ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಕ್ಯಾ ಉವ್ವ ಉವ್ವ ?

ಅಕ್ಷರ ಗಾತ್ರ

ಣಜಿಗೆ ಹೋಗಿ ಅಡ್ವಾಣಿ ಅವರ ಸಂದರ್ಶನ ಮಾಡಬೇಕು, ಅದು ನಮ್ಮ ಪತ್ರಿಕೆಗೆಂದೇ ಕೊಟ್ಟ ಎಕ್ಸ್‌ಕ್ಲೂಸಿವ್ ಸಂದರ್ಶನ ಆಗಿರಬೇಕು ಎಂದು ಸಂಪಾದಕರು ಆದೇಶ ಕೊಟ್ಟ ತಕ್ಷಣ ಪೆಕರ ಥ್ರಿಲ್ ಆದ.ಗೋವಾದಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯುತ್ತದೆ ಎನ್ನುವುದೇ ದೊಡ್ಡ ಸುದ್ದಿಯಾಗಿತ್ತು. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತಾರೆ ಎಂದೇ ಎಲ್ಲರೂ ಮೊದಲೇ ನಿರೀಕ್ಷಿಸಿದ್ದರು.

ಅಡ್ವಾಣಿ ಅವರನ್ನು ಒಂದೇ ಸಲಕ್ಕೆ ಪಕ್ಷದಿಂದ ದೂರ ಸರಿಸಲಾಗುತ್ತದೆ ಎನ್ನುವುದು ಎಲ್ಲರ ನಿರೀಕ್ಷೆ. ಹೀಗಾಗಿ ಪಣಜಿಗೆ ತೆರಳಿ ಅಡ್ವಾಣಿಯವರ ಬಿಸಿ ಬಿಸಿ ಸಂದರ್ಶನ ನಡೆಸಿದರೆ ಅದು ಭಾರೀ ಹೈಲೈಟ್ ಆಗುವುದು ಗ್ಯಾರಂಟಿ. ವರದಿಗಾರ ಫೇಮಸ್ ಆಗುವುದೂ ಹಂಡ್ರೆಡ್ ಪರ್ಸೆಂಟ್. ಪೆಕರ ಬ್ಯಾಗು ಎತ್ತಿಕೊಂಡ.

ಪಣಜಿಯಲ್ಲಿ ಪೆಕರನಿಗೆ ನಿರಾಸೆ ಕಾದಿತ್ತು. ಅಡ್ವಾಣಿ ಅಂಡ್ ಗ್ಯಾಂಗ್ ಗೈರು ಹಾಜರಾಗಿತ್ತು. ಎಲ್ಲರೂ ಅಂದುಕೊಂಡಂತೆ ಮೋದಿ ವ್ಯಕ್ತಿ ಪೂಜೆ ಸಾಗಿತ್ತು. ಸಂಪಾದಕರಿಗೆ ಫೋನ್ ಮಾಡಿದ ಪೆಕರ, `ವೆರಿ ಸಾರಿ ಸಾರ್, ಅಡ್ವಾಣಿ ಇಲ್ಲಿಗೆ ಬಂದಿಲ್ಲ, ಅವರ ಬದಲು ಮೋದಿ ಸಂದರ್ಶನ ಮಾಡಿಬಿಡ್ಲಾ ಸಾರ್‌” ಎಂದು ಪರ್ಮಿಷನ್ ಕೇಳಿದ.

`ನೋ, ಈಗ ಎಲ್ಲರೂ ಮೋದಿ ಭಜನೆಯನ್ನೇ ಮಾಡುತ್ತಿದ್ದಾರೆ. ನಾವೂ ಅದನ್ನೇ ಮಾಡಿದ್ರೆ ಬೇರೆಯವರಿಗೂ ನಮಗೂ ಏನ್ರೀ ವ್ಯತ್ಯಾಸ. ನಮ್ಮ ಪತ್ರಿಕೆ ಯಾವಾಗ್ಲೂ ಇತರರಿಗಿಂತ ಡಿಫರೆಂಟ್ ಆಗಿರಬೇಕು, ಎಲ್ರೂ ಮೋದಿ ಸಂದರ್ಶನ ಪ್ರಕಟಿಸುತ್ತಾರೆ, ನಾವು ಅಡ್ವಾಣಿ ಸಂದರ್ಶನ ಪ್ರಕಟಿಸಬೇಕು. ಆಗ್ಲೇ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ಸಿಗೋದು. ನನಗೆ ಅದೆಲ್ಲಾ ಗೊತ್ತಿಲ್ಲ. ನಾಳೆ ಪತ್ರಿಕೇಲಿ, ಅಡ್ವಾಣಿ ಸಂದರ್ಶನ ಇರಬೇಕು. ಅಷ್ಟೇ' ಎಂದು ಸಂಪಾದಕರು ಆದೇಶ ಹೊರಡಿಸಿದರು.

“ಅವರು ಊರಲ್ಲೇ ಇಲ್ವಲ್ಲಾ? ಹೇಗೆ ಸಂದರ್ಶಿಸೋದು ಸಾರ್?” ಎಂದು ಪೆಕರ, ಮತ್ತೆ ಪೆಕರು ಪೆಕರಾಗಿ ಪ್ರಶ್ನಿಸಿದ.`ರಿಪೋರ್ಟರ್ ಆಗಿ ಹೇಳೋ ಮಾತೇನ್ರಿ ಇದು? ನನಗೆ ಅದೆಲ್ಲಾ ಗೊತ್ತಿಲ್ಲ. ಅಡ್ವಾಣಿ ಅತಳ ವಿತಳ ಪಾತಾಳದಲ್ಲಿ ಅಡಗಿದ್ರೂ, ಹೋಗಿ ಕುಟುಕು ಕಾರ‌್ಯಾಚರಣೆನಾದ್ರೂ ಮಾಡಿ ಸಂದರ್ಶನ ತರಬೇಕು, ಇವತ್ತು ರಿಪೋರ್ಟರ್‌ಗಳು ವಿಮಾನದಲ್ಲಿ, ಹೆಲಿಕಾಪ್ಟರ್‌ನಲ್ಲಿ ಹಾರಾಡ್ತಾನೇ ಇಂಟರ್‌ವ್ಯೆ ಮಾಡ್ತಾರೆ, ಬ್ರೇಕ್‌ಫಾಸ್ಟ್‌ನಲ್ಲಿ ಜೊತೆಗೇ ಕೂತು ಇಂಟರ್‌ವ್ಯೆ ಮಾಡಿ ತರ‌್ತಾರೆ.

ಅಡ್ವಾಣಿ ಅಂದ್ರೆ ಯಾರು? ಪ್ರೈಮ್ ಮಿನಿಸ್ಟ್ರೂ ಅಲ್ಲ, ರಾಷ್ಟ್ರಪತಿನೂ ಅಲ್ಲ, ಅಂತಹವರು ಸಂದರ್ಶನಕ್ಕೆ ಸಿಗ್ಲಿಲ್ಲಾ ಅಂದ್ರೆ ಜನ ನಗಲ್ವಾ? ಹೋಗ್ರಿ ಎಲ್ಲಿದ್ದಾರೆ ಹುಡುಕಿ, ಸಂದರ್ಶನ ಮಾಡಿ ಇವತ್ತೇ ಕಳುಹಿಸಬೇಕು' ಎಂದು ಸಂಪಾದಕರು ತಾಕೀತು ಮಾಡಿ ಫೋನ್ ಕಟ್ ಮಾಡಿದರು.

ಪಣಜಿಗೆ ಬರುವಾಗ ಎಕ್ಸ್‌ಕ್ಲೂಸಿವ್ ರಿಪೋರ್ಟ್ ಮಾಡೇ ಮಾಡ್ತೀನಿ ಎಂದು ಉಬ್ಬಿಹೋಗಿದ್ದ ಪೆಕರ ಗಾಳಿ ಹೋದ ಬಲೂನಿನಂತಾಗಿದ್ದ.
ಪಣಜಿಗೆ ಬಂದಿಲ್ಲಾ ಅಂದ್ರೆ ಅಡ್ವಾಣಿ ದೆಹಲಿಯಲ್ಲೇ ಇರ‌್ತಾರೆ ಅಂತ ಅರ್ಥ. ಹುಟ್ಟಿದೂರು ಅಂತ ಕರಾಚಿಗೆ ಹೋಗಲಂತೂ ಸಾಧ್ಯವಿಲ್ಲ.
ದೇಶದ ಎಲ್ಲ ರಿಪೋರ್ಟರ್‌ಗಳೂ ಪಣಜಿಯಲ್ಲಿ ಕ್ಯಾಂಪ್ ಮಾಡಿದ್ದಾರೆ.

ನಾನೀಗ ದೆಹಲಿಗೆ ಹೋದರೆ ಅಡ್ವಾಣಿ ಒಬ್ಬರೇ ಇರ‌್ತಾರೆ. ನನಗೆ ಸಂದರ್ಶಿಸೋದು ಬಹಳ ಈಜಿ. ಪೆಕರನಿಗೆ ಮಿಂಚಿನಂತೆ ಐಡಿಯಾ ಹೊಳೆದದ್ದೇ ತಡ, ದೆಹಲಿ ವಿಮಾನ ಏರಿದ.

ಡೆಡ್‌ಲೈನ್ ಮೀರುವುದರೊಳಗೆ ಪೆಕರ ಸಂದರ್ಶನವನ್ನು ಮುಗಿಸಿ, ವರದಿಯನ್ನು ಕಚೇರಿಗೆ ಹೊತ್ತುಹಾಕಿ, ಕುತುಬ್ ಮಿನಾರ್ ನೋಡಲು ಹೊರಟ.`ಮೋದಿ ಅವರನ್ನು ಮುಂದಿನ ಪ್ರಧಾನಿ ಎಂದು ಬಿಂಬಿಸಲಾಗಿದೆ. ಪ್ರಚಾರ ಸಮಿತಿಗೆ ಮೋದಿ ನೇತೃತ್ವ ಹೇಗನ್ನಿಸುತ್ತೆ?'
`ಅಚ್ಚಾ ನಹೀ'

`ಪಕ್ಷದಲ್ಲಿ ಮೂಲೆಗುಂಪು ಮಾಡಿರೋದ್ರಿಂದ, ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿರೋದ್ರಿಂದ ಪಕ್ಷದ ಮೇಲೆ ಪರಿಣಾಮವಾಗಲ್ವೇ?'

`ಪಕ್ಷ ಎಲ್ಲಿ ಉಳಿಯುತ್ತೆ? ಕರ್ನಾಟಕದಲ್ಲಿ ಆದ ರೀತಿ ಚಿತ್ರಾನ್ನವಾಗುತ್ತೆ'
`..... ಆದರೆ ಕರ್ನಾಟಕದಲ್ಲಿ ಕಮಲದ ಉವ್ವ ಮುದುಡಿ ಹೋಗಲು ಅಡ್ವಾಣಿ ಹಾಗೂ ರಪ್ಪ ನಡುವೆ ಮೂಡಿದ ಬಿರುಕು ಕಾರಣ ಅಂತಾರಲ್ಲಾ?'

`ಏ ಕ್ಯಾ ಉವ್ವ ಉವ್ವ..... ಐಸಾ ಕ್ಯಾಬಿ ನಹೀ ಹುವಾ'
`ಅನಂತಕುಮಾರ್ ಪದೇ ಪದೇ ಬರ‌್ತಾರಾ? ಸದಾ ಇಲ್ಲೇ ಪವಡಿಸಿರ‌್ತಾರೆ ಅಂತಾರಲ್ಲಾ?'
`ವೋ.... ಅನಂತು! ಅವರು ದತ್ತುಪುತ್ರನ ತರಹ. ಬೆಳಿಗ್ಗೆ ಟಿಫನ್ ಇಲ್ಲೆ, ಮಧ್ಯಾಹ್ನ ಊಟಾನೂ ಇಲ್ಲೇ, ರಾತ್ರಿ ಡಿನ್ನರ‌್ರೂ ಇಲ್ಲೇ....
ಕರ್ನಾಟಕದಲ್ಲಿರೋದು ಸುಮ್ಮನೆ, ಸದಾ ಇರೋದು ಈ ಮನೆ'

`ಹೊಸಬರಿಗೆ ಪಕ್ಷದಲ್ಲಿ ಚಾನ್ಸ್ ಕೊಡಬೇಕಲ್ವೆ? ಬಹಳ ಜವಾಬ್ದಾರಿಯನ್ನು ಮೋದಿ ಹೆಗಲಿಗೆ ಏರಿಸಿದ್ದಾರೆ. ಏಕೆಂದರೆ ಅವರು `ಗುಜರಾತ್ ಸ್ಟ್ರಾಂಗ್‌ಮ್ಯಾನ್', ಅವರಿಗೆ ವಯಸ್ಸಿದೆ, ತಡ್ಕೋತಾರೇ, 85ನೇ ವಯಸ್ಸಿನಲ್ಲಿರುವವರಿಗೆ ಇಷ್ಟೊಂದು ಹೊರೆ ಹೆಗಲಿಗೇರಿಸಿದರೆ ದಬಕ್ ಅಂತ ಬಿದ್ದುಬಿಡಲ್ವ?'

`ಬರೀ ಗುಜರಾತಿನಲ್ಲೇ ಓಡಾಡುವವರು ಸ್ಟ್ರಾಂಗೋ!? ಆಲ್ ಓವರ್ ಇಂಡಿಯಾ ಓಡಾಡವ್ರ ಸ್ಟ್ರಾಂಗ್ ಅಲ್ವೋ? ರಾಮರಥ ಕಟ್ಟಿಕೊಂಡು ಜನಾದೇಶ ಯಾತ್ರೆ, ಸ್ವರ್ಣಜಯಂತಿ ರಥಯಾತ್ರೆ, ಭಾರತ ಉದಯಯಾತ್ರೆ, ಭಾರತ ಸುರಕ್ಷಾ ಯಾತ್ರೆ, ಜನಚೇತನಾ ಯಾತ್ರೆ ಮಾಡಿದ್ದು ಮರೆತು ಹೋಯ್ತಾ? ಕ್ಯಾ ಬೋಲ್ತಾ ಐ ತುಂ.....'

`ಹಾಗಾದ್ರೆ ಗುಜರಾತ್‌ನಲ್ಲಿ ಮೋದಿ ಮಾಡಿದ ಹ್ಯಾಟ್ರಿಕ್?!'
`ಅದೆಲ್ಲಾ ಬರೀ ಟ್ರಿಕ್'
“ಮೋದಿಗೆ ಹೆಚ್ಚು ಪವರ್ ಕೊಟ್ಟಿರೋದ್ರಿಂದ ಎಲ್ಲ ಅತ್ತ ಕಡೆ ಹೋಗ್ತಾ ಇದಾರೆ. ಈ ಮನೆ ಕಡೆ ಈಗ ಜನಾನೇ ಇಲ್ವಲ್ಲಾ.... ಬಿಕೋ ಅಂತಾ ಇದೆ”.

`ಆ ತರಾ ಏನೂ ಇಲ್ಲ..... ಸುಷ್ಮಾ ಬರ‌್ತಾರೆ, ಅನಂತು ಬರ‌್ತಾರೆ, ಅಹ್ಲುವಾಲಿಯಾ ಬರ‌್ತಾರೆ'
`ಭಾಗವತ್ ಮಾತು ನಂಬಬಹುದಾ?'

`ಭಗವಂತನೇ ಬಲ್ಲ'.
`ಜಿನ್ನಾ ಸೆಕ್ಯುಲರ್, ಹೇಳಿಕೆ, ಹವಾಲಾ ಆರೋಪದಲ್ಲಿ ಹೆಸರು ಕೇಳಿಬಂದಿದ್ದು ಕಪ್ಪು ಚುಕ್ಕೇನಾ?'
`ಗೋಧ್ರಾಗಿಂತಾ ಇದು ಜಾಸ್ತೀನಾ?'

(ಸಂಪಾದಕರಿಗೆ ಮನವಿ: ನಿಮ್ಮ ಸೂಚನೆಯಂತೆ ಅಡ್ವಾಣಿ ಅವರ ಸಂದರ್ಶನ ಮಾಡಲು ದೆಹಲಿಗೆ ಹೋಗಿದ್ದೆ. ಅಡ್ವಾಣಿ ಅವರು ಮನೆಯಲ್ಲಿ ಇರಲಿಲ್ಲ. ಅಜ್ಞಾತ ಸ್ಥಳಕ್ಕೆ ಹೋಗಿರುವುದಾಗಿ ತಿಳಿದುಬಂದಿದೆ. ಅಡ್ವಾಣಿ ಮನೆಯ ಮುಂದೆ ಬಹಳ ಹೊತ್ತು ಕಾದು ಕುಳಿತಿದ್ದೆ.

ಎಷ್ಟು ಹೊತ್ತಾದರೂ ಅವರು ಬರಲೇ ಇಲ್ಲ. ಡೆಡ್‌ಲೈನ್ ಮೀರ‌್ತಾಇದೆ. ಅದಕ್ಕೆ ಅಡ್ವಾಣಿ ಮನೆಮುಂದೆ ಇರುವ ಸೆಕ್ಯುರಿಟಿಯವನನ್ನೇ ಸಂದರ್ಶಿಸಿ ಕಳುಹಿಸುತ್ತಿದ್ದೇನೆ.)
ವಂದನೆಗಳು
-ಪೆಕರ        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT