ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ವಿದ್ಯಾರ್ಥಿನಿ ಸಾವಿನ ಸುತ್ತ...

Last Updated 7 ಜನವರಿ 2013, 19:59 IST
ಅಕ್ಷರ ಗಾತ್ರ

ದೆಹಲಿ ವಿದ್ಯಾರ್ಥಿನಿಯ ಸಾವು  -ಈ ಹೊತ್ತು ದೇಶದಾದ್ಯಂತ ಚರ್ಚೆಯಾಗುತ್ತಿದೆ. ಕಳೆದ ವರ್ಷದ ಡಿಸೆಂಬರ್ 16ರಂದು ಆರು ಮಂದಿ ಹೃದಯಹೀನ ಪುರುಷರ ಕೈಗೆ ಸಿಲುಕಿ ಊಹಿಸಲಸಾಧ್ಯವಾದ ರೀತಿಯಲ್ಲಿ ಅತ್ಯಾಚಾರಕ್ಕೆ ಒಳಗಾದ ನಂತರವೂ ಜೀವನ್ಮರಣಗಳ ನಡುವೆ ಸೆಣಸಿ ದೇಹ ಜರ್ಜರಿತ ವಾದರೂ ಮನೋಸ್ಥೈರ್ಯವನ್ನು ಕಳೆದುಕೊಳ್ಳದೆ, ಹದಿನಾಲ್ಕು ದಿನಗಳ ಕಾಲ ಮೃತ್ಯುವನ್ನೇ ದಿಟ್ಟವಾಗಿ ಎದುರಿಸಿದ ಯುವತಿಯ ಪರವಾಗಿ ದೇಶ ಅಭಿಮಾನ ಪ್ರದರ್ಶಿಸಿತು. ಆಕೆ ಎದುರಿಸಿದ ಸ್ಥಿತಿ ಮಾತ್ರ ಬೊಟ್ಟು ಮಾಡಿ ತೋರಿಸುತ್ತಿರುವುದು ಈ ದೇಶದಲ್ಲಿ ಹೆಣ್ಣು ಮಕ್ಕಳು ಎಷ್ಟು ಭಯಭೀತವಾದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು.

ದೆಹಲಿ ವಿದ್ಯಾರ್ಥಿನಿಯ ಬದುಕನ್ನೇ ಚಿವುಟಿಹಾಕಿದ ಆ ದೌರ್ಜನ್ಯವನ್ನೆಸಗಿದ ದುರುಳರಿಗೆ ನೀಡಬೇಕಾದ ಶಿಕ್ಷೆಯನ್ನು ಕುರಿತು ದೇಶದೆಲ್ಲೆಡೆಯಿಂದ ನಾನಾ ಬಗೆಯ ಸಲಹೆಗಳು ಬರುತ್ತಿವೆ. ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸುವುದರಿಂದ ಹಿಡಿದು ಅವರ ಪುರುಷತ್ವ ಹರಣ ಮಾಡುವವರೆಗೆ ಕ್ರೌರ್ಯವನ್ನೊಳಗೊಂಡ ಶಿಕ್ಷೆಯನ್ನು ನೀಡಬೇಕು ಎಂಬುದು ಬಹು ಜನರ ಅಭಿಮತ.

ಅಮಾಯಕ ಹೆಣ್ಣೊಬ್ಬಳ ದೇಹದ ಮೇಲೆ ಆಕ್ರಮಣ ಮಾಡಿದ್ದೇ ಅಲ್ಲದೆ ಆಕೆಯ ಜೀವಹರಣವನ್ನೂ ಮಾಡಿದ ಪರಮ ಕ್ರೂರಿಗಳಿಗೆ ತಕ್ಕ ಶಾಸ್ತಿಯಾಗಬೇಕಾದರೆ ಅವರಿಗೆ ನೀಡುವ ಶಿಕ್ಷೆಯ ತೀವ್ರತೆ ಕೂಡ ಅಷ್ಟೇ ಪ್ರಮಾಣದ್ದಾಗಿರಬೇಕು ಎಂಬುದು ದೇಶದ ಮನಃಸ್ಥಿತಿ. `ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು' ಎಂಬ ಬ್ಯಾಬಿಲಾನ್ ದೊರೆ ಹಮ್ಮೂರಬಿಯ ಶಿಕ್ಷಾ ಸಿದ್ದಾಂತ ಪ್ರತಿಪಾದಿಸಿದ ತತ್ವಕ್ಕೆ ನಮ್ಮ ಸಮಾಜ ಮರಳಿ ಹೋಗುವುದರಿಂದ ಅತ್ಯಾಚಾರಕ್ಕೆ ತಕ್ಕ ಉತ್ತರವನ್ನು ನೀಡಿದಂತಾಗುತ್ತದೆ ಎಂಬ ಭಾವನೆಗೆ ವ್ಯಾಪಕ ಬೆಂಬಲ ದೊರೆಯುತ್ತಿರುವಂತಿದೆ.

ದಿನಗಳುರುಳಿದಂತೆ ದೆಹಲಿ ವಿದ್ಯಾರ್ಥಿನಿ ಸಾವು ನಿಧಾನವಾಗಿ ದೇಶದ ಮನಸ್ಸಿನಾಳಕ್ಕೆ ಇಳಿಯುತ್ತಿದೆ. ಈ ಹಿಂದೆ ನಡೆದು ಹೋದ ಕೆಲ ಹಿಂಸಾಕೃತ್ಯಗಳು ಸಾರ್ವಜನಿಕ ಆಕ್ರೋಶಕ್ಕೆ ಆಹಾರವಾಗಿ ಪ್ರತಿಭಟನೆಗಳಿಗೆ ಕಾರಣವಾಗಿದ್ದರೂ ಯಾವುದೇ ಹೋರಾಟ ಒಂದು ರಾಷ್ಟ್ರವ್ಯಾಪಿ ಚಳವಳಿಯ ಸ್ವರೂಪವನ್ನು ತಾಳಿರಲಿಲ್ಲ. ಅಷ್ಟೇ ಅಲ್ಲ, ಇಷ್ಟೊಂದು ಸುಸ್ಥಿರತೆಯೂ ಅವುಗಳಿಗಿರಲಿಲ್ಲ.

ದೆಹಲಿ ವಿದ್ಯಾರ್ಥಿನಿಗಾದ ಅನ್ಯಾಯದ ವಿರುದ್ಧ ಪ್ರಾರಂಭವಾದ ಹೋರಾಟದ ಕಿಡಿ ಒಂದು ಜ್ವಾಲೆಯಾಗಿ ಪರಿವರ್ತಿತವಾಗಿರುವುದು ಇಂದಿಗೂ ಜ್ವಲಂತವಾಗಿರುವುದು ಈ ಬಾರಿ ನಾವು ಕಾಣುತ್ತಿರುವ ಒಂದು ಆಶಾದಾಯಕ ಬೆಳವಣಿಗೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಎಲ್ಲೋ ಒಂದೆಡೆ ಈ ಘಟನೆಗೆ ವ್ಯಕ್ತವಾಗುತ್ತಿರುವ ಅನೇಕ ಪ್ರತಿಕ್ರಿಯೆಗಳು ಭಾವಾವೇಶದಿಂದ ಕೂಡಿದ್ದು, ಅವುಗಳಿಂದ ಈ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆ ಗಂಭೀರವಾದ ಚಿಂತನೆಯಾಗುತ್ತಿದೆಯೇ ಎನ್ನುವ ಪ್ರಶ್ನೆ ಏಳುತ್ತದೆ.

ಶಿಕ್ಷೆಯ ಮೂಲಕ ಅಪರಾಧಿಗೆ ತಕ್ಕ ಪಾಠ ಕಲಿಸುವುದು ಎಷ್ಟು ಮುಖ್ಯವೋ, ಭವಿಷ್ಯದಲ್ಲಿ ಈ ಕೃತ್ಯಗಳು ಮರುಕಳಿಸದಂತೆ ತಡೆಗಟ್ಟುವುದೂ ಅಷ್ಟೇ ಮುಖ್ಯ. ಒಂದು ಸಮಾಜದಲ್ಲಿ ಗಲ್ಲು ಶಿಕ್ಷೆಯಿಂದಾಗಲಿ ಪುರುಷತ್ವ ಹರಣದಿಂದಾಗಲಿ ಅತ್ಯಾಚಾರವನ್ನು ತಡೆಗಟ್ಟುವುದು ಸಾಧ್ಯವೇ? ಹಾಗಾಗಿರುವಂಥ ಎಷ್ಟು ಪ್ರಕರಣಗಳು ನಮ್ಮ ಮುಂದಿವೆ? ಈಗ ಮರಣದಂಡನೆಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ.

ಸುಮಾರು ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಅತ್ಯಾಚಾರ ಮತ್ತು ಕೊಲೆಗಾಗಿ ಧನಂಜಯ್ ಚಟರ್ಜಿ ಎಂಬಾತನಿಗೆ ಮರಣದಂಡನೆಯನ್ನು ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕೋಲ್ಕತ್ತಾದ ಬಹುಮಹಡಿ ಕಟ್ಟಡದಲ್ಲಿದ್ದ ಆಕೆ ವಾಸವಾಗಿದ್ದ ಮನೆಯಲ್ಲಿಯೇ 14 ವರ್ಷದ ಬಾಲೆಯ ಮೇಲೆ ಅತ್ಯಾಚಾರ ಮಾಡಿ, ಅವಳನ್ನು ಕೊಲೆ ಮಾಡಿದ ಈತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಇದರಿಂದ ಅತ್ಯಾಚಾರ ಪ್ರಕರಣಗಳಿಗೆ ತಡೆಯುಂಟಾಯ್ತೇ?

ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿವೆ. ಗೃಹ ಮಂತ್ರಾಲಯ 2011ರಲ್ಲಿ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಆ ವರ್ಷವೊಂದರಲ್ಲೇ ದೇಶದಲ್ಲಿ 23,582 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು. ಆದರೆ ವರದಿಯಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ಶೇಕಡ 25ರಷ್ಟಕ್ಕೆ ಮತ್ತು ಶೇಕಡ 75ರಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಖುಲಾಸೆಯಾಗುತ್ತದೆ ಎಂದು ಕೂಡ ಒಂದು ವರದಿ ತಿಳಿಸಿದೆ.

ಪ್ರತಿ 55 ನಿಮಿಷಗಳಿಗೊಮ್ಮೆ ಅತ್ಯಾಚಾರವಾಗುತ್ತೆ ಎಂದು ಒಂದು ವರದಿ ತಿಳಿಸಿದರೆ, ಮತ್ತೊಂದು ಪ್ರತಿ 20 ನಿಮಿಷಗಳಿಗೊಮ್ಮೆ ಹೆಣ್ಣೊಬ್ಬಳು ಅತ್ಯಾಚಾರಕ್ಕೆ ಬಲಿಯಾಗುತ್ತಾಳೆ ಎನ್ನುತ್ತದೆ. ಈ ಅಂಕಿ - ಅಂಶಗಳು ನಮ್ಮನ್ನು ಗಲಿಬಿಲಿಗೊಳಿಸುತ್ತವೆ, ಗಾಬರಿ ಹುಟ್ಟಿಸುತ್ತವೆ. ಇಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ಲೆಕ್ಕಾಚಾರಕ್ಕೆ ಇಳಿಯುವುದಕ್ಕಿಂತ ಎಲ್ಲ ವರದಿಗಳೂ ಒಪ್ಪಿಕೊಳ್ಳುತ್ತಿರುವ ಒಂದು ಸತ್ಯವಿದೆ.   ಅದು ಅತ್ಯಾಚಾರ ಪ್ರಕರಣಗಳಲ್ಲಿ ಉಂಟಾಗುತ್ತಿರುವ ಹೆಚ್ಚಳ. ಈ ಬಗ್ಗೆ ನಮ್ಮ ಗಮನ ಹರಿಯಬೇಕು.

ಸುಮಾರು ಒಂದು ದಶಕದಿಂದ ಮನೆಯ ಒಳಗೆ ಮತ್ತು ಹೊರಗೆ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆ ಎಚ್ಚರಿಕೆಯ ಕರೆಗಂಟೆಗಳು ಬಾರಿಸುತ್ತಲೇ ಇವೆ. ಆದರೆ ಬಹುತೇಕ ವ್ಯವಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ, ಹೆಣ್ಣಿನ ಮೇಲೆ ಅತ್ಯಾಚಾರ ನಡೆದ ನಂತರ ಎಚ್ಚೆತ್ತುಕೊಂಡು ಆ ಘಟನೆಯನ್ನೇ ಕೆಲ ದಿನ ಮತ್ತೆಮತ್ತೆ ಬಿಂಬಿಸಿ, ನಂತರ ನೇಪಥ್ಯಕ್ಕೆ ಆ ಘಟನೆ ಸರಿದಿರುವಂಥ ಸಂದರ್ಭಗಳೇ ಹೆಚ್ಚು. ಸಾರ್ವಜನಿಕ ಮನಃಪಟಲದಿಂದ ಇಂಥ ಘಟನೆಗಳು ದೂರವಾಗಿ ಸಮಾಜ ನಿದ್ರಾವಸ್ಥೆಗೆ ಜಾರಿದಾಗ ಮತ್ತೊಂದು ಆಘಾತ ನಮಗೆ ಕಾದಿರುತ್ತದೆ. ದೆಹಲಿ ವಿದ್ಯಾರ್ಥಿನಿಯ ವಿಚಾರದಲ್ಲಾದದ್ದೂ ಹಾಗೆ.

ದೆಹಲಿಯಲ್ಲಿ, ಖಾಸಗಿ ಬಸ್ಸುಗಳು ರಾತ್ರಿ ವೇಳೆ ಸಾರ್ವಜನಿಕ ಬಸ್ಸುಗಳ ರೀತಿಯಲ್ಲಿ ರಸ್ತೆಗಳಲ್ಲಿ ಸಂಚರಿಸಿ ಜನರನ್ನು ಮೋಸಗೊಳಿಸುತ್ತಿರುವ ವಿಚಾರ ಅಧಿಕಾರಿಗಳಿಗೆ ತಿಳಿದಿರಲಿಲ್ಲವೇ? ಪ್ರಾಯಶಃ ದೆಹಲಿ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಒಳಗಾಗದಿದ್ದರೆ ಈ ಅನ್ಯಾಯ ಹೀಗೆಯೇ ಮುಂದುವರೆಯುತ್ತಿತ್ತೇನೋ? ದೆಹಲಿಯ ಆಡಳಿತ ವ್ಯವಸ್ಥೆ ಮೊದಲೇ ಎಚ್ಚೆತ್ತಿದ್ದರೆ ಆ ಹೆಣ್ಣುಮಗಳು ತನ್ನ ಪ್ರಾಣವನ್ನು ತೆರಬೇಕಾಗಿರಲಿಲ್ಲ. ಘಟನೆ ನಡೆದು ಹೋಗಿ ಈಗ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಜನ ಕೂಗು ಹಾಕುತ್ತಿರುವುದನ್ನು ನೋಡಿದರೆ ನಮ್ಮ ಇಡೀ ವ್ಯವಸ್ಥೆಯನ್ನು ಕುರಿತಂತೆ ತೀವ್ರ ಸ್ವರೂಪದ ಅನುಮಾನಗಳೇ ಮೂಡಿ ಬರುತ್ತವೆ.

ಅತ್ಯಾಚಾರ ಮತ್ತು ಕೊಲೆ - ಇವೆರಡೂ ಘೋರ ಅಪರಾಧಗಳು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ದೇಶದಲ್ಲಿ ಮರಣದಂಡನೆಯನ್ನು ವಿಧಿಸಬೇಕಾದರೆ ಆ ಅಪರಾಧವನ್ನು  ಅಸಾಮಾನ್ಯವಾದ ಪ್ರಕರಣಗಳಲ್ಲಿ ಅಸಾಮಾನ್ಯವಾದುದು (rarest of rare) ಎಂದು ಪರಿಗಣಿಸಲಾಗುತ್ತದೆ. ದೆಹಲಿ ವಿದ್ಯಾರ್ಥಿನಿ ಪ್ರಕರಣವನ್ನೂ ಈ ವರ್ಗಕ್ಕೆ ಸೇರಿಸಿ, ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸಬೇಕೆಂಬುದು ಅನೇಕರ ವಾದ. ಅತ್ಯಾಚಾರ ಅತ್ಯಾಚಾರವೇ, ಕೊಲೆ ಕೊಲೆಯೇ. ಪ್ರತಿ ಹೆಣ್ಣಿಗೂ ಆಕೆ ಒಳಗಾಗುವ ಬಲತ್ಕಾರ ಆಘಾತಕಾರಿಯಾದ ಸನ್ನಿವೇಶವೇ. ಮೇಲಾಗಿ ಯಾವುದು  ಅಸಾಮಾನ್ಯ  ಯಾವುದು  ಸಾಮಾನ್ಯ ಎಂದು ನಿರ್ಧರಿಸಲು ಇರುವ ಮಾನದಂಡಗಳಾವುವು?

ಪ್ರತಿ ಅತ್ಯಾಚಾರ ಅಥವಾ ಕೊಲೆ ಪ್ರಕರಣದಲ್ಲೂ ಅತ್ಯಾಚಾರಿಗೆ ಶಿಕ್ಷೆಯಾಗಬೇಕು ಎಂದು ನೊಂದವರಿಗೆ ಎನಿಸುತ್ತದೆಯಲ್ಲವೇ? ದೆಹಲಿಯ ಪ್ರಕರಣ ನಡೆದ ನಂತರ, ಮೂರು ವರ್ಷಗಳ ಹಿಂದೆ ಆಕೆ ಕೆಲಸ ಮಾಡುತ್ತಿದ್ದ ಕಂಪೆನಿಯ ಕಾರಿನ ಚಾಲಕ ಮತ್ತು ಆತನ ಮೂರು ಸಹಚರರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ನಯನಾಳ ಪತಿ ಪುಣೆಯಲ್ಲಿ ಪ್ರತಿಭಟನೆಗೆ ಇಳಿದಿರುವುದನ್ನು ನೋಡಿದರೆ ತಿಳಿಯುತ್ತದೆ ನೊಂದವರ ಅಳಲು. ತನ್ನ ಪತ್ನಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ವಾಹನ ಚಾಲಕನನ್ನಾಗಲಿ, ಆತನ ಸಹಚರರನ್ನಾಗಲಿ ಶಿಕ್ಷಿಸುವ ಮಾತು ಹಾಗಿರಲಿ, ಅವರ ಪತ್ತೆಯನ್ನೂ ಪೊಲೀಸರು ಹಚ್ಚಿಲ್ಲ ಎಂಬುದು ನಯನಾಳ ಪತಿಯ ಆಕ್ರೋಶಕ್ಕೆ ಕಾರಣವಾಗಿರುವಂಥ ವಿಚಾರ.

ಮೊನ್ನೆಮೊನ್ನೆಯಷ್ಟೇ ಇದೇ ಪುಣೆಯಲ್ಲಿ 65 ವರ್ಷದ ಮಹಿಳೆಯೊಬ್ಬರನ್ನು ಕೊಲೆ ಮಾಡಿ, ಆಕೆಯ 25 ವರ್ಷದ ಗರ್ಭಿಣಿ ಸೊಸೆಯ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಯ ಶಿಕ್ಷೆಯನ್ನು ಮರಣ ದಂಡನೆಯಿಂದ ಜೀವಾವಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ಪರಿವರ್ತಿಸಿತು. ಈ ತೀರ್ಪನ್ನು ಪ್ರಶ್ನಿಸಿರುವ ಮೃತ ಮಹಿಳೆಯ ಸೋದರಳಿಯ, ಅಪರಾಧಿ ತನ್ನ ಅತ್ತೆಯನ್ನು 21 ಬಾರಿ ಇರಿದು ತನ್ನ ಗರ್ಭಿಣಿ ಪತ್ನಿಯ ಮೇಲೆ ಅತ್ಯಾಚಾರವನ್ನು ಮಾಡಿದ್ದರೂ ಈ ಪ್ರಕರಣವನ್ನು `ಅಸಾಮಾನ್ಯವಲ್ಲ' ಎಂದು ನ್ಯಾಯಾಲಯ ಹೇಗೆ ಪರಿಗಣಿಸಿತು ಎಂದು ಕೇಳಿದ್ದಾರೆ. ಅಸಾಮಾನ್ಯ ಪ್ರಕರಣವೆಂದರೇನು ಎಂದು ಆತ ಎತ್ತಿರುವ ಪ್ರಶ್ನೆ ಎಲ್ಲ ಲೈಂಗಿಕ ದುರಾಚಾರದ ಪ್ರಕರಣಗಳಿಗೂ ಅನ್ವಯಿಸುತ್ತದೆಯಲ್ಲವೇ?

ದೆಹಲಿ ವಿದ್ಯಾರ್ಥಿನಿಯ ಸಾವಿಗೆ ಕಾರಣರಾದ ಅತ್ಯಾಚಾರಿಗಳಿಗೆ ಪುರುಷತ್ವ ಹರಣವೇ ಸರಿಯಾದ ಶಿಕ್ಷೆ ಎನ್ನುವುದು ಮತ್ತೊಂದು ವಾದ. ಪುರುಷನ ಕಾಮ ಪಿಪಾಸೆಯನ್ನು ಹತ್ತಿಕ್ಕಲು ರಾಸಾಯನಿಕ ವೀರ್ಯಗುಂದಿಸುವಿಕೆಯಂಥ ಶಿಕ್ಷೆಯನ್ನು ನೀಡಿದರೆ ಜೀವನವಿಡೀ ಈ ಅತ್ಯಾಚಾರಿಗಳಿಗೆ ತಾವು ಮಾಡಿದ ಗುರುತರ ಅಪರಾಧದ ಪ್ರಜ್ಞೆ ಕಾಡುತ್ತಿರುತ್ತದೆ ಎಂಬುದು ಈ ಶಿಕ್ಷಾ ವಿಧಾನದ ಪ್ರತಿಪಾದಕರ ವಾದ.

ಆದರೆ ಈ ಶಿಕ್ಷೆಯ ಪರಿಣಾಮವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಕೆಲ ವೈದ್ಯರು ಇದು ಶಸ್ತ್ರಚಿಕಿತ್ಸೆಯ ಮೂಲಕ ವೃಷಣವನ್ನು ತೆಗೆದು ಹಾಕುವಂತಹ ವಿಧಾನದಂತಲ್ಲ. ಔಷಧವನ್ನು ನೀಡುವುದರ ಮೂಲಕ ಸಂಭವಿಸುವ ರಾಸಾಯನಿಕ ವೀರ್ಯಗುಂದಿಸುವಿಕೆಯ ಪರಿಣಾಮ ತಾತ್ಕಾಲಿಕವಾಗುವ ಸಾಧ್ಯತೆಯೇ  ಹೆಚ್ಚು ಎಂದಿದ್ದಾರೆ. ಈ ವಿಧಾನ ಕೇವಲ ಕಾಮ ತೃಷೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ವ್ಯಕ್ತಿಗೆ ತಾತ್ಕಾಲಿಕ ಮಾನಸಿಕ ಹಿಂಸೆ ಉಂಟಾಗುತ್ತದೆಯೇ ಹೊರತು, ಇದರಲ್ಲಿ ಅತ್ಯಾಚಾರಿಯ ಬದುಕಿಗಾಗಲಿ, ಭವಿಷ್ಯಕ್ಕಾಗಲಿ ಅಪಾಯವಿಲ್ಲ. ಇಂತಹ ಶಿಕ್ಷೆಯಿಂದ ಅಪರಾಧಿಗಳಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ಅದರ ಪ್ರತಿಪಾದಕರು ಏಕೆ ವಾದಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ.

ದೇಶದೆಲ್ಲೆಡೆ ಎದ್ದಿರುವ ಆಕ್ರೋಶವನ್ನು ತಣ್ಣಗೆ ಮಾಡಲು ದೆಹಲಿ ವಿದ್ಯಾರ್ಥಿನಿಯ ಬದುಕು ಮತ್ತು ಭವಿಷ್ಯಗಳೆರಡನ್ನೂ ನಾಶಪಡಿಸಿದ ಅತ್ಯಾಚಾರಿಗಳಿಗೆ ಮರಣದಂಡನೆ ಅಥವಾ ಪುರುಷತ್ವ ಹರಣದಂಥ ಶಿಕ್ಷೆಗಳನ್ನು ನೀಡಿಬಿಡುವುದರಿಂದ ಲೈಂಗಿಕ ಅಪರಾಧಗಳ ಸಂಖ್ಯೆ ತಕ್ಷಣ ಇಳಿದು ಹೋಗುವುದಿಲ್ಲ. ಹೆಣ್ಣು ಮಕ್ಕಳಿಗೆ ಸುರಕ್ಷಿತವಾದ ಬದುಕನ್ನು ನಡೆಸಲು ಪೂರಕವಾದ ವಾತಾವರಣವನ್ನು  ಸೃಷ್ಟಿಸಲು ಜವಾಬ್ದಾರಿಯನ್ನು ಹೊತ್ತಿರುವ ಒಂದು ಇಡೀ ವ್ಯವಸ್ಥೆಯೇ ನಮ್ಮಲ್ಲಿದ್ದು, ಅದು ಕಾರ್ಯೋನ್ಮುಖವಾಗುವಂತೆ ನಡೆಸಿಕೊಂಡು ಹೋಗುವುದು ಮೊದಲಾಗಬೇಕಾದ ಕೆಲಸ. ಈಗ ಸದ್ಯಕ್ಕೆ ನಡೆಯುತ್ತಿರುವುದು ಪರಸ್ಪರ ದೋಷಾರೋಪಣೆಯಷ್ಟೆ. ಇದು ನಮಗೆ ಹೊಸದೇನಲ್ಲ. ಹೊಸ ಕಾಯಿದೆಗಳ ಮಾತಿರಲಿ, ಹಾಲಿ ಅಸ್ತಿತ್ವದಲ್ಲಿರುವ ಕಾಯಿದೆಗಳನ್ನು ಬಿಗಿಯಾಗಿ ಅನುಷ್ಠಾನಗೊಳಿಸಿದರೆ ಎಷ್ಟೋ ಅಪರಾಧಗಳನ್ನು ತಡೆಗಟ್ಟಬಹುದು.

ದೆಹಲಿಯ ಪ್ರಕರಣವಾಗಲಿ, ಇನ್ನಿತರ ಮಹಿಳಾ ವಿರೋಧಿ ದೌರ್ಜನ್ಯಗಳಾಗಲಿ ಅವುಗಳಿಗೆ ಸಕಾಲಿಕ ಸ್ಪಂದನ ಸಾರ್ವಜನಿಕರಿಂದ ದೊರೆಯುವುದು ಕೂಡ ಅಪರಾಧಗಳನ್ನು ತಡೆಗಟ್ಟುವಲ್ಲಿ ಬಹು ಮುಖ್ಯ. ದೆಹಲಿ ವಿದ್ಯಾರ್ಥಿನಿಯ ಸ್ನೇಹಿತ ತಾವು ಅನುಭವಿಸಿದ ಯಾತನೆ ಹಾಗೂ ಎದುರಿಸಿದ ಸಾರ್ವಜನಿಕ ನಿರ್ಲಕ್ಷ್ಯದ ಬಗ್ಗೆ ಮಾಧ್ಯಮದೊಡನೆ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾಗ, ಆಕೆಗೆ ಸಹಾಯಹಸ್ತ ಚಾಚಲು ತಯಾರಿಲ್ಲದ ನಾಗರಿಕರೆನಿಸಿಕೊಂಡವರ ಅಸೂಕ್ಷ್ಮತೆಯ ಬಗ್ಗೆ ನಮಗೆ ಸಿಟ್ಟು ಬರಲಿಲ್ಲವೇಕೆ? ಅವರನ್ನು ನಾವು ಹೊಣೆ ಮಾಡಲು ಸಾಧ್ಯವೇ? ಹಾಗಾದರೆ ಇಂಥ ಪ್ರಕರಣಗಳಲ್ಲಿ ನಾಗರಿಕ ಸಮಾಜದ ಜವಾಬ್ದಾರಿಯಾದರೂ ಏನು? ಈ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?

ದೆಹಲಿ ವಿದ್ಯಾರ್ಥಿನಿಯ ಹೆಸರನ್ನು ಗೋಪ್ಯವನ್ನಾಗಿಡುವುದರಿಂದಾಗಲಿ, ಆಕೆಯ ಹೆಸರಿನಲ್ಲಿ ಆಸ್ಪತ್ರೆಗಳನ್ನು ತೆರೆಯುವುದರಿಂದಾಗಲಿ, ಆಕೆಯ ಕುಟುಂಬಕ್ಕೆ ಲಕ್ಷಾಂತರ ರೂಪಾಯಿಗಳ ಪರಿಹಾರವನ್ನು ನೀಡಿಬಿಡುವುದರಿಂದಾಗಲಿ, ಆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸವನ್ನು ನೀಡುವುದರಿಂದಾಗಲಿ ಅವಳಿಗಾದ ಅನ್ಯಾಯವನ್ನು ಸರಿಸಪಡಿಸಲು ಸಾಧ್ಯವಿಲ್ಲ.

ಬಾಳಿ ಬದುಕಬೇಕಾಗಿದ್ದ ಯುವ ಜೀವವೊಂದನ್ನು ಕಮರಿ ಹಾಕಿದ ಆ ಅಪರಾಧಿಗಳಿಗೆ ಆಜೀವ ಪರ್ಯಂತ ಬದುಕಿದ್ದೂ ಸತ್ತಂತಿರುವ ಶಿಕ್ಷೆಯನ್ನು ನೀಡಬೇಕಾದ್ದು ಮೊದಲಾಗಬೇಕಾದ ಕೆಲಸ. ಎರಡನೆಯದಾಗಿ, ಇದುವರೆಗೂ ತೀರ್ಮಾನವಾಗದೆ ನ್ಯಾಯಕ್ಕಾಗಿ ಕಾಯುತ್ತಿರುವ ಎಲ್ಲ ಅತ್ಯಾಚಾರ ಪ್ರಕರಣಗಳನ್ನೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂಥ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಕ್ಕಿಂತ ಮಿಗಿಲಾಗಿ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸಮಾಜವನ್ನು ಕಟ್ಟಿಕೊಡಲು ಸನ್ನದ್ಧರಾಗಿ ನಿಲ್ಲಲು ಈಗಲಾದರೂ ಎಲ್ಲ ವ್ಯವಸ್ಥೆಗಳೂ ಒಟ್ಟಿಗೆ ಕೈ ಜೋಡಿಸಬೇಕು.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT