ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನೂರ: ಪ್ರಶಸ್ತಿ ಮತ್ತು ಪ್ರಶಸ್ತಿಯಾಚೆಗೆ

Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ
‘ಜನರಿಂದ ಅಪಾರ ಮೆಚ್ಚುಗೆ, ಮನ್ನಣೆ ಪಡೆದ ಲೇಖಕರು ಹಲವರಿರಬಹುದು; ಆದರೆ ದೇವನೂರ ಮಹಾದೇವರಂತೆ ಇಷ್ಟೊಂದು ಜನರ ಪ್ರೀತಿಯನ್ನು ಪಡೆದ ಲೇಖಕರು ಹೆಚ್ಚು ಇಲ್ಲ’ ಎಂದರು ಚಿಂತಕ ರಾಜೇಂದ್ರ ಚೆನ್ನಿ. ಮೊನ್ನೆ ದೇವನೂರರಿಗೆ ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ‘ಕುವೆಂಪು ರಾಷ್ಟ್ರೀಯ ಪ್ರಶಸ್ತಿ’ ಕೊಟ್ಟಾಗ ಕನ್ನಡನಾಡಿನ ಹಲವು ದಿಕ್ಕುಗಳಿಂದ ದೇವನೂರರ ಗೆಳೆಯರು, ಲೇಖಕ, ಲೇಖಕಿಯರು, ಅಧ್ಯಾಪಕರು, ಓದುಗರು ಬಂದಿದ್ದರು. ದಲಿತ ಸಂಘಟನೆಗಳ ನಾಯಕರು, ಕಾರ್ಯಕರ್ತರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಲ್ಲಿದ್ದರು. 
 
ಇಂಥದೊಂದು ವೈವಿಧ್ಯಮಯ ಜನಸಮೂಹ ಅಲ್ಲಿತ್ತು ಎಂಬುದನ್ನು ಒತ್ತಿ ಹೇಳಲು ಕಾರಣವಿದೆ. ಚಳವಳಿಗಳ ಜೊತೆಗಿದ್ದು, ಮಹತ್ವದ ಕತೆ, ಕಾದಂಬರಿಗಳನ್ನು ಬರೆದಿರುವ ದೇವನೂರರು ನಾಲ್ಕು ವರ್ಷಗಳ ಕೆಳಗೆ ಪ್ರಕಟಿಸಿದ ಸಂಸ್ಕೃತಿ ವಿಮರ್ಶೆ ‘ಎದೆಗೆ ಬಿದ್ದ ಅಕ್ಷರ’ ಹಾಗೂ ಅವರ ಹೊಸ ರಾಜಕಾರಣಗಳೆರಡೂ ಅವರ ಸಾರ್ವಜನಿಕ ವ್ಯಕ್ತಿತ್ವದಲ್ಲಿ ಮುಖ್ಯ ಪಲ್ಲಟವನ್ನುಂಟು ಮಾಡಿದಂತಿವೆ. ಇದು ಕೂಡ ಇಷ್ಟೊಂದು ವಲಯಗಳ ಅಭಿಮಾನವನ್ನು ಸೃಷ್ಟಿಸಿರಬಹುದು. ಕಳೆದ ನಲವತ್ತು ವರ್ಷಗಳ ಸಾಮಾಜಿಕ ಬಿಕ್ಕಟ್ಟುಗಳಿಗೆ ಅವರ ಕ್ರಿಯೆ, ಬರಹಗಳು ಸ್ಪಂದಿಸಿರುವ ಹಾಗೂ ಉತ್ತರಗಳನ್ನು ಹುಡುಕಿರುವ ರೀತಿ ಕೂಡ ಓದುಗರಲ್ಲಿ ಕೃತಜ್ಞತೆ ಮೂಡಿಸಿರಬಹುದು. ಈಚಿನ ವರ್ಷಗಳಲ್ಲಿ ಅವರು ನಿರ್ವಹಿಸಿರುವ ರಾಜಕೀಯ, ಸಾಂಸ್ಕೃತಿಕ ಹೊಣೆಗಳು, ನಕ್ಸಲರನ್ನು ಪ್ರಧಾನಧಾರೆಗೆ ತರಲು ಮಾಡಿದ ಪ್ರಯತ್ನಗಳು; ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯನ್ನು ಪ್ರತಿಭಟಿಸಿ ಅವರು ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದು… ಇವೆಲ್ಲ ಸೇರಿ ದೇವನೂರರನ್ನು ಕುರಿತಂತೆ ವೈಚಾರಿಕ ಕರ್ನಾಟಕದ ನಿರೀಕ್ಷೆ ಹೆಚ್ಚಾಗಿರುವಂತಿದೆ.  
 
ಹೀಗೆ ಏಕಾಏಕಿ ಎರಗಿದ ಅಗಾಧ ಸಾಂಸ್ಕೃತಿಕ ಜವಾಬ್ದಾರಿ ಕಂಡು ಯಾವುದೇ ಸೂಕ್ಷ್ಮ ಲೇಖಕನಿಗೆ ಆತಂಕ ಹುಟ್ಟಬಹುದು. ಅದು ದೇವನೂರರಿಗೂ ಆಗಿರಬಹುದು. ಆದರೆ ದೇವನೂರರು ಬರೆಯಲು ಶುರು ಮಾಡಿದಾಗಿನಿಂದಲೂ, ದಲಿತ ಚಳವಳಿಗೆ ಇಳಿದ ಕಾಲದಿಂದಲೂ ಈ ಬಗೆಯ ಜವಾಬ್ದಾರಿಯನ್ನು ತಾನು ತೆಗೆದುಕೊಳ್ಳುತ್ತಿದ್ದೇನೆಂದು ಗಟ್ಟಿಯಾಗಿ ಘೋಷಿಸದೆ ಜವಾಬ್ದಾರಿಯನ್ನು ಒಪ್ಪಿಕೊಂಡವರು. ಕಥಾಬರವಣಿಗೆಯ ಹೊಸದಿಕ್ಕಿನ ಹುಡುಕಾಟದ ಜೊತೆಗೆ, ಚಳವಳಿಯ ಕರಪತ್ರ ಬರವಣಿಗೆ, ಸಂಕೇತಗಳ ಆಯ್ಕೆ, ಗೋಡೆ ಬರಹಗಳ ಭಾಷಾಸೂಕ್ಷ್ಮತೆ ಇಂಥವುಗಳಿಗೂ ಗಮನ ಕೊಟ್ಟವರು. ಎಪ್ಪತ್ತರ ದಶಕದಲ್ಲಿ ಪೊರಕೆಯೇ ದಲಿತ ಸಂಘರ್ಷ ಸಮಿತಿಯ ಸಂಕೇತವಾಗಬೇಕೆಂದು ಪ್ರಯತ್ನಿಸಿದವರಲ್ಲಿ ದೇವನೂರರು ಮುಖ್ಯರು. ಈಚಿನ ವರ್ಷಗಳಲ್ಲಿ ದಲಿತ ಚಳವಳಿಯಿಂದ ಆ ಪೊರಕೆಯನ್ನು ರಾಜಕೀಯ ಪಕ್ಷಗಳು ಹೈಜಾಕ್ ಮಾಡಿವೆ. ಕರ್ನಾಟಕದಲ್ಲಿ ಕೆಲವು ವರ್ಷಗಳ ಕೆಳಗೆ ನಡೆದ ಬೌದ್ಧ ಧರ್ಮ ಸ್ವೀಕಾರದ ಚಳವಳಿಯ ಸಂದರ್ಭದಲ್ಲಿ ‘ಮರಳಿ ಮನೆಗೆ’ ಎಂಬ ರೂಪಕ ಸೃಷ್ಟಿಗೆ ದೇವನೂರರ ಪ್ರೇರಣೆಯೂ ಇತ್ತು. ಮತೀಯವಾದಿಗಳು ಆ ರೂಪಕವನ್ನೂ ಕದ್ದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರ ಮಾಡಲು ನಸು ಬಾಗಿ ಹೊರಟಿರುವ ಚಿತ್ರ ಕರ್ನಾಟಕದಲ್ಲಿ ಹೊಸ ಐಕನ್ ಆಗಲು ದೇವನೂರರ ಒತ್ತಾಸೆಯೂ ಕಾರಣವಾಗಿತ್ತು. 
 
ಈ ಬಗೆಯ ಉದಾಹರಣೆಗಳ ಮೂಲಕ ಮಹಾದೇವರ ಮಹಿಮೆಯನ್ನು ಸಾರುವುದು ಈ ಬರಹದ ಉದ್ದೇಶವಲ್ಲ; ಬದಲಿಗೆ ಹಿಂಜರಿಕೆಯ ನಾಯಕನಂತೆ ಕಾಣುವ ಬುದ್ಧಿಜೀವಿಯೊಬ್ಬ ನಿರಂತರವಾಗಿ ನಿರ್ವಹಿಸಬಲ್ಲ ಬಗೆಬಗೆಯ ಜವಾಬ್ದಾರಿಗಳ ಸ್ವರೂಪವನ್ನು ಚರ್ಚಿಸಿ, ಆ ಮಾದರಿ ಇತರರಲ್ಲೂ ಹಬ್ಬುವಂತೆ ಮಾಡುವ ಆಶಯ ಇಲ್ಲಿದೆ. ಕೆಲವು ವರ್ಷಗಳ ಕೆಳಗೆ ರೈತ, ದಲಿತ ಸಂಘಟನೆಗಳ ಬಣಗಳು ಸೇರಿ ರೂಪಿಸಿದ ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷರಾದಾಗ ದೇವನೂರರ ಹಿಂಜರಿಕೆ ಕೊಂಚ ಹಿಂದೆ ಸರಿದಂತೆ ಕಂಡರೂ ಅವರ ತಡವರಿಕೆಯ ಸಾರ್ವಜನಿಕ ಮಾತುಗಳು, ವೇದಿಕೆಗಳ ಬಗ್ಗೆ, ಸಾರ್ವಜನಿಕ ಮಂಚೂಣಿಯಲ್ಲಿರುವ ಬಗ್ಗೆ ಅವರ ಮೂಲದ ಅಳುಕು  ಪೂರ್ತಿ ಮಾಯವಾಗಿಲ್ಲ; ಅದು ಮಾಯವಾದರೆ ಏನಾಗುತ್ತದೆ ಎಂಬುದನ್ನು ಅನೇಕ ಲೇಖಕರ ಸಂದರ್ಭದಲ್ಲಿ ಗಮನಿಸಿದವರು ‘ಈ ಅಳುಕು ಹಾಗೇ ಇರಲಿ’ ಎಂದು ಹಾರೈಸಿದರೆ ಅಚ್ಚರಿಯಲ್ಲ! 
 
ನಾನು ಗಮನಿಸಿರುವಂತೆ ದೇವನೂರರ ವ್ಯಕ್ತಿತ್ವ, ಮಾತು, ಬರಹಗಳಲ್ಲಿ ಇಂಡಿಯಾದ ಹಲಬಗೆಯ ಕೇಡುಗಳ ವಿರುದ್ಧದ ಹೋರಾಟದಲ್ಲಿ ಅಂಬೇಡ್ಕರ್ ಅವರಿಗಿದ್ದ ಖಚಿತತೆ; ಏನು ನುಡಿದರೆ ಏನಾದೀತು ಎಂಬ ಗಾಂಧೀಜಿಯ ಆತ್ಮಪರೀಕ್ಷೆಯ ಗುಣ; ಜಾನಪದ ಕಥನಕಾರ, ಕಥನಕಾರ್ತಿಯರಿಗಿರುವ ಸಾಮೂಹಿಕ ದೃಷ್ಟಿಕೋನ ಹಾಗೂ ನವ್ಯದ ತೀಕ್ಷ್ಣ ಸಂದೇಹವಾದ ಎಲ್ಲವೂ ಬೆರೆತಂತಿವೆ. ದಲಿತ ಚಳವಳಿಯ ಘಟ್ಟದ ನಂತರ, ಚಳವಳಿಗಳ ಮುಂದುವರಿಕೆಯಂತೆ ಬೆಳೆದ ರಾಜಕೀಯ ಪಕ್ಷಗಳತ್ತ ಹೊರಳಿದ ದೇವನೂರರು ಈಗ ಯೋಗೇಂದ್ರ ಯಾದವ್ ಥರದ ಚಿಂತಕ-ನಾಯಕರ ಚಳವಳಿಗಳ ಒಕ್ಕೂಟ ‘ಮಹಾಮೈತ್ರಿ’ಯ ಜೊತೆಗೂ ಇದ್ದಾರೆ; ಸದ್ಯದಲ್ಲೇ ಸರ್ವೋದಯ ಕರ್ನಾಟಕ ಪಕ್ಷ ಸ್ವರಾಜ್ ಇಂಡಿಯಾ ಪಕ್ಷದ ಜೊತೆಗೆ ವಿಲೀನಗೊಳ್ಳಲಿದೆ.
 
ಇವೆಲ್ಲವನ್ನೂ ಇವತ್ತು ಹೇಳಲು ಕಾರಣವಿದೆ. ಕಳೆದ ಕೆಲವು ವರ್ಷಗಳಲ್ಲಿ ದೇವನೂರ ಮಹಾದೇವ ವೈಚಾರಿಕ ಕರ್ನಾಟಕದ ಹಾಗೂ ಪರ್ಯಾಯ ಚಿಂತನೆಯ ಕರ್ನಾಟಕದ ಮುಂಚೂಣಿ ದನಿಯಾಗಿ ವಿಕಾಸಗೊಂಡಿದ್ದಾರೆ. ಕಂದಾಚಾರಿ ಕರ್ನಾಟಕದ ವಿರುದ್ಧ ಹೋರಾಡುತ್ತಲೇ ಇರುವ ಪ್ರಗತಿಪರ ಕರ್ನಾಟಕ ಕಾಲಕಾಲಕ್ಕೆ ಇಂಥ ನಾಯಕರನ್ನು (‘ನಾಯಕ’ ಎಂಬ ಪದ ಭಾರ ಎನ್ನಿಸಿದರೆ, ‘ಮುಂಚೂಣಿ ದನಿ’ಗಳನ್ನು) ರೂಪಿಸಿಕೊಂಡಿದೆ. ಕುವೆಂಪು, ಲಂಕೇಶ್, ತೇಜಸ್ವಿ, ಅನಂತಮೂರ್ತಿ… ಹೀಗೆ ಹಲವರನ್ನು ಪ್ರಗತಿಪರ ಕರ್ನಾಟಕ ತನ್ನ ವೈಚಾರಿಕ ದನಿಯ ಮುಖ್ಯ ಪ್ರತಿನಿಧಿಗಳನ್ನಾಗಿ ರೂಪಿಸಿಕೊಳ್ಳಲೆತ್ನಿಸಿದೆ. ಈಚಿನ ವರ್ಷಗಳಲ್ಲಿ ದೇವನೂರರ ಮಾತುಗಳನ್ನು ಜನ ಹಾಗೆ ಕೇಳಿಸಿಕೊಳ್ಳುತ್ತಿರುವುದನ್ನು ನೀವು ಗಮನಿಸಿರಬಹುದು. ರಾಜೇಂದ್ರ ಚೆನ್ನಿ ಹೇಳಿದ ‘ದೇವನೂರರಿಗೆ ದಕ್ಕಿರುವ ಜನರ ಪ್ರೀತಿ’ ಎಂಬ ಮಾತನ್ನು ಈ ವಿಶಾಲ ಹಿನ್ನೆಲೆಯಲ್ಲೂ ನೋಡಬೇಕು. ಮೇಲೆ ಹೇಳಿದ ಎಲ್ಲ ಲೇಖಕರೂ ನಮ್ಮ ದೊಡ್ಡ ಸೃಜನಶೀಲ ಲೇಖಕರಾಗಿರುವುದರಿಂದ ಕೂಡ ಅವರಿಗೆ ಜನರ ಪ್ರೀತಿ, ಕೃತಜ್ಞತೆಗಳು ದಕ್ಕಿವೆ; ಜೊತೆಗೆ ಇವರೆಲ್ಲ ಹೊಸ ಸತ್ಯವೊಂದು ಕಂಡಾಗ ತಮ್ಮನ್ನು ತಾವು ಮೀರಬಲ್ಲ, ತಮ್ಮ ನಿಲುವುಗಳನ್ನು ಪರೀಕ್ಷೆಗೆ ಒಡ್ಡಬಲ್ಲ ಸೂಕ್ಷ್ಮಜ್ಞರಾಗಿದ್ದರು ಎಂಬ ಕಾರಣಕ್ಕಾಗಿ ಕೂಡ ವೈಚಾರಿಕ ಕರ್ನಾಟಕದ ಮುಂಚೂಣಿ ದನಿಗಳಾಗಿ ಹೊಮ್ಮಿದ್ದಾರೆ ಎಂಬುದನ್ನು ಮರೆಯದಿರೋಣ.
 
ಇವತ್ತು ಇಂಥ ದನಿಯಾಗಿರುವ ದೇವನೂರರಿಗೆ ಎದುರಾಗುವ ಅನೇಕ ಬಗೆಯ ವಿಮರ್ಶೆಗಳ ನಡುವೆ ಅಸಂಬದ್ಧ ಹಾಗೂ ಸಣ್ಣತನದ ಟೀಕೆಗಳು ಎದುರಾದಾಗ ಅವನ್ನು ಅವರು ಹೇಗೆ ಸಹಿಸಿಕೊಂಡಿದ್ದಾರೆ ಎಂದು ಲೇಖಕ ಪುಟ್ಟಸ್ವಾಮಿ ಕೇಳಿದರು. ‘ಹತ್ತಿರದವರು ಹಾಗೆ ಮಾಡಿದಾಗ ನೋವಾಗುತ್ತೆ. ದಲಿತ ಚಳವಳಿಯ ಅನೇಕ ನಿರ್ಧಾರಗಳಲ್ಲಿ ನನ್ನ ಜೊತೆಗೇ ಇದ್ದವರು ನನ್ನನ್ನು ದೂಷಿಸಿದಾಗ ನೋವಾಗುತ್ತೆ’ ಎಂದರು ದೇವನೂರ. ದೇವನೂರರು ಟೀಕಾತೀತರಲ್ಲ, ನಿಜ. ಆದರೆ ಅನೇಕ ಸಲ ದೇವನೂರರು ಖ್ಯಾತರೆನ್ನುವ ಕಾರಣಕ್ಕೆ ಅವರನ್ನು ಗುದ್ದಿ ಸುದ್ದಿಯಾಗುವ ಒಣಚಪಲ ಕೆಲವು ಲೇಖಕರಿಗೆ ಇರುವಂತೆ ಕಾಣುತ್ತದೆ. ಅವರ ಬರಹಗಳನ್ನು ತಪ್ಪಾಗಿ ಓದಿ ವ್ಯಾಖ್ಯಾನಿಸಿರುವುದನ್ನು ಕೂಡ ನೀವು ಗಮನಿಸಿರಬಹುದು. ಅಂಥ ಹುಂಬ ಓದುಗಳನ್ನು ಜವಾಬ್ದಾರಿಯುತ ಸಾಹಿತ್ಯ ವಿಮರ್ಶೆಯೇ ಸರಿಪಡಿಸಬೇಕೇ ಹೊರತು, ಲೇಖಕ ಅವಕ್ಕೆಲ್ಲ ಉತ್ತರ ಕೊಡಬೇಕಾದ್ದಿಲ್ಲ. ಆದರೆ ಅಸಾಹಿತ್ಯಕವಾದ, ಸಣ್ಣತನದ ಕೊಂಕು ಪ್ರಶ್ನೆಗಳಿಗೆ ಸೂಕ್ಷ್ಮಜ್ಞರು ಸದಾ ಉತ್ತರ ಕೊಡುವುದು ಕಷ್ಟ. ಒಂದು ಸಿನಿಕ ವಾತಾವರಣದಲ್ಲಿ ‘ಯಾವುದೂ ಪವಿತ್ರವಲ್ಲ; ಯಾವುದೂ ಸರಿಯಿಲ್ಲ’ ಎಂದು ಏನೂ ಮಾಡದ, ಏನೂ ಮಾಡಲಾರದ ಹಲವರಿಗೆ ಅನ್ನಿಸುತ್ತಿರಬಹುದು. ಆದರೆ ಯಾವುದಾದರೂ ಕೊಂಚ ಪವಿತ್ರವಾಗಿದ್ದರೆ, ಅದನ್ನು ನಾಶ ಮಾಡಲೇಬೇಕು ಎಂದು ಹಟ ಹಿಡಿದ ಮೊಂಡರು ಆರೋಗ್ಯಕರ ಚಿಂತನೆಗೆ ಹಾನಿ ಮಾಡುತ್ತಿರುತ್ತಾರೆ. ಹಿಂದೊಮ್ಮೆ ಕೆಲವು ರಾಜಕೀಯ ನಾಯಕರು ದೇವನೂರರನ್ನು ಎಂ.ಎಲ್.ಸಿ. ಆಗಲು ಕೇಳಿದಾಗ ‘ಒಲ್ಲೆ’ ಎಂದ ಅವರು ಮತ್ತೊಬ್ಬರ ಹೆಸರನ್ನು ಸೂಚಿಸಿದ್ದರಷ್ಟೆ? ‘ಆಗ ಅವರು ನನ್ನ ಹೆಸರನ್ನು ಯಾಕೆ ಸೂಚಿಸಲಿಲ್ಲ?’ ಎಂದು ಒಂದಿಬ್ಬರು ಸಾಹಿತಿಗಳು ಮುನಿಸಿಕೊಂಡಿದ್ದರು. ಈ ಥರದ ಅತೃಪ್ತಿಗಳಿಂದಲೂ ದೇವನೂರರ ವಿರುದ್ಧ ಹುಟ್ಟಿರುವ ಬಾಲಿಶ ಟೀಕೆಗಳ ಹತ್ತಾರು ಉದಾಹರಣೆಗಳಿವೆ. 
 
ಹಾಗೆಯೇ ದೇವನೂರರ ಕೃತಿಗಳಾಗಲೀ, ಇನ್ನಾರದೇ ಕೃತಿಗಳಾಗಲೀ ತಮ್ಮ ಸಾಹಿತ್ಯಕ ದಕ್ಷತೆಯಿಂದ ಶ್ರೇಷ್ಠ ಕೃತಿಗಳಾಗಿ ಬೆಳೆದಿವೆ ಎಂದಿಟ್ಟುಕೊಳ್ಳಿ; ಆಗ ಅವನ್ನು ಮೀರಿಸುವ, ದಾಟಿ ಹೋಗುವ ಕೃತಿರಚನೆಯ ಮೂಲಕ ಮಾತ್ರ ಮತ್ತೊಬ್ಬರು ಅವರಿಗಿಂತ ಉತ್ತಮ ಲೇಖಕರಾಗಿ ಬೆಳೆಯಲು ಸಾಧ್ಯ. ಹಾಗೆ ಮಾಡಲಾಗದೆ ಉತ್ತಮ ಕೃತಿಗಳ ಬಗ್ಗೆ ಅಸಂಬದ್ಧ, ಅಸಂಗತ ಟೀಕೆ ಮಾಡುವುದು ಅವಿವೇಕ. ಅನೇಕ ಸಲ ನಾವು ಮಾಡುವ ಟೀಕೆಗಳು ನಮ್ಮ ವ್ಯಕ್ತಿತ್ವದ ದೌರ್ಬಲ್ಯಗಳನ್ನೇ ಹೊರ ಚೆಲ್ಲುತ್ತಿರಬಹುದು ಎಂಬ ಎಚ್ಚರವೂ ನಮಗಿರಬೇಕಲ್ಲವೆ? 
 
ಈ ಹಿನ್ನೆಲೆಯಲ್ಲಿ ಒಂದು ಸಂಸ್ಕೃತಿಯಲ್ಲಿ ಆರೋಗ್ಯವನ್ನು ಬಿತ್ತುವ, ವೈಚಾರಿಕತೆಯನ್ನು ಹಬ್ಬಿಸುವ ಕೃತಿಗಳು ಜನಪ್ರಿಯವಾಗುವುದರಿಂದ ಆಗುವ ದೀರ್ಘಕಾಲದ ಒಳ್ಳೆಯ ಪರಿಣಾಮಗಳನ್ನು ನಾವೆಲ್ಲ ಸೂಕ್ಷ್ಮವಾಗಿ ಗಮನಿಸಬೇಕು. ಅಂಥ ಪುಸ್ತಕಗಳಲ್ಲಿರುವ ನಿಲುವುಗಳನ್ನು ಒಪ್ಪುವ ಪರ್ಯಾಯ ಸಮಾಜವೊಂದು ರೂಪುಗೊಂಡಿದೆ, ಬೆಳೆಯುತ್ತಿದೆ ಎಂದೂ ಈ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ದಲಿತ ಚಿಂತನೆ, ಎಡಪಂಥೀಯ ವಿಶ್ಲೇಷಣೆ, ಸ್ತ್ರೀವಾದಿ ನೋಟಕ್ರಮ, ಸಂಸ್ಕೃತಿ ವಿಮರ್ಶೆ ಹಾಗೂ ವೈಚಾರಿಕ ಚಿಂತನೆಗಳ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆ ಎಂದರೆ ನಾವೆಲ್ಲ ಹಂಬಲಿಸುವ ಪರ್ಯಾಯ ಕರ್ನಾಟಕವೊಂದು ನಮಗರಿವಿಲ್ಲದೆಯೇ ಬೆಳೆಯುತ್ತಿದೆ ಎಂದೇ ಅರ್ಥ. ಕೆಲವು ವರ್ಷಗಳ ಕೆಳಗೆ ವಿಚಾರ ಸಂಕಿರಣಗಳಲ್ಲಿ ಚರ್ಚಿತವಾಗುತ್ತಿದ್ದ ಅನೇಕ ವೈಚಾರಿಕ ಪರಿಕಲ್ಪನೆಗಳು ಇಂದು ಕರ್ನಾಟಕದಲ್ಲಿ ಸಹಜ ನುಡಿಗಟ್ಟುಗಳಾಗಿ ಹಬ್ಬಿರುವ ಅದ್ಭುತ ಬೆಳವಣಿಗೆಯನ್ನೂ ನಾವು ನೋಡುತ್ತಿದ್ದೇವೆ. ಅದರಿಂದಾಗಿ ತಮ್ಮ ಹಿತಾಸಕ್ತಿಗೆ ಧಕ್ಕೆಯಾಗುತ್ತದೆಂದು ದಿಗಿಲುಬಿದ್ದ ಕಂದಾಚಾರಿಗಳು ಹೊಸ ಮಾಧ್ಯಮಗಳಲ್ಲಿ ಅಂಥ ವಿಚಾರಗಳ ವಿರುದ್ಧ ಚೀರಿಕೊಳ್ಳುವುದನ್ನೂ ನೋಡುತ್ತಿದ್ದೇವೆ; ಅವಕ್ಕೆ ತಕ್ಕ ಉತ್ತರವನ್ನು ವೈಚಾರಿಕ ಕರ್ನಾಟಕದ ಹೊಸ ತಲೆಮಾರು ಕೊಡುತ್ತಿರುವುದನ್ನೂ ನೋಡುತ್ತಿದ್ದೇವೆ. 
 
ಇಂಥ ಕಾಲಘಟ್ಟದಲ್ಲಿ ಪ್ರಗತಿಪರ ಕರ್ನಾಟಕದ ಮುಖ್ಯ ಧ್ವನಿಯಾಗಿ ದೇವನೂರರಾಗಲೀ, ನಂತರದ ತಲೆಮಾರಿನ ಮೊಗಳ್ಳಿ ಗಣೇಶ್, ರಹಮತ್ ತರೀಕೆರೆ, ದು.ಸರಸ್ವತಿ, ನೀಲಾ ಅಥವಾ ಇಂಥ ಇನ್ಯಾರೇ ಆಗಲೀ ರೂಪುಗೊಂಡರೆ ನಮ್ಮ ಚಿಲ್ಲರೆ ಅಸೂಯೆ, ಕುಹಕ ಅಥವಾ ವ್ಯಕ್ತಿಗತ ಸ್ವಾರ್ಥಗಳಿಂದ ಆ ದನಿಗಳನ್ನು ಮಂಕಾಗಿಸಲು ಪ್ರಯತ್ನಿಸಬಾರದು. ಬದಲಿಗೆ ಅವನ್ನು ಬೆಳೆಸುವ, ಗಟ್ಟಿಯಾಗಿಸುವ, ಸಕಾರಣವಾಗಿ ವಿಮರ್ಶಿಸುವ, ತಿದ್ದುವ ಮೂಲಕ ಅಂಥ ಇನ್ನೂ ಹತ್ತಾರು ದನಿಗಳನ್ನು ಸೃಷ್ಟಿಸುವ ಜವಾಬ್ದಾರಿ ಹೊರಬೇಕಾಗುತ್ತದೆ. ದೇವನೂರರು ಸದ್ದಿಲ್ಲದೆ ಇಂಥ ಜವಾಬ್ದಾರಿಗಳನ್ನು ನಿರ್ವಹಿಸಿರುವ ರೀತಿಯಿಂದಲೂ ನಾವು ಪಾಠಗಳನ್ನು ಕಲಿಯಬೇಕಾಗುತ್ತದೆ.
 
ಕೊನೆ ಟಿಪ್ಪಣಿ: ‘ಕಾಲಾತೀತತೆ’ ಮತ್ತು ಸಾರ್ವಜನಿಕ ನೈತಿಕತೆ
ಮೊನ್ನೆ ಪ್ರಶಸ್ತಿ ಸಮಾರಂಭದಲ್ಲಿ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರು ದೇವನೂರ ಮಹಾದೇವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಸೇರಿದಂತೆ ಅನೇಕ ಮನ್ನಣೆಗಳನ್ನು, ನೃಪತುಂಗ ಪ್ರಶಸ್ತಿಯಂಥ ಅತಿ ಮೊತ್ತದ ಪ್ರಶಸ್ತಿಗಳನ್ನು ಒಲ್ಲೆನೆಂದಿರುವುದನ್ನು ಒತ್ತಿ ಹೇಳುತ್ತಿದ್ದರು. ಅಂಥ ದೇವನೂರರು ಕುವೆಂಪು ಬಗೆಗಿನ ಗೌರವದಿಂದ ಕೂಡ ಈ ಪ್ರಶಸ್ತಿಯನ್ನು ಸ್ವೀಕರಿಸಿರಬಹುದು. ಈ ಪ್ರಶಸ್ತಿ ಅವರ ಪ್ರಭಾವಳಿಯನ್ನು ಹೆಚ್ಚಿಸದಿದ್ದರೂ ಜವಾಬ್ದಾರಿಯನ್ನಂತೂ ಹೆಚ್ಚಿಸಿದೆ. ಆ ಜವಾಬ್ದಾರಿ- ಅವರಿಗೆ ಈಗ ಇಲ್ಲದಿರುವ, ಆದರೆ ಸಾರ್ವಜನಿಕ ಜೀವನದ ನೈತಿಕ ಅಗತ್ಯಗಳಲ್ಲೊಂದಾದ, ‘ಟೈಮ್ ಸೆನ್ಸ್’ ಅನ್ನು ತಂದುಕೊಡಲಿ ಎಂಬುದು ನನ್ನಂಥವರ ಹಾರೈಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT