ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರು ಕೇವಲ ಉತ್ಸವಮೂರ್ತಿ?

Last Updated 19 ಜೂನ್ 2017, 19:30 IST
ಅಕ್ಷರ ಗಾತ್ರ

ಕಳೆದ ವಾರ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು. ಜೆಡಿಎಸ್ ಬೆಂಬಲದಿಂದ ಶಂಕರಮೂರ್ತಿ ಉಳಿದುಕೊಂಡರು. ಕಾಂಗ್ರೆಸ್ಸಿಗರು ಏನೋ ಕಡಿದು ಕಟ್ಟೆ ಹಾಕಿಬಿಡುತ್ತಾರೆಂದು ನಿರೀಕ್ಷಿಸಿದ್ದವರೆಲ್ಲ ನಿರಾಶರಾದರು. ಜೆಡಿಎಸ್ ಬೆಂಬಲವಿಲ್ಲದೇ ಈ ಕಾರ್ಯದಲ್ಲಿ ಯಶಸ್ಸು ಸಿಗಬಹುದು ಎಂದು ಕಾಂಗ್ರೆಸ್ ಭಾವಿಸಿರಬೇಕು ಅಥವಾ ಬದಲಾಗುತ್ತಿರುವ ರಾಜಕಾರಣದಲ್ಲಿ ಜೆಡಿಎಸ್ ಬೆಂಬಲಿಸಬಹುದೆಂಬ ನಂಬಿಕೆ ಹುಟ್ಟಿರಬಹುದು. ಆದರೂ ಕಾಂಗ್ರೆಸ್‌ನ ದುಡುಕಿನ ನಿರ್ಧಾರಕ್ಕೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಕೆಲವು ಹೊಳಹುಗಳಂತೂ ಇವೆ.

ಕಳೆದ ವಾರ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಎಚ್.ಡಿ.ದೇವೇಗೌಡರು ಅತಿಥಿಯಾಗಿದ್ದ, ಚಿತ್ರನಟ ರಮೇಶ್ ಅರವಿಂದ್ ನಡೆಸಿಕೊಡುವ ‘ವೀಕ್ ಎಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಗಮನ ಸೆಳೆದದ್ದು ದೇವೇಗೌಡರ ಕುಟುಂಬದ ಬಹುತೇಕ ಸದಸ್ಯರು ಹಾಜರಿದ್ದರೂ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅನುಪಸ್ಥಿತಿ. ಈ ದಂಪತಿ ದೇವೇಗೌಡರ ಬಗ್ಗೆ ತಮ್ಮ ಮನೆಯಲ್ಲಿ ಮಾತನಾಡಿದ್ದನ್ನು ಚಿತ್ರೀಕರಿಸಿ ಪ್ರಸಾರ ಮಾಡಲಾಗಿತ್ತು. ಕುಟುಂಬದ ಎಲ್ಲರಿಗಿಂತ ಇವರು ವಿಭಿನ್ನ ಎನ್ನುವುದು ಮತ್ತೊಮ್ಮೆ ಗೊತ್ತಾಯಿತು.

ಈ ಕಾರ್ಯಕ್ರಮದಲ್ಲಿ ಮತ್ತೊಂದು ಪ್ರಹಸನವೂ ನಡೆಯಿತು. 2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜತೆಗೂಡಿ ರಚಿಸಿದ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಗ್ಗೆ ದೇವೇಗೌಡರ ಪತ್ನಿ, ಪುತ್ರರು ಸ್ಪರ್ಧೋಪಾದಿಯಲ್ಲಿ ಸ್ಪಷ್ಟೀಕರಣ ನೀಡಿದರು. ‘ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಬಿಜೆಪಿ ಜತೆ ಕೈಜೋಡಿಸಿ, ಬಹಿರಂಗವಾಗಿ ತಮಗೂ ಈ ಬೆಳವಣಿಗೆಗೂ ಯಾವುದೇ ಸಂಬಂಧ  ಇಲ್ಲ ಎಂಬಂತೆ ಗೋಸುಂಬೆತನ ಪ್ರದರ್ಶಿಸಿದ್ದಾರೆ ಎಂದು ಅನೇಕ ಮಂದಿ ಭಾವಿಸಿದ್ದಾರೆ. ಆದರೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವ ದಿನ ಅವರ ಪ್ರಮಾಣವಚನ ತಡೆಗಟ್ಟುವ ನಿಟ್ಟಿನಲ್ಲಿ ಮನವೊಲಿಸುವುದಕ್ಕೆ ನನ್ನನ್ನು ಮತ್ತು ರೇವಣ್ಣನನ್ನು ಕುಟುಂಬದ ಗೆಳೆಯರೊಬ್ಬರ ಜತೆ ಕಣ್ಣೀರಿಡುತ್ತಾ ಕಳಿಸಿದ್ದರು. ಆದರೆ ಆ ಪ್ರಯತ್ನ ಫಲ ನೀಡಲಿಲ್ಲ. ಇದರಲ್ಲಿ ದೇವೇಗೌಡರ ಪಾತ್ರ ಇರಲಿಲ್ಲ’ ಎಂದು ಬಾಲಕೃಷ್ಣಗೌಡ ಹೇಳಿದರೆ, ಕಾರ್ಯಕ್ರಮದಲ್ಲಿ ಪ್ರಸಾರವಾದ ಕುಮಾರಸ್ವಾಮಿ ಅವರ ಮಾತುಗಳೂ ಇದೇ ಅಂಶಕ್ಕೆ ಒತ್ತು ನೀಡಿತ್ತು. ‘ನಾನು ರಾಜಕೀಯವಾಗಿ ಕೈಗೊಂಡ ನಿರ್ಧಾರದಿಂದ ನನ್ನ ತಂದೆಗೆ ನೋವು ಕೊಟ್ಟಿದ್ದೇನೆ. ಅದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು’ ಎನ್ನುವ ಮೂಲಕ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರಕ್ಕೆ ದೇವೇಗೌಡರ ಸಮ್ಮತಿ ಇರಲಿಲ್ಲ ಎನ್ನುವುದನ್ನು ನಂಬಿಸುವ ಪ್ರಯತ್ನ ನಡೆಸಿದರು. ರೇವಣ್ಣ ಕೂಡ, ‘ನಮ್ಮ ಕುಟುಂಬದಲ್ಲಿ ಯಾವುದೇ ಒಡಕು ಇಲ್ಲ. ನಮಗೆ ದೇವೇಗೌಡರ ನಿರ್ಧಾರವೇ ಅಂತಿಮ, ಕುಮಾರಸ್ವಾಮಿ ನಿರ್ಧಾರವೇ ಅಂತಿಮ’ ಎನ್ನುವ ಮೂಲಕ ಇನ್ನೊಂದು ರೀತಿಯ ಸ್ಪಷ್ಟನೆ ನೀಡುವ ಪ್ರಯತ್ನ ನಡೆಸಿದರು.   

ಈ ಎಲ್ಲರ ಮಾತುಗಳು ನಿಜವೂ ಇರಬಹುದು, ಸುಳ್ಳೂ ಇರಬಹುದು. ಬಿಜೆಪಿ ಜತೆ ಸರ್ಕಾರ ರಚಿಸುವುದಕ್ಕೆ ದೇವೇಗೌಡರೇ ನಿರ್ಧಾರ ಕೈಗೊಂಡಿರಲಿ, ತಮ್ಮ ಅಧಿಕಾರದ ಆಸೆಗಾಗಿ ಕುಮಾರಸ್ವಾಮಿಯೇ ಕೈಗೊಂಡಿರಲಿ, ತಮ್ಮ ತಂದೆಯ ಗೌರವ ಕಾಪಾಡುವುದಕ್ಕೆ ಬಹಿರಂಗವಾಗಿ ಮಕ್ಕಳು ನಡೆಸುವ ಇಂಥ ಪ್ರಯತ್ನ ತಪ್ಪೂ ಅಲ್ಲ, ಅಪರಾಧವೂ ಅಲ್ಲ. ನಾನೂ ಕೂಡ ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿಸಲು ಬಿಜೆಪಿ ಜತೆ ಕೈಜೋಡಿಸಿದ್ದರೆಂದು ಆ ಸಂದರ್ಭದಲ್ಲಿ ನಂಬಿರಲಿಲ್ಲ. ಆದರೆ ನನ್ನ ಈ ನಂಬಿಕೆ ತಪ್ಪೂ ಇರಬಹುದು.  ಆದರೆ ಈಗಲೂ ಆ ನಂಬಿಕೆ ಅಲುಗಿಸುವಂಥ ಆಧಾರಗಳು ಸಿಕ್ಕಿಲ್ಲ. ಅದಕ್ಕೆ ತಕ್ಕ ತರ್ಕಗಳೂ ಇಲ್ಲ. ಇದು ನನ್ನ ಅಂತರಂಗದ ಪ್ರಬಲ ನಂಬಿಕೆ. ಯಾಕೆಂದರೆ ತೊಂಬತ್ತರ ದಶಕದ ಆರಂಭದ ಒಂದೆರಡು ವರ್ಷ ಅವರ ಜತೆ ತುಂಬ ಹತ್ತಿರದ ಒಡನಾಟ (ಈ ಬಗ್ಗೆ ಇನ್ನೊಮ್ಮೆ ಬರೆಯುವೆ) ಇರಿಸಿಕೊಂಡಿದ್ದರಿಂದ ಇಂಥ ಆರೋಪವನ್ನು ನಂಬುವುದಕ್ಕೆ ತಕ್ಕಂಥ ವರ್ತನೆಯನ್ನು ನಾನು ಅವರಲ್ಲಿ ಕಂಡಿರಲಿಲ್ಲ.

ಹಾಗೆ ನೋಡಿದರೆ ದೇವೇಗೌಡರ ರಾಜಕೀಯ ಉತ್ತರಾಧಿಕಾರಿಯಂತೆ ಕಂಡಿದ್ದವರು ಅವರ ನೆರಳಿನಂತಿದ್ದ ಇನ್ನೋರ್ವ ಪುತ್ರ ರೇವಣ್ಣ. ಜಿಲ್ಲಾ ಪಂಚಾಯಿತಿ ಮೂಲಕ ರಾಜಕೀಯ ಪ್ರವೇಶಿಸಿದ್ದ ರೇವಣ್ಣ 1994ರಲ್ಲಿ ಮೊದಲ ಸಲ ವಿಧಾನಸಭೆಯನ್ನು ಪ್ರವೇಶಿಸಿದರು. 1996ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ರಾಜ್ಯದ ಮುಖ್ಯಮಂತ್ರಿಯಾದ ಜೆ.ಎಚ್.ಪಟೇಲ್ ಸಂಪುಟದಲ್ಲಿ ಮಂತ್ರಿಯಾಗಿದ್ದವರು. ಕೆಪಿಟಿಸಿಎಲ್‌ನಲ್ಲಿ ನಾನು ಬಲ್ಲ ಅತ್ಯಂತ ಪ್ರಾಮಾಣಿಕ ಎಂಜಿನಿಯರ್ ಒಬ್ಬರ ಪ್ರಕಾರ ರೇವಣ್ಣ ಆಡಳಿತದಲ್ಲಿ ಇಂಧನ ಇಲಾಖೆಯಲ್ಲಿ ಆದ ಪ್ರಗತಿ ಇನ್ಯಾವ ಸಂದರ್ಭದಲ್ಲೂ ಆಗಿರಲಿಲ್ಲ. ಅವರು ನನಗೆ, ‘ನೀವು ದೇವೇಗೌಡರನ್ನು, ಅವರ ಕುಟುಂಬದ ಸದಸ್ಯರನ್ನು ಏನೇ ಟೀಕಿಸಬಹುದು. ಆದರೆ ರೇವಣ್ಣ ಅವರು ಮಾಡಿರುವ ಕೆಲಸಗಳ ಬಗ್ಗೆ ಮಾಧ್ಯಮ ಲೋಕ ಅನ್ಯಾಯ ಮಾಡಿದೆ ಅನ್ನಿಸುತ್ತದೆ. ಹೀಗೆ ಹೇಳುವುದರಿಂದ ನನಗೇನೂ ಲಾಭವಿಲ್ಲ. ನಾನು ಕಂಡ ಸತ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿತ್ತು. ಬೇರೇನೂ ಕಾರಣಗಳಿಲ್ಲ’ ಎಂದು ಹೇಳಿದ್ದರು. ನಾನೂ ಕೂಡ ರೇವಣ್ಣ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದೇನೆ. ಹೋಮ್ ವರ್ಕ್ ಮಾಡಿಕೊಂಡು ಎಲ್ಲ ಪ್ರಶ್ನೆಗಳಿಗೂ ಮನವರಿಕೆ ಮಾಡಿಕೊಡುವ ರೀತಿಯಲ್ಲಿ ಉತ್ತರ ಕೊಡುತ್ತಿದ್ದ ಶೈಲಿ ನನಗಂತೂ ತುಂಬ ಇಷ್ಟವಾಗಿತ್ತು. ದೇವೇಗೌಡರಂತೆ ಮುಖ ಗಂಟಿಕ್ಕಿಕೊಂಡು ಮಾತನಾಡುವ ಸ್ವಭಾವ ಅವರದಲ್ಲವಾದರೂ ನಟಿಸುವ ಕಲೆಯೂ ಗೊತ್ತಿರಲಿಲ್ಲ.

ಆದರೆ ಚಲನಚಿತ್ರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕುಮಾರಸ್ವಾಮಿ 1996ರಲ್ಲಿ ಕನಕಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವವರೆಗೂ ರಾಜಕೀಯವಾಗಿ ದೇವೇಗೌಡರ ಸುತ್ತಮುತ್ತ ಕಾಣಿಸಿಕೊಂಡಿರಲಿಲ್ಲ. ಅದೇ ವರ್ಷ ದೇವೇಗೌಡರು ಪ್ರಧಾನಿ ಆದ ನಂತರ ರಾಜಕೀಯ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಜತೆ ಮಹತ್ವಾಕಾಂಕ್ಷೆಯನ್ನೂ ಬೆಳೆಸಿಕೊಂಡಿರುವ ಸಾಧ್ಯತೆ ಇದೆ. 1998 ರಲ್ಲಿ ಲೋಕಸಭೆಗೆ ಮರುಪ್ರವೇಶಿಸುವ ಪ್ರಯತ್ನ ವಿಫಲವಾದ ನಂತರ ಕುಮಾರಸ್ವಾಮಿ 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಶಿವಕುಮಾರ್ ಅಭೇದ್ಯ ಕೋಟೆಯಲ್ಲಿ ರಾಜಕೀಯ ಭವಿಷ್ಯ ಹುಡುಕಿಕೊಳ್ಳುವುದು ಕಷ್ಟ ಎಂದು ಅರಿತ ಕುಮಾರಸ್ವಾಮಿ 2004 ರಲ್ಲಿ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಹೊಸ ನೆಲೆ ಕಂಡುಕೊಂಡರು. ಕುಮಾರಸ್ವಾಮಿಯಂತೆ ಕ್ಷೇತ್ರಾಂತರದ ಸಾಹಸ, ಪ್ರಯೋಗಗಳಿಗೆ ಒಡ್ಡಿಕೊಳ್ಳುವಂಥ ಗುಣ ರೇವಣ್ಣ ಅವರಲ್ಲಿಲ್ಲ. ಅವರದೇನಿದ್ದರೂ ಹೊಳೆನರಸೀಪುರಕ್ಕೆ ನಿಷ್ಠೆ!

ಅತಂತ್ರ ವಿಧಾನಸಭೆಯ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗೂಡಿ ಮುಖ್ಯಮಂತ್ರಿ ಧರಂಸಿಂಗ್ ನೇತೃತ್ವದ ಸರ್ಕಾರ ರಚನೆಯಾದಾಗಲೂ ರೇವಣ್ಣ ಲೋಕೋಪಯೋಗಿ ಮತ್ತು ಇಂಧನ ಖಾತೆ ಸಚಿವರಾದರು. ಸರ್ಕಾರ ರಚನೆಯಾಗಿ ಎರಡು ವರ್ಷಗಳಿಗೂ ಮುನ್ನ ಹಠಾತ್ತನೆ ಸಂಭವಿಸಿದ ಬೆಳವಣಿಗೆಯಲ್ಲಿ ತಲಾ ಇಪ್ಪತ್ತು ತಿಂಗಳ ಅಧಿಕಾರ ಹಂಚಿಕೆ ಒಪ್ಪಂದದ ಮೇಲೆ ಬಿಜೆಪಿ ಜತೆ ಕೈಜೋಡಿಸಿದ ಕುಮಾರಸ್ವಾಮಿ  ಮುಖ್ಯಮಂತ್ರಿಯಾದರು. ದೇವೇಗೌಡರು ನಂಬಿದ್ದ ಅಥವಾ ತೋರಿಸಿಕೊಂಡಿದ್ದ ಸಿದ್ಧಾಂತಕ್ಕೆ ಕುಮಾರಸ್ವಾಮಿ ಬಹಿರಂಗವಾಗಿಯೇ ಕೈಕೊಟ್ಟು ಮುಖ್ಯಮಂತ್ರಿಯಾಗಿದ್ದೂ ಒಂದು ರೀತಿಯಲ್ಲಿ ಕುಟುಂಬ ರಾಜಕಾರಣದಲ್ಲಿ ನಡೆದ ರಕ್ತರಹಿತ ಕ್ರಾಂತಿಯೇ. ಇಂದಿರಾ ಗಾಂಧಿ ವಿರುದ್ಧ ಸಿಡಿದೆದ್ದ ಬಣದಲ್ಲಿ ಗುರುತಿಸಿಕೊಂಡು ಸಂಸ್ಥಾ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ವಿರೋಧಪಕ್ಷದ ನಾಯಕರಾಗಿದ್ದ ದೇವೇಗೌಡರು, ಸದಾ ಎಡ ಪಕ್ಷಗಳ ಒಡನಾಟವಿದ್ದ ದೇವೇಗೌಡರು, ರಾಮಕೃಷ್ಣ ಹೆಗಡೆ ವಿರುದ್ಧ ಬಂಡೆದ್ದ ದೇವೇಗೌಡರು ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ನಿಜಕ್ಕೂ ಅನುಮತಿ ನೀಡಿದ್ದರೇ ಎನ್ನುವ ಪ್ರಶ್ನೆಗೆ ಇವತ್ತಿಗೂ ಯಾರಿಗೂ ಸರಿಯಾದ ಉತ್ತರ ಗೊತ್ತಿಲ್ಲ. ಬಹಿರಂಗವಾಗಿ ದೇವೇಗೌಡರು ಮತ್ತು ಅವರ ಕುಟುಂಬದ ಇತರ ಸದಸ್ಯರು ಹೇಳಿದಂತೆ ಕುಮಾರಸ್ವಾಮಿಯೇ ಈ ನಾಟಕದ ಸೂತ್ರಧಾರಿ ಆಗಿದ್ದರೆ ದೇವೇಗೌಡರು ಕುಮಾರಸ್ವಾಮಿಯನ್ನು ನಿಯಂತ್ರಿಸಲಾಗದಷ್ಟು ದುರ್ಬಲರಾಗಿರಬಹುದು, ಅಸಹಾಯಕರಾಗಿರಬಹುದು, ಆರು ದಶಕಗಳಿಗೂ ಹೆಚ್ಚು ಕಾಲದ ರಾಜಕಾರಣದಿಂದ ವಿಶ್ರಾಂತಿ ಬಯಸಿರುವುದನ್ನು ಹೇಳಿಕೊಳ್ಳಲಾಗದ ಮನೋಸ್ಥಿತಿಯೂ ಇರಬಹುದು ಅಥವಾ ಈಗಲೂ ಅವರ ಮಾತುಗಳೇ ಅಂತಿಮ ತೀರ್ಮಾನ ಎನ್ನುವುದಾದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ತಮ್ಮ ಒಪ್ಪಿಗೆ ಇರಲಿಲ್ಲ ಎನ್ನುವ ಅವರ ಮಾತುಗಳು ಸುಳ್ಳಾಗಿರಬಹುದು. ಆದರೆ ‘ವೀಕ್ ಎಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ದೇವೇಗೌಡರ ಕುಟುಂಬದ ಸದಸ್ಯರು, ಬಿಜೆಪಿ ಜತೆಗಿನ ಮೈತ್ರಿಗೆ ದೇವೇಗೌಡರ ಸಮ್ಮತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆಂದರೆ ಕುಮಾರಸ್ವಾಮಿಯೇ ಜೆಡಿಎಸ್ ಪಕ್ಷದ ನಿಯಂತ್ರಣವನ್ನು ದೇವೇಗೌಡರಿಂದ ಕಸಿದುಕೊಂಡಿದ್ದಾರೆಂಬ ಅರ್ಥವಲ್ಲದೇ ಬೇರೇನಿರಲು ಸಾಧ್ಯ?

ಈ ತರ್ಕಕ್ಕೆ ಇನ್ನಷ್ಟು ಉದಾಹರಣೆಗಳನ್ನು ಕೊಡಬಹುದು. ತಳ ಹಂತದಿಂದ ರಾಜಕಾರಣ ಮಾಡುತ್ತಾ ಬೆಳೆದ ರೇವಣ್ಣನನ್ನೂ ಓವರ್‌ಟೇಕ್ ಮಾಡಿರುವ ಕುಮಾರಸ್ವಾಮಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಜೆಡಿಎಸ್ ಈಗ ಕುಮಾರಸ್ವಾಮಿ ಮತ್ತು ಅವರ ಪತ್ನಿ ಮಾತ್ರ ನಿರ್ಧಾರ ಕೈಗೊಳ್ಳುವ ಪಕ್ಷವಾಗಿಯಷ್ಟೇ ಉಳಿದುಬಿಟ್ಟಿದೆ. ಕುಮಾರಸ್ವಾಮಿ ಕುಟುಂಬದ ಅನಿವಾರ್ಯ ಔದಾರ್ಯ ಮಾತ್ರ ರೇವಣ್ಣ ಅವರನ್ನು ರಾಜಕೀಯವಾಗಿ ಮುಂದುವರಿಯುವುದಕ್ಕೆ ಅವಕಾಶ ನೀಡಿದಂತೆ ಕಾಣುತ್ತಿದೆ. ರಾಜ್ಯದ ವಿಧಾನಸಭಾ ಚುನಾವಣೆಯ ಇತಿಹಾಸವನ್ನೇ ಮೆಲುಕು ಹಾಕಿದರೆ ಸತ್ಯದ ಇನ್ನೊಂದು ಮುಖ ಗೋಚರಿಸುತ್ತದೆ. ಜೆಡಿಎಸ್ ಸ್ಪರ್ಧೆಯ ಪ್ರಯೋಗಗಳೆಲ್ಲ ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಅವರಿಗೆ ಮಾತ್ರ ಸೀಮಿತವಾಗಿರುವುದನ್ನೂ ಗಮನಿಸಬಹುದು. ಅನಿತಾ ಕುಮಾರಸ್ವಾಮಿ 2008ರಲ್ಲಿ ಮಧುಗಿರಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸುತ್ತಾರೆ. 2013ರಲ್ಲಿ ಕುಮಾರಸ್ವಾಮಿ ರಾಮನಗರದಿಂದ ವಿಧಾನಸಭೆಗೆ ಆಯ್ಕೆಯಾದಾಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುತ್ತಾರೆ. ಅವರು ಡಿ.ಕೆ.ಸುರೇಶ್ ವಿರುದ್ಧ ಸೋಲನುಭವಿಸುತ್ತಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ 2011ರಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಅನಿತಾ ಕುಮಾರಸ್ವಾಮಿ ಮಧುಗಿರಿ ಶಾಸಕರಾಗಿದ್ದ ಕಾರಣ ಅವರನ್ನು ಕಣಕ್ಕಿಳಿಸಿರಲಿಲ್ಲ. ಅದೇ ಕ್ಷೇತ್ರದಲ್ಲಿ ಆಕಾಂಕ್ಷಿಯಾಗಿದ್ದ ರೇವಣ್ಣ ಅವರ ಪತ್ನಿ ಭವಾನಿ ಅವರಿಗೆ ಟಿಕೆಟ್ ತಪ್ಪಿಸುವ ಸಲುವಾಗಿ ಕ್ಷೇತ್ರದ ಕಾರ್ಯಕರ್ತರು ನಿಷ್ಠಾವಂತ ಕಾರ್ಯಕರ್ತರನ್ನೇ ಕಣಕ್ಕಿಳಿಸುವಂತೆ ಒತ್ತಾಯಿಸಿದ್ದಾರೆ ಎಂಬ ನೆಪ ಒಡ್ಡಿ ನಾಗರಾಜ್ ಎಂಬ ಅನಾಮಧೇಯರೊಬ್ಬರಿಗೆ ಟಿಕೆಟ್ ನೀಡುತ್ತಾರೆ. ರೇವಣ್ಣ ಅವರ ಪತ್ನಿ ಭವಾನಿ ಅವರೂ ತಮ್ಮ ಮಾವನವರ ರಾಜಕಾರಣವನ್ನು ಹತ್ತಿರದಿಂದ ನೋಡಿಕೊಂಡು ಬಂದವರು. ತಮ್ಮ ಮಾವ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ಸಂದರ್ಭಗಳಲ್ಲಿ  ಪ್ರಚಾರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಅಷ್ಟೇ ಅಲ್ಲ. ಮುಂದಿನ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದ ತಾವು ಮತ್ತು ರೇವಣ್ಣ ಮಾತ್ರ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿರುವ ಕುಮಾರಸ್ವಾಮಿ ಹುಣಸೂರು ಕ್ಷೇತ್ರದಲ್ಲಿ ಸುದ್ದಿ ಮಾಡುತ್ತಾ ರಾಜಕೀಯ ಆಕಾಂಕ್ಷೆ ಬೆಳೆಸಿಕೊಂಡಿದ್ದ ರೇವಣ್ಣ ಅವರ ಪುತ್ರ ಪ್ರಜ್ವಲ್ ಆಸೆಗೂ ತಣ್ಣೀರೆರಚಿದ್ದಾರೆ.

ಇತ್ತೀಚೆಗೆ ಜೆಡಿಎಸ್‌ನಿಂದ ಹೊರಹೋಗಲು ಬಯಸಿರುವ ಕೆಲವು ಶಾಸಕರಿಗೂ ದೇವೇಗೌಡರ ಬಗ್ಗೆ ಯಾವುದೇ ಅಸಮಾಧಾನ ಇದ್ದಂತಿಲ್ಲ. ಅವರು ಬೆರಳು ತೋರಿಸುವುದು ಕುಮಾರಸ್ವಾಮಿಯತ್ತ. ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ಸೋಲಿನಲ್ಲೂ ಕುಮಾರಸ್ವಾಮಿಯ ನೆರಳು ಕಾಣಬಹುದಾಗಿದೆ. ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ತರಲು ಕಾಂಗ್ರೆಸ್ಸಿಗರು ಒಪ್ಪುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಕಿಲಾಡಿತನ, ಬೆಣ್ಣೆ ಮಾತುಗಳನ್ನೇ ಬಂಡವಾಳ ಮಾಡಿಕೊಂಡಿರುವ ಕುಮಾರಸ್ವಾಮಿಗೂ ಈ ಬೆಳವಣಿಗೆ ಬೇಕಿರಲಿಲ್ಲ. ಅವರಿಗೆ ಜಂತಕಲ್ ಉರುಳಿನಿಂದ ಪಾರಾಗುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವುದನ್ನು ಬಿಟ್ಟು ಬೇರೇನೂ ಆಸಕ್ತಿ ಇದ್ದಂತಿರಲಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ತಡೆಯುವುದಕ್ಕೆ ಸಾಧ್ಯವಿಲ್ಲದ ದೇವೇಗೌಡರು ಈಗಲೂ ಜೆಡಿಎಸ್ ವರಿಷ್ಠರೆಂದರೆ ನಂಬುವುದು ಹೇಗೆ ತಾನೇ ಸಾಧ್ಯ? ಅವರು ಉತ್ಸವ ಮೂರ್ತಿಯಾಗಿದ್ದರೆ, ಕುಮಾರಸ್ವಾಮಿ ದಕ್ಷಿಣೆಯ ತಟ್ಟೆ ಹಿಡಿದ ಪೂಜಾರಿಯ ಸ್ಥಾನದಲ್ಲಿದ್ದಾರೆ. ತಾತ್ವಿಕ ಕಾರಣಗಳಿಗಾಗಿ ಜೆಡಿಎಸ್ ಜತೆಗಿನ ಮೈತ್ರಿ ಇನ್ನು ಅಷ್ಟು ಸುಲಭವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT