ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅರ್ಥವ್ಯವಸ್ಥೆಗೆ ಹೊಸ ದಿಕ್ಕು ನಿರೀಕ್ಷೆ

Last Updated 13 ಆಗಸ್ಟ್ 2013, 20:00 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಒಮ್ಮಮ್ಮೆ ಎಡೆಬಿಡದೆ ಮಳೆ ಸುರಿಯತೊಡಗುತ್ತದೆ. ನಾನು ಇಲ್ಲಿ ಮುಂಗಾರು ಮಳೆ ಬಗ್ಗೆ ಮಾತನಾಡುತ್ತಿಲ್ಲ. ದೇಶದ ಅರ್ಥವ್ಯವಸ್ಥೆಯ ಸದ್ಯದ ಸ್ಥಿತಿಗತಿ ಬಗ್ಗೆ ಮಾತನಾಡುತ್ತಿರುವೆ. ಆರ್ಥಿಕತೆಯಲ್ಲಿಯೂ ದಿನೇ ದಿನೇ ಹೊಸ ಹೊಸ ಸಮಸ್ಯೆಗಳು ಕಂಡುಬರುತ್ತಿವೆ. ರೂಪಾಯಿ ವಿನಿಮಯ ದರ ಕುಸಿತಗೊಳ್ಳುವುದರೊಂದಿಗೆ ಆರಂಭವಾದ ಆರ್ಥಿಕ ಸಂಕಷ್ಟಗಳ ಸರಮಾಲೆ ಈಗ ಉದ್ಯೋಗ ಅವಕಾಶಗಳು ಕಡಿಮೆಯಾಗುವ ಹಂತಕ್ಕೆ ಬಂದು ತಲುಪಿದೆ. ಎಲ್ಲ ಬಗೆಯ ಸರಕುಗಳ ಬೇಡಿಕೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಇದರ ಫಲವಾಗಿ ದೇಶ- ವಿದೇಶಗಳ ಹಣಕಾಸು ಸಂಸ್ಥೆಗಳು ಕೂಡ ದೇಶಿ ಅರ್ಥವ್ಯವಸ್ಥೆಯ ಆರ್ಥಿಕ ವೃದ್ಧಿ ದರವನ್ನು ಇನ್ನಷ್ಟು ತಗ್ಗಿಸಿವೆ.

ರೂಪಾಯಿ ವಿನಿಮಯ ಮೌಲ್ಯ ರಕ್ಷಿಸುವ ಮತ್ತು ಹಲವಾರು ಸುಧಾರಣಾ ಕ್ರಮಗಳ ಮೂಲಕ ಆರ್ಥಿಕತೆಗೆ ಚೇತರಿಕೆ ತುಂಬುವ ಸರ್ಕಾರದ ಪ್ರಯತ್ನಗಳು ನಿರೀಕ್ಷಿತ ಪ್ರಭಾವ ಬೀರುತ್ತಿಲ್ಲ. ಸರಕುಗಳ ಮಾರುಕಟ್ಟೆಯಲ್ಲಿನ ಬಿಕ್ಕಟ್ಟು, ವಿಷಮಿಸುತ್ತಿರುವ ವಿದೇಶಿ ವಿನಿಮಯ ಮೀಸಲು ಸಂಗ್ರಹ ಮುಂತಾದವುಗಳು ಈಗಾಗಲೇ ಮಂಕು ಕವಿದ ಆರ್ಥಿಕತೆಯಲ್ಲಿ ಇನ್ನಷ್ಟು ನಿರಾಶಾದಾಯಕ ಭಾವನೆ ಮೂಡಿಸಿವೆ.

ದೇಶದ ಅರ್ಥವ್ಯವಸ್ಥೆ ಮತ್ತು ಇಡೀ ದೇಶವೇ ಸಕಾರಾತ್ಮಕ ಸಂಕೇತಗಳನ್ನು ಎದುರು ನೋಡುತ್ತಿರುವಾಗ, ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಸ ಗವರ್ನರ್ ಆಗಿ ಡಾ. ರಘುರಾಂ ರಾಜನ್ ಅವರನ್ನು ನೇಮಿಸಿರುವುದು ಹೊಸ ಭರವಸೆ ಮೂಡಿಸಿದೆ. ಡಾ. ಡಿ. ಸುಬ್ಬರಾವ್ ಅವರ ಉತ್ತರಾಧಿಕಾರಿಯಾಗಿ ರಾಜನ್ ನೇಮಕಗೊಂಡಿರುವುದು ಅನೇಕ ಊಹಾಪೋಹಗಳಿಗೆ ತೆರೆ ಎಳೆದಿದೆ. ಮಾರುಕಟ್ಟೆಯೂ ಈ ನೇಮಕಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಇತ್ತೀಚಿನ ದಿನಗಳಲ್ಲಿ ಕೈಗೊಂಡ ಅತ್ಯುತ್ತಮ ನಿರ್ಧಾರ ಇದಾಗಿದೆ ಎಂದೂ ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಷೇರು ಮಾರುಕಟ್ಟೆ ಮತ್ತು ವಿದೇಶ ವಿನಿಮಯ ಮಾರುಕಟ್ಟೆಗಳಲ್ಲಿ ತಕ್ಷಣಕ್ಕೆ ಚೇತರಿಕೆ ಕಂಡು ಬಂದಿರುವುದು ಕೂಡ ಈ ನೇಮಕವನ್ನು ಸ್ವಾಗತಿಸಿದಂತಾಗಿದೆ. ಈ ಎರಡೂ ಪೇಟೆಗಳಲ್ಲಿನ ಚೇತರಿಕೆ ನಂತರ ಸುಸ್ಥಿರಗೊಳ್ಳಲಿಲ್ಲ ಎನ್ನುವುದು ಬೇರೆ ಮಾತು. ಆದರೆ, ಈ ಬೆಳವಣಿಗೆಯು ದೇಶದಲ್ಲಿ ಹೊಸ ಭರವಸೆ ಮೂಡಿಸಿದೆ ಎನ್ನುವುದರತ್ತ ನಾನು ಇಲ್ಲಿ ಓದುಗರ ಗಮನ ಸೆಳೆಯಬಯಸುವೆ.

ಡಾ. ರಾಜನ್ ಅವರ ಹಿನ್ನೆಲೆ ತುಂಬ ಪ್ರಭಾವಪೂರ್ಣವಾಗಿದೆ. ಅವರ ದಕ್ಷ ಕಾರ್ಯವೈಖರಿಯೂ ಹಲವಾರು ಸಂದರ್ಭಗಳಲ್ಲಿ ಸಾಬೀತಾಗಿದೆ. ಅವರೊಬ್ಬ ಹೆಸರುವಾಸಿ ಆರ್ಥಿಕತಜ್ಞ. ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಿಎಚ್.ಡಿ ಪಡೆದವರು. ಷಿಕಾಗೊದ `ಬೂತ್ ಸ್ಕೂಲ್ ಆಫ್ ಬಿಸಿನೆಸ್'ನಲ್ಲಿ ಬೋಧಕರಾಗಿದ್ದವರು.

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಅರ್ಥ ವ್ಯವಸ್ಥೆ ಬಗ್ಗೆ ಆಳವಾದ ಜ್ಞಾನ ಹೊಂದಿದವರು. ಅನೇಕ ಕೃತಿಗಳನ್ನೂ ರಚಿಸಿದ್ದಾರೆ.  ಜಾಗತಿಕ ಹಣಕಾಸು ಬಿಕ್ಕಟ್ಟು ಸಂಭವಿಸುವ ಬಗ್ಗೆ ಮುಂಚಿತವಾಗಿಯೇ ಎಚ್ಚರಿಸಿದ್ದರು. ಅಮೆರಿಕದ ಅರ್ಥ ವ್ಯವಸ್ಥೆಯ ಒಳ ಹೊರಗನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದ ಅವರು, ಅದು ಜಾಗತಿಕ ಅರ್ಥ ವ್ಯವಸ್ಥೆ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎಂದು ಮುಂಚಿತವಾಗಿಯೇ ಅಂದಾಜು ಮಾಡಿದ್ದರು. ಇವೆಲ್ಲ ಅವರ ವಿಶಿಷ್ಟ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ.

ಡಾ. ರಘುರಾಂ ಅವರದ್ದು  ಪ್ರಬುದ್ಧ ಮತ್ತು ಶಾಂತ ಸ್ವಭಾವದ ಅಪರೂಪದ ವ್ಯಕ್ತಿತ್ವ. ಯಾವುದೇ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಬಲ್ಲ ಚಾಕಚಕ್ಯತೆ ಅವರಲ್ಲಿದೆ. ಇದುವರೆಗೆ ಅವರು ನಿಭಾಯಿಸಿರುವ ಹುದ್ದೆಗಳಲ್ಲಿ ಉದ್ದಕ್ಕೂ  ಶ್ರೇಷ್ಠತೆ ಕಾಯ್ದುಕೊಂಡೇ ಬಂದಿದ್ದಾರೆ. ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಇದುವರೆಗಿನ ಅವಧಿಯಲ್ಲಿ ಅವರು ಅಮೆರಿಕದಲ್ಲಿಯೇ ಹೆಚ್ಚು ಸೇವೆ ಸಲ್ಲಿಸಿದ್ದರೂ, ಆರ್ಥಿಕ ವಿಷಯಗಳಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಹಣಕಾಸು ವಲಯದ ಸುಧಾರಣೆಗಳ ಜಾರಿಯಲ್ಲಿ ಯೋಜನಾ ಆಯೋಗಕ್ಕೂ ನೆರವಾಗಿದ್ದಾರೆ. ಹೀಗಾಗಿ ಭಾರತದ ಆರ್ಥಿಕ ವಿಚಾರಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಹೊಂದಿದ್ದಾರೆ.

ಭಾರತದ ಬಗೆಗಿನ ಅವರ ಪ್ರೀತಿ ಮತ್ತು ತಾಯ್ನಾಡಿಗೆ ಸೇವೆ ಸಲ್ಲಿಸುವ ಉತ್ಕಟ ಬಯಕೆಯೇ, ಈ ಹೊಸ ಹೊಣೆಗಾರಿಕೆ ಒಪ್ಪಿಕೊಳ್ಳಲು ಒತ್ತಾಸೆಯಾಗಿ ನಿಂತಿದೆ.

ದೇಶದ ಅರ್ಥವ್ಯವಸ್ಥೆ ಸಂಕೀರ್ಣ ಘಟ್ಟದಲ್ಲಿ ಇರುವಾಗ, ಡಾ. ರಾಜನ್ ಅವರು ಆರ್‌ಬಿಐ ಮುಖ್ಯಸ್ಥ ಹುದ್ದೆ ನಿಭಾಯಿಸಲಿದ್ದಾರೆ. ಇನ್ನು ಮುಂದೆ ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ನಿರಂತರವಾಗಿ ಪರಾಮರ್ಶೆಗೆ ಒಳಪಡಲಿದೆ. ಕುಸಿಯುತ್ತಿರುವ ರೂಪಾಯಿ ಅಪಮೌಲ್ಯಕ್ಕೆ ಕಡಿವಾಣ ಹಾಕಿ, ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡುವುದು ಅವರ ಮುಂದಿರುವ ಮಹತ್ವದ ಸವಾಲಾಗಿದೆ. ದೇಶಿ ಅರ್ಥ ವ್ಯವಸ್ಥೆಗೆ ಬೆದರಿಕೆ ಒಡ್ಡಿರುವ ಹಣದುಬ್ಬರ ಭೂತದ ಹಾವಳಿಗೆ ಕಡಿವಾಣ ಹಾಕಲೂ ಅವರು ಆದ್ಯತೆ ನೀಡಬೇಕಾಗಿದೆ.

ಎರಡು ವರ್ಷಗಳಿಂದ ಗರಿಷ್ಠಮಟ್ಟದಲ್ಲಿಯೇ ಇರುವ ಬ್ಯಾಂಕ್ ಬಡ್ಡಿ ದರಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಅವರು ಮರು ಚಿಂತನೆ ಮಾಡಬೇಕಾಗಿದೆ. ಆರ್ಥಿಕ ಬೆಳವಣಿಗೆ ಮತ್ತು  ಹಣದುಬ್ಬರ ಮಧ್ಯೆ ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವ ಗೊಂದಲದಲ್ಲಿ, ಆರ್‌ಬಿಐನ ಹಾಲಿ ಗವರ್ನರ್  ಸುಬ್ಬರಾವ್ ಮತ್ತವರ ತಂಡವು ಹಣದುಬ್ಬರ ನಿಯಂತ್ರಿಸಲು ಹೆಚ್ಚು ಆದ್ಯತೆ ನೀಡಿದ್ದರಿಂದ ಆರ್ಥಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಯಿತು.

ರೂಪಾಯಿ ಮೌಲ್ಯ ರಕ್ಷಿಸಲು ಮಾರುಕಟ್ಟೆಯಲ್ಲಿ ನಗದು ಹಣದ ಲಭ್ಯತೆ ಕಡಿಮೆ ಮಾಡಲು ಆರ್‌ಬಿಐ ಇತ್ತೀಚೆಗೆ ಕೈಗೊಂಡಿದ್ದ ಕ್ರಮಗಳು ಕೂಡ ಸರಕುಗಳ ಬೇಡಿಕೆ ಮೇಲೂ ಪ್ರತಿಕೂಲ ಪರಿಣಾಮ ಬೀರಿವೆ. ಇದರಿಂದಾಗಿ ಆರ್ಥಿಕ ಬೆಳವಣಿಗೆ ಮೇಲೂ ದುಷ್ಪರಿಣಾಮಗಳು ಆಗಿವೆ.

ಡಾ. ರಾಜನ್ ಅವರು, ಸುಧಾರಣೆಯ ಕಾರ್ಯಸೂಚಿ ಹೊಂದಿದ ಆರ್ಥಿಕ ನೀತಿಯ ಪ್ರತಿಪಾದಕರಾಗಿದ್ದಾರೆ. ಬ್ಯಾಂಕ್ ಶಾಖೆಗಳ ವಿಸ್ತರಣೆ ಮೂಲಕ ಹೆಚ್ಚು ಹೆಚ್ಚು ಜನರಿಗೆ ಅಭಿವೃದ್ಧಿಯ ಪ್ರಯೋಜನ ಕಲ್ಪಿಸುವ `ಆರ್ಥಿಕ ಸೇರ್ಪಡೆ' ಕಾರ್ಯಕ್ರಮವೂ ಅಲ್ಪಾವಧಿಯಲ್ಲಿ ಹೆಚ್ಚು ಮಹತ್ವ ಪಡೆಯಲಿದೆ.

ಕೇಂದ್ರೀಯ ಬ್ಯಾಂಕ್ ಸದ್ಯಕ್ಕೆ ಅನುಸರಿಸುತ್ತಿರುವ ಹಣಕಾಸು ನೀತಿ ಬಗ್ಗೆ ರಾಜನ್ ಅವರು ತಮ್ಮ ಒಲವು- ನಿಲುವುಗಳನ್ನೇನೂ ಬಹಿರಂಗಪಡಿಸಿಲ್ಲ. ಆರ್‌ಬಿಐ ತಳೆಯಬೇಕಾದ ಧೋರಣೆ, ಕೈಗೊಳ್ಳಬೇಕಾದ ಆದ್ಯತೆಗಳ ಬಗ್ಗೆಯೂ ಅವರು ಎಲ್ಲಿಯೂ ತಮ್ಮ ಮನದಾಳ ಬಹಿರಂಗಪಡಿಸಿಲ್ಲ. ಆದರೆ, ಸಂದರ್ಭಾನುಸಾರ ವಿವಿಧ ವೇದಿಕೆಗಳಲ್ಲಿ ತಮ್ಮ ಚಿಂತನೆಗಳನ್ನು ಸಭಿಕರ ಜತೆ ಅವರು ಹಂಚಿಕೊಂಡಿದ್ದಾರೆ.

ಆರ್ಥಿಕ ಬೆಳವಣಿಗೆಗೆ ಹಣಕಾಸು ಮತ್ತು ಆರ್ಥಿಕ ಸುಧಾರಣಾ ಕ್ರಮಗಳನ್ನು ಒಟ್ಟೊಟ್ಟಿಗೆ  ಕೈಗೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದಾರೆ. ತಮ್ಮೆದುರು ಅತಿದೊಡ್ಡ ಸವಾಲು ಇದೆ ಎನ್ನುವುದನ್ನೂ ಅವರು ಒಪ್ಪಿಕೊಂಡಿದ್ದಾರೆ. ಅರ್ಥ ವ್ಯವಸ್ಥೆಯ ಚೇತರಿಕೆಗೆ ಯಾವುದೇ ಅಡ್ಡದಾರಿಗಳು ಇಲ್ಲ, ದಿನ ಬೆಳಗಾಗುವುದರೊಳಗೆ ಸಮಸ್ಯೆಗಳನ್ನೆಲ್ಲ ಬಗೆಹರಿಸುವ ಮಾಂತ್ರಿಕ ದಂಡ ತಮ್ಮ ಬಳಿ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಶೀಘ್ರದಲ್ಲಿಯೇ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅನಿಶ್ಚಿತ ಫಲಿತಾಂಶ ಬರುವ ಬಗ್ಗೆ ವಿಶ್ಲೇಷಣೆಗಳು ಹೊರಬೀಳುತ್ತಿವೆ. ದೇಶದ ಅರ್ಥವ್ಯವಸ್ಥೆಯ ಸೂಕ್ಷ್ಮಾತಿಸೂಕ್ಷ್ಮ ವಿವರಗಳೆಲ್ಲ ರಾಜನ್ ಅವರಿಗೆ ಚೆನ್ನಾಗಿ ಗೊತ್ತಿವೆ. ಇತ್ತೀಚೆಗೆ ಅವರನ್ನು ಭೇಟಿಯಾಗುವ ಅವಕಾಶ ನನಗೆ ಒದಗಿ ಬಂದಿತ್ತು. ಅವರ ಸರಳತೆ ಮತ್ತು ಮೃದು ಮಾತು ನನ್ನ ಮೇಲೆ ಗಾಢ ಪ್ರಭಾವ ಬೀರಿವೆ.

ಈಗ ಮತ್ತೆ ವಾಸ್ತವಕ್ಕೆ ಬರೋಣ. ಹಣಕಾಸು ನೀತಿ ರೂಪಿಸುವ ಅಧಿಕಾರ ಹೊಂದಿರುವ ಆರ್‌ಬಿಐ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಮಾತ್ರ ಕಡಿಮೆ ಇದೆ. ಕೇಂದ್ರ ಸರ್ಕಾರದ ನೀತಿ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಹಣಕಾಸು ಸಚಿವಾಲಯ, ಆರ್‌ಬಿಐ ತನ್ನ ನಿರ್ದೇಶನದಂತೆ ನಡೆದುಕೊಳ್ಳಬೇಕೆಂದು ಅಪೇಕ್ಷಿಸುತ್ತದೆ.

ಚತುರ ರಾಜಕಾರಣಿ ಪಿ. ಚಿದಂಬರಂ ಹಣಕಾಸು ಸಚಿವರಾಗಿರುವಾಗ ಮತ್ತು ಅವರ ರಾಜಕೀಯ ಕಾರ್ಯಸೂಚಿಗಳೇ ಬೇರೆಯಾಗಿರುವಾಗ ಡಾ. ರಾಜನ್ ಅವರು ಅರ್ಥ ವ್ಯವಸ್ಥೆಯನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುವುದೇ ಕುತೂಹಲಕಾರಿಯಾಗಿದೆ.

ಆಕರ್ಷಕ, ಸಮರ್ಥ ವ್ಯಕ್ತಿತ್ವದ ಡಾ. ರಾಜನ್, ತಮ್ಮ ಕಳಂಕರಹಿತ ಯಶೋಗಾಥೆಯನ್ನು ಹೊಸ ಹುದ್ದೆಯಲ್ಲೂ ಮುಂದುವರಿಸುವ ಬಗ್ಗೆ ನನಗೆ ಭರವಸೆ ಇದೆ. ಇವರ ನಾಯಕತ್ವ ಮತ್ತು ಒಳನೋಟಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮತ್ತು ದೇಶದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸಲಿ ಎಂದೂ ನಿರೀಕ್ಷಿಸೋಣ.

                         ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT