ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಸ್ವಂತ ನಾಡು, ಸಮಾನತೆಯ ಪಾಡು

Last Updated 6 ಜೂನ್ 2016, 19:31 IST
ಅಕ್ಷರ ಗಾತ್ರ

ಶಬರಿಮಲೆ ವಿವಾದಕ್ಕೆ ಜನಮತ ಕೇಳುವ ಎಡರಂಗ ತೀರ್ಮಾನದ ಹಿಂದೆ ಏನಿದೆ?

ಭಾರತದಲ್ಲಿ ಚುನಾವಣೆಗಳು ಘೋಷಣೆಯಾದೊಡನೆ, ರಾಜಕೀಯ ಪಕ್ಷಗಳ ಜನಪರ ಸಿದ್ಧಾಂತಗಳಿಗಿಂತ ಅವು ಕಟ್ಟೆಚ್ಚರದಿಂದ ಪಾಲಿಸುವ ಧರ್ಮ ಮತ್ತು ಜಾತಿ ಕುರಿತ ನಿಲುವೇ ಚುನಾವಣಾ ಸಿದ್ಧತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮತದಾರರ ಓಲೈಸುವಿಕೆ ನಮ್ಮ ರಾಜಕಾರಣದ ಮುಖ್ಯ ಸೂತ್ರ ಆಗಿರುವುದರಿಂದ ಚುನಾವಣಾ ವಿಶ್ಲೇಷಣೆಗೂ ಬೇಡವೆಂದರೂ ಇದೇ ಮೂಲಭೂತ ಸೂತ್ರ ಆಗಿರುತ್ತದೆ. ಚುನಾವಣೆಗಳ ಫಲಿತಾಂಶ ಬಂದಮೇಲೆ ಅದರ ವ್ಯಾಖ್ಯಾನ ಮಾಡುವಾಗ ಕೂಡ ಇದೇ ಮೊದಲು ಮುಖ್ಯ ಮಾನದಂಡವಾಗಿ ಕೈಗೆ ಒದಗುತ್ತದೆ.

ಬದಲಾದ ರಾಜಕೀಯ ಸಮೀಕರಣ ಕುರಿತು ಹೇಳುವುದೇ ಮುಖ್ಯವಾಗಿದ್ದರೂ ಅದರ ಪರಿಣಾಮದಿಂದ ಆಗಲಿರುವ ಈ ಕೆಲವು ಬೆಳವಣಿಗೆಗಳನ್ನೂ ಗುರುತಿಸಬೇಕಾಗುತ್ತದೆ. ಏಕೆಂದರೆ ಅನೇಕ ಬಾರಿ ಚುನಾವಣೆಯ ಫಲಿತಾಂಶವೇ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಸಾಮಾಜಿಕ ಮತ್ತು ಧಾರ್ಮಿಕ ನಿಲುವು ಕುರಿತು ಸೂಕ್ಷ್ಮಚಿಂತನೆ ನಡೆಸುವಂತೆ ಒತ್ತಾಯಿಸುತ್ತದೆ. ಭಾರತದ ಚುನಾವಣಾ ರಾಜಕಾರಣದಲ್ಲಂತೂ ಇದು ಅನಿವಾರ್ಯ. ನಮ್ಮ ಸಂವಿಧಾನ ಸೆಕ್ಯುಲರ್ ಆಗಿರಬಹುದು, ಆದರೆ ನಮ್ಮ ಚುನಾವಣೆ ಎಂದೂ ಸೆಕ್ಯುಲರ್ ಆಗಿರಲು ಸಾಧ್ಯವಿಲ್ಲ.

ನಮ್ಮ ದೇಶೋವಿಶಾಲ ರಾಜಕೀಯ ಭೂಮಿಕೆಯಲ್ಲಿ ಇದಕ್ಕೇನೂ ಸಿದ್ಧ ಸೂತ್ರಗಳಿರಲು ಸಾಧ್ಯವಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಸೂತ್ರಗಳ ಸ್ವರೂಪ ಬದಲಾಗಬಹುದು. ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳ ಫಲಿತಾಂಶ ಕುರಿತ ವಿಶ್ಲೇಷಣೆಗಳಲ್ಲಿ, ಅಸ್ಸಾಂನಲ್ಲಿ ಬಿಜೆಪಿ ಮಾಡಿದ ಸಾಧನೆಯನ್ನು ಧಾರ್ಮಿಕ ಕಾರಣದಿಂದ ದಕ್ಕಿದ ಗೆಲುವು ಎಂಬಂತೆ ಅನೇಕರು ಬಣ್ಣಿಸುತ್ತಿದ್ದಾರೆ. ಕೇರಳದ ಫಲಿತಾಂಶವಂತೂ ಅನೇಕ ಅಚ್ಚರಿಗಳನ್ನು ಮುಂದಿಡುತ್ತಿದೆ. ಇವುಗಳ ಪೈಕಿ, ಎಡರಂಗದ ಎಚ್ಚರಿಕೆಯ ಹೆಜ್ಜೆಗಳನ್ನು, ಬದಲಾದ ನಿಲುವುಗಳನ್ನು ಮತ್ತು ಹೊಸ ರಾಜಕೀಯ ಶಕ್ತಿಗಳನ್ನು ಹುಡುಕಿ ತೆಗೆಯುವ ಪ್ರಯತ್ನ ನಡೆಯುತ್ತಿದೆ.

ಕೇರಳದ ಚುನಾವಣೆಗಳಲ್ಲಿ ಗೆಲ್ಲಬೇಕೆಂದು ಬಿಜೆಪಿ 1982 ರಿಂದ ಸತತ ಪ್ರಯತ್ನ ನಡೆಸುತ್ತಿತ್ತು; ಈಗ ವಿಧಾನಸಭೆಗೆ ಅದು ಗೆದ್ದಿರುವ ಒಂದೇ ಒಂದು ಸ್ಥಾನವೇ ಹತ್ತಾರು ಬಗೆಯ ವ್ಯಾಖ್ಯಾನಗಳನ್ನು ಪ್ರೇರೇಪಿಸುತ್ತಿದೆ. ಬಿಜೆಪಿಗೆ ಸಿಕ್ಕಿದ ಈ ‘ಒಂದು’ ಗೆಲುವಿನ ಬಲ, ಎಡರಂಗ ಸರ್ಕಾರದ ನಿರ್ಧಾರಗಳ ಮೇಲೆ ಬಲವಾದ ಪ್ರಭಾವ ಬೀರಬಲ್ಲುದೇ ಎಂದು ಎಲ್ಲರೂ ಕುತೂಹಲ ತಳೆಯುವಂತೆ ಮಾಡುತ್ತಿದೆ. ಕೇರಳದ ರಾಜಕಾರಣವನ್ನು ನಿಯಂತ್ರಿಸುವ ಎಡರಂಗ ಮತ್ತು ಐಕ್ಯರಂಗಗಳ ಮೇಲೆ ಹಲವು ಶಕ್ತಿಗಳ ನಿಯಂತ್ರಣ ಕಣ್ಣಿಗೆ ಹೊಡೆದು ಕಾಣುತ್ತದೆ. ಇವೆರಡೂ ಅಲ್ಲಿ ನಡೆದಿರುವ ಎಲ್ಲ ಚುನಾವಣೆಗಳಲ್ಲೂ ಈ ಶಕ್ತಿಗಳೊಂದಿಗಿನ ಹೊಂದಾಣಿಕೆಗಳ ನಡುವೆಯೇ ಪರಸ್ಪರ ಹೊಡೆದಾಟ ನಡೆಸಿವೆ.

ಮುಸ್ಲಿಮ್ ಪಕ್ಷಗಳ ಹೊಯ್ದಾಟಗಳನ್ನೂ ಬೇರೆ ದಾರಿಯಿಲ್ಲದೆ ಒಪ್ಪಿಕೊಂಡಿವೆ. ಚುನಾವಣೆ ಎನ್ನುವುದು ಯಾರನ್ನೂ ಸಿದ್ಧಾಂತಕ್ಕೆ ಅಂಟಿಕೊಳ್ಳಲು ಬಿಡುವುದಿಲ್ಲ. ಪ್ರತೀ ಚುನಾವಣೆಯೂ ಎಲ್ಲರ ಮಡಿಯನ್ನೂ ಕೆಡಿಸುತ್ತದೆ ಎನ್ನುವುದಕ್ಕೆ ಬೇರೆ ರಾಜ್ಯಗಳು ಬಿಡಿ, ಕೇರಳ, ಪಶ್ಚಿಮ ಬಂಗಾಳಗಳಲ್ಲೂ ಉದಾಹರಣೆಗಳು ಸಿಗುತ್ತವೆ. ಧರ್ಮ, ಜಾತಿ ಮತ್ತು ಹಣ ಈ ಮೂರೂ ಇಲ್ಲದ ಚುನಾವಣೆ ಇಲ್ಲ. ಈ ವಿಚಾರದಲ್ಲಿ ಪ್ರತೀ ಚುನಾವಣೆಯೂ ಮುಂದಿಡುವ ಮಾದರಿಗಳು ಬೇರೆ ಬೇರೆ ಇರಬಹುದಷ್ಟೆ. ಹಾಗೆಯೇ ಚುನಾವಣೆ ನಂತರ ಅಧಿಕಾರ ಹಿಡಿದ ಮೇಲೆ ಸರ್ಕಾರಗಳು ಈ ಮಾದರಿ ಮುಂದುವರೆಸದಿದ್ದರೆ ಉಳಿಯಲು ಸಾಧ್ಯವಿಲ್ಲ. 

ಇದರಲ್ಲಿ ಹೊಸತೇನೂ ಇಲ್ಲ, ಇದಕ್ಕೆ ಹೊರತಾದುದೂ ಇಲ್ಲ. ಈಗ ಕೇರಳದಲ್ಲಿ ಎಡರಂಗ ಸರ್ಕಾರದ ಆಡಳಿತ ಆರಂಭದಲ್ಲೇ ಈ ರಾಜಕೀಯ ಸತ್ಯಗಳನ್ನು ಮತ್ತೆ ಮುಂದಿಡುತ್ತಿದೆಯೇ? ಹೊಸ ರಾಜ ಕೀಯ ಸವಾಲು ಎದುರಿಸುವ ಅನಿವಾರ್ಯತೆ ಅಲ್ಲಿ ಹುಟ್ಟಿ ಕೊಂಡಿದೆಯೇ? ಯಾವ ರಾಜಕೀಯ ರಂಗವಾದರೂ ಅಧಿಕಾರ ಹಿಡಿಯಲಿ, ಕೇರಳದ ಸಚಿವ ಸಂಪುಟದಲ್ಲಿ ಹತ್ತು ಹನ್ನೊಂದು ಮಂದಿ ಮುಸ್ಲಿಂ- ಕ್ರೈಸ್ತ ಸಮುದಾಯದ ಸಚಿವರು ಇದ್ದೇ ಇರಬೇಕಿತ್ತು. ಈಗ ಎಡರಂಗ ಸರ್ಕಾರದಲ್ಲಿ ಅವರ ಸಂಖ್ಯೆ ಕೇವಲ ನಾಲ್ಕಕ್ಕೆ ಇಳಿಯಿತು ಎನ್ನುವುದನ್ನು ಅಲಕ್ಷಿಸಲು ಆಗುವುದಿಲ್ಲ.

ಕೇರಳದಲ್ಲಿ ಇ.ಎಂ.ಎಸ್. ನಂಬೂದಿರಿಪಾದ್ ಅವರು ದೇಶದ ಮೊದಲ ಎಡರಂಗ ಸರ್ಕಾರ ರಚಿಸಿದ ಕಾಲದಿಂದಲೂ ಶಿಕ್ಷಣ ಸಚಿವರ ಹುದ್ದೆ ಅಲ್ಪಸಂಖ್ಯಾತ ರಾಜಕಾರಣಿಗೇ ಮೀಸಲು ಎನ್ನುವುದು ಒಂದು ರೂಢಿಯಂತೆ ಆಗಿತ್ತು. ಬಹುಕಾಲದ ನಂತರ ಅಲ್ಪಸಂಖ್ಯಾತ ಅಲ್ಲದ ಒಬ್ಬ ರಾಜಕಾರಣಿಗೆ ಶಿಕ್ಷಣ ಸಚಿವ ಆಗುವ ಅವಕಾಶ ಈಗ ಲಭಿಸಿದೆ. ಶಿಕ್ಷಣವನ್ನು ಶಿಕ್ಷಣೋ  ದ್ಯಮ ಮಾಡುವ ಕೆಲಸದಲ್ಲಿ ಕೇರಳದ ಕೊಡುಗೆಯೂ ಸಾಕಷ್ಟು ಇರುವುದರಿಂದ ಇದಕ್ಕೆ ಮಹತ್ವ ಇದ್ದೇ ಇರುತ್ತದೆ. ‘ಕೇರಳದ ಹಿಂದೂಗಳು ಬಿಜೆಪಿಯನ್ನು ಬೆಂಬಲಿಸುವುದಿಲ್ಲ’ ಎಂಬ ನಂಬಿಕೆಯನ್ನು ಆ ‘ಒಂದು’ ಗೆಲುವು ಅಲ್ಲಾಡಿಸಿಬಿಟ್ಟಿದೆ.

ಅಲ್ಲಿನ ಜನಸಂಖ್ಯೆಯಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರ ಪ್ರಮಾಣ ಶೇ 45ರಷ್ಟಿದ್ದು ಮಿಕ್ಕವರೆಲ್ಲ ಹಿಂದೂಗಳು. ಈ ಜನಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ಮೇಲಿನ ವಿಚಾರಗಳೆಲ್ಲಾ ಯಾರನ್ನು ಓಲೈಸುವ ನಿರ್ಧಾರಗಳು, ಇವುಗಳ ಹಿಂದಿನ ಒತ್ತಡಗಳೇನು ಎನ್ನುವುದೆಲ್ಲ ಈಗ ಪಕ್ಷಗಳಲ್ಲಿ, ಪತ್ರಿಕೆಗಳಲ್ಲಿ ಚರ್ಚೆಯ ವಿಷಯಗಳಾಗಿರುವುದು ಸಹಜ. ಕೇರಳದ ಇಂಥ ಮುಖ್ಯ ರಾಜಕೀಯ ನಿರ್ಧಾರ ಗಳನ್ನು ಕುರಿತ ಟೀಕೆಗಳನ್ನೆಲ್ಲ ಕೇವಲ ವಿರೋಧ ಪಕ್ಷಗಳ ಮಾಮೂಲಿ ಆರೋಪಗಳು ಎಂದು ಬದಿಗೆ ಬಿಸಾಕು ವಂತಿಲ್ಲ. ಇವೆಲ್ಲ ಬದಲಾದ ರಾಜಕೀಯ ಬೆಳವಣಿಗೆಗಳಿಗೆ ಅನುಗುಣವಾದ ನಿರ್ಧಾರಗಳೆನ್ನುವುದು ಖಂಡಿತ. 

ಸರ್ಕಾರ ಯೋಚನೆ ಮಾಡಿ ಕೈಗೊಂಡ ಇಂಥ ನಿರ್ಧಾರ ಗಳಿರಲಿ, ಸಚಿವ ಸಂಪುಟದ ಯಾವೊಬ್ಬ ಸಚಿವರೂ ‘13’ ಸಂಖ್ಯೆಯ ಸರ್ಕಾರಿ ವಾಹನ ಸ್ವೀಕರಿಸಲು ಒಪ್ಪಲಿಲ್ಲವಂತೆ, 12ರ ನಂತರ 14 ಸಂಖ್ಯೆಯ ವಾಹನ ಕೊಡಬೇಕಾಯಿ ತಂತೆ. ಹಾಗಾದರೆ ಮೌಢ್ಯವಿರೋಧಿ ವಿಚಾರವಾದವನ್ನು ಸಿದ್ಧಾಂತವಾಗಿ ಹೇಳುವ ಎಡರಂಗದಲ್ಲಿ, ವಿವಿಧ ಧರ್ಮಗಳಿಗೆ ಸೇರಿದ ಎಲ್ಲ ಸಚಿವರಿಗೂ ‘13’ ಅಶುಭವೇ ಎನ್ನುವ ‘ಚಿಲ್ಲರೆ’ ಟೀಕೆಯನ್ನು ಕುರಿತು ಏನು ಹೇಳುವುದು? ಹಿಂದೊಮ್ಮೆ ಇದೇ ಕೇರಳದ ಎಡಪಂಥೀಯ ನಾಯಕ ಎಂ.ಎ. ಬೇಬಿ ಅವರು ಸಚಿವರಾಗಿದ್ದಾಗ, 13 ಸಂಖ್ಯೆಯ ಕಾರನ್ನೇ ಒತ್ತಾಯಿಸಿ ಪಡೆದು ಮೂಢನಂಬಿಕೆಗೆ ಒದೆ ಕೊಟ್ಟಿದ್ದರಲ್ಲ, ಅದನ್ನು ಮರೆಯುವುದು ಹೇಗೆ? 

ಸರ್ಕಾರ ಪ್ರಮಾಣ ವಚನ ಸ್ವೀಕರಿಸಿ ಇನ್ನೂ ಒಂದು ತಿಂಗಳಾಗಿಲ್ಲ. ಅಷ್ಟರಲ್ಲೇ ಆ ‘ಒಂದು’ ಸ್ಥಾನದ ಗೆಲುವಿನ ಪ್ರಭಾವ ಆಡಳಿತದ ಮೇಲೆ ಕಾಣುತ್ತಿದೆ ಎಂಬ ಟೀಕೆ ಇನ್ನೂ ಅನೇಕ ವಿಚಾರಗಳಿಗೆ ಕೇಳಿಬರುತ್ತಿದೆ. ಅದು ನಿಜವೇನೋ ಅನ್ನಿಸುವಂತೆ, ಕೇರಳದ ದೇವಾಲಯಗಳ ಆಡಳಿತ-ಮುಜರಾಯಿ ಇಲಾಖೆಯ ಸಚಿವ ಕಡಕಂಪಲ್ಲಿ ಸುರೇಂದ್ರನ್ ಶಬರಿಮಲೆಗೆ ಎಲ್ಲ ಮಹಿಳೆಯರ ಪ್ರವೇಶ ಕುರಿತು ಎಡರಂಗ ಸರ್ಕಾರ ಖಚಿತ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ದೇವಾಲಯ,  ಸಾರ್ವಜನಿಕ ಆರಾಧನಾ ಸ್ಥಳವಾದ್ದರಿಂದ ಎಲ್ಲರೂ ಅದನ್ನು ಪ್ರವೇಶಿಸಬಹುದು ಎಂಬ ಕನಿಷ್ಠ ಸಮಾನತೆಯ ತತ್ವವನ್ನು ಎತ್ತಿಹಿಡಿಯದ ಅವರು ‘ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶ ಅವಕಾಶ ಕೊಡಬೇಕು ಎಂಬ ಬೇಡಿಕೆಗೆ ಸಂಬಂಧಿಸಿದಂತೆ ಜನಮತ ಸಂಗ್ರಹ ನಡೆಸಲು ನಮ್ಮ ಸರ್ಕಾರ ಸಿದ್ಧವಿದೆ’ ಎಂದು ಘೋಷಿಸಿದ್ದಾರೆ. ‘ಈ ವಿಚಾರದಲ್ಲಿ ಚರ್ಚೆ ನಡೆಸಿ ಒಂದು ಸರ್ವಸಮ್ಮತ ತೀರ್ಮಾನ ಕೈಗೊಳ್ಳುವ ಸಲುವಾಗಿ ಎಲ್ಲ ಪಕ್ಷಗಳ ಸಭೆ ಕರೆಯಲು ನಮ್ಮ ಸರ್ಕಾರ ಸಿದ್ಧವಿದೆ.

ಪದ್ಧತಿಗಳು ಮತ್ತು ಆಚರಣೆಗಳ ವಿಚಾರದಲ್ಲಿ ಬದಲಾವಣೆ ತರಲು ನ್ಯಾಯಾಲ ಯದ ಆದೇಶವೊಂದೇ ಸಾಕಾಗುವುದಿಲ್ಲ’ ಎಂದೂ ಯಾರಿಗೋ ಹೆದರಿದವರಂತೆ ಸಚಿವರು ಪ್ರಕಟಿಸಿದ್ದಾರೆ. ಹಾಗಾದರೆ ಸಂವಿಧಾನ ಹೇಳುವ ಸಮಾನತೆ ಎನ್ನುವುದು ಸನ್ನಿವೇಶಕ್ಕೆ ಅನುಗುಣವಾಗಿ ವಿಭಿನ್ನ ಅರ್ಥ ಪಡೆಯಬಹುದು! ‘ಸಂವಿಧಾನ ಗಿಂವಿಧಾನ ಅಂತೆಲ್ಲ ನಿಮಗಿರಬಹುದು, ಆದರೆ ನಂವಿಧಾನವೇ ಬೇರೆ’ ಎಂಬ ಶಬರಿಮಲೆ ದೇವಾಲಯದ ಆಡಳಿತ ಮಂಡಳಿಯ ಹಟಕ್ಕೆ ಎಡರಂಗದ ಸಚಿವರೇ ಸಮ್ಮತಿ ಸೂಚಿಸಿದ್ದಾರೆ.

ಆದರೆ ಕೇರಳದಲ್ಲಿ 2006–2011ರ ಅವಧಿಯಲ್ಲಿ ಆಡಳಿತ ನಡೆಸುತ್ತಿದ್ದ ಇದೇ ಎಡರಂಗದ ಸರ್ಕಾರ, ‘ಶಬರಿಮಲೆ ದೇವಾಲಯಕ್ಕೆ ಎಲ್ಲ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಸರಿಯಲ್ಲ’ ಎಂದು 2007ರಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಕೊಟ್ಟಿತ್ತಲ್ಲ, ಅದನ್ನು ಮರೆಯುವುದು ಹೇಗೆ? ಕೇರಳ ಎಷ್ಟಾದರೂ ‘ದೇವರ ಸ್ವಂತ ನಾಡು’ ಎಂದು ಪ್ರಸಿದ್ಧ. ಅಲ್ಲಿ ಲಿಂಗ ಸಮಾನತೆಯ ಪಾಡು ಹೀಗಾಗುವುದು ಪ್ರಜ್ಞಾವಂತರಲ್ಲಿ ಗೊಂದಲ ಹುಟ್ಟಿಸುತ್ತಿದೆ. ಕೇರಳದ  ಕೆಲವು ದೇವಾಲಯಗಳಲ್ಲಿ ಪೇರಿಸಲಾಗಿರುವ ಅಪಾರ ಐಶ್ವರ್ಯವನ್ನು ಕಾಯಲು ಭಯಂಕರ ಹಾವುಗಳು ಇವೆಯಂತೆ.

ಯಾವ ಕಾರಣಕ್ಕಾದರೂ ಇರಲಿ, ದೇವಾಲಯದೊಳಗೆ ಹಾವುಗಳನ್ನು ‘ಬಿಟ್ಟುಕೊಳ್ಳುವುದನ್ನು’ ಒಪ್ಪಿಕೊಳ್ಳುವ ಜನ, ಶಬರಿಮಲೆ ದೇವಾಲಯದೊಳಗೆ ಹೆಣ್ಣುಮಕ್ಕಳನ್ನು ಬಿಡುವುದಿಲ್ಲ. ಅವರು ‘ಹೊರಗೆ’ ಕೂರುವುದರಿಂದ ಒಳಗೆ ಪ್ರವೇಶವಿಲ್ಲ. ಈ ನಿಷೇಧವನ್ನು ಪ್ರಶ್ನಿಸುವ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ವಿಚಾರಣೆಯ ಸಂದರ್ಭದಲ್ಲಿ ಕೆಲವು ನ್ಯಾಯಮೂರ್ತಿಗಳು ಕೇಳಿದ ಪ್ರಶ್ನೆಗಳು, ವ್ಯಕ್ತಪಡಿಸಿದ ಅಸಮಾಧಾನಗಳು ಈಗಾಗಲೇ ಎಲ್ಲರಿಗೂ ತಿಳಿದಿವೆ. 

ಹಾಗೆ ನೋಡಿದರೆ ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶ ಕುರಿತ ಈ ಪ್ರಕರಣ, ಸಂವಿಧಾನ ಹೇಳುವ ಲಿಂಗ ಸಮಾನತೆ ಮತ್ತು ವೈಯಕ್ತಿಕ ಧರ್ಮಾಚರಣೆಯ ಹಕ್ಕು ಇವೆರಡರ ನಡುವೆ ಒಂದು ಸಂಘರ್ಷವನ್ನು ತಂದುಹಾಕಿದೆಯೇನೋ ಎಂಬ ಸಂಶಯವನ್ನು ಕೆಲವು ಕಾನೂನು ತಜ್ಞರಲ್ಲಿ ಹುಟ್ಟಿಸಿದೆ. ಆದರೆ ಇಂಥ ಹಲವು ಸಂದರ್ಭಗಳಲ್ಲಿ ತೀರ್ಮಾನಗಳನ್ನು ಕೈಗೊಳ್ಳುವ ಅವಕಾಶ ಹೊಂದಿರುವ ಆಡಳಿತ ನಡೆಸುವ ಸರ್ಕಾರ, ಅಂತಿಮವಾಗಿ ಲಿಂಗ ಸಮಾನತೆಯನ್ನು ಎತ್ತಿ ಹಿಡಿಯಬೇಕು- ಏಕೆಂದರೆ ಇದೇ ನಮ್ಮ ಸಂವಿಧಾನದ ನೆಲೆಗಟ್ಟು. ಎಡರಂಗ ಇದನ್ನು ಎಡಬಲ ನೋಡದೆ ಮಾಡುತ್ತದೆ ಎಂದು ಈಗ ನಂಬಲು ಅವಕಾಶವಿಲ್ಲ.

ಏಕೆಂದರೆ ಈ ಬೇಡಿಕೆಯ ಪರವಾಗಿ ಎಡರಂಗ ತೀರ್ಮಾನ ಕೈಗೊಂಡರೆ ಅದು ಬಲಪಂಥಕ್ಕೆ ವರದಾನ ಆಗುವ ಸಾಧ್ಯತೆ ಇದ್ದೇ ಇರುತ್ತದೆ. ಆದ್ದರಿಂದ ಜನರಿಂದ ಮತದಾನ ಪಡೆಯುವುದೇ ಜಾಣತನ ಎಂದು ಸರ್ಕಾರ ಭಾವಿಸಿರಬಹುದು. ಶಬರಿಮಲೆ ದೇವಾಲಯಕ್ಕೆ ಎಲ್ಲ ಮಹಿಳೆಯರ ಪ್ರವೇಶವನ್ನು ಈ ಮೊದಲಿನ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಐಕ್ಯರಂಗದ (ಯುಡಿಎಫ್) ಸರ್ಕಾರ ಎಂದೂ ಒಪ್ಪಿಕೊಂಡಿರಲಿಲ್ಲ. ಈ ಕುರಿತು ಸಲ್ಲಿಸಿದ ಅಫಿಡವಿಟ್‌ನಲ್ಲಿ ‘ಭಕ್ತರ ನಂಬಿಕೆಗಳು ಮತ್ತು ಆಚರಣೆಗಳನ್ನು ಒಂದು ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಬದಲಾಯಿಸಲು ಸಾಧ್ಯವಿಲ್ಲ.

ಈ ವಿಚಾರದಲ್ಲಿ ಪುರೋಹಿತರ ತೀರ್ಮಾನವೇ ಅಂತಿಮ’ ಎಂದು ಸ್ಪಷ್ಟವಾಗಿ ಹೇಳಿ, ತನ್ನ ಹಿಂದಿನ ಎಡರಂಗ ಸರ್ಕಾರ ಸಲ್ಲಿಸಿದ್ದ ‘ಪ್ರಮಾದಕರ’ ಅಫಿಡವಿಟ್ ಅನ್ನು ವಾಪಸ್ ಪಡೆದಿತ್ತು. ಆದರೆ ಅದರಿಂದ ಐಕ್ಯರಂಗಕ್ಕೆ ಚುನಾವಣೆಯಲ್ಲಿ ಯಾವ ಲಾಭವೂ ಆಗಲಿಲ್ಲ. ಆದರೆ ‘ಸಂಪ್ರದಾಯಗಳು ಸಂವಿಧಾನದತ್ತ ಹಕ್ಕುಗಳಿಗಿಂತ ಮೇಲಿವೆಯೇ?’ ಎಂದು ಸವೋಚ್ಚ ನ್ಯಾಯಾಲಯವೇ ಕೇಳಿದೆಯಲ್ಲ, ಅದನ್ನು ಮರೆಯುವುದು ಹೇಗೆ? ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಮಾತ್ರವಲ್ಲ, ಜನರೂ ನ್ಯಾಯಾಲಯದ ತೀರ್ಪುಗಳನ್ನು ತಮ್ಮ ದೃಷ್ಟಿಕೋನಕ್ಕೆ ತಕ್ಕ ಹಾಗೆ ಒಪ್ಪಿಕೊಳ್ಳುತ್ತಾರೆ ಅಥವಾ ಒಪ್ಪಿಕೊಳ್ಳುವುದಿಲ್ಲ.

ಸಂವಿಧಾನದ ಪ್ರಕಾರ ಪ್ರಮಾಣ ಮಾಡಿರುವ ಎಡರಂಗ ಸರ್ಕಾರ, ದೇವಾಲಯ ಮಂಡಳಿಗಳೆಂಬ ಮಾಫಿಯಾಗೆ ತಲೆಬಾಗುವುದನ್ನೂ ನೋಡಬೇಕಾಗಿದೆ. ಹಿಂದಿನಿಂದ ಬಂದ ನಂಬಿಕೆಗಳಿಗಾಗಿ ತನ್ನ ಎಂದಿನ ನಂಬಿಕೆಗಳನ್ನೂ ಬಿಟ್ಟುಕೊಡಬೇಕಾಗಿದೆ. ಹಾಗಾದರೆ, ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಮುಕ್ತ ಪ್ರವೇಶ ಇರಬೇಕು ಎಂದು ಈಗ ಆಗ್ರಹಿಸುವವರು ಯಾರು? ಯಾವ ರಾಜಕೀಯ ಪಕ್ಷ ಅದರ ಪರವಾಗಿದೆ? ಎಡ ಕೊಲ್ಲಲ್ ಬಲ ಕಾಯ್ವುದೇ? ‘ಮತ’ ಎಂಬ ಪದಕ್ಕಿರುವ ಎಲ್ಲ ಅರ್ಥಗಳೂ ರಾಜಕೀಯ ಪಕ್ಷಗಳ ಬಹುಮತವನ್ನು ಮತ್ತು ಸಿದ್ಧಾಂತವನ್ನು ಹೆಂಗೆ ಹೆದರಿಸುತ್ತವೆ! ಅಯ್ಯಯ್ಯಪ್ಪ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT