ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೋಸ್: ಭಾರತದತ್ತ ಮತ್ತೆ ಗಮನ

Last Updated 28 ಜನವರಿ 2014, 19:30 IST
ಅಕ್ಷರ ಗಾತ್ರ

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ವಿಶ್ವ ‌ಆರ್ಥಿಕ ವೇದಿಕೆಯ ಈ ವರ್ಷದ ಸಮಾವೇಶ ಈಗಾ­ಗಲೇ ಕೊನೆಗೊಂಡಿದೆ. ವಿಶ್ವ ಆರ್ಥಿಕತೆಯ ನಾಡಿಮಿಡಿತ ಅರಿಯಲು ಮತ್ತು ಜಾಗತಿಕ ಮುಖಂಡರ ಅಭಿಪ್ರಾಯ ಆಲಿ­ಸಲು ಇದೊಂದು ಸದವಕಾಶ­ವಾಗಿತ್ತು. ಈ ಬಾರಿಯ ಸಮಾವೇಶ­ದಲ್ಲಿ ಭಾರತದ ಬಗ್ಗೆ ಸಮ್ಮಿಶ್ರ ಅಭಿಪ್ರಾಯ ವ್ಯಕ್ತ­ವಾಯಿತು. ಈ ಹಿಂದಿನ ಕೆಲವು ವರ್ಷ­ಗಳಲ್ಲಿ ವ್ಯಕ್ತವಾದ ಟೀಕೆ - ಟಿಪ್ಪಣಿಗಳಿಗಿಂತ ಭಿನ್ನ­ವಾದ ಅನಿಸಿಕೆಯೂ ಕೇಳಿ ಬಂದಿತು.

ವಿಶ್ವ ಆರ್ಥಿಕ ವೇದಿಕೆಯು (ಡಬ್ಲ್ಯುಇಎಫ್) ಸ್ವಿಟ್ಜ­ರ್ಲೆಂಡ್ ಮೂಲದ ಲಾಭಯೇತರ ಆರ್ಥಿಕ ಸಂಘ­ಟನೆ­ಯಾಗಿದೆ. ಜರ್ಮನಿಯಲ್ಲಿ ಜನಿಸಿದ ಬಿಸಿನೆಸ್ ಸ್ಕೂಲ್  ಪ್ರಾಧ್ಯಾಪಕ ಕ್ಲಾಸ್ ಶ್ವಾಬ್ ಅವರು ಈ ವೇದಿಕೆಯ ಸ್ಥಾಪಕ­ರಾಗಿದ್ದಾರೆ. ವಿವಿಧ ದೇಶಗಳ ರಾಜ­ಕೀಯ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳ ಬಗ್ಗೆ ಚರ್ಚೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ವೇದಿಕೆಯಾಗಿದೆ. ಜಾಗತಿಕ ಮುಖಂಡ­ರು ಮತ್ತು ಚಿಂತಕರು ಜಾಗತಿಕ ಅರ್ಥ ವ್ಯವಸ್ಥೆಯನ್ನು   ಕಾಡುತ್ತಿ­ರುವ ಹತ್ತು - ಹಲವು ಸಮಸ್ಯೆ­ಗಳ ಬಗ್ಗೆ ಚರ್ಚಿಸಿ ಪರಿಹಾರೋಪಾಯ­ಗಳನ್ನು ಸೂಚಿಸು­ತ್ತಾರೆ.

ಹಲವು ದಶಕಗಳ ಅವಧಿಯಲ್ಲಿ ಈ ವೇದಿಕೆ­ಯಲ್ಲಿ ಆರ್ಥಿಕ ವಿಚಾರಗಳ ಬಗ್ಗೆಯೇ ಗಂಭೀರ ಸ್ವರೂಪದ ಚರ್ಚೆ ನಡೆಯುತ್ತ ಬಂದಿದೆ.  ವರ್ಷ­ಕ್ಕೊಮ್ಮೆ ನಡೆಯುವ ಈ ಸಮಾವೇಶಕ್ಕೆ ತುಂಬ ಮಹತ್ವವೂ ಒದಗಿದೆ.

ಸಮಾವೇಶದಲ್ಲಿ ವಿಶ್ವದ ರಾಜ­ಕೀಯ, ಉದ್ದಿಮೆ ವಲಯದ ಮುಂಚೂಣಿ ಮುಖಂಡ­ರು, ಬುದ್ಧಿಜೀವಿ­ಗಳು, ಅಭಿಪ್ರಾಯ ರೂಪಿಸು­­ವವರು ಮತ್ತು ಪತ್ರಕರ್ತರು ಒಳಗೊಂಡಂತೆ ಅಂದಾಜು 2,000ದಷ್ಟು ಪ್ರತಿನಿಧಿಗಳು ಭಾಗ­ವಹಿಸು­ತ್ತಾರೆ. ಇವರೆಲ್ಲ ಒಂದೆಡೆ ಸೇರಿ ಹಲವಾರು ಸವಾಲುಗಳನ್ನು ಚರ್ಚಿಸಿ, ಕಾರ್ಯ­ಸಾಧ್ಯವಾದ ಪರಿ­ಹಾರ­ಗಳನ್ನು ಸೂಚಿಸುತ್ತಾರೆ.

ವಿಶ್ವದ ಮುಖಂಡರು ತಮ್ಮೆಲ್ಲ ಚಿಂತನೆ­ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು, ಬಾಂಧವ್ಯ ವೃದ್ಧಿಸಿ­ಕೊಳ್ಳಲೂ ಈ ಸಮಾವೇಶವು ಅಪೂರ್ವ ಅವಕಾಶ ಒದಗಿಸಿಕೊಡುತ್ತದೆ. ಅನೇಕ ದೇಶಗಳು ನೇರ ಬಂಡವಾಳ ಹೂಡಿಕೆ ಉತ್ತೇಜಿಸಲೂ ಸಮಾವೇಶವನ್ನು ಸಮ­ರ್ಥ­ವಾಗಿ ಬಳಸಿಕೊಳ್ಳುತ್ತವೆ. ವಿಶ್ವದಾ­ದ್ಯಂತ ಮಾಧ್ಯಮ­ಗಳ ಸಂಪಾದಕರು ಮತ್ತು ಟೆಲಿವಿಷನ್ ಕಾರ್ಯಕ್ರಮ ನಿರೂ­ಪಕರು ಕೂಡ ಭಾಗವಹಿಸುತ್ತಾರೆ.

ಈ ಪ್ರತಿಷ್ಠಿತ ವೇದಿಕೆಯ ಸದಸ್ಯತ್ವವು ಕೂಡ ಸಂಘಟಕರ ಆಹ್ವಾನದ ಮೇರೆಗೆ ದೊರೆ­ಯುತ್ತದೆ.  ವರ್ಷಕ್ಕೆ 5 ಶತಕೋಟಿ ಡಾಲರ್‌­ಗಳಷ್ಟು (₨ 30 ಸಾವಿರ ಕೋಟಿ) ವರಮಾನ ಇರುವ ಉದ್ದಿಮೆ ಸಂಸ್ಥೆಗಳ ಮುಖ್ಯಸ್ಥರಿಗೆ ಮಾತ್ರ ಸದಸ್ಯತ್ವ ನೀಡುವುದನ್ನು ಕಟ್ಟುನಿಟ್ಟಾಗಿ ಪಾಲಿಸಿ­­ಕೊಂಡು ಬರಲಾಗುತ್ತಿದೆ. ಒಂದು ಸಾವಿರ ಪ್ರತಿನಿಧಿಗಳು ಈ ವೇದಿಕೆಗೆ ಅಗತ್ಯವಾದ ಹಣಕಾಸು ನೆರವು ಒದಗಿ­ಸು­ತ್ತಾರೆ. ಇವರು ಸಮಾವೇಶದಲ್ಲಿ ವಿಶೇಷ ಹಕ್ಕುಬಾಧ್ಯತೆಗಳಿಗೆ ಪಾತ್ರರಾ­ಗುತ್ತಾರೆ. ವೇದಿಕೆಯು ಪ್ರತಿ ಬೇಸಿಗೆ­ಯಲ್ಲಿ ಚೀನಾದಲ್ಲಿ ಸಮಾವೇಶ ಸಂಘಟಿಸಿ­ದರೂ, ದಾವೋಸ್‌ನಲ್ಲಿ ನಡೆಯುವ ಚಳಿ­ಗಾಲದ ಸಮಾವೇಶವು ಗರಿಷ್ಠ ಗಮನ ಸೆಳೆಯುತ್ತದೆ.

ಜಾಗತಿಕ ಮುಖಂಡರು ಪರಸ್ಪರ ನಡೆಸುವ ಚರ್ಚೆಯನ್ನು ವಿಶ್ವ ಉದ್ಯಮ ಸಮುದಾಯವು ಆಸಕ್ತಿಯಿಂದ ಆಲಿಸು­ತ್ತದೆ. ಸಮಾವೇಶದಲ್ಲಿ ಭಾಗವಹಿಸುವ ಉದ್ಯಮ ದಿಗ್ಗಜರು, ಜಾಗತಿಕ ಸರಕು ಮತ್ತು ಸೇವೆಗಳ ಒಟ್ಟು ಉತ್ಪಾದನೆಯ (ಜಿಡಿಪಿ) ಶೇ 25ರಷ್ಟನ್ನು ನಿಯಂತ್ರಿ­ಸುತ್ತಾರೆ.  ಪ್ರಾದೇಶಿಕ ಸಮಾವೇಶ, ಸಂಶೋಧನಾ ಯೋಜನೆ, ವಾರ್ಷಿಕ ಪ್ರಶಸ್ತಿ ಮತ್ತಿತರ ಕಾರ್ಯಕ್ರಮ­ಗಳಿಗೂ ಈ ಸಮಾವೇಶವು ಚಾಲನೆ ನೀಡುತ್ತದೆ.

ವಿಶ್ವ ಆರ್ಥಿಕ ವೇದಿಕೆಯ ಈ ಸಾಂಪ್ರ­ದಾಯಿಕ ಜಾಗತೀಕರಣದ ಮಾದರಿ­ಯನ್ನು ಅನೇಕ ಟೀಕಾ­ಕಾರರು ವಿರೋಧಿ­ಸುತ್ತಲೇ ಬಂದಿದ್ದಾರೆ. ಸಮಾ­ವೇಶ ವಿರೋಧಿಸಿ ದಾವೋಸ್‌ನಲ್ಲಿ ಪ್ರತಿಭಟನೆ­ಗಳು ನಡೆಯುವುದೂ ಸಾಮಾನ್ಯ ದೃಶ್ಯವಾಗಿರುತ್ತದೆ.

ವಿಶ್ವ ಆರ್ಥಿಕ ವೇದಿಕೆಯ ಖ್ಯಾತಿಯ ಫಲವಾಗಿ ಕೆಲ ಸಮಾಜ ವಿಜ್ಞಾನಿಗಳು,  ಗಣ್ಯ, ಸಿರಿವಂತ ಮತ್ತು ಜಾಗತಿಕ ಆರ್ಥಿಕತೆ ಬಗ್ಗೆ ತೀವ್ರ ಕುತೂಹಲ ತಳೆದಿರುವವರನ್ನು ‘ದಾವೋಸ್ ವ್ಯಕ್ತಿ’ ಎಂಬ ವಿಶೇಷ ಹೆಸರಿನಿಂದ ಕರೆಯು­ವುದನ್ನೂ ರೂಢಿಗೆ ತಂದಿದ್ದಾರೆ.

ಕಳೆದ ದಶಕದ ಕೊನೆಯ ಭಾಗದಲ್ಲಿ ಭಾರತವು ದಾವೋಸ್ ಸಮಾವೇಶದಲ್ಲಿ ಎಲ್ಲರ ಅಚ್ಚುಮೆಚ್ಚಿನ ದೇಶವಾಗಿ ಗಮನ ಸೆಳೆದಿತ್ತು. ಭಾರತವು ಕೆಲವೇ ವರ್ಷಗಳಲ್ಲಿ ಜಾಗತಿಕ  ಸರ್ವಶಕ್ತ ರಾಷ್ಟ್ರ­ವಾಗಿ ಚೀನಾಕ್ಕೆ ಸರಿಸಟಿ­ಯಾಗಿ ಹೊರ ಹೊಮ್ಮುವ ಬಗ್ಗೆಯೇ ಎಲ್ಲರೂ ಮಾತ­ನಾಡುತ್ತಿದ್ದರು. ನಂತರದ ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ ಕೆಲಮಟ್ಟಿಗೆ ಕಳಾಹೀನ­ವಾಯಿತು. ಕಳೆದ ಹಲವು ವರ್ಷಗಳಲ್ಲಿ ಕಳಪೆ  ಆರ್ಥಿಕ ಸಾಧನೆಯ ಫಲವಾಗಿ ಭಾರತದ ಪ್ರತಿಷ್ಠೆಗೆ ತೀವ್ರ ಹಿನ್ನಡೆ ಉಂಟಾಯಿತು. ಕೇಂದ್ರದಲ್ಲಿನ ಆಡಳಿತಾರೂಢ ‘ಯುಪಿಎ-–2’ ಸರ್ಕಾರದ ಅನೇಕ ಹಗರಣಗಳು ಬಯಲಿಗೆ ಬರುತ್ತಿದ್ದಂತೆ ದೇಶದ ಪ್ರತಿಷ್ಠೆ ಇನ್ನಷ್ಟು ಮಣ್ಣು ಪಾಲಾಯಿತು.  ತೆರಿಗೆ ಕಾಯ್ದೆ ತಿದ್ದುಪಡಿಗಳನ್ನು ಪೂರ್ವಾ­ನ್ವಯ­ಗೊಳಿಸಿದ ಕ್ರಮದಿಂದ ಉದ್ದಿಮೆ ವಹಿವಾಟಿನಲ್ಲಿ ಕಂಡು ಬಂದ ಅನಿಶ್ಚಿ­ತತೆಯು ಬೆಂಕಿಗೆ ತುಪ್ಪ ಸುರಿ­ದಂತಾ­ಯಿತು.

ಹೊಸ ಯೋಜನೆಗಳನ್ನು ಜಾರಿಗೊಳಿ­ಸುವಲ್ಲಿ ಸರ್ಕಾರದ ನಿರಾಸಕ್ತಿ ಫಲವಾಗಿ ಭಾರತದ ಸ್ಥಾನಮಾನವು ಜಾಗತಿಕ ಆರ್ಥಿಕ ಭೂಪಟದಲ್ಲಿ ಇನ್ನಷ್ಟು ಮಸು­ಕಾಯಿತು. ದಾವೋಸ್ ಸಮುದಾಯವು ಕೂಡ ಇದಕ್ಕೆ ತ್ವರಿತವಾಗಿ ಸ್ಪಂದಿಸಿ ಭಾರತವನ್ನು ಮೂಲೆಗುಂಪು ಮಾಡಿತು.

2014ನೇ ವರ್ಷದ ಆರಂಭದಲ್ಲಿ ಬದ­ಲಾವಣೆ ಗಾಳಿ ಬೇರೆ ದಿಕ್ಕಿನಲ್ಲಿ ಬೀಸಲಾರಂಭಿ­ಸಿದೆ. ಈ ಬಾರಿಯ  ಸಮಾವೇಶದಲ್ಲಿ ಭಾರತದ ಬಗ್ಗೆ ಮತ್ತೆ ಗಂಭೀರ ಚರ್ಚೆ ನಡೆಯಿತು.

ಕೆಲ ಆರ್ಥಿಕ ತಜ್ಞರು ಭಾರತದತ್ತ ಮತ್ತೆ ಆಶಾವಾದದಿಂದ ನೋಡತೊಡ­ಗಿದ್ದಾರೆ. ಸಮಾ­ವೇಶದ ಸಂದರ್ಭದಲ್ಲಿ ಪ್ರಮುಖ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ­ರುವ, ಖ್ಯಾತ ಆರ್ಥಿಕತಜ್ಞ  ಟಾಮ್ ಫ್ರೀಡ್ಮನ್,  ಬದಲಾವಣೆಯ ಹೊಸ ನೀರು ಮತ್ತು ತೀವ್ರ ಸ್ವರೂಪದ ಆರ್ಥಿಕ ಚಟುವ­ಟಿಕೆಗಳು ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಇರುವ ಯುವ ಜನಾಂಗಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಿಕೊಡಲಿದ್ದು, ಅದರ ಲಾಭಗಳು ಅಪಾರ ಪ್ರಮಾಣದಲ್ಲಿ ದೊರೆ­ಯಲಿವೆ ಎಂದು ಬಣ್ಣಿಸಿದ್ದಾರೆ.

ಭಾರತವು ಇತ್ತೀಚೆಗೆ ಎದುರಿಸಿದ ಅನೇಕ ಸವಾಲುಗಳು ಇತರ ಪ್ರಜಾಸ­ತ್ತಾತ್ಮಕ ದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬಂದಿಲ್ಲ. ಈ ಸವಾಲುಗಳನ್ನೆಲ್ಲ ಭಾರತ ಸಮರ್ಥವಾಗಿ ಎದುರಿಸುತ್ತಲೇ ಬಂದು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿದೆ.  ಭಾರತೀಯರು ಸ್ವಯಂ ವಿಮರ್ಶಾಗುಣ ಹೊಂದಿದವ­ರಾಗಿದ್ದು, ಅದರಿಂದ ವಿಷಣ್ಣ ಭಾವವು ತಕ್ಷಣಕ್ಕೆ ಎಲ್ಲೆಡೆ ಪಸರಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಇನ್ನೊಬ್ಬ ಆರ್ಥಿಕ ತಜ್ಞರೊಬ್ಬರು, ಭಾರತೀಯ­ರಲ್ಲಿ ಇರುವ ಇಂತಹ ಎಚ್ಚರಿಕೆಯ ಪ್ರವೃ­ತ್ತಿಯ ಫಲವಾಗಿ ಸರ್ಕಾರ ಯಾವಾ­ಗಲೂ ತುದಿಗಾಲಲ್ಲಿಯೇ ನಿಂತಿರಬೇಕಾ­ಗುತ್ತದೆ ಎಂದೂ ವಿಶ್ಲೇಷಿಸಿದ್ದಾರೆ.

ಭಾರತದ ಬಗ್ಗೆ ಜಾಗತಿಕ ದೃಷ್ಟಿ­ಕೋನವು ಸಕಾರಾತ್ಮಕವಾ­ಗಿರುವಾಗ, ಭಾರತದ ಅನೇಕ ಉದ್ಯಮಿಗಳು ಮಾತ್ರ ಎಚ್ಚರಿಕೆಯ ನಿಲುವು ತಳೆದಿದ್ದಾರೆ. ಭಾರತದಲ್ಲಿ ಬಂಡವಾಳ ಹೂಡುವುದರ ಬಗ್ಗೆ ಅವರೆಲ್ಲ ಇನ್ನೂ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ ಎನ್ನು­ವುದು ಸಮಾವೇಶದಲ್ಲಿ ಶ್ರುತಪಟ್ಟಿತು.
ಸಮಾವೇಶದಲ್ಲಿ ಕೇಂದ್ರ ಸರ್ಕಾರ­ವನ್ನು ಪ್ರತಿನಿಧಿಸಿದ ಹಣಕಾಸು ಸಚಿವ ಪಿ. ಚಿದಂಬರಂ ಅವರಂತೂ ತಮ್ಮ ಸರ್ಕಾ­ರದ ಸಾಧನೆ­ಯನ್ನು ಅತಿಶಯ­ವಾಗಿ ಹೊಗಳಿದರು. ಒಂದು ವರ್ಷದ ಅವಧಿಯಲ್ಲಿ ಸರ್ಕಾರವು ಹಲವಾರು ವಲಯ­ಗಳಿಗೆ ಸಂಬಂಧಿಸಿದಂತೆ ಅತ್ಯಂತ ತ್ವರಿತವಾಗಿ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದು, ಅದೇ ಧೋರಣೆ ಮುಂದುವರೆ­ಯುವ ಭರವಸೆಯನ್ನೂ ನೀಡಿದರು. ಹಿತಾನುಭವ ಬರೀ ಭ್ರಮೆಯಲ್ಲ. ಅದೊಂದು ವಾಸ್ತವ ಎಂದು ಪ್ರತಿಪಾದಿ­ಸಿದ ಚಿದಂಬರಂ, ಶೀಘ್ರದಲ್ಲಿಯೇ ಆರ್ಥಿಕ ವೃದ್ಧಿ ದರ ಶೇ 8ರಷ್ಟು ಆಗಲಿದೆ ಎಂದೂ ಜಾಗತಿಕ ಸಮುದಾಯಕ್ಕೆ ಭರವಸೆ ನೀಡಿದರು.

ಅನೇಕ ಅಂತರರಾಷ್ಟ್ರೀಯ ಮೌಲ್ಯ­ಮಾಪನಾ ಸಂಸ್ಥೆಗಳೂ ಇತ್ತೀಚೆಗೆ ಭಾರತದ ಬಗ್ಗೆ ಒಳ್ಳೆಯ ಮಾತುಗಳ­ನ್ನಾಡುತ್ತಿವೆ. ‘ಮೂಡಿ’ ಸಂಸ್ಥೆಯೂ ಈಗ ಹೊಗಳಿಕೆಯ  ಸಾಲಿಗೆ ಸೇರ್ಪಡೆ­ಯಾ­ಗಿದೆ.

ದೇಶದ ಆರ್ಥಿಕ ಪರಿಸ್ಥಿತಿಯು ಕ್ರಮೇಣ  ಬದಲಾವಣೆಯ ಹಾದಿಗೆ ಮರಳುತ್ತಿದೆ ಎಂದು ಭಾಸವಾದರೂ ಕೇಂದ್ರ ಸರ್ಕಾರದ ಆಡಳಿತ ವೈಖರಿ ಅದರಲ್ಲೂ ಬಯಲಿಗೆ ಬಂದಿರುವ ಭ್ರಷ್ಟಾಚಾರ ಪ್ರಕರಣಗಳು ವಿವಾದದ ಕೇಂದ್ರಬಿಂದು­ಗಳಾಗಿವೆ.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಗಣರಾಜ್ಯೋತ್ಸವ ಮುನ್ನಾದಿನ ದೇಶವನ್ನು ಉದ್ದೇಶಿಸಿ ಮಾಡಿದ  ಭಾಷಣದಲ್ಲಿನ ಆಶಯ ಉಲ್ಲೇಖಿ­ಸುವುದು ಇಲ್ಲಿ ಅಪ್ರಸ್ತುತವೇನೂ ಆಗ­ಲಾರದು. ದಕ್ಷ ಆಡಳಿತಕ್ಕೆ ಒತ್ತು ನೀಡಿರುವ ಮುಖರ್ಜಿ ಅವರು, ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರದ ಗಂಭೀರ ಸ್ವರೂಪದ ಪರಿಣಾಮಗಳ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಭಾರತ ತನ್ನೆಲ್ಲ ಸಂಪನ್ಮೂಲಗಳನ್ನು ಸದುಪಯೋಗ ಮಾಡಿಕೊಳ್ಳಲು ವಿಪುಲ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಸಮರ್ಥ ನಾಯಕತ್ವದ ಪ್ರಶ್ನೆಯೇ ಈಗ ಮುಖ್ಯವಾಗಿದೆ.

ಈ ಎಲ್ಲ ಅನುಮಾನ, ಪ್ರಶ್ನೆಗಳು ಏನೇ ಇರಲಿ, 2015ರ ದಾವೋಸ್ ಸಮಾ­ವೇಶ­ದಲ್ಲಿ ಭಾರತವು ತನಗೆ ಸಿಗಬೇಕಾದ  ನ್ಯಾಯಬದ್ಧವಾದ ಈ ಹಿಂದಿನ ಸ್ಥಾನಮಾನ ಮತ್ತೆ ಪಡೆಯು­ವಂತಾಗಲಿ ಎಂದು ಆಶಿಸೋಣ.

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT