ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ತಪ್ಪಿದ ಜಾತಿ ಗಣತಿ ಎಂಬ ವ್ಯರ್ಥ ಕಸರತ್ತು

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಜಾತಿ ಮೂಲದ ಅನ್ಯಾಯವನ್ನು ಒಂದಷ್ಟು ಕಡಿಮೆಮಾಡುವ ಅದಕ್ಕಿಂತಲೂ ಹೆಚ್ಚಾಗಿ ಜಾತಿ ಬಗೆಗಿನ ಗೊಂದಲವನ್ನು ನಿವಾರಿಸುವ ಐತಿಹಾಸಿಕ ಅವಕಾಶ ಕೈಯಿಂದ ಜಾರಿಹೋಗಿದೆ. ಜಾತಿ ಗಣತಿಯನ್ನು ಸ್ವತಂತ್ರ ಭಾರತದ ಎಲ್ಲ ಸರ್ಕಾರಗಳಂತೆ ಯುಪಿಎ ಕೂಡಾ ಮೊದಲು ಒಪ್ಪದೆ ನಂತರದ ದಿನಗಳ ರಾಜಕೀಯ ಒತ್ತಡಕ್ಕೆ ಮಣಿದು ಅಂಗೀಕಾರ ನೀಡಿದ್ದು ಈಗ ಇತಿಹಾಸ. ಆದರೆ ಇದನ್ನು ವಿರೋಧಿಸುತ್ತಿರುವ ಕೆಲವು ರಾಜಕೀಯ ಮತ್ತು ಸಾಮಾಜಿಕ ಪಟ್ಟಭದ್ರ ಶಕ್ತಿಗಳು ಕೊನೆಗೂ ಬೆನ್ನುಬಿಡದೆ ಉಪಾಯವಾಗಿ ಜಾತಿಗಣತಿಯನ್ನು ಜನಗಣತಿಯಿಂದ ಬೇರ್ಪಡಿಸಿ ಜಾತಿ ಗಣತಿಯ ಉದ್ದೇಶವನ್ನೇ ಭಂಗಗೊಳಿಸಿವೆ. ಇದರಿಂದಾಗಿ ಫೆಬ್ರುವರಿ 9ರಿಂದ ಪ್ರಾರಂಭವಾಗಲಿರುವ ಜನಗಣತಿಯಲ್ಲಿ ಜಾತಿ ಬಗೆಗಿನ ಮಾಹಿತಿಯ ಸಂಗ್ರಹ ಇಲ್ಲ. ಇದಕ್ಕಾಗಿ ಮುಂದಿನ ಏಪ್ರಿಲ್ ತಿಂಗಳಿನಿಂದ ಪ್ರತ್ಯೇಕ ಜಾತಿಗಣತಿ ನಡೆಯಲಿದೆ. ಆದರೆ ಅದು ಕೂಡಾ ಕೇವಲ ತಲೆ ಎಣಿಕೆಗೆ ಸೀಮಿತ.

ಭಾರತದಲ್ಲಿ ಜನಗಣತಿಯನ್ನು ಪ್ರಾರಂಭಿಸಿದ್ದು ಬ್ರಿಟಿಷರು. 1872ರಲ್ಲಿಯೇ ಪ್ರಾರಂಭವಾದ ಜನಗಣತಿ ಬ್ರಿಟಿಷರ ಒಡೆದು ಆಳುವ ನೀತಿಯ ಭಾಗವಾಗಿತ್ತೆಂದು ಆರೋಪಿಸುವವರಿದ್ದಾರೆ. ಆದರೆ ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಯ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ವಿವರ ಒದಗಿಸಬೇಕಾಗಿ ಬಂದಾಗೆಲ್ಲ ಅವಲಂಬಿಸುವುದು ಬ್ರಿಟಿಷರ ಕಾಲದ ಜನಗಣತಿಯನ್ನೇ. 1931ರ ನಂತರ ಜಾತಿ ಆಧರಿತ ಜನಗಣತಿ ನಡೆಯದಿರುವುದು ಇದಕ್ಕೆ ಕಾರಣ. ಸ್ವತಂತ್ರಭಾರತದಲ್ಲಿ ಈ ವರೆಗೆ ನಡೆದಿರುವ ಆರು ಜನಗಣತಿಗಳಲ್ಲಿ ಜಾತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿಲ್ಲ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಧರ್ಮಗಳ ಮಾಹಿತಿಯನ್ನಷ್ಟೇ ಸಂಗ್ರಹಿಸುತ್ತಾ ಬರಲಾಗಿದೆ. ಜನ ಎಂದರೆ ಕೇವಲ ತಲೆಗಳ ಸಂಖ್ಯೆ ಅಲ್ಲ, ಆತ ಪರಿಸರದ ಕೂಸು, ಭಾರತೀಯ ಸಮಾಜದಲ್ಲಿ ಜಾತಿ ಎನ್ನುವುದು ಪರಿಸರದ ಭಾಗ, ಅದಕ್ಕೆ ಅದರದ್ದೇ ಆಗಿರುವ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳಿವೆ. ಆದ್ದರಿಂದ ಜಾತಿ ಬಿಟ್ಟು ನಡೆಸುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಸಮಾಜದ ನೈಜಚಿತ್ರವನ್ನು ನೀಡಲಾರದು.

ಸಮಾಜವಿಜ್ಞಾನಿಗಳು ಮತ್ತು ಮಾನವಶಾಸ್ತ್ರಜ್ಞರು ಜಾತಿ ಗಣತಿ ಅಗತ್ಯ ಎಂದು ಹೇಳುತ್ತಿರುವುದು ಕೂಡಾ ಇದೇ ಕಾರಣಗಳಿಗಾಗಿ. ಪಕ್ಷಾತೀತವಾಗಿ ಹಿಂದಿನ ಎಲ್ಲ ಕೇಂದ್ರ ಸರ್ಕಾರಗಳು ಈ ಅಭಿಪ್ರಾಯವನ್ನು ತಿರಸ್ಕರಿಸುತ್ತಾ ಬಂದಿವೆ. ಯುಪಿಎ ಸರ್ಕಾರ ಕೂಡಾ ಒಪ್ಪಿಕೊಂಡದ್ದು ರಾಜಕೀಯ ಒತ್ತಡಕ್ಕೆ ಮಣಿದು, ಸಮಾಜವಿಜ್ಞಾನಿಗಳ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಅಲ್ಲ.

ಈಗ ನಡೆಯುತ್ತಿರುವ ಜನಗಣತಿಯಲ್ಲಿ ವ್ಯಕ್ತಿಯ ಜಾತಿಯೊಂದನ್ನು ಹೊರತುಪಡಿಸಿ ಉಳಿದೆಲ್ಲ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಲಿಂಗ, ಧರ್ಮ, ಸಾಕ್ಷರತೆ, ಶಿಕ್ಷಣ, ವಸತಿ, ವಿವಾಹ, ಉದ್ಯೋಗ ಮಾತ್ರವಲ್ಲ, ಈ ಬಾರಿ ಮೊಬೈಲ್ ಫೋನ್, ಕಂಪ್ಯೂಟರ್‌ಗಳಿಂದ ಹಿಡಿದು ಕಾರು, ಸೈಕಲ್ ಬಗ್ಗೆಯೂ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಈ ಸಮೀಕ್ಷೆಯಲ್ಲಿ ಜಾತಿ ಬಗ್ಗೆಯೂ ಮಾಹಿತಿ ಸಂಗ್ರಹಿಸಿದರೆ ಅದು ದೇಶದ ಒಟ್ಟು ಜನಸಂಖ್ಯೆಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮಗ್ರರೂಪದ ಮಾಹಿತಿ ಭಂಡಾರ ಆಗುತ್ತದೆ ಎನ್ನುವುದು ಸಮಾಜ ವಿಜ್ಞಾನಿಗಳ ಅಭಿಪ್ರಾಯ. ಇಂತಹದ್ದೊಂದು ಅಪೂರ್ವ ಅವಕಾಶ ಈಗ ಕೈತಪ್ಪಿಹೋಗಿದೆ. ಈಗ ನಿರ್ಧರಿಸಿರುವಂತೆ ಜಾತಿ ಗಣತಿಯನ್ನು ತಲೆ ಎಣಿಕೆಗಷ್ಟೇ ಸೀಮಿತಗೊಳಿಸಿದರೆ ಅದು ರಾಜಕಾರಣಿಗಳ ಚುನಾವಣಾ ರಾಜಕೀಯಕ್ಕಷ್ಟೇ ಬಳಕೆಯಾಗಬಹುದೇ ಹೊರತು ಬೇರೆ ಯಾವ ಉದ್ದೇಶವೂ ಈಡೇರಿದಂತಾಗುವುದಿಲ್ಲ.

ಜಾತಿ ಗಣತಿ ನಡೆಸಲೇಬೇಕಾದ ಸ್ಥಿತಿ ನಿರ್ಮಾಣವಾಗಲು ಕಾರಣಗಳು ಹಲವು. ಮೊದಲನೆಯದಾಗಿ ಸುಪ್ರೀಂಕೋರ್ಟ್. ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆದಾಗೆಲ್ಲ ಸುಪ್ರೀಂಕೋರ್ಟ್ ಜಾತಿ ಆಧರಿತ ಮೀಸಲಾತಿಗೆ ಆಧಾರಗಳೇನು ಎಂದು ಪ್ರಶ್ನಿಸುತ್ತಾ ಬಂದಿದೆ. ಈಗ ಸರ್ಕಾರದ ಬಳಿ ಇರುವ ಜಾತಿ ಮಾಹಿತಿ, ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯ ಸರ್ಕಾರಗಳು ಸ್ವತಂತ್ರವಾಗಿ ನಡೆಸಿರುವ ಸ್ಯಾಂಪಲ್ ಆಧರಿತ ಸಮೀಕ್ಷೆಯನ್ನು ಆಧರಿಸಿದ್ದು. ಈ ಸಮೀಕ್ಷೆಗಳು ಮನೆಮನೆಗೆ ತೆರಳಿ ನಡೆಸಿದ್ದಲ್ಲ.

ಸುಪ್ರೀಂಕೋರ್ಟ್ ಅದನ್ನು ವಿಶ್ವಾಸಾರ್ಹ ಮಾಹಿತಿ ಅಲ್ಲ ಎಂದು ಹೇಳಲು ಈ ಲೋಪವೂ ಕಾರಣ. ಹೀಗಿದ್ದಾಗ ಆರ್ಥಿಕ- ಸಾಮಾಜಿಕ ಸ್ಥಿತಿಗತಿಯ ಮಾಹಿತಿ ಇಲ್ಲದೆ ಕೇವಲ ತಲೆಎಣಿಸಿ ಮಾಡುವ ಜಾತಿಗಣತಿಯನ್ನು ಸುಪ್ರೀಂಕೋರ್ಟ್ ಒಪ್ಪಬಹುದೇ?
ಎರಡನೆಯದಾಗಿ ಜಾತಿ ಗಣತಿಯ ನಿಜವಾದ ಅಗತ್ಯ ಇರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ. ದೇಶದ ಸಂಪನ್ಮೂಲ ಮತ್ತು ಅವಕಾಶಗಳನ್ನು ಸಮನಾಗಿ ಹಂಚಲು ಸಾಧ್ಯವಾಗುವಂತಹ ವ್ಯವಸ್ಥೆಯನ್ನು ರೂಪಿಸಲು ನೆರವಾಗುವುದೇ ಜಾತಿ ಗಣತಿಯ ಮೂಲ ಉದ್ದೇಶ. ಸರ್ಕಾರದ ಹಲವಾರು ಯೋಜನೆಗಳು ಮತ್ತು ಜನಕಲ್ಯಾಣಕ್ರಮಗಳಿಗೆ ಮುಖ್ಯ ಆಧಾರ ಜಾತಿಯೇ ಆಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕುರುಬ, ನೇಕಾರ, ಈಡಿಗ, ಕ್ಷೌರಿಕ ಹೀಗೆ ಎಲ್ಲ ಬಗೆಯ ಜಾತಿಗಳಿಗೆ ಪ್ರತ್ಯೇಕವಾದ ಕಲ್ಯಾಣ ಯೋಜನೆಗಳನ್ನು ಸರ್ಕಾರ ಘೋಷಿಸುತ್ತಲೇ ಇದೆ. ಆದರೆ ಇವೆಲ್ಲವೂ ವಿಶ್ವಾಸಾರ್ಹ ಅಲ್ಲದ ಮತ್ತು ತಪ್ಪುಗಳಿಂದ ಕೂಡಿದ ಜಾತಿ ಮಾಹಿತಿ ಆಧರಿತವಾದುದು. ಇದರಿಂದಾಗಿಯೇ ಈ ಯೋಜನೆಗಳು ದುರುಪಯೋಗಕ್ಕೆಡಾಗಿ ಅರ್ಹರನ್ನು ಪೂರ್ಣವಾಗಿ ತಲುಪಲಾರದೆ ವಿಫಲಗೊಂಡಿರುವುದು. ಇದನ್ನು ತಪ್ಪಿಸಬೇಕಾದರೆ ಈ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ನಿಖರವಾದ ಮಾಹಿತಿಯ ಅಗತ್ಯ ಇದೆ. ಈಗ ನಡೆಸಲು ಉದ್ದೇಶಿಸಿರುವ ಜಾತಿಗಣತಿಯಲ್ಲಿ ಈ ಮಾಹಿತಿ ಸಂಗ್ರಹಿಸದೆ ಇರುವುದರಿಂದ ಸರ್ಕಾರಿ ಯೋಜನೆಗಳ ದುರುಪಯೋಗ ತಡೆಯುವ ಅವಕಾಶವನ್ನು ಕಳೆದುಕೊಂಡಂತಾಗಿದೆ.

ಮೂರನೆಯದಾಗಿ  ಜಾತಿ ಗಣತಿ ನಿಜಕ್ಕೂ ನಡೆಯಬೇಕಾಗಿರುವುದು ಮೀಸಲಾತಿಯನ್ನು ಹೆಚ್ಚಿಸಲಿಕ್ಕಲ್ಲ, ಅದರ ದುರುಪಯೋಗವನ್ನು ತಡೆಯಲು. ಜಾತಿ ಗಣತಿಯ ಹೆಸರೆತ್ತಿದ ಕೂಡಲೆ ಇದು ಮೀಸಲಾತಿಯನ್ನು ಹೆಚ್ಚಿಸುವ ಹುನ್ನಾರ ಎಂದೇ ಬೊಬ್ಬೆ ಹಾಕಲಾಗುತ್ತದೆ. ಆದರೆ ಮೀಸಲಾತಿಗೆ ಸುಪ್ರೀಂ ಕೋರ್ಟ್ ಹಾಕಿರುವ ಶೇಕಡಾ 50ರ ಮಿತಿಯನ್ನು ಹೆಚ್ಚಿಸದೆ ಮೀಸಲಾತಿಯ ಪ್ರಮಾಣ ಹೆಚ್ಚಿಸುವುದು ಸಾಧ್ಯ ಇಲ್ಲ. ಆದರೆ ಜಾತಿ ಆಧರಿಸಿ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸಿದರೆ ಮೀಸಲಾತಿಗೆ ಅರ್ಹವಾದ ಸಮುದಾಯಗಳನ್ನು ಗುರುತಿಸಿ ದುರುಪಯೋಗ ತಡೆಯಲು ಸಾಧ್ಯ ಇದೆ. ಹಿಂದುಳಿದ ವರ್ಗದಲ್ಲಿರುವ ಪ್ರಬಲ ಜಾತಿಗಳ ನಾಯಕರು ಜಾತಿ ಗಣತಿ ಬಗ್ಗೆ ಅಷ್ಟೊಂದು ಆಸಕ್ತಿ ತೋರಿಸದಿರುವುದು ಕೂಡಾ ಇದೇ ಕಾರಣಕ್ಕಾಗಿಯೋ ಏನೋ?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪಟ್ಟಿ ಮಾತ್ರವಲ್ಲ ಹಿಂದುಳಿದ ಜಾತಿಗಳ ಪಟ್ಟಿ ಕೂಡಾ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಜಾರ್ಖಂಡ್, ಛತ್ತೀಸ್‌ಗಡ ಸೇರಿದಂತೆ ದೇಶದ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದುಳಿದ ಜಾತಿಗಳ ಪಟ್ಟಿಯೇ ಇಲ್ಲ. ಕೆಲವು ರಾಜ್ಯಗಳಲ್ಲಿ ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳ ಪಟ್ಟಿ ಇದೆ. ದೆಹಲಿಯಲ್ಲಿ ಮಡಿವಾಳರು, ಮಹಾರಾಷ್ಟ್ರದಲ್ಲಿ ಕೊಹ್ಲಿಗಳು, ಮಧ್ಯಪ್ರದೇಶದಲ್ಲಿ ರಜಿಹಾಳರು ಪರಿಶಿಷ್ಟ ಮತ್ತು ಹಿಂದುಳಿದ ಜಾತಿಗಳೆರಡರ ಪಟ್ಟಿಯಲ್ಲಿಯೂ ಇದ್ದಾರೆ.

ನಾಗಲ್ಯಾಂಡ್, ಅಂಡಮಾನ್- ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯೇ ಇಲ್ಲ. ಹರಿಯಾಣ, ಪಂಜಾಬ್, ಚಂಡೀಗಡ, ದೆಹಲಿ ಮತ್ತು ಪಾಂಡಿಚೇರಿಗಳಲ್ಲಿ ಪರಿಶಿಷ್ಟ ಪಂಗಡದ ಪಟ್ಟಿ ಇಲ್ಲ. ಬಹಳಷ್ಟು ಕಡೆಗಳಲ್ಲಿ ಹಿಂದುಳಿದ ಜಾತಿಗಳು ಮಾತ್ರವಲ್ಲ ಕೆಲವು ಮೇಲ್ಜಾತಿಗಳು ಕೂಡಾ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹಾಗೂ ಹಿಂದುಳಿದ ಜಾತಿಗಳಿಗೆ ಸೇರ್ಪಡೆಯಾಗುತ್ತಲೇ ಇವೆ. ಇದು ಕರ್ನಾಟಕದಲ್ಲಿಯೇ ನಡೆಯುತ್ತಿದೆ. ಲಿಂಗಾಯತ ಜಾತಿಗಳು ಕೂಡ ಪರಿಶಿಷ್ಟ ಜಾತಿ ಸರ್ಟಿಫಿಕೇಟ್ ಪಡೆಯುತ್ತಿರುವ ವಿವಾದ ಕೂಡಾ ಇದೆ. ಜಾತಿ ಆಧರಿತ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆದರೆ ಮಾತ್ರ ಈಗಿನ ಜಾತಿ ಗೊಂದಲವನ್ನು ನಿವಾರಿಸಿ ಅನ್ಯಾಯಗಳಿಗೆ ಕಡಿವಾಣ ಹಾಕಲು ಸಾಧ್ಯ.

ಇವುಗಳ ಜತೆ ಜನ ಗಣತಿ ಮತ್ತು ಜಾತಿ ಗಣತಿಯನ್ನು ಪ್ರತ್ಯೇಕವಾಗಿ ನಡೆಸುವ ನಿರ್ಧಾರ ಕೆಲವು ಪ್ರಾಯೋಗಿಕವಾದ ಸಮಸ್ಯೆಗಳಿಗೆ ಕಾರಣವಾಗಿದೆ. ಪ್ರತ್ಯೇಕವಾಗಿ ನಡೆಸಲಾಗುವ ಜನಗಣತಿ ಮತ್ತು ಜಾತಿ ಗಣತಿ ಮೂಲಕ ಕಲೆ ಹಾಕುವ ಮಾಹಿತಿಗಳನ್ನು ನಂತರ ಪರಸ್ಪರ ಹೊಂದಿಸುವುದು ಈಗಿನ ಯೋಜನೆ. ಆದರೆ ಭಾರತದಲ್ಲಿ ಶೇ 20ರಷ್ಟು ಕುಟುಂಬಗಳು ಅಲೆಮಾರಿಗಳಾಗಿ ತಮ್ಮ ವಸತಿ ಪ್ರದೇಶವನ್ನು ಆಗಾಗ ಬದಲಾವಣೆ ಮಾಡುತ್ತಲೇ ಇರುವುದರಿಂದ ಬೇರೆ ಬೇರೆ ಕಾಲದಲ್ಲಿ ನಡೆಸಿದ ಎರಡು ಸಮೀಕ್ಷೆಗಳನ್ನು ಹೊಂದಿಸುವುದು ಕಷ್ಟವಾಗಬಹುದು ಎನ್ನುವ ಅಭಿಪ್ರಾಯ ಇದೆ. ಒಂದೊಮ್ಮೆ ಹೊಂದಿಸಿದರೂ ಅದು ನಿಖರವಾದ ಮಾಹಿತಿ ಆಗಲಾರದು.
 
ಜನಗಣತಿಯ ಸಿದ್ಧತೆಯನ್ನು ಸಾಕಷ್ಟು ಪೂರ್ವದಲ್ಲಿಯೇ ನಡೆಸಿರುವುದರಿಂದ ಅದರಲ್ಲಿ ಜಾತಿಯನ್ನು ಸೇರಿಸುವುದು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಪ್ರತ್ಯೇಕ ಗಣತಿ ಕಾರ್ಯ ನಡೆಸಲು ನಿರ್ಧರಿಸಲಾಯಿತು ಎಂಬ ಸಬೂಬನ್ನೂ ಸರ್ಕಾರ ಹೇಳುತ್ತಿದೆ. ಹಿಂದಿನ ಜನಗಣತಿಯಲ್ಲಿ ಪಾಲ್ಗೊಂಡ ಗಣತಿದಾರರೇ ಇದನ್ನು ಒಪ್ಪುವುದಿಲ್ಲ. ಜನಗಣತಿಗೆ ಮಾಹಿತಿ ಸಂಗ್ರಹಿಸಲು ಇರುವ ಫಾರ್ಮ್‌ನಲ್ಲಿ ಎಸ್‌ಸಿ/ಎಸ್‌ಟಿ ಗುರುತಿಸಲು ಇರುವ ಅಂಕಣದಲ್ಲಿ ಎಸ್‌ಸಿ/ಎಸ್‌ಟಿ ಎನ್ನುವುದರ ಬದಲಿಗೆ ಜಾತಿ ಎಂದು ಮುದ್ರಿಸಿದರೆ ಕೆಲಸ ಸಲೀಸು ಎನ್ನುತ್ತಾರೆ ಗಣತಿದಾರರು.

ಪ್ರತ್ಯೇಕ ಗಣತಿಯಿಂದ ಗಣತಿದಾರರ ಮೇಲೆ ಅನವಶ್ಯಕ ಕೆಲಸದ ಹೊರೆ ಹೊರಿಸಿದಂತಾಗಿದೆ ಎನ್ನುವ ದೂರು ಕೂಡಾ ಕೇಳಿಬರುತ್ತಿದೆ. ಜನಗಣತಿಗಾಗಿ ದೇಶದ 27 ಲಕ್ಷ ಶಿಕ್ಷಕರನ್ನು ನಿಯೋಜಿಸಲಾಗಿದೆ. ಇವರು ಫೆಬ್ರುವರಿ 9ರಿಂದ 21ರ ವರೆಗಿನ ಅವಧಿಯಲ್ಲಿ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಇದೇ 27 ಲಕ್ಷ ಶಿಕ್ಷಕರು ಮತ್ತೆ ಏಪ್ರಿಲ್‌ನಿಂದ ಮನೆಮನೆಗೆ ಭೇಟಿ ನೀಡಿ ಜಾತಿ ಆಧಾರದಲ್ಲಿ ತಲೆ ಎಣಿಕೆ ಮಾಡಬೇಕು. ಜತೆಯಲ್ಲಿ ಎರಡೂ ಗಣತಿಗಳನ್ನು ನಡೆಸಿದ್ದರೆ ಎರಡೆರಡು ಕೆಲಸಗಳನ್ನು ತಪ್ಪಿಸಲು ಸಾಧ್ಯ ಇತ್ತು.  ಜನಗಣತಿಗಾಗಿ ಸರ್ಕಾರ ಖರ್ಚು ಮಾಡಲಿರುವ ಹಣ  2240 ಕೋಟಿ ರೂಪಾಯಿ, ಮತ್ತೆ ಜಾತಿ ಗಣತಿಗಾಗಿ ಖರ್ಚು ಮಾಡಲಿರುವುದು 2000 ಕೋಟಿ ರೂಪಾಯಿ. ಇದು ಸರ್ಕಾರಿ ಬೊಕ್ಕಸದ ಮೇಲಿನ ಅನವಶ್ಯಕ ಹೊರೆಯಲ್ಲವೇ?

ಜಾತಿ ಗಣತಿಗಾಗಿ ನಿಗದಿಪಡಿಸಲಾಗಿರುವ ಜೂನ್ ತಿಂಗಳು ಸರಿಯಾದ ಕಾಲ ಅಲ್ಲ ಎನ್ನುವ ಆಕ್ಷೇಪ ಕೂಡಾ ಇದೆ. ಉತ್ತರ ಭಾರತದಲ್ಲಿ ಆಗ ಸುಡುಬಿಸಿಲಿನ ಬೇಸಿಗೆಯ ಕಾಲವಾದರೆ, ದಕ್ಷಿಣ ಭಾರತದಲ್ಲಿ ಮಳೆಗಾಲ. ಇದರ ಜತೆಗೆ ಆಗಷ್ಟೇ ಶಾಲೆಗಳು ಪುನರಾರಂಭಗೊಂಡು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿರುವ ಕಾಲ ಅದು. ಇದರಿಂದಾಗಿ ಗಣತಿಕಾರ್ಯಕ್ಕೆ ಅಗತ್ಯ ಇರುವ 27 ಲಕ್ಷ ಶಿಕ್ಷಕರು ಸಿಗುವುದು ಕಷ್ಟ. ಫೆಬ್ರುವರಿಯಿಂದ ಮಾರ್ಚ್ ವರೆಗೆ ಜನಗಣತಿಯಲ್ಲಿ ಪಾಲ್ಗೊಂಡ ಗಣತಿದಾರರನ್ನು ಮತ್ತೆ ಏಪ್ರಿಲ್ ತಿಂಗಳಲ್ಲಿ ಜಾತಿ ಗಣತಿಗೆ ಸಜ್ಜುಗೊಳಿಸುವುದು ಕೂಡಾ ಸವಾಲಿನ ಕೆಲಸ. ಜನಗಣತಿ ಮತ್ತು ಜಾತಿ ಗಣತಿಯನ್ನು ಜತೆಯಲ್ಲಿಯೇ ನಡೆಸುವುದೊಂದೇ ಇದಕ್ಕೆ ಪರಿಹಾರ. ಆದರೆ ಕಾಲ ಮೀರಿ ಹೋಗಿದೆ. ಸರ್ಕಾರಕ್ಕೂ ಇದೇ ಬೇಕಾಗಿತ್ತೋ ಏನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT