಸುವ ತರಬೇತಿ ಮಕ್ಕಳಿಗೂ, ಶಿಕ್ಷಕರಿಗೂ ಇರಲಿಲ್ಲ. ಅಗ್ನಿ ಶಾಮಕ ದಳ ಬಂತು. ಅವರಿಗೂ ಕಿರಿದಾದ ಕಟ್ಟಡದೊಳಗೆ ಪ್ರವೇಶಿಸುವುದೇ ದುರ್ಗಮವಾಯಿತು. ಕಿಟಕಿ ಬಾಗಿಲುಗಳಿಂದ ಬೆಂಕಿಯ ಕೆನ್ನಾಲಗೆ ಮತ್ತು ಹೊಗೆ. ಚಿಟ್ಟೆಗಳಂತೆ ಪಟಪಟನೆ ಸುಟ್ಟುಹೋದ ಮಕ್ಕಳ ಸಂಖ್ಯೆ ೯೪. ಅನಂತರ ನಿರೀಕ್ಷಿಸಿದ್ದಂತೆ ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳು ಪರಿಹಾರ ಘೋಷಣೆಯೊಂದಿಗೆ ಬಂದರು. ಮಕ್ಕಳ ನೆನಪಿಗೆ ಪಾರ್ಕು ಮಾಡಿದರು. ಸ್ಮಾರಕ ಕಟ್ಟಿದರು. ಸತ್ತ ಮಗುವಿನ ಹೆತ್ತವರಿಗೆ ಲಕ್ಷ ರೂಪಾಯಿ ಕೊಟ್ಟರು. ಹೆಚ್ಚು ಗಾಯಗೊಂಡವರಿಗೆ ಐವತ್ತು ಸಾವಿರ. ಕೊಂಚ ಗಾಯಗೊಂಡವರಿಗೆ ಇಪ್ಪತ್ತೈದು ಸಾವಿರ... ಇತ್ಯಾದಿ ಇತ್ಯಾದಿ...

ಚರಿತ್ರೆಯಿಂದ ಪಾಠ ಕಲಿಯುವ ಜನ ಅಲ್ಲ ನಾವು. ಕಲಿತಿದ್ದರೆ ಹೊಸ ತಪ್ಪುಗಳನ್ನಾದರೂ ಮಾಡುತ್ತಿದ್ದೆವು. ಮೇಲೆ ವಿವರಿಸಿದ ದುರಂತ ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿ ಘಟಿಸಿ ಹತ್ತು ವರ್ಷಗಳಾಯಿತು. ಶ್ರೀರಂಗಂನ ಮದುವೆ ಮನೆಯೊಂದರಲ್ಲಿ ವರನೂ ಸೇರಿ ಮೂವತ್ತು ಜನ ಸಜೀವ ದಹನಗೊಂಡ ಆರೇ ತಿಂಗಳಿನಲ್ಲಿ, ಕುಂಭಕೋಣಂನಲ್ಲಿ ಮಕ್ಕಳು ಅಗ್ನಿಗೆ ಆಹುತಿಯಾದರು. ಎರವಾಡಿನಲ್ಲಿ ಮೂವತ್ತು ಬುದ್ಧಿಮಾಂದ್ಯ ಮಕ್ಕಳು ಸುಟ್ಟು ಹೋದದ್ದು, ತಂಜಾವೂರಿನ ಬೃಹದೇಶ್ವರ ದೇವಾಲಯದಲ್ಲಿ ಅರವತ್ತು ಮಂದಿ ಬೆಂಕಿಯ ಪಾಲಾದದ್ದು, ಇಂಥ ಘಟನೆಗಳು ಭಾರತದಾದ್ಯಂತ ನಡೆಯುತ್ತಲೇ ಇರುತ್ತವೆ. ಸಂತ್ರಸ್ತರಿಗೆ ಅದು ಶಾಶ್ವತವಾದ ಸಂಕಟ. ಇದು ಮುಗ್ಧತೆಯೋ? ಅಜ್ಞಾನವೋ? ದೇಶದಾದ್ಯಂತ ಈಗಲೂ ಅನೇಕ ಶಾಲೆಗಳು ಕುಂಭಕೋಣಂನ ಶಾಲೆಯ ಸ್ಥಿತಿಯಲ್ಲಿಯೇ ಇವೆ. ಆಧುನಿಕ ಕಟ್ಟಡ ಉಳ್ಳ ಶಿಷ್ಟಶಾಲೆಗಳಲ್ಲಿ ಅತ್ಯಾಚಾರದ ಆತಂಕ; ಕೊಳೆಗೇರಿಯ ಶಾಲೆಗಳಲ್ಲಿ ಅತ್ಯಾಚಾರ ಮತ್ತು ಅಗ್ನಿ ಆಕಸ್ಮಿಕದ ಭಯ. ನಮ್ಮ ದೇಶದಲ್ಲಿ ಮಗು ಅರಕ್ಷಿತ. ಜೀವಗಳು ಇಷ್ಟೊಂದು ಅಗ್ಗವೆ ?

ಕುಂಭಕೋಣಂನ ಈ ದುರ್ದೈವಿ ಶಾಲೆಯನ್ನು ನೋಡಬೇಕೆಂದು ಕಳೆದ ಹತ್ತು ವರ್ಷದಿಂದ ಅಂದುಕೊಳ್ಳುತ್ತಿದ್ದೆ. ಮೊನ್ನೆ ಏನಾಯಿತೆಂದರೆ ಆಫ್ರಿಕಾದಿಂದ ನನ್ನ ಇಬ್ಬರು ಆಪ್ತಮಿತ್ರರು ಬಂದರು. ಇಬ್ಬರೂ ಅಂತರರಾಷ್ಟ್ರೀಯ ಖ್ಯಾತಿಯ ಫೋಟೊಗ್ರಾಫರ್‌ಗಳು. ಸೊಮಾಲಿಯಾದಿಂದ ಬಂದಿದ್ದ ಒಬ್ಬರಿಗೆ ಶೇಕಡಾ ಇಪ್ಪತ್ತು ತಮಿಳು ಬರುತ್ತಿತ್ತು. ತಮಿಳುನಾಡಿನ ದೇವಾಲಯಗಳ ಫೋಟೊ ತೆಗೆಯಲು ಮೂವರೂ ಹೊರಟೆವು. ಮಧುರೈ, ರಾಮೇಶ್ವರಂ ಅಲೆದು ತಂಜಾವೂರಿನಲ್ಲಿ ತಂಗಿದ್ದೆವು. ಬೆಳಗಿನ ದಿನಪತ್ರಿಕೆ ತೆಗೆದರೆ ತಂಜಾವೂರಿನ ಜಿಲ್ಲಾ ನ್ಯಾಯಾಲಯದ ಚಿತ್ರ. ಎದುರಿಗೆ ಕುಳಿತ ನೊಂದ ಅಮ್ಮಂದಿರು, ಕುಂಭಕೋಣಂ ಶಾಲೆಯ ಮಾಲೀಕ ಪಳನಿಸ್ವಾಮಿಯನ್ನು ಪೊಲೀಸರು ಜೈಲಿಗೆ ಕರೆ ದೊಯ್ಯುತ್ತಿರುವ ಚಿತ್ರ. ಜುಲೈ ೨೦೦೪ರ ದುರಂತಕ್ಕೆ ಜುಲೈ 2014ರಲ್ಲಿ ನ್ಯಾಯದಾನ ! ಆ ಮಕ್ಕಳು ಬದುಕಿದ್ದರೆ ಈಗ ಹದಿ ಹರೆಯದವರಾಗಿರುತ್ತಿದ್ದರು. ಹತ್ತು ವರ್ಷದ ನಂತರ ದೊರೆತ ನ್ಯಾಯದಲ್ಲೂ ಅನ್ಯಾಯ. ಹನ್ನೊಂದು ಅಪರಾಧಿಗಳು ದೋಷ ಮುಕ್ತರಾಗಿದ್ದರು. ವಿಜಯಲಕ್ಷ್ಮಿ, ವಾಸಂತಿಯರು ಸೇರಿದಂತೆ ಎಂಟು ಮಂದಿಗೆ ಐದು ವರ್ಷ ಜೈಲು ಶಿಕ್ಷೆ.

ಎಂಜಿನಿಯರ್ ಜಯಚಂದ್ರನ್‌ಗೆ ಎರಡು ವರ್ಷ ಜೈಲು ಶಿಕ್ಷೆ. ಶಾಲೆಯ ಸ್ಥಾಪಕ ಪಳನಿಸ್ವಾಮಿಗೆ ಮಾತ್ರ ಜೀವಾವಧಿ ಶಿಕ್ಷೆ. ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ದೋಷಮುಕ್ತರಾಗಿದ್ದರು. ಮಕ್ಕಳನ್ನು ಕಳೆದುಕೊಂಡವರಲ್ಲಿ ಆಕ್ರೋಶ ಮಡುಗಟ್ಟಿತ್ತು. ಸೋನಿಯಾ ಕುಟುಂಬದ ಅಭಿಮಾನಿಯಾಗಿದ್ದ ಎಪ್ಪತ್ತು ವರ್ಷದ ಸರೋಜಾ ಎಂಬ ವೃದ್ಧೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಎಂಬ ಹೆಸರಿನ ತನ್ನ ಎರಡೂ ಮೊಮ್ಮಕ್ಕಳನ್ನು ಅಗ್ನಿ ದುರಂತದಲ್ಲಿ ಕಳೆದುಕೊಂಡಿದ್ದರು. ಇಂದಿರಾಗಾಂಧಿ, ರಾಹುಲ್ ಗಾಂಧಿ ಎಂಬ ಇನ್ನಿಬ್ಬರು ಮೊಮ್ಮಕ್ಕಳನ್ನು ಬೇರೆ ಶಾಲೆಯಲ್ಲಿ ಓದಿಸುತ್ತಿದ್ದರು. ಉಚ್ಚ ನ್ಯಾಯಾಲಯಕ್ಕೆ ಅಪೀಲ್ ಹೋಗುತ್ತೇನೆ. ಸೋನಿಯಾ ಮೇಡಂಗೆ ದೂರು ಕೊಡುತ್ತೇನೆ ಎಂಬ ಸರೋಜಮ್ಮನ ಹೇಳಿಕೆ ಪ್ರಕಟವಾಗಿತ್ತು. ಈ ತೀರ್ಪಿಗಾಗಿ ಹತ್ತು ವರ್ಷ ಕಾಯಬೇಕಿತ್ತೆ? ನ್ಯಾಯ ದೊರಕುವವರೆಗೂ ನಿದ್ರೆ ಮಾಡುವುದಿಲ್ಲ. ಬೇಜವಾಬ್ದಾರಿ ಶಿಕ್ಷಕರನ್ನು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದರು ಸೂರ್ಯಕುಮಾರಿ ಎಂಬ ಮಹಿಳೆ. ರಾಜ್ಯ ಸರ್ಕಾರವೇ ಮೊಕದ್ದಮೆಯನ್ನು ಮುಂದುವರಿಸಬೇಕು ಎಂಬ ನಿಲುವು ಆಕೆಯದು.

ನನ್ನ ಆಫ್ರಿಕನ್ ಮಿತ್ರರಿಗೆ ಇಲ್ಲಿಂದ ಕುಂಭಕೋಣಂ ಕೇವಲ ನಲವತ್ತು ಕಿಲೋಮೀಟರ್, ಹೋಗಿ ಆ ಶಾಲೆಯನ್ನು ನೋಡಿ ಬರುತ್ತೇನೆ ಎಂದೆ. ಆ ಶಾಲೆಯನ್ನು ನೋಡುವುದು ದೇವಾಲಯ ನೋಡುವುದಕ್ಕಿಂತ ಮುಖ್ಯವಾದದ್ದು; ನಾವೂ ಬರುತ್ತೇವೆ ಎಂದು ಹೊರಟರು. ಹನಿ ನೀರಿಲ್ಲದ ಕಾವೇರಿ ನದಿ ಮರಳುಗಾಡಿನಂತಿತ್ತು. ಮೆಟ್ಟೂರು ಡ್ಯಾಂ ತುಂಬಿದ್ದರೂ ಅಮ್ಮ ನೀರು ಬಿಟ್ಟಿರಲಿಲ್ಲ. ಆದಿ ಪೆರುಕ್ಕಿ ಹಬ್ಬದ ಹಿಂದಿನ ದಿನ ನೀರು ಬಿಡುವ ಯೋಜನೆ ಇತ್ತು. ಜನರನ್ನು ಸಂಪ್ರೀತಗೊಳಿಸುವ ಕಲೆಯನ್ನು ಜಗತ್ತಿನ ರಾಜಕಾರಣಿಗಳೆಲ್ಲಾ ಜಯಲಲಿತಾರಿಂದ ಕಲಿಯಬೇಕು. ಹೋಟೆಲ್ಲಿನಲ್ಲೂ ಅಮ್ಮ, ಬಸ್‌ಸ್ಟ್ಯಾಂಡಲ್ಲೂ ಅಮ್ಮ, ಸ್ಕೂಲ್ ಬ್ಯಾಗಿನ ಮೇಲೂ ಅಮ್ಮ. ತಮಿಳರು ಶ್ರಮಜೀವಿಗಳು, ಮುಗ್ಧರು. ಗಾಢವಾದ ಸದ್ದು, ಬಣ್ಣ, ವಾಸನೆ, ರುಚಿಗಳೊಂದಿಗೆ ಹಸಿಹಸಿಯಾಗಿ ಬದುಕುವವರು. ಕ್ಷೇತ್ರ ಯಾವುದೇ ಇರಲಿ, ಅವರಿಗೆ ಜಯಲಲಿತಾ, ರಜನಿಕಾಂತ್ ಬಗೆಯ ಮಾದರಿಗಳು ಅನಿವಾರ್ಯ. ಕುಂಭಕೋಣಂ ಎಂಬ ಪುಟ್ಟ ಊರನ್ನು ಪ್ರವೇಶಿಸಿದಾಗ ರಣರಣ ಬಿಸಿಲು. ಇಲ್ಲಿ ಬಿಸಿಲೇ ಬೆಂಕಿಯಂತಿದೆ. ನೂರು ಮಕ್ಕಳು ದಹಿಸಿದ ಘಟನೆ ಕುಂಭಕೋಣಂ ಜನರಿಗೆ ಮರೆತೇ ಹೋದಂತಿದೆ. ವಿಳಾಸ ಕೇಳಿದರೆ ಎಲ್ಲಿ ಎಂಬಂತೆ ತಲೆ ಕೆರೆದುಕೊಂಡು ಯೋಚಿಸುತ್ತಾರೆ. ವೇದವಿನಾಯಗರ್ ದೇವಾಲಯದ ಹತ್ತಿರ ಹೋಗಿ ಕಾಸಿರಾಮನ್ ಸ್ಟ್ರೀಟ್‌ಗೆ ಬಂದು ವಾಶಿಂಗ್ ಮೆಶೀನು, ಫ್ರಿಜ್ ದುರಸ್ತಿ ಮಾಡುವ ಅಂಗಡಿಯೊಂದರ ಬಳಿ ಹೋಗಿ ಕೇಳಿದೆವು. ಅವನು ನಿರ್ಲಿಪ್ತತೆಯಿಂದ ಈ ಪಕ್ಕದ ಕಟ್ಟಡ ಎಂದ. ಆ ಕಟ್ಟಡವನ್ನು ನೋಡಿದರೆ ಕರುಳು ಬಾಯಿಗೆ ಬರುತ್ತದೆ. ಮುಗುಳ್ನಗುತ್ತಿರುವ ತೊಂಬತ್ನಾಲ್ಕು ಹಸುಳೆಗಳು ವಿನೈಲ್ ಹೋರ್ಡಿಂಗ್‌ನ ಹಿಂದೆ ಸುಟ್ಟು ಕರಕಲಾದ ಕಿಟಕಿ ಬಾಗಿಲುಗಳ ಮೂರಂತಸ್ತಿನ ಕಟ್ಟಡ.

ಉಗ್ರಾಣವಾಗಲೂ ಯೋಗ್ಯವಲ್ಲದ ಈ ಕಟ್ಟಡದಲ್ಲಿ ಶಾಲೆ ನಡೆಸಲು ಯಾರು ಅನುಮತಿ ಕೊಟ್ಟರು? ಇಲ್ಲಿ ಶಾಲೆ ನಡೆಸುವ, ಶಾಲೆಗೆ ಮಕ್ಕಳನ್ನು ಕಳುಹಿಸುವ ಮನಸ್ಥಿತಿಯಾದರೂ ಎಂತಹುದು? ಇದನ್ನು ಹೇಗೆ ಶಿಕ್ಷಣ, ಜ್ಞಾನ ಎಂದು ಕರೆಯಲಾಗುತ್ತದೆ? ಕುಂಭಕೋಣಂನಲ್ಲಿ ಚರಿತ್ರಾರ್ಹವಾದ ಆದಿ ಕುಂಭೇಶ್ವರ, ಐರಾವತೇಶ್ವರ, ಕಾಶಿ ವಿಶ್ವನಾಥ, ಮಹಾಲಿಂಗೇಶ್ವರ ದೇವಸ್ಥಾನಗಳಿವೆ. ಜೊತೆಗೆ ಇಂಥ ಶಾಲೆಯೂ ಇದೆ. ಅಷ್ಟೊಂದು ಈಶ್ವರರಿದ್ದರೂ ಅವರು ಮಕ್ಕಳನ್ನು ಕಾಪಾಡಲಿಲ್ಲ. ದಹಿಸಿಹೋದ ಮಕ್ಕಳಿಗಾಗಿ ಅಬ್ದುಲ್ ಕಲಾಂ ಅವರ ಪ್ರಾರ್ಥನೆಯ ತುಣುಕು ಹೀಗಿದೆ : Crying parents burying their little ones! Oh Almighty! Show Your grace on those little ones ! And keep them in Thy Holiest Presence!!
ದುರಂತದ ಬಗ್ಗೆ ನ್ಯಾಯಾಂಗದ ವ್ಯಾಖ್ಯಾನ, ಸಾಮಾಜಿಕ ವ್ಯಾಖ್ಯಾನ, ಇಲಾಖೆಯ ಆದೇಶಗಳನ್ನು ಪಕ್ಕಕ್ಕಿರಿಸೋಣ. ಜನರಿಗೆ ಅದೆಷ್ಟು ಕ್ಷಮಾಗುಣವಿದೆ ಎಂದರೆ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳಬಲ್ಲರು. ಅಯ್ಯೋ ಪಾಪ ! ಬೇಕು ಅಂತ ಮಾಡಿಲ್ಲವಲ್ಲ ? ತಿಳಿಯದೆ ಆಯಿತು. ಏನೋ ಗ್ರಹಚಾರ. ಆಯುಷ್ಯ ಇದ್ದುದೇ ಅಷ್ಟು. ನಡೆಯುವಾಗ ಎಡವುವುದಿಲ್ಲವೆ?... ಇತ್ಯಾದಿ ಸಡಿಲ ಮಾತುಗಳನ್ನಾಡುತ್ತಾರೆ. ದುರಂತದ ಹೊರವಲಯದಲ್ಲಿ, ಕ್ಷೇಮದ ನೆಲೆಯಲ್ಲಿ ನಿಂತು ಉದುರಿಸುವ ಈ ಹೊಣೆಗೇಡಿ ಮಾತುಗಳು ಖಂಡನಾರ್ಹ. ಸಮಸ್ಯೆಯ ಮೂಲವೆಲ್ಲಿದೆ ಎಂದರೆ ಮೂಲಭೂತವಾಗಿ ಮನುಷ್ಯನಲ್ಲಿರುವ ಅಸೂಕ್ಷ್ಮತೆ ಮತ್ತು ಎಚ್ಚರಗೇಡಿತನ. ಅಡುಗೆಗೆ ಒಲೆ ಹಚ್ಚಿದವಳು ಅಲ್ಲೇ ಕುಳಿತು ಕೆಲಸ ಮುಗಿಸಬೆಕು. ತನ್ನ ಕೆಲಸವನ್ನು ತಾನೇ ನಿರ್ವಹಿಸದೆ ಇನ್ನಾರಿಗೋ ಹೇಳಿ ಹೋಗುವುದು, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡದೆ ಇರುವುದು ಅನೇಕ ದುರಂತಗಳಿಗೆ ಎಡೆ ಮಾಡಿಕೊಡುತ್ತದೆ. ನಿಸರ್ಗ ತಂದೊಡ್ಡುವ ದುರಂತಗಳು ಪ್ರಶ್ನಾತೀತ. ಆದರೆ ಹೊಣೆಗೇಡಿತನದಿಂದ ಮನುಷ್ಯ ಮಾಡಿಕೊಳ್ಳುವ ದುರಂತಗಳು ತಿದ್ದುಪಡಿಗೆ ಯೋಗ್ಯವಾದವು. ಕುಂಭಕೋಣಂನ ಶ್ರೀ ಕೃಷ್ಣ ಶಾಲೆ, ಸರಸ್ವತಿ ಮಂದಿರದ ಎದುರು ನಿಂತಾಗ ಮಕ್ಕಳು ಬೆಂಕಿಗೆ ಸಿಕ್ಕಿ ಚೀರಾಡುವ ಸದ್ದು ಕೇಳಿಸುತ್ತದೆ. ಒಬ್ಬನೇ ಒಬ್ಬ ಸೂಕ್ಷ್ಮಜ್ಞ ಮನಸ್ಸುಳ್ಳವನಾಗಿದ್ದರೆ ನೂರಾರು ಜೀವಗಳು ಬದುಕಿ ಉಳಿಯುತ್ತವೆ. ಕೊಳೆಗೇರಿಯ ಮನಸ್ಸುಳ್ಳ ಕುಂಭಕೋಣಂ ಎಂಬ ಊರನ್ನು ಟೆಂಪಲ್ ಟೌನ್, ಕೇಂಬ್ರಿಡ್ಜ್ ಆಫ್ ಸೌತ್ ಇಂಡಿಯಾ ಎಂದು ಬ್ರಿಟಿಷರು ಕರೆದಿರುವುದು ಉತ್ಪ್ರೇಕ್ಷಿತ ಮತ್ತು ವಿಡಂಬನಾತ್ಮಕ ಎನಿಸುತ್ತದೆ. ಇದೇ ಬಗೆಯ ಸ್ಕೂಲುಗಳು ತಮಿಳುನಾಡಿನಲ್ಲಿ ಈಗಲೂ ಇವೆ ಎಂದ ನಮ್ಮ ಟ್ಯಾಕ್ಸಿ ಡ್ರೈವರ್. ಕರ್ನಾಟಕದಲ್ಲೂ ಇರಬಹುದು. ನಮ್ಮ ದೇಶದಲ್ಲೂ ಇವೆ ಎಂದರು ಆಫ್ರಿಕನ್ ಮಿತ್ರರು.

ಮೊನ್ನೆ ಬೆಂಗಳೂರಿನಲ್ಲಿ ಆಂಬುಲೆನ್ಸ್‌ನ ಪೆಟ್ರೋಲ್ ಮುಗಿದು ರಸ್ತೆ ಮಧ್ಯದಲ್ಲೇ ರೋಗಿಯೊಬ್ಬಳು ಅಸು ನೀಗಿದ್ದಾಳೆ. ಆಂಬುಲೆನ್ಸ್ ಸದಾ ಇಂಧನ ತುಂಬಿಸಿ ಸಿದ್ಧವಾಗಿರಬೇಕೆಂಬುದು ಒಂದು ಅತ್ಯಂತ ಸಾಮಾನ್ಯ ತಿಳಿವಳಿಕೆ. ಚಾಲಕನಿಗಿರಬೇಕಾದ ಸೂಕ್ಷ್ಮತೆ. ಆಸ್ಪತ್ರೆಯ ಆಡಳಿತ ಮಂಡಳಿಗಿರಬೇಕಾದ ಎಚ್ಚರ. ಇಂಥ ಘಟನೆಯನ್ನು ನಾನು ಕೇಳಿದ್ದೇ ಮೊದಲು.

ಆಯಕಟ್ಟಿನ ಜಾಗದಲ್ಲಿ ಕುಳಿತ ಕೆಳಗಿನವರು, ಮೇಲಿನವರು ಎಲ್ಲರೂ ಸಾರಾಸಗಟಾಗಿ ಅಸೂಕ್ಷ್ಮರಾಗುತ್ತಿರುವುದರಿಂದ ಟೈಟಾನಿಕ್ ದುರಂತದಿಂದ ಕುಂಭಕೋಣಂ ದುರಂತದವರೆಗೆ ಸಂಭವಿಸುತ್ತಲೇ ಇರುತ್ತವೆ. ಅದಾವ ತರಬೇತಿ, ಮಾರ್ಗದರ್ಶನದಿಂದ ಜನರಿಗೆ ಸೂಕ್ಷ್ಮತೆಯನ್ನು ಕಲಿಸಬೇಕೋ ತಿಳಿಯದು. ಅದು ನಿಷ್ಪ್ರಯೋಜಕವಾಗಿರಬಹುದು; ನನ್ನ ಆಫ್ರಿಕನ್ ಮಿತ್ರರು ಒಂದು ದಿನ ಉಪವಾಸ ಆಚರಿಸೋಣ ಎಂದರು. ಅಸೂಕ್ಷ್ಮ ವ್ಯವಸ್ಥೆಯ ಪಾಲುದಾರರಾಗಿದ್ದಕ್ಕೆ ನಾವು ಕೈಗೊಂಡ ಪಶ್ಚಾತ್ತಾಪದಂತೆ ಮೌನದಿಂದಿದ್ದು ಉಪವಾಸ ಆಚರಿಸಿ ಕುಂಭಕೋಣಂಗೆ ವಿದಾಯ ಹೇಳಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT