ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಎನ್ನುವ `ಅತ್ಯಾಚಾರದ ಬಲಿಪಶು'

Last Updated 13 ಜನವರಿ 2013, 19:59 IST
ಅಕ್ಷರ ಗಾತ್ರ

ದೇಶದಲ್ಲಿ ನಡೆಯುವ ಪ್ರತಿ ನಾಲ್ಕು ಅತ್ಯಾಚಾರಗಳಲ್ಲಿ ಒಂದು, ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಗೃಹ ಇಲಾಖೆಗೆ ಸೇರಿರುವ ಅಪರಾಧ ವಿಭಾಗದ ದಾಖಲೆಗಳು ಹೇಳುತ್ತಿವೆ. ದೇಶದ 35 ನಗರಗಳಲ್ಲಿ ಮಹಿಳೆಯರ ದೃಷ್ಟಿಯಿಂದ `ಅತ್ಯಂತ ಅಸುರಕ್ಷಿತ ನಗರ ದೆಹಲಿ' ಎಂದು ಎರಡು ವರ್ಷಗಳ ಹಿಂದೆ ನಡೆಸಲಾಗಿದ್ದ ಸಮೀಕ್ಷೆ ಹೇಳಿತ್ತು.

34 ವರ್ಷಗಳ ಹಿಂದೆ ಬಿಲ್ಲಾ ಮತ್ತು ರಂಗಾ ಎಂಬ ಇಬ್ಬರು ಕೇಡಿಗಳು ಗೀತಾ ಚೋಪ್ರಾ ಎಂಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಜತೆಯಲ್ಲಿದ್ದ ಅಣ್ಣನ ಜತೆ ಆಕೆಯನ್ನು ಸಾಯಿಸಿದ ಬರ್ಬರ ಕೃತ್ಯದಿಂದ ಹಿಡಿದು, ಹತ್ತುವರ್ಷಗಳ ಹಿಂದೆ ರಾಜಧಾನಿಯ ಹೃದಯಭಾಗದಲ್ಲಿರುವ ವೈದ್ಯಕೀಯ ಕಾಲೇಜಿನ ಆವರಣದಲ್ಲಿಯೇ ಹಾಡಹಗಲೇ ವಿದ್ಯಾರ್ಥಿನಿ ಮೇಲೆ ನಡೆಸಿದ ಅತ್ಯಾಚಾರದ ವರೆಗೆ, ಅಲ್ಲಿಂದ ಕಳೆದ ತಿಂಗಳಷ್ಟೇ ಸಾವಿನಲ್ಲಿ ಕೊನೆಗೊಂಡ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ವರೆಗಿನ ಎಲ್ಲ ಪ್ರಕರಣಗಳು ಮತ್ತೆ ಮತ್ತೆ ದೆಹಲಿ `ಅತ್ಯಾಚಾರಗಳ ರಾಜಧಾನಿ' ಎಂಬುದನ್ನು ಸಾಬೀತುಪಡಿಸುತ್ತಲೇ ಇವೆ. ಅಲ್ಲಿನ ಮಣ್ಣಿನಲ್ಲಿಯೇ ಇಂತಹ ಗುಣ ಇದೆಯೇ? `ದೆಹಲಿ ಕೇವಲ ಅತ್ಯಾಚಾರಗಳ ನಗರ ಅಲ್ಲ, ಇದು ನಿರಂತರ ಅತ್ಯಾಚಾರದ ಬಲಿಪಶು' ಕೂಡಾ ಹೌದು ಎನ್ನುತ್ತಿದೆ ಇತಿಹಾಸ.

ದೆಹಲಿಯ ನಿಗೂಢ ವ್ಯಕ್ತಿತ್ವವನ್ನು ಇತಿಹಾಸದ ಬೆಳಕಲ್ಲಿ ಮೊದಲು ಭೇದಿಸಲು ಪ್ರಯತ್ನ ಪಟ್ಟವರು ದೇಶ ಕಂಡ ಅಪರೂಪದ ಚಿಂತಕ ಡಾ.ರಾಮಮನೋಹರ ಲೋಹಿಯಾ. 1958ರಲ್ಲಿ ಬರೆದಿದ್ದ `ಡೆಲ್ಲಿ ಎಂದೂ ಕರೆಯುವ ದಿಲ್ಲಿ' ಎನ್ನುವ ತಮ್ಮ ಜನಪ್ರಿಯ ಲೇಖನದಲ್ಲಿ ಮೊದಲ ಬಾರಿಗೆ ದೆಹಲಿಯನ್ನು ಅವರು `ನಾಯಕಸಾನಿ'ಗೆ ಹೋಲಿಸಿದ್ದರು.

`ಪ್ರಪಂಚದ ಅತ್ಯಂತ ಮೋಹಕ ಮತ್ತು ಕುತ್ಸಿತ ನಾಯಕಸಾನಿ ಡೆಲ್ಲಿ. ಯಾವ ಪ್ರೇಮಿಯೂ ಆಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸಲಿಲ್ಲ, ಯಾವ ಪ್ರಾಮಾಣಿಕ ಪ್ರೇಮಿಗೂ ಈಕೆ ತನ್ನನ್ನು ಒಪ್ಪಿಸಿಕೊಂಡವಳಲ್ಲ, ಯಾರಲ್ಲಿ ಉತ್ತಮ ನಡವಳಿಕೆ  ಮತ್ತು ಕೋಮಲ ಭಾವವನ್ನು ಉದ್ದೀಪನಗೊಳಿಸಲು ಈಕೆ ಪ್ರಯತ್ನಪಡುತ್ತಿದ್ದಳೋ, ಅವರಿಂದಲೇ ಅತ್ಯಂತ ಅನಾಗರಿಕ ರೀತಿಯ ದೌರ್ಜನ್ಯಕ್ಕೆ ಈಡಾಗುತ್ತಾ ಬಂದವಳು ಇವಳು. ದುಷ್ಟರ ಸುಧಾರಣೆಯ ಈಕೆಯ ಪ್ರಯತ್ನ ಇನ್ನೇನು ಮುಗಿಯುತ್ತಾ ಬಂತು ಎನ್ನುವಾಗಲೇ ದುಷ್ಟರ ಇನ್ನೊಂದು ಗುಂಪು ಈಕೆ ಮೇಲೆ ಎರಗಿಬೀಳುತ್ತಿತ್ತು.

ಇದರಿಂದ ಈಕೆ ಹತಾಶೆಗೀಡಾದವಳಲ್ಲ, ದಣಿದವಳೂ ಅಲ್ಲ, ನಿರಂತರವಾಗಿ ತನ್ನ ಪ್ರಯತ್ನದಲ್ಲಿ ತೊಡಗಿದವಳು, ಈಕೆಯ ಮರುಳುಗೊಳಿಸುವ ಚೆಲುವಿನ ಪ್ರಣಯ ವಿಲಾಸ, ಒಳ್ಳೆಯದನ್ನೇ ಮಾಡಬೇಕು, ಕೆಟ್ಟದ್ದನ್ನು ತಿದ್ದಬೇಕು ಈ ಮೂಲಕ ಜಗತ್ತನ್ನು ಇನ್ನಷ್ಟು ಸುಂದರಗೊಳಿಸಬೇಕು ಎಂಬ ದಯಾಳು ಗುಣವನ್ನು ನೋಡಿದಾಗಲೆಲ್ಲ ಈಕೆಯಲ್ಲಿ ಏನೋ ಒಂದು ಧಾರ್ಮಿಕ ದ್ರವ್ಯವಿದ್ದೀತೇ ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ..'

`...ಗೆಲ್ಲಲು ಬಂದವನಿಗೆ ಈಕೆ ತನ್ನ ಸ್ತನಗಳನ್ನು ಪ್ರದರ್ಶಿಸಿದ್ದಾಳೆ, ಆತ ಮರುಳಾಗಿ ಬಿಡುತ್ತಾನೆ, ಕೊನೆಯಲ್ಲಿ ಪಳಗಿಹೋಗುತ್ತಾನೆ ಎಂಬ ಆಸೆಯಿಂದ...ಎಷ್ಟೊ ಸಲ ತಕ್ಷಣದ ಯಾವುದೇ ಲಾಭ ಇಲ್ಲದೆ ಕೂಡಾ ಹಾಗೆ ಮಾಡಿದ್ದಾಳೆ,  ಈ ಮುದಿ ಮಾಟಗಾತಿ ತನ್ನ ಯಾವುದೋ ಭಾಗವನ್ನು ರಹಸ್ಯವಾಗಿ ಇಟ್ಟುಕೊಂಡಿದ್ದಾಳೆ, ಯಾವುದೋ ಸಂಜೀವಿನಿ ಲೇಪವನ್ನು ಗುಟ್ಟಾಗಿ ಮುಚ್ಚಿಟ್ಟುಕೊಂಡಿದ್ದಾಳೆ ಎಂದು ಅನುಮಾನಪಟ್ಟು ಶರಣಾದ ನಂತರವೂ ತೈಮೂರ್ ಮತ್ತು ನಾದಿರ್‌ಷಾನಂತಹವರು ಅಗತ್ಯ ಇಲ್ಲದಿದ್ದರೂ ಈಕೆಯನ್ನು ಗಾಯಗೊಳಿಸಿ ವಿರೂಪ ಮಾಡಿದ್ದರು.... ಡೆಲ್ಲಿಯನ್ನು ಆಳಬೇಕೆನ್ನುವವರು ಆಕೆಯನ್ನು ಒಲಿಸಿಕೊಳ್ಳಲು ಹೋಗಲೇ ಇಲ್ಲ, ಮೇಲೆರಗಿ ಹತ್ತಿಕ್ಕಿ ವಶಪಡಿಸಿಕೊಳ್ಳಲು ಪ್ರಯತ್ನಪಟ್ಟವರೇ ಹೆಚ್ಚು..' ಎಂದು ಹೇಳುತ್ತಾ ಲೋಹಿಯಾ, ದೆಹಲಿ ಎಂಬ ಮಹಾನಗರ ಜಾಗತಿಕ ಇತಿಹಾಸದ ಅತ್ಯಂತ ಹೃದಯಹೀನ ನಾಯಕಸಾನಿಯಾಗಿ ರೂಪುಗೊಳ್ಳಲು ಕಾರಣಗಳೇನು ಎಂಬುದನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಲೋಹಿಯಾ ನೀಡಿರುವ ಒಳನೋಟಗಳ ಮೂಲಕ ನೋಡಿದರೆ ಮಾತ್ರ ಈಗಿನ ದೆಹಲಿಯನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಳ್ಳಲು ಸಾಧ್ಯ.

ಸುಮಾರು 750 ವರ್ಷಗಳಷ್ಟು ಹಳೆಯದಾದ ದೆಹಲಿಯನ್ನು ಇತಿಹಾಸದ ಪುಟಗಳಲ್ಲಿ ಹುಡುಕುತ್ತಾ ಹೋದರೆ ಮತ್ತೆಮತ್ತೆ ಇದಿರಾಗುವುದು  `ದೆಹಲಿ ಎನ್ನುವ ಯುದ್ಧಭೂಮಿ' ಮಾತ್ರ. ಯುದ್ಧಗಳಲ್ಲಿ ದೆಹಲಿ ಸೋತದ್ದೇ ಹೆಚ್ಚು. ಸೋತುಹೋದ ನಗರಗಳಲ್ಲಿ ಸಾಮಾನ್ಯವಾಗಿ ನಡೆಯುವ ಹತ್ಯೆ, ಲೂಟಿ ಮತ್ತು ಅತ್ಯಾಚಾರಗಳಿಂದ ದೆಹಲಿ ಕೂಡಾ ಹೊರತಾಗಿರಲಿಲ್ಲ. ಹದಿನೈದು ಮೈಲಿಗಿಂತಲೂ ಕಡಿಮೆ ವಿಸ್ತೀರ್ಣದಲ್ಲಿ ಸುಮಾರು ಎಂಟು ಶತಮಾನಗಳ ಕಡಿಮೆ ಅವಧಿಯಲ್ಲಿ ಏಳು ಡೆಲ್ಲಿಗಳು ನಿರ್ಮಾಣಗೊಂಡಿದ್ದವು. ಡೆಲ್ಲಿಯನ್ನು ಗೆದ್ದವರೆಲ್ಲರೂ ರಾಜಧಾನಿಯ ನಿವೇಶನವನ್ನು ಬದಲಾಯಿಸುತ್ತಾ ಹೋಗಿದ್ದಾರೆ.1947ರಲ್ಲಿ ಬ್ರಿಟಿಷರು ದೇಶ ಬಿಟ್ಟು ಹೊರಟಾಗ ಡೆಲ್ಲಿಯ ರಸ್ತೆಗಳಲ್ಲಿ ಹರಿದ ರಕ್ತವನ್ನು ಕಂಡ ಒಬ್ಬ ಮುಸ್ಲಿಮ್ ಮಹಿಳೆ `ಡೆಲ್ಲಿ ತನ್ನ ಪತ್ನಿತ್ವ ಬದಲಿಸುತ್ತಲೇ ಬಂದಿದ್ದಾಳೆ, ಹಾಗೆ ಬದಲಿಸುವಾಗೆಲ್ಲ ರಕ್ತ ಹರಿದೇ ಹರಿಯುತ್ತದೆ' ಎಂದಿದ್ದನ್ನು ಲೋಹಿಯಾ ಉಲ್ಲೇಖಿಸುತ್ತಾರೆ.

ಹಳೆಯ ದಿಲ್ಲಿ, ಡೆಲ್ಲಿ ಈಗ ನವದೆಹಲಿ. ಈ ದೆಹಲಿಯಲ್ಲಿ  ಅರಸರಿಲ್ಲ, ಅರಮನೆಗಳೂ ಇಲ್ಲ, ಈಗಿನ ದೆಹಲಿ ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ರಾಜಧಾನಿ. ಈ ಹೊಸ ಅವತಾರದ ಹೊರತಾಗಿಯೂ ದೆಹಲಿ ಅದೇ ಹಳೆಯ `ಅತ್ಯಾಚಾರಗಳ ನಗರ'ವಾಗಿಯೇ ಉಳಿದಿರುವುದು ಅಚ್ಚರಿ ಉಂಟು ಮಾಡುತ್ತಿದೆ. ದೆಹಲಿಯ ಮಟ್ಟಿಗೆ ಅತ್ಯಾಚಾರದ ಇತಿಹಾಸ ಮರುಕಳಿಸುತ್ತಿದೆ ಎಂದು ಹೇಳುವ ಹಾಗಿಲ್ಲ, ಮರುಕಳಿಸಲು ಇಲ್ಲಿ ಇತಿಹಾಸ ಬದಲಾಗಿಯೇ ಇಲ್ಲ, ಅದು ಮುಂದುವರಿಯುತ್ತಾ ಬಂದಿದೆ.

  ದೆಹಲಿಯ ಬಹಳ ದೊಡ್ಡ ಸಮಸ್ಯೆಯೆಂದರೆ  ದೇಶದ ಮಹಾನಗರಗಳಿಗೆಲ್ಲ ಇರುವ ಒಂದು ಐಡೆಂಟಿಟಿ ದೆಹಲಿಗೆ ಇಲ್ಲ. ಕರ್ನಾಟಕ ಕನ್ನಡಿಗರದ್ದು, ಮುಂಬೈ ಮರಾಠಿಗರದ್ದು, ಕೊಲ್ಕತ್ತ ಬಂಗಾಳಿಗಳದ್ದು, ಚೆನ್ನೈ ತಮಿಳರದ್ದು, ದೆಹಲಿ ಯಾರದ್ದು?  ಮೂಲತಃ ಮುಸ್ಲಿಮ್‌ಬಾಹುಳ್ಯದ ಈ ನಗರವನ್ನು ನಂತರದ ದಿನಗಳಲ್ಲಿ ಪಂಜಾಬಿಗಳು ಆಕ್ರಮಿಸಿಕೊಂಡರೂ `ನಾವು ಇಲ್ಲಿನ ಮಣ್ಣಿನ ಮಕ್ಕಳು' ಎಂದು ಹೇಳುವವರು ಈಗಲೂ ಅಲ್ಲಿ ಯಾರೂ ಇಲ್ಲ. ಅಲ್ಲಿರುವ ಹೆಚ್ಚಿನವರು `ದಾಳಿಕೋರ'ರ ರೂಪದಲ್ಲಿಯೇ ಪ್ರವೇಶಿಸಿದವರು. ಈ `ದಾಳಿಕೋರ' ಮನಸ್ಸೇ ದೆಹಲಿಯನ್ನು ಅಸುರಕ್ಷಿತ ನಗರವನ್ನಾಗಿ ಮಾಡಿರುವುದು. 

ದೆಹಲಿಯಲ್ಲಿ ಅತ್ಯಂತ ಸುರಕ್ಷಿತವಾಗಿರುವವರು `ಗಣ್ಯರು ಮತ್ತು ಅತೀಗಣ್ಯರು' ಎಂಬ ಆವರಣದಲ್ಲಿರುವ ರಾಜಕಾರಣಿಗಳು ಮತ್ತು ಬ್ಯೂರೋಕ್ರಾಟ್‌ಗಳು. ಈ ಎರಡು ವರ್ಗವೇ ದೆಹಲಿಯನ್ನು ಆಳುತ್ತಿರುವುದು. ಇದರಿಂದಾಗಿ ದೆಹಲಿಯ ಪೊಲೀಸರೇ ಇರಲಿ ಇಲ್ಲವೇ ಕೆಳಹಂತದ ಸರ್ಕಾರಿ ಅಧಿಕಾರಿಗಳೇ ಇರಲಿ ಅವರಿಗೆಲ್ಲ ಅರ್ಥವಾಗುವುದು `ರಾಜಕೀಯದ ಭಾಷೆ' ಮಾತ್ರ. ಕಣ್ಣೆದುರು ಅಪರಾಧ ನಡೆಯುತ್ತಿದ್ದರೂ ಪೊಲೀಸರು ಸಮೀಪ ಹೋಗಲು ನೂರು ಬಾರಿ ಯೋಚನೆ ಮಾಡುತ್ತಾರೆ. 

ಅಕಸ್ಮಾತ್ ಅಪರಾಧದಲ್ಲಿ ತೊಡಗಿರುವವರು ಯಾವುದೋ ರಾಜಕಾರಣಿ ಇಲ್ಲವೇ ಅಧಿಕಾರಿಯ ಮಗನೋ,ಮಗಳೋ ಆಗಿದ್ದರೆ ತಮ್ಮ ಗತಿ ಏನು ಎಂದು ಅವರು ಯೋಚನೆ ಮಾಡುತ್ತಾರೆ. (ಖಂಡಿತ ನಂಬಿ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳನ್ನು ರಕ್ಷಿಸಲು ದೂರದಲ್ಲಿ ಕೂತಿರುವ ಯಾವುದೋ ರಾಜಕಾರಣಿ ಖಂಡಿತ ಪ್ರಯತ್ನಿಸುತ್ತಿದ್ದಾನೆ. ಈ ಬಗ್ಗೆ ಅನುಮಾನ ಬೇಡ).  ಗಣ್ಯರ ಪ್ರವೇಶಕ್ಕಾಗಿ ಇರುವ ಗುರುತುಪತ್ರವನ್ನೇ ನಕಲು ಮಾಡಿ ಭಯೋತ್ಪಾದಕರು ಸಂಸತ್ ಪ್ರವೇಶಿಸಲು ಸಾಧ್ಯವಾಗಿದ್ದು ಕೂಡಾ ಗಣ್ಯರ ಬಗ್ಗೆ ಪೊಲೀಸರಿಗೆ ಇರುವ ಭಯದಿಂದಾಗಿಯೇ.

ದೆಹಲಿ ಅಪರಾಧಗಳ ನಗರವಾಗಿ ಬೆಳೆಯಲು ಇನ್ನೂ ಆಳವಾದ ಕಾರಣಗಳಿವೆ. ದೆಹಲಿ ಎಂದರೆ ಶೀಲಾದೀಕ್ಷಿತ್ ಮುಖ್ಯಮಂತ್ರಿಯಾಗಿರುವ ರಾಜ್ಯ ಮಾತ್ರ ಅಲ್ಲ. ಈ ರಾಜ್ಯಕ್ಕಿಂತಲೂ ವಿಸ್ತಾರವಾದ `ರಾಷ್ಟ್ರೀಯ ರಾಜಧಾನಿ ಪ್ರದೇಶ' (ಎನ್‌ಸಿಆರ್) ಇದೆ. ಹರಿಯಾಣ, ಉತ್ತರಪ್ರದೇಶ, ರಾಜಸ್ತಾನ ಮತ್ತು ದೆಹಲಿ ರಾಜ್ಯಗಳು ಈ `ಎನ್‌ಸಿಆರ್' ವ್ಯಾಪ್ತಿಯಲ್ಲಿ ಬರುತ್ತದೆ. ದೆಹಲಿಯ ಪೂರ್ವಭಾಗದಲ್ಲಿ ನೊಯ್ಡಾ ಮತ್ತು ಗಾಜಿಯಾಬಾದ್, ದಕ್ಷಿಣದಲ್ಲಿ ಗುಡಗಾಂವ್ ಮತ್ತು ಉತ್ತರದಲ್ಲಿ ಚಂಡೀಗಢ ಇದೆ. ಈ ನಾಲ್ಕು ನಗರಗಳು ಕಳೆದೆರಡು ದಶಕಗಳಲ್ಲಿ ಊಹಿಸಲಾಗದಷ್ಟು ವೇಗವಾಗಿ ಬೆಳೆದಿದೆ. ನೊಯ್ಡಾ,ಗಾಜಿಯಾಬಾದ್, ಗೂಡ್‌ಗಾಂವ್‌ಗಳಲ್ಲಿ ಕೃಷಿ ಮಾಡಿಕೊಂಡು ಸಾಮಾನ್ಯ ರೈತರಂತೆ ಬದುಕುತ್ತಿದ್ದವರ ಬದುಕು `ಎನ್‌ಸಿಆರ್'ಗೆ ಸೇರಿಕೊಂಡ ನಂತರ ಗುರುತಿಸಲಾಗದಷ್ಟು ಬದಲಾಗಿದೆ.

ಭೂಮಿಗೆ ಸಿಕ್ಕ ಚಿನ್ನದ ಬೆಲೆ ಈ ರೈತರನ್ನು ರಾತ್ರಿ ಹಗಲಾಗುವುದರೊಳಗೆ ಲಕ್ಷಾಧಿಪತಿ-ಕೋಟ್ಯಧಿಪತಿಗಳನ್ನಾಗಿ ಮಾಡಿದೆ. ಈ ಕುಟುಂಬಗಳ ಹೊಸ ತಲೆಮಾರು ರೈತರಾಗಿ ಉಳಿದಿಲ್ಲ. ಕುಟುಂಬಕ್ಕೆ ಬಂದಿರುವ ದಿಡೀರ್ ಶ್ರಿಮಂತಿಕೆ ಹೊಸ ತಲೆಮಾರನ್ನು ಅಡ್ಡದಾರಿಗಳಲ್ಲಿ ಕೊಂಡೊಯ್ದಿದೆ. ಇವರಲ್ಲಿ ಕೆಲವರು ನೇರವಾಗಿ ರಾಜಕೀಯಕ್ಕೆ ಇಳಿದಿದ್ದಾರೆ, ಉಳಿದವರಲ್ಲಿ ಹೆಚ್ಚಿನವರು ಸುಲಭದ ಹಣವನ್ನು ಮೋಜು-ಮಸ್ತಿಯಲ್ಲಿ ಕಳೆಯುತ್ತಿದ್ದಾರೆ. ತಾವು ಮಾಡುತ್ತಿರುವ ಅಪರಾಧಗಳಿಗೆ ರಾಜಕೀಯ ರಕ್ಷಣೆ ಪಡೆಯಲು ರಾಜಕಾರಣಿಗಳ ಹಿಂಬಾಲಕರ ಪಡೆ ಸೇರಿಕೊಂಡಿದ್ದಾರೆ.

ಸಂಜೆಯಾಗುತ್ತಿದ್ದಂತೆಯೇ ಗೂಡ್‌ಗಾಂವ್, ಚಂಡೀಗಢ, ನೋಯ್ಡಾ, ಗಾಜಿಯಾಬಾದ್ ಕಡೆಗಳಿಂದ ಈ ಪುಂಡರ ಗುಂಪು ವಿಲಾಸಿ ಕಾರುಗಳಲ್ಲಿ ರಾಜಧಾನಿಗೆ ದಾಳಿ ಇಡುತ್ತದೆ, ಅಲ್ಲಿನ ಪಬ್-ಬಾರ್‌ಗಳಲ್ಲಿ, ಐಷಾರಾಮಿ ಹೊಟೇಲ್ ರೂಮ್‌ಗಳಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮರಳುತ್ತಾರೆ. ದೆಹಲಿ ಈಗಲೂ ದಾಳಿಕೋರರನ್ನು ಸೆಳೆಯುವ ಗುರಿ. ಜೆಸ್ಸಿಕಾಲಾಲ್ ಎಂಬ ಬಾರ್ ಅಟೆಂಡರ್‌ನಿಂದ ಹಿಡಿದು ನಿತೀಶ್ ಕಟಾರ ಎಂಬ ಪ್ರೇಮಿಯ ವರೆಗಿನ ಹತ್ಯೆ ಪ್ರಕರಣಗಳಲ್ಲಿ ಅಪರಾಧಿಗಳಾಗಿರುವವರು ಇದೇ ಗುಂಪಿಗೆ ಸೇರಿದವರು.

ಇವರಿಗಿಂತ ಕೆಳಹಂತದಲ್ಲಿರುವ ಇನ್ನೊಂದು ಪುಂಡರ ಗುಂಪಿದೆ.  ಖಾಸಗಿ `ಬ್ಲೂಲೈನ್' ಬಸ್‌ಗಳನ್ನು ಓಡಿಸುವವರು ಈ ಗುಂಪಿನಡಿ ಬರುತ್ತಾರೆ. ಕಳೆದ ತಿಂಗಳು ಪ್ಯಾರಾಮೆಡಿಕಲ್‌ವಿದ್ಯಾರ್ಥಿನಿಯನ್ನು ಬಲಿತೆಗೆದುಕೊಂಡದ್ದು ಇಂತಹದ್ದೇ ದುಷ್ಕರ್ಮಿಗಳ ಗುಂಪು.  ದೆಹಲಿಯಲ್ಲಿ ಸರ್ಕಾರಿ ಬಸ್‌ಗಳ ಜತೆಯಲ್ಲಿ ಖಾಸಗಿ ಬಸ್‌ಗಳಿಗೂ ಅವಕಾಶ ನೀಡಲಾಗಿದೆ.  ಅತ್ಯಾಧುನಿಕ ಮೆಟ್ರೋ ಜತೆ, ಜನ ಕೂರಲು ಅಸಹ್ಯ ಪಡುವಂತಹ ಖಾಸಗಿ `ಬ್ಲೂಲೈನ್' ಬಸ್‌ಗಳು ದೆಹಲಿಯಲ್ಲಿವೆ. ಹೆಚ್ಚಿನ ಬಸ್‌ಗಳಿಗೆ ರಾಜಕಾರಣಿಗಳು ಮಾಲೀಕರಾಗಿರುತ್ತಾರೆ. ಅವರಿಂದ ನಾಲ್ಕೈದು ಮಂದಿ ಯುವಕರು ಸೇರಿ ಬಸ್‌ಗಳನ್ನು ದಿನಬಾಡಿಗೆಗೆ ಓಡಿಸುತ್ತಾರೆ.

ಒಂದೊಂದು ಬಸ್‌ನಲ್ಲಿ ಡ್ರೈವರ್,ಕಂಡಕ್ಟರ್, ಕ್ಲೆನರ್ ಸೇರಿದಂತೆ ಕನಿಷ್ಠ ಮೂರರಿಂದ ಐದು ಮಂದಿ ಇರುತ್ತಾರೆ. ಇವರಲ್ಲಿ ಹೆಚ್ಚಿನವರು ರಾಜಸ್ತಾನ, ಉತ್ತರಪ್ರದೇಶ, ಚಂಡೀಗಡದ ಕಡೆಯಿಂದ ಬಂದವರು. ಮೇಲ್ನೋಟದಲ್ಲಿಯೇ ಕ್ರಿಮಿನಲ್‌ಗಳಂತೆ ಕಾಣಿಸುತ್ತಾರೆ. ಯಾವ ಬಸ್‌ಗೂ ನಿರ್ದಿಷ್ಠ ರೂಟ್‌ಗಳಾಗಲಿ, ವೇಳಾಪಟ್ಟಿಯಾಗಲಿ ಇಲ್ಲ. ಪ್ರಯಾಣಿಕರ ಜತೆ ಅಸಭ್ಯವರ್ತನೆಯಿಂದ ಹಿಡಿದು ಇವರು ಮಾಡುವ ಪುಂಡಾಟಿಕೆ ಅನುಭವಿಸಿದವರಿಗೇ ಗೊತ್ತು. ದೆಹಲಿಯಲ್ಲಿ ಎಂಟು ಗಂಟೆಗೆ ಲಿಕ್ಕರ್‌ಶಾಪ್‌ಗಳು ಮುಚ್ಚುವುದರಿಂದ ಸಂಜೆಯಾಗುತ್ತಿದ್ದಂತೆಯೇ ಇವರು ಸಾರಾಯಿ ಬಾಟಲಿಗಳನ್ನು ತಂದು ಕೂಡಿಡುತ್ತಾರೆ. ಬಸ್ ಓಡಿಸುತ್ತಲೇ ಬಾಟಲಿಗೆ  ಬಾಯಿ ಹಾಕುವವರು ಇದ್ದಾರೆ. (ಒಂಬತ್ತು ವರ್ಷಗಳ ಕಾಲ ದೆಹಲಿಯ ಇಂತಹ ಬಸ್‌ಗಳಲ್ಲಿ ಸಂಚಾರಮಾಡಿದ ನನ್ನ ಅನುಭವ ಇದು.)

ಬಸ್ ಮಾಲೀಕರಿಗೆ ಪೊಲೀಸರ ಜತೆ ಸಂಬಂಧ ಇರುವುದರಿಂದ ಸಂಚಾರದ ನಿಯಮಗಳ ಉಲ್ಲಂಘನೆಯೂ ಸೇರಿದಂತೆ ಯಾವ ಅಪರಾಧಕ್ಕೂ ಶಿಕ್ಷೆಯಾಗುವುದಿಲ್ಲ. ಈ ಬಸ್‌ಗಳು ನಡೆಸಿದ ಅಪಘಾತದಲ್ಲಿ ಪ್ರತಿವರ್ಷ ನೂರಾರು ಮಂದಿ ಪ್ರಾಣಕಳೆದುಕೊಳ್ಳುತ್ತಾರೆ. ಇಂತಹದ್ದೊಂದು ಅಪಾಯಕಾರಿ ಮತ್ತು ಅಷ್ಟೇ ಅಸಹ್ಯಕರವಾದ ಸಂಚಾರ ವ್ಯವಸ್ಥೆಯನ್ನು ದೇಶದ ರಾಜಧಾನಿಯ ಜನ ಹೇಗೆ ಸಹಿಸಿಕೊಂಡು ಬಂದಿದ್ದಾರೆ ಎನ್ನುವುದೇ ಅಶ್ಚರ್ಯಕರ. ಮೊನ್ನೆ ಪ್ರತಿಭಟನೆ ನಡೆಸುತ್ತಿದ್ದ ಜನ ಕನಿಷ್ಠ ನಾಲ್ಕೈದು `ಬ್ಲೂಲೈನ್' ಬಸ್‌ಗಳಿಗಾದರೂ ಬೆಂಕಿ ಹಚ್ಚಬಹುದೆಂದು ನಾನು ನಿರೀಕ್ಷಿಸಿದ್ದೆ. ಆ ಬರ್ಬರ ಘಟನೆಯ ನಂತರವೂ ಯಾರೊಬ್ಬರೂ ಖಾಸಗಿ ಬಸ್‌ಗಳ ಪುಂಡಾಟಿಕೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತಿಲ್ಲ.

 ದೇಶದ ರಾಜಧಾನಿಯ ಕುಖ್ಯಾತಿಯನ್ನು ಸಾಬೀತುಪಡಿಸಲು ಇಷ್ಟೆಲ್ಲ ಇತಿಹಾಸ, ಹಳೆಯ ಪ್ರಕರಣಗಳ ಪಟ್ಟಿ ಇಲ್ಲವೇ ಪೊಲೀಸ್ ದಾಖಲೆಗಳ ನೆರವು ಬೇಕಾಗಿಲ್ಲ. ಅಲ್ಲಿನ ಗಾಳಿಯಲ್ಲಿಯೇ ತಣ್ಣಗೆ ಕೊರೆಯುವ ಅಸುರಕ್ಷತೆಯ ಭಾವ ಇದೆ. ಹೊರರಾಜ್ಯಗಳಿಂದ ಹೋಗುವ ಸಾಮಾನ್ಯ ಜನರಿಗೆ ಅಲ್ಲಿ ಕಾಲಿಟ್ಟ ಕ್ಷಣವೇ ಇದರ ಅನುಭವವಾಗುತ್ತದೆ. ಯಾವುದೋ ರಾಜಕಾರಣಿ ಇಲ್ಲವೇ ಅಧಿಕಾರಿಯ `ಕೇರಾಫ್' ಇಲ್ಲದೆ ಹೋದರೆ ಅಲ್ಲಿ ಗಟ್ಟಿಯಾಗಿ ಉಸಿರಾಡುವುದೂ ಕಷ್ಟ.

ಅನುಭವಗಳು ಭಿನ್ನವಾಗಿರಬಹುದು, ಆದರೆ ಮುಂಬೈ, ಬೆಂಗಳೂರು, ಕೊಲ್ಕತ್ತ ಇಲ್ಲವೇ ಚೆನ್ನೈ ಮಹಾನಗರಗಳಲ್ಲಿ ಅಪರಿಚಿತರಾಗಿ ಅಡ್ಡಾಡುವಾಗ ಇಂತಹ ಅಸುರಕ್ಷತೆ ಕಾಡುವುದಿಲ್ಲ. ದೆಹಲಿ ಎನ್ನುವ ಸಮಸ್ಯೆಗೆ ಸುಲಭದ ಪರಿಹಾರ ಇಲ್ಲ. ಬಹುಶಃ ಮಹಮ್ಮದ್ ಬಿನ್ ತುಘಲಕ್ ರಾಜಧಾನಿಯನ್ನು ಸ್ಥಳಾಂತರಿಸಲು ನಡೆಸಿದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದರೆ...ದೆಹಲಿ ಈಗಿನಂತೆ ಇರುತ್ತಿರಲಿಲ್ಲವೇನೋ?

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT