ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ತಪ್ಪಿದ ಮಕ್ಕಳು; ಹಾದಿ ತಪ್ಪಿಸುವ ಹಿರಿಯರು

Last Updated 14 ಫೆಬ್ರುವರಿ 2017, 20:17 IST
ಅಕ್ಷರ ಗಾತ್ರ
ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಐವರು ಹುಡುಗರಿದ್ದಾರೆ. ಹದಿಹರೆಯ ದಾಟಿ ತಾರುಣ್ಯಕ್ಕೆ ಪ್ರವೇಶಿಸುತ್ತಿರುವ ಈ ಹುಡುಗರಲ್ಲಿ ವಿಚಿತ್ರ ಚಡಪಡಿಕೆಯಿದೆ. ಕೆಸರೂರಿನಲ್ಲಿ ನಡೆಯುವ ಕಾದಂಬರಿ ಶುರುವಾಗುವುದು ಹೀಗೆ: 
‘ಒಟ್ಟಿನಲ್ಲಿ ಕ್ರಾಂತಿ ಆಗಬೇಕಪ್ಪಾ!’ ಎಂದು ನಿಟ್ಟುಸಿರು ಬಿಡುತ್ತಾ ಜೋಸೆಫ್ ಅಂಗಾರ ತನಗೆ ತಾನೆ ಎಂಬಂತೆ ಹೇಳಿಕೊಂಡ.
 
ಕೆಸರೂರಿನ ಪೇಟೆಯ ಕೊನೆಯಲ್ಲಿ ಹಾಕಿದ್ದ ಕಲ್ಲುಬೆಂಚಿನ ಮೇಲೆ ನಾಲ್ವರು ಮಿತ್ರವರ್ಯರು ಕುಳಿತುಕೊಂಡು ಅಂತಿಮವಾಗಿ ಈ ತೀರ್ಮಾನಕ್ಕೆ ಬಂದಿದ್ದರು.
ಕಾದಂಬರಿ ಈ ಹುಡುಗರನ್ನು ತಮಾಷೆ ಮಾಡುತ್ತಾ ಶುರುವಾದರೂ, ಅವರಲ್ಲಿರುವ ವಿಚಿತ್ರ ಚೈತನ್ಯವನ್ನು ಗುರುತಿಸುತ್ತಾ ಹೋಗುತ್ತದೆ. ಈ ಹುಡುಗರ ತಂಡ ಯಾವುದೇ ಘೋಷಣೆ ಮಾಡದ ಸಹಜ ಜಾತ್ಯತೀತ ತಂಡವಾಗಿದೆ. ಇಂಗ್ಲಿಷ್ ಗೌಡ ಎಂಬ ಅಡ್ಡಹೆಸರಿನ ರಾಮಪ್ಪ; ಮೊಳೆಯದ ಮೀಸೆಗಾಗಿ ದಿನಕ್ಕೆ ನಾಲ್ಕು ಬಾರಿ ಗಡ್ಡ ಹೆರೆಯುವ ಚಂದ್ರ; ಜೋಸೆಫ್ ಅಂಗಾರ; ತಂದೆ ತಾಯಿಯಿಲ್ಲದೆ, ಶರಾಬು ಅಂಗಡಿಯಲ್ಲಿ ಕೆಲಸ ಮಾಡುತ್ತಾ ಒರಟನಾಗಿರುವ ರಮೇಶ. ಈ ನಾಲ್ವರ ಕ್ರಾಂತಿಯ ಚಡಪಡಿಕೆಯ ಹಿಂದೆ ‘ಕೆಸರೂರಿನ ತುಂಬಿದೆದೆಯ’ ಹುಡುಗಿಯರು ತಮ್ಮತ್ತ ನೋಡುತ್ತಿಲ್ಲವೆಂಬ ದುಃಖವೂ ಕಾರಣವಾಗಿತ್ತು! ಈ ನಾಲ್ವರ ಜೊತೆಗೆ ರಫಿಯೂ ಇದ್ದಾನೆ. ‘ಏನೋ ಸಾಬಿ ಇಷ್ಟೊತ್ನಲ್ಲಿ?’ ಎಂದು ಗೆಳೆಯರು ಕೇಳಿದರೆ, ರಫಿ ಗೆಳೆಯರನ್ನು ಕಂಡ ಆನಂದದಿಂದ ‘ಎಲ್ಲಿಗೆ ಹೊರಟ್ರೋ ಬಡ್ಡೀಮಕ್ಳಾ?’ ಎನ್ನುವನು. ಈ ಹುಡುಗರು ಪರಸ್ಪರ ರೇಗಿಸಿಕೊಂಡೇ ಗೆಳೆಯರಾಗಿದ್ದಾರೆ. ಹುಡುಗರೆಲ್ಲ ಒಟ್ಟಾಗಿ ಕೃಷ್ಣೇಗೌಡರ ಮನೆಯ ಮೇಲೆ ಕಲ್ಲು ಬೀಳುತ್ತಿದ್ದ ನಿಗೂಢ ಭೇದಿಸಲು ಹೋಗುತ್ತಾರೆ. ಅಲ್ಲಿ ತನ್ನ ಅಪ್ಪಅಮ್ಮಂದಿರ ವಿರುದ್ಧ ಪ್ರತಿಭಟಿಸಲು ಮಗಳೇ ಆ ಮನೆ ಮೇಲೆ ಕಲ್ಲೆಸೆಯುತ್ತಿದ್ದುದು ಗೊತ್ತಾಗುತ್ತದೆ! ಆ ಹುಡುಗಿ ಬೇರಾರೂ ಅಲ್ಲ; ಈ ಹುಡುಗರ ಕ್ಲಾಸ್‌ಮೇಟ್ ಜಯಂತಿ! ದೆವ್ವ ಹುಡುಕಲು ಬಂದ ರಫಿಯನ್ನು ಜಯಂತಿ ತಬ್ಬಿಕೊಳ್ಳುತ್ತಾಳೆ. ಕಾದಂಬರಿಯ ಕೊನೆಯಲ್ಲಿ ಊರು ಕೋಮುದಳ್ಳುರಿಯಿಂದ ಹೊತ್ತಿ ಉರಿಯುತ್ತಿದ್ದರೆ, ಉರಿಯಿಂದ ಬಚಾವಾಗಿ ಬೆಟ್ಟದ ಮೇಲೆ ನಿಲ್ಲುವವರು ರಫಿ-ಜಯಂತಿ.
 
ಈ ಕಾದಂಬರಿಯ ಹುಡುಗರ ಹಾಗೇ ನಮ್ಮ ಬಹುತೇಕ ಕಾಲೇಜು ಹುಡುಗ, ಹುಡುಗಿಯರು ‘ಸಹಜ ಜಾತ್ಯತೀತ’ರಾಗಿರುತ್ತಾರೆ. ಆದರೆ ಅವರಲ್ಲಿ ವಿಷಬೀಜ ಬಿತ್ತುವವರು ಹಿರಿಯರು, ಪೋಷಕರು, ಕೆಲವೊಮ್ಮೆ ಹೀನಮನಸ್ಸಿನ ಮೇಷ್ಟ್ರುಗಳು; ಈ ಹುಡುಗರನ್ನು ಲಾಭಕ್ಕಾಗಿ ಎತ್ತಿಕಟ್ಟುವ ರಾಜಕೀಯ ಪಕ್ಷಗಳು, ಗುಂಪುಗಳು. ನಾನು ಎಂ.ಎ. ಕ್ಲಾಸೊಂದರಲ್ಲಿ ಅಂಬೇಡ್ಕರ್ ಅವರ ‘ಜಾತಿವಿನಾಶ’ ಪಠ್ಯ  ಹಾಗೂ ‘ಚಿದಂಬರ ರಹಸ್ಯ’ ಕಾದಂಬರಿಯ ತೌಲನಿಕ ವಿಶ್ಲೇಷಣೆ ಮಾಡುತ್ತಿರುವ ಕಾಲದಲ್ಲಿ ಈ ಎರಡೂ ಪಠ್ಯಗಳ ಜಾತ್ಯತೀತ ಸಂದೇಶವನ್ನು ವಿದ್ಯಾರ್ಥಿಗಳು ಮುಕ್ತವಾಗಿ ಒಪ್ಪಿ ಚರ್ಚಿಸಿದ್ದು ನೆನಪಾಗುತ್ತದೆ. ಆ ಕಾಲದಲ್ಲಿ ಒಂದು ವಿಶಿಷ್ಟ ಘಟನೆ ನಡೆಯಿತು. ಬಿಜೆಪಿ ನಾಯಕರೊಬ್ಬರ ಮಗಳು, ಮುಸ್ಲಿಂ ತರುಣನೊಬ್ಬನನ್ನು ಪ್ರೀತಿಸಿ ಮದುವೆಯಾಗಲು ಸಿದ್ಧವಾಗಿದ್ದಳು. ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಅವರ ಮದುವೆಗೆ ಹುಡುಗಿಯ ತಂದೆಯ ಸಮ್ಮತಿಯಿರಲಿಲ್ಲ. ಈ ಜೋಡಿಗೆ ಬೆದರಿಕೆಗಳೂ ಎದುರಾದವು. ಆಗ ಅವರ ಬೆನ್ನಿಗೆ ನಿಂತವರು ಇವತ್ತು ಸುದ್ದಿಯಲ್ಲಿರುವ ‘ಅಗ್ನಿ’ ಶ್ರೀಧರ್; ಮೈಸೂರಿನಲ್ಲಿ ಅವರ ಮದುವೆ ಮಾಡಿಸಿದವರು ಮಾನವ ಮಂಟಪದ ಪ್ರೊ. ಕೆ.ರಾಮದಾಸ್, ಸ್ವಾಮಿಆನಂದ್ ಮೊದಲಾದವರು. ‘ಚಿದಂಬರ ರಹಸ್ಯ’ದ ಕತೆ ನನ್ನ ಕಣ್ಣ ಮುಂದೆಯೇ ನಡೆದಂತಾಗಿ, ರಾಮನಗರದ ಜಾನಪದಲೋಕಕ್ಕೆ ಬಂದ ಈ ಸುಂದರ ಜೋಡಿಯನ್ನು ಕಂಡು ನಿಜವಾದ ಅರ್ಥದಲ್ಲಿ ಕಣ್ತುಂಬಿಕೊಂಡಿದ್ದೆ.      
 
ಗೆಳೆಯರಾಗಿದ್ದ ತೇಜಸ್ವಿ, ರಾಮದಾಸ್ ಇವರೆಲ್ಲ ಒಟ್ಟಿಗೇ ಕರ್ನಾಟಕದ ಹಲವು ತಲೆಮಾರುಗಳನ್ನು ಎಚ್ಚರದಲ್ಲಿಟ್ಟು, ಬೆಳೆಸಿದವರು. ತೇಜಸ್ವಿಯವರ ಕಾದಂಬರಿಯೊಳಗಿನ ವಿಚಾರವಾದಿ ಮೇಷ್ಟ್ರುಗಳು ರಾಮದಾಸ್ ಥರದವರ ಪ್ರತಿಕೃತಿಗಳಾಗಿದ್ದರೆ ಅಚ್ಚರಿಯಲ್ಲ. ನಮ್ಮ ಶಾಲಾಕಾಲೇಜುಗಳಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುತ್ತಾ ಬಂದವರು ಇಂಥ ಮಹನೀಯರು ಮತ್ತು ಮಹಿಳೆಯರು ಎಂಬ ಚರಿತ್ರೆ ಇವತ್ತು ಕೇಸರಿಶಾಲು ಹೊದ್ದು ನಗೆಯ ವಸ್ತುವಾಗಿರುವ ಹುಡುಗರಿಗೆ, ಅವರ ಮೇಷ್ಟ್ರುಗಳಿಗೆ ಗೊತ್ತಿರಲಿಕ್ಕಿಲ್ಲ. ಈ ದೇಶದ ಶಾಲಾಕಾಲೇಜುಗಳಲ್ಲಿ ಇನ್ನೂ ಇರುವ ಆರೋಗ್ಯಕರ ದೃಷ್ಟಿ, ಕಾಳಜಿಗಳ ವಾತಾವರಣ ಸೃಷ್ಟಿಗೆ ನೂರು ವರ್ಷಗಳ ಚರಿತ್ರೆಯಿದೆ. ಸ್ವಾತಂತ್ರ್ಯ ಹೋರಾಟದ ಕರೆ ಕೇಳಿ ಶಾಲೆ ಬಿಟ್ಟು ಬ್ರಿಟಿಷರ ವಿರುದ್ಧ ಘೋಷಣೆ ಕೂಗಿದ ಹುಡುಗರು ಮುಂದೆ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಎಂಬತ್ತರ ದಶಕದಲ್ಲಿ ಕರ್ನಾಟಕದ ಬೃಹತ್ ರೈತಚಳವಳಿಯನ್ನು ಕಟ್ಟಿದ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರು ಸಮಾಜವಾದಿ ಯುವಜನಸಭಾ ಮಾಡಿದಾಗ ಡಿ.ಆರ್. ನಾಗರಾಜ್, ಸಿದ್ಧಲಿಂಗಯ್ಯ, ಅಗ್ರಹಾರ ಕೃಷ್ಣಮೂರ್ತಿ, ಕಿ.ರಂ.ನಾಗರಾಜ್, ಲಕ್ಷ್ಮೀಪತಿಬಾಬು ಥರದ ವಿದ್ಯಾರ್ಥಿಗಳ ಪುಟ್ಟ ಗುಂಪಿನ ಮೂಲಕ ವೈಚಾರಿಕತೆಯನ್ನು ಬಿತ್ತುತ್ತಿದ್ದರು. ಇವರಲ್ಲಿ ಕೆಲವರು ವಿಧಾನಸಭೆಯ ಗ್ಯಾಲರಿಯಿಂದ ಬರಗಾಲ ಕುರಿತ ಕರಪತ್ರ ಎಸೆದು ಸರ್ಕಾರದ ಗಮನ ಸೆಳೆಯುತ್ತಿದ್ದರು.
 
ಮುಂದೆ ದಲಿತ ಚಳವಳಿ ಕಟ್ಟಿದ ಬಿ.ಕೃಷ್ಣಪ್ಪನವರಂಥ ಕನ್ನಡ ಮೇಷ್ಟ್ರುಗಳು ಕಾಲೇಜಿನಲ್ಲಿ ಚರ್ಚಾಸ್ಪರ್ಧೆ, ಭಾಷಣಸ್ಪರ್ಧೆ ನಡೆಸಿ, ಲೇಖನ ಬರೆಸಿ ವಿದ್ಯಾರ್ಥಿಗಳನ್ನು ಜಾತ್ಯತೀತರಾಗಿ ಯೋಚಿಸುವಂತೆ ಮಾಡುತ್ತಿದ್ದರು. ರಾಮದಾಸ್ ಥರದ ಮೇಷ್ಟ್ರುಗಳು ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದಾಗ ಸರ್ಕಾರ ವಿಶ್ವಸಾಹಿತ್ಯ ಮೇಳ ಮಾಡುವುದು ಅನೈತಿಕ ಎಂದು ಸಮ್ಮೇಳನವನ್ನು ವಿರೋಧಿಸಿ ಕಪ್ಪುಬಾವುಟ ಹಾರಿಸಿದಾಗ, ಕೆಲವಾದರೂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಅವರ ಜೊತೆ ಹೋಗಿ ಬಂಧನಕ್ಕೊಳಗಾಗಿದ್ದರು. ಅಂಥ ಹುಡುಗರೆಲ್ಲ ಈಗ ಕರ್ನಾಟಕದ ಮುಖ್ಯ ಚಿಂತಕರಾಗಿ, ಲೇಖಕರಾಗಿ ವಿಕಾಸಗೊಂಡಿದ್ದಾರೆ. ಜಿ.ರಾಮಕೃಷ್ಣ, ಬರಗೂರು ರಾಮಚಂದ್ರಪ್ಪನವರಂಥ ಪ್ರೊಫೆಸರುಗಳಿಂದ ಹಿಡಿದು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಚಂದ್ರಶೇಖರಯ್ಯನವರವರೆಗೆ; ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಮಲ್ಲಿಕಾ ಘಂಟಿಯವರವರೆಗೆ ಇಂಥ ಸಹಸ್ರಾರು ಅಧ್ಯಾಪಕ, ಅಧ್ಯಾಪಕಿಯರು ಹಾಗೂ ಅವರು ರೂಪಿಸಿದ ಹುಡುಗ, ಹುಡುಗಿಯರು ಕರ್ನಾಟಕದ ಎಲ್ಲೆಡೆ  ಆರೋಗ್ಯವನ್ನು ಹಬ್ಬಿಸುತ್ತಾ ಬಂದಿದ್ದಾರೆ. ಅದರ ಪ್ರೇರಣೆ ಈಚೆಗೆ ಹೊಸ ತಲೆಮಾರಿನ ಅಧ್ಯಾಪಕ, ಅಧ್ಯಾಪಕಿಯರು ಕಟ್ಟಿರುವ ‘ಬಯಲುಬಳಗ’ದಂಥ ವೇದಿಕೆಯಲ್ಲೂ ಕಾಣುತ್ತದೆ. 
 
ಸಾಹಿತ್ಯದ ಅಧ್ಯಾಪಕರು ಇಂಥ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾಗ, ಎಚ್.ನರಸಿಂಹಯ್ಯನವರ ನಂತರ ವಿಜ್ಞಾನದ ಅಧ್ಯಾಪಕರು ವೈಚಾರಿಕತೆಯನ್ನೂ, ವೈಜ್ಞಾನಿಕ ಪ್ರಜ್ಞೆಯನ್ನೂ ಬಿತ್ತುವ ಕೆಲಸ ಮಾಡುತ್ತಿದ್ದರು. ಈಗ ವಿಜ್ಞಾನದ ಮೇಷ್ಟ್ರುಗಳು ಮಕ್ಕಳಲ್ಲಿ ವೈಚಾರಿಕ-ವೈಜ್ಞಾನಿಕ ಮನೋಭಾವ ಮೂಡಿಸುವ ಕೆಲಸವನ್ನೇ ಕೈಬಿಟ್ಟಂತಿದೆ. ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಚರಿತ್ರೆಯನ್ನು ಬೋಧಿಸುವ ಹಲವರು ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ ತುಂಬುವ ಕೆಲಸದಿಂದ ಹಿಂದೆ ಸರಿಯುತ್ತಿರುವುದು ಕೂಡ ಮಕ್ಕಳ ವಿಕಾರಮಯ ವರ್ತನೆಗೆ ಕಾರಣವಿರಬಹುದು.
 
ಆಧುನಿಕ ಕರ್ನಾಟಕದ ಗುರುಪರಂಪರೆಯನ್ನು ನೆನೆಸಿಕೊಳ್ಳುತ್ತಲೇ ಈಚಿನ ಪತನವನ್ನು ಪ್ರಸ್ತಾಪಿಸಲು ಕಾರಣವಿದೆ. ಇವತ್ತು ಹುಡುಗರು ಸೆಕೆಯಲ್ಲೂ ಕೇಸರಿಶಾಲು ಹೊದ್ದು ಅನಗತ್ಯ ತರಲೆಗಳಲ್ಲಿ ಮುಳುಗಿರುವುದರ ಹಿಂದೆ ಅವರಿಗೆ ಕುಮ್ಮಕ್ಕು ಕೊಡುವ, ಅದನ್ನು ಗುಪ್ತವಾಗಿ ಆನಂದಿಸುವ ಮತೀಯವಾದಿ ಮೇಷ್ಟ್ರುಗಳಿದ್ದರೆ ಅವರು ಮೊದಲ ಅಪರಾಧಿಗಳು. ಇಂಥ ಹುಡುಗರನ್ನು ತಿದ್ದದ ತಂದೆತಾಯಿಗಳು ಕೂಡ ಈ ತಪ್ಪಿನಲ್ಲಿ ಭಾಗಿಗಳು. ಇದೆಲ್ಲಕ್ಕಿಂತ ಮುಖ್ಯವಾಗಿ, ವಿಕೃತಿಯನ್ನು ಪೋಷಿಸುತ್ತಾ ಇಡೀ ಶೈಕ್ಷಣಿಕ ವಾತಾವರಣವನ್ನು ನಾಶ ಮಾಡುತ್ತಿರುವವರು ರಾಜಕೀಯ-ರಾಜಕೀಯೇತರ ನಾಯಕರು. ಮುಸ್ಲಿಂ ಹುಡುಗಿಯರು ಬುರ್ಖಾ ಹಾಕುವುದರ ಹಿಂದೆ ಎಂಥ ಒತ್ತಡಗಳಿವೆ ಎಂಬ ಬಗ್ಗೆ ಕವಯಿತ್ರಿ ಅಕ್ಷತಾ ‘ಪ್ರಜಾವಾಣಿ’ಯ ‘ಅಂತರಾಳ’ದಲ್ಲಿ (ಫೆ. 11)  ಬರೆದಿದ್ದಾರೆ. ಇವತ್ತು ಯಾರದೋ ಕುಮ್ಮಕ್ಕಿನಿಂದ ತುಂಟ ಹುಡುಗರು ಇಂಥ ಸೂಕ್ಷ್ಮ ವಿಚಾರಗಳಲ್ಲೆಲ್ಲ ಹಸ್ತಕ್ಷೇಪ ಮಾಡತೊಡಗಿದರೆ, ಮುಂದೆ ಅವರು ಅಪಾಯಕ್ಕೆ ತುತ್ತಾದಾಗ, ಜೈಲಿಗೆ ಹೋದಾಗ ಅವರನ್ನು ಎತ್ತಿಕಟ್ಟುವ ಮೇಷ್ಟರುಗಳಾಗಲೀ, ಪುಢಾರಿಗಳಾಗಲೀ ಅವರ ನೆರವಿಗೆ ಬರುವುದಿಲ್ಲ. ಶೃಂಗೇರಿ ಕಡೆಯ ಮುಗ್ಧ ಹುಡುಗನೊಬ್ಬ ಅನಗತ್ಯವಾಗಿ ಇಂಥ ಕೇಸೊಂದರಲ್ಲಿ ಸಿಲುಕಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ನಮ್ಮ ಸೂಕ್ಷ್ಮ ಹುಡುಗರು ಪ್ರವೇಶಿಸುತ್ತಿರುವ ವಿಚಿತ್ರ ವಿಷವ್ಯೂಹ ಎಂಥದೆಂಬುದನ್ನು ಸೂಚಿಸುತ್ತದೆ. 
 
ಅಡಿಗರ ‘ವರ್ಧಮಾನ’ ಪದ್ಯದಲ್ಲಿ ತಾರುಣ್ಯದ ಸಾಧ್ಯತೆಗಳನ್ನು ಕುರಿತ ‘ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ’ ಎಂಬ ರೂಪಕವೊಂದು ಬರುತ್ತದೆ. ಹದಿಹರೆಯದ, ತಾರುಣ್ಯದ ಸಾಧ್ಯತೆಗಳನ್ನು ಹುಡುಕಿಕೊಳ್ಳುವ ಜವಾಬ್ದಾರಿಯುತ ಮಕ್ಕಳು ಹಗಲೂರಾತ್ರಿ ಓದಿ ಭವಿಷ್ಯ ರೂಪಿಸಿಕೊಳ್ಳುತ್ತಿರುವಾಗ, ಇತ್ತ ಹಿಂಸೆ ಪ್ರಚೋದಿಸುವ ಗುಂಪುಗಳ ಜೊತೆಗೆ ಹಿಂದೂ ಹುಡುಗರಾಗಲಿ, ಮುಸ್ಲಿಂ ಹುಡುಗರಾಗಲಿ ಕೈಜೋಡಿಸಿ ತಮಗೆ ತಾವೇ ನರಕ ಸೃಷ್ಟಿಸಿಕೊಳ್ಳಬಾರದು; ಇತರರಿಗೆ ನರಕ ಸೃಷ್ಟಿಸಬಾರದು. ಇಂಥ ಮಕ್ಕಳ ತರಲೆಗಳಿಂದ ಕೋರ್ಟು, ಜೈಲು ಅಲೆಯುತ್ತಾ ಕುಟುಂಬಗಳೇ ನಾಶವಾಗುತ್ತವೆ; ಕಾಲೇಜು, ಸಮಾಜಗಳ ಸಮತೋಲನವೂ ನಾಶವಾಗುತ್ತದೆ. ಇದು ಹುಡುಗರಿಗೂ, ತಂದೆತಾಯಿಯರಿಗೂ, ಬೋಧಕರಿಗೂ ಮೊದಲು ಅರ್ಥವಾಗಬೇಕು. 
 
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ರಾಜಕೀಯ ಪಕ್ಷಗಳ ಹೀನಜನ ತಮ್ಮ ‘ವೋಟುಪಾಡು’ ರಾಜಕಾರಣಕ್ಕಾಗಿ ಇಂಥ ಚಿಲ್ಲರೆ ಕೆಲಸಗಳಿಗೆ ಹುಡುಗರನ್ನು ದುರ್ಬಳಕೆ ಮಾಡಿಕೊಳ್ಳದಂತೆ ಮತದಾರರು ಅವರನ್ನು ಎಚ್ಚರದಲ್ಲಿಡಬೇಕು. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ನಿಜವಾದ ಸಮಸ್ಯೆಗಳನ್ನು ಪರಿಹರಿಸಲಾಗದೆ, ಇಂಥ ಗಲಭೆಗಳನ್ನು ಸೃಷ್ಟಿಸಲು ರಾಜಕೀಯ ಪಕ್ಷಗಳು ಸಂಚು ಮಾಡುತ್ತಿರುತ್ತವೆ. ಪಠ್ಯಪುಸ್ತಕಗಳನ್ನು ಆರೋಗ್ಯಕರವಾಗಿ ರೂಪಿಸಿದರೆ, ಅದರ ವಿರುದ್ಧ ಅಸಂಬದ್ಧ ಪ್ರಶ್ನೆಗಳನ್ನೆತ್ತಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು, ಹುಡುಗರನ್ನು ಕ್ಷುದ್ರ ರಾಜಕಾರಣಕ್ಕೆ ಎತ್ತಿ ಕಟ್ಟುವುದು- ಒಂದೇ ಬಗೆಯ ವಿಷಮಯ ರಾಜಕಾರಣದ ಎರಡು ಕೊಂಬೆಗಳು ಎಂಬುದು ಹುಡುಗ, ಹುಡುಗಿಯರಿಗೆ ಗೊತ್ತಾಗಬೇಕು. ಇಂಡಿಯಾದ ಇನ್ನಿತರ ಭಾಗಗಳಲ್ಲಿ ಹೊಸ ತಲೆಮಾರಿನ ಹುಡುಗಹುಡುಗಿಯರು ‘ಆಮ್ಆದ್ಮಿ’ಯಂಥ ಹೊಸ ಪಕ್ಷಗಳನ್ನು ಮುನ್ನಡೆಸುತ್ತಾ, ಹೊಸ ಭಾಷೆಯನ್ನಾಡುತ್ತಿರುವ ಈ ಕಾಲದಲ್ಲಿ ಕರ್ನಾಟಕದ ಹೊಸ ತಲೆಮಾರು ಹೊಸ ನುಡಿಗಟ್ಟು, ಹೊಸ ರಾಜಕಾರಣದ ಸಾಧ್ಯತೆ ಕುರಿತು ಯೋಚಿಸಬೇಕು. ಹಿಂದೊಮ್ಮೆ ಅಮೆರಿಕದಲ್ಲಿ ಬುರ್ಖಾದ ವಿರುದ್ಧ ತರಲೆ ಎದ್ದಾಗ, ‘ಅದು ಧರಿಸುವವರ ಹಕ್ಕು’ ಎಂದು ಕ್ರಿಶ್ಚಿಯನ್ನರು ಹಾಗೆ ತರಲೆ ಎಬ್ಬಿಸಿದವರ ವಿರುದ್ಧವೇ ಪ್ರತಿಭಟಿಸಿದ್ದನ್ನೂ ನೆನಪಿಸಿಕೊಳ್ಳಬೇಕು.
 
ಕೊನೆ ಟಿಪ್ಪಣಿ: ಕಳಚಿದ ಮೂರು ಕೊಂಡಿಗಳು 
ಈ ಅಂಕಣಕ್ಕೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ದಿನ (ಫೆ. 13) ಎಂ.ಡಿ. ನಂಜುಂಡಸ್ವಾಮಿಯವರ ಜನ್ಮದಿನ ಎಂಬುದನ್ನು ಮಗುವೊಂದು ನೆನಪಿಸಿತು. ತಕ್ಷಣ ‘ಚಿದಂಬರ ರಹಸ್ಯ’ದಲ್ಲಿ ಇಂಗ್ಲಿಷ್ ಗೌಡನ ಮನೆಯ ಜಪ್ತಿಯನ್ನು ಸಾರುತ್ತಾ, ಬಾಲಯ್ಯ ತಮಟೆ ಬಾರಿಸತೊಡಗಿದಾಗ, ಸಿಟ್ಟಿಗೆದ್ದ ರಮೇಶ ಚಾಕುವಿನಲ್ಲಿ ತಮಟೆ ಸೀಳುವ ಪ್ರಸಂಗ ಕಣ್ಣೆದುರು ಬಂತು. ತೇಜಸ್ವಿ ರೈತ ಚಳವಳಿಯಲ್ಲಿ ಭಾಗವಹಿಸಿರದಿದ್ದರೆ ಈ ಪ್ರಸಂಗ ಸೃಷ್ಟಿಯಾಗುತ್ತಿತ್ತೋ ಇಲ್ಲವೋ, ಕಾಣೆ. ಈ ಪ್ರಸಂಗವನ್ನು ಗಮನಿಸುತ್ತಿದ್ದರೆ ಎಂಬತ್ತರ ದಶಕದ ಕರ್ನಾಟಕದ ಮೂರು ಮುಖ್ಯ ಕೊಂಡಿಗಳು ಕಾಣತೊಡಗುತ್ತವೆ: ಒಂದು: ರೈತ ಚಳವಳಿಯ ಜೊತೆಜೊತೆಗೇ ತಯಾರಾದ ಹೊಸ ಕಾಳಜಿಯ ಕಾಲೇಜು ಹುಡುಗರು. ಎರಡು: ಅವರನ್ನು ಪ್ರೇರೇಪಿಸಿದ ಎಂಡಿಎನ್, ಸುಂದರೇಶ್, ಕಡಿದಾಳು ಶಾಮಣ್ಣ, ಮಂಜುನಾಥ ದತ್ತ ಥರದ ಮೊದಲಘಟ್ಟದ ರೈತ ನಾಯಕರು. ಅವರ ಜೊತೆಗೆ ಸಕ್ರಿಯವಾಗಿದ್ದು, ನಂತರವೂ ತಾತ್ವಿಕವಾಗಿ ಅವರ ಜೊತೆಗಿದ್ದ ತೇಜಸ್ವಿಯವರಂಥ ಅನೇಕ ಲೇಖಕರು. ಈ ಮೂರು ಕೊಂಡಿಗಳ ಸಂಬಂಧ ಕಳಚಿರುವುದು ಕೂಡ ಇವತ್ತಿನ ಹುಡುಗರ ದಿಕ್ಕು ತಪ್ಪಿದ ನಡೆಗೆ ಕಾರಣವಾಗಿರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT