ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿಯ ತೇರು ಹೊರಡಲೇ ಇಲ್ಲ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ನಾನು ಪೊಲೀಸ್ ಇಲಾಖೆಗೆ ಸೇರಿದಾಗ ಮೈಸೂರಿನಲ್ಲಿ ನಮಗೆಲ್ಲಾ ತರಬೇತಿ ಕೊಟ್ಟರು. ಕೆಲಸಕ್ಕೆ ಸೇರುವಾಗ `ಭಾರತ ನಮ್ಮ ರಾಷ್ಟ್ರೀಯತೆ; ಖಾಕಿಯೇ ನಮ್ಮ ಧರ್ಮ. ಜಾತಿ ಭೇದವಿಲ್ಲದೆ ಕೆಲಸ ಮಾಡಬೇಕು~ ಎಂದೇ ನಾವು ಪ್ರಮಾಣವಚನ ಸ್ವೀಕರಿಸಿದ್ದೆವು.

ಪ್ರಮಾಣವಚನ ಸ್ವೀಕರಿಸುವಾಗ ನಮಗೆಲ್ಲಾ ಹೆಮ್ಮೆ ಎನ್ನಿಸುತ್ತಿತ್ತು. ತರಬೇತಿ ಸಂದರ್ಭದಲ್ಲಿ ಜಾತೀಯತೆಯ ಲವಲವೇ ಶವೂ ನಮಗೆ ಕಂಡಿರಲಿಲ್ಲ. ಮೆಸ್‌ಗಳಲ್ಲಿ ಒಟ್ಟೊಟ್ಟಿಗೆ ಎಲ್ಲರೂ ಊಟ ಮಾಡುತ್ತಿದ್ದೆವು. ಒಟ್ಟಿಗೆ ಕೂರುತ್ತಿದ್ದೆವು. ಕಾಫಿ-ಟೀ ಕುಡಿಯು ತ್ತಿದ್ದೆವು. ಚರ್ಚೆ ನಡೆಸುತ್ತಿದ್ದೆವು. ಕಾಲೇಜಿನಲ್ಲಿ ಓದುವಾಗ ಹೇಗೆ ಇದ್ದೆವೋ ಅದೇ ವಾತಾವರಣ ತರಬೇತಿ ವೇಳೆಯಲ್ಲೂ ಇತ್ತು. ಇಲಾಖೆಯ ಬಗ್ಗೆ ಹೆಮ್ಮೆ ಮೂಡಿತ್ತು.

ಆದರೆ, ಪೋಸ್ಟಿಂಗ್ ಆದ ನಂತರ ನಮಗೆ ಅಲ್ಲೂ ಜಾತೀಯತೆ ಇದೆಯೆಂಬುದು ಕಾಣಿಸತೊಡಗಿತು. ಕೆಲವು ಅಧಿಕಾರಿಗಳು ಅದಕ್ಕೆ ಅಪವಾದ ಎಂಬಂತಿದ್ದರು. ನನಗೆ ಬಾಣಸವಾಡಿ ಪೊಲೀಸ್ ಠಾಣೆಗೆ ಕಾನೂನು ಮತ್ತು ಸುವ್ಯವಸ್ಥೆ ಸಬ್ ಇನ್ಸ್‌ಪೆಕ್ಟರ್ ಆಗಿ ಮೊದಲು ಪೋಸ್ಟಿಂಗ್ ಆದದ್ದು. ಬಾಣಸವಾಡಿಯ ಆಂಜನೇಯಸ್ವಾಮಿ ದೇವಸ್ಥಾನ ಪ್ರಖ್ಯಾತವಾದದ್ದು. ಪ್ರತಿಷ್ಠಿತರೆಲ್ಲಾ ಆ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು.
 
ಒಮ್ಮೆ ಹೈಕೋರ್ಟ್ ನ್ಯಾಯಮೂರ್ತಿ ಬರುತ್ತಾರೆಂಬ ಕಾರಣಕ್ಕೆ ಅಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ರಾಜಗೋಪುರದ ಹೊರಗೆ ಕಾಂಪೌಂಡ್ ಪಕ್ಕ ವಯಸ್ಸಾದ ದಂಪತಿ ಹಣ್ಣುಕಾಯಿ ಇಟ್ಟುಕೊಂಡು ಕಾಯುತ್ತಿದ್ದರು. ಅವರನ್ನು ನೋಡಿದರೆ ದುಡಿಯುವ ವರ್ಗದ ಜನ ಎಂಬುದು ಸ್ಪಷ್ಟವಾಗುತ್ತಿತ್ತು.

ನಾನು ಅವರನ್ನೇ ಗಮನಿಸ ತೊಡಗಿದೆ. ಸ್ವಲ್ಪ ಹೊತ್ತಿನ ನಂತರ ಕೈಲಿದ್ದ ಹಣ್ಣು-ಕಾಯಿ ತಟ್ಟೆಯನ್ನು ಮೆಟ್ಟಿಲ ಮೇಲಿಟ್ಟರು. ಓಡಾಡುವವರಿಗೆ ಅದು ಅಡ್ಡವಾಗುತ್ತಿತ್ತು. ಅದನ್ನು ತೆಗೆದು ಒಳಗೆ ಹೋಗಲು ಹೇಳಿ ಎಂದು ಅರ್ಚಕರಿಗೆ ಸೂಚಿಸಿದೆ. ಅವರು ದಲಿತರಂತೆ, ಒಳಗಡೆ ಹೋಗುವುದಿಲ್ಲವಂತೆ ಎಂದರು.

ನನಗೆ ಆಶ್ಚರ್ಯವಾಯಿತು. ಅವರನ್ನು ಒಳಗೆ ಬಿಡೋದಕ್ಕೆ ಅರ್ಚಕರ ವಿರೋಧ ಏನಾದರೂ ಇದೆಯಾ ಎಂದು ಖಾತರಿಪಡಿಸಿಕೊಂಡೆ. ಅರ್ಚಕರು ಒಳ್ಳೆಯವರು. ಅವರೇನೂ ತಡೆಯುತ್ತಿರಲಿಲ್ಲ. ಇವರೇ ಒಳಗೆ ಹೋಗಲು ಸಿದ್ಧರಿರಲಿಲ್ಲ. ಅಲ್ಲಿ ಮೊದಲಿನಿಂದ ಮೇಲ್ಜಾತಿ, ಕೆಳಜಾತಿ ಎಂಬ ಭೇದ ಭಾವ ಬೆಳೆದುಕೊಂಡು ಬಂದಿತ್ತು.

ದೇವರ ಮೂರ್ತಿಯನ್ನು ನೋಡಲು ಒದ್ದಾಡುತ್ತಿದ್ದ ಆ ದಂಪತಿ ನಾನು ಎಷ್ಟೇ ಹೇಳಿದರೂ ಒಳಗೆ ಹೋಗಲೇ ಇಲ್ಲ. ಅರ್ಚಕರು ಅವರ ಹಣ್ಣು- ಕಾಯಿಯನ್ನು ಪೂಜೆ ಮಾಡಿ ತಂದುಕೊಟ್ಟರಷ್ಟೆ. ಆಮೇಲೆ ಅದನ್ನು ಕಣ್ಣಿಗೊತ್ತಿಕೊಂಡು ಹೊರಟರು.

ಅಸ್ಪೃಶ್ಯತೆ ಹೋಗಲಾಡಿಸಲು ಮಹಾತ್ಮ ಗಾಂಧಿ, ಅಂಬೇಡ್ಕರ್ ಮಾಡಿದ ಹೋರಾಟ ನಮಗೆ ಗೊತ್ತಿತ್ತು. ಆ ಸಮಸ್ಯೆ ನಿವಾರಣೆಗೆ ಇದ್ದ ಕಾನೂನುಗಳ ಅರಿವೂ ಇತ್ತು. ಆದರೂ ಏನೂ ಮಾಡಲು ಆಗಲಿಲ್ಲ. ಆ ದಲಿತ ದಂಪತಿ ದೇವಸ್ಥಾನದೊಳಕ್ಕೆ ಕಾಲಿಡಲೇ ಇಲ್ಲ. ಆಗ ನಾನು ಸೋತುಬಿಟ್ಟೆ ಎನ್ನಿಸಿತು. ಇಲಾಖೆಗೆ ಆಗಿನ್ನೂ ಸೇರಿದ್ದ ನಾನು ಪಿಳಿಪಿಳಿ ಕಣ್ಣುಬಿಡುತ್ತಿದ್ದವನು. ಈಗ ಇದ್ದ ಧೈರ್ಯ ಆಗ ಇದ್ದಿದ್ದರೆ ಆ ದಂಪತಿಯನ್ನು ನಾನೇ ಕೈಹಿಡಿದು ದೇವಸ್ಥಾನದೊಳಕ್ಕೆ ಕರೆದುಕೊಂಡು ಹೋಗಿರುತ್ತಿದ್ದೆ.

ಆಮೇಲೆ ನನಗೆ ವರ್ಗಾವಣೆಗಳಾಗಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಬಂದೆ. ಆ ಠಾಣೆಯ ವ್ಯಾಪ್ತಿಯಲ್ಲೂ ಜಮೀನ್ದಾರರ ಪಾಳೇಗಾರಿಕೆ, ಜೀತಪದ್ಧತಿ, ಜಾತಿಭೇದ ಎಲ್ಲವೂ ಎದ್ದುಕಾಣುತ್ತಿತ್ತು. ಅಲ್ಲಿ ಥಣಿಸಂದ್ರ ಎಂಬ ಗ್ರಾಮ. ಆಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ.

ದೇವೇಗೌಡರು ಬಲಾಢ್ಯ ಮಂತ್ರಿ. ಆ ಹಳ್ಳಿಯಲ್ಲಿ ನಡೆಯುತ್ತಿದ್ದ ವಿಶೇಷ ಜಾತ್ರೆ ಕಾರಣಾಂತರಗಳಿಂದ ನಿಂತುಹೋಗಿತ್ತು. ನಾನು ಕೆ.ಜಿ.ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆ ಜಾತ್ರೆ ಮತ್ತೆ ಪ್ರಾರಂಭವಾಗುವ ವಿಷಯ ತಿಳಿಯಿತು. `ವಿಲೇಜ್ ಕ್ರೈಮ್ ಹಿಸ್ಟರಿ~ (ವಿಸಿಎಚ್) ಎಂದು ಠಾಣೆಗಳಲ್ಲಿ ದಾಖಲೆ ಇರುತ್ತದೆ. ಥಣಿಸಂದ್ರದ ವಿಸಿಎಚ್ ನೋಡಿದಾಗ ಅಲ್ಲಿ ಜಾತಿಭೇದ ಬೇರೂರಿದ್ದು, ಆಗಾಗ ಅಲ್ಲಿ ಗಲಭೆಗಳೂ ನಡೆಯುತ್ತಿತ್ತೆಂಬುದು ತಿಳಿಯಿತು.

ಜಾತ್ರೆಗೆ ಬೆಳಿಗ್ಗೆ ಸಿದ್ಧತೆ ನಡೆಯುವಾಗಲೇ ನಾನು ಒಂದು ರೌಂಡ್ ಹೊರಟೆ. ಆ ದಿನ ಪ್ರತಿ ಮನೆಯಲ್ಲಿ ಬಾಡೂಟ ಸಿದ್ಧವಾಗುತ್ತಿತ್ತು. ದೇವಿಯ ಜಾತ್ರೆ ಅದು. ದೇವಸ್ಥಾನಕ್ಕೆ ಮನೆಮನೆಯಿಂದ ತಂಬಿಟ್ಟಿನ ಆರತಿ. ಆರತಿ ಬೆಳಗಿದ ನಂತರ ನೆಂಟರಿಷ್ಟರಿಗೆ ಬಾಡೂಟ ಹಾಕಿ ಕಳುಹಿಸುವುದು ಸಂಪ್ರದಾಯ. ಎಲ್ಲ ಜಾತಿಗಳ, ಧರ್ಮಗಳ ಜನ ಇದ್ದಂಥ ಗ್ರಾಮ ಥಣಿಸಂದ್ರ.

ಬೆಳಗಿನಿಂದ ಊರಿಗೆ ಊರೇ ಸಜ್ಜಾಗುತ್ತಿತ್ತು. ಇಡೀ ಊರು ಉತ್ಸಾಹದಿಂದಿತ್ತು. ಪ್ರತಿ ಮನೆಯ ಮುಂದೆ ಸಗಣಿ ನೀರಿನಿಂದ ಸಾರಿಸಿ, ಹಸನಾದ ರಂಗೋಲಿಗಳನ್ನಿಟ್ಟದ್ದರು. ಯುವಕರೆಲ್ಲಾ ತಲೆಗೆ ಎಣ್ಣೆಹಚ್ಚಿಕೊಂಡು ಸ್ನಾನ ಮಾಡಲು ಸಿದ್ಧರಾಗು ತ್ತಿದ್ದರು. ಸಂಜೆವರೆಗೆ ಊರು ಕಳೆಕಳೆಯಾಗಿ ಕಂಡಿತು.

ತೇರನ್ನೆಳೆಯುವುದು ಸಂಜೆಯ ನಂತರ. ತಹಸೀಲ್ದಾರ್ ಸಮ್ಮುಖದಲ್ಲೇ ಅದನ್ನೆಳೆಯುವುದು ರೂಢಿ.ಆ ಊರಿನಲ್ಲಿದ್ದ ಜಮೀನ್ದಾರರ ಮನೆಯಿಂದ ತೇರು ಹೊರಡುತ್ತಿತ್ತು. ಅವರೇನೋ ಒಳ್ಳೆಯವರೇ ಆಗಿದ್ದರು. ಅವರು ಒಂದು ಸಮಸ್ಯೆ ಇದೆ ಎಂದು ಊರಿನವರ ಸಮ್ಮುಖದಲ್ಲಿ ಮಾತು ಪ್ರಾರಂಭಿಸಿ ದರು. ನಾವೆಲ್ಲಾ ಕಿವಿಗೊಟ್ಟೆವು.
 
`ದೇವರು ಹೊರಡುತ್ತದೆ. ಆದರೆ, ಮುಖ್ಯರಸ್ತೆಯಲ್ಲಿ ಮಾತ್ರ. ಅದು ಹರಿಜನರ ಕೇರಿಗೆ ಹೋಗುವುದಿಲ್ಲ~ ಎಂದು ಅವರು ಘೋಷಿಸಿಬಿಟ್ಟರು. ಅದರಿಂದ ಹರಿಜನರ ಕೇರಿಯವರಲ್ಲಿ ಗುಸುಗುಸು ಪ್ರಾರಂಭವಾಯಿತು.

ಇನ್ಸ್‌ಪೆಕ್ಟರ್ ಸಿ.ಕೆ.ನಾಗರಾಜ್ ಹಾಗೂ ಎಸಿಪಿ ರಂಗೇಗೌಡರಿಗೆ ನಾನು ವಿಷಯ ತಿಳಿಸಿದೆ. ನಿಯಮದ ಪ್ರಕಾರ ತೇರು ಎಲ್ಲಾ ಬೀದಿಗಳಲ್ಲೂ ಹೋಗಬೇಕು. ಅದಕ್ಕೆ ಒಪ್ಪಲೇಬೇಕೆಂದು ಮನದಟ್ಟು ಮಾಡಿಸುವಂತೆ ಅವರು ನನಗೆ ಹೇಳಿದರು. ಅವರಿಬ್ಬರೂ ಜಾತಿಪ್ರಜ್ಞೆಗೆ ವಿರುದ್ಧ ವಾಗಿದ್ದಾರಲ್ಲ ಎಂದು ನನಗೆ ಖುಷಿಯಾಯಿತು.

ಜಮೀನ್ದಾರರ ಮಾತನ್ನು ಊರಿನ ಮೇಲ್ಜಾತಿಯವರೆಲ್ಲಾ ಒಪ್ಪಿದರು. ಅದು ಸರಿಯಲ್ಲ. ನಿಯಮಾನುಸಾರವೇ ತೇರನ್ನು ಎಳೆಯಬೇಕು. ಅದನ್ನು ಅವರಿಗೆಲ್ಲಾ ಮನವರಿಕೆ ಮಾಡಿಕೊಡಿ ಎಂದು ತಹಸೀಲ್ದಾರರಿಗೂ ಸೂಚಿಸಿದೆ. ಊರಿನವರು ಅದಕ್ಕೆ ಒಪ್ಪಲಿಲ್ಲ. ತಲೆಗಳು ಬಿದ್ದುಹೋಗುತ್ತವೆ ಎಂದು ವಾದಿಸತೊಡಗಿದರು.

ನಾನು ಹರಿಜನರ ಕೇರಿಗೆ ಹೋದೆ. ಅಲ್ಲಿನ ಪ್ರತಿ ಮನೆಯ ಮುಂದೆಯೂ ತುಂಬಾ ಅಚ್ಚುಕಟ್ಟಾಗಿ ಸಗಣಿ ಸಾರಿಸಿದ್ದರು. ಹಾಕಿದ್ದ ಪ್ರತಿ ರಂಗೋಲಿಯಲ್ಲೂ ಶ್ರದ್ಧೆಯ ಗೆರೆಗಳು ಅಡಗಿದ್ದವು. ತೆನೆಯ ದೀಪ, ತಂಬಿಟ್ಟಿನ ದೀಪ, ಹತ್ತಿಯ ದೀಪ, ಹೂವಿನ ದೀಪ ಸಿದ್ಧ ಮಾಡಿಕೊಂಡು ತೇರು ತಮ್ಮ ಬೀದಿಗೂ ಬಂದೀತು ಎಂದು ಎಲ್ಲರೂ ಕಾದುಕೊಂಡಿದ್ದರು. ಯುವಕರಾರೂ ಮದ್ಯಪಾನ ಮಾಡಿರಲಿಲ್ಲ.

ನಾನು ಆ ಕೇರಿಗೆ ಹೋದದ್ದೇ ಹತ್ತು ಜನ ಅಜ್ಜಿಯರು ನನ್ನನ್ನು ಮುತ್ತಿಕೊಂಡರು. `ಊರಿಂದ ಎಲ್ಲರನ್ನೂ ಕರೆಸಿದ್ದೇವೆ. ಆರತಿ ಎತ್ತದೆ ಊಟ ಹಾಕುವ ಹಾಗಿಲ್ಲ. ಒಂದು ಸಲ ತೇರು ಈ ಗಲ್ಲಿಗೆ ಬಂದು ಹೋಗುವಂತೆ ಮಾಡಿ ಪುಣ್ಯ ಕಟ್ಕೊಳಿ~ ಎಂದು ಅವಲತ್ತುಕೊಂಡರು.

ದಲಿತರ ಕೇರಿಯಲ್ಲಿ ತೇರು ಬರಲೇಬೇಕು. ಇಲ್ಲದಿದ್ದರೆ ತೇರು ಹೊರಡಲು ಬಿಡುವುದೇ ಇಲ್ಲ ಎಂದು ನಾನು ಪಟ್ಟುಹಿಡಿದೆ. ಅಷ್ಟುಹೊತ್ತಿಗಾಗಲೇ ಮಂತ್ರಿ ಮಹೋದಯರಿಗೆಲ್ಲಾ ವಿಷಯ ತಲುಪಿ, ನಾನು ಹರಿಜನರ ಪರವಾಗಿರುವುದು ಸರಿಯಲ್ಲ ಎಂಬಂಥ ಒತ್ತಡ ಕೂಡ ಬರತೊಡಗಿತು. ಅದ್ಯಾವುದಕ್ಕೂ ನಾನು ಜಗ್ಗಲಿಲ್ಲ. ತೇರು ನಿಂತಿದ್ದ ಕಡೆ ಯುವಕರ ಗುಂಪು ಜಗಳಕ್ಕೆ ಸಿದ್ಧ ಎನ್ನುವಂತೆ ನಿಂತಿತ್ತು. ನಾಲ್ಕೈದು ವ್ಯಾನುಗಳಲ್ಲಿ ಪೊಲೀಸರು ಕೂಡ ಬಂದರು.

ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂಬುದು ಗೊತ್ತಾದ ಮೇಲೆ ಅವರವರಲ್ಲೇ ಗುಸುಗುಸು ಶುರುವಾಯಿತು. ತೇರು ಎಳೆದೇ ತೀರುತ್ತೇವೆ ಎಂಬಂತೆ ಮಾತನಾಡುತ್ತಿದ್ದ ಕೆಲವರನ್ನು ಎಚ್ಚರಿಸಿದೆ. ದಲಿತ ಕೇರಿಗೆ ಹೋಗದೇ ಇದ್ದಲ್ಲಿ, ತೇರು ಎಳೆಯುವವರನ್ನೆಲ್ಲಾ ಕಾನೂನಿನ ಪ್ರಕಾರ ಬಂಧಿಸುವ ಅವಕಾಶವೂ ಇದೆ; ಅಷ್ಟು ಕಠೋರವಾಗುವಂತೆ ಮಾಡಬೇಡಿ ಎಂದು ಕೂಡ ಹೇಳಿದೆ. ಕೊನೆಗೆ ಅವರೆಲ್ಲಾ ಮಾತನಾಡಿಕೊಂಡು ತೇರನ್ನೇ ಎಳೆಯದೆ ಅಲ್ಲಿಯೇ ಪೂಜೆ ಮಾಡಿಕೊಂಡು ಹೋಗಬೇಕೆಂಬ ತೀರ್ಮಾನಕ್ಕೆ ಬಂದರು.

ದಲಿತಕೇರಿಗೆ ಮಾತ್ರ ತೇರು ಹೋಗಕೂಡದೆಂಬ ಹಟಕ್ಕೆ ಊರಿಗೆ ಊರೇ ಬಿದ್ದಿತು. ದಲಿತ ಸಂಘರ್ಷ ಸಮಿತಿಯಲ್ಲಿ ಈಗ ಇರುವ ಲಕ್ಷ್ಮೀನಾರಾಯಣ ನಾಗವಾರ ಆಗ ಆ ಊರಿನ ಸಣ್ಣ ಹುಡುಗ. ಆ ಹುಡುಗನ ಮುಖದಲ್ಲಿಯೂ ಜಾತೀಯತೆಯಿಂದ ಆದ ನೋವು
ಎದ್ದುಕಾಣುತ್ತಿತ್ತು.

ಪೂಜೆ ಆದ ನಂತರ ಊರಿನ ಕೆಲವು ಮನೆಯವರು ನನ್ನನ್ನು ಊಟಕ್ಕೆ ಕರೆದರು. ನಾನು ಯಾರ ಮನೆಗೂ ಹೋಗದೆ ಹರಿಜನರ ಕೇರಿಯಲ್ಲೇ ಇದ್ದೆ. ಒಬ್ಬರು ಅಜ್ಜಿ ತಂಬಿಟ್ಟು ಕೊಟ್ಟರು. ಅದನ್ನೇ ತಿಂದು ತೃಪ್ತನಾದೆ. ಜಾತಿಯ ಕಾರಣಕ್ಕೆ ಹಟಕ್ಕೆ ಬಿದ್ದ ಯಾರ ಮನೆಯಲ್ಲೂ ಊಟ ಮಾಡುವುದಿಲ್ಲ ಎಂದು ಹೇಳಿ ನಾನು ಆ ದಿನ ನನ್ನದೇ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.

ಮುಂದಿನ ವಾರ: ಪೊಲೀಸ್ ಇಲಾಖೆಯಲ್ಲಿ ಕಂಡ ಜಾತೀಯತೆ, ವೃತ್ತಿಮಾತ್ಸರ್ಯ
ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT